ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

M J Akbar Column: ಅರಬ್‌ ನೆಲದಲ್ಲಿ ಒಂದು ಶತಮಾನದ ಅಭದ್ರತೆ

ಯುದ್ಧದ ಸಮಯದಲ್ಲಿ ಇಬ್ನ ಸೌದ್‌ಗೆ ಈ ಕುತಂತ್ರ ತಿಳಿದಿರಲಿಲ್ಲವಾದರೂ, ಅವರಿಗೆ ಇತಿಹಾಸದ ಆಳವಾದ ಅರಿವಿತ್ತು. ಬ್ರಿಟಿಷರಿಗೆ ಮೆಕ್ಕಾದ ಶರೀಫ್ ಹುಸೇನ್ ಬಿನ್ ಅಲಿ ಅಲ್ -ಹಾಶಿಮಿ ಎಂಬ ಇನ್ನೊಬ್ಬ ಮಿತ್ರನಿದ್ದನು. ಈತ ಪ್ರವಾದಿ ಮುಹಮ್ಮದ್ ಅವರ ವಂಶಸ್ಥನಾಗಿದ್ದು, ಇಬ್ನ ಸೌದ್‌ಗಿಂತ ಉನ್ನತ ಸ್ಥಾನದಲ್ಲಿದ್ದನು. ಹುಸೇನ್ ‘ಗ್ರೇಟ್ ಅರಬ್ ದಂಗೆ’ಯನ್ನು ಆರಂಭಿಸಿದನು; ಇದಕ್ಕೆ ಬ್ರಿಟಿಷ್ ಸಾಹಸಿ ಟಿ.ಇ. ಲಾರೆನ್ಸ್ (ಲಾರೆನ್ಸ್‌ ಆಫ್ ಅರೇಬಿಯಾ) ಸಾಥ್ ನೀಡಿದನು. ಆದರೆ 1918ರ ನಂತರ ಹುಸೇನ್ ಒಂದು ದೊಡ್ಡ ರಾಜಕೀಯ ತಪ್ಪು ಮಾಡಿದರು. ‌

‌ಅಕ್ಬರ್‌ ನಾಮಾ

ಎಂ.ಜೆ.ಅಕ್ಬರ್

ಮೊದಲ ಮಹಾಯುದ್ಧ ಇನ್ನೂ ಮುಗಿದಿಲ್ಲ. ಡಿಸೆಂಬರ್ 26, 1915ರಂದು, ನಜ್ದ್ ಮತ್ತು ಅಲ್-ಅಹ್ಸಾದ ಅಂದಿನ ಆಡಳಿತಗಾರರಾಗಿದ್ದ ಅಬ್ದುಲ್ ಅಜೀಜ್ ಬಿನ್ ಅಬ್ದುಲ್ ರಹಮಾನ್ ಬಿನ್ ಫೈಸಲ್ ಅಲ್ ಸೌದ್ (ಇಬ್ನ್ ಸೌದ್ ಎಂದೇ ಚಿರಪರಿಚಿತ) ಹೊರಗಿನ ಪ್ರಪಂಚದೊಂದಿಗೆ ತಮ್ಮ ಮೊದಲ ಒಪ್ಪಂದಕ್ಕೆ ಸಹಿ ಹಾಕಿದರು. ಇವರು 18ನೇ ಶತಮಾನದ ಇಸ್ಲಾಮಿಕ್ ಬೋಧಕ ಮುಹಮ್ಮದ್ ಅಬ್ದುಲ್ ವಹಾಬ್ ಅವರ ಅನುಯಾಯಿಯಾಗಿದ್ದರು.

ತಾರೂತ್ ದ್ವೀಪದ ದಾರಿನ್ ಎಂಬಲ್ಲಿ ಬ್ರಿಟಿಷ್ ಸಾಮ್ರಾಜ್ಯದ ಪರವಾಗಿ ಸರ್ ಪರ್ಸಿ ಕಾಕ್ಸ್ ಈ ಒಪ್ಪಂದಕ್ಕೆ ಸಹಿ ಮಾಡಿದರು. ಈ ಒಪ್ಪಂದದ ಪ್ರಕಾರ, ಬ್ರಿಟಿಷರಿಂದ 20000 ಪೌಂಡ್ ಸಾಲ, ತಿಂಗಳಿಗೆ 5000 ಪೌಂಡ್ ಗೌರವಧನ ಮತ್ತು ಆಯುಧಗಳನ್ನು ಪಡೆಯುವ ಷರತ್ತಿನ ಮೇಲೆ ಇಬ್ನ್ ಸೌದ್ ಅವರ ಸಂಸ್ಥಾನವು ಬ್ರಿಟಿಷ್ ರಕ್ಷಣಾ ಪ್ರದೇಶವಾಯಿತು (ಪ್ರೊಟೆಕ್ಟರೇಟ್). ‌

ಪ್ರತಿಯಾಗಿ ಅವರು ಒಟ್ಟೋಮನ್ ಸಾಮ್ರಾಜ್ಯದ ಸುಲ್ತಾನರ (ಆಗಿನ ಇಸ್ಲಾಂನ ಖಲೀಫಾ) ವಿರುದ್ಧ ಹೋರಾಡಬೇಕಿತ್ತು. ಒಟ್ಟೋಮನ್ ಸುಲ್ತಾನರು ಜರ್ಮನಿ ಮತ್ತು ಆಸ್ಟ್ರೋ-ಹಂಗೇರಿಯನ್ ಸಾಮ್ರಾಜ್ಯಗಳ ಜೊತೆ ಕೈಜೋಡಿಸಿ ಬ್ರಿಟನ್, ಫ್ರಾನ್ಸ್ ಮತ್ತು ರಷ್ಯಾಗಳ ವಿರುದ್ಧ ‘ಜಿಹಾದ್’ ಘೋಷಿಸಿದ್ದರು. ‌

ಇದನ್ನೂ ಓದಿ: ‌M J Akbar Column: ಬ್ರಿಕ್ಸ್‌ʼನ ಸುವರ್ಣ ದೇಶಕ್ಕೆ ಮುನ್ನುಡಿ ಹಾಕಿದ ದೆಹಲಿ ಶೃಂಗಸಭೆ

1915ರ ಆ ಒಪ್ಪಂದವೇ ಇಂದಿನ ಪಶ್ಚಿಮ ಏಷ್ಯಾದ ರಾಜಕೀಯ ಗಡಿಗಳನ್ನು ನಿರ್ಧರಿಸಿತು. ಕುವೈತ್, ಕತಾರ್ ಮತ್ತು ಟ್ರೂಷಿಯಲ್ ಸ್ಟೇಟ್ಸ್ (ಇಂದಿನ ಯುಎಇ) ನಂತಹ ಇತರ ಬ್ರಿಟಿಷ್ ರಕ್ಷಿತ ಪ್ರದೇಶಗಳ ಸ್ವಾಯತ್ತತೆಯನ್ನು ಬ್ರಿಟನ್ ಖಾತರಿಪಡಿಸಿತು; ಅದಕ್ಕಾಗಿಯೇ ಅವು ಇಂದು ಸ್ವತಂತ್ರ ರಾಷ್ಟ್ರಗಳಾಗಿವೆ. ‌

ಪ್ರಮುಖ ಬ್ರಿಟಿಷ್ ಬಂದರಾಗಿದ್ದ ಏಡನ್ ಸಹಜವಾಗಿಯೇ ಸೌದಿ ನಿಯಂತ್ರಣದಿಂದ ಹೊರಗುಳಿ ಯಿತು. ಬ್ರಿಟಿಷರು ಇದನ್ನು ಔದಾರ್ಯದಿಂದ ಮಾಡಲಿಲ್ಲ. 1915ರಲ್ಲಿ ಅವರಿಗೆ ಒಟ್ಟೋಮನ್ ಸಾಮ್ರಾಜ್ಯದ ವಿರುದ್ಧ ಎಲ್ಲಿಂದಲಾದರೂ ಸಹಾಯ ಬೇಕಾಗಿತ್ತು. ಖಲೀಫರ ಜಿಹಾದ್ ಕರೆ ಎಂದರೆ ಜಗತ್ತಿನ ಎಲ್ಲಾ ಮುಸ್ಲಿಮರು ಬ್ರಿಟಿಷ್ ಮತ್ತು ಫ್ರೆಂಚ್ ವಿರುದ್ಧ ಹೋರಾಡಲು ಬದ್ಧರಾಗಿದ್ದರು. 1915ರ ಆರಂಭದ ಬ್ರಿಟಿಷರು ಗಲ್ಲಿಪೋಲಿಯಲ್ಲಿ ಟರ್ಕಿಯಿಂದ ಹೀನಾಯ ಸೋಲು ಕಂಡಿದ್ದರು. 1916ರಲ್ಲಿ ಕುಟ್ ಅಲ್-ಅಮಾರಾದಲ್ಲಿ 147 ದಿನಗಳ ಮುತ್ತಿಗೆಯ ನಂತರ ಬ್ರಿಟಿಷ್-ಭಾರತೀಯ ಸೈನ್ಯವು ಸೋತು, ಮೇಜರ್ ಜನರಲ್ ಚಾೃಲ್ಸ್ ಟೌನ್ಶೆಂಡ್ ನೇತೃತ್ವದಲ್ಲಿ 13000ಕ್ಕೂ ಹೆಚ್ಚು ಸೈನಿಕರು ಶರಣಾಗಿದ್ದರು. ‌

ಗೆಲುವಿನ ನಂತರ ಸ್ವಾತಂತ್ರ್ಯ ನೀಡುವುದಾಗಿ ಸುಳ್ಳು ಭರವಸೆ ನೀಡಿ ಬ್ರಿಟನ್ ಮತ್ತು ಫ್ರಾನ್ಸ್ ಅರಬ್ ನಾಯಕರನ್ನು ಬಳಸಿಕೊಂಡವು. ಯುದ್ಧದ ನಂತರ ಅರಬ್ ಭೂಪ್ರದೇಶವನ್ನು ತಮ್ಮೊಳಗೆ ಹಂಚಿ‌ ಕೊಳ್ಳಲು ಬ್ರಿಟನ್ ಮತ್ತು - ‘ಸೈಕ್ಸ್ -ಪಿಕಾಟ’ ಎಂಬ ರಹಸ್ಯ ಒಪ್ಪಂದ ಮಾಡಿಕೊಂಡಿದ್ದವು.‌

ಯುದ್ಧದ ಸಮಯದಲ್ಲಿ ಇಬ್ನ ಸೌದ್‌ಗೆ ಈ ಕುತಂತ್ರ ತಿಳಿದಿರಲಿಲ್ಲವಾದರೂ, ಅವರಿಗೆ ಇತಿಹಾಸದ ಆಳವಾದ ಅರಿವಿತ್ತು. ಬ್ರಿಟಿಷರಿಗೆ ಮೆಕ್ಕಾದ ಶರೀಫ್ ಹುಸೇನ್ ಬಿನ್ ಅಲಿ ಅಲ್ -ಹಾಶಿಮಿ ಎಂಬ ಇನ್ನೊಬ್ಬ ಮಿತ್ರನಿದ್ದನು. ಈತ ಪ್ರವಾದಿ ಮುಹಮ್ಮದ್ ಅವರ ವಂಶಸ್ಥನಾಗಿದ್ದು, ಇಬ್ನ ಸೌದ್‌ಗಿಂತ ಉನ್ನತ ಸ್ಥಾನದಲ್ಲಿದ್ದನು. ಹುಸೇನ್ ‘ಗ್ರೇಟ್ ಅರಬ್ ದಂಗೆ’ಯನ್ನು ಆರಂಭಿಸಿದನು; ಇದಕ್ಕೆ ಬ್ರಿಟಿಷ್ ಸಾಹಸಿ ಟಿ.ಇ. ಲಾರೆನ್ಸ್ (ಲಾರೆನ್ಸ್‌ ಆಫ್ ಅರೇಬಿಯಾ) ಸಾಥ್ ನೀಡಿದನು. ಆದರೆ 1918ರ ನಂತರ ಹುಸೇನ್ ಒಂದು ದೊಡ್ಡ ರಾಜಕೀಯ ತಪ್ಪು ಮಾಡಿದರು. ‌

ಒಟ್ಟೋಮನ್ ಸಾಮ್ರಾಜ್ಯ ಪತನಗೊಂಡ ನಂತರ, ತಾವೇ ಇಡೀ ಅರೇಬಿಯಾದ ಸ್ವತಂತ್ರ ಆಡಳಿತಗಾರ ಮತ್ತು ಮೆಕ್ಕಾ-ಮದೀನಾದ ರಕ್ಷಕ ಎಂದು ಘೋಷಿಸಿಕೊಂಡು ‘ಖಲೀಫಾ’ ಪದವಿಗೆ ಹಕ್ಕು ಮಂಡಿಸಿದರು. ಈಗಾಗಲೇ ಒಬ್ಬ ಖಲೀಫಾನಿಂದ ಹೈರಾಣಾಗಿದ್ದ ಬ್ರಿಟಿಷರು ಇನ್ನೊಬ್ಬ ಹೊಸ ಖಲೀಫಾನನ್ನು ಸಹಿಸಲು ಸಿದ್ಧರಿರಲಿಲ್ಲ. ಹೀಗಾಗಿ ಹುಸೇನ್ ಅವರನ್ನು ಮೂಲೆಗುಂಪು ಮಾಡಿ, ಅವರ ವಿಧೇಯ ಮಗ ಫೈಸಲ್‌ನನ್ನು ಇರಾಕ್‌ನ ರಾಜನನ್ನಾಗಿ ಮಾಡಲಾಯಿತು.

ಮತ್ತೊಂದೆಡೆ ಬ್ರಿಟಿಷರು ಇಬ್ನ್ ಸೌದ್ ಅವರನ್ನು ಬೆಂಬಲಿಸಿದರು. ಇಬ್ನ್ ಸೌದ್ ಮುನ್ನುಗ್ಗಿ 1925ರ ವೇಳೆಗೆ ಮೆಕ್ಕಾ ಮತ್ತು ಮದೀನಾವನ್ನು ವಶಪಡಿಸಿಕೊಂಡು, ಹೆಜಾಜ, ನಜ್ದ್, ಅಲ್ -ಅಹ್ಸಾ ಮತ್ತು ಅರ್ಸಿ ಪ್ರದೇಶಗಳನ್ನು ಒಗ್ಗೂಡಿಸಿ ಇಡೀ ಅರೇಬಿಯಾದ ದೊರೆಯಾದರು. 1927ರ ಜೆಡ್ಡಾ ಒಪ್ಪಂದದ ಮೂಲಕ ಬ್ರಿಟನ್ ಇವರ ಆಡಳಿತವನ್ನು ಅಧಿಕೃತವಾಗಿ ಗುರುತಿಸಿತು.

ಸೆಪ್ಟೆಂಬರ್ 23, 1932ರಂದು ಈ ದೇಶಕ್ಕೆ ‘ಸೌದಿ ಅರೇಬಿಯಾ’ ಎಂದು ಮರುನಾಮಕರಣ ಮಾಡಲಾಯಿತು (ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಹೆಸರಿಸಲಾದ ಕೆಲವೇ ದೇಶಗಳಲ್ಲಿ ಇದೂ ಒಂದು). ಅತ್ತ ಹುಸೇನ್ ಕುಟುಂಬವನ್ನು ಇರಾಕ್ ಮತ್ತು ಜೋರ್ಡಾನ್‌ಗಳಲ್ಲಿ ನೆಲೆಗೊಳಿಸಲಾಯಿತು. ಜೋರ್ಡಾನ್ ಇನ್ನೂ ಅದೇ ಕುಟುಂಬದ ಕೈಯಲ್ಲಿದೆ. ಆದರೆ ಇರಾಕ್‌ನಲ್ಲಿ 1958ರಲ್ಲಿ ನಡೆದ ದಂಗೆಯಲ್ಲಿ ರಾಜ ದ್ವಿತೀಯ ಪೈಸಲ್ ಮತ್ತು ಅವರ ಕುಟುಂಬವನ್ನು ಕೊಲ್ಲಲಾಯಿತು. ಈ ಘಟನೆಯು ಸೌದಿ ಅರೇಬಿಯಾಕ್ಕೆ ಎರಡು ಮುಖ್ಯ ಪಾಠಗಳನ್ನು ಕಲಿಸಿತು: ತಮ್ಮ ಭೂಪ್ರದೇಶ ವನ್ನು ರಕ್ಷಿಸಿಕೊಳ್ಳುವುದು ಮತ್ತು ಸೌದ್ ರಾಜಮನೆತನದ ಅಸ್ತಿತ್ವವನ್ನು ಕಾಪಾಡಿಕೊಳ್ಳುವುದು.

1938ರಲ್ಲಿ ಪೆಟ್ರೋಲಿಯಂ ಪತ್ತೆಯಾಗುವವರೆಗೂ ಅಮೆರಿಕಕ್ಕೆ ಸೌದಿ ಮೇಲೆ ಹೆಚ್ಚಿನ ಆಸಕ್ತಿ ಇರಲಿಲ್ಲ. 1950ರ ದಶಕದ ನಂತರ ಬ್ರಿಟನ್ ಸ್ಥಾನವನ್ನು ಅಮೆರಿಕ ಆಕ್ರಮಿಸಿಕೊಂಡಿತು. 1990ರಲ್ಲಿ ಇರಾಕ್‌ನ ಸದ್ದಾಂ ಹುಸೇನ್ ಕುವೈತ್ ಅನ್ನು ಆಕ್ರಮಿಸಿಕೊಂಡಾಗ, ಸೌದಿ ರಾಜ ಫಹಾದ್ ಅಮೆರಿಕದೊಂದಿಗೆ ಮಿಲಿಟರಿ ಒಪ್ಪಂದ ಮಾಡಿಕೊಂಡರು.

‘ಆಪರೇಷನ್ ಡೆಸರ್ಟ್ ಶೀಲ್ಡ್’ ಮೂಲಕ ಲಕ್ಷಾಂತರ ಅಮೆರಿಕನ್ ಸೈನಿಕರು ಸೌದಿ ನೆಲಕ್ಕೆ ಕಾಲಿಟ್ಟು ಸದ್ದಾಂ ಹುಸೇನ್‌ನನ್ನು ಸೋಲಿಸಿದರು. 1915ರ ದಾರಿನ್ ಒಪ್ಪಂದದಿಂದ ಹಿಡಿದು ಇತ್ತೀಚಿನ 2026ರ ಮೆಕ್ಕಾ ಒಪ್ಪಂದದವರೆಗೂ ಇದೇ ರಕ್ಷಣಾ ತಂತ್ರ ಮುಂದುವರಿದಿದೆ. ಆದರೆ ಈಗ ಒಂದು ವ್ಯತ್ಯಾಸವಿದೆ. ಈ ಪ್ರದೇಶದಲ್ಲಿ ಅಮೆರಿಕದ ಪ್ರಭಾವ ಕ್ಷೀಣಿಸುತ್ತಿರುವ ಕಾರಣ ಉಂಟಾದ ಶೂನ್ಯವನ್ನು ತುಂಬಲು ಅಮೆರಿಕದ ಮಿತ್ರರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಟರ್ಕಿಯನ್ನು ನಿಯೋಜಿಸಲಾಗಿದೆ.

ಇಸ್ರೇಲ್ ವಿರುದ್ಧ ಸವಾಲೊಡ್ಡಲು ಸಿದ್ಧವಿರುವ ಏಕೈಕ ದೇಶವಾದ ಇರಾನ್ ವಿರುದ್ಧ ನಡೆದ ಯುದ್ಧದಲ್ಲಿ ಅಮೆರಿಕ ಹಿನ್ನಡೆ ಅನುಭವಿಸಿದ್ದೇ ಈ ಪ್ರಭಾವ ಕುಸಿಯಲು ಕಾರಣ. 1973ರ ನಂತರ ಅರಬ್ ರಾಷ್ಟ್ರಗಳು ಇಸ್ರೇಲ್ ವಿರುದ್ಧ ಯುದ್ಧ ಮಾಡಿಲ್ಲ. ಈಜಿಪ್ಟ್‌ನೊಂದಿಗೆ ಕ್ಯಾಂಪ್ ಡೇವಿಡ್ ಒಪ್ಪಂದ ಮಾಡಿಕೊಳ್ಳುವ ಮೂಲಕ ಅಮೆರಿಕ ಅರಬ-ಇಸ್ರೇಲ್ ಸಂಘರ್ಷವನ್ನು ತಣ್ಣಗಾಗಿಸಿತು. ಸಿರಿಯಾವನ್ನೂ ನಿಷ್ಕ್ರಿಯಗೊಳಿಸಲಾಯಿತು. ಇದರಿಂದಾಗಿ ಪ್ಯಾಲೆಸ್ಟೈನ್ ಪ್ರತ್ಯೇಕ ರಾಷ್ಟ್ರದ ಕನಸು ಗಾಳಿಯಲ್ಲಿ ತೇಲಿಹೋಯಿತು.

ಅರಬ್ ದೇಶಗಳು ಪ್ಯಾಲೆಸ್ಟೈನ್‌ಗೆ ಕೇವಲ ಮಾತಿನ ಬೆಂಬಲ ನೀಡುತ್ತಿವೆಯೇ ಹೊರತು, ತಮ್ಮ ಸೇನೆಯನ್ನು ಪ್ಯಾಲೆಸ್ಟೈನ್ ರಚನೆಗಾಗಿ ಬಳಸುತ್ತಿಲ್ಲ. ಯುದ್ಧಕ್ಕಿಂತ ಆರ್ಥಿಕ ಸಮೃದ್ಧಿ (ದುಬೈ ಮಾದರಿ) ಮುಖ್ಯ ಎಂದು ಭಾವಿಸಿದ ಅರಬ್ ರಾಷ್ಟ್ರಗಳು ಸೆಪ್ಟೆಂಬರ್ 15, 2020ರಂದು ಇಸ್ರೇಲ್ ಜೊತೆ ‘ಅಬ್ರಹಾಂ ಒಪ್ಪಂದ’ ಮಾಡಿಕೊಂಡವು. ಇದು ಕೇವಲ ವ್ಯಾಪಾರ-ಪ್ರವಾಸೋದ್ಯಮಕ್ಕೆ ಸೀಮಿತವಾಗಿರದೆ, ಆರ್ಥಿಕ ಏಕೀಕರಣದ ಮೂಲಕ ಶಾಶ್ವತ ಶಾಂತಿ ಸ್ಥಾಪಿಸುವ ಗುರಿ ಹೊಂದಿತ್ತು.

ಕಳೆದ ದಶಕದಲ್ಲಿ ಸೌದಿ ಅರೇಬಿಯಾದಲ್ಲಿ ಯುವ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ (ಎಂಬಿಎಸ್) ನೇತೃತ್ವದಲ್ಲಿ ಕ್ರಾಂತಿಕಾರಿ ಬದಲಾವಣೆಗಳಾದವು. ಅವರು ದೇಶವನ್ನು ಪ್ರವಾಸೋದ್ಯಮ, ಕ್ರೀಡೆ ಮತ್ತು ತಂತ್ರಜ್ಞಾನದ ಕೇಂದ್ರವನ್ನಾಗಿ ಬದಲಾಯಿಸಿದರು. ಭಾರತ, ಯುಎಇ, ಸೌದಿ, ಇಸ್ರೇಲ್ ಮತ್ತು ಯುರೋಪ್ ಅನ್ನು ಸಂಪರ್ಕಿಸುವ ‘ಐಮೆಕ್’ (IMEC) ಕಾರಿಡಾರ್ ಅನ್ನು ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದ್ದರು.

ಇಸ್ರೇಲ್‌ನ ಹೈಫಾ ಬಂದರಿನ ಮೂಲಕ ವ್ಯಾಪಾರ ಬೆಸೆಯುವ ಯೋಜನೆ ಇದಾಗಿತ್ತು. ಆದರೆ 1979ರ ಇಸ್ಲಾಮಿಕ್ ಕ್ರಾಂತಿಯ ನಂತರದ ಇರಾನ್ ಇದಕ್ಕೆ ಹೊಂದಿಕೊಳ್ಳಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಇರಾನ್ ಮೇಲೆ ನಿರಂತರ ದಾಳಿಗಳು ನಡೆದರೂ, ಇರಾನ್ ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳ ಮಿಲಿಟರಿ ಬಲಕ್ಕೆ ದೊಡ್ಡ ಸವಾಲಾಗಿ ನಿಂತಿತು. ಇದರಿಂದ ಅಮೆರಿಕದ ರಕ್ಷಣೆಯ ಮೇಲಿದ್ದ ಅರಬ್ ರಾಷ್ಟ್ರಗಳ ನಂಬಿಕೆ ನಶಿಸಿತು.

ಕನಿಷ್ಠ ಹೌತಿ ಬಂಡುಕೋರರನ್ನು ಎದುರಿಸಲೂ ಸಾಧ್ಯವಾಗದ ಸೌದಿ ಅರೇಬಿಯಾ, ಈಗ ಟರ್ಕಿ ಮತ್ತು ಪಾಕಿಸ್ತಾನದ ಕಡೆಗೆ ಮುಖ ಮಾಡಿದೆ. ಆದರೆ ಟರ್ಕಿ ಸೈನ್ಯ ಸುಲಭವಾಗಿ ಬಾಡಿಗೆಗೆ ಸಿಗುವುದಿಲ್ಲ, ಹೀಗಾಗಿ ಸೌದಿ ಪಾಕಿಸ್ತಾನವನ್ನೇ ಹೆಚ್ಚು ನೆಚ್ಚಿಕೊಂಡಿದೆ. ಪಾಕಿಸ್ತಾನವು ಪರಮಾಣು ಶಕ್ತಿ ಹೊಂದಿರುವ ದೇಶವಾಗಿದ್ದು, ಸೌದಿಯೊಂದಿಗೆ ಪರಸ್ಪರ ರಕ್ಷಣಾ ಒಪ್ಪಂದ ಮಾಡಿಕೊಂಡಿದೆ. ಆದರೆ ಪಾಕಿಸ್ತಾನದ ಆಂತರಿಕ ಸ್ಥಿತಿ ತೀರಾ ಹದಗೆಟ್ಟಿದೆ: ಬಲೂಚ್ ಬಂಡುಕೋರರ ದಾಳಿಗಳು, ಅಫ್ಘಾನಿಸ್ತಾನದ ಗಡಿ ಸಂಘರ್ಷ, ಕುಸಿದ ಆರ್ಥಿಕತೆ ಮತ್ತು ದೇಶ ಬಿಟ್ಟು ಪಲಾಯನ ಮಾಡುತ್ತಿರುವ ಶ್ರೀಮಂತ ವರ್ಗ-ಇವೆಲ್ಲವೂ ಸೌದಿಗೆ ತಿಳಿದಿದೆ. ಈ ಕಥೆಯ ಕೊನೆಯಲ್ಲಿ ಒಂದು ಸ್ವಾರಸ್ಯಕರ ತಿರುವಿದೆ: ಮೆಕ್ಕಾ ಒಪ್ಪಂದದ ದೇಶಗಳು ಮತ್ತು ಇರಾನ್ ನಡುವೆ ನಡೆದ ಮಾತುಕತೆಯ ವೇಳೆ, ಹೌತಿಗಳ ವಿರುದ್ಧ ಯುದ್ಧ ಮಾಡುವ ಬದಲು ಒಂದು ಬಿಲಿಯನ್ ಡಾಲರ್ ಕೊಟ್ಟು ಅವರನ್ನು ಸಮಾಧಾನಪಡಿಸಿ (ಖರೀದಿಸಿ) ಎಂದು ಇರಾನ್ ಸೌದಿಗೆ ಸಲಹೆ ನೀಡಿತಂತೆ!

1930ರ ದಶಕದಲ್ಲಿ ಬ್ರಿಟಿಷರು ಸ್ಥಳೀಯ ನಾಯಕರಿಗೆ ಸೂಟ್‌ಕೇಸ್‌ಗಳಲ್ಲಿ ಹಣ ಹಂಚುತ್ತಿದ್ದ ತಂತ್ರವನ್ನು ಕಿಂಗ್ ಜಾಜ್ ನ ಅಶ್ವದಳ (King George's cavalry)) ಎಂದು ಕರೆಯಲಾಗುತ್ತಿತ್ತು. ಇಂದು ರಾಜ ಬದಲಾಗಿರಬಹುದು, ಆದರೆ ಹಣ ಚೆಲ್ಲಿ ಕೆಲಸ ಸಾಧಿಸುವ ಅದೇ ಹಳೆಯ ಕುದುರೆ ಸವಾರಿ ಇಂದಿಗೂ ಮುಂದುವರಿದಿದೆ