ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

R‌ T Vittalmurthy Column: ಶಾಮನೂರು ಕೋಟೆಯಲ್ಲಿ ಸಂಪತ್ತಿಗೆ ಸವಾಲ್

ಹತ್ತೊಂಬತ್ತನೇ ಶತಮಾನದ ಆರಂಭದಲ್ಲಿ ಅದುವರೆಗೂ ಅಜೇಯನಾಗಿದ್ದ ನೆಪೋಲಿಯನ್ ಬೋನಾ ಪಾರ್ಟೆ ‘ವಾಟರ್‌ಲೂ’ ಕದನದಲ್ಲಿ ಬ್ರಿಟಿಷರು ಮತ್ತವರ ಮಿತ್ರಕೂಟದೆದುರು ಸೋಲು ಅನುಭವಿಸಿದ. ಆ ಮೂಲಕ ಯೂರೋಪಿಯನ್ನರು ವಿಶ್ವದೆದುರು ತಲೆ ಎತ್ತಿ ನಿಲ್ಲುವಂತಾಯಿತು. ಈಗ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆ ಕೂಡಾ ಭವಿಷ್ಯದಲ್ಲಿ ಕಾಂಗ್ರೆಸ್ ನಡೆ ‘ವಾಟರ್ ಲೂ’ ಕಡೆ ಎಂಬಂತೆ ಭಾಸವಾಗುತ್ತಿದೆ.

ಮೂರ್ತಿಪೂಜೆ

ಅವತ್ತು ರಾಜ್ಯದಲ್ಲಿ ಜೆ.ಹೆಚ್.ಪಟೇಲ್ ನೇತೃತ್ವದ ಜನತಾದಳ ಸರ್ಕಾರ ಅಸ್ತಿತ್ವದಲ್ಲಿತ್ತು. ಜನತಾ‌ ದಳದ ಸುಪ್ತಿಮೋ ದೇವೇಗೌಡರು ಪ್ರಧಾನಿ ಗದ್ದುಗೆ ಏರಿ ವಾಪಸ್ಸು ಬಂದಿದ್ದರು.ಈ ಸಂದರ್ಭದ ಕರ್ನಾಟಕದ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಎದುರಾಯಿತು. ಹೀಗೆ ಉಪ ಚುನಾವಣೆ ನಡೆದ ಎರಡು ಕ್ಷೇತ್ರಗಳ ಪೈಕಿ ಒಂದು ರಾಮನಗರ. ಮತ್ತೊಂದು ಮೊಳಕಾಲ್ಮೂರು.

ಅವತ್ತು ರಾಜಕೀಯ ಬಲಾಬಲದ ದೃಷ್ಟಿಯಿಂದ ಜನತಾ ದಳ ಭರ್ಜರಿ ಗೆಲುವು ಸಾಧಿಸವೇಕಿತ್ತು. ಆದರೆ ಉಪಚುನಾವಣೆಯಲ್ಲಿ ಜನತಾದಳದ ಲೆಕ್ಕಾಚಾರ ಉಲ್ಟಾ ಆಗಿ ಪ್ರತಿಪಕ್ಷ ಕಾಂಗ್ರೆಸ್ಸಿನ ಅಭ್ಯರ್ಥಿಗಳು ಗೆಲುವು ಸಾಧಿಸಿದರು. ಅವತ್ತು ರಾಮನಗರ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಸಿ.ಎಂ.ಲಿಂಗಪ್ಪ, ಮೊಳಕಾಲ್ಮೂರಿನಲ್ಲಿ ಎನ.ವೈ.ಗೋಪಾಲಕೃಷ್ಣ ಗೆಲುವು ಗಳಿಸಿದ್ದರು. ಅಂದ ಹಾಗೆ ಅವತ್ತು ಜಿದ್ದಾಜಿದ್ದಿನ ಕ್ಷೇತ್ರವಾದ ರಾಮನಗರ ಕ್ಷೇತ್ರದಲ್ಲಿ ಸಿ.ಎಂ.ಲಿಂಗಪ್ಪ ಅವರ ಗೆಲುವಿಗೆ ಅಗತ್ಯವಾದ ರಣತಂತ್ರ ಹೆಣೆದವರು ಇವತ್ತು ಉಪಮುಖ್ಯಮಂತ್ರಿಯಾಗಿರುವ ಡಿ.ಕೆ.ಶಿವಕುಮಾರ್.

ಈ ಘಟನೆಯನ್ನು ಏಕೆ ನೆನಪಿಸಿಕೊಳ್ಳಬೇಕೆಂದರೆ ಅವತ್ತು ಜನತಾದಳ ಇದ್ದ ಜಾಗದಲ್ಲಿ ಇವತ್ತು ಕಾಂಗ್ರೆಸ್ ನಿಂತಿರುವಂತೆ ಭಾಸವಾಗುತ್ತಿದೆ.ಅದೇ ರೀತಿ ಅವತ್ತು ರಾಮನಗರ, ಮೊಳಕಾಲ್ಮೂರು ಕ್ಷೇತ್ರಗಳಿದ್ದ ಜಾಗದಲ್ಲಿ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರಗಳಿರುವಂತೆ ಕಾಣುತ್ತಿದೆ.

ಹಾಗಂತ ಏಪ್ರಿಲ್ ಒಂಬತ್ತರಂದು ಉಪಚುನಾವಣೆಗಳನ್ನು ಎದುರಿಸಿದ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋತೇ ಬಿಡುತ್ತದೆ ಅಂತಲ್ಲ. ಆದರೆ ಉಪಚುನಾವಣೆಯ ಕಣದಲ್ಲಿ ಜಾತಿವಾರು ಮತಗಳ ವಿಭಜನೆಯಾಗಿರುವ ರೀತಿಯನ್ನು ನೋಡಿದರೆ 2028ರ ವಿಧಾನ ಸಭಾ ಚುನಾವಣೆ ಕಾಂಗ್ರೆಸ್ ಪಾಲಿಗೆ ‘ವಾಟರ್‌ಲೂ ಯುದ್ಧ’ದಂತೆ ಕಾಣುತ್ತಿದೆ.

ಹತ್ತೊಂಬತ್ತನೇ ಶತಮಾನದ ಆರಂಭದಲ್ಲಿ ಅದುವರೆಗೂ ಅಜೇಯನಾಗಿದ್ದ ನೆಪೋಲಿಯನ್ ಬೋನಾಪಾರ್ಟೆ ‘ವಾಟರ್‌ಲೂ’ ಕದನದಲ್ಲಿ ಬ್ರಿಟಿಷರು ಮತ್ತವರ ಮಿತ್ರಕೂಟದೆದುರು ಸೋಲು ಅನುಭವಿಸಿದ. ಆ ಮೂಲಕ ಯೂರೋಪಿಯನ್ನರು ವಿಶ್ವದೆದುರು ತಲೆ ಎತ್ತಿ ನಿಲ್ಲುವಂತಾಯಿತು. ಈಗ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆ ಕೂಡಾ ಭವಿಷ್ಯದಲ್ಲಿ ಕಾಂಗ್ರೆಸ್ ನಡೆ ‘ವಾಟರ್ ಲೂ’ ಕಡೆ ಎಂಬಂತೆ ಭಾಸವಾಗುತ್ತಿದೆ.

ಕಾರಣ? ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಸಾಲಿಡ್ ಮತ ಬ್ಯಾಂಕು ಅನ್ನಿಸಿಕೊಂಡಿದ್ದ ಮುಸ್ಲಿಮರ ಮತಗಳು ಚೆದುರಿ ಹೋಗಿವೆ. ಮತದಾನ ನಡೆಯುವ ಮುನ್ನ ಕ್ಷೇತ್ರದ ಇತಿಹಾಸದಲ್ಲಿ ಹಿಂದೆಂದೂ ಬಳಕೆಯಾಗದಷ್ಟು ಪ್ರಮಾಣದ ಶಸ್ತ್ರಾಸ್ತ್ರಗಳನ್ನು ನಾವು ಬಳಸಿದ್ದೇವೆ.ಹೀಗಾಗಿ ಅಲ್ಪ ಅಂತರದಲ್ಲಿ ನಾವು ಗೆಲ್ಲುತ್ತೇವೆ ಅಂತ ಕಾಂಗ್ರೆಸ್ಸಿನ ಕೆಲ ನಾಯಕರು ಹೇಳುತ್ತಿದ್ದರೂ ವಾಸ್ತವದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಅವರ ಗೆಲುವು ಲಿಂಗಾ ಯತ ಮತ ಬ್ಯಾಂಕು ಸಾಲಿಡ್ಡಾಗಿ ಕಾಂಗ್ರೆಸ್ ಜತೆ ನಿಂತಿದೆಯೇ?ಎಂಬುದರ ಮೇಲೆ ನಿಂತಿದೆ.

ಹೀಗಾಗಿ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಸಮರ್ಥ್ ಶಾಮನೂರು ಗೆದ್ದರೂ ಅಥವಾ ಸೋತರೂ ಕ್ಷೇತ್ರದ ರಾಜಕೀಯ ಸ್ವರೂಪ ಬದಲಾಗುವುದು ನಿಶ್ಚಿತ. ಇನ್ನು ಬಾಗಲಕೋಟೆ ವಿಧಾನ ಸಭಾ ಕ್ಷೇತ್ರದ ಕತೆಯಾದರೂ ಅಷ್ಟೇ.ಯಾಕೆಂದರೆ ಕ್ಷೇತ್ರದ ಲಿಂಗಾಯತ ಮತದಾರರು ಸಾಲಿಡ್ಡಾಗಿ ಬಿಜೆಪಿಯ ವೀರಣ್ಣ ಚರಂತಿ ಮಠ ಅವರನ್ನು ಬೆಂಬಲಿಸಿದ್ದರೂ ಅಹಿಂದ ವರ್ಗಗಳ ಮತಗಳು ಕಾಂಗ್ರೆಸ್ಸಿನ ಉಮೇಶ್ ಮೇಟಿ ಪರವಾಗಿ ನಿಂತಂತೆ ಕಾಣುತ್ತಿಲ್ಲ.

ಸಿಎಂ ಸಿದ್ದರಾಮಯ್ಯ ಅವರು ಕ್ಷೇತ್ರದಲ್ಲಿ ಬೀಡು ಬಿಟ್ಟು ರೂಪಿಸಿದ ತಂತ್ರಗಾರಿಕೆಯ ಬಲ ಕೈ ಅಭ್ಯರ್ಥಿಯ ಪಾಲಿಗೆ ಆಶಾದಾಯಕ ಎಂಬುದನ್ನು ಬಿಟ್ಟರೆ ಕಾಂಗ್ರೆಸ್ ಪಾಳಯಕ್ಕೆ ಈ ಕ್ಷೇತ್ರದ ವಿಷಯದಲ್ಲೂ ಅನುಮಾನಗಳಿವೆ. ಹೀಗಾಗಿ ಉಪಚುನಾವಣೆಯ ಕಣದಲ್ಲಿ ನಿರಾಯಾಸವಾಗಿ ಗೆಲ್ಲಬೇಕಿದ್ದ ಕಾಂಗ್ರೆಸ್ ಆತಂಕದ ಘಳಿಗೆಗಳನ್ನು ಎದುರಿಸುತ್ತಿದೆ. ಅದರ ಆತಂಕ ನಿಜವಾಗುತ್ತದಾ ಅಥವಾ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರ ಪಾಳಯದಲ್ಲಿರುವ ಆತಂಕ ನಿಜವಾಗುತ್ತದಾ ಎಂಬುದನ್ನು ಕಾದು ನೋಡಬೇಕು.

ವಿಜಯೇಂದ್ರ ಪಾಳಯದ ಲೆಕ್ಕಾಚಾರ

ಅಂದಹಾಗೆ ಉಚುನಾವಣೆಯ ಫಲಿತಾಂಶದ ಬಗ್ಗೆ ಬಿಜೆಪಿ ಪಾಳಯ ಅಷ್ಟೇನೂ ಆತಂಕ ಪಟ್ಟು ಕೊಳ್ಳುವ ಅಗತ್ಯವಿಲ್ಲ. ಯಾಕೆಂದರೆ ಉಪಚುನಾವಣೆ ನಡೆದ ಎರಡೂ ಕ್ಷೇತ್ರಗಳು ಆ ಪಕ್ಷದ ಕೈಲಿ ಇದ್ದವಲ್ಲ? ಹೀಗಾಗಿ ಈ ಕ್ಷೇತ್ರಗಳ ಸೋಲಿನಿಂದ ಬಿಜೆಪಿ ಕಳೆದುಕೊಳ್ಳುವುದೇನೂ ಇಲ್ಲ. ಆದರೆ ಒಂದೊಮ್ಮೆ ಎರಡೂ ಕ್ಷೇತ್ರಗಳಲ್ಲಿ,ಇಲ್ಲವೇ ಒಂದು ಕ್ಷೇತ್ರದಲ್ಲಿ ಗೆಲುವು ಗಳಿಸಿದರೆ ಅದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಪಾಲಿಗೆ ಪ್ಲಸ್ಸಾಗುವುದು ಗ್ಯಾರಂಟಿ.

ವಾಸ್ತವವಾಗಿ ಉಪಚುನಾವಣೆಯ ರಣಾಂಗಣದಲ್ಲಿ ವಿಜಯೇಂದ್ರ ಸಾಲಿಡ್ಡಾಗಿಯೇ ಹೋರಾಡಿ ದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಕೆ.ಆರ್.ಪೇಟೆ ಸೇರಿದಂತೆ ಹಲವೆಡೆ ನಡೆದ ಉಪಚುನಾವಣೆಗಳಲ್ಲಿ ಪಕ್ಷದ ಗೆಲುವಿಗೆ ಅವರು ಯಾವ ರಣತಂತ್ರ ಹೆಣೆದಿದ್ದರೋ ಅಂತಹದೇ ರಣತಂತ್ರವನ್ನು ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರಗಳ ರಣಾಂಗಣ ದಲ್ಲೂ ಹೆಣೆದಿದ್ದಾರೆ.

ಮೂಲಗಳ ಪ್ರಕಾರ, ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ವಿರುದ್ದ ತಿರುಗಿ ಬಿದ್ದ ಹಲವು ಮುಸ್ಲಿಂ ಮುಖಂಡರು ಬಿಜೆಪಿಯ ಪರವಾಗಿರುವಂತೆ ವಿಜಯೇಂದ್ರ ನೋಡಿಕೊಂಡಿದ್ದಾರೆ. ಆದರೆ ಈ ತಂತ್ರದಿಂದ ಬಿಜೆಪಿಗೆ ಎಷ್ಟು ಪ್ರಮಾಣದಲ್ಲಿ ಮುಸ್ಲಿಮರ ಮತಗಳು ಬರುತ್ತವೋ? ಅದಕ್ಕಿಂತ ಹೆಚ್ಚಿನ ಪ್ರಮಾಣದ ಮತಗಳು ಕಾಂಗ್ರೆಸ್ ವಿರುದ್ಧ ಚಲಾವಣೆಯಾಗುತ್ತವೆ.

ಹಾಗಾದಾಗ ಗೆಲುವು ಬಿಜೆಪಿಯ ತಟ್ಟೆಗೆ ಬಂದು ಬೀಳುತ್ತದೆ ಎಂಬುದು ವಿಜಯೇಂದ್ರ ಅವರ ಲೆಕ್ಕಾಚಾರ. ಬಾಗಲಕೋಟೆಯ ವಿಷಯ ಬಂದರೂ ಅಷ್ಟೇ. ಕ್ಷೇತ್ರದ ಸಣ್ಣ-ಸಣ್ಣ ಜಾತಿಗಳ ಮತಗಳನ್ನು ಒಂದು ಮಾಡಿ ಅದು ದೊಡ್ಡ ಮೊತ್ತವಾಗುವಂತೆ ಮಾಡಿರುವ ವಿಜಯೇಂದ್ರ ಅವರಿಗೆ ಲಿಂಗಾಯತ ಮತ ಬ್ಯಾಂಕಿನ ಸಾಲಿಡ್ಡು ಬೆಂಬಲದ ನಿರೀಕ್ಷೆ ಇದೆ.

ಅರ್ಥಾತ್, ವಿಜಯೇಂದ್ರ ಅವರ ಲೆಕ್ಕಾಚಾರದ ಪ್ರಕಾರ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಹತ್ತರಿಂದ ಹದಿನಾಲ್ಕು ಸಾವಿರ ಮತಗಳ ಅಂತರದಿಂದ ಗೆಲ್ಲಬಹುದು. ಆದರೆ ಇದರ ನಡುವೆಯೇ ವಿಜಯೇಂದ್ರ ಅವರ ಕ್ಯಾಂಪಿಗಿರುವ ಸಣ್ಣ ಅನುಮಾನವೆಂದರೆ, ಬಸವನಗೌಡ ಪಾಟೀಲ್ ಯತ್ನಾಳ್ ಮತ್ತು ಸಿ.ಸಿ.ಪಾಟೀಲ್ ಅವರಂತಹ ನಾಯಕರು ಮಾಡಿದ ಒಂದು ಕೆಲಸ.

ಅದೆಂದರೆ ಲಿಂಗಾಯತ ಒಳಪಂಗಡಗಳ ಸಭೆ ಮಾಡಿ ‘ಲಿಂಗಾಯತರು ಒಂದು’ ಅಂತ ಈ ನಾಯಕರು ಕೊಟ್ಟ ಮೆಸೇಜು ಕ್ಷೇತ್ರದ ಇತರ ಮತದಾರರ ಭಾವನೆಯನ್ನು ಕೆರಳಿಸಿ ಅವರೆಲ್ಲ ಒಂದಾಗಿದ್ದರೆ ಬಿಜೆಪಿಗೆ ಹಿನ್ನಡೆಯಾಗಬಹುದು ಎಂಬುದು ವಿಜಯೇಂದ್ರ ಕ್ಯಾಂಪಿನ ಯೋಚನೆ. ಅದೇನೇ ಇದ್ದರೂ ಉಪಚುನಾವಣೆಯ ನಂತರ ವಿಜಯೇಂದ್ರ ಅವರ ನಾಯಕತ್ವಕ್ಕೆ ಬಲ ತರುವ ಸಾಧ್ಯತೆಗಳು ಜಾಸ್ತಿ.

ಸಲೀಂ-ಹ್ಯಾರೀಸ್ ಹೊಸ ಜೋಡೆತ್ತುಗಳು?

ಇನ್ನು ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕೆಲ ಮುಸ್ಲಿಂ ನಾಯಕರು ನಡೆಸಿದ ‘ಸಂಪತ್ತಿಗೆ ಸವಾಲ್’ ಡ್ರಾಮಾ ಏಕಕಾಲಕ್ಕೆ ಕಾಂಗ್ರೆಸ್ ಮತ್ತು ಮುಸ್ಲಿಂ ಮತ ಬ್ಯಾಂಕಿಗೆ ಹೊರೆಯಾಗಲಿದೆ. ಅಂದಹಾಗೆ ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ ಮುಸ್ಲಿಮರಿಗೆ ಸಿಗಬೇಕು ಅಂತ ಪಟ್ಟು ಹಿಡಿದಿದ್ದ ಸಚಿವ ಜಮೀರ್ ಅಹ್ಮದ್ ಖಾನ್, ಅಬ್ದುಲ್ ಜಬ್ಬಾರ್ ಅವರಂತಹ ನಾಯಕರನ್ನು ಖುದ್ದು ರಣದೀಪ್ ಸಿಂಗ್ ಸುರ್ಜೇವಾಲಾ ಸಮಾಧಾನಿಸಿದ್ದರಾದರೂ ಕ್ಷೇತ್ರದ ಮುಸ್ಲಿಮರಲ್ಲಿ ಕಂಡು ಬಂದ ಅತಂಕ ಸಂಪತ್ತಿಗೆ ಸವಾಲ್ ಡ್ರಾಮಾ ನಡೆಯಲು ಕಾರಣವಾಯಿತು.

ಎಷ್ಟೇ ಆದರೂ ಸಮರ್ಥ್ ಚಿಕ್ಕವರು. ಈಗ ಅವರು ಗೆದ್ದರೆ ಮುಂದಿನ ಮೂವತ್ತು-ಮೂವತ್ತೈದು ವರ್ಷ ಕ್ಷೇತ್ರದಲ್ಲಿ ಮುಸ್ಲಿಮರಿಗೆ ಅವಕಾಶ ಸಿಕ್ಕುವುದು ಕಷ್ಟ. ಎಷ್ಟೇ ಆದರೂ ದುಡ್ಡಿನ ಬಲ ಇರುವವರು. ಗೆದ್ದರೆ ನೆಲೆಯಾಗುವುದು ಸುಲಭ ಎಂಬ ಮಾತು ಮುಸ್ಲಿಂ ಮತ ಬ್ಯಾಂಕಿನಲ್ಲಿ ಯಾವ ಮಟ್ಟದ ಪ್ರಚಾರ ಪಡೆಯಿತು ಎಂದರೆ ಲಿಟರಲಿ ಮುಸ್ಲಿಂ ಸಮುದಾಯದ ಮತದಾರರು ಕಾಂಗ್ರೆಸ್ಸಿಗೆ ಉಲ್ಟಾ ಹೊಡೆದರು. ಪರಿಣಾಮ? ಮುಸ್ಲಿಂ ಮತದಾರರ ಅಂತಹ ಭಾವನೆಗೆ ಕುಮ್ಮಕ್ಕು ನೀಡಿದ ಆರೋಪ ಈಗ ಸಚಿವರಾದ ಜಮೀರ್ ಅಹ್ಮದ್, ಅಬ್ಬುಲ್ ಜಬ್ಬಾರ್ ಅವರಂತಹ ನಾಯಕರನ್ನು ಸುತ್ತಿಕೊಂಡಿದೆ.

ಈ ಅಂಶವೇ ಕಾಂಗ್ರೆಸ್ ಪಾಳಯದಲ್ಲಿ ಹೊಸ ಲೆಕ್ಕಾಚಾರಗಳಿಗೆ ಕಾರಣವಾಗಿದೆಯಲ್ಲದೆ ಮುಸ್ಲಿಂ ನಾಯಕತ್ವದಿಂದ ಜಮೀರ್ ಅವರನ್ನು ಕೆಳಗಿಳಿಸುವ ಯತ್ನ ಆರಂಭವಾಗಿದೆ. ಅಂದ ಹಾಗೆ ಈ ಹಿಂದೆ ಕಾಂಗ್ರೆಸ್ಸಿನಲ್ಲಿದ್ದ ಸಿ.ಎಂ.ಇಬ್ರಾಹಿಂ,ರೋಷನ್ ಬೇಗ್ ಅವರಂತಹ ನಾಯಕರನ್ನು ಸೈಡ್ ಲೈನಿಗೆ ಸರಿಸಿ ಮುಸ್ಲಿಮರ ಟಾಪ್ ಲೀಡರ್ ಅನ್ನಿಸಿಕೊಂಡಿದ್ದ ಜಮೀರ್ ಅವರನ್ನು ಕೆಳಗೆಳೆದು ಹಾಕಲು ಈಗ ಕೈ ಪಾಳಯದ ಬಹುತೇಕ ಮುಸ್ಲಿಂ ನಾಯಕರು ಒಂದಾಗಿದ್ದಾರೆ.

ಹೀಗೆ ಅವರು ನಡೆಸಿರುವ ಯತ್ನ ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಸಲೀಂ ಅಹ್ಮದ್ ಮತ್ತು ಶಾಂತಿನಗರದ ಶಾಸಕ ಎನ್.ಎ.ಹ್ಯಾರಿಸ್ ಮುಸ್ಲಿಂ ಕೋಟೆಯ ಜೋಡೆತ್ತುಗಳಾಗುವುದು ಗ್ಯಾರಂಟಿ. ಆದರೆ ಇಂತಹ ಬೆಳವಣಿಗೆಗಳೇನೇ ಇರಲಿ, ಆದರೆ ಇದರಿಂದ ಭವಿಷ್ಯದಲ್ಲಿ ಮುಸ್ಲಿಂ ಮತ ಬ್ಯಾಂಕ್ ದುರ್ಬಲವಾಗುವುದು ಮಾತ್ರವಲ್ಲ,ಆ ಮೂಲಕ ಕಾಂಗ್ರೆಸ್ ಸೈನ್ಯ ದುರ್ಬಲವಾಗುವಂತೆ ಮಾಡಿ ಬಿಜೆಪಿ-ಜೆಡಿಎಸ್ ಮಿತ್ರಕೂಟಕ್ಕೆ ಅನುಕೂಲ ಮಾಡಿಕೊಡುವುದು ನಿಶ್ಚಿತ. ಒಂದು ವೇಳೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದರೂ ಮುಸ್ಲಿಂ ಮತ ಬ್ಯಾಂಕಿನ ಸ್ವರೂಪ ಈಗಿನಂತಿರುವುದಿಲ್ಲ ಎಂಬುದು ನಿಜ.

ಲಾಸ್ಟ್ ಸಿಪ್

ಕರ್ನಾಟಕದ ರಾಜಕಾರಣದಲ್ಲಿ ಶುರುವಾಗಿರುವ ಹೊಸ ಟ್ರೆಂಡ್ ಎಂದರೆ ಟಾಪ್ ಲೀಡರುಗಳ ಮಕ್ಕಳನ್ನು ಚುನಾವಣೆಯಲ್ಲಿ ಸೋಲಿಸುವುದು. ಇದಕ್ಕೆ ಇತ್ತೀಚೆಗೆ ನಡೆದ ಶಿಗ್ಗಾಂವಿ ಮತ್ತು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗಳೇ ಸಾಕ್ಷಿ.ಈ ಪೈಕಿ ಶಿಗ್ಗಾಂವಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್ ಬೊಮ್ಮಾಯಿ ಕಾಂಗ್ರೆಸ್ಸಿನ ಪಠಾಣ್ ಎದುರು ಸೋಲು ಅನುಭವಿಸಿದರು.

ಇನ್ನು ಚನ್ನಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಿದ್ದರು. ಆದರೆ ಕಾಂಗ್ರೆಸ್ಸಿನ ಸಿ.ಪಿ.ಯೋಗೀಶ್ವರ್ ಅವರ ವಿರುದ್ಧ ಸೋತರು. ಈಗ ದಾವಣಗೆರೆಯಲ್ಲಿ ಶಾಮನೂರು ಸಾಮ್ರಾಜ್ಯದ ಕುಡಿ,ಹಾಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಪುತ್ರ ಸಮರ್ಥ್ ಈ ದಾಖಲೆಯನ್ನು ಮುರಿದು ಗೆಲ್ಲುತ್ತಾರೋ? ಇಲ್ಲವೇ ಆ ಪರಂಪರೆಗೆ ಸೇರುತ್ತಾರೋ ಕಾದು ನೋಡಬೇಕು.

ಆರ್‌.ಟಿ. ವಿಠ್ಠಲಮೂರ್ತಿ‌

View all posts by this author