ವೀಕೆಂಡ್ ವಿತ್ ಮೋಹನ್
camohanbn@gmail.com
ಭಾರತವು ಜಗತ್ತಿನ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ನೂರಾರು ಭಾಷೆಗಳು-ಆಚರಣೆಗಳನ್ನು, ವೈವಿಧ್ಯಮಯ ವಿಚಾರಗಳನ್ನು ಒಳಗೊಂಡಿರುವುದು, ಇಂಥ ವಿವಿಧತೆಯಲ್ಲೂ ಏಕತೆಯನ್ನು ಪ್ರದರ್ಶಿಸುವುದು ಭಾರತದ ವೈಶಿಷ್ಟ್ಯ. ಪ್ರಜೆಗಳಿಂದ, ಪ್ರಜೆಗಳಿಗಾಗಿ ಮತ್ತು ಪ್ರಜೆಗಳಿಗೋಸ್ಕರ ಸದೃಢವಾಗಿ ನಿಂತಿರುವ ದೇಶ ಭಾರತ. ಪ್ರಜೆಗಳಿಂದ ಆಯ್ಕೆಯಾದ ರಾಜಕೀಯ ಪಕ್ಷಗಳು ಕಳೆದ ೭೫ ವರ್ಷಗಳಿಂದ ದೇಶದಲ್ಲಿ ಆಡಳಿತ ನಡೆಸುತ್ತಾ ಬಂದಿವೆ. ಚುನಾವಣೆಯಲ್ಲಿ ಸೋಲು ಮತ್ತು ಗೆಲುವು ಸಾಮಾನ್ಯ.
ಗೆದ್ದಾಗ ಖುಷಿ ಪಟ್ಟು, ಸೋತಾಗ ಆತ್ಮಾವಲೋಕನ ಮಾಡಿಕೊಳ್ಳುವ ಮತ್ತು ತಪ್ಪನ್ನು ತಿದ್ದಿ ಕೊಳ್ಳುವ ಪ್ರಯತ್ನ ಮಾಡಬೇಕು. ಆಡಳಿತ ಪಕ್ಷಕ್ಕೆ ಇರುವಂಥ ಸ್ಥಾನಮಾನವು ವಿರೋಧ ಪಕ್ಷಕ್ಕೂ ಸಮನಾಗಿರುವುದು ಭಾರತದ ಪ್ರಜಾಪ್ರಭುತ್ವದ ವೈಶಿಷ್ಟ್ಯ. ಒಂದೊಮ್ಮೆ ಆಡಳಿತ ಪಕ್ಷವು ತಪ್ಪುಹಾದಿ ಹಿಡಿದರೆ, ಜವಾಬ್ದಾರಿಯುತ ವಿರೋಧಪಕ್ಷವು ಅದರ ಕಿವಿಹಿಂಡಬೇಕು, ನೈಜ ವಿಚಾರ ಗಳನ್ನು ಜನರ ಮುಂದಿಡುವ ಕೆಲಸ ಮಾಡಬೇಕು.
ಭಾರತದ ರಾಜಕೀಯ ಇತಿಹಾಸವನ್ನು ಗಮನಿಸಿದರೆ, ಲಕ್ಷಾಂತರ ಜನರು ಮಾಡಿದ ಸ್ವಾತಂತ್ರ್ಯ ಹೋರಾಟವನ್ನು ಹೈಜಾಕ್ ಮಾಡಿ ದಶಕಗಳ ಕಾಲ ಆಡಳಿತ ನಡೆಸಿದ ಪಕ್ಷ ಕಾಂಗ್ರೆಸ್ ಎಂಬುದು ಅರಿವಾಗುತ್ತದೆ. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಬ್ರಿಟಿಷರ ವಿರುದ್ಧ ದನಿಯೆತ್ತಲು ಸ್ಥಾಪಿಸ ಲಾದ ಸಂಘಟನೆ ‘ಇಂಡಿಯನ್ ನ್ಯಾಷನಲ್ ಕಾಂಗ್ರೆಸ್’; ಸ್ವಾತಂತ್ರ್ಯಾನಂತರದಲ್ಲಿ ಮಹಾತ್ಮ ಗಾಂಧಿಯವರು ಈ ಸಂಘಟನೆಯನ್ನು ವಿಸರ್ಜಿಸಿ ಎಂದಾಗ, ಅವರ ಮಾತನ್ನು ಕೇಳದೆ ಅದನ್ನೊಂದು ರಾಜಕೀಯ ಪಕ್ಷವನ್ನಾಗಿಸಿ ಅಧಿಕಾರವನ್ನು ಅನುಭವಿಸಿದ್ದು ನೆಹರು ಮನೆತನ.
ನೆಹರು ಮನೆತನದವರಿಗೆ ಸತತ ಆರು ದಶಕಗಳ ಕಾಲ ಕುಳಿತಲ್ಲಿಗೇ ಅಧಿಕಾರ ಒದಗಿ ಬಂತು. ನೆಹರು ಮಾತ್ರವಲ್ಲದೆ, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಯವರು ಪ್ರಧಾನಿಗಿರಿಯ ಅಧಿಕಾರವನ್ನು ಅನುಭವಿಸಿದರು. ಸೋನಿಯಾ ಗಾಂಧಿಯವರು ನೇಪಥ್ಯದಲ್ಲಿದ್ದುಕೊಂಡೇ ಅಧಿಕಾರವನ್ನು ಚಲಾಯಿಸಿದರು.
ಇದನ್ನೂ ಓದಿ: Mohan Vishwa Column: ಡಾ.ಹೆಗ್ಡೆವಾರ್ ಅವರ ಸ್ವಾತಂತ್ರ್ಯ ಹೋರಾಟ
ಅಂತೆಯೇ, ರಾಹುಲ್ ಗಾಂಧಿಯವರಿಗೂ ಅನಾಯಾಸವಾಗಿ ಅಧಿಕಾರ ಸಿಗುತ್ತದೆ ಎಂದುಕೊಂಡಿ ದ್ದರು ಸೋನಿಯಾ. ಆದರೆ ಅವರ ಕನಸು ದಿನದಿಂದ ದಿನಕ್ಕೆ ನುಚ್ಚುನೂರಾಗುತ್ತಿದೆ. ಕಳೆದ 11 ವರ್ಷಗಳಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ 90ಕ್ಕೂ ಅಧಿಕ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಸೋಲುಂಡಿದೆ. ಅದು ಕೇಂದ್ರದಲ್ಲಿ ಸತತ 3ನೇ ಬಾರಿಗೆ ಸೋತು, ತನ್ನ ಸಂಸದರ ಸಂಖ್ಯೆ ಯನ್ನು 100ರ ಗಡಿ ಮುಟ್ಟಿಸಲು ಏದುಸಿರುಬಿಡುತ್ತಿದೆ. ಈ ವೈಫಲ್ಯಗಳಿಂದ ಕಂಗೆಟ್ಟಿರುವ ರಾಹುಲ್ ಗಾಂಧಿ, ಕಳೆದ ಕೆಲವು ವರ್ಷಗಳಿಂದ ‘ಭಾರತ-ವಿರೋಧಿ’ ಶಕ್ತಿಗಳ ಕೈಗೊಂಬೆಯಾಗುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ.
ಜಪಾನ್ ದೇಶವನ್ನು ಹಿಂದಿಕ್ಕಿ ಜಾಗತಿಕ ಮಟ್ಟದಲ್ಲಿ ನಾಲ್ಕನೇ ಸ್ಥಾನಕ್ಕೇರಿರುವ ಭಾರತದ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಮಟ್ಟದ ಷಡ್ಯಂತ್ರಗಳು ನಡೆಯುತ್ತಿರುವ ವಿಷಯ ಆಗಾಗ ಚರ್ಚೆಗೆ ಬರುತ್ತಿರುತ್ತದೆ. ಭಾರತದ ಅಭಿವೃದ್ಧಿಯನ್ನು ಸಹಿಸದ ಕೆಲವು ವಿದೇಶಿ ಶಕ್ತಿಗಳು, ದೇಶದೊಳಗೆ ಅರಾಜಕತೆಯನ್ನು ಸೃಷ್ಟಿಸುವ ಯತ್ನವನ್ನು ನಡೆಸುತ್ತಲೇ ಇವೆ.
ನರೇಂದ್ರ ಮೋದಿಯವರ ದಕ್ಷ ಆಡಳಿತ ಮತ್ತು ಜನಪ್ರಿಯತೆಯನ್ನು ದೊಡ್ಡಣ್ಣ ಅಮೆರಿಕ ಒಪ್ಪಿಕೊಂಡಿದೆ. ಭಾರತದ ಸರಕುಗಳ ಮೇಲೆ ಶೇ.50ರ ಸುಂಕವನ್ನು ವಿಧಿಸಿದ ನಂತರವೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮೋದಿಯವರ ಹುಟ್ಟುಹಬ್ಬದಂದು ಅವರಿಗೆ ಶುಭಕೋರಿ ಹೊಗಳಿದ್ದಾರೆ.
ಮೋದಿಯವರನ್ನು ಅಧಿಕಾರದಿಂದ ಕೆಳಗಿಳಿಸುವ ಹವಣಿಕೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಎಡಚರ ಪಟಾಲಂಗಳು ಅಂತಾರಾಷ್ಟ್ರೀಯ ಶಕ್ತಿಗಳ ಜತೆ ಕೈಜೋಡಿಸಿ ಅನೇಕ ಬಾರಿ ಪ್ರಯತ್ನಪಟ್ಟು ಕೈ ಸುಟ್ಟುಕೊಂಡಿವೆ. ಪೌರತ್ವ ತಿದ್ದುಪಡಿ ಕಾಯಿದೆಯ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಿ ದೆಹಲಿಯ ಶಾಹೀನ್ ಬಾಗ್‌ನಲ್ಲಿ ಪ್ರತಿಭಟನೆ ನಡೆಸಿದ್ದು, ದೆಹಲಿಯ ಕೆಂಪುಕೋಟೆ ಪ್ರದೇಶಕ್ಕೆ ಟ್ರ್ಯಾಕ್ಟರ್ ನುಗ್ಗಿಸಿದ್ದು, ರಫೆಲ್ ಯುದ್ಧವಿಮಾನ ಖರೀದಿ ವಿಷಯದಲ್ಲಿ ಸ್ವತಃ ರಾಹುಲರು ದೇಶಾದ್ಯಂತ ಸುಳ್ಳಿನ ಸರಮಾಲೆಯನ್ನೇ ಹೆಣೆದಿದ್ದು, ‘ವಿದ್ಯುನ್ಮಾನ ಮತಯಂತ್ರದ ಹ್ಯಾಕ್’ ಎಂಬ ಸುಳ್ಳನ್ನು ಮುಂದಿಟ್ಟುಕೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೋದಿಯವರ ವಿರುದ್ಧ ಷಡ್ಯಂತ್ರ ರೂಪಿಸಿದ್ದು ಇವೆಲ್ಲವೂ ಅದಕ್ಕೆ ಒಂದಿಷ್ಟು ಉದಾಹರಣೆಗಳು. ಇವೆಲ್ಲವೂ ವಿಫಲವಾದ ನಂತರ ‘ವೋಟ್ ಚೋರಿ’ ಎಂಬ ಹೊಸ ಟೂಲ್‌ಕಿಟ್ ಶುರುವಾಗಿದೆ. ಒಂದೆಡೆ, ಬಿಹಾರದಲ್ಲಿ ಚುನಾವಣಾ ಆಯೋಗವು ನಡೆಸುತ್ತಿರುವ ಮತದಾರರ ಪಟ್ಟಿಯ ಪರಿಷ್ಕರಣೆಯನ್ನು ವಿರೋಧಿಸುವುದು, ಮತ್ತೊಂದೆಡೆ ಕರ್ನಾಟಕದ ಮಹದೇವಪುರ ಮತ್ತು ಆಳಂದ ಕ್ಷೇತ್ರಗಳ ಮತದಾರರ ಪಟ್ಟಿಯ ಬಗ್ಗೆ ಮಾತನಾಡುವುದು; ಚುನಾವಣಾ ಆಯೋಗದ ಮೇಲೆ ಆರೋಪ ಮಾಡಿ, ಒಂದು ದೂರನ್ನೂ ನೀಡದೆ ‘ಹಿಟ್ ಆಂಡ್ ರನ್’ ಮಾಡುವುದು ಈ ‘ಟೂಲ್ ಕಿಟ್’ನ ಒಂದು ಭಾಗ.
ಚುನಾವಣಾ ಆಯೋಗ ಒಡ್ಡಿದ ಸವಾಲನ್ನು ಸ್ವೀಕರಿಸಿ ರಾಹುಲ್ ಗಾಂಧಿಯವರು ಅಫಿಡವಿಟ್ ಸಲ್ಲಿಸಿದರೆ, ಸುಳ್ಳುಗಳು ಬೆತ್ತಲಾಗುತ್ತವೆ ಎಂಬುದು ಷಡ್ಯಂತ್ರವನ್ನು ನಡೆಸುತ್ತಿರುವ ತಂಡಕ್ಕೆ ತಿಳಿದಿದೆ. ಕಾಂಗ್ರೆಸ್ ಪಕ್ಷದ ಶಾಸಕ ಗೆದ್ದಿರುವ ಆಳಂದ ಕ್ಷೇತ್ರದಲ್ಲಿ ಮತಗಳ್ಳತನ ನಡೆದಿದೆ ಎಂಬುದು ರಾಹುಲರ ಹೊಸ ಆರೋಪ. ಸದರಿ ‘ವೋಟ್ ಚೋರಿ’ ಟೂಲ್‌ಕಿಟ್ ಅನ್ನು ಗಮನಿಸಿದರೆ, ರಾಹುಲರು ಕರ್ನಾಟಕದ ಕ್ಷೇತ್ರಗಳನ್ನಷ್ಟೇ ಆಯ್ಕೆಮಾಡಿಕೊಂಡಿರುವುದು ಅರಿವಾಗುತ್ತದೆ.
ಇದಕ್ಕಿರುವ ಕಾರಣ ಸ್ಪಷ್ಟ- ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿರುವುದರಿಂದ, ರಾಹುಲರ ಸುಳ್ಳು ಆರೋಪಗಳಿಗೆ ಹೆಚ್ಚಿನ ಮಾರ್ಕೆಟಿಂಗ್ ಆಗುತ್ತದೆ. ಅಧಿಕಾರಿಗಳು ಕಾಂಗ್ರೆಸ್ ಸರಕಾರದ ಅಡಿಯಲ್ಲಿರುವುದರಿಂದ, ವಿಶೇಷ ತನಿಖೆಯ ಹೆಸರಿನಲ್ಲಿ ತಮಗೆ ಬೇಕಿರುವ ರೀತಿಯಲ್ಲಿ ವರದಿ ಯನ್ನು ತಯಾರು ಮಾಡಿಸಬಹುದು.
ಆ ವರದಿಯನ್ನು ಮುಂದಿಟ್ಟುಕೊಂಡು ದೇಶಾದ್ಯಂತ ‘ವೋಟ್ ಚೋರಿ’ ಎಂಬ ಸುಳ್ಳನ್ನು ಹಬ್ಬಿಸ ಬಹುದು ಎಂಬುದು ಈ ‘ಟೂಲ್‌ಕಿಟ್’ ಗ್ಯಾಂಗಿನ ದೊಡ್ಡ ಷಡ್ಯಂತ್ರ. ಚುನಾವಣಾ ಆಯೋಗಕ್ಕೆ ಅಧಿಕೃತವಾಗಿ ದೂರು ನೀಡಿದರೆ ಸಂಬಂಧಪಟ್ಟವರು ಬೆತ್ತಲಾಗಬೇಕಾಗುತ್ತದೆ, ನ್ಯಾಯಾಲಯದ ಮೊರೆ ಹೋದರೆ ಮತ್ತೊಮ್ಮೆ ಛೀಮಾರಿ ಹಾಕಿಸಿಕೊಂಡು ಬರಬೇಕಾಗುತ್ತದೆ.
ಹಾಗಾಗಿ ಮಾಧ್ಯಮಗಳ ಮುಂದೆ ಒಂದು ‘ಪವರ್ ಪಾಯಿಂಟ್ ಪ್ರೆಸೆಂಟೇಷನ್’ (ಪಿಪಿಟಿ) ಪ್ರದರ್ಶಿಸಿ ‘ಹಿಟ್ ಆಂಡ್ ರನ್’ ಮಾಡುವುದು ಈ ‘ಟೂಲ್‌ಕಿಟ್’ನ ಉದ್ದೇಶ. ಈ ಹಿಂದೆ, ಜಾತಿಗಳ ವಿಚಾರ ವನ್ನು ಮುನ್ನೆಲೆಗೆ ತಂದು ಸಮಾಜವನ್ನು ಒಡೆಯುವ ಕೆಲಸಕ್ಕೆ ಎಡಚರರು ‘ಕೈ’ಹಾಕಿದ್ದರು. ಜಾತಿಪದ್ಧತಿಯನ್ನು ನಂಬದ ಕಮ್ಯುನಿಸ್ಟರು ಅದನ್ನೇ ಬಳಸಿಕೊಂಡರು.
ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಪರಿಶಿಷ್ಟ ವರ್ಗಕ್ಕೆ ಸೇರಿದವರು, ಪ್ರಧಾನಿ ನರೇಂದ್ರ ಮೋದಿ ಹಿಂದುಳಿದ ವರ್ಗಕ್ಕೆ ಸೇರಿದವರು, ಸಂವಿಧಾನ ರಚಿಸಿದ ಬಾಬಾ ಸಾಹೇಬ್ ಅಂಬೇಡ್ಕರ್ ದಲಿತ ಸಮುದಾಯದವರು. ಇಷ್ಟೊಂದು ಉದಾಹರಣೆಗಳು ಕಣ್ಣ ಮುಂದಿದ್ದರೂ, ರಾಹುಲ್ ಗಾಂಧಿಯವರು ಜಾತಿಯನ್ನು ಮುನ್ನೆಲೆಗೆ ತಂದು, “ಮೋದಿಯವರ ಅವಧಿಯಲ್ಲಿ ಅನ್ಯಾಯ ವಾಗಿದೆ" ಎಂದು ಹೇಳಿದ್ದರು.
ಸಾವಿರಾರು ವರ್ಷಗಳ ಇತಿಹಾಸವಿರುವ ಭಾರತ ದೇಶದಲ್ಲಿ ಜಾತಿಪದ್ಧತಿ ಜಾರಿಗೆ ಬಂದ ಅವಧಿಯ ಬಗ್ಗೆ ಅನೇಕ ಸಂಶೋಧನೆಗಳು ನಡೆಯುತ್ತಿವೆ. ಮೂರನೇ ಶತಮಾನದಲ್ಲಿ, ಗ್ರೀಸ್ ದೇಶದ ರಾಯಭಾರಿ ಮೆಗಾಸ್ತನೀಸ್ ಭಾರತದ ಬಗೆಗಿನ ತನ್ನ ಪುಸ್ತಕದಲ್ಲಿ ಕೇವಲ ‘ವರ್ಣ’ದ ಬಗ್ಗೆ ಉಲ್ಲೇಖಿಸಿದ್ದಾನೆಯೇ ವಿನಾ ಜಾತಿಯ ಬಗೆಗಲ್ಲ.
ಬ್ರಿಟಿಷ್ ಅಧಿಕಾರಿಗಳು ಮೊಟ್ಟಮೊದಲ ಬಾರಿಗೆ 1871ರಲ್ಲಿ ನಡೆಸಿದ ಜನಗಣತಿಯಲ್ಲಿ ಜಾತಿ ಯನ್ನು ನಮೂದಿಸಿದರು. ಜಾತಿಗಳ ವಿಷಯ ಮುನ್ನೆಲೆಗೆ ಬಂದಾಗ, ಹಿಂದೂ ಸಮಾಜದ ಜಾತಿಗಳ ಬಗ್ಗೆಯಷ್ಟೇ ಚರ್ಚೆಗಳಾಗುತ್ತವೆ. ಆದರೆ ಇಸ್ಲಾಂನಲ್ಲಿರುವ 80ಕ್ಕೂ ಅಧಿಕ ಜಾತಿಗಳ ಬಗ್ಗೆ, ಕ್ರಿಶ್ಚಿಯನ್ನರಲ್ಲಿರುವ ಕ್ಯಾಥೊಲಿಕ್ ಮತ್ತು ಪ್ರೊಟೆಸ್ಟೆಂಟ್‌ಗಳ ಬಗ್ಗೆ ಚರ್ಚೆಯಾಗುವುದಿಲ್ಲ.
ಅಮೆರಿಕದಂಥ ಮುಂದುವರಿದ ದೇಶದಲ್ಲಿ ಕೂಡ ಇಂದು, ಹಿಂದೂ ಧರ್ಮದ ಜಾತಿಗಳ ಬಗ್ಗೆ ಶಾಲೆಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ ಚರ್ಚೆಗಳು ಆರಂಭವಾಗಿವೆ. ಜಾತಿ ಆಧಾರಿತ ನೇಮಕಾತಿಯ ವಿಷಯಕ್ಕೆ ಸಂಬಂಧಿಸಿ, ಪ್ರತಿಷ್ಠಿತ CISCO ಸಂಸ್ಥೆಯ ಅಧಿಕಾರಿಗಳ ವಿರುದ್ಧ ಅಮೆರಿಕದಲ್ಲಿ ದಾವೆ ಹೂಡಲಾಗಿತ್ತು.
ಹಿಂದುಳಿದ ವರ್ಗಗಳಿಗೆ ಸಿಗಬೇಕಿರುವ ಮೀಸಲಾತಿ ವಿಚಾರದಲ್ಲಿ, ನೆಹರು ಕಾಲದಿಂದಲೂ ಅನ್ಯಾಯ ಮಾಡಿದ್ದು ಕಾಂಗ್ರೆಸ್ ಪಕ್ಷ. ಕಾಕಾ ಕಾಲೇಕರ್ ನೀಡಿದ್ದ ವರದಿಯನ್ನು ನೆಹರು ಅವರು ದಶಕಗಳ ಕಾಲ ಬೆಂಚಿನ ಕೆಳಗೆ ಹಾಕಿ ಕುಳಿತಿದ್ದರು. ನಂತರ ಅಧಿಕಾರಕ್ಕೆ ಬಂದ ಇಂದಿರಾ ಗಾಂಧಿ ಯವರು ಕೂಡ ಆ ವರದಿಯನ್ನು ಅನುಷ್ಠಾನ ಮಾಡಲಿಲ್ಲ.
ಹಿಂದುಳಿದ ವರ್ಗಗಳ ‘ಮಂಡಲ್’ ವರದಿಯನ್ನು 1990ರಲ್ಲಿ ರಾಜೀವ್ ಗಾಂಧಿಯವರು ಸಂಸತ್ತಿ ನಲ್ಲಿ ಬಹಿರಂಗವಾಗಿ ವಿರೋಧಿಸಿದ್ದರು. ಹೀಗೆ, ತಮ್ಮದೇ ಕುಟುಂಬಸ್ಥರು ಹಿಂದುಳಿದ ವರ್ಗಗಳಿಗೆ ಸತತವಾಗಿ ಅನ್ಯಾಯ ಮಾಡಿದ್ದರೂ, ರಾಹುಲರು ಮೋದಿಯವರ ವಿರುದ್ಧ ಇಲ್ಲಸಲ್ಲದ ಅಪಪ್ರಚಾರ ಮಾಡಿದ್ದರು. ನೆರೆಯ ರಾಷ್ಟ್ರ ಶ್ರೀಲಂಕಾದಲ್ಲಿ ಅರಾಜಕತೆ ಸೃಷ್ಟಿಯಾಗಿ ಇಡೀ ದೇಶ ದಿವಾಳಿಯಾಯಿತು. ಜನರು ತುತ್ತು ಅನ್ನಕ್ಕಾಗಿ ಪರದಾಡುವ ಪರಿಸ್ಥಿತಿ ಸೃಷ್ಟಿಯಾಯಿತು.
ಬಾಂಗ್ಲಾದೇಶದಲ್ಲಿ ದೊಡ್ಡ ಮಟ್ಟದ ಅರಾಜಕತೆ ಸೃಷ್ಟಿಯಾಗಿ, ಬಾಂಗ್ಲಾದ ರೂವಾರಿ ‘ಬಂಗ ಬಂಧು’ ಪ್ರತಿಮೆಯನ್ನು ನೆಲಸಮಗೊಳಿಸುವ ಮಟ್ಟಕ್ಕೆ ಅಲ್ಲಿನ ಜನರು ಪ್ರತಿಭಟನೆ ನಡೆಸಿದರು. ನೇಪಾಳದ ಸರಕಾರವನ್ನು ಟೀಕಿಸುತ್ತಾರೆ ಎಂಬ ಕಾರಣಕ್ಕೆ ಸಾಮಾಜಿಕ ಜಾಲತಾಣಗಳನ್ನು ಅಲ್ಲಿ ನಿಷೇಧಿಸಲಾಗಿತ್ತು.
ನೇಪಾಳದಲ್ಲಿನ ಅರಾಜಕತೆಗೆ ಸಾಮಾಜಿಕ ಜಾಲತಾಣ ನಿಷೇಧವೆಂಬುದು ನೆಪಮಾತ್ರ; ಮಿತಿ ಮೀರಿದ ಭ್ರಷ್ಟಾಚಾರದ ವಿರುದ್ಧ ನೇಪಾಳಿ ಯುವಜನರು ತಿರುಗಿಬಿದ್ದರಷ್ಟೇ. ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಸಾಮಾಜಿಕ ಜಾಲತಾಣಗಳಲ್ಲಿ ತೀರಾ ಕೆಟ್ಟದಾಗಿ ಟೀಕಿಸುವವರಿ ದ್ದಾರೆ. ಆದರೆ ಟೀಕೆಗಳನ್ನು ಸ್ವೀಕರಿಸಿ, ತಮ್ಮ ಪಾಡಿಗೆ ತಾವು ದೇಶದ ಹಿತಕ್ಕಾಗಿ ದುಡಿಯುತ್ತಿರು ವುದು ಮೋದಿಯವರ ನಿತ್ಯಕಾಯಕ.
ಮತ್ತೊಂದೆಡೆ, ಜವಾಬ್ದಾರಿಯುತ ವಿಪಕ್ಷ ನಾಯಕನು ಮಾಡಬೇಕಾದ ಕೆಲಸವನ್ನು ಮಾಡುವುದು ಬಿಟ್ಟು ಅಧಿಕಾರದ ಹಪಹಪಿಗೆ ಬಿದ್ದಿರುವ ರಾಹುಲ್ ಗಾಂಧಿಯವರು, ಭಾರತದಲ್ಲಿ ಅರಾಜಕತೆ ಯನ್ನು ಸೃಷ್ಟಿಸುವ ಸಲುವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಷಡ್ಯಂತ್ರಗಳನ್ನು ನಡೆಸುತ್ತಿರು ವವರ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ.
ಸುಳ್ಳು ಸುದ್ದಿಗಳ ನಿರೂಪಣೆಗಳನ್ನು ದೊಡ್ಡಮಟ್ಟದಲ್ಲಿ ಮಾರ್ಕೆಟಿಂಗ್ ಮಾಡಿ, ಸಮಾಜದಲ್ಲಿ ಅಶಾಂತಿ ಸೃಷ್ಟಿಸುವುದು ಈ ‘ಟೂಲ್‌ಕಿಟ್’ನ ಉದ್ದೇಶ. ಕರ್ನಾಟಕದಲ್ಲಿ 2023ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ, ಟೂಲ್ ಕಿಟ್ ಮೂಲಕ ‘40 ಪಸೆಂಟ್’ ನಿರೂಪಣೆಯನ್ನು ದೊಡ್ಡ ಮಟ್ಟದಲ್ಲಿ ಮಾರ್ಕೆಟಿಂಗ್ ಮಾಡಲಾಗಿತ್ತು.
ಕೇವಲ ಹಣಕ್ಕಾಗಿ, ದೇಶದ ಸಾರ್ವಭೌಮತ್ವದ ವಿಚಾರದಲ್ಲಿ ಯಾವ ಮಟ್ಟಕ್ಕೆ ಬೇಕಾದರೂ ತಲುಪಿ ರಾಜಿಮಾಡಿಕೊಳ್ಳುತ್ತದೆ ಈ ‘ಟೂಲ್‌ಕಿಟ್’ ಗ್ಯಾಂಗ್. ಈ ಗ್ಯಾಂಗಿಗೆ ದೇಶಾಭಿಮಾನ ಎಂಬುದಿಲ್ಲ. ಈ ಗ್ಯಾಂಗ್‌ನ ಒಡನಾಡಿಗಳು ತಾವು ಅಂದುಕೊಂಡಿದ್ದನ್ನು ಸಾಧಿಸಲು ಸಮಾಜವನ್ನು ಒಡೆಯುವ ನಿರೂಪಣೆಗಳನ್ನು ಸೃಷ್ಟಿಸುತ್ತಾರೆ, ಸಮರ್ಥವಾಗಿ ಮಾರ್ಕೆಟಿಂಗ್ ಮಾಡುತ್ತಾರೆ. ಆರ್ಥಿಕ ದಿವಾಳಿ ತನದ ನಿರೂಪಣೆಗಳನ್ನೂ ಹೀಗೆಯೇ ಹುಟ್ಟುಹಾಕಿ ಹಬ್ಬಿಸುತ್ತಾರೆ.
ಯುವಜನರ ನಡುವೆ ಸುಳ್ಳುಸುದ್ದಿಗಳ ಬೀಜವನ್ನು ಬಿತ್ತಿ, ಸಮಾಜದಲ್ಲಿ ಬೆಂಕಿ ಹೊತ್ತಿಸಲು ಮುಂದಾಗುತ್ತಾರೆ. ಈಗ ಹೊಸ ಕಸರತ್ತು ಎಂಬಂತೆ, ಬಾಲಕಬುದ್ಧಿಯನ್ನು ಬಳಸಿಕೊಂಡು ಭಾರತ ದಲ್ಲಿಯೂ ‘ವೋಟ್ ಚೋರಿ’ ಎಂಬ ಸುಳ್ಳು ನಿರೂಪಣೆಗಳನ್ನು ಮತ್ತೊಮ್ಮೆ ಹಬ್ಬಿಸಿ, ಸಮಾಜದಲ್ಲಿ ಬೆಂಕಿಯನ್ನು ಹೊತ್ತಿಸುವ ಪ್ರಯತ್ನಕ್ಕೆ ಕೈಹಾಕಿದ್ದಾರೆ...