ವಿಶ್ವವಿಶೇಷ
ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ
ವಿಶ್ವಸಂಸ್ಥೆಯು ಇಡೀ ವಿಶ್ವದ ಮಾನವ ಜನಾಂಗಕ್ಕೆ ಶಾಂತಿ ನೀಡುವ ಮಹತ್ವಾಕಾಂಕ್ಷೆಯ ಸಂಸ್ಥೆಯಾಗುವುದೆಂಬ ಎಲ್ಲಾ ರಾಷ್ಟ್ರಗಳ ನಿರೀಕ್ಷಿತ ಕನಸು ನನಸಾಗದಿರುವುದು ದುರಂತ. ಪ್ರತಿಯೊಂದು ದೇಶದ ಹಿತ್ತಾಸಕ್ತಿಯನ್ನು ಕಾಪಾಡುವ ವಿಶ್ವ ನಿಯಂತ್ರಕ ಸಂಸ್ಥೆಯಾಗಿ ಮಾನವ ಹಕ್ಕುಗಳ ರಕ್ಷಣೆ, ಗಡಿ ತಗಾದೆಗಳಿಗೆ ಶಾಶ್ವತ ಪರಿಹಾರಗಳನ್ನು ನೀಡಬೇಕಾಗಿರುವ ಪರಮೋಚ್ಚ ಸಂಸ್ಥೆ.
ವಿಶ್ವಸಂಸ್ಥೆ ಪ್ರಬಲ ಸಂಸ್ಥೆಯಾಗಿ ವಿಶ್ವದೆಲ್ಲೆಡೆ ಅದರ ನಿರ್ಧಾರವೇ ಅಂತಿಮವಾಗಬೇಕು. ಆದರೆ ಕೆಲವು ಬಲಿಷ್ಠ ರಾಷ್ಟಗಳ ಕೃಪಾಕಟಾಕ್ಷಕ್ಕೆ ಒಳಗಾಗಿ ಅದರ ಸ್ವಯಂ ನಿರ್ಧಾರ ಕ್ಕಿಂತಲೂ ಪ್ರಬಲ ರಾಷ್ಟಗಳ ಕೈವಾಡಕ್ಕೆ ಮಣಿದು ತನ್ನ ಗೌರವವನ್ನು ಕಳೆದುಕೊಂಡು ವಿ-ಲವಾಗಿ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ.
ಸೆಕ್ಯುರಿಟಿ ಕೌನ್ಸಿಲ್ ವಿವಿಧ ರಾಷ್ಟ್ರಗಳಿಗೆ ರಕ್ಷಣೆ ಕೊಡಲು ವಿಫಲವಾಗಿ ಅವಕೃಪೆಗೆ ಕಾರಣ ವಾಗಿ ನಂಬಿಕೆಯನ್ನು ಕಳೆದುಕೊಂಡು, ತನ್ನ ಅವೈಜ್ಞಾನಿಕ ವಿಟೋ ಪವರ್‌ನಿಂದ ಅಸಮರ್ಥ ಸಂಸ್ಥೆಯಾಗಿ ವಿಶ್ವದೆದುರು ನಗೆಪಾಟಲಿಗೀಡಾಗಿದೆ.
ಪ್ರಸಕ್ತ ಸನ್ನಿವೇಶದಲ್ಲಿ ನಡೆಯುತ್ತಿರುವ ಯುದ್ಧಗಳು ಶಾಶ್ವತ ಪರಿಹಾರ ಕಾಣದೆ ಮುಂದು ವರಿದಿರುವಾಗ ವಿಶ್ವಸಂಸ್ಥೆಯ ಪಾತ್ರದ ಕುರಿತು ಯಾರೂ ಗಂಭೀರವಾಗಿ ಚಿಂತಿಸಿದಂತೆ ಕಾಣುತ್ತಿಲ್ಲ. ಜಾಗತಿಕ ಶಾಂತಿ ಮತ್ತು ಭದ್ರತೆಯಂತಹ ಉದ್ದೇಶಕ್ಕಾಗಿಯೇ ಜನ್ಮ ತಳೆದ ವಿಶ್ವಸಂಸ್ಥೆಗೆ ಮಹತ್ವದ ಹೊಣೆಗಾರಿಕೆಯಿದೆ.
ಇದನ್ನೂ ಓದಿ: Cherkady Sachhidanand Shetty Column: ರುಪಾಯಿ ಅಪಮೌಲ್ಯ ಮತ್ತು ಜಾಗತಿಕ ನೀತಿಗಳು
ಅದು ಯುದ್ಧ ಪೀಡಿತ ರಾಷ್ಟ್ರಗಳ ನಡುವೆ ಸಂಧಾನ ಮಾತುಕತೆ ಏರ್ಪಡಿಸುವ ಮೂಲಕ ಶಾಂತಿ ಸ್ಥಾಪನೆ ಅದರ ಜವಾಬ್ದಾರಿ, ಈ ನಿಟ್ಟಿನಲ್ಲಿ ವಿಶ್ವಸಂಸ್ಥೆ ವಿಫಲವಾಗಿ ಈಗಾಗಲೇ ಸಂಪೂರ್ಣ ವಿಶ್ವಾಸವನ್ನು ಕಳೆದುಕೊಂಡಾಗಿದೆ. ಬಹುಶಃ ವಿಶ್ವಸಂಸ್ಥೆಯ ಮಾತಿಗೆ ಇಂದು ಮನ್ನಣೆಯೇ ಸಿಗುತ್ತಿಲ್ಲ.
ಬಲಿಷ್ಠ ರಾಷ್ಟ್ರಗಳದ್ದೇ ದರ್ಬಾರು. ಇದೀಗ ವಿಶ್ವಸಂಸ್ಥೆ ಬಲಿಷ್ಠ ದೇಶಗಳಿಗೊಂದು ನೀತಿ ಬಡ ರಾಷ್ಟ್ರಗಳಿಗೆ ಮತ್ತೊಂದು ನೀತಿ ಅನುಸರಿಸುವಂತಹ ಟೀಕೆಗೂ ಒಳಗಾಗಿದೆ. ವಿಶ್ವ ಸಂಸ್ಥೆ ಕೇವಲ ಬಲಶಾಲಿ ರಾಷ್ಟ್ರಗಳ ತಾಳಕ್ಕೆ ನರ್ತಿಸಿದರೆ ಅದರ ಅಸ್ತಿತ್ವವೇ ಪರಾಭವ ಗೊಂಡಾತಾಗುತ್ತದೆ. ಈಗ ಆಗಿರುವುದು ಅದೇ.
ಸವಾರಿ ಮಾಡುತ್ತಿರುವುದು ಪ್ರಬಲ ರಾಷ್ಟ್ರಗಳೇ ಆಗಿವೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕೈಗೊಳ್ಳುವ ನಿರ್ಣಯಗಳು ವಿಫಲವಾಗಿವೆ. ಇದರಿಂದ ರಾಷ್ಟ್ರಗಳ ನಡುವಿನ ಸಂಘರ್ಷಗಳು, ಮಿಲಿಟರಿ ಆಕ್ರಮಣಗಳು ನಡೆಯುವಾಗ ವಿಶ್ವಸಂಸ್ಥೆ ಮೂಕ ಪ್ರೇಕ್ಷಕನಾಗಿ ನಿಲ್ಲುವಂತಾಗಿದೆ. ಅದರಲ್ಲೂ ಜಗತ್ತಿನ ಬಲಿಷ್ಠ ರಾಷ್ಟ್ರಗಳ ಹಸ್ತಕ್ಷೇಪವೇನಾದರೂ ಇದ್ದಲ್ಲಿ ವಿಶ್ವಸಂಸ್ಥೆ ಸಂಪೂರ್ಣ ಅಸಹಾಯಕ ಸ್ಥಿತಿಗೆ ತಳ್ಳಲ್ಪಡುತ್ತದೆ.
ಮೊದಲನೆಯ ಮಹಾಯುದ್ಧ ಕೊನೆಗೊಂಡಾಗ ಉದಯವಾಗಿದ್ದ ಲೀಗ್ ಆಫ್ ನೇಶನ್ ಯುದ್ಧಗಳನ್ನು ನಿಲ್ಲಿಸುವಲ್ಲಿ ವಿಫಲವಾಗಿ ದುರ್ಬಲವಾದ ಪರಿಣಾಮ 1945ರಲ್ಲಿ ಎರಡ ನೆಯ ಮಹಾಯುದ್ಧದ ಬಳಿಕ ಶಾಂತಿ ಸ್ಥಾಪನೆಯ ಸಲುವಾಗಿ ವಿಶ್ವಸಂಸ್ಥೆ ಪ್ರಾರಂಭ ವಾಯಿತು.
ಯುದ್ಧ ಮತ್ತು ಅಂತಾರಾಷ್ಟ್ರೀಯ ಬಿಕ್ಕಟ್ಟನ್ನು ನಿವಾರಿಸುವುದು, ರಾಷ್ಟ್ರಗಳೊಡದೆ ಬಾಂಧವ್ಯ ವೃದ್ಧಿ ಮಾಡುವುದು, ಸಾಮಾಜಿಕ ಉನ್ನತಿಗೆ ಶ್ರಮಿಸುವುದು ಇದರ ಪ್ರಮುಖ ಉದ್ದೇಶವಾದರೂ ಇತ್ತೀಚಿನ ಕೆಲವು ವರ್ಷಗಳ ಅದರಲ್ಲೂ ಪ್ರಸಕ್ತ ನಡೆಯುತ್ತಿರುವ ರಷ್ಯಾ- ಉಕ್ರೇನ್ ಮತ್ತು ಅಮೇರಿಕ- ಇಸ್ರೇಲ್- ಇರಾನ್‌ಗಳ ವಿದ್ಯಮಾನ ಮತ್ತು ಯುದ್ಧದ ರೀತಿ ನೀತಿಯನ್ನು ಅವಲೋಕಿಸುವಾಗ ವಿಶ್ವಸಂಸ್ಥೆ ಮತ್ತು ಅದರ ಅಂಗ ಸಂಸ್ಥೆಗಳು ಸಂಪೂರ್ಣ ವೈಫಲ್ಯವನ್ನು ಕಾಣುತ್ತಿರುವುದರಿಂದ ವಿಶ್ವದ ರಾಷ್ಟ್ರಗಳ ನಡುವೆ ಆತಂಕ ಮತ್ತು ಅಶಾಂತಿ ಹಬ್ಬಿದೆ.
ಮಾತ್ರವಲ್ಲ ಜಗತ್ತಿನ ಅನೇಕ ರಾಷ್ಟ್ರಗಳು ಅಪಾರ ಆರ್ಥಿಕ ಹಾನಿಗೊಳಗಾಗಿ ಜನ ಜೀವನದ ಮೇಲೆಯೇ ದುಷ್ಪರಿಣಾಮ ಬೀರಿದೆ. ಅಮೆರಿಕ- ಇಸ್ರೇಲ್ ಹಾಗೂ ಇರಾನ್ ಮೇಲಿನ ಯುದ್ಧದಲ್ಲಿ ಅಮೆರಿಕ, ಇಸ್ರೇಲ್ ಗೆದ್ದಿಲ್ಲ; ಅಥವಾ ಇರಾನ್ ಸೋತಿಲ್ಲ.
ರಷ್ಯಾ- ಉಕ್ರೇನ್ ಯುದ್ಧದಲ್ಲೂ ರಷ್ಯಾ ಗೆದ್ದಿಲ್ಲ, ಉಕ್ರೇನ್ ಸೋತಿಲ್ಲ. ಆದರೆ ಸಂಭವಿಸಿದ ಅಪಾರ ಆಸ್ತಿ ಪಾಸ್ತಿ, ಸಾವು, ನೋವು ಮತ್ತು ಆರ್ಥಿಕ ಸಂಕಷ್ಟಗಳಿಗೆ ಕೊನೆಯೇ ಇಲ್ಲ. ಇದು ಎರಡು ಅಥವಾ ಮೂರು ದೇಶಗಳ ನಡುವಿನ ಕದನ ಮತ್ತು ಅವುಗಳಿಗೆ ಮಾತ್ರ ಸೀಮಿತ ವಾಗಿ ಉಳಿಯುವುದಿಲ್ಲ, ಇದು ಜಾಗತಿಕವಾಗಿ ಕೆಟ್ಟ ಪರಿಣಾಮವನ್ನುಂಟು ಮಾಡುತ್ತದೆ. ಇದರಿಂದಾಗಿ ವಿಶ್ವದೆಲ್ಲೆಡೆ ಆರ್ಥಿಕ ಬಿಕ್ಕಟ್ಟು, ಅಶಾಂತಿ ಮತ್ತು ಅವ್ಯವಸ್ಥೆ ನೆಲೆಸಿದೆ ಮತ್ತು ಮುಂದುವರಿಯುತ್ತಿದೆ.
ಎರಡನೇ ಜಾಗತಿಕ ಮಹಾಯುದ್ಧದ ಘೋರ ಪರಿಣಾಮಗಳ ಅರಿವಿನ ಬೆಳಕಲ್ಲಿ ಅಸ್ತಿತ್ವಕ್ಕೆ ಬಂದ ವಿಶ್ವಸಂಸ್ಥೆ ಜಾಗತಿಕ ಶಾಂತಿ ಸಾಮರಸ್ಯವನ್ನು ಖಾತರಿ ಪಡಿಸುವಂತಹ ಬಲಿಷ್ಠ ಸಂಸ್ಥೆಯಾಗಿ ಬೆಳೆಯಬೇಕಾಗಿತ್ತು. 1933 ಸದಸ್ಯ ರಾಷ್ಟ್ರಗಳನ್ನು ಹೊಂದಿದ್ದು 80 ವರ್ಷ ಗಳನ್ನು ಪೂರೈಸಿರುವ ವಿಶ್ವಸಂಸ್ಥೆಗೆ ಈ ದುರ್ಗತಿ ಬಂದದೊದಗಬಹುದು ಎಂದು ಅದರ ಸ್ಥಾಪಕರಾರೂ ಊಹಿಸಿರಲಿಕ್ಕಿಲ್ಲ.
ಕಳೆದ ಕೆಲವು ವರ್ಷಗಳಿಂದ ರಷ್ಯಾ ಮತ್ತು ಉಕ್ರೇನ್ ಯುದ್ಧ ನಡೆಯುತ್ತಿದೆ. ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಸಮರವೂ ನಿರಂತರವಾಗಿ ನಡೆಯುತ್ತಿದ್ದು ಈ ಯುದ್ಧದ ಕರಾಳತೆ ಯನ್ನು ಪ್ರಪಂಚ ಮರೆಯಲಾಗದು. ಅಮೆರಿಕದ ನಿರಂತರ ದಾಳಿಯಿಂದ ಇರಾನ್‌ನ ನೂರಾರು ಮುಗ್ಧ ಮಕ್ಕಳು ಸೇರಿದಂತೆ ಹಲವಾರು ಮಂದಿ ನಾಗರಿಕರು ಬಲಿಯಾಗಿದ್ದಾರೆ. ಯುದ್ಧ ನಿರತ ದೇಶಗಳ ಹಲವಾರು ಸೈನಿಕರು ಪ್ರಾಣತೆತ್ತಿದ್ದಾರೆ.
ಒಟ್ಟಿನಲ್ಲಿ ಸಹಸ್ರಾರು ಮಂದಿ ಪ್ರಾಣ ಕಳೆದುಕೊಂಡರು. ಲಕ್ಷಾಂತರ ಜನರು ನಿರ್ಗತಿಕ ರಾದರು. ಅಮೆರಿಕ ಹಾಗೂ ಇಸ್ರೇಲ್ ಜಂಟಿಯಾಗಿ ಇರಾನ್ ವಿರುದ್ಧ ಯುದ್ಧ ಸಾರಿ ಎರಡೂವರೆ ತಿಂಗಳುಗಳು ಉರುಳಿದವು. ಇದು ಪಶ್ಚಿಮ ಏಷ್ಯಾದ ರಾಷ್ಟ್ರಗಳ ನಿದ್ದೆ ಕೆಡಿಸಿದ್ದು ಮಾತ್ರವಲ್ಲದೆ ಜಾಗತಿಕವಾಗಿ ಆರ್ಥಿಕ ತಲ್ಲಣವನ್ನು ಸೃಷ್ಟಿಸಿದೆ. ಈ ಸಂದರ್ಭ ಗಳಲ್ಲಿ ವಿಶ್ವಸಂಸ್ಥೆಯ ಸಕಾರಾತ್ಮಕ ಪಾತ್ರದ ಸುಳಿವಿಲ್ಲದಂತಿದೆ.
ವಿಶ್ವಸಂಸ್ಥೆ ಕೇವಲ ಮಾತುಕತೆಗೆ ಸಲಹೆಗೆ ಶಾಂತಿಗಾಗಿ ಹೇಳಿಕೆ ನೀಡುವಂತಹ, ಹೇಳಿಕೆ ಗಳಿಗೆ ಸೀಮಿತವಾದಂತಿದೆ. ಜಗತ್ತಿನ ಅನೇಕ ರಾಷ್ಟ್ರಗಳ ನಡುವೆ ಇತ್ತೀಚಿಗಿನ ದಿನಗಳಲ್ಲಿ ನಡೆಯುತ್ತಿರುವ ಅಂತರ್‌ಯುದ್ಧ, ಸಂಘರ್ಷಗಳ ಸಂದರ್ಭಗಳಲ್ಲಿ ವಿಶ್ವಸಂಸ್ಥೆ ನಿಜಕ್ಕೂ ಏನು ಮಾಡಿದೆ ಎಂಬ ಪ್ರಶ್ನೆ ಹಲವರಲ್ಲಿದೆ.
ಕೆಲವೊಂದು ಸಾಂದರ್ಭಿಕ ಹೇಳಿಕೆಗಳನ್ನು ಬಿಟ್ಟರೆ ವಿಶ್ವಸಂಸ್ಥೆಯಿಂದ ಯಾವುದೇ ಪರಿಣಾಮಕಾರಿ ಕ್ರಮಗಳು ಜರಗಿರುವ ಮಾಹಿತಿಗಳು ಮೇಲ್ನೋಟಕ್ಕೆ ಕಂಡು ಬಂದಂತಿಲ್ಲ. ಅಷ್ಟಕ್ಕೂ ಕೆಲವರಿಗೆ ವಿಶ್ವಸಂಸ್ಥೆಗೆ ಇಂತಹ ಸಂದರ್ಭಗಳಲ್ಲಿ ಹೊಣೆಗಾರಿಕೆಯಿದೆ ಎಂಬುದೇ ಮರೆತು ಹೋಗಿದ್ದರೆ ಆಶ್ಚರ್ಯವಿಲ್ಲ.
ವಿಶ್ವಸಂಸ್ಥೆಯ ಹಿನ್ನಡೆಗೆ ಕಾರಣಗಳು ಅದರ ಒಡಲಲ್ಲಿಯೇ ಇದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ನಿರ್ಣಾಯಕ ಸ್ಥಾನಮಾನವನ್ನು ಹೊಂದಿರುವ ಅಂಗ ಸಂಸ್ಥೆ. ಅಲ್ಲಿ ಜಗತ್ತಿನ ಬಲಿಷ್ಠ ರಾಷ್ಟ್ರಗಳದ್ದೇ ಅಧಿಪತ್ಯ. ಅಮೆರಿಕ, ರಷ್ಯಾ, ಚೀನಾ, ಬ್ರಿಟನ್, ಫ್ರಾನ್ಸ್ ತಮ್ಮ ವಿಟೋ ಅಧಿಕಾರದಿಂದ ತಮ್ಮ ಸ್ವಹಿತಾಸಕ್ತಿಯನ್ನು ಸಾಧಿಸುವುದರೊಂದಿಗೆ ತಮ್ಮ ತಮ್ಮ ಮಿತ್ರ ರಾಷ್ಟ್ರಗಳ ಹಿತವನ್ನೂ ಕಾಪಾಡಿಕೊಳ್ಳುತ್ತವೆ.
ಯುದ್ಧ ಮತ್ತು ಶಾಂತಿ ಅಂತಾರಾಷ್ಟ್ರೀಯ ಸಂಬಂಧದ ಪ್ರಮುಖ ವಿಷಯ. ಇತ್ಯರ್ಥಕ್ಕೆ ಯುದ್ಧ ಬಳಸದಂತೆ ಮಾಡುವುದರಲ್ಲಿ ವಿಶ್ವಸಂಸ್ಥೆಯು ಪರಿಣಾಮಕಾರಿಯಾದ ಪಾತ್ರ ವನ್ನು ವಹಿಸಬಹುದು. ವಿಶ್ವರಕ್ಷಣೆ ವಿಶ್ವಸಂಸ್ಥೆಯ ಉದ್ದೇಶವಾಗಿರಬೇಕು. ಇಂದಿನ ಆಧುನಿಕ ಯುದ್ಧೋಪಕರಣಗಳು ಇಡೀ ಮಾನವ ಸಮುದಾಯಗಳನ್ನು ಕ್ಷಣಾರ್ಧದಲ್ಲಿ ನಾಶಮಾಡಬಲ್ಲಂತಹ ವಿನಾಶಕಾರಕ ಸ್ವರೂಪದ್ದಾಗಿದೆ.
ಪ್ರಸಕ್ತ ಯುದ್ಧದ ವಿಚಾರದಲ್ಲಿ ಯಾರದ್ದೋ ಯುದ್ಧ ದಾಹದಿಂದ ಇಡೀ ವಿಶ್ವ ಏಕಕಾಲ ದಲ್ಲಿ ಸಂಕಷ್ಟ ಅನುಭವಿಸುತ್ತಿದೆ. ವಿಶ್ವಸಂಸ್ಥೆಗೆ ಲೋಕಕಲ್ಯಾಣಕ್ಕೆ ಮುತ್ಸದ್ದಿಯಾದ ನಾಯಕರ ಆವಶ್ಯಕತೆ ಇದೆ. ವಿಶ್ವದ ಒಟ್ಟು ಜನಸಂಖ್ಯೆ ಸರಿಸುಮಾರು 8.3 ಬಿಲಿಯನ್ (830 ಕೋಟಿ) ಇಡೀ ವಿಶ್ವದ ಶೇ.6ರಷ್ಟು; ಸರಿ ಸುಮಾರು 143 ಕೋಟಿ ಜನಸಂಖ್ಯೆ ಹೊಂದಿರುವ ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತಕ್ಕೆ ಭದ್ರತಾ ಮಂಡಳಿಯಲ್ಲಿ ಸ್ಥಾನವಿಲ್ಲ.
ಪ್ರಸಕ್ತ ಐದು ರಾಷ್ಟ್ರಗಳಿಗಿರುವ ವಿಟೋ ಅಧಿಕಾರವು ಜಾಗತಿಕ ಶಾಂತಿ ಮತ್ತು ಸೌಹಾರ್ದ ಕ್ಕೆ ಅಡ್ಡಿ ಉಂಟು ಮಾಡಿದ್ದೇ ಹೆಚ್ಚು. ಹಾಗಾಗಿ ವಿಟೋ ಅಧಿಕಾರವನ್ನು ರದ್ದು ಮಾಡಿ ಜಗತ್ತಿನ ಎಲ್ಲಾ ಸದಸ್ಯ ರಾಷ್ಟ್ರಗಳಿಗೆ ಅಲ್ಲಿ ಸಮಾನ ಅವಕಾಶ ಕಲ್ಪಿಸುವುದು ಅಗತ್ಯ. ಜಾಗತಿಕ ಶಾಂತಿ ಮತ್ತು ಸಾಮರಸ್ಯವನ್ನು ಕಾಯ್ದುಕೊಳ್ಳುವುದಕ್ಕಾಗಿ ವಿಶ್ವಸಂಸ್ಥೆ ಯಿಂದ ಪರಿಣಾಮಕಾರಿ ಕ್ರಮಗಳು ಬೇಕು.
ವಿಶ್ವಶಾಂತಿಗೆ ಭಂಗ ತರುವ ಯಾವುದೇ ಸಮಸ್ಯೆಯಿರಲಿ ಅದನ್ನು ಸೆಕ್ರೆಟರಿ ಜನರಲ್ ಭದ್ರತಾ ಸಮಿತಿಗೆ ಸ್ಪಷ್ಟಪಡಿಸಿ ಹಲವು ರಾಷ್ಟ್ರಗಳಿಂದ ಆಯ್ಕೆಯಾದ ಅಧಿಕಾರಿಗಳ ಒಮ್ಮತವನ್ನು ಸ್ಥಾಪಿಸುವ ಜವಾಬ್ದಾರಿಯನ್ನು ವಹಿಸುವಲ್ಲಿ ಮಂಚೂಣಿಯಲ್ಲಿರಬೇಕು.
ಭಾರತವು ಯಾವತ್ತೂ ಶಾಂತಿಯನ್ನು ಬಯಸುತ್ತದೆ. ನೆರೆಹೊರೆಯ ರಾಷ್ಟ್ರಗಳ ನಡುವೆ ನಿಕಟ ಸಹಕಾರ ಮತ್ತು ಸ್ನೇಹದಿಂದ ಸದಾ ಕೆಲಸ ಮಾಡಿದೆ. ವಿವಿಧತೆಯಲ್ಲಿ ಏಕತೆಯನ್ನು ಕಂಡ ರಾಷ್ಟ್ರ ಭಾರತ. ಯಾವತ್ತೂ ಸತ್ಯ ಅಹಿಂಸೆ ಶಾಂತಿ ಸೌಹಾರ್ದಗಳು ಸಾರ್ವಕಾಲಿಕ ನಿಯಮ ಎಂಬುದನ್ನು ತನ್ನ ಸ್ವಾತಂತ್ರ್ಯ ಚಳುವಳಿಯ ಮೂಲಕವೇ ಜಗತ್ತಿಗೆ ತೋರಿಸಿ ಕೊಟ್ಟಿದೆ.
ಯಾವ ರಾಷ್ಟ್ರದ ಮೇಲೂ ದಂಡೆತ್ತಿ ಹೋಗಲಿಲ್ಲ. ಯಾವ ದೇಶದ ಒಂದಿಂಚೂ ಜಾಗ ವನ್ನು ಕಬಳಿಸಲಿಲ್ಲ. ಅದೇ ಸಂದರ್ಭದಲ್ಲಿ ತನ್ನ ನ್ಯಾಯಯುತವಾದ ಒಂದಿಂಚೂ ಜಾಗ ವನ್ನು ಬೇರೆಯವರಿಗೆ ಮುಟ್ಟಲು ಬಿಡೆವು ಎಂಬ ಮಂತ್ರಕ್ಕೆ ಬದ್ಧವಾಗಿರುವುದು ಸಮಂಜಸ ವಲ್ಲವೇ? ಪ್ರಸಕ್ತ ಯುದ್ಧವು ಭಾರತದ ಆರ್ಥಿಕತೆಯ ಮೇಲೆ ಆಘಾತಕಾರಿ ಪರಿಣಾಮ ವನ್ನುಂಟು ಮಾಡಿದೆ.
ನಮ್ಮದಲ್ಲದ ತಪ್ಪಿಗೆ ನಾವು ಬೆಲೆ ತೆರಬೇಕಾದ ಪರಸ್ಥಿತಿ ದುರದೃಷ್ಟಕರ. ಇದರಿಂದಾಗಿ ದೇಶ ಆರ್ಥಿಕ, ಸಾಮಾಜಿಕ ಮತ್ತು ಎಲ್ಲಾ ಕ್ಷೇತ್ರಗಳಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಂಕಷ್ಟ ವನ್ನು ಎದುರಿಸುತ್ತಿದೆ.