ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kiran Upadhyay Column: ಅತಿ ಆಸೆಯ ಭಾವ, ಒಲೆ ಮೇಲೆ ಜೀವ...

‘ಮಾಂಗಲ್ಯ ಭಾಗ್ಯ’ ಚಿತ್ರದ, ದಿ.ಎಸ್.ಪಿ. ಬಾಲಸುಬ್ರಹ್ಮಣ್ಯಮ್ ಹಾಡಿದ, ವಿಜಯನಾರಸಿಂಹ ಸಾಹಿತ್ಯ ರಚಿಸಿದ, ರಾಜನ್-ನಾಗೇಂದ್ರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ಈ ಹಾಡು ಇಂದಿಗೂ ಜನಪ್ರಿಯ. ಅಂದು ಹಾಡಿನ ಸಾಹಿತ್ಯವನ್ನು ಸ್ವಲ್ಪ ತಿರುಚಿ, ಹಾಡಿನ ಆರಂಭದಲ್ಲಿ ‘ಅತಿ’ ಪದ ಸೇರಿಸಿ, ‘ಒಲವಿನ’ ಪದದ ಬದಲು ‘ಒಲೆ ಮೇಲೆ’ ಎಂದು ಜೋಡಿಸಿ, ತಮಾಷೆಗಾಗಿ ಹಾಡುತ್ತಿದ್ದರು.

ವಿದೇಶವಾಸಿ

ವಿಪರ್ಯಾಸ ಎಂದರೆ ಮನುಷ್ಯ ತನ್ನ ಆಸೆಯನ್ನು ಪೂರೈಸಿಕೊಂಡರೆ ತಾನು ಸಂತುಷ್ಟ ನಾಗಿರುತ್ತೇನೆ ಎಂಬ ಭ್ರಮೆಯಲ್ಲಿಯೇ ಇರುತ್ತಾನೆ. ಅದು ಸತ್ಯಕ್ಕೆ ಬಹಳ ದೂರ. ಮನುಷ್ಯನ ಮನಸ್ಸು ಬಹಳ ಚಂಚಲ. ಅದು ನಿಂತಲ್ಲಿ ನಿಲ್ಲುವುದೇ ಇಲ್ಲ. ಎಲ್ಲಾ ಕಡೆ ಸುತ್ತಾಡಿ, ಬೇಕಾದ, ಬೇಡಾದ ಕಡೆಗೆಲ್ಲ ತಿರುಗಾಡುತ್ತಿರುತ್ತದೆ. ಇತ್ತಲಿಂದ ಅತ್ತ, ಅತ್ತಲಿಂದ ಇತ್ತ ಅಲೆದಾಡುತ್ತಿರುತ್ತದೆ.

ನಮ್ಮ ಬಾಲ್ಯದ ದಿನಗಳಲ್ಲಿ ಹಾಡಿಗೆ ಹಾಡು ಕಟ್ಟುವುದು ಸಾಮಾನ್ಯವಾಗಿತ್ತು. ಯಾವುದೇ ಒಂದು ಜನಪ್ರಿಯ ಹಾಡು ಬಂತೆಂದರೆ ಸಾಕು, ಅ ಹಾಡಿನ ಕೆಲವು ಪದಗಳನ್ನು ಬದಲಾಯಿಸಿ, ಮೂಲ ಹಾಡನ್ನು ತಿರುಚಿ, ಬೇರೆಯ ಅರ್ಥ ಬರುವ ರೀತಿಯಲ್ಲಿ ಹಾಡು ಕಟ್ಟುವುದು. ಇದು ಮನರಂಜನೆಗೆ ಮಾತ್ರವೇ ವಿನಾ, ಅದರಲ್ಲಿ ಮೂಲ ರಚನೆಕಾರರಿಗೆ ಅವಮಾನ ಮಾಡಬೇಕು ಎಂದಾಗಲೀ ಅಥವಾ ಇನ್ಯಾವುದೇ ಕಾರಣವಾಗಲೀ ಇರುತ್ತಿರಲಿಲ್ಲ.

ಅದು ಇಂದಿಗೂ ಇದೆ. ಹಾಸ್ಯ ಸಮ್ಮೇಳನಗಳಲ್ಲಿ, ಸ್ಟ್ಯಾಂಡ್ ಅಪ್ ಕಾಮಿಡಿಗಳಲ್ಲಿ ಅಥವಾ ಕೆಲವು ಮಿತ್ರರು ಸೇರಿದಾಗ ಇಂಥ ಹಾಡುಗಳು ಹಾದುಹೋಗುತ್ತವೆ. ‘ಆಸೆಯ ಭಾವ, ಒಲವಿನ ಜೀವ, ಒಂದಾಗಿ ಬಂದಿದೆ...’ ಎಪ್ಪತ್ತರ ದಶಕದ ಒಂದು ಜನಪ್ರಿಯ ಹಾಡು.

‘ಮಾಂಗಲ್ಯ ಭಾಗ್ಯ’ ಚಿತ್ರದ, ದಿ.ಎಸ್.ಪಿ. ಬಾಲಸುಬ್ರಹ್ಮಣ್ಯಮ್ ಹಾಡಿದ, ವಿಜಯನಾರಸಿಂಹ ಸಾಹಿತ್ಯ ರಚಿಸಿದ, ರಾಜನ್-ನಾಗೇಂದ್ರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ಈ ಹಾಡು ಇಂದಿಗೂ ಜನಪ್ರಿಯ. ಅಂದು ಹಾಡಿನ ಸಾಹಿತ್ಯವನ್ನು ಸ್ವಲ್ಪ ತಿರುಚಿ, ಹಾಡಿನ ಆರಂಭದಲ್ಲಿ ‘ಅತಿ’ ಪದ ಸೇರಿಸಿ, ‘ಒಲವಿನ’ ಪದದ ಬದಲು ‘ಒಲೆ ಮೇಲೆ’ ಎಂದು ಜೋಡಿಸಿ, ತಮಾಷೆಗಾಗಿ ಹಾಡು ತ್ತಿದ್ದರು.

ಆದರೆ, ಸ್ವಲ್ಪ ಗಾಢವಾಗಿ ಆಲೋಚಿಸಿದರೆ, ಅದು ತಮಾಷೆಗೆ ಮಾಡಿzದರೂ, ಅದರಲ್ಲೂ ತತ್ತ್ವವಿದೆ ಎಂದು ಕಾಲಾನಂತರ ತಿಳಿಯಿತು.ನಾವೆಲ್ಲ ‘ಅತಿ ಆಸೆ ಗತಿ ಕೆಡಿಸಿತು’ ಎಂಬ ಗಾದೆ ಮಾತು ಕೇಳಿದ್ದೇವೆ. ’ಆಸೆಯೇ ದುಃಖಕ್ಕೆ ಮೂಲಕಾರಣ’ ಎಂದು ಬುದ್ಧ ಹೇಳಿದ್ದನ್ನೂ ತಿಳಿದಿದ್ದೇವೆ. ಅತಿ ಆಸೆಯಿಂದ ಆಗುವ ಪರಿಣಾಮಗಳ ಕುರಿತು ಸಾಕಷ್ಟು ಕಥೆ ಕೇಳಿದ್ದೇವೆ.

ಇದನ್ನೂ ಓದಿ: Kiran Upadhyay Column: ಭಾವಿ ಹೀರೋಗಳಿಗೆ ಅಭಿನಂದನೆಗಳು...!

ರೈತನೊಬ್ಬನು, ಪ್ರತಿನಿತ್ಯ ಚಿನ್ನದ ಮೊಟ್ಟೆ ಇಡುತ್ತಿದ್ದ ತನ್ನ ಕೋಳಿಯ ಹೊಟ್ಟೆ ಕೊಯ್ದ ಕಥೆ ಯಾಗಲಿ, ತಾನು ಮುಟ್ಟಿದ್ದೆಲ್ಲ ಚಿನ್ನವಾಗಬೇಕು ಎಂದು ವರ ಪಡೆದ ಮೈದಾಸ ತನ್ನ ಮಗಳನ್ನು ಮುಟ್ಟಿದಾಗ ಆಕೆ ಗೊಂಬೆಯಾದ ಕಥೆಯಾಗಲಿ, ಮರ ಕಡಿಯಲು ಹೋದ ಪಕ್ಕದ ಮನೆಯವನ ಕೊಡಲಿ ನೀರಿನಲ್ಲಿ ಬಿದ್ದಾಗ ದೇವರು ಪ್ರತ್ಯಕ್ಷನಾಗಿ ಬಂಗಾರದ ಕೊಡಲಿ ನೀಡಿದ ಎಂಬ ದೃಷ್ಟಾಂತ ಕೇಳಿ, ತಾನೂ ಬಂಗಾರದ ಕೊಡಲಿ ಪಡೆಯಬೇಕೆಂದು ಇದ್ದ ಕಬ್ಬಿಣದ ಕೊಡಲಿಯನ್ನೂ ಕಳೆದು ಕೊಂಡವನ ಕಥೆಯಾಗಲಿ- ಇವೆಲ್ಲ ಅತಿ ಆಸೆಯಿಂದ ಆಗುವ ಪರಿಣಾಮಗಳ ಕುರಿತು ಇರುವ ಕಥೆಗಳು. ಆದರೆ ಈಗ ನಾನು ಹೇಳಲು ಹೊರಟಿರುವುದು ಅತಿ ಆಸೆಯ ಕುರಿತಾಗಿ ಅಲ್ಲ.

ಲಾವುತ್ಸು ಅಥವಾ ಬುದ್ಧನಂಥ ಸಾಧಕರು ಹೇಳಿರುವ ಸಾಮಾನ್ಯ ಆಸೆಯ ವಿಷಯ. ಅತಿ ಆಸೆ ಹುಟ್ಟುವುದಕ್ಕಿಂತ ಮೊದಲು ಆಸೆ ಹುಟ್ಟಿಕೊಳ್ಳುತ್ತದೆ. ಯಾರಲ್ಲಿಯೇ ಆದರೂ ಆಸೆ ಎಂಬ ಬೀಜ ಮೊಳಕೆ ಒಡೆಯದೇ ಇರುವುದು ಕಷ್ಟ. ಆಸೆಯ ಬೀಜವೇ ಮುಂದೊಂದು ದಿನ ಅತಿ ಆಸೆಯ ವೃಕ್ಷವಾಗಿ ಬೆಳೆದು ನಿಲ್ಲುತ್ತದೆ.

ಹಾಗಾಗಿ, ಅತಿ ಆಸೆಗೆ ಮೂಲ ಕಾರಣ ಸಣ್ಣ ಆಸೆ.ಮನುಷ್ಯ ತನ್ನ ಜೀವನದಲ್ಲಿ ಅದೆಷ್ಟೋ ತಪ್ಪುಗಳನ್ನು ಮಾಡಿ ಪಶ್ಚಾತ್ತಾಪಪಡುತ್ತಾನೆ. ಒಂದು ಚಿಕ್ಕ ಮಗುವನ್ನೇ ನೋಡಿ, ತಾನು ಆಡಲು ಬಯಸಿದ ಆಟಿಕೆ ವಸ್ತುವನ್ನೋ, ಗೊಂಬೆಯನ್ನೋ ಪಡೆಯಲು ಅದು ಏನೆಲ್ಲ ಕಸರತ್ತು ಮಾಡುತ್ತದೆ. ಶಾಪಿಂಗ್ ಮಾಲ್‌ನಲ್ಲಿ ಅಥವಾ ಸೂಪರ್ ಮಾರ್ಕೆಟ್‌ನಲ್ಲಿ ಮಕ್ಕಳು ಆಟಿಕೆ ಕೊಡಿಸುವಂತೆ ಅಳುವುದು, ರಚ್ಚೆ ಹಿಡಿಯುವುದು, ನೆಲದಲ್ಲಿ ಬಿದ್ದು ಹೊರಳಾಡುವುದನ್ನೂ ನಾವು ನೋಡುತ್ತೇವೆ. ಒಮ್ಮೆ ಆ ಆಟಿಕೆ ಕೊಡಿಸಿದರೆನ್ನಿ, ಮಗು ಇನ್ನೊಂದು ಆಟಿಕೆಯ ಕಡೆಗೆ ಆಕರ್ಷಿತ ವಾಗುತ್ತದೆ.

Life

ಮೊದಲಿನ ಆಟಿಕೆಯ ವಸ್ತು ತನ್ನ ಬಳಿ ಇದ್ದರೂ ಅಥವಾ ಅದನ್ನು ಬಿಟ್ಟಾದರೂ ಇನ್ನೊಂದು ವಸ್ತುವಿನ ಕಡೆಗೆ ಅದರ ಗಮನ ಹರಿಯುತ್ತದೆ. ಒಂದೇ ಕ್ಷಣದಲ್ಲಿ ಬಯಕೆ ಬದಲಾಗುತ್ತದೆ. ತಾನು ಕಂಡ ಇನ್ನೊಂದು ವಸ್ತುವನ್ನು ಪಡೆದುಕೊಳ್ಳುವುದು ಹೇಗೆ ಎನ್ನುವುದರ ಕುರಿತು ಅಲ್ಲಿಯೇ ಯೋಚನೆ ಆರಂಭವಾಗುತ್ತದೆ.

ಮೊದಲು ಕೊಂಡ ವಸ್ತುವಿನೊಂದಿಗೆ ಸರಿಯಾಗಿ ಐದು ನಿಮಿಷವೂ ಆಟ ಆಡಿರುವುದಿಲ್ಲ, ಸಮಯ ಕಳೆದಿರುವುದಿಲ್ಲ. ಅದು ಕೈಯಲ್ಲಿ ಇರುವಾಗಲೇ ಮಗು ಇನ್ನೊಂದು ವಸ್ತುವಿನ ಹಿಂದೆ ಓಡುತ್ತದೆ. ಕ್ರಮೇಣ ಮಗು ಬೆಳೆದು ದೊಡ್ಡದಾಗುತ್ತದೆ. ದೊಡ್ಡದಾದಂತೆ ಅದರ ಮನಃಸ್ಥಿತಿ ಬದಲಾಗುತ್ತದೆ.

ಒಂದೇ ಒಂದು ವ್ಯತ್ಯಾಸವೆಂದರೆ, ಬದಲಾದ ಮನಃಸ್ಥಿತಿಯಲ್ಲಿ ಆಟಿಕೆ ವಸ್ತುಗಳ ಸ್ಥಾನವನ್ನು ನಿಜವಾದ ವಸ್ತುಗಳು ಆಕ್ರಮಿಸಿಕೊಳ್ಳುತ್ತವೆ. ಸಣ್ಣ ಪೀಪಿ ಅಥವಾ ತುತ್ತೂರಿಯ ಜಾಗದಲ್ಲಿ ನಿಜವಾದ ಸ್ಯಾಕ್ಸೊಫೋನ್, ಪಿಯಾನೊ, ಗಿಟಾರ್ ಬಂದು ಕುಳಿತುಕೊಳ್ಳುತ್ತದೆ.

ಸಣ್ಣ ಬ್ಲಾಕ್‌ನಿಂದ ಕಟ್ಟುವ ಮನೆಯ ಬದಲು ಇಟ್ಟಿಗೆ, ಸಿಮೆಂಟ್‌ನಿಂದ ಕಟ್ಟಿದ ಮನೆ, ಜತೆಗೆ ಇಂಟೀರಿಯರ್ಸ್, ಪೀಠೋಪಕರಣಗಳು, ಪುಟ್ಟ ಪುಟ್ಟ ಅಡುಗೆ ಮನೆಯ ಆಟಿಕೆಯ ಬದಲು ವಿದ್ಯುತ್ ಅಥವಾ ಗ್ಯಾಸ್ ಒಲೆ, ಫ್ರಿಜ್, ಮೈಕ್ರೊವೇವ್, ದೊಡ್ಡ ಕಟ್ಟೆ ಇರುವ ಅಡುಗೆ ಮನೆ. ಸಣ್ಣ ಬೈಸಿಕಲ್ ಬದಲು ನಿಜವಾದ ಬೈಸಿಕಲ್ ಅಥವಾ ಮೋಟರ್ ಸೈಕಲ್, ಪ್ಲಾಸ್ಟಿಕ್ ಕಾರಿನ ಬದಲು ಝೆನ್, ಸ್ವಿಫ್ಟ್, ಐ-10, ಇನ್ನೊವಾ ಕಾರುಗಳು ಅಥವಾ ಇನ್ನೂ ಒಂದು ಹೆಜ್ಜೆ ಮುಂದೆ ಹೋದರೆ, ಮರ್ಸಿಡಿಸ್, ಬಿಎಂಡಬ್ಲ್ಯು, ರೇಂಜ್ ರೋವರ್, ಫೆರಾರಿ ಇತ್ಯಾದಿ.

ಅದೂ ಸಾಲದಿದ್ದಾಗ ಖಾಸಗಿ ವಿಮಾನ, ಪುಟ್ಟ ಹಡಗು. ಈ ಆಸೆಯ ಪಯಣ ನಿರಂತರ ಸಾಗುತ್ತಲೇ ಇರುತ್ತದೆ. ಅದು ಅಲ್ಲಿಗೇ ನಿಲ್ಲುವುದಿಲ್ಲ. ಹಳ್ಳಿಯಲ್ಲಿರುವವನಿಗೆ ಪಟ್ಟಣದಲ್ಲಿ, ನಂತರ ಪಟ್ಟಣ ದಿಂದ ನಗರ, ನಗರದಿಂದ ಮಹಾನಗರ, ನಂತರ ವಿದೇಶದಲ್ಲಿ ನಮ್ಮದೊಂದು ಮನೆ ಇರಬೇಕು ಎಂಬ ಬಯಕೆ ಆರಂಭವಾಗುತ್ತದೆ.

ನಾಳೆ ಚಂದ್ರ ಅಥವಾ ಮಂಗಳ ಗ್ರಹಗಳು ಮನುಷ್ಯ ಉಳಿಯಲು ಯೋಗ್ಯ ಎಂದು ತಿಳಿದರೆ ಅಲ್ಲಿಯೂ ಒಂದು ಮನೆ ಕಟ್ಟಲು ಮನುಷ್ಯ ತುದಿಗಾಲಲ್ಲಿ ನಿಂತಿದ್ದಾನೆ. ಒಂದು ವೇಳೆ ಅದನ್ನೆಲ್ಲ ಪಡೆದರೂ ಮನುಷ್ಯ ಸಂತೋಷದಿಂದ ಇರುತ್ತಾನೆ ಎಂಬ ಯಾವ ಭರವಸೆಯೂ ಇಲ್ಲ. ತಾನು ಎಷ್ಟೆಲ್ಲ ಕಷ್ಟ ಪಟ್ಟು, ಹಣ ಖರ್ಚು ಮಾಡಿ, ಸಮಯ ವ್ಯಯಿಸಿ ಸಂತೋಷದಿಂದ ಇರುತ್ತೇನೆ ಅಂದುಕೊಂಡಿದ್ದವನ ನೆಮ್ಮದಿ ಹಾಳು ಮಾಡಲು ಪಕ್ಕದ ಮನೆಯವರೊಂದಿಗಿನ ಜಗಳ, ಪಕ್ಕದ ಮನೆಯಿಂದ ಬರುವ ವಾಸನೆ, ಮಗುವಿನ ಅಳು, ಬಾಲಕರ ಪೋಕರಿತನ ಏನಾದರೂ ಒಂದು ಸಾಕು. ಆತನ ನಿದ್ದೆಗೆಡಿಸಲು ರಸ್ತೆಯಲ್ಲಿ ಓಡಾಡುವ ವಾಹನಗಳ ಸದ್ದೇ ಸಾಕು.

ವಿಪರ್ಯಾಸ ಎಂದರೆ ಮನುಷ್ಯ ತನ್ನ ಆಸೆಯನ್ನು ಪೂರೈಸಿಕೊಂಡರೆ ತಾನು ಸಂತುಷ್ಟನಾಗಿರು‌ ತ್ತೇನೆ ಎಂಬ ಭ್ರಮೆಯಲ್ಲಿಯೇ ಇರುತ್ತಾನೆ. ಅದು ಸತ್ಯಕ್ಕೆ ಬಹಳ ದೂರ. ಮನುಷ್ಯನ ಮನಸ್ಸು ಬಹಳ ಚಂಚಲ. ಅದು ನಿಂತಲ್ಲಿ ನಿಲ್ಲುವುದೇ ಇಲ್ಲ. ಎಲ್ಲಾ ಕಡೆ ಸುತ್ತಾಡಿ, ಬೇಕಾದ, ಬೇಡಾದ ಕಡೆಗೆಲ್ಲ ತಿರುಗಾಡುತ್ತಿರುತ್ತದೆ.

ಇತ್ತಲಿಂದ ಅತ್ತ, ಅತ್ತಲಿಂದ ಇತ್ತ ಅಲೆದಾಡುತ್ತಿರುತ್ತದೆ. ಒಂದು ಕಡೆ ಸ್ಥಿರವಾಗಿ ನಿಲ್ಲದ ವಸ್ತುವಿಗೆ ಹೆಸರು ಏನೆಂದು ಕೇಳಿದರೆ, ಬಹುಶಃ ಮನಸ್ಸು ಎಂಬ ಉತ್ತರವೇ ಸರಿಹೋಗಬಹುದು. ಮನಸ್ಸು ಮನುಷ್ಯನ ಸ್ವಾಧೀನದಲ್ಲಿರುವುದು ತೀರಾ ಎಂದರೆ ತೀರಾ ಕಮ್ಮಿ.

ಎಲ್ಲಾ ಲಕ್ಷಕ್ಕೆ, ಕೋಟಿಗೆ ಒಂದೋ ಎರಡೊ ಸಿಕ್ಕಿದರೆ ದೊಡ್ದದು. ಮನಸ್ಸಿನ ವಿಶೇಷತೆ ಎಂದರೆ, ಅದು ಪೂರ್ವಗ್ರಹಪೀಡಿತವಾಗಿ ಅಲೆದಾಡುತ್ತಿರುತ್ತದೆ. ತನಗೆ ಬೇಕಾದದ್ದು ಸಿಕ್ಕಿದ ಕೂಡಲೇ ಬೇರೆ ಏನನ್ನೋ ಆಶಿಸುತ್ತದೆ. ಪುನಃ ಆ ಆಸೆಯ ಬೆನ್ನು ಹತ್ತಿ ಓಡಲಾರಂಭಿಸುತ್ತದೆ. ಬಯಸಿದ್ದನ್ನು ಪಡೆದ ಮರುಕ್ಷಣದಿಂದಲೇ ಸುಪ್ತವಾಗಿ ಅಡಗಿ ಕುಳಿತಿದ್ದ ಇತರ ಆಸೆಗಳು ಮನಸ್ಸನ್ನು ಆವರಿಸಿಕೊಳ್ಳುತ್ತವೆ.

ಪರಿಣಾಮವಾಗಿ, ಮನುಷ್ಯ ತಾನು ಗಳಿಸಿದ್ದನ್ನು ಅನುಭವಿಸದೇ, ಸುಖ ಪಡದೆ, ಇನ್ನುಳಿದ ಬೇಕುಗಳ ಬೆನ್ನು ಹತ್ತುತ್ತಾನೆ. ಒಟ್ಟಿನಲ್ಲಿ ಮನಸ್ಸು ತಾನೇ ಕಷ್ಟಪಟ್ಟು ಗಳಿಸಿದ್ದನ್ನು ಸಂಪೂರ್ಣ ಅನುಭವಿಸು ವುದೂ ಇಲ್ಲ, ಇನ್ನೂ ಬೇಕೆಂಬ ಆಸೆಯಿಂದ ಹೊರಗೆ ಬರುವುದೂ ಇಲ್ಲ. ಮನುಷ್ಯ ತನ್ನ ಬಯಕೆ ಪೂರ್ಣಗೊಳ್ಳದಿದ್ದಾಗ ಅಥವಾ ತಾನು ಬಯಸಿದ್ದನ್ನು ಪಡೆಯಬೇಕೆಂದು ಹಾತೊರೆಯುತ್ತಿರುವಾಗ, ಸುತ್ತಮುತ್ತ ನಡೆಯುವ ವರ್ತಮಾನದ ಕಡೆ ಗಮನ ಹರಿಸುವುದಿಲ್ಲ, ಅಕ್ಕಪಕ್ಕದ ಆಗುಹೋಗುಗಳ ಕಡೆಗೆ ಲಕ್ಷ್ಯ ಕೊಡುವುದಿಲ್ಲ.

ತನ್ನ ಅಪೂರ್ಣವಾದ ಬಯಕೆಯ ಕುರಿತೇ ಯೋಚಿಸುತ್ತಿರುತ್ತಾನೆ. ಅನೇಕ ಬಾರಿ ಸಂಪೂರ್ಣ ಲಕ್ಷ್ಯವು ಮುಂದೆ ಗಳಿಸಬೇಕಾದುದರ ಕಡೆಗೇ ಇರುವುದರಿಂದ, ಹಿಂದೆ ಗಳಿಸಿದ್ದರ ಕಡೆ ಗಮನ ವಿಲ್ಲದೇ ಅರ್ಥಹೀನವಾಗುತ್ತದೆ. ಪೂರ್ಣಗೊಳ್ಳದ ಆಸೆಗಳು ದೇಹದಲ್ಲಿ ಆದ ಒಂದು ಸಣ್ಣ ಗಾಯ ದಂತೆ. ಆ ಸಣ್ಣ ಗಾಯದ ಕಡೆಗೇ ಹೆಚ್ಚಿನ ಗಮನ ಇರುತ್ತದೆಯೇ ವಿನಾ, ಆರೋಗ್ಯದಿಂದ ಇರುವ ದೇಹದ ಉಳಿದ ಭಾಗದ ಕಡೆಗಲ್ಲ.

ನೀವು ಗಮನಿಸಿ, ಒಂದು ಹಲ್ಲು ನೋವಾದರೆ ಇಡೀ ದಿನ ನಮ್ಮ ಲಕ್ಷ್ಯವೆಲ್ಲ ಹಲ್ಲಿನ ಕಡೆಗೆ, ತಲೆ ನೋವಾದರೆ ಗಮನ ಎಲ್ಲ ತಲೆಯ ಕಡೆಗೆ ಇರುತ್ತದೆಯೇ ವಿನಾ, ಆರೋಗ್ಯದಿಂದ ಇರುವ, ಸಧೃಢ ವಾಗಿರುವ ಇತರ ಭಾಗಗಳ ಕಡೆ ಗಮನ ಇರುವುದಿಲ್ಲ. ಇದನ್ನೇ ಭೌತಿಕ ಜಗತ್ತಿಗೆ ಹೋಲಿಸಿ ದರೆ, ಮನುಷ್ಯನು ಈಡೇರದ ಬಯಕೆಯ ಬೆನ್ನು ಹತ್ತಿ, ಅದುವರೆಗೆ ಗಳಿಸಿದ್ದರೆಡೆಗೆ ಸಂಪೂರ್ಣ ಗಮನ ಹರಿಸುವುದಿಲ್ಲ.

ಅದುವರೆಗೆ ಗಳಿಸಿದ ಯಾವುದೇ ರೀತಿಯ ಶ್ರೀಮಂತಿಕೆಯನ್ನು ಪರಿಪೂರ್ಣ ಅನುಭವಿಸುವುದಿಲ್ಲ. ಪ್ರತಿಯೊಬ್ಬನೂ ತಾನು ಹೆಚ್ಚಿನದ್ದು ಏನನ್ನಾದರೂ ಸಾಧಿಸಬೇಕು ಎಂಬ ಆಸೆಯ ಬೆನ್ನೇರಿ ಹೋಗುತ್ತಾನೆ. ಬಹುತೇಕ ಬಾರಿ ಅದು ಈಡೇರದೇ ನಿರಾಶನೂ ಆಗುತ್ತಾನೆ. ನಿರಂತರವಾಗಿ ಈಡೇರದ ಆಸೆಯಲ್ಲಿ ಬಂದಿಯಾಗಿರುವುದರಿಂದ ವರ್ತಮಾನವನ್ನು ಆಸ್ವಾದಿಸದೆಯೇ ಕಳೆಯುತ್ತಾನೆ.

ಆಸೆಯ ಉಪಶಮನವೆಂಬ ತಂಗುದಾಣ ತಲುಪಲು ಇರುವುದು ಎರಡೇ ದಾರಿ. ಒಂದು, ಆಸೆಯನ್ನು ಈಡೇರಿಸಿಕೊಳ್ಳುವುದು. ಇನ್ನೊಂದು ಆಸೆಯನ್ನೇ ಕಿತ್ತು ಹಾಕುವುದು. ಆಸೆಯ ಪ್ರಾಮುಖ್ಯ, ಪರಿಣಾಮಗಳನ್ನು ಮನಗಂಡು ಅದರಿಂದ ದೂರವಿರುವುದು ಆಸೆಯನ್ನು ಈಡೇರಿಸಿಕೊಳ್ಳುವು ದಕ್ಕಿಂತ ಸುಲಭ.

ತನ್ನಲ್ಲಿ ಇಲ್ಲವಾದದ್ದಲ್ಲ ಬೇಕು ಎಂದು ಬಯಸುವುದರ ಬದಲಾಗಿ ಯಾವುದು ಅತಿ ಅವಶ್ಯವೋ ಅದನ್ನು ಪಡೆಯುವುದಕ್ಕೆ ಪ್ರಯತ್ನಿಸಬೇಕು. ಬಹಳಷ್ಟು ಸಲ ಮನುಷ್ಯನಿಗೆ ’ಬೇಕು’ ಎಂದು ಅನಿಸುವ ವಸ್ತುವಿನ ‘ಅವಶ್ಯಕತೆ’ಯೇ ಇರುವುದಿಲ್ಲ. ಉದಾಹರಣೆಗೆ, ಗುಡ್ಡಗಾಡು ಪ್ರದೇಶದ, ರಸ್ತೆ ಸರಿ ಇಲ್ಲದ ಹಳ್ಳಿಯಲ್ಲಿರುವ ಒಬ್ಬನಿಗೆ ತಿರುಗಾಟಕ್ಕೆ ಒಂದು ವಾಹನ ಬೇಕು. ಅಂಥ ರಸ್ತೆಯಲ್ಲಿ ಓಡಾಡಲು ಮಾರುತಿ ಒಮ್ನಿ ಸಾಕಾದರೂ, ಗುಣಮಟ್ಟದಲ್ಲಿ ಇನ್ನೂ ಚೆನ್ನಾಗಿರುವ, ಸ್ವಲ್ಪ ದೊಡ್ಡ ಜೀಪ್ ಬೇಕು ಎಂದರೆ ಅದೂ ಸಾಧುವೇ.

ಆದರೆ ಮನೆಯಲ್ಲಿರುವ ಎಲ್ಲಾ ಐಷಾರಾಮಿ ವಸ್ತುಗಳು, ವ್ಯವಸ್ಥೆಗಳನ್ನು ಹೊಂದಿದ ಹಡಗಿನಂಥ ರೋಲ್ಸ್‌ರಾಯ್ಸ್ ಲೆಮೋಸಿನ್ ಬೇಕು ಎಂದರೆ? ಅದು ಅತಿಯಾಯಿತು ಎಂದೆನಿಸುವುದಿಲ್ಲವೇ? ಅಷ್ಟಕ್ಕೂ ಗುಡ್ಡ ಹತ್ತಲು ಜೀಪ್ ಒಳ್ಳೆಯದೇ ವಿನಾ ಲಿಮೋ ಅಲ್ಲವಲ್ಲ. ಮನುಷ್ಯನಲ್ಲಿ ಇಂಥ ಅದೆಷ್ಟೋ ಶೋಕಿಗಳು ಮೂಡುವುದುಂಟು. ಇದು ಒಂದು ಉದಾಹರಣೆ ಮಾತ್ರ.

ಮನೆಗೆ ಬರುವ ನೀರು ಪುರಸಭೆಯ ಜಂಗು ಹಿಡಿದ ತೊಟ್ಟಿಯಿಂದ ಎಂದಾದರೆ, ಮನೆಯ ನಲ್ಲಿ ಹಿತ್ತಾಳೆಯದ್ದಾದರೇನು, ಚಿನ್ನದ್ದಾದರೇನು? ಹಾಗಾದರೆ ಬಯಕೆಗಳೇ ಇಲ್ಲದೆ ಬದುಕಲು ಸಾಧ್ಯವೇ? ಮನುಷ್ಯ ಎಂದಮೇಲೆ ಬಯಕೆಗಳು ಸಹಜ. ಆದರೆ ಅದೇ ಬಯಕೆ ದುಃಖಕ್ಕೂ ಕಾರಣವಾ ಗಬಹುದು. ಆದ್ದರಿಂದ ಬೇಕು-ಬೇಡಗಳನ್ನು ನಿರ್ಣಯಿಸಿ, ಆಸೆ-ಅಗತ್ಯತೆಯನ್ನು ತೂಗಿ ನಡೆ ಯಬೇಕು.

ಅನೇಕರು ಆಸೆಯ ಗಿರಿಯ ತುದಿ ತಲುಪುವುದೇ ಪ್ರಮುಖವೆಂದು ಭಾವಿಸುತ್ತಾರೆ. ಬಯಕೆಯ ಪರ್ವತದ ತುದಿ ತಲುಪುವ ತವಕದಲ್ಲಿ, ಆರಂಭ ಮತ್ತು ಅಂತ್ಯದ ನಡುವಿನ ಪ್ರಯಾಣದ ಹಾದಿಯ ಸುಖವನ್ನೇ ಅನುಭವಿಸುವುದಿಲ್ಲ. ಉಳಿದವರಿಗಿಂತ ಮೊದಲು ತಾನು ಶಿಖರದ ತುದಿ ತಲುಪಬೇಕು ಎಂಬುದೇ ಲಕ್ಷ್ಯವಾಗಿರುತ್ತದೆ.

ದಾರಿಯುದ್ದಕ್ಕೂ ಸಿಗುವ ಹಣ್ಣಿನ ಸಿಹಿ, ಹೂವಿನ ಸಿರಿಯನ್ನು ಅನುಭವಿಸದೇ ಶಿಖರದ ತುದಿ ತಲುಪಿದರೂ ಪ್ರಯೋಜನವಿಲ್ಲ. ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ನಮ್ಮ ಪ್ರಯಾಣ ನಮ್ಮದಾಗಿರಬೇಕು. ನಮ್ಮ ಅವಶ್ಯಕತೆ ಪೂರೈಸಿಕೊಳ್ಳಬೇಕೆಂಬುದು ಸರಿ.

ಪಕ್ಕದಲ್ಲಿರುವವನನ್ನು ನೋಡಿ ನಾನು ಅವನಂತೆ ಆಗಬೇಕೆನ್ನುವ ಆಸೆ ಎಷ್ಟು ಸರಿ? ನಾನೂ ಒಳ್ಳೆಯ ಉದ್ಯಮಿಯಾಗಬೇಕು, ನಟನಾಗಬೇಕು, ಆಟಗಾರನಾಗಬೇಕು ಎನ್ನುವುದು ಸರಿ. ಇದು ಗುರಿಯಾಗಿ ಇರಬೇಕೇ ವಿನಾ, ಅತಿ ಆಸೆ ಆಗಬಾರದು, ಗುರಿಗೂ ಮತ್ತು ಆಸೆಗೂ ಸ್ವಲ್ಪ ವ್ಯತ್ಯಾಸ ವಿದೆ.

ಗುರಿ ಅಥವಾ ಲಕ್ಷ್ಯ ಇಲ್ಲದಿದ್ದರೆ ಮನುಷ್ಯ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಆದರೆ, ತಾನು ಸಾಧಿಸಬೇಕು ಎನ್ನುವ ಬಯಕೆ ಅತಿ ಆಗಬಾರದು. ಉದಾಹರಣೆಗೆ, ತಾನು ಉದ್ಯಮಿಯಾಗಬೇಕು, ಒಂದಷ್ಟು ಹಣ ಸಂಪಾದಿಸಬೇಕು, ತನ್ನದೇ ಒಂದು ಸಾಮ್ರಾಜ್ಯ ಕಟ್ಟಿಕೊಳ್ಳಬೇಕು ಎನ್ನುವುದರಲ್ಲಿ ತಪ್ಪೇನೂ ಇಲ್ಲ. ಆದರೆ ಇತರರೊಂದಿಗೆ ತನ್ನನ್ನು ಹೋಲಿಸಿಕೊಂಡು, ಮಾರ್ಗದಲ್ಲಿಯೇ ಆದರೂ ಸರಿ, ಇತರರಿಗಿಂತ ತಾನೇ ಶ್ರೇಷ್ಠ ಎಂದು ಕರೆಸಿಕೊಳ್ಳಬೇಕು, ತಾನೊಬ್ಬನೇ ದೊಡ್ಡವನಾಗಬೇಕು, ಅದಕ್ಕೆ ನೀತಿ ತಪ್ಪಿ ಕೆಲಸ ಮಾಡಲೂ ಸಿದ್ಧ ಎನ್ನುವ ಬಯಕೆ ಮನುಷ್ಯನ ಮನಸ್ಸಿನಲ್ಲಿ ಒಮ್ಮೆ ಬಂತು ಎಂದಾದರೆ ಅದು ಅತಿ ಆಸೆಯಾಗುತ್ತದೆ. ತಪ್ಪಿಯೂ ತಾನು ಬಯಸಿದ್ದು ತನಗೆ ದಕ್ಕದೆ ಇzಗ ಒಳಗೊಳಗೇ ಕುದಿಯುತ್ತಾನೆ.

ಅತಿ ಅಸೆ ಮನುಷ್ಯನನ್ನು ಸುಟ್ಟುಹಾಕುತ್ತದೆ. ಅಲ್ಲದೆ, ಅತಿಯಾದದ್ದನ್ನು ಸಂಪಾದಿಸುವ ಹುಚ್ಚು ತನದಲ್ಲಿಮನುಷ್ಯ ಇದ್ದದ್ದನ್ನೂ ಅನುಭವಿಸುವುದಿಲ್ಲ. ಕ್ರಮೇಣ ಅದು ಕೂಡ ಅಸಹನೆಗೆ ಕಾರಣ ವಾಗುತ್ತದೆ. ಈ ಅಸಹನೆ ಕೂಡ ಬೆಂಕಿಯಂತೆಯೇ, ಸುಡುತ್ತದೆ. ಈಗ ನೀವೇ ಹೇಳಿ, ’ಅತಿ ಆಸೆಯ ಭಾವ... ’

ಕಿರಣ್‌ ಉಪಾಧ್ಯಾಯ, ಬ‌ಹ್ರೈನ್

View all posts by this author