ತಿಳಿರುತೋರಣ
ಅಮೆರಿಕದ ಉದ್ಯಮಿಗಳು ಹವಾಯಿಯಲ್ಲಿ ಬೃಹತ್ ಸಕ್ಕರೆ ತೋಟಗಳನ್ನು ಸ್ಥಾಪಿಸಿದರು- ಎಂಬೊಂದು ವಾಕ್ಯ, ವಿಶ್ವೇಶ್ವರ ಭಟ್ಟರ ‘ಸಂಪಾದಕರ ಸದ್ಯಶೋಧನೆ’ ದೈನಂದಿನ ಅಂಕಣದಲ್ಲಿ ಮೊನ್ನೆ ಶುಕ್ರವಾರದ ‘ಹವಾಯ್ ಅಮೆರಿಕಕ್ಕೆ ಸೇರಿದ್ದು ಹೇಗೆ?’ ಶೀರ್ಷಿಕೆಯ ಲೇಖನದಲ್ಲಿ, ಗಮನ ಸೆಳೆಯಿತು. ಇಲ್ಲಇಲ್ಲ, ‘ರಾಜ್ಯ ಮಟ್ಟದ ಬೃಹತ್ ಮಹಿಳೆಯರ ಸಮಾವೇಶ’ ರೀತಿಯಂತೆ... ಹವಾಯ್ ದ್ವೀಪದಲ್ಲಿ ಸಕ್ಕರೆಯ ಕಣಗಳು ಬೃಹತ್ ಆಗಿರುತ್ತವೆಯೇ!? ಅದು ಕಲ್ಲುಸಕ್ಕರೆಯೇ!? ಎಂಬಂಥ ತರ್ಲೆ ತಮಾಷೆಗಾಗಿ ಅಲ್ಲ. ಅಮೆರಿಕದ ಉದ್ಯಮಿಗಳು ಹವಾಯಿಯಲ್ಲಿ ಸ್ಥಾಪಿಸಿದ್ದು ಸಕ್ಕರೆ ತೋಟಗಳನ್ನೆ ಅಥವಾ ಕಬ್ಬಿನ ತೋಟಗಳನ್ನು? ಎಂಬ ಕೊಂಕು ಪ್ರಶ್ನೆಗಾಗಿಯೂ ಅಲ್ಲ.
ಏಕೆಂದರೆ ಸಕ್ಕರೆ ತೋಟ ಎಂಬ ಬಳಕೆ ಧಾರಾಳವಾಗಿ ಇದೆ. ಬೆಳೆಯುವುದು ಕಬ್ಬನ್ನೇ ಆದರೂ ಅಂತಿಮ ಉತ್ಪನ್ನ ಸಕ್ಕರೆಯೇ ತಾನೆ? ಕೈಗಾರಿಕಾ ಪ್ರಮಾಣದಲ್ಲಿ ಕಬ್ಬನ್ನು ಬೆಳೆದು, ಅದರಿಂದ ಕಚ್ಚಾ ಸಕ್ಕರೆ ಮತ್ತು ಬೆಲ್ಲವನ್ನು ಉತ್ಪಾದಿಸುವ ದೊಡ್ಡ ಕೃಷಿ ಭೂಮಿಯನ್ನು ಸಕ್ಕರೆ ತೋಟ ಎನ್ನುವುದಿದೆ. 16ನೆಯ ಶತಮಾನದಲ್ಲಿ ಕೆರಿಬಿಯನ್ ಮತ್ತು ದಕ್ಷಿಣ ಅಮೆರಿಕದಲ್ಲಿ ಸಾಮೂಹಿಕ ಉತ್ಪಾದನೆಗೆ, ವಸಾಹತುಶಾಹಿ ಆರ್ಥಿಕತೆಗೆ ಪ್ರಮುಖ ಆಧಾರಸ್ತಂಭವಾಗಿದ್ದು ಸಕ್ಕರೆ ತೋಟಗಳೇ.
ಕ್ಯೂಬಾ ದೇಶಕ್ಕಂತೂ ‘ಪ್ರಪಂಚದ ಸಕ್ಕರೆ ತೋಟ’ ಅಥವಾ ‘ಸಕ್ಕರೆ ಬೋಗುಣಿ ಎಂಬ ಪ್ರಖ್ಯಾತಿ ಯೂ ಇದೆ; ಪ್ರಾಥಮಿಕ ಶಾಲೆಯ ಭೂಗೋಳ ಪಠ್ಯದ ಪರೀಕ್ಷೆಯಲ್ಲಿ ಆ ಬಗ್ಗೆ ಒಂದು ಅಂಕದ ಪ್ರಶ್ನೆ ಇರುವುದು ತಲೆತಲಾಂತರದಿಂದಲೂ ಸಾಗಿಬಂದಿದೆ. ಆದರೆ ಬೇರೆಯೇ ಒಂದು ಜಿಜ್ಞಾಸೆ ಇಲ್ಲಿ ಉದ್ಭವಿಸುತ್ತದೆ. ಕಬ್ಬನ್ನು ಬೆಳೆಯುವುದು ತೋಟದಲ್ಲಾ ಅಥವಾ ಗದ್ದೆಯಲ್ಲಿ? “ಕಬ್ಬಿನ್ ಗದ್ದೆ ಮಧ್ಯದಲ್ಲಿ ಉಬ್ಬಿದ್ ಕೊಬ್ಬಿದ್ ಗಬ್ಬದ್ ತೋಳ ಕುರಿನ್ ನೋಡಿ ಹಬ್ಬ ಎಂದು ಕಾಯ್ತಿತ್ತು..." ನೆನಪಿಲ್ಲವೇ? ಅದೇ- ದೇವರದುಡ್ಡು ಚಿತ್ರದ ತರೀಕೆರೆ ಏರಿ ಮೇಲೆ ಮೂರು ಕರಿ ಕುರಿಮರಿ ಹಾಡು.
ಇದನ್ನೂ ಓದಿ: Srivathsa Joshi Column: ದೇವರಾತರೆಂಬ ಪುರಾಣಪುರುಷರಿಂದ ಬಂತಂತೆ ಆ ಹೆಸರು !
“ಕಬ್ಬಿನ ಗದ್ದೆಯಲ್ಲಿ 3 ಚಿರತೆ ಮರಿಗಳು ಪತ್ತೆ", “ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಹೊತ್ತಿ ಉರಿದ ಕಬ್ಬಿನ ಗದ್ದೆ", “ಗುಂಡ್ಲುಪೇಟೆ: ಕಾಡಾನೆಯಿಂದ ಕಬ್ಬಿನ ಗದ್ದೆ ನಾಶ", “ಮಳೆ ಅಬ್ಬರಕ್ಕೆ ಧವಳೇಶ್ವರ ದಲ್ಲಿ ಕಬ್ಬಿನ ಗದ್ದೆ ಜಲಾವೃತ" ರೀತಿಯ ಸುದ್ದಿಶೀರ್ಷಿಕೆಗಳಲ್ಲಿ ಕಬ್ಬಿನ ಗದ್ದೆ ಪತ್ರಿಕೆಗಳಲ್ಲೂ ಆಗಾಗ ಕಂಗೊಳಿಸುತ್ತಿರುತ್ತದೆ.
ಇಷ್ಟೇ ಅಲ್ಲ, ‘ಕಬ್ಬಿನ್ ಗದ್ದೆ ಕಲಿ ಇದೇ’ ಅಂತೊಂದು ಯಾರೋ ಕನ್ನಡಿಗರೊಬ್ಬರ ಇನ್ ಸ್ಟಾಗ್ರಾಮ್ ಹ್ಯಾಂಡಲ್ ಸಹ ಇರುವುದನ್ನು, ಅದರಲ್ಲಿ ತಮಾಷೆ ವಿಡಿಯೊಗಳು ಕಾಣಿಸಿಕೊಳ್ಳುವು ದನ್ನೂ ನಾನು ಗಮನಿಸಿದ್ದೇನೆ. ಈ ವಾರವೂ ಮತ್ತೊಮ್ಮೆ ಆನಂದರಾಮ ಶಾಸ್ತ್ರೀಯವರನ್ನು ಎಳೆದು ತರುತ್ತಿದ್ದೇನೆ ಅಂದ್ಕೊಳ್ಳಬೇಡಿ, ಆದರೆ ಈ ‘ಕಬ್ಬಿನ ತೋಟ ವರ್ಸಸ್ ಕಬ್ಬಿನ ಗದ್ದೆ ವಿಚಾರ ದಲ್ಲಿ ಅವರು ಇನ್ನೊಬ್ಬ ಹಿರಿಯ ಕನ್ನಡಿಗರೊಡನೆ ಮೊನ್ನೆ ನಡೆಸಿದ್ದ ಚಿಕ್ಕದೊಂದು ವಿಚಾರ ವಿನಿಮಯವನ್ನು ನನ್ನೊಡನೆ ವಾಟ್ಸ್‌ಆಪ್‌ನಲ್ಲಿ ಹಂಚಿಕೊಂಡಿದ್ದಾರೆ. ಆ ಇನ್ನೊಬ್ಬ ಹಿರಿಯ ಕನ್ನಡಿಗರ ಹೆಸರು ನೀಲಕಂಠಪ್ಪ ಚಿಕ್ಕಮುದ್ದೆ.
ಸಿಂಡಿಕೇಟ್ ಬ್ಯಾಂಕ್‌ನಲ್ಲಿ ವೃತ್ತಿಯ ವೇಳೆ ಶಾಸ್ತ್ರೀಯವರ ಸಹೋದ್ಯೋಗಿಯಾಗಿದ್ದವರು. ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಬೀರೂರು ತಾಲೂಕಿನವರು, ಈಗ ಬೆಂಗಳೂರಿನಲ್ಲಿ ನಿವೃತ್ತ ಜೀವನವನ್ನು ಅಕ್ಷರಸಾಂಗತ್ಯದಿಂದ ಕಳೆಯುತ್ತಿರುವವರು. ಅಂದರೆ ಅವರೊಬ್ಬ ಪ್ರಗಾಢ ಓದುಗರು. ಅಂಕಣಬರಹಗಳನ್ನೋದಿ ಪ್ರತಿಕ್ರಿಯೆಯನ್ನು ನೀಟಾಗಿ ಕನ್ನಡದಲ್ಲೇ ಕೀಲಿಸಿ ಮಿಂಚಂಚೆಯಲ್ಲಿ ಕಳಿಸಿ ನನ್ನನ್ನೂ ಆಗಾಗ ಹರಸುವವರು.
ಪೋಲಿಯೊದಿಂದಾಗಿ ಗಾಲಿಕುರ್ಚಿಯಲ್ಲಿ ಓಡಾಡಬೇಕಾಗಿ ಬಂದರೂ ಅತ್ಯುತ್ಸಾಹಿ. ಕೆಲ ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನನ್ನದೊಂದು ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಬಂದಿದ್ದರಾದ್ದರಿಂದ ಮುಖತಃ ಪರಿಚಯವುಳ್ಳ ಹಿತೈಷಿ. ಸರಿ, ಅವರಿಬ್ಬರ (ಅಂದರೆ, ನೀಲಕಂಠಪ್ಪ ಚಿಕ್ಕಮುದ್ದೆ ಅಲಿಯಾಸ್ ನೀ.ಚಿ ಮತ್ತು ಆನಂದರಾಮ ಶಾಸ್ತ್ರೀ ಅಲಿಯಾಸ್ ಆ.ಶಾ ಅವರ) ಸಕ್ಕರೆಯಷ್ಟು ಸಿಹಿಯಾದ ಜ್ಞಾನದಾಹಿ ವಿಚಾರವಿನಿಮಯ ಏನಿತ್ತೆಂದರೆ- ನೀ.ಚಿ: “ರಾಗಿ ಬೆಳೆಯುವ ಜಮೀನಿಗೆ ಹೊಲ ಎನ್ನುತ್ತೇವೆ. ಭತ್ತ ಬೆಳೆಯುವ ಜಮೀನಿಗೆ ಗದ್ದೆ ಎನ್ನುತ್ತೇವೆ. ಹಾಗಾದರೆ ಕಬ್ಬು ಬೆಳೆಯುವ ಜಮೀನನ್ನು ಏನೆಂದು ಹೇಳಬೇಕು?" ಆ.ಶಾ: “ಒಳ್ಳೆಯ ಪ್ರಶ್ನೆ.
ಹೊಲ ಎಂದರೆ ಖುಷ್ಕಿ ಭೂಮಿ. ಗದ್ದೆ ಅಂದರೆ ತರಿ ಭೂಮಿ. ಆದ್ದರಿಂದ ಕಬ್ಬು ಬೆಳೆಯುವುದು ಗದ್ದೆಯಲ್ಲಿ." ನೀ.ಚಿ: “ನಮ್ಮಲ್ಲಿ ತೋಟಗಳಿಗೆ ಬಾಗಾಯ್ತ ಅಂತ ಹೇಳ್ತಾರೆ. ಇಂದು ವಿಶ್ವೇಶ್ವರ ಭಟ್ಟರು ಸಕ್ಕರೆ ತೋಟ ಎಂದು ಕಬ್ಬಿನ ಗದ್ದೆ ಎಂಬರ್ಥದಲ್ಲಿ ಬಳಸಿದ್ದಾರೆ. ಇದೊಂದು ಹೊಸ ಪ್ರಯೋಗ ಎಂದುಕೊಂಡಿದ್ದೇನೆ. ಆದರೆ ಆ ಪದ ಚಾಲ್ತಿಯಲ್ಲಿ ಇಲ್ಲ."
ಆ.ಶಾ: “ಬಾಗಾಯತ ಅಂದರೆ ತೋಟ. ಹಿಂದಿಯ ಬಾಗ್ ಎಂಬ ಪದದಿಂದ ಬಂದಿದೆ. ಆಯತ ಅಂದರೆ ವಿಶಾಲವಾದ ಜಾಗ. ನೀರನ್ನು ಹೆಚ್ಚು ಬೇಡುವುದರಿಂದ ಕಬ್ಬಿನ ಗದ್ದೆಯು ತೋಟವೂ ಹೌದು. ಬಾಗಾಯ್ತ ಪದ ಸರಿಯಾಗಿದೆ. ಭಟ್ಟರು ಜಾಣ್ಮೆಯಿಂದ ಇದನ್ನೇ ಇನ್ನೊಂದು ರೂಪದಲ್ಲಿ ಬಳಸಿದ್ದಾರೆ." ಈ ಸಂಭಾಷಣೆಯನ್ನು ಓದಿದ ಮೇಲೆ, ‘ಕಬ್ಬಿನ ತೋಟ’ ಎಂಬ ಬಳಕೆ ಇದೆಯೇ ಎಂದು ಅಗೆವ ಬುದ್ಧಿ ನನ್ನೊಳಗೆ ಎಚ್ಚರಗೊಂಡಿತು.
ಹಿಂದೊಮ್ಮೆ ತಿಳಿರುತೋರಣದಲ್ಲೇ ‘ಕಬ್ಬಿಗರ ರಚನೆ ಕಬ್ಬಿಣದ ಕಡಲೆಯಾಗದೆ ಕಬ್ಬಿನ ರಸವಾ ದಾಗ ಶೀರ್ಷಿಕೆಯಡಿ, ಬೇರೆಬೇರೆ ಕಬ್ಬಿಗರು (ಕವಿಗಳು) ಮಾಡಿರುವ ಕಬ್ಬಿನ ಉಲ್ಲೇಖಗಳನ್ನು ಸಂಕಲಿಸಿ ನಾನೇ ಬರೆದಿದ್ದು ನೆನಪಾಯಿತು. “ಕುರಿವಿಂಡು ಕಬ್ಬಿನ ಉಲಿವ ತೋಂಟವ ಹೊಕ್ಕು- ತೆರನನರಿಯದೆ ತನಿರಸದ, ಹೊರಗಣೆಲೆಯನೆ ಮೇದುವು! ನಿಮ್ಮನರಿವ ಮದಕರಿಯಲ್ಲದೆ, ಕುರಿ ಬಲ್ಲುದೆ ಕೂಡಲ ಸಂಗಮದೇವಾ?" ಎಂದು ಬಸವಣ್ಣನವರ ಒಂದು ವಚನವೂ ಅದರಲ್ಲಿ ಬಂದಿತ್ತು.
ಕುರಿವಿಂಡು ಕಬ್ಬಿನ ತೋಟಕ್ಕೆ ಹೋದರೂ ಹೊರಗಿನ ಸೋಗೆಯನ್ನು ತಿನ್ನಬಲ್ಲುದೇ ಹೊರತು ಕಬ್ಬಿನ ತನಿರಸವನ್ನು ಕುಡಿಯಲಾರದು. ಆನೆಯಾದರೋ ಕಬ್ಬನ್ನು ಸಿಗಿದು ರಸವನ್ನು ಹಿಂಡಿ ಕುಡಿಯುತ್ತದೆ. ಬರೀ ಶಾಸ್ತ್ರಗಳನ್ನು ಓದಿದವರು ಧರ್ಮಗ್ರಂಥಗಳಲ್ಲಿರುವ ಅನುಭಾವದ ಸಾರ ವನ್ನು ಗ್ರಹಿಸಲಾರರು. ನಿಜವಾದ ಸಾಧಕರು ಮಾತ್ರ ಶಿವಾನುಭವದ ಸಾರವನ್ನು ಹೀರಿ ಕುಡಿಯು ವರು ಎಂದು ಭಾವಾರ್ಥ ಆ ವಚನದ್ದು. ಹಾಗೆಯೇ, “ಮುಳಿದು ಕಬ್ಬಿನ ತೋಟದಲಿ ನರಿ| ಹುಲಿಯವೋಲ್ ಗರ್ಜಿಸಿತು ಗಡ ಹೆ| ಕ್ಕಳದ ಹೇರಾಳದಲಿ ಹೆಣಗಿದೆ ಬಾಲವೃದ್ಧರಲಿ| ಬಲುಹು ನಿನಗುಂಟಾದಡಿತ್ತಲು| ಫಲುಗುಣನ ಕೂಡಾಡು ನಡೆ ಮರು| ವಲಗೆಯನು ಭೀಮನಲಿ ಬೇಡಿನ್ನೆಂದನಾ ಶಲ್ಯ||" (ಕಬ್ಬಿನ ತೋಟದಲ್ಲಿ ನರಿಯು ಹುಲಿಯ ಹಾಗೆ ಗರ್ಜಿಸಿದಂತೆ, ನೀನು ಹುಡುಗರೊಡನೆ ಮುದುಕರೊಡನೆ ಹೋರಾಡಿದೆ.
ನೀನು ನಿಜವಾಗಲೂ ಶಕ್ತನಾದರೆ, ಇತ್ತ ಬಂದು ಅರ್ಜುನನೊಡನೆ ಹೋರಾಡು, ಮತ್ತೊಂದು ಕಾಳಗವನ್ನು ಭೀಮನಲ್ಲಿ ಕೇಳು ಎಂದು ಶಲ್ಯನು ಕರ್ಣನಿಗೆ ಹೇಳಿದನು)- ಕರ್ಣಾಟಭಾರತ ಕಥಾ ಮಂಜರಿಯಲ್ಲಿ ಕುಮಾರವ್ಯಾಸನದೊಂದು ಷಟ್ಪದಿಯೂ ಸಿಕ್ಕಿತು. ಹೀಗೆ ಕನ್ನಡದ ಶ್ರೇಷ್ಠ ವಚನಕಾರರೂ ಕವಿವರೇಣ್ಯರೂ ಬಳಸಿದ್ದಾರೆಂದ ಮೇಲೆ ಕಬ್ಬಿನ ತೋಟ ಪ್ರಯೋಗ ಮಾನ್ಯತೆಗೆ ಬೇರೆ ಆಧಾರ ಬೇಕಿಲ್ಲ. ಸರಿ, ಕನ್ನಡ ಸಾಹಿತ್ಯ ಪರಿಷತ್ತಿನ ಬೃಹತ್ ನಿಘಂಟುವಿನಲ್ಲಿ ಗದ್ದೆ ಮತ್ತು ತೋಟಕ್ಕೆ ಯಾವ ವ್ಯಾಖ್ಯೆಗಳಿವೆ? ಏನು ವ್ಯತ್ಯಾಸಗಳಿವೆ? ಗದ್ದೆ ಪದಕ್ಕೆ ಗರ್ದೆ ಮತ್ತು ಗಳ್ದೆ ಎಂಬ ರೂಪಗಳೂ ಇವೆ.
“ಭತ್ತ, ಕಬ್ಬು ಮೊದಲಾದ ನೀರಾವರಿ ಪೈರುಗಳನ್ನು ಬೆಳೆಯುವ ಭೂಮಿ; ತರಿ ಜಮೀನು" ಎಂಬ ಅರ್ಥ ಕೊಟ್ಟಿದ್ದಾರೆ. ಹಳಗನ್ನಡದ ಕವಿಗಳು ತಮ್ಮ ಕಾವ್ಯಗಳಲ್ಲಿ ಗರ್ದೆ/ಗಳ್ದೆಗಳನ್ನು ಬಳಸಿರುವ ಉದಾಹರಣೆಗಳಿವೆ.
ತೋಟ ಎಂಬ ಪದಕ್ಕೆ ಕೊಟ್ಟಿರುವ ಅರ್ಥ “ಹೂವು, ಹಣ್ಣು, ಕಾಯಿಪಲ್ಯೆಗಳು, ಅಥವಾ ತೆಂಗು, ಅಡಿಕೆ, ಮಾವು ಮೊದಲಾದುವುಗಳು ಬೆಳೆಯುವ ಭೂಮಿ; ಬಾಗಾಯತ ಭೂಮಿ" ಎಂದು. ‘ತೋಂಟ’ ಎಂದು ನಡುವೆ ಸೊನ್ನೆ ಸೇರಿಸಿರುವ ರೂಪವೂ ಇದೆ, ಬಹುಶಃ ನಡುಗನ್ನಡ ಕಾಲದವ ರೆಗೂ ಅದು ಬಳಕೆಯಲ್ಲಿತ್ತೇನೋ.
ಕಿಟ್ಟೆಲ್ ಕೋಶದಲ್ಲಿ ಗದ್ದೆಗೆ A field, especially paddy-field ಅಂತಲೂ, ತೋಟಕ್ಕೆ A garden ಅಂತಲೂ ಅರ್ಥ ಕೊಟ್ಟಿದ್ದಾರೆ. ಅಲ್ಲಿ ಸಾಮಾನ್ಯವಾಗಿ ಗಾದೆಮಾತುಗಳನ್ನೂ ಉಲ್ಲೇಖಿ ಸುವುದರಿಂದ ಅನುಕ್ರಮವಾಗಿ “ಗದ್ದೆಗೆ ಬಿಟ್ಟ ನೀರೂ ಪರರಿಗೆ ಕೊಟ್ಟ ಮಾತೂ ಬೆನ್ನಿಗೆ ಕೊಟ್ಟ ಪೆಟ್ಟೂ ಹಿಂದಕ್ಕೆ ಬಾರದು" ಮತ್ತು “ತೋಟ ಮೂರು ಮೊಳ, ಕಾಯಿ ಆರು ಮೊಳ", “ತೋಟ ಹಾಳಾಗುವ ಕಾಲಕ್ಕೆ ಕೋತಿ ಮೋರೆಯ ಕಾಯಿ ಹುಟ್ಟಿತು" ಗಾದೆಗಳನ್ನೂ ಕೊಟ್ಟಿದ್ದಾರೆ.
ಅಂತೂ ಗದ್ದೆ ಮತ್ತು ತೋಟಕ್ಕೆ ಒಂಥರದಲ್ಲಿ ಹೋಲಿಕೆ ಇರುವುದೂ ಹೌದು, ಅರಿವಿಗೆ ಬರುವಷ್ಟು ವ್ಯತ್ಯಾಸ ಇರುವುದೂ ಹೌದು. ಗದ್ದೆ ಎಂದೊಡನೆ ಕೆಸರಿರುವ, ಜೌಗು ಪ್ರದೇಶದ ಚಿತ್ರಣವೇ ನಮ್ಮ ಕಣ್ಮುಂದೆ ಬರುವುದು. ತೋಟ ಎಂದೊಡನೆ ಬಣ್ಣಬಣ್ಣದ ಹೂವುಗಳದೋ ಹಣ್ಣುಗಳದೋ ನಳನಳಿಸುವ ಗಿಡಮರಗಳ ಚಿತ್ರಣವೇ ನಮ್ಮ ಕಣ್ಮುಂದೆ ಬರುವುದು; “ತೋಟದಾಗೆ ಹೂವ ಕಂಡೆ ಹೂವ ಒಳಗೆ ನಿನ್ನ ಕಂಡೆ... ನನ್ನ ರಾಜಾ ರೋಜಾ ಹಂಗೇ ನಗ್ತಾ ಇರ್ಲಿ ಯಾವತ್ತೂ..." ಎಂದು ಹಾಡೋಣ ಎನಿಸುವುದು. ಆದ್ದರಿಂದಲೇ ನೋಡಿ- ಭತ್ತ ಬೆಳೆಯುವ ಭೂಮಿಯನ್ನು ಗದ್ದೆ ಎನ್ನುತ್ತೇವೆಯೇ ಹೊರತು ತೋಟ ಎಂದರೆ ಸರಿಯೆನಿಸದು.
ತೆಂಗು-ಕಂಗು ಬೆಳೆಯುವ ಭೂಮಿಯನ್ನು ತೋಟ ಎಂದರೇನೇ ಸ್ಪಷ್ಟ ಚಿತ್ರಣ ಮೂಡುವುದು; ಗದ್ದೆ ಅಷ್ಟೊಂದು ಸಮಂಜಸವೆನಿಸದು. ಆದರೆ ಕಬ್ಬು ಮಾತ್ರ ವಿಶೇಷದ್ದು. ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರು ಎಂಬಂತೆ ಗದ್ದೆಗೂ ಸೈ ತೋಟಕ್ಕೂ ಸೈ. ಅದಕ್ಕೆ ಕಾರಣವೂ ಇದೆಯೆನ್ನಿ. ಕಬ್ಬು ಎತ್ತರಕ್ಕೆ ಬೆಳೆದು ಗಿಡದಂತೆ ಕಂಡರೂ ಸಸ್ಯಶಾಸ್ತ್ರೀಯವಾಗಿ ಅದೊಂದು ಹುಲ್ಲು ಅಥವಾ ಭತ್ತದ ಸಸಿಯ ದಾಯಾದಿಯೇ. ಈ ಗದ್ದೆ-ತೋಟಗಳ ಸೂಕ್ಷ್ಮ ವ್ಯತ್ಯಾಸವನ್ನು ಗಮನಿಸುವಾಗಲೇ- ಪ್ರಸಕ್ತ ಮತ್ತೊಮ್ಮೆ ವಿವಾದದಿಂದಾಗಿ ಸುದ್ದಿಯಲ್ಲಿರುವ, ಕುವೆಂಪು ವಿರಚಿತ ‘ಜೈ ಭಾರತ ಜನನಿಯ ತನುಜಾತೆ...’ ಕವಿತೆ, ಅಂದರೆ ನಾಡಗೀತೆ ಸಹ ನೆನಪಾಗುತ್ತದೆ! ಅದರಲ್ಲಿ ಕುವೆಂಪು ನಮ್ಮ ಇಡೀ ಕರ್ನಾಟಕ ರಾಜ್ಯವನ್ನೇ (1928ರಲ್ಲಿ ಆ ಕವಿತೆ ರಚಿಸುವಾಗ ಭೌಗೋಳಿಕವಾಗಿ ಈಗಿನ ಕರ್ನಾಟಕ ರಾಜ್ಯ ಇದ್ದದ್ದಲ್ಲ ಎಂದು ಒಪ್ಪಿಕೊಳ್ಳೋಣ) ಸರ್ವಜನಾಂಗದ ಶಾಂತಿಯ ‘ತೋಟ’ ಎಂದು ಕೊಂಡಾಡಿದ್ದಾರೆ!
ಸರ್ವಜನಾಂಗದ ಶಾಂತಿಯ ‘ಗದ್ದೆ’ ಎಂದಿಲ್ಲ. ತೋಟ ಮತ್ತು ಗದ್ದೆಗಳ ವ್ಯತ್ಯಾಸ ಕುವೆಂಪುಗೆ ಚೆನ್ನಾಗಿ ಗೊತ್ತಿತ್ತು. ಆದರೆ ಪಾಪ, ಸರ್ವಜನಾಂಗದ ಪರಸ್ಪರ ಕೆಸರೆರಚಾಟದ ಗದ್ದೆ ಆಗುತ್ತದೆ ಮುಂದೊಂದು ದಿನ ತನ್ನ ಇದೇ ಕವಿತೆಯ ಕಾರಣಕ್ಕೆ- ಎಂದು ಅವರಿಗೆ ಆಗ ಕಲ್ಪನೆಯೂ ಇದ್ದಿರಲಿಕ್ಕಿಲ್ಲ. ಕವಿತೆಯಲ್ಲಿರುವ “ಕಪಿಲ ಪತಂಜಲ ಗೌತಮ ಜಿನನುತ" ಸಾಲಿನಲ್ಲಿ ಗೌತಮ ಎಂದರೆ ಬೇರಾರೂ ಅಲ್ಲ, ಗೌತಮಬುದ್ಧನೇ- ಎನ್ನುವ ಸರಳ ಸುಂದರ ಸತ್ಯವನ್ನೂ ಅರ್ಥ ಮಾಡಿಕೊಳ್ಳಲಾಗದ, ಜೈನರುದ್ಯಾನ ಇದೆಯೆಂದ ಮೇಲೆ ಬೌದ್ಧರುದ್ಯಾನವೂ ಬೇಕು ಎಂದು ಕಿರುಚುತ್ತ ಮೂಲಗೀತೆಯನ್ನೇ ತಿರುಚಲು ಹೊರಡುವ ವಿಕೃತಿಗಳು ಹುಟ್ಟಿಕೊಳ್ಳಬಹುದೆಂದು ಕುವೆಂಪು ಕನಸಲ್ಲೂ ಎಣಿಸಿರಲಾರರು. ಅಂದಹಾಗೆ ಗೀತೆಯ ಸಾಹಿತ್ಯಕ್ಕೆ ಈ ವಿಕೃತಿಗಳು ಸೇರಿಸಬೇಕೆಂದುಕೊಂಡಿರುವ ‘ಬೌದ್ಧ’ ಮತ್ತು ‘ಉದ್ಯಾನ’ ಇವೆರಡೂ ಸಂಸ್ಕೃತ ಪದಗಳು! ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಿಗೆ, ಮತ್ತು ಅವರಿಗಿಂತಲೂ ಹೆಚ್ಚಾಗಿ ಕನ್ನಡಪರ ಹೋರಾಟಗಾರ ರೆಂಬ ಸೋಗಿನ ಸಂಸ್ಕೃತದ್ವೇಷಿಗಳಿಗೆ ಇವು ಅದುಹೇಗೆ ಜೀರ್ಣವಾಗುತ್ತವೋ ಗೊತ್ತಿಲ್ಲ.
ಇರಲಿ, ಕುವೆಂಪು ನಾಡಗೀತೆಯಲ್ಲಿ ‘ತೋಟ’ ಬಳಸಿದ್ದಾರೆ; ‘ಉದ್ಯಾನ’ ಬಳಸಿದ್ದಾರೆ; ಅದೇ ಅರ್ಥದ ಇನ್ನೂ ಒಂದು ಪದ ಬಳಸಿದ್ದಾರೆ. ಯಾವುದು ಗೊತ್ತೇ? ತೋಟ, ಉದ್ಯಾನಗಳ ಬಳಿಕ ಅದೇ ಚರಣದಲ್ಲಿ “ಗಾಯಕ ವೈಣಿಕರಾರಾಮ" ಎಂಬ ಸಾಲಿದೆಯಲ್ವಾ, ಗಾಯಕರ ಮತ್ತು ವೈಣಿಕರ ‘ಆರಾಮ’ ಅಂದರೆ ತೋಟ ಅಥವಾ ಉದ್ಯಾನ ಎಂದೇ ಅರ್ಥ. ಅದು ಕೂಡ ಸಂಸ್ಕೃತ ಭಾಷೆಯ ಪದವೇ. ಸಂಸ್ಕೃತದಲ್ಲಿ ತೋಟ ಅಥವಾ ಉದ್ಯಾನ ಎಂಬರ್ಥದ ಅನೇಕ ಪರ್ಯಾಯಪದಗಳಿವೆ.
ಅಮರಕೋಶದಲ್ಲಿ ವನೌಷಧಿ ವರ್ಗ ವಿಭಾಗದಲ್ಲಿ ಮೂರು ಪೂರ್ಣ ಶ್ಲೋಕಗಳ ತುಂಬ ಹಸಿಹಸಿರು ವನರಾಜಿಯೇ ತುಂಬಿದೆ! ಆ ಶ್ಲೋಕಗಳು ಹೀಗಿವೆ: “ಅಟವ್ಯರಣ್ಯಂ ವಿಪಿನಂ ಗಹನಂ ಕಾನನಂ ವನಮ್| ಮಹಾರಣ್ಯಮರಣ್ಯಾನೀ ಗೃಹಾರಾಮಸ್ತು ನಿಷ್ಕುಟಃ||", “ಆರಾಮಃ ಸ್ಯಾದುಪವನಂ ಕೃತ್ರಿಮಂ ವನಮೇವ ಯತ್| ಅಮಾತ್ಯಗಣಿಕಾಗೇಹೋಪವನೇ ವೃಕ್ಷವಾಟಿಕಾ||", ಮತ್ತು “ಪುಮಾನಾ ಕ್ರೀಡ ಉದ್ಯಾನಂ ರಾಜ್ಞಸ್ಸಾಧಾರಣಂ ವನಮ್| ಸ್ಯಾದೇತದೇವ ಪ್ರಮದವನ ಮಂತಃಪುರೋಚಿತಮ್||" ಇವುಗಳಲ್ಲಿ ಹೇಳಿರುವುದೇನೆಂದರೆ- ಅಟವೀ, ಅರಣ್ಯ, ವಿಪಿನ, ಗಹನ, ಕಾನನ, ವನ - ಇವಿಷ್ಟೂ ಅಡವಿ ಎಂಬರ್ಥದವು. ಮಹಾರಣ್ಯ ಮತ್ತು ಅರಣ್ಯಾನೀ ದೊಡ್ಡ ಅಡವಿಗಳು. ಗೃಹಾರಾಮ ಮತ್ತು ನಿಷ್ಕುಟ ಇವು ಮನೆಯ ಬಳಿ ಇರುವ ತೋಟಗಳು.
ಆರಾಮ ಮತ್ತು ಉಪವನ ಅಂದರೆ ಗಿಡಮರಗಳನ್ನು ಬೆಳೆಸಿರುವ ಕೃತಕವಾದ ವನ. ವೃಕ್ಷವಾಟಿಕಾ ಅಂದರೆ ಅಮಾತ್ಯ(ಮಂತ್ರಿ), ವೇಶ್ಯೆ ಮುಂತಾದವರು ಮನೆಯ ಬಳಿ ಬೆಳೆಸಿರುವ ಉಪವನ. ಆಕ್ರೀಡ ಮತ್ತು ಉದ್ಯಾನ ಅಂದರೆ ರಾಜರು ವಿಹರಿಸುವ ಉಪವನ. ಪ್ರಮದವನ ಅಂದರೆ ಅಂತಃಪುರದ ಸ್ತ್ರೀಯರಿಗೋಸ್ಕರವೇ ಇರುವ ಉಪವನ. ಎಂತಹ ಶಬ್ದ ಶ್ರೀಮಂತಿಕೆ ಸಂಸ್ಕೃತದ್ದು! ಇವುಗಳ ಪೈಕಿ ‘ಉದ್ಯಾನ’ ಅತಿಹೆಚ್ಚು ಬಳಕೆಯಲ್ಲಿರುವುದು. ಉದ್ಯಾನ ಮತ್ತು ವನ ಒಂದೇ ಅರ್ಥವಾದರೂ ನಾವು ಕನ್ನಡಿಗರು ‘ಉದ್ಯಾನವನ’ ಎನ್ನುತ್ತೇವೆ- ಕಾಂಪೌಂಡ್‌ಗೋಡೆ ಎಂದಂತೆ, ಛಪ್ಪನ್ನೈವತ್ತಾರು ಎಂದಂತೆ, ಅವೆನ್ಯೂ ರಸ್ತೆ ಎಂದಂತೆ. ಕುವೆಂಪು ಸಮಸ್ತ ಕರ್ನಾಟಕವನ್ನೇ ಉದ್ಯಾನವೆಂದರು.
ಉದ್ಯಾನನಗರಿ (ಬೆಂಗಳೂರು) ಕರ್ನಾಟಕ ರಾಜ್ಯದ ರಾಜಧಾನಿ ಆಗುತ್ತದೆಂದು 1928ರಲ್ಲಿ ಅವರಿಗೆ ಅಂದಾಜಿತ್ತೋ ಇಲ್ಲವೋ. ಬೆಂಗಳೂರು ಮತ್ತು ಮುಂಬೈ ನಡುವೆ ಪ್ರತಿದಿನ ಓಡಾಡುವ ರೈಲೊಂದಕ್ಕೆ ‘ಉದ್ಯಾನ್ ಎಕ್ಸ್‌ಪ್ರೆಸ್’ ಎಂಬ ಹೆಸರಿಡಲಾಗುತ್ತದೆ ಎಂದು ಕೂಡ ಅವರು ಊಹಿಸಿರ ಲಿಕ್ಕಿಲ್ಲ. ಅಂದಹಾಗೆ ಉದ್ಯಾನ್ ಎಕ್ಸ್‌ಪ್ರೆಸ್ ರೈಲುಸೇವೆ ಆರಂಭವಾದದ್ದು 1983ರಲ್ಲಿ, ಕುವೆಂಪು ನಿಧನರಾಗುವುದಕ್ಕಿಂತ 11 ವರ್ಷಗಳ ಹಿಂದೆ ಎನ್ನುವುದು ಗಮನಾರ್ಹ. ಹಾಗೆಯೇ ಕುವೆಂಪು ಏನಾದರೂ ಅಮೆರಿಕದಲ್ಲಿ ಇರುತ್ತಿದ್ದರೆ ಇಲ್ಲಿ ನ್ಯೂಜೆರ್ಸಿ ರಾಜ್ಯಕ್ಕೆ ‘ಗಾರ್ಡನ್ ಸ್ಟೇಟ್’ ಎಂದು ಹೆಸರಿರುವುದರಿಂದ “ಜಯ ಹೇ ನ್ಯೂಜೆರ್ಸಿ ಮಾತೆ..." ಎನ್ನುತ್ತಿದ್ದರೇನೋ.
ಉದ್ಯಾನವೂ ತೋಟ ಪದದಂತೆಯೇ ಕೇಳಿದೊಡನೆಯೇ ಒಂಥರದ ಮನೋಲ್ಲಾಸ ಉಂಟುಮಾಡು ವಂಥದು. ಪುರಾಣಕಥೆಗಳಲ್ಲಿ ಏಳುಮಲ್ಲಿಗೆ ತೂಕದ ಚೆಂದುಳ್ಳಿ ಚೆಲುವೆ ರಾಜಕುಮಾರಿ ತನ್ನ ಸಖಿಯರೊಂದಿಗೆ ಉದ್ಯಾನದಲ್ಲಿ ವಿಹರಿಸುವುದು, ಅಲ್ಲಿಗೇ ಯಾರೋ ಸ್ಪುರದ್ರೂಪಿ ರಾಜಕುಮಾರನು ಕುದುರೆ ಮೇಲೆ ಬಂದು ಮೊದಲ ನೋಟದಲ್ಲೇ ಪ್ರೇಮಾಂಕುರ ಮೊಳಕೆಯೊಡೆ ಯುವುದು... ಚಂದಮಾಮದಲ್ಲಿ ಅಷ್ಟೇ ಅಲ್ಲ ಪೌರಾಣಿಕ ಸಿನೆಮಾ ಮತ್ತು ನಾಟಕಗಳಲ್ಲಿ ಸಾಮಾನ್ಯ ದೃಶ್ಯ.
ಶಕುಂತಲೆ ಮತ್ತು ದುಷ್ಯಂತನ ಚಿತ್ರಣ ಈಗ ನಿಮ್ಮ ಕಣ್ಮುಂದೆ ಬಂದರೆ ನಿಮ್ಮ ರಸಗ್ರಾಹಿ-ರಸಿಕತನದ ಸೂಚ್ಯಂಕ ಅತ್ಯಂತ ಆರೋಗ್ಯಕರ ಮಟ್ಟದಲ್ಲಿದೆ ಎಂದರ್ಥ. ಪುರಾಣಗಳ ಮಾತೇಕೆ, ಆಧುನಿಕ ಸಾಮಾಜಿಕ ಚಿತ್ರಗಳಲ್ಲೂ ಒಂದಾದರೂ ಡ್ಯೂಯಟ್ ಸಾಂಗು ಹೊರಾಂಗಣ ಉದ್ಯಾನ ದಲ್ಲಿ ಚಿತ್ರೀಕರಣವಾಗಿದ್ದರೇನೇ ಆ ಸಿನೆಮಾ ಸಾಂಗೋಪಾಂಗ ಎನಿಸುವುದು. ಬೆಂಗಳೂರಿನ ಲಾಲ್‌ಬಾಗ್ ಕಬ್ಬನ್‌ಪಾರ್ಕ್‌ಗಳಲ್ಲಿ ದಿನದ ಯಾವುದೇ ಹೊತ್ತಿನಲ್ಲಾದರೂ ಒಂದೆರಡಾದರೂ ಜೋಡಿಹಕ್ಕಿಗಳು ಪ್ರಣಯವಿನಿಮಯದಲ್ಲಿ ತೊಡಗಿದ್ದರೇನೇ ಆ ಉದ್ಯಾನಗಳ ಅಸ್ತಿತ್ವ ಸಾರ್ಥಕ ವೆನಿಸುವುದು.
ಇನ್ನು, ಸಾಹಿತ್ಯದಲ್ಲಿ ಆಲಂಕಾರಿಕವಾಗಿಯೂ ಉದ್ಯಾನದ ಕಲ್ಪನೆ ಸದಾ ಹಿತಕರವೇ. “ಪುಸ್ತಕ ವೆಂದರೆ ಜೇಬಿನೊಳಗೇ ಒಂದು ಪುಟ್ಟ ಉದ್ಯಾನವಿದ್ದಂತೆ" (A book is like a garden carried in the pocket ) ಎಂಬ ಚೈನೀಸ್ ನಾಣ್ಣುಡಿಯಿರಲಿ, “ಶ್ಲೇಷೋದ್ಯಾನದಿ ಶಬ್ದವ ಕಸಿಮಾಡಿ ಹೊಸತು ಪದಾರ್ಥವ ಬೆಳೆಸುವರು" ಎಂದು ಪ್ರೊ.ಅಕ್ಕಿಹೆಬ್ಬಾಳು ರಾಮಣ್ಣ ಮಿತ್ರರು ಪನ್-ಡಿತರ ಬಗ್ಗೆ ಹೇಳಿದ್ದಿರಲಿ, ಉದ್ಯಾನವೆಂದರೆ ಸದಾ ಉಲ್ಲಾಸವೇ. ಉದ್ಯಾನವೆಂದರೆ ಸದಾ ಉತ್ಸಾಹವೇ. ಉದ್ಯಾನ ವೆಂದರೆ ನಿಸ್ಸಂಶಯವಾಗಿ ಉತ್ಕೃಷ್ಟವೇ!