ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Leena Joshi Column: ಹೊಳೆವ ಹೋಟೆಲ್‌, ಕೊಳೆವ ಅಡುಗೆ ಮನೆ

ಗ್ರಾಹಕರ ಸಂಖ್ಯೆ ಹೆಚ್ಚುತ್ತಿರುವುದರಿಂದ, ಮನೆಯಲ್ಲಿ ಅಡುಗೆ ಮಾಡುವ ಆಸಕ್ತಿ ಕಡಿಮೆಯಾಗು ತ್ತಿರುವುದರಿಂದ, ಹೋಟೆಲ್ ಉದ್ಯಮ ಬಹಳ ಬೆಳೆಯುತ್ತಿದೆ. ಸುಂದರವಾದ ಒಳಾಂಗಣ ವಿನ್ಯಾಸ, ಆಕರ್ಷಕ ಬೆಳಕಿನ ವ್ಯವಸ್ಥೆ, ಅಚ್ಚುಕಟ್ಟಾದ ಮೇಜುಗಳು, ಆಕರ್ಷಕವಾಗಿ ಸಿದ್ಧಪಡಿಸಿದ ಆಹಾರ, ಬಣ್ಣಬಣ್ಣದ ಮೆನುಗಳು, ಸುಂದರವಾದ ಪ್ಯಾಕಿಂಗ್, ಎಲ್ಲವೂ ಗ್ರಾಹಕರನ್ನು ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ.

ಅಮೃತಕಾಲ

ಲೀನಾ ಜೋಶಿ

ಭಾರತದಲ್ಲಿ ಕೆಲ ವರ್ಷಗಳಿಂದ ವಿಚಿತ್ರವಾದ ಮನೋಭಾವ ಬೆಳೆದುಬಂದಿದೆ. ಯಾವುದೇ ಆಹಾರ ಪದಾರ್ಥವನ್ನು ಸುಂದರವಾದ ಡಬ್ಬಿಯಲ್ಲಿ ಹಾಕಿ, ಆಕರ್ಷಕವಾಗಿ ಪ್ಯಾಕ್ ಮಾಡಿ ಕೊಟ್ಟರೆ ಸಾಕು, ಗ್ರಾಹಕರು ಅದನ್ನು ಗುಣಮಟ್ಟದ ಆಹಾರವೆಂದು ನಂಬಿ ಸ್ವೀಕರಿಸುತ್ತಾರೆ. ಆಹಾರದ ರುಚಿ, ತಯಾರಿಸಿದ ಸ್ಥಳದ ಸ್ವಚ್ಛತೆ, ಬಳಸಿದ ಪದಾರ್ಥಗಳ ಗುಣಮಟ್ಟ ಇವೆಲ್ಲಕ್ಕಿಂತ ಹೊರಗಿನ ಆಕರ್ಷಣೆಗೆ ಹೆಚ್ಚು ಪ್ರಾಮುಖ್ಯತೆ. ಆಹಾರ ಉದ್ಯಮಕ್ಕೆ ಸೀಮಿತ ಮಾತ್ರವಲ್ಲ, ನಮ್ಮ ಸಮಾಜದಲ್ಲಿ ಹೊರನೋಟಕ್ಕೆ ಹೆಚ್ಚು ಮಹತ್ವ ಕೊಡುವ ಪ್ರವೃತ್ತಿಯ ಪ್ರತಿಬಿಂಬವೂ ಕೂಡ.

ಗ್ರಾಹಕರ ಸಂಖ್ಯೆ ಹೆಚ್ಚುತ್ತಿರುವುದರಿಂದ, ಮನೆಯಲ್ಲಿ ಅಡುಗೆ ಮಾಡುವ ಆಸಕ್ತಿ ಕಡಿಮೆಯಾಗು ತ್ತಿರುವುದರಿಂದ, ಹೋಟೆಲ್ ಉದ್ಯಮ ಬಹಳ ಬೆಳೆಯುತ್ತಿದೆ. ಸುಂದರವಾದ ಒಳಾಂಗಣ ವಿನ್ಯಾಸ, ಆಕರ್ಷಕ ಬೆಳಕಿನ ವ್ಯವಸ್ಥೆ, ಅಚ್ಚುಕಟ್ಟಾದ ಮೇಜುಗಳು, ಆಕರ್ಷಕವಾಗಿ ಸಿದ್ಧಪಡಿಸಿದ ಆಹಾರ, ಬಣ್ಣಬಣ್ಣದ ಮೆನುಗಳು, ಸುಂದರವಾದ ಪ್ಯಾಕಿಂಗ್, ಎಲ್ಲವೂ ಗ್ರಾಹಕರನ್ನು ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ.

ಹೋಟೆಲ್‌ನ ಹೊರನೋಟ ಎಷ್ಟು ಆಕರ್ಷಕವಾಗಿದೆಯೋ, ಅದರ ಅಡುಗೆಮನೆ ಕೂಡ ಅಷ್ಟೇ ಸ್ವಚ್ಛವಾಗಿದೆಯೇ ಎಂಬುದನ್ನು ಪರೀಶೀಲಿಸುವುದರಲ್ಲಿ ಜನರಿಗೆ ಆಸಕ್ತಿ ಕಡಿಮೆ. ಮನೆಯಲ್ಲಿ ಜನ ಹೇಗೆ ಬದುಕುತ್ತಾರೆ ಎಂಬುದನ್ನು ತಿಳಿಯಬೇಕಾದರೆ ಹಾಲ್ ನೋಡಬಾರದು; ಅವರ ಅಡುಗೆಮನೆ ಮತ್ತು ಶೌಚಾಲಯವನ್ನು ನೋಡಬೇಕು. ಅತಿಥಿಗಳನ್ನು ಸ್ವಾಗತಿಸುವ ಮನೆಯ ಹಾಲ್ ಸುಂದರವಾಗಿರುತ್ತದೆ.

ಇದನ್ನೂ ಓದಿ: Leena Joshi Column: ಪ್ರಧಾನಿಗಳ ಊಟದ ಬಟ್ಟಲಲ್ಲಿ ಏನಿರುತ್ತದೆ ?

ದುಬಾರಿ ಸೋಫಾಗಳು, ಪರದೆಗಳು, ಅಲಂಕಾರಿಕ ವಸ್ತುಗಳಿಂದ ಹಾಲ್ ಸದಾ ಆಕರ್ಷಣೀಯ. ಮನೆಯ ನಿಜವಾದ ಸ್ವಚ್ಛತೆ ಮತ್ತು ಶಿಸ್ತಿನ ಮಟ್ಟವನ್ನು ತೋರಿಸುವುದು ಅಡುಗೆಮನೆ ಮತ್ತು ಶೌಚಾಲಯ. ಇದೇ ತತ್ವ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಿಗೂ ಅನ್ವಯಿಸುತ್ತದೆ. ಹೋಟೆಲ್‌ಗೆ ಕಾಲಿಟ್ಟ ತಕ್ಷಣ ಕಣ್ಣಿಗೆ ಬೀಳುವ ಗಾಜಿನ ಕೌಂಟರ್‌ಗಳು, ಹೊಳೆಯುವ ತವಾ, ಸಮವಸ್ತ್ರ ಧರಿಸಿದ ಸಿಬ್ಬಂದಿ, ಗ್ರಾಹಕರ ಎದುರೇ ಹುಯ್ಯುವ ದೋಸೆ, ಬಿಸಿ ಬಿಸಿ ಇಡ್ಲಿ-ವಡೆ, ಪಾತ್ರೆಗಳಿಂದ ಬಡಿಸುವ ಸಾಂಬಾರ್, ಎದುರೇ ತಯಾರಾಗುವ ಫಿಲ್ಟರ್ ಕಾಫಿ, ಗ್ರಾಹಕರ ಕಣ್ಣೆದುರೇ ಮಸಾಲೆ ಬೆರೆಸಿ ಸಿದ್ಧಪಡಿಸುವ ಚಾಟ... ಇವೆಲ್ಲವೂ ಈಗಿನ ಹೋಟೆಲ್ ಉದ್ಯಮದ ಹೊಸ ಆಕರ್ಷಣೆ. ‘ಓಪನ್ ಕಿಚನ್’ ಎಂಬ ಹೆಸರಿನಲ್ಲಿ ಗ್ರಾಹಕರನ್ನು ಸೆಳೆಯುವ ಈ ಪರಿಕಲ್ಪನೆ, ಆಹಾರ ನಮ್ಮ ಕಣ್ಣೆದುರೇ ತಯಾರಾಗುತ್ತಿದೆ ಎಂಬ ನಂಬಿಕೆಯನ್ನು ಹುಟ್ಟಿಸುತ್ತದೆ.

ಅಡುಗೆ ನೋಡುತ್ತಾ ತಿನ್ನುವ ಖುಷಿ, ತಾಜಾ ಆಹಾರದ ಭರವಸೆ, ಶುಚಿತ್ವದ ಭಾವನೆ, ಗ್ರಾಹಕರನ್ನು ಇಂತಹ ಹೋಟೆಲ್‌ಗಳತ್ತ ಸೆಳೆಯುತ್ತವೆ. ಗ್ರಾಹಕರಿಗೆ ಕಾಣುವ ಅಡುಗೆಮನೆಯೇ ಹೋಟೆಲ್ ನ ಸಂಪೂರ್ಣ ಸತ್ಯವಲ್ಲ ಎಂಬುದು ಕೆಲವೇ ದಿನಗಳ ಹಿಂದೆ ಪುಣೆಯಲ್ಲಿ ಸಾಬೀತಾಯಿತು.

ಪುಣೆಯ ಪ್ರಸಿದ್ಧ ಫರ್ಗ್ಯುಸನ್ ರಸ್ತೆಯಲ್ಲಿರುವ, ದಶಕಗಳ ಇತಿಹಾಸ ಹೊಂದಿರುವ ಹೋಟೆಲ್ ವೈಶಾಲಿ ಮತ್ತು ರೂಪಾಲಿ ರೆಸ್ಟೋರೆಂಟ್‌ಗಳ ವಿರುದ್ಧ ಆಹಾರ ಸುರಕ್ಷತೆಯ ಗಂಭೀರ ಲೋಪಗಳ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ (FDA) ಕ್ರಮ ಕೈಗೊಂಡಿರುವ ವರದಿ ನಿಜಕ್ಕೂ ಬೆಚ್ಚಿ ಬೀಳಿಸುವಂತಹದ್ದು.

Leena Joshi 811

ಪುಣೆಯ ಜನಪ್ರಿಯ ಆಹಾರ ಸಂಸ್ಕೃತಿಯ ಹೆಗ್ಗುರುತುಗಳೆಂದೇ ಗುರುತಿಸಿಕೊಂಡಿದ್ದ ಸಂಸ್ಥೆಗಳ ಮೇಲೆ ಇಂತಹ ಕ್ರಮ ಕೈಗೊಳ್ಳಬೇಕಾದ ಪರಿಸ್ಥಿತಿ ಬಂದಿರುವುದು, ಹೋಟೆಲ್ ಉದ್ಯಮಕ್ಕೆ ಎಚ್ಚರಿಕೆಯ ಗಂಟೆ. ಪುಣೆಗೆ ಭೇಟಿ ನೀಡಿದಾಗ ಹಲವು ಬಾರಿ ಇವೆರಡೂ ಹೋಟೆಲ್‌ನಲ್ಲಿ ತಿಂದಿದ್ದ ನನಗೆ ಈ ಸುದ್ದಿ ನೋಡಿ ಹೊಟ್ಟೆ ತೊಳೆಸಿದಂತಾಗಿತ್ತು. ಅಧಿಕಾರಿಗಳ ಪರಿಶೀಲನೆಯ ವೇಳೆ ಮಹಿಳೆ ಯರ ಶೌಚಾಲಯದ ಪಕ್ಕದಲ್ಲಿ ಕಚ್ಚಾ ಪದಾರ್ಥಗಳ ಫ್ರೀಜರ್, ಪುರುಷರ ಶೌಚಾಲಯದ ಸಮೀಪ ಇಡ್ಲಿ-ದೋಸೆ ಹಿಟ್ಟು ಇಟ್ಟಿರುವುದು, ಬೇಯಿಸಿದ ಆಲೂಗಡ್ಡೆ ನೆಲದ ಮೇಲೆ, ಶೌಚಾಲಯಕ್ಕೆ ಎದುರಾಗಿರುವ ಮೇಜಿನ ಮೇಲೆ ತೊಳೆದ ಪಾತ್ರೆಗಳನ್ನು ಇರಿಸಿರುವುದು ಮುಂತಾದ ಗಂಭೀರ ಲೋಪಗಳು ವರದಿಯಾಗಿವೆ.

ಒಮ್ಮೆ ಈ ದೃಶ್ಯವನ್ನು ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಿ. ನೀವು ಹೋಟೆಲ್‌ಗೆ ಹೋಗಿ ಮಸಾಲೆ ದೋಸೆ ಆರ್ಡರ್ ಮಾಡುತ್ತೀರಿ. ನಿಮ್ಮ ಕಣ್ಣೆದುರೇ ಸಿಬ್ಬಂದಿ ದೋಸೆ ಹಿಟ್ಟನ್ನು ಕಾವಲಿಯ ಮೇಲೆ ಹರಡು ತ್ತಾರೆ, ತುಪ್ಪ ಸುರಿಯುತ್ತಾರೆ, ಆಲೂಗಡ್ಡೆ ಪಲ್ಯ ತುಂಬುತ್ತಾರೆ, ಚಟ್ನಿ ಸವರುತ್ತಾರೆ, ಸುಂದರವಾಗಿ ಮಡಚಿ ತಟ್ಟೆಗೆ ಹಾಕುತ್ತಾರೆ. ನೀವು ಆ ದೃಶ್ಯ ನೋಡಿ ಆಹಾರದ ತಾಜಾತನದ ಬಗ್ಗೆ ಸಂತೋಷ ಪಡುತ್ತೀರಿ. ಕಾವಲಿಯ ಮೇಲೆ ಹುಯ್ಯುವ ದೋಸೆ ಶುಚಿಯಾಗಿರುವುದರಿಂದ ಮಾತ್ರ ಆಹಾರ ಸುರಕ್ಷಿತವಾಗುವುದಿಲ್ಲ. ಆ ದೋಸೆಯ ಹಿಟ್ಟು ಎಲ್ಲಿ, ಹೇಗೆ, ಯಾವ ಪರಿಸರದಲ್ಲಿ ತಯಾರಾಗಿ ಸಂಗ್ರಹಿಸಲ್ಪಟ್ಟಿದೆ ಎಂಬುದೂ ಅಷ್ಟೇ ಮುಖ್ಯ.

ಗ್ರಾಹಕರ ಎದುರೇ ಅಡುಗೆ ಮಾಡುವುದನ್ನು ತೋರಿಸುವುದು ಸುಲಭ, ಆಹಾರ ತಯಾರಿಕೆಯ ಹಿಂದಿನ ಹಂತಗಳಲ್ಲಿಯೂ ಅದೇ ಮಟ್ಟದ ಸ್ವಚ್ಛತೆ ಕಾಪಾಡುವುದು ಮುಖ್ಯ. ಇಂದು ಹೋಟೆಲ್‌ ಗಳಲ್ಲಿ ಆಹಾರದ ಪ್ರದರ್ಶನಕ್ಕೆ ದೊಡ್ಡ ಮಹತ್ವ ನೀಡಲಾಗುತ್ತಿದೆ. ಆಕರ್ಷಕ ಪಾತ್ರೆಗಳು, ಗಾಜಿನ ಕೌಂಟರ್‌ಗಳು, ಹೊಳೆಯುವ ಕಾವಲಿ, ಸುಂದರ ಬೆಳಕು, ಅಡುಗೆ ಮಾಡುವ ಸಿಬ್ಬಂದಿಯ ಚಲನವಲನ, ಸಕಲವೂ ಗ್ರಾಹಕರಿಗೆ ಅವರ್ಣನೀಯ ಅನುಭೂತಿಯನ್ನು ನೀಡುತ್ತವೆ.

ಅಡುಗೆಮನೆಯ ಹಿಂಭಾಗದಲ್ಲಿ ಏನಾಗುತ್ತಿದೆ ಎಂಬ ಕಲ್ಪನೆಯೂ ಗ್ರಾಹಕರಿಗಿರುವುದಿಲ್ಲ. ದೋಸೆ ಹಿಟ್ಟು ರುಬ್ಬುವ ಜಾಗ ಹೇಗಿದೆ, ತರಕಾರಿಗಳನ್ನು ಎಲ್ಲಿ ತೊಳೆಯಲಾಗುತ್ತದೆ, ಬೇಯಿಸಿದ ಆಲೂಗಡ್ಡೆಗಳನ್ನು ಎಲ್ಲಿ ಇಡುತ್ತಾರೆ, ಸಲಾಡ್‌ಗೆ ಬೇಕಾಗುವ ಹಸಿ ತರಕಾರಿಗಳನ್ನು ಇಡುವ ಜಾಗವೆಲ್ಲಿ, ಚಟ್ನಿಗೆ ಬಳಸುವ ತೆಂಗಿನಕಾಯಿಯ ಆಯುಷ್ಯ ಮುಗಿದಿದೆಯೇ, ಹಾಲು ಮತ್ತು ಮೊಸರು ಸರಿಯಾದ ತಾಪಮಾನದಲ್ಲಿ ಇವೆಯೇ? ಮಜ್ಜಿಗೆಗೆ ಬಳಸುವ ನೀರಿನ ಮೂಲ ಯಾವುದು? ಪಾತ್ರೆಗಳನ್ನು ಎಲ್ಲಿ ಮತ್ತು ಹೇಗೆ ತೊಳೆಯಲಾಗುತ್ತದೆ? ಕಸವನ್ನು ಹೇಗೆ ವಿಲೇವಾರಿ ಮಾಡಲಾಗು ತ್ತದೆ? ಕೀಟ ನಿಯಂತ್ರಣ ಇದೆಯೇ? ಇವೆಲ್ಲವೂ ತೆರೆಮರೆಯಲ್ಲಿ ನಡೆಯುತ್ತದೆ.

ವೈಶಾಲಿ ಮತ್ತು ರೂಪಾಲಿ ಹೋಟೆಲಿನ ಪ್ರಕರಣದ ಪರಿಶೀಲನೆಯಲ್ಲಿ ಕೀಟಗಳಿಗೆ ತೆರೆದುಕೊಂಡ ಆಹಾರ ಪದಾರ್ಥಗಳು, ಕಳಪೆ ತ್ಯಾಜ್ಯ ನಿರ್ವಹಣೆ, ಇಕ್ಕಟ್ಟಾದ ಅಡುಗೆಮನೆ ಹಾಗೂ ಆಹಾರ ಸುರಕ್ಷತಾ ದಾಖಲೆ ಮತ್ತು ಸಿಬ್ಬಂದಿ ತರಬೇತಿಯ ಕೊರತೆ ಮುಂತಾದ ಲೋಪಗಳೂ ಕಂಡು ಬಂದಿವೆಯೆಂದು ವರದಿಯಾಗಿದೆ.

ಪಾರದರ್ಶಕ ವಾತಾವರಣ ಗ್ರಾಹಕರಿಗೆ ಬಡಿಸುವದನ್ನು ತೋರಿಸುತ್ತದೆ, ಅಡುಗೆಮನೆಯ ಪ್ರತಿಯೊಂದು ಮೂಲೆಯ ಸ್ವಚ್ಛತೆಯ ಖಾತರಿ ನೀಡುವುದಿಲ್ಲ. ವೈಶಾಲಿ ಮತ್ತು ರೂಪಾಲಿ ಸಾಮಾನ್ಯ ಹೋಟೆಲ್ ಗಳಲ್ಲ. ದಶಕಗಳಿಂದ ಜನಪ್ರಿಯತೆ ಗಳಿಸಿ, ಪುಣೆಯ ಆಹಾರ ಸಂಸ್ಕೃತಿ ಯಲ್ಲಿ ಛಾಪು ಮೂಡಿಸಿದ್ದವು. ಗಂಟೆಗಟ್ಟಲೆ ಸರದಿಯಲ್ಲಿ ಜನ ನಿಂತು ಊಟ ಮಾಡುತ್ತಿದ್ದ ಪ್ರಸಿದ್ಧ ಹೋಟೆಲ್‌ನಲ್ಲಿಯೇ ಹೀಗಾಗಬಹುದೇ ಎಂಬುದನ್ನು ಒಪ್ಪಲು ಮನಸ್ಸು ಬರುತ್ತಿಲ್ಲ .

ಇಷ್ಟು ಜನ ಹೋಗುವ ಜಾಗದಲ್ಲಿ ಆಹಾರ ಸುರಕ್ಷತೆಯ ಲೋಪಗಳಿರಬಹುದೇ? ನಾವು ಇಷ್ಟು ವರ್ಷ ತಿಂದ ಆಹಾರದ ಬಗ್ಗೆ ಏನು ಹೇಳಬೇಕು? ನೂರಾರು ಪ್ರಶ್ನೆಗಳು ಗ್ರಾಹಕರ ಮನಸ್ಸಿನಲ್ಲಿ ಮೂಡುವುದು ಸಹಜ. ಹೋಟೆಲ್‌ನ ಜನಪ್ರಿಯತೆ, ವರ್ಷಗಳ ಇತಿಹಾಸ, ಗ್ರಾಹಕರ ಸಾಲು, ಪ್ರಸಿದ್ಧ ವ್ಯಕ್ತಿಗಳ ಭೇಟಿ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ವಿಡಿಯೋಗಳು, ರೀಲ್ಸ್ ಗಳು- ಇವು ಯಾವುದೂ ಆಹಾರ ಸುರಕ್ಷತೆಯ ಪ್ರಮಾಣಪತ್ರಗಳಲ್ಲ.‌

ಬ್ರ್ಯಾಂಡ್ ದೊಡ್ಡದಿರಬಹುದು; ಆಹಾರ ಸುರಕ್ಷತೆಯ ನಿಯಮಗಳು ಎಲ್ಲರಿಗೂ ಒಂದೇ. ವರದಿಗಳ ಪ್ರಕಾರ, ವೈಶಾಲಿ ಹೋಟೆಲ್‌ಗೆ ಜೂನ್ ತಿಂಗಳಲ್ಲಿಯೇ ಸುಧಾರಣಾ ನೋಟಿಸ್ ನೀಡಲಾಗಿತ್ತು. ನಂತರವೂ ಲೋಪಗಳು ಮುಂದುವರಿದ ಹಿನ್ನೆಲೆಯಲ್ಲಿ ನವೆಂಬರ್‌ನಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗಿದೆ. ದಶಕಗಳ ಕಾಲ ತನ್ನ ರುಚಿಯಿಂದ ಸೆಳೆದ ವಿಶ್ವಾಸವನ್ನು, ಆಹಾರ ಸುರಕ್ಷತೆಯ ನಿರ್ಲಕ್ಷ್ಯದಿಂದ ಒಂದೇ ಕ್ಷಣದಲ್ಲಿ ಕಳೆದುಕೊಂಡಿತು.

ಹೋಟೆಲ್ ಉದ್ಯಮದಲ್ಲಿ ಗ್ರಾಹಕರ ವಿಶ್ವಾಸವೇ ದೊಡ್ಡ ಬಂಡವಾಳ. ಅದನ್ನು ಗಾಜಿನ ಗೋಡೆ, ದುಬಾರಿ ಒಳಾಂಗಣ ವಿನ್ಯಾಸ, ಆಕರ್ಷಕ ಮೆನುಗಳಿಂದ ಖರೀದಿಸಲು ಸಾಧ್ಯವಿಲ್ಲ. ಓಪನ್ ಕಿಚನ್ ಒಂದು ಒಳ್ಳೆಯ ಪರಿಕಲ್ಪನೆ. ಗ್ರಾಹಕರಿಗೆ ಅಡುಗೆ ತಯಾರಿಕೆಯನ್ನು ತೋರಿಸುವುದು ಪಾರದರ್ಶಕತೆಯ ಸಂಕೇತವಾಗಬಹುದು. ಅದನ್ನು ಕೇವಲ ಮಾರ್ಕೆಟಿಂಗ್ ತಂತ್ರವಾಗಿ ಬಳಸಿಕೊಂಡು, ಕಾಣದ ಪ್ರದೇಶಗಳಲ್ಲಿ ಸ್ವಚ್ಛತೆಯನ್ನು ನಿರ್ಲಕ್ಷಿಸಿದರೆ ಅದು ಗ್ರಾಹಕರ ವಿಶ್ವಾಸದೊಂದಿಗೆ ಮಾಡುವ ಆಟವಾಗುತ್ತದೆ. ಗ್ರಾಹಕರು ದೋಸೆ ತಯಾರಾಗುವುದನ್ನು ನೋಡುತ್ತಾರೆ, ದೋಸೆ ಹಿಟ್ಟಿನ ಜನ್ಮಸ್ಥಾನವನ್ನು ನೋಡುವುದಿಲ್ಲ.

ಗ್ರಾಹಕರು ಕಾಫಿ ತಯಾರಾಗುವುದನ್ನು ನೋಡುತ್ತಾರೆ, ಹಾಲು ಎಲ್ಲಿ ಸಂಗ್ರಹಿಸಲಾಯಿತು ಎಂಬುದನ್ನು ನೋಡುವುದಿಲ್ಲ. ಗ್ರಾಹಕರು ಚಾಟ್‌ಗೆ ಮಸಾಲೆ ಬೆರೆಸುವುದನ್ನು ನೋಡುತ್ತಾರೆ. ಪೂರಿಯ ಉಗಮ ಸ್ಥಾನವನ್ನು ನೋಡುವುದಿಲ್ಲ. ಗ್ರಾಹಕರ ಕಣ್ಣಿಗೆ ಕಾಣುವ ಅಡುಗೆಮನೆಯೇ ಸ್ವಚ್ಛತೆಯ ಸಂಪೂರ್ಣ ಕಥೆಯೆಂದು ನಂಬುವುದು ಕಷ್ಟ. ಆಹಾರ ಸುರಕ್ಷತೆ ಎಂದರೆ ಅಧಿಕಾರಿಗಳು ತಪಾಸಣೆಗೆ ಬಂದಾಗ ಮಾತ್ರ ನೆಲ ಒರೆಸುವುದು, ಪಾತ್ರೆಗಳನ್ನು ಜೋಡಿಸುವುದು, ಆಹಾರ ಮುಚ್ಚಿಡುವುದಲ್ಲ.

ಪ್ರತಿದಿನ, ಪ್ರತಿಯೊಂದು ಖಾದ್ಯ ತಯಾರಿಸುವಾಗ ಪಾಲಿಸಬೇಕಾದ ಶಿಸ್ತು. ಆಹಾರ ಪರಿಶೀಲನಾ ಅಧಿಕಾರಿಗಳೂ ಪ್ರಸಿದ್ಧ ಹೋಟೆಲ್ ಗಳಾಗಲಿ, ರಸ್ತೆ ಬದಿಯ ಹೋಟೆಲ್‌ಗಳಾಗಲಿ, ಒಂದೇ ರೀತಿಯ ಮಾನದಂಡಗಳನ್ನು ಅನ್ವಯಿಸಬೇಕು. ಜನಪ್ರಿಯತೆ ಮತ್ತು ವ್ಯವಹಾರದ ಗಾತ್ರ ಆಹಾರ ಸುರಕ್ಷತೆಯ ವಿಚಾರದಲ್ಲಿ ರಿಯಾಯಿತಿ ಪಡೆಯುವ ಕಾರಣವಾಗಬಾರದು. ಅಡುಗೆಮನೆ ತೆರೆದಿರಲಿ ಅಥವಾ ಮುಚ್ಚಿರಲಿ, ಆಹಾರ ಸುರಕ್ಷತೆಯಲ್ಲಿ ಮಾತ್ರ ಯಾವುದೇ ಮುಚ್ಚುಮರೆ ಇರಬಾರದು ಅಷ್ಟೇ.