ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Lokesh Kayarga Column: ಕರ್ನಾಟಕದಲ್ಲೊಂದು ಗುಟ್ಕಾ ನಿಷೇಧ ಪ್ರಹಸನ !

ದೇಶದಲ್ಲಿ ಗುಟ್ಕಾ ಹಾಗೂ ಪಾನ್ ಮಸಾಲಾ ನಿಷೇಧ ಜಾರಿಯಾಗಿ ಒಂದೂವರೆ ದಶಕವೇ ಕಳೆದಿದೆ. ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ 2011ರ ಆಗಸ್ಟ್‌ನಲ್ಲಿ ಕೇಂದ್ರ ಆಹಾರ ಸುರಕ್ಷತೆ ಮತ್ತು ಗುಣ ಮಟ್ಟ ಕಾಯ್ದೆ 2006ರಡಿ ಹೊರಡಿಸಲಾದ ಆದೇಶದಡಿ ಯಾವುದೇ ಆಹಾರ ಉತ್ಪನ್ನಗಳಲ್ಲಿ ತಂಬಾಕು ಮತ್ತು ನಿಕೋಟಿನ್ ಅನ್ನು ಕಚ್ಚಾವಸ್ತುವಾಗಿ ಬಳಸುವಂತಿಲ್ಲ. ಸದ್ಯ ರಾಜ್ಯ ಆರೋಗ್ಯ ಇಲಾಖೆ ಹೊರಡಿಸಿರುವುದು ವಾರ್ಷಿಕ ನಿಷೇಧ ನವೀಕರಣದ ಆದೇಶವನ್ನೇ ಹೊರತು, ಇದೇ ಮೊದಲ ಬಾರಿಗೆ ನಿಷೇಧ ಹೇರುತ್ತಿರುವುದಲ್ಲ.

ಲೋಕಮತ

ಕರ್ನಾಟಕದಲ್ಲಿ ಕಳೆದ ಒಂದು ವಾರದಿಂದೀಚೆಗೆ ಗುಟ್ಕಾ ಮತ್ತು ಪಾನ್‌ಮಸಾಲಾ ನಿಷೇಧದ ವಿಚಾರದಲ್ಲಿ ದೊಡ್ಡ ಮಟ್ಟದ ಪ್ರಹಸನವೊಂದು ನಡೆಯುತ್ತಿದೆ. ವಿಪರ್ಯಾಸ ಎಂದರೆ ಮುಖ್ಯ ಮಂತ್ರಿಗಳು, ಆರೋಗ್ಯ ಸಚಿವರು, ಅಡಕೆ ಬೆಳೆಯುವ ಪ್ರದೇಶದ ಜನಪ್ರತಿನಿಧಿಗಳು, ಮಾಧ್ಯಮಗಳು, ಸೋಶಿಯಲ್ ಮೀಡಿಯಾ ಸೇರಿ ಎಲ್ಲರೂ ಈ ಪ್ರಹಸನದಲ್ಲಿ ಭಾಗಿಗಳಾಗಿದ್ದಾರೆ !

ಕಳೆದ ವಾರ ರಾಜ್ಯ ಸರಕಾರದ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು (ಆರೋಗ್ಯ ಇಲಾಖೆ) ರಾಜ್ಯಾದ್ಯಂತ ತಂಬಾಕು ಮತ್ತು ನಿಕೋಟಿನ್ ಅಂಶವಿರುವ ಗುಟ್ಕಾ ಹಾಗೂ ಪಾನ್ ಮಸಾಲಾದ ಉತ್ಪಾದನೆ, ಸಂಗ್ರಹಣೆ, ಸಾಗಾಟ ಮತ್ತು ಮಾರಾಟವನ್ನು ಒಂದು ವರ್ಷದ ಮಟ್ಟಿಗೆ ನಿಷೇಧಿಸಿ ಆದೇಶ ಹೊರಡಿಸಿತ್ತು. ತಕ್ಷಣವೇ ಅಡಕೆ ಬೆಳೆಯವ ಪ್ರದೇಶದ ಜನಪ್ರತಿನಿಧಿಗಳು, ಸಿಎಂ ಡಿಕೆಶಿ ಅವರನ್ನು ಭೇಟಿ ಮಾಡಿ ಈ ಆದೇಶವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದ್ದರು.

ಮರುದಿನವೇ ಮಲೆನಾಡು ಮತ್ತು ಕರಾವಳಿ ಭಾಗದ ಅಡಕೆ ಬೆಳೆಗಾರರ ಹಿತದೃಷ್ಟಿಯಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಆದೇಶವನ್ನು ವಾಪಸ್ ಪಡೆದಿದ್ದಾರೆಂದು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ, ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಗುಟ್ಕಾ ನಿಷೇಧ ಆದೇಶವನ್ನು ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದರು.

ತಂಬಾಕು ಮತ್ತು ನಿಕೋಟಿನ್ ಮಿಶ್ರಿತ ಗುಟ್ಕಾ ಸೇವನೆಯು ಬಾಯಿ ಕ್ಯಾನ್ಸರ್, ಹೃದಯ ಕಾಯಿಲೆ ಗಳಂತಹ ಮಾರಣಾಂತಿಕ ರೋಗಗಳಿಗೆ ಪ್ರಮುಖ ಕಾರಣವಾಗಿದೆ. ನಿಷೇಧವನ್ನು ವಿರೋಧಿಸುವ ಜನಪ್ರತಿನಿಧಿಗಳು ಒಮ್ಮೆ ಕಿದ್ವಾಯಿ ಆಸ್ಪತ್ರೆಗೆ ಭೇಟಿ ನೀಡಿ ಕ್ಯಾನ್ಸರ್ ರೋಗಿಗಳ ಪರದಾಟವನ್ನು ಕಣ್ಣಾರೆ ನೋಡಲಿ ಎಂದು ಸಚಿವರು ತಿರುಗೇಟು ನೀಡಿದ್ದರು. ಆದರೆ ವಾಸ್ತವ ಬೇರೆಯೇ ಇದೆ.

ಇದನ್ನೂ ಓದಿ: Lokesh Kayarga Column: ಸ್ವಚ್ಛತೆ ಜತೆ ಶೌಚಾಲಯ ಅಭಿಯಾನವೂ ಮುಖ್ಯ

ಇಡೀ ದೇಶದಲ್ಲಿ ಗುಟ್ಕಾ ಹಾಗೂ ಪಾನ್ ಮಸಾಲಾ ನಿಷೇಧ ಜಾರಿಯಾಗಿ 13 ವರ್ಷಗಳೇ ಕಳೆದಿವೆ. ಸುಪ್ರೀಂ ಕೋರ್ಟ್ ನೀಡಿದ ಕಟ್ಟುನಿಟ್ಟಿನ ನಿರ್ದೇಶನದ ಮೇರೆಗೆ ಭಾರತದ ಎಲ್ಲಾ 28 ರಾಜ್ಯಗಳು ಹಾಗೂ 8 ಕೇಂದ್ರಾಡಳಿತ ಪ್ರದೇಶಗಳಲ್ಲಿ ತಂಬಾಕು ಮತ್ತು ನಿಕೋಟಿನ್‌ಯುಕ್ತ ಗುಟ್ಕಾ ಹಾಗೂ ಪಾನ್ ಮಸಾಲಾವನ್ನು ಅಧಿಕೃತವಾಗಿ ನಿಷೇಧಿಸಲಾಗಿದೆ.

2011ರ ಆಗಸ್ಟ್‌ನಲ್ಲಿ ಕೇಂದ್ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006ರಡಿ ಹೊರಡಿಸ ಲಾದ ಆದೇಶದಡಿ ಯಾವುದೇ ಆಹಾರ ಉತ್ಪನ್ನಗಳಲ್ಲಿ ತಂಬಾಕು ಮತ್ತು ನಿಕೋಟಿನ್ ಅನ್ನು ಕಚ್ಚಾವಸ್ತುವಾಗಿ ಬಳಸುವಂತಿಲ್ಲ. ಗುಟ್ಕಾ ಮತ್ತು ಪಾನ್ ಮಸಾಲಾವನ್ನು ಬಾಯಿಯಲ್ಲಿ ಅಗಿದು ತಿನ್ನುವುದರಿಂದ ಸುಪ್ರೀಂ ಕೋರ್ಟ್ ಇದನ್ನು ‘ಆಹಾರ’ ಎಂದೇ ಪರಿಗಣಿಸಿದೆ. ಅಂದರೆ, ಕಾಗದದ ಮೇಲಿನ ಕಾನೂನಿನ ಪ್ರಕಾರ ಇದು ದೇಶಾದ್ಯಂತ ಜಾರಿಯಲ್ಲಿದೆ.

ಜಾರಿಯಾಗದ ಯಾವುದೇ ರಾಜ್ಯ ಭಾರತದಲ್ಲಿಲ್ಲ . ಆದರೆ ಕದ್ದುಮುಚ್ಚಿ ಮಾರಾಟ, ಟ್ವಿನ್ ಪ್ಯಾಕ್ ತಂತ್ರಗಳ ಮೂಲಕ ಕಳ್ಳದಾರಿ ಹಿಡಿಯುವುದು ಎಲ್ಲಾ ರಾಜ್ಯಗಳಲ್ಲೂ ನಡೆಯುತ್ತಿದೆ. ಕರ್ನಾಟಕದ ವಿಷಯಕ್ಕೆ ಬಂದರೆ 2013ರ ಮೇ ತಿಂಗಳಲ್ಲಿ ಇಲ್ಲೂ ಗುಟ್ಕಾ ಮತ್ತು ಪಾನ್ ಮಸಾಲಾ ಮಾರಾಟವನ್ನು ಇಲ್ಲೂ ಅಧಿಕೃತವಾಗಿ ನಿಷೇಧಿಸಲಾಗಿತ್ತು.

adike ok

ಹೀಗಾಗಿ ತಂಬಾಕು ಮತ್ತು ನಿಕೋಟಿನ್‌ಯುಕ್ತ ಗುಟ್ಕಾ ಮತ್ತು ಪಾನ್‌ಮಸಾಲಾಕ್ಕೆ ನಿಷೇಧ ಆದೇಶ ಎಂದಾಕ್ಷಣ ಯಾರೂ ಬೆಚ್ಚಿ ಬೀಳುವ ಅಗತ್ಯವೇ ಇರಲಿಲ್ಲ. ಹಾಗಾದರೆ ಈಗೇಕೆ ಮತ್ತೆ ಒಂದು ವರ್ಷದ ಮಟ್ಟಿಗೆ ನಿಷೇಧ ಎಂಬ ಹೊಸ ಆದೇಶ ಹೊರಬಿದ್ದಿದೆ? ಇದಕ್ಕೆ ಒಂದು ತಾಂತ್ರಿಕ/ಕಾನೂನಾತ್ಮಕ ಕಾರಣವಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006 ರ ಸೆಕ್ಷನ್ 30(2) (ಎ) ಅನ್ವಯ, ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ರಾಜ್ಯದ ಆಹಾರ ಸುರಕ್ಷತಾ ಆಯುಕ್ತರು ಯಾವುದೇ ಆಹಾರ ವಸ್ತುವನ್ನು ನಿಷೇಧಿಸಬಹುದು.

ಆದರೆ, ಈ ಅಧಿಕಾರದ ಅಡಿಯಲ್ಲಿ ಹೊರಡಿಸುವ ಯಾವುದೇ ನಿಷೇಧ ಆದೇಶವು ಗರಿಷ್ಠ ಒಂದು ವರ್ಷದ ಅವಧಿಗೆ ಮಾತ್ರ ಸೀಮಿತವಾಗಿರುತ್ತದೆ. ನಿಷೇಧವನ್ನು ಮುಂದುವರಿಸಲು ಕರ್ನಾಟಕವೂ ಸೇರಿ ಪ್ರತಿಯೊಂದು ರಾಜ್ಯಸರಕಾರವೂ ಈ ನಿಷೇಧದ ಅಧಿಸೂಚನೆಯನ್ನು ಕಡ್ಡಾಯವಾಗಿ ನವೀಕರಿಸುತ್ತಲೇ ಇರಬೇಕಾಗುತ್ತದೆ. ಸದ್ಯ ರಾಜ್ಯ ಆರೋಗ್ಯ ಇಲಾಖೆ ಹೊರಡಿಸಿರುವುದು ಇದೇ ವಾರ್ಷಿಕ ನವೀಕರಣದ ಆದೇಶವನ್ನೇ ಹೊರತು, ಇದೇ ಮೊದಲ ಬಾರಿಗೆ ನಿಷೇಧ ಹೇರುತ್ತಿರುವು ದಲ್ಲ. ಕೇಂದ್ರ ಆಹಾರ ಸುರಕ್ಷತಾ ಕಾಯ್ದೆಯ ಅಡಿಯಲ್ಲಿ ಕೇಂದ್ರದ ನಿಯಮಗಳನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸುವ ಸಂಪೂರ್ಣ ಕಾನೂನುಬದ್ಧ ಬಾಧ್ಯತೆ ರಾಜ್ಯ ಸರಕಾರಕ್ಕಿದೆ.

ಇದೇ ಕಾರಣಕ್ಕೆ ಸುಪ್ರೀಂ ಕೋರ್ಟ್ ಕೂಡ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಈ ಕಾನೂನನ್ನು ಜಾರಿಗೊಳಿಸುವಂತೆ ಈ ಹಿಂದೆ ಛೀಮಾರಿ ಹಾಕಿತ್ತು. ರಾಜ್ಯಸರಕಾರವು ಕೇಂದ್ರದ ಕಾನೂನನ್ನು ಪಾಲಿಸಲೇಬೇಕಾದ ಅನಿವಾರ್ಯತೆ ಯಲ್ಲಿರುವುದ ರಿಂದ, ಆರೋಗ್ಯ ಸಚಿವರು ಹೇಳಿದಂತೆ ಈ ನಿಷೇಧ ಆದೇಶವನ್ನು ಕಾನೂನಾತ್ಮಕವಾಗಿ ವಾಪಸ್ ಪಡೆಯುವುದು ರಾಜ್ಯಸರಕಾರಕ್ಕೆ ಅಸಾಧ್ಯದ ಮಾತಾಗಿದೆ. ಈ ಹಿನ್ನೆಲೆಯಲ್ಲಿ, ತನ್ನನ್ನು ಕೇಳದೆ ಇಂತಹ ಆದೇಶ ಹೊರಡಿಸಲಾಗಿದೆ ಎಂದು ಸಿಡಿಮಿಡಿಗೊಂಡಿದ್ದ ಸಿಎಂ ಕೂಡ ಈಗ ಮೌನ ತಾಳಿದ್ದಾರೆ. ಆದರೆ ರಾಜ್ಯ ಸರಕಾರ, ಇಲಾಖೆ, ನಮ್ಮ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಮಾಧ್ಯಮಗಳು ಸೇರಿ ಸದ್ಯದ ಮಟ್ಟಿಗೆ ಅಡಕೆ ಬೆಳೆಗಾರರನ್ನು ಮತ್ತೊಮ್ಮೆ ಆತಂಕಕ್ಕೆ ತಳ್ಳಿದ್ದಾರೆ.

ಭಾರತದ ಒಟ್ಟು ಅಡಕೆ ಉತ್ಪಾದನೆಯಲ್ಲಿ ನಮ್ಮ ರಾಜ್ಯದ ಪಾಲು ಶೇ.50ಕ್ಕಿಂತಲೂ ಹೆಚ್ಚಿದೆ. ಗುಟ್ಕಾ ಮತ್ತು ಪಾನ್ ಮಸಾಲಾದಲ್ಲಿ ಅಡಕೆಯೇ ಪ್ರಮುಖ ಕಚ್ಚಾವಸ್ತುವಾಗಿರುವುದರಿಂದ, ನಿಷೇಧದಿಂದ ಅಡಕೆಗೆ ಬೇಡಿಕೆ ಕುಸಿದು, ತಮ್ಮ ಆರ್ಥಿಕತೆ ಬುಡಮೇಲಾಗುತ್ತದೆ ಎಂಬುದು ರೈತರು ಹಾಗೂ ಮಲೆನಾಡು ಭಾಗದ ಶಾಸಕರಲ್ಲಿ ಬಲು ಹಿಂದಿನಿಂದಲೂ ಇರುವ ಆತಂಕ.

ಕಳೆದ 13 ವರ್ಷಗಳಲ್ಲಿ ಅಡಕೆಧಾರಣೆ ಏರುಗತಿಯಲ್ಲಿ ಸಾಗಿದೆಯೇ ವಿನಾ ಇಳಿಕೆ ಕಂಡಿಲ್ಲ. ಸರಕಾರದ ಆದೇಶವು ಕೇವಲ ‘ತಂಬಾಕು ಮತ್ತು ನಿಕೋಟಿನ್’ ಮಿಶ್ರಿತ ಉತ್ಪನ್ನಗಳಿಗೆ ಮಾತ್ರ ಅನ್ವಯಿಸುತ್ತದೆ. ತಂಬಾಕುರಹಿತವಾದ ಶುದ್ಧ ಪಾನ್ ಮಸಾಲಾ, ಅಡಕೆ ಪುಡಿ ಮತ್ತು ಸಾಂಪ್ರ ದಾಯಿಕ ತಾಂಬೂಲ ಬಳಕೆಗೆ ಯಾವುದೇ ನಿರ್ಬಂಧವಿಲ್ಲ. ಈ ನಿಷೇಧ ಆದೇಶ ಮುಂದಿಟ್ಟು ಕೊಂಡು ಮಾರುಕಟ್ಟೆಯಲ್ಲಿ ದಲ್ಲಾಳಿಗಳು ಮತ್ತು ವ್ಯಾಪಾರಸ್ಥರು ಕೃತಕವಾಗಿ ಬೆಲೆ ಇಳಿಸುವ ಪ್ರಯತ್ನಗಳನ್ನು ಆಗಾಗ ಮಾಡುತ್ತಲೇ ಇರುತ್ತಾರೆ.

ಆತಂಕಕ್ಕೆ ಕಾರಣಗಳಿವೆ

ಆದರೆ ಅಡಕೆ ಬೆಳೆಗಾರರು ಆತಂಕಪಡಲೇಬೇಕಾದ ವಿಷಯವಿದೆ. ಸದ್ಯದ ಕಾನೂನು ಪ್ರಕಾರ ಗುಟ್ಕಾ ಜತೆ ಅಡಕೆಯೂ ಅಪರಾಧಿ ಸ್ಥಾನದಲ್ಲಿ ನಿಂತಿದೆ. ಗುಟ್ಕಾ ಜತೆಗಿನ ಸಹವಾಸದ ಕಾರಣಕ್ಕಾಗಿ ಕ್ಯಾನ್ಸರ್‌ಕಾರಕ ಎಂಬ ಪಟ್ಟ ಹೊತ್ತುಕೊಂಡ ಅಡಕೆ ಈ ಕಳಂಕದಿಂದ ಇನ್ನೂ ಮುಕ್ತವಾಗಿಲ್ಲ. ಸುಪ್ರೀಂಕೋರ್ಟ್‌ನಲ್ಲಿ ಅಡಕೆ ಉತ್ಪನ್ನಗಳ ನಿಷೇಧ ಕೋರಿದ ಅರ್ಜಿಯ ವಿಚಾರಣೆ ಇನ್ನೂ ಮುಂದುವರಿದಿದೆ. ಕೇಂದ್ರ ಸರಕಾರ 2011ರ ಆಗಸ್ಟ್‌ನಲ್ಲಿ 1954ರ ಆಹಾರ ಕಲಬೆರಕೆ ತಡೆಕಾಯಿದೆ ಯ 42ನೆ ಸೆಕ್ಷನ್‌ಗೆ ತಿದ್ದುಪಡಿ ಮಾಡಿ ಗುಟ್ಕಾ ಮತ್ತು ಪಾನ್ ಮಸಾಲದ ಉತ್ಪಾದನೆ ಮತ್ತು ಮಾರಾಟವನ್ನು ನಿಷೇಧಿಸಿ ಹೊರಡಿಸಿದ ಆದೇಶದಲ್ಲಿ ಅಡಕೆಯ ಉಲ್ಲೇಖವೂ ಇದೆ.

ಸದ್ಯದ ಕಾನೂನು ಪ್ರಕಾರ ಗುಟ್ಕಾ ಇಲ್ಲವೇ ಪಾನ್ ಮಸಾಲ ಪ್ಯಾಕೆಟ್‌ನಲ್ಲಿ ತಂಬಾಕು ಮತ್ತು ಅಡಕೆಯನ್ನು ಮಿಶ್ರ ಮಾಡಿ ಮಾರಾಟ ಮಾಡುವುದು ಕ್ರಿಮಿನಲ್ ಅಪರಾಧ. ಕರ್ನಾಟಕ ಸೇರಿದಂತೆ ಎಲ್ಲ ರಾಜ್ಯಗಳು ಈ ಆದೇಶವನ್ನು ಜಾರಿಗೆ ತಂದಿವೆ. ಅಂದರೆ ಗುಟ್ಕಾ ಜತೆ ಅಡಕೆಯೂ ಕ್ಯಾನ್ಸರ್ ಕಾರಕ ಎಂಬ ಆರೋಪಕ್ಕೆ ಗುರಿಯಾಗಿದೆ.

ಅಡಕೆ ಬೆಳೆಗಾರರ ಸಂಘದ ಒತ್ತಡಕ್ಕೆ ಮಣಿದು ಕೇಂದ್ರ ಸರಕಾರವಾಗಲಿ, ರಾಜ್ಯ ಸರಕಾರವಾಗಲಿ ಅಡಕೆಯನ್ನು ನಿಷೇಧಿಸುವ, ತಂಬಾಕಿನಂತೆ ಬೆಳೆ ನಿಯಂತ್ರಿಸುವ ಕೆಲಸಕ್ಕೆ ಇನ್ನೂ ಕೈ ಹಾಕಿಲ್ಲ. ನಿಷೇಧದ ಹೊರತಾಗಿಯೂ ಗುಟ್ಕಾ ಮತ್ತು ಅಡಕೆ ಬೇರೆ, ಬೇರೆ ಸ್ವರೂಪದಲ್ಲಿ ಮಾರಾಟವಾಗುತ್ತಿದೆ. ಅಡಕೆಯ ಧಾರಣೆಯ ಮೇಲೂ ಈ ಆದೇಶ ಪರಿಣಾಮ ಬೀರಿಲ್ಲ. ಇದು ಬೇರೆ ಮಾತು. ಆದರೆ ಅಡಕೆ ಆರೋಗ್ಯಕ್ಕೆ ಪೂರಕವೇ, ಹಾನಿಕಾರಕವೇ ಎಂಬ ವಾದ ಎಂದೋ ಇತ್ಯರ್ಥವಾಗಬೇಕಿತ್ತು.

90ರ ದಶಕದಿಂದಲೂ ನಾನಾ ಸಂಶೋಧನೆಗಳು ಅಡಕೆಯ ಮೇಲೆ ಮುಗಿ ಬಿದ್ದಿವೆ. ಈ ಸಂಶೋಧನಾ ವರದಿಗಳನ್ನು ಉಲ್ಲೇಖಿಸಿ 2004ರಲ್ಲಿ ಅಂದಿನ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಹಾಯಕ ಸಚಿವೆ ಪನಬಾಕ ಲಕ್ಷ್ಮಿ ಅಡಕೆ ಕ್ಯಾನ್ಸರ್‌ಕಾರಕ (ಕಾರ್ಸಿನೋಜೆನ್) ಎಂದು ಸಂಸತ್ತಿಗೆ ತಿಳಿಸಿದ್ದರು.

ಅಡಕೆಯಲ್ಲಿ ಸಹಜ ಸಾರಜನಕ ಅಂಶವಿದ್ದು ಇದರಿಂದ ಬಾಯಿ ಮತ್ತು ಗಂಟಲು ಕ್ಯಾನ್ಸರ್ ಬರುವ ಸಾಧ್ಯತೆ ಇದೆ ಎಂದು ಸಚಿವೆ ಸಂಶೋಧನಾ ವರದಿ ಸಾರಾಂಶವನ್ನು ಉಲ್ಲೇಖಿಸಿದ್ದರು. ಈ ಕಾರಣದಿಂದಲೇ ಸುಪ್ರೀಂಕೋರ್ಟ್ ಗುಟ್ಕಾದ ಮೇಲೆ ನಿಷೇಧ ಹೇರಿದಾಗ ಅಡಕೆಯನ್ನೂ ಪಾಲುದಾರನನ್ನಾಗಿ ಸೇರಿಸಲಾಗಿತ್ತು.

ಇದೀಗ ಕೇಂದ್ರಸರಕಾರದ ನಿರ್ದೇಶನದ ಮೇರೆಗೆ ನಡೆಯತ್ತಿರುವ ಸಂಶೋಧನಾ ವರದಿ ಅಡಕೆ ಕ್ಯಾನ್ಸರ್ ಕಾರಕ ಅಲ್ಲ ಎಂದು ವರದಿ ನೀಡಿದರೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದನ್ನು ನಿರೂಪಿಸುವುದು ಸುಲಭದ ಕೆಲಸವಲ್ಲ. ಈ ನಿಟ್ಟಿನಲ್ಲಿ ಅಡಕೆ ಬೆಳೆಗಾರರ ಹೋರಾಟ ಸಾಕಷ್ಟು ಮುಂದೆ ಸಾಗಬೇಕಾಗಿದೆ. ಇತ್ತೀಚಿಗಿನ ವಿಶ್ವ ಆರೋಗ್ಯ ಸಂಸ್ಥೆಯ ವರದಿಯಲ್ಲಿ ಅಡಕೆ ಕ್ಯಾನ್ಸರ್ ಕಾರಕ ಎಂದು ಮತ್ತೊಮ್ಮೆ ಉಲ್ಲೇಖಿಸಲಾಗಿದೆ.

ಡಬ್ಲ್ಯುಎಚ್‌ಒ ಅಂಗಸಂಸ್ಥೆ ಇಂಟರ್ ನ್ಯಾಷನಲ್ ಏಜೆನ್ಸಿ ಫಾರ್ ಲ್ಯಾನ್ಸೆಟ್ ಅಂಕಾಲಜಿ’ ಎಂಬ ಅಂತಾರಾಷ್ಟ್ರೀಯ ಜರ್ನಲ್‌ನಲ್ಲಿ ಪ್ರಕಟವಾಗಿದೆ. ಡಬ್ಲ್ಯುಎಚ್‌ಒ ಅಂಗಸಂಸ್ಥೆ ಐಎಆರ್‌ಸಿ ಸಂಸ್ಥೆ ಬಾಯಿ ಕ್ಯಾನ್ಸರ್ ಬಗ್ಗೆ ಸಂಶೋಧನೆ ನಡೆಸುತ್ತಿದ್ದು, ಪ್ರತಿ ಐದು ವರ್ಷಗಳಿಗೊಮ್ಮೆ ವಿಶ್ವ ಕ್ಯಾನ್ಸರ್ ವರದಿ ಪ್ರಕಟಿಸುತ್ತದೆ. ಕ್ಯಾನ್ಸರ್‌ಗೆ ಕಾರಣವಾಗುವ ಅಭ್ಯಾಸಗಳ ಬಗ್ಗೆ ಉಲ್ಲೇಖಿಸುತ್ತಾ ಅಡಕೆ ಸೇವನೆಯೂ ಒಂದು ಕಾರಣ ಎಂದು ತಿಳಿಸಲಾಗಿದೆ.

ಜಾಗತಿಕವಾಗಿ ಸುಮಾರು 60 ಕೋಟಿ ಮಂದಿ ಅಡಕೆ ಬಳಸುತ್ತಾರೆ. ದಕ್ಷಿಣ ಮಧ್ಯ ಏಷ್ಯಾ, ಆಗ್ನೇಯ ಏಷ್ಯಾ ಮತ್ತು ಏಷ್ಯಾದ ಇತರೆ ದೇಶಗಳಲ್ಲಿ ಅಡಕೆ ಬಳಕೆಯಲ್ಲಿದೆ. ಇದೇ ಮೊದಲ ಬಾರಿಗೆ ಐಎಆರ್‌ಸಿ ವರದಿಯಲ್ಲಿ ತಂಬಾಕು ಮಿಶ್ರಿತ ಅಡಕೆ ಮಾತ್ರವಲ್ಲ, ನೇರವಾಗಿ ಅಡಕೆ ಬೆಳೆಯನ್ನು ನಿಯಂತ್ರಿಸಬೇಕೆಂಬ ಪ್ರಸ್ತಾಪವೂ ಇದೆ. ತನ್ನ ಪಕ್ಷದ ಶಾಸಕರು, ಸಂಸದರು ಹೆಚ್ಚಿನ ಸಂಖ್ಯೆಯಲ್ಲಿ ರುವ ಈ ಪ್ರದೇಶಗಳ ಹಿತ ಕಾಯುವ ಉದ್ದೇಶದಿಂದ ಕೇಂದ್ರ ಸರಕಾರ ದೇಶದ ಅತಿ ಉನ್ನತ 16 ಸಂಶೋಧನಾ ಕೇಂದ್ರಗಳಲ್ಲಿ ಅಡಕೆ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲು ಸೂಚನೆ ನೀಡಿದೆ.

ದೇಶದ ಯಾವುದೇ ಸಂಶೋಧನಾಲಯ ಈವರೆಗೆ ಅಡಕೆ ಕ್ಯಾನ್ಸರ್‌ಕಾರಕ ಎಂದು ವರದಿ ನೀಡಿಲ್ಲ. ಕರ್ನಾಟಕ ಮತ್ತು ಕೇರಳದ ಅಡಕೆ ಸಂಶೋಧನಾ ಕೇಂದ್ರಗಳು ನಡೆಸಿದ ಅಧ್ಯಯನ, ಅಡಕೆ ಆರೋಗ್ಯಕ್ಕೆ ಪೂರಕ ಎಂಬುದನ್ನು ಎತ್ತಿ ತೋರಿಸಿವೆ.

ಕಳೆದ 20 ವರ್ಷಗಳಲ್ಲಿ ಹಲವು ಸಂಶೋಧ ಕರು ಮತ್ತು ಅಧಿಕೃತ ಸಂಶೋಧನಾ ಸಂಸ್ಥೆಗಳ ಅಧ್ಯಯನದಲ್ಲಿ ಅಡಕೆ ಆರೋಗ್ಯಕ್ಕೆ ಹಾನಿಕಾರಕವಲ್ಲ, ಬದಲು ಆರೋಗ್ಯದಾಯಕ ಎಂದು ತಿಳಿಸಲಾಗಿದೆ. ಆದರೆ ಈ ಸಂಶೋಧನೆ ಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಬೀತುಮಾಡುವ ಕೆಲಸಗಳು ಇನ್ನೂ ಆಗಿಲ್ಲ. ಈ ಕಾರಣದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇವು ಮಾನ್ಯತೆ ಮತ್ತು ಪ್ರಚಾರ ಪಡೆಯುವಲ್ಲೂ ವಿಫಲವಾಗಿವೆ.

ಕೆಲವೊಂದು ಅಧ್ಯಯನಗಳು ಕ್ಲಿನಿಕಲ್ ಟ್ರಯಲ್ಸ್ ಮತ್ತು ಅದರ ಮಾನದಂಡದ ಅನ್ವಯ ನಡೆಯದ ಕಾರಣ ಇವುಗಳನ್ನು ತಜ್ಞರು ಸಂಶೋಧನೆಯ ಮಾನದಂಡದಡಿ ಅಂಗೀಕರಿಸಿಲ್ಲ. ಅಡಕೆಯಲ್ಲಿ ಕ್ಯಾನ್ಸರ್‌ಕಾರಕ ಅಂಶಗಳಿಲ್ಲದೇ ಹೋದರೆ ಇಡೀ ಜಗತ್ತಿಗೆ ಇದನ್ನು ಸಾರಿ ಹೇಳಬೇಕಿದೆ. ವಿಶ್ವಮಟ್ಟದಲ್ಲೂ ಭಾರತದ ವೀಳ್ಯಕ್ಕೆ ಅಂಗೀಕಾರ ದೊರಕಿಸಬೇಕಿದೆ.

ಇನ್ನುಳಿದಂತೆ ರಾಜ್ಯದಲ್ಲಿ ಇತ್ತೀಚೆಗೆ ಅಡಕೆ ಬೆಳೆಯುವ ಪ್ರದೇಶ ಹೆಚ್ಚಾಗಿದೆ. ಆದರೆ ಅಡಕೆ ಬೆಳೆ ಪ್ರಮಾಣ ಕಡಿಮೆಯಾಗಿದೆ. ಹಳದಿರೋಗದ ಕಾರಣ ಮಲೆನಾಡು, ಕರಾವಳಿ ಭಾಗದ ನೂರಾರು ರೈತರ ಅಡಕೆ ಸಂಪೂರ್ಣವಾಗಿ ನೆಲಕಚ್ಚಿವೆ. ಈ ರೋಗ ತೀವ್ರ ಪ್ರಮಾಣದಲ್ಲಿ ಹರಡುತ್ತಿದ್ದು ಇನ್ನು ಕೆಲವೇ ವರ್ಷಗಳಲ್ಲಿ ಅಡಕೆ ಗತಕಾಲದ ವೈಭವವಾಗಲಿದೆ ಎಂಬ ಆತಂಕವಿದೆ. ಹಳದಿ ರೋಗ ನಿಯಂತ್ರಣಕ್ಕೆ ಸೂಕ್ತ ಪರಿಹಾರೋಪಾಯ ಕಂಡು ಹಿಡಿಯಲು ರಾಜ್ಯ ಮತ್ತು ಕೇಂದ್ರ ಸರಕಾರಗಳು ತಕ್ಷಣ ಕಾರ್ಯಪ್ರವೃತ್ತವಾಗಬೇಕಿದೆ.

ಲೋಕೇಶ್​ ಕಾಯರ್ಗ

View all posts by this author