ಕಾನೂನ್ ಸೆನ್ಸ್
ತಿಮ್ಮಣ್ಣ ಭಾಗವತ್
ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ ರೇಣುಕಾ ಸ್ವಾಮಿ ಹತ್ಯೆ ಪ್ರಕರಣದ ವಿಚಾರಣೆಯಲ್ಲಿ ಮಹತ್ವದ ಟ್ವಿಸ್ಟ್ ಕಂಡುಬಂದಿದೆ. ಕೊಲೆ ಮಾಡಿದ ಆರೋಪ ಎದುರಿಸುತ್ತಿರುವ 17 ಆರೋಪಿಗಳ ಪೈಕಿ, ಪ್ರದೋಷ್ ಎಂಬ ಆರೋಪಿ (ನಂ.14), ತಾನು ಅಪ್ರೂವರ್ ಅಂದರೆ ಮಾಫಿ ಸಾಕ್ಷಿ ಆಗುವದಾಗಿ ಅರ್ಜಿ ಸಲ್ಲಿಸಿದ್ದು ನ್ಯಾಯಾಲಯ ಅದನ್ನು ಒಪ್ಪಿದೆ ಎಂದು ವರದಿಯಾಗಿದೆ. ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿರುವ ಈ ಪ್ರಕರಣದಲ್ಲಿ ಮಾಫಿ ಸಾಕ್ಷಿಯ ಹೇಳಿಕೆ ಆರೋಪ ಸಾಬೀತು ಪಡಿಸುವಲ್ಲಿ ಮಹತ್ತರ ಪರಿಣಾಮ ಬೀರಬಲ್ಲುದು.
ಏನಿದು ಮಾಫಿ ಸಾಕ್ಷಿ?
ಹಲವು ವ್ಯಕ್ತಿಗಳು ಸೇರಿ ಅಪರಾಧದ ಕೃತ್ಯ ನಡೆಸಿದಾಗ, ಅಂಥ ಕೃತ್ಯಗಳನ್ನು ಅತ್ಯಂತ ಚಾಣಾಕ್ಷತನ ದಿಂದ ಯಾವದೇ ಹೆಚ್ಚಿನ ಸಾಕ್ಷ್ಯ, ಕುರುಹು ಇಲ್ಲದಂತೆ ನಡೆಸಿರುವ ಸಂದರ್ಭಗಳಿರುತ್ತವೆ. ಗುಂಪು ಅಪರಾಧ ಕೃತ್ಯಗಳಲ್ಲಿ ಹಲವರು ಭಾಗಿಯಾಗಿದ್ದರೂ ಅಪರಾಧದಲ್ಲಿ ಪಾತ್ರ ಅಥವಾ ಅಪರಾಧ ನಡೆಸುವ ಇಚ್ಛೆಯ ಪ್ರಮಾಣ ಎಲ್ಲರದ್ದೂ ಸಮಾನವಾಗಿರುವದಿಲ್ಲ. ಕೆಲವರು ನೇರವಾಗಿ ಅಥವಾ ಉದ್ದೇಶ ಪೂರ್ವಕವಾಗಿ ಭಾಗಿಯಾಗಿದ್ದರೆ ಕೆಲವರು ಹಣದಾಸೆಗೋ, ಮುಲಾಜಿಗೋ ಕೃತ್ಯದಲ್ಲಿ ಸೇರಿಕೊಂಡು ಕೊಲೆ ಅಥವಾ ಅಪರಾಧದಲ್ಲಿ ಕೆಲಮಟ್ಟಿಗಿನ ಪಾತ್ರ ವಹಿಸಿರಬಹುದು. ಅಂಥ ಸಹ-ಆರೋಪಿಗಳನ್ನು ಅಥವಾ ಶಾಮೀಲುದಾರರನ್ನು ಮಾಫಿಸಾಕ್ಷಿಯೆಂದು ಪರಿಗಣಿಸಿ ಅವರ ಸಾಕ್ಷ್ಯ ವನ್ನು ಪ್ರಮುಖ ಆರೋಪಿಗಳ ವಿರುದ್ಧ ಬಳಸಿದರೆ ಪ್ರಕರಣ ಸುಧೃಢವಾಗಿ ಅಪರಾಧಿಗೆ ಶಿಕ್ಷೆ ನೀಡಲು ಸಹಕಾರಿಯಾಗುವದು. ಅವರು ಅಪರಾಧದ ಪೂರ್ತಿ ವಿವರ ಒದಗಿಸಿದಾಗ ಪ್ರಕರಣಕ್ಕೆ ಪೂರಕವಾದ ಸಾಕ್ಷ್ಯ ಸಂಗ್ರಹಕ್ಕೆ ಮತ್ತು ಪ್ರಕರಣದ ತನಿಖಾವರದಿ ಮತ್ತು ಚಾರ್ಜ್‌ಶೀಟ್ ಮುಂತಾ ದುವನ್ನು ಸಲ್ಲಿಸಲು ತನಿಖಾಧಿಕಾರಿಗಳಿಗೆ, ಸಹಕಾರಿಯಾಗುತ್ತದೆ.
ಕೊಲೆಯಂಥ ಪ್ರಕರಣದಲ್ಲಿ ಅಪರಾಧವನ್ನು ತಾನೇ ನೋಡಿದೆನೆಂದು ಹೇಳುವವರು ಸಿಗುವದು ವಿರಳ. ಸಹ-ಆರೋಪಿ ಅಂಥ ಐ-ವಿಟ್ನೆಸ್ ಆಗುವ ಸಂದರ್ಭವಿರುತ್ತದೆ. ಕ್ಷಮಾದಾನದ ಭರವಸೆ ಸಿಕ್ಕರೆ ಅಂಥ ವಿವರಗಳನ್ನು ಒದಗಿಸಿ ಸಾಕ್ಷಿಯಾಗಿ ಸಹಕರಿಸಲು ಸಹ-ಆರೋಪಿಗಳು ಒಪ್ಪುತ್ತಾರೆ. ಈ ಕಾರಣಕ್ಕೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ 343ನೇ ಕಲಮಿನ ಪ್ರಕಾರ ಹಾಗೆ ಪೂರ್ತಿ ವಿವರಗಳನ್ನು ಒದಗಿಸಲು ಸಿದ್ಧನಾದ ಸಹ-ಆರೋಪಿಗೆ ಕ್ಷಮಾದಾನ ನೀಡುವ ಅಧಿಕಾರ ನ್ಯಾಯಾಲಯಕ್ಕೆ ಇದೆ.
ಇದನ್ನೂ ಓದಿ: Thimmanna Bhagwat Column: ಉಡುಪಿನ ಆಯ್ಕೆಯ ಸ್ವಾತಂತ್ರ್ಯ ಪ್ರಶ್ನಾತೀತವೆ?
344ನೇ ಕಲಮಿನ ಪ್ರಕಾರ ಅಂಥ ಕ್ಷಮಾದಾನವನ್ನು ತನಿಖೆ ಅಥವಾ ವಿಚಾರಣೆಯ ಯಾವದೇ ಹಂತದಲ್ಲಿ, ಆದರೆ ನ್ಯಾಯ ನಿರ್ಣಯ ನೀಡುವ ಮೊದಲು, ನೀಡಬಹುದು. 345ನೇ ಕಲಮಿನನ್ವಯ ಅಂಥ ಮಾಫಿಸಾಕ್ಷಿ, ಕ್ಷಮಾದಾನದ ಶರತ್ತಿನನ್ವಯ ಪೂರ್ತಿ ವಿವರಗಳನ್ನು ನೀಡದಿದ್ದರೆ ಅಥವಾ ಸುಳ್ಳು ಮಾಹಿತಿ/ಸಾಕ್ಷಿ ನೀಡಿದರೆ ಅವನನ್ನು ಆರೋಪಿಯೆಂದು ಪುನಃ ಪರಿಗಣಿಸುವದಲ್ಲದೆ ಸುಳ್ಳು ಸಾಕ್ಷ್ಯ ನೀಡಿದ ಸಲುವಾಗಿಯೂ ಅವನಿಗೆ ಪ್ರತ್ಯೇಕ ವಿಚಾರಣೆ ನಡೆಸಿ ಶಿಕ್ಷೆ ನೀಡಬಹುದು. ಆದರೆ ಅಂತ ಪ್ರತ್ಯೇಕ ವಿಚಾರಣೆ ನಡೆಸಲು ಉಚ್ಛ ನ್ಯಾಯಾಲಯದ ಅನುಮತಿ ಅಗತ್ಯ.
ಅಪ್ರೂವರ್ ಆಗಲು ತನಿಖೆಯ ಹಂತದಲ್ಲೇ ಒಪ್ಪಿದರೆ ತನಿಖಾಧಿಕಾರಿಗಳು ಸರಕಾರೀ ವಕೀಲರ ಮೂಲಕ ಕೋರ್ಟಿಗೆ ಅರ್ಜಿ ಸಲ್ಲಿಸಿ ಅಂಥ ಮಾಫಿಸಾಕ್ಷಿ ಮಂಜೂರಿಯನ್ನು ಕೋರುತ್ತಾರೆ. ವಿಚಾರಣೆಯ ಹಂತದಲ್ಲಿ ಕೂಡಾ ಪ್ರಾಸಿಕ್ಯೂಶನ್ ಅಂಥ ಅರ್ಜಿಯನ್ನು ಸಲ್ಲಿಸಬಹುದು. ವಿಚಾರಣೆಯ ಹಂತದಲ್ಲಾದರೆ ಅಂಥ ಮಾಫಿ ಸಾಕ್ಷಿಯ ಹೇಳಿಕೆಯನ್ನು ಸಾಕ್ಷ್ಯವೆಂದು ಪರಿಗಣಿಸ ಲಾಗುತ್ತದೆ.
ಯಾವದೇ ಸಹ-ಆರೋಪಿಯು ಮಾಫಿ ಸಾಕ್ಷಿಯಾಗುವೆನೆಂದು ತಾನೇ ಕೋರ್ಟಿಗೆ ಅರ್ಜಿ ಸಲ್ಲಿಸ ಬಹುದು. ಆಗ ನ್ಯಾಯಾಲಯವು ಈ ಕುರಿತು ಪ್ರಾಸಿಕ್ಯೂಶನ್/ ತನಿಖಾಧಿಕಾರಿಗಳ ಅಭಿಪ್ರಾಯ ಕೇಳಿ ಅವರು ಒಪ್ಪಿದರೆ ಮಾತ್ರ ಅಂಥ ಮಂಜೂರಾತಿಯನ್ನು ನೀಡಬಹುದು. ಕೆಲವೊಮ್ಮೆ ತನಿಖಾಧಿ ಕಾರಿಗಳ ಪ್ರಕಾರ ಅಂಥ ಮಾಫಿ ಸಾಕ್ಷಿಯ ಅಗತ್ಯ ಇರಲಿಕ್ಕಿಲ್ಲ.
ತನಿಖೆಯಲ್ಲಿ ಅವರು ಅಗತ್ಯ ಸಾಕ್ಷ್ಯಗಳನ್ನ ಸಂಗ್ರಹಿಸಿರಬಹುದು. ಆಥವಾ ಅರ್ಜಿದಾರನಿಗೆ ಕ್ಷಮಾದಾನ ನೀಡುವದು ಸೂಕ್ತವಲ್ಲವೆಂಬ ಕಾರಣಕ್ಕೂ ಪ್ರಾಸಿಕ್ಯೂಶನ್ ಅಂಥ ಅರ್ಜಿಯನ್ನು ವಿರೋಧಿಸಬಹುದು. ಆಗ ನ್ಯಾಯಾಲಯ ಅಂಥ ಕ್ಷಮಾದಾನದ ಪ್ರಾರ್ಥನೆಯನ್ನು ತಿರಸ್ಕರಿಸ ಬಹುದು. ಸಹ-ಆರೋಪಿ ಮಾಫಿ ಸಾಕ್ಷಿಯಾದಾಗ ಆತ ಈಗಾಗಲೇ ಜಾಮೀನಿನ ಮೇಲೆ ಜೈಲಿನಿಂದ ಹೊರಗೆ ಇಲ್ಲದಿದ್ದಲ್ಲಿ ವಿಚಾರಣೆ ಮುಗಿಯುವ ವರೆಗೆ ಜೈಲಿನಲ್ಲಿ ಇರಬೇಕೆಂಬ ನಿಯಮವೂ ಇದೆ. ಇದು ಆತನ ರಕ್ಷಣೆ ಹಾಗೂ ಇತರ ಆರೋಪಿಗಳು ಆತನ ಮೇಲೆ ಒತ್ತಡ ಹೇರುವದನ್ನು ತಪ್ಪಿಸಲು ಸಹಾಯವಾಗುತ್ತದೆ.
ಭಾರತೀಯ ಸಾಕ್ಷ್ಯ ಅಧಿನಿಯಮ 2023ರ 138ನೇ ಕಲಮಿನ ಪ್ರಕಾರ ಸಹ-ಆರೋಪಿ ಅಥವಾ ಅಪರಾಧದಲ್ಲಿ ಶಾಮೀಲುದಾರ (accomplice) ಸಮರ್ಥ ಸಾಕ್ಷಿಯಾಗಬಲ್ಲ (‘shall’ be a compe tent witness ) ಮತ್ತು ಅಂಥ ಸಾಕ್ಷ್ಯದ ಆಧಾರದಲ್ಲಿ ಅಪರಾಧ ನಿರ್ಣಯವಾದರೆ ಅಂಥ ನಿರ್ಣಯಕ್ಕೆ ಪೂರಕವಾದ ಇತರ ಸಾಕ್ಷ್ಯಗಳಿರಲಿಲ್ಲ ಎಂಬ ಕಾರಣ ಮಾತ್ರಕ್ಕೆ ಅಂಥ ಅಪರಾಧ ನಿರ್ಣಯ (Conviction) ಕಾನೂನುಬಾಹಿರವಾಗುವದಿಲ್ಲ.
ಆದರೆ ಅದೇ ಕಾಯಿದೆಯ 119(1)ಬಿ ಕಲಮಿನ ಪ್ರಕಾರ, ಇತರ ಪೂರಕ ಸೂಕ್ತ ಸಾಕ್ಷ್ಯಗಳಿರದಿದ್ದರೆ ಸಹ-ಆರೋಪಿಯು ಪರಿಗಣನೆಗೆ ಅನರ್ಹ (unworthy of credit) ಎಂದು ನ್ಯಾಯಾಲಯ ಗ್ರಹಿಸ ಬಹುದು (Court ‘may’ presume) ಎಂದಿದೆ. ಇವೆರಡೂ ಕಲಮುಗಳನ್ನು ಒಟ್ಟಿಗೆ ಓದಿದಾಗ ಸಹ-ಆರೋಪಿಯ ಸಾಕ್ಷ್ಯಕ್ಕೆ ಪೂರಕವಾದ ಸ್ವತಂತ್ರ ಸಾಕ್ಷಿ ಅಥವಾ ಪುರಾವೆಗಳಿದ್ದಾಗ ಸಹ-ಆರೋಪಿಯ ಸಾಕ್ಷ್ಯವನ್ನು ಪರಿಗಣಿಸಲು ನ್ಯಾಯಾಲಯಕ್ಕೆ ಸಕಾರಣ ಒದಗುತ್ತದೆ ಎಂದು ಅರ್ಥ. "particeps criminis" ಅಂದರೆ ಅಪರಾಧ ದಲ್ಲಿ ಪಾಲುದಾರ ಎಂಬ ಕಾರಣಕ್ಕೆ ಸಹ-ಆರೋಪಿಯ ಸಾಕ್ಷ್ಯವನ್ನು ಅತ್ಯಂತ ಎಚ್ಚರಿಕೆ ಮತ್ತು ವಿವೇಕದಿಂದ ಪರಿಗಣಿಸ ಬೇಕಾಗುತ್ತದೆ.
ಮಾಫಿ ಸಾಕ್ಷಿಯ ಕುರಿತು ಸುಪ್ರೀಂ ಕೋರ್ಟು ಅನೇಕ ಪ್ರಕರಣಗಳಲ್ಲಿ ಸ್ಪಷ್ಟ ಆದೇಶಗಳನ್ನು ನೀಡಿದೆ. ‘ಸರ್ವಣ್ ಸಿಂಗ್ ವರ್ಸಸ್ ಪಂಜಾಬ್ ಸರಕಾರ’, ‘ಸುರೇಶಚಂದ್ರ ಬಾಹ್ರಿ ವರ್ಸಸ್ ಬಿಹಾರ ಸರಕಾರ’, ‘ಗೋಪಿಚಾಂದ ವರ್ಸಸ್ ದೆಹಲಿ ಸರಕಾರ’ ಮುಂತಾದ ಪ್ರಕರಣಗಳಲ್ಲಿ ‘ಈ ಕಲಮಿ ನನ್ವಯ ಕ್ಷಮಾದಾನದ ಮುಖ್ಯ ಉದ್ದೇಶವೆಂದರೆ ಘೋರ ಅಪರಾಧ ಮಾಡಿದ ಯಾರೂ ಶಿಕ್ಷೆಯಿಂದ ತಪ್ಪಿಸಿಕೊಳ್ಳಬಾರದು ಎಂಬುದು.
ಸಹ-ಆರೋಪಿಯು ಸಮರ್ಥ ಸಾಕ್ಷಿ ಎಂಬುದು ಭಾರತೀಯ ಸಾಕ್ಷ್ಯ ಸಂಹಿತೆಯ ಪ್ರಕಾರ ನಿಸ್ಸಂಶ ಯವಾದರೂ, ಆತ ಅಪರಾಧದಲ್ಲಿ ಸಹಬಾಗೀದಾರನೆಂಬ ಆರೋಪವಿರುವದರಿಂದ ಅಂಥ ಕಳಂಕಿತ ಸಾಕ್ಷ್ಯವನ್ನು ಒಪ್ಪಲು ನ್ಯಾಯಾಲಯಗಳು ಹಿಂದೇಟು ಹಾಕುತ್ತವೆ ಮತ್ತು ಅಂಥ ಸಾಕ್ಷ್ಯ ಗಳಿಗೆ ಬಲವಾದ ಪೂರಕ ಸಾಕ್ಷ್ಯಗಳಿರಬೇಕೆಂದು ಬಯಸುತ್ತವೆ. ಆದರೆ ಅಂಥ ಪೂರಕ ಸಾಕ್ಷ್ಯಗಳು ಎಷ್ಟು ಬಲವಾಗಿರಬೇಕು ಎಂಬುದು ಮುಖ್ಯ.
ಅಂಥ ಪೂರಕ ಸಾಕ್ಷ್ಯಗಳು ಸ್ವತಂತ್ರವಾಗಿ ಬಲವಾಗಿದ್ದರೆ ಮಾಫಿ ಸಾಕ್ಷಿಯ ಅಗತ್ಯವೇ ಇರುವದಿಲ್ಲ. ಈ ಕಾರಣಕ್ಕೆ ಮಾಫಿ ಸಾಕ್ಷಿಯನ್ನು ಒಪ್ಪಲು ಸಮತೋಲನದ ನಿರ್ಣಯ ಕೈಗೊಳ್ಳಬೇಕು. ಪೂರಕ ಪುರಾವೆಗಳಿಲ್ಲದೆಯೂ ಸೂಕ್ತ ಕಾರಣಗಳನ್ನು ನೀಡಿ ನ್ಯಾಯಾಲಯವು ಕೇವಲ ಮಾಫಿ ಸಾಕ್ಷಿಯ ಸಾಕ್ಷ್ಯದ ಆಧಾರದಲ್ಲಿಯೇ ಅಪರಾಧ ನಿರ್ಣಯ (Conviction) ಮಾಡಬಹುದು. ಆತನ ಹೇಳಿಕೆಯು ಆರೋಪಿಯೊಬ್ಬನು ಅಪರಾಧ ಮಾಡಿದ್ದಾನೆ ಎಂದು ಸಾಬೀತು ಪಡಿಸಲು (Inculpatory) ಪೂರಕ ವಾಗಿರಬೇಕೇ ಹೊರತು ಅವನು ನಿರಪರಾಽ ಎಂದು ಸಾಬೀತುಪಡಿಸಲು ಅಲ್ಲ (not Exculpatory) ಎಂಬುದು ಸುಪ್ರೀಂ ಕೋರ್ಟಿನ ಆದೇಶ.
ಮಾಫಿಸಾಕ್ಷಿಗಳಿಗೆ ಕ್ಷಮಾದಾನ ನೀಡುವ ವಿಚಾರದಲ್ಲಿ ಕೆಲವರು ತಾತ್ವಿಕ ವಿರೋಧ ವ್ಯಕ್ತಪಡಿಸಿ ದ್ದಾರೆ. ಅಪರಾಧ ಮಾಡಿ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಕಾನೂನಿನಲ್ಲಿಯೇ ಅವಕಾಶ ಕಲ್ಪಿಸಿ ದಂತಾಗುತ್ತದೆ. ಪೊಲೀಸರ ಕಸ್ಟಡಿಯಲ್ಲಿರುವ ಸಂದರ್ಭದಲ್ಲಿ ತಪ್ಪೊಪ್ಪಿಗೆ ನೀಡುವ ಆರೋಪಿಯು ಕೆಲವು ಸಲ ಒತ್ತಡಕ್ಕೆ ಒಳಗಾಗಿರಬಹುದು ಅಥವಾ ಅದು ಸಂಚಿನ ಭಾಗವಾಗಬಹುದು ಎಂಬ ವಾದವೂ ಇದೆ. ಅಂಥ ಹೇಳಿಕೆ ನೀಡುವಾಗ ಆರೋಪಿ ನ್ಯಾಯಾಂಗ ಕಸ್ಟಡಿಯಲ್ಲಿರಬೇಕು ಎಂಬ ಕಾನೂನು ಇದೆಯಾದರೂ ಇಲ್ಲಿ ತನಿಖಾಽಕಾರಿಗಳ ತಂತ್ರಕ್ಕೆ ಅವಕಾಶವಿದ್ದೇ ಇರುತ್ತದೆ.
ಭಾಗೀದಾರರಲ್ಲದವರನ್ನೂ ಆರೋಪಿಯೆಂದು ಈ ಉದ್ದೇಶಕ್ಕೆ ಸೇರಿಸಬಹುದು. ಶಿಕ್ಷೆಯಿಂದ ತಪ್ಪಿಸಿ ಕೊಳ್ಳಲು ಆರೋಪಿಗಳು ಪ್ರಾಸಿಕ್ಯೂಶನ್‌ಗೆ ಆಮಿಶ ಒಡ್ಡುವ ಸಾಧ್ಯತೆಯನ್ನು ಕೂಡಾ ಆರೋಪಿಸ ಲಾಗುತ್ತದೆ. ಆದರೆ ನ್ಯಾಯಾಲಯದ ಅನುಮತಿ ಕಡ್ಡಾಯವಾದ್ದರಿಂದ ಅಂಥ ಆರೋಪಗಳಲ್ಲಿ ಹುರುಳಿಲ್ಲವೆನಿಸುತ್ತದೆ. ಒಟ್ಟಾರೆಯಾಗಿ ಮಾಫಿ ಸಾಕ್ಷಿಯೆಂದು ತನಿಖಾಧಿಕಾರಿ/ಪ್ರಾಸಿಕ್ಯೂಶನ್ ಕೋರ್ಟಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯಲ್ಲಿ ಹೆಚ್ಚಿನ ನಿಯಂತ್ರಣಾ ವ್ಯವಸ್ಥೆ ಇರಬೇಕು ಎಂಬುದರಲ್ಲಿ ಎರಡು ಮಾತಿಲ್ಲ.
ರೇಣುಕಾ ಸ್ವಾಮಿ ಪ್ರಕರಣದಲ್ಲಿ ಇನ್ನೂ ಆ ಮಾಫಿಸಾಕ್ಷಿಯ ಹೇಳಿಕೆ ಮ್ಯಾಜಿಸ್ಟ್ರೇಟರ ಎದುರು ದಾಖಲಾಗಿದೆಯೋ ಇಲ್ಲವೋ ತಿಳಿದಿಲ್ಲ. ವಿಚಾರಣೆ ಮುಗಿಯುವವರೆಗೂ ಆತ ಪ್ರಾಸಿಕ್ಯೂಶನ್ ನೊಂದಿಗೆ ಸಹಕರಿಸಿದರೆ ಮಾತ್ರ ಅದರಿಂದ ಪ್ರಕರಣಕ್ಕೆ ಬಲ ಬರಬಹುದು.
ಇದೇ ಪ್ರಕರಣದಲ್ಲಿ ಎದುರಾದ ಇನ್ನೊಂದು ಸಂಗತಿಯೆಂದರೆ ಕೊಲೆಯಾದ ರೇಣುಕಾ ಸ್ವಾಮಿ ಯವರ ತಾಯಿಯು ಪ್ರತಿಕೂಲ ಸಾಕ್ಷಿಯಾಗಿದ್ದಾರೆ (Hostile Witness) ಎಂಬ ವಾದ. ಆ ಕಾರಣಕ್ಕೆ ಅವರನ್ನು ಪಾಟೀ ಸವಾಲು ಮಾಡಲು ಅನುಮತಿ ನೀಡಬೇಕು ಎಂದು ಪ್ರಾಸಿಕ್ಯೂಶನ್ ಮಾಡಿದ ಮನವಿಯನ್ನು ವಿಚಾರಣಾ ನ್ಯಾಯಾಲಯ ಮತ್ತು ಉಚ್ಛ-ನ್ಯಾಯಾಲಯಗಳು ತಿರಸ್ಕರಿಸಿವೆ. ವಿಚಾರಣಾ ನ್ಯಾಯಾಲಯದ ಮುಂದೆ ಮುಖ್ಯ ವಿಚಾರಣೆ ಮತ್ತು ಪಾಟೀ ಸವಾಲುಗಳ ಸಮಯ ದಲ್ಲಿ ಅವರು ನೀಡಿದ ಸಾಕ್ಷ್ಯವನ್ನು ಒಟ್ಟಾರೆಯಾಗಿ ಪರಿಶೀಲಿಸಿದಾಗ ಅವರನ್ನು ಪ್ರತಿಕೂಲ ಸಾಕ್ಷಿ ಯೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟು ಅಭಿಪ್ರಾಯ ಪಟ್ಟಿದೆಯೆಂದು ವರದಿ ಯಾಗಿದೆ.
ಏನಿದು ಪ್ರತಿಕೂಲ ಸಾಕ್ಷಿ? ಕ್ರಿಮಿನಲ್ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಸಾಕ್ಷಿಗಳ ಹೇಳಿಕೆಯನ್ನು ತನಿಖಾ ಹಂತದಲ್ಲಿ ದಾಖಲಿಸಲಾಗುತ್ತದೆ. ಅಂಥ ಸಾಕ್ಷಿಗಳು ಮುಖ್ಯ-ಸಾಕ್ಷಿಯ ಸಮಯದಲ್ಲಿ ( Chief-Examination) ಅಥವಾ ಪ್ರತಿವಾದಿಯ ವಕೀಲರ ಪಾಟೀಸವಾಲಿನ ಸಮಯದಲ್ಲಿ ತನ್ನ ಹೇಳಿಕೆಗೆ ವ್ಯತಿರಿಕ್ತವಾಗಿ ಸಾಕ್ಷ್ಯ ನುಡಿದರೆ, ತನ್ನನ್ನು ಯಾರು ಸಾಕ್ಷಿಗಾಗಿ ಕರೆದಿದ್ದಾರೋ ಅವರಿಗೆ ವಿರುದ್ಧವಾಗಿ ಸಾಕ್ಷ್ಯ ನುಡಿದರೆ, ಅಥವಾ ಅಸಹಕಾರ ನೀಡಿದರೆ ಅಥವಾ ಸುಳ್ಳು ಸಾಕ್ಷ್ಯ ನೀಡಿದರೆ ಅಥವಾ ಸತ್ಯವನ್ನು ಮರೆಮಾಚಿದರೆ ಆತನನ್ನು ಪ್ರತಿಕೂಲ ಸಾಕ್ಷಿಯೆಂದು ಪರಿಗಣಿಸಿ ಪಾಟೀ ಸವಾಲು ಮಾಡಲು ನ್ಯಾಯಾಲಯದ ಅನುಮತಿ ಕೋರಬಹುದು. ಹಾಗೆ ತನ್ನದೇ ಸಾಕ್ಷಿಗೆ ಪಾಟೀಸವಾಲು ಮಾಡುವಾಗ ಸೂಚ್ಯ ಪ್ರಶ್ನೆ (Leading Question) ಅಂದರೆ ಉತ್ತರವನ್ನು ಉದ್ದೇಶಿಸಿ ಕೇಳಲಾಗುವ ಪ್ರಶ್ನೆಯನ್ನು ಕೇಳಲು ಅವಕಾಶವಿದೆ. ಅಂಥ ಪ್ರಶ್ನೆಯನ್ನು ಸಾಮಾನ್ಯವಾಗಿ ವಿರುದ್ಧ ಪಕ್ಷದ ಸಾಕ್ಷಿಗಳ ಪಾಟೀಸವಾಲಿನಲ್ಲಿ ಸಾಕ್ಷಿಗಳ ಸಾಕ್ಷ್ಯದ ಸತ್ಯವನ್ನು ಒರೆಗೆ ಹಚ್ಚಿ ಸುಳ್ಳನ್ನು ಹೊರಗೆ ಎಳೆಯಲು ಕೇಳಲಾಗುತ್ತದೆ. ಅಂಥ ಪ್ರಶ್ನೆಗಳನ್ನು ತನ್ನದೇ ಸಾಕ್ಷಿಗೆ ಕೇಳಲು ಅವನನ್ನು ಪ್ರತಿಕೂಲ ಸಾಕ್ಷಿಯೆಂದು ಪರಿಗಣಿಸಲು ಕೋರ್ಟು ಒಪ್ಪಬೇಕಾಗುತ್ತದೆ.
ಪ್ರತಿಕೂಲ ಸಾಕ್ಷಿ ಅಥವಾ Hostile Witness ಎಂಬ ಪದವನ್ನು ಕಾಯಿದೆಯಲ್ಲಿ ನೇರವಾಗಿ ಬಳಸ ಲಾಗಿಲ್ಲವಾದರೂ ಭಾರತೀಯ ಸಾಕ್ಷ್ಯ ಅಧಿನಿಯಮ 2023ರ 157ನೇ ಕಲಮಿನ ಪ್ರಕಾರ ತನ್ನದೇ ಸಾಕ್ಷಿಯನ್ನು ಪಾಟೀ ಸವಾಲು ಮಾಡಲು ನ್ಯಾಯಾಲಯದ ಅನುಮತಿಯ ಮೇರೆಗೆ ಅವಕಾಶವಿದೆ. 157ನೇ ಕಲಮಿನ 2ನೇ ಉಪಕಲಮಿನ ಪ್ರಕಾರ ಪ್ರತಿಕೂಲ ಸಾಕ್ಷಿಯು ನುಡಿದ ಸಾಕ್ಷ್ಯದ ಯಾವದೇ ಭಾಗವನ್ನು ಅವನನ್ನು ಹಾಜರಿ ಪಡಿಸಿದ ಪಕ್ಷದವರು ತಮ್ಮ ವಾದಕ್ಕೆ ಬಳಸಿಕೊಳ್ಳುವದಕ್ಕೆ ಅವಕಾಶವಿದೆ.
ಇದೇ ಅಭಿಪ್ರಾಯವನ್ನು ಸುಪ್ರೀಂ ಕೋರ್ಟು ‘ಕೇರಳ ಸರಕಾರ ವರ್ಸಸ್ ಅಬ್ದುಲ್ ರಶೀದ್’, ‘ದಾದುಅಂಕುಶ್ ವರ್ಸಸ್ ಮಧ್ಯಪ್ರದೇಶ ಸರಕಾರ’, ‘ನೀರಜ್ ದತ್ತಾ’ ಪ್ರಕರಣಗಳಲ್ಲಿ ಧೃಢಪಡಿಸಿದೆ. ಆದರೆ ರೇಣುಕಾ ಸ್ವಾಮಿ ಪ್ರಕರಣದಲ್ಲಿ ಅವರ ತಾಯಿಯನ್ನು ಪ್ರತಿಕೂಲ ಸಾಕ್ಷಿಯೆಂದು ಪರಿಗಣಿಸ ಲಿಲ್ಲವಾದ್ದರಿಂದ ಅವರು ನೀಡಿದ ಸಾಕ್ಷ್ಯವು ಒಂದುವೇಳೆ ಪ್ರಾಸಿಕ್ಯೂಶನ್ನಿಗೆ ಸಹಕಾರಿಯಾಗ ದಿದ್ದರೂ ಅವರನ್ನು ಪಾಟೀಸವಾಲು ಮಾಡಲು ಅವಕಾಶವಿಲ್ಲ. ಇದು ಪ್ರಾಸಿಕ್ಯೂಶನ್ನಿಗೆ ಎಷ್ಟರ ಮಟ್ಟಿಗೆ ಹಿನ್ನಡೆಯಾಗುತ್ತದೆ ಎಂಬುದು ಪ್ರಕರಣದ ಪೂರ್ತಿ ವಿವರಗಳಿಂದ ಮಾತ್ರ ತಿಳಿಯ ಬಹುದು.
ಅತ್ಯಂತ ಹೀನ ಕೃತ್ಯವಾದ ಕೊಲೆಯಂಥ ಅಪರಾಧದಲ್ಲಿ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗ ಬೇಕೆಂಬುದು ಜನರ ಬಯಕೆಯಾಗಿರುತ್ತದೆ. ಈ ವರೆಗಿನ ತನಿಖೆ ಮತ್ತು ಘಟನಾವಳಿಗಳನ್ನು ಗಮನಿಸಿದರೆ ಈ ಪ್ರಕರಣ ಸರಿಯಾದ ದಾರಿಯಲ್ಲಿ ಸಾಗುತ್ತಿದೆ ಎಂದೆನಿಸುತ್ತದೆ.