ಸಂಗತ
ಚುನಾವಣೆ ಸಮೀಪಿಸುತ್ತಿರುವುದರಿಂದ ಮೂಲಭೂತವಾದಿಗಳು ಮತ್ತು ತೀವ್ರ ಗಾಮಿಗಳು ಬಾಂಗ್ಲಾದೇಶದಲ್ಲಿ ಬೆಂಕಿ ಉಗುಳಲು ಆರಂಭಿಸಿದ್ದಾರೆ. ಭಾರತವನ್ನು ಒಡೆದು ಹಗೆ ತೀರಿಸಿಕೊಳ್ಳುವ ಪೊಳ್ಳು ಕನಸನ್ನು ಅವರು ಢಾಕಾದ ಯುವಕರಲ್ಲಿ ಬಿತ್ತುತ್ತಿದ್ದಾರೆ. ಇದರ ಹಿಂದೆ ಪಾಕಿಸ್ತಾನದ ಸರಕಾರ, ಸೇನೆ, ಐಎಸ್‌ಐ ಮತ್ತು ಭಯೋತ್ಪಾದಕರಿದ್ದಾರೆ.
ಬಾಂಗ್ಲಾದೇಶದಲ್ಲೀಗ ಭಾರತ ವಿರೋಧಿ ಶಕ್ತಿಗಳು ವಿಜೃಂಭಿಸುತ್ತಿವೆ. ಅಲ್ಲಿನ ಮೂಲಭೂತ ವಾದಿಗಳು ಹಾಗೂ ತೀವ್ರಗಾಮಿಗಳು ಭಾರತದ ವಿರುದ್ಧ ದ್ವೇಷ ಕಾರುತ್ತಿದ್ದಾರೆ. ಭಾರತದ ಹೈಕಮಿಷನ್ ಕಚೇರಿಯ ಮೇಲೇ ಅವರು ದಾಳಿ ನಡೆಸುವ ಸಂಚು ರೂಪಿಸಿದ್ದರು. ಅದನ್ನು ಅರಿತ ಭಾರತ ತನ್ನ ವೀಸಾ ಅರ್ಜಿ ಕೇಂದ್ರಗಳನ್ನು ತಾತ್ಕಾಲಿಕವಾಗಿ ಮುಚ್ಚಿದೆ.
ಅದೇ ವೇಳೆ, ನವದೆಹಲಿಯಲ್ಲಿರುವ ಬಾಂಗ್ಲಾದೇಶದ ಹೈಕಮಿಷನರ್ ಎಂ.ರಿಯಾಜ್ ಹಮೀದುಲ್ಲಾ ಅವರ ಬಳಿ ಭಾರತ ಸರಕಾರವು ಬಾಂಗ್ಲಾದಲ್ಲಿನ ಬೆಳವಣಿಗೆಗಳ ಬಗ್ಗೆ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದೆ. ಆದರೂ ಬಾಂಗ್ಲಾದೇಶದ ನಾಯಕ ಮೊಹಮ್ಮದ್ ಯೂನಸ್‌ಗೆ ಅಲ್ಲಿನ ಬೆಳವಣಿಗೆಗಳನ್ನು ನಿಯಂತ್ರಿಸುವ ಇರಾದೆ ಇದ್ದಂತಿಲ್ಲ.
ಬದಲಿಗೆ, ಪರಿಸ್ಥಿತಿಯನ್ನು ಇನ್ನಷ್ಟು ಪ್ರಕ್ಷುಬ್ಧಗೊಳಿಸುವ ಬಗ್ಗೆಯೇ ಅವರಿಗೆ ಇಚ್ಛೆ ಇದ್ದಂತಿದೆ. ಬಾಂಗ್ಲಾದೇಶದಲ್ಲಿ ಫೆಬ್ರವರಿಯಲ್ಲಿ ಸಾರ್ವತ್ರಿಕ ಚುನಾವಣೆ ನಡೆಸುವುದಾಗಿ ಯೂನಸ್ ಪ್ರಕಟಿಸಿದ್ದಾರೆ. ಹೀಗಾಗಿ ದೇಶದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸಿನಿಂದ ನಡೆಯುತ್ತಿದ್ದವು. ಈ ಅವಧಿಯಲ್ಲಿ ಭಾರತಕ್ಕೆ ಪಲಾಯನಗೈದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಜನಪ್ರಿಯತೆಗೆ ಪ್ರಬಲ ಪೈಪೋಟಿ ನೀಡಬಲ್ಲ ನಾಯಕನಾಗಿ ಶರೀಫ್ ಉಸ್ಮಾನ್ ಹಾದಿ ಎಂಬಾತ ಪ್ರವರ್ಧಮಾನಕ್ಕೆ ಬಂದಿದ್ದ.
ಇದನ್ನೂ ಓದಿ: Dr Vijay Darda Column: ಗಾಂಧೀಜಿಯ 3 ಮಂಗಗಳ ರೀತಿ ಗೋವಾದ ಆಡಳಿತ !
ಆದರೆ ಇತ್ತೀಚೆಗೆ ಅವನನ್ನೇ ಮುಸುಕುಧಾರಿ ಹಂತಕರು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ. ಅವನನ್ನು ಕೊಂದವರು ಭಾರತಕ್ಕೆ ಪಲಾಯನ ಮಾಡಿದ್ದಾರೆ ಎಂದು ಬಾಂಗ್ಲಾದೇಶ ಹೇಳುತ್ತಿದೆ. ಈ ಆರೋಪವನ್ನೇ ನೆಪವಾಗಿರಿಸಿಕೊಂಡು ತೀವ್ರಗಾಮಿಗಳು ದೇಶಕ್ಕೆ ಬೆಂಕಿ ಹಚ್ಚುತ್ತಿದ್ದಾರೆ. ಮುಖ್ಯವಾಗಿ ಹಿಂದೂಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗುತ್ತಿದೆ.
ಹಿಂದೂ ಯುವಕ ದೀಪು ಚಂದ್ರ ದಾಸ್ ಎಂಬಾತನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಅವನ ದೇಹವನ್ನು ಮರವೊಂದಕ್ಕೆ ತಲೆಕೆಳಗಾಗಿ ನೇತು ಹಾಕಿ ಬೆಂಕಿ ಹಚ್ಚಿದ್ದಾರೆ. ಆದರೆ ಹಾಗೆ ಮಾಡಿದವರ ವಿರುದ್ಧ ಮೊಹಮ್ಮದ್ ಯೂನಸ್ ಈವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ.
ಇದೇ ವೇಳೆ ನಡೆದ ಹಿಂಸಾಚಾರದಲ್ಲಿ ಎರಡು ಪತ್ರಿಕಾ ಕಚೇರಿಗಳಿಗೆ ಬೆಂಕಿ ಹಚ್ಚಲಾಗಿದೆ. ‘ಪ್ರೊಥೊಮ್ ಆಲೋ’ ಹಾಗೂ ‘ದಿ ಡೈಲಿ ಸ್ಟಾರ್’ ಪತ್ರಿಕೆಗಳು, ಬಾಂಗ್ಲಾದೇಶದಲ್ಲಿ ಹೆಚ್ಚು ತ್ತಿರುವ ತೀವ್ರವಾದಿ ಸಿದ್ಧಾಂತದ ವಿರುದ್ಧ ಸಾಕಷ್ಟು ವರದಿಗಳನ್ನು ಪ್ರಕಟಿಸುತ್ತಿದ್ದವು.
ಅವುಗಳ ಧ್ವನಿ ಅಡಗಿಸಲು ಆ ಪತ್ರಿಕಾ ಕಚೇರಿಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಇದರ ಬಗ್ಗೆಯೂ ಈಗಿರುವ ಮಧ್ಯಂತರ ಸರಕಾರ ಅಸೀಮ ಮೌನ ವಹಿಸಿದೆ. ಹೀಗಾಗಿ ಸರಕಾರದ ಮೇಲೇ ಅನುಮಾನಗಳು ಬೆಳೆಯತೊಡಗಿವೆ. ಇವೆರಡೂ ಪತ್ರಿಕೆಗಳು ಭಾರತದ ಪರ ಅಜೆಂಡಾ ಹೊಂದಿದ್ದವು ಎಂದು ಬಾಂಗ್ಲಾದೇಶದಲ್ಲಿ ಗುಲ್ಲೆಬ್ಬಿಸಲಾಗಿದೆ.
ವಾಸ್ತವ ಏನೆಂದರೆ, ಬಾಂಗ್ಲಾದೇಶದಲ್ಲಿ ಬೆಂಕಿ ಹಚ್ಚುತ್ತಿರುವ ದುಷ್ಟಶಕ್ತಿಗಳಿಗೆ ಅಲ್ಲಿನ ಜನರನ್ನು ಭಾರತದ ವಿರುದ್ಧ ಎತ್ತಿಕಟ್ಟುವುದು ಬೇಕಾಗಿದೆ. ಭಾರತದ ಮಾತನ್ನು ಬಾಂಗ್ಲಾ ದಲ್ಲಿ ಯಾರೂ ಕೇಳಬಾರದು ಎಂಬಂಥ ಸ್ಥಿತಿ ತಂದಿಡಲು ಅವರು ಯತ್ನಿಸುತ್ತಿದ್ದಾರೆ. ಶೇಖ್ ಹಸೀನಾ ಅವರ ಅವಾಮಿ ಲೀಗ್ ಪಕ್ಷವನ್ನು ಚುನಾವಣೆಗೆ ಸ್ಪರ್ಧಿಸದಂತೆ ನಿಷೇಧಿಸಲಾಗಿದೆ.
ಅದರ ನಡುವೆ ಭಾರತ ಕೂಡ ತನ್ನ ಅಭಿಪ್ರಾಯ ವ್ಯಕ್ತಪಡಿಸಿ, ಬಾಂಗ್ಲಾದೇಶದಲ್ಲಿ ನಡೆ ಯುವ ಸಾರ್ವತ್ರಿಕ ಚುನಾವಣೆ ಮುಕ್ತ ಮತ್ತು ನ್ಯಾಯಸಮ್ಮತವಾಗಿ, ಎಲ್ಲರನ್ನೂ ಒಳಗೊಂಡು ನಡೆಯಬೇಕು ಎಂದು ಹೇಳಿದೆ.
‘ಎಲ್ಲರನ್ನೂ ಒಳಗೊಂಡು’ ಎಂಬ ಪದಪ್ರಯೋಗ ಮಾಡಿರುವುದು ಮೊಹಮ್ಮದ್ ಯೂನಸ್‌ಗೆ ಸಿಟ್ಟು ತರಿಸಿದೆ. ಏಕೆಂದರೆ, ಇದರ ಅರ್ಥ ಅವಾಮಿ ಲೀಗ್ ಪಕ್ಷವನ್ನು ಕೂಡ ಒಳಗೊಂಡು ಚುನಾವಣೆ ನಡೆಸಬೇಕು ಎಂದು ಭಾರತ ಹೇಳಿದಂತಾಗುತ್ತದೆ ಎಂದು ಅವರು ಸರಿಯಾಗಿಯೇ ಅರ್ಥೈಸಿಕೊಂಡಿದ್ದಾರೆ.
ಇಲ್ಲೊಂದು ಪ್ರಮುಖ ಬದಲಾವಣೆಯನ್ನು ಗಮನಿಸಬೇಕು. ಹಿಂದೆ ಪಾಕಿಸ್ತಾನದಿಂದ ಸ್ವಾತಂತ್ರ್ಯ ಪಡೆದು ಬಾಂಗ್ಲಾದೇಶವೆಂಬ ಸ್ವತಂತ್ರ ರಾಷ್ಟ್ರ ಅಸ್ತಿತ್ವಕ್ಕೆ ಬಂದಿದ್ದೇ ಭಾರತದ ನೆರವಿನಿಂದ. ಈಗ ಅದೇ ಭಾರತದ ಮೇಲೆ ಬಾಂಗ್ಲಾದೇಶ ಕೆಂಡ ಕಾರುತ್ತಿದೆ ಮತ್ತು ಅಲ್ಲಿನ ನಾಯಕರು ಭಾರತವನ್ನು ಒಡೆಯುವ ಮಾತನಾಡುತ್ತಿದ್ದಾರೆ.
ಮೈತುಂಬಾ ಭ್ರಷ್ಟಾಚಾರದ ಆರೋಪಗಳನ್ನು ಹೊತ್ತಿರುವ ಹಾಗೂ ಸಾಕಷ್ಟು ಉಪದ್ವ್ಯಾಪ ಗಳಿಗೆ ಹೆಸರಾದ ನಿವೃತ್ತ ಬ್ರಿಗೇಡಿಯರ್ ಜನರಲ್ ಅಬ್ದುಲ್ಲಾಹಿಲ್ ಅಮಾನ್ ಆಜ್ಮಿ ಎಂಬಾತ ‘ಭಾರತವನ್ನು ಛಿದ್ರಛಿದ್ರ ಮಾಡಿದಾಗಲೇ ಬಾಂಗ್ಲಾದೇಶಕ್ಕೆ ಶಾಂತಿ ಲಭಿಸುತ್ತದೆ’ ಎಂದು ಪದೇಪದೆ ಹೇಳುತ್ತಿದ್ದಾನೆ.
ನ್ಯಾಷನಲ್ ಸಿಟಿಜನ್ ಪಕ್ಷದ ದಕ್ಷಿಣ ಮುಖ್ಯ ಸಂಚಾಲಕ ಹಸ್ನತ್ ಅಬ್ದುಲ್ಲಾ ಎಂಬಾತ ‘ಭಾರತದ ಏಳು ಸಹೋದರಿಯರನ್ನು (ಅರುಣಾಚಲ ಪ್ರದೇಶ, ಅಸ್ಸಾಂ, ಮಣಿಪುರ, ಮೇಘಾಲಯ, ಮಿಜೋರಂ, ನಾಗಾಲ್ಯಾಂಡ್ ಮತ್ತು ತ್ರಿಪುರ) ಬಾಂಗ್ಲಾದೇಶವು ಭಾರತ ದಿಂದ ಪ್ರತ್ಯೇಕಗೊಳಿಸಲಿದೆ’ ಎಂದು ಹೇಳಿದ್ದಾನೆ!
ಇನ್ನು, ಪಹಲ್ಗಾಮ್ ದಾಳಿಯ ಬಳಿಕ ಮಾತನಾಡಿದ್ದ ನಿವೃತ್ತ ಮೇಜರ್ ಜನರಲ್ ಫಜ್ಲುರ್ ರೆಹ್ಮಾನ್, ‘ಭಾರತವೇನಾದರೂ ಪಾಕಿಸ್ತಾನದ ಮೇಲೆ ದಾಳಿ ನಡೆಸಿದರೆ ಬಾಂಗ್ಲಾದೇಶವು ಚೀನಾ ಮತ್ತು ಪಾಕಿಸ್ತಾನದ ಜತೆಗೆ ಸೇರಿಕೊಂಡು ಏಳು ಸಹೋದರಿಯರನ್ನು ವಶಪಡಿಸಿ ಕೊಳ್ಳಬೇಕು’ ಎಂದು ಹೇಳಿದ್ದ.
ಇಷ್ಟೆಲ್ಲಾ ಆದರೂ ಮೊಹಮ್ಮದ್ ಯೂನಸ್ ಮೌನವಾಗಿಯೇ ಇದ್ದಾರೆಯೇ? ಇಲ್ಲ, ಅವರು ಮೌನವಾಗಿ ಕುಳಿತಿಲ್ಲ. ಅವರ ಮಾತು ನಮಗೆ ಕೇಳಿಸುತ್ತಿಲ್ಲ ಅಷ್ಟೆ. ಯೂನಸ್ ಕೂಡ ಭಾರತವನ್ನು ಒಡೆಯುವ ಆಸೆ ಹೊಂದಿರುವ ದುಷ್ಟ ಶಕ್ತಿಗಳಲ್ಲೇ ಒಬ್ಬರಾಗಿದ್ದಾರೆ!
ಏಕೆಂದರೆ ಅವರು ಪಾಕಿಸ್ತಾನದ ನಿಜವಾದ ಅಪರಾತಾರ. ಆತ ಚೀನಾಕ್ಕೆ ಹೋಗಿದ್ದಾಗ ಏನು ಹೇಳಿದ್ದರೆಂಬುದು ನೆನಪಿದೆಯೇ? ‘ಭಾರತದ ಸಪ್ತ ಸಹೋದರಿಯರ ನಿಜವಾದ ಪಾಲಕನೆಂದರೆ ಬಾಂಗ್ಲಾದೇಶ. ಏಕೆಂದರೆ ಆ ಏಳೂ ರಾಜ್ಯಗಳು ಬಾಂಗ್ಲಾದೇಶದಿಂದ ಸುತ್ತುವರಿಯಲ್ಪಟ್ಟಿವೆ. ಚೀನಾ ತನ್ನ ವ್ಯಾಪಾರವನ್ನು ಬಾಂಗ್ಲಾದೇಶದ ಮೂಲಕ ವಿಸ್ತರಣೆ ಮಾಡಬೇಕು’ ಎಂದು ಹೇಳಿದ್ದರು.
ಇಂಥ ಮೂರ್ಖತನದ ಮಾತಿಗೆ ಏನು ತಾನೇ ಹೇಳಲು ಸಾಧ್ಯ? ಬಾಂಗ್ಲಾದೇಶ ತನ್ನ ಶೇ.94ರಷ್ಟು ಗಡಿಯನ್ನು ಭಾರತದೊಂದಿಗೆ ಹಂಚಿಕೊಂಡಿದೆ ಎಂಬುದನ್ನು ಈತನಿಗೆ ಯಾರು ನೆನಪಿಸುತ್ತಾರೆ? ಅಂಥ ಭಾರತವನ್ನು ಅವರು ಹೆದರಿಸಲು ಯತ್ನಿಸುತ್ತಿದ್ದಾರೆ ಅಂದರೆ ಆಶ್ಚರ್ಯವೇ ಸರಿ.
ಆದರೂ ಸಾಕಷ್ಟು ಲೆಕ್ಕಾಚಾರ ಹಾಕಿಯೇ ಮೊಹಮ್ಮದ್ ಯೂನಸ್ ಈ ತಂತ್ರ ಹೆಣೆದಿ ದ್ದಾರೆ. ಅವರ ಉದ್ದೇಶವೇನು ಗೊತ್ತಾ? ಭಾರತದ ವಿರುದ್ಧ ಎಷ್ಟು ವಿಷ ಕಾರಬೇಕು ಅಂದರೆ ಅದನ್ನು ಕೇಳಿ ಕೇಳಿ ಬಾಂಗ್ಲಾದೇಶದ ಜನರು ತೀವ್ರಗಾಮಿಗಳನ್ನೇ ಚುನಾವಣೆಯಲ್ಲಿ ಆಯ್ಕೆ ಮಾಡಬೇಕು.
ಆಗ ಸಹಜವಾಗಿಯೇ ಅಲ್ಲಿನ ಅಧಿಕಾರ ಪಾಕಿಸ್ತಾನಿ ಹ್ಯಾಂಡ್ಲರ್‌ಗಳ ಕೈಗೆ ಹೋಗುತ್ತದೆ. ಇಲ್ಲಿ ಹ್ಯಾಂಡ್ಲರ್‌ಗಳು ಅಂದರೆ ಪಾಕಿಸ್ತಾನದ ಸೇನೆ, ಐಎಸ್‌ಐ ಮತ್ತು ಅಲ್ಲಿನ ಭಯೋತ್ಪಾ ದಕ ಸಂಘಟನೆಗಳು. ಇಷ್ಟಕ್ಕೂ ಬಾಂಗ್ಲಾದೇಶದಲ್ಲಿ ಭಾರತ ವಿರೋಧಿ ಭಾವನೆಗಳನ್ನು ಏಕೆ ಕೆರಳಿಸುವ ಯತ್ನ ನಡೆದಿದೆ ಅಂದರೆ, ಅಲ್ಲಿನ ನಾಯಕರಿಗೆ ಮತ್ತೊಮ್ಮೆ ಶೇಖ್ ಹಸೀನಾ ಪರ ಒಲವಿರುವ ವ್ಯಕ್ತಿಗಳೇ ಮುಂದಿನ ಚುನಾವಣೆಯಲ್ಲಿ ಗೆದ್ದು ದೇಶದ ಚುಕ್ಕಾಣಿ ಹಿಡಿಯಬಹುದು ಎಂಬ ಭಯವಿದೆ.
ಶೇಖ್ ಹಸೀನಾ ಪ್ರಧಾನಿಯಾಗಿದ್ದಾಗ ಇಸ್ಲಾಮಿಕ್ ತೀವ್ರಗಾಮಿಗಳನ್ನು ಮತ್ತು ಮೂಲ ಭೂತವಾದಿಗಳನ್ನು ಹದ್ದುಬಸ್ತಿನಲ್ಲಿ ಇರಿಸಿದ್ದರು. ಅವರು ಎದ್ದುನಿಂತ ತಕ್ಷಣ ತಲೆಗೆ ಬಡಿಯುತ್ತಿದ್ದರು. ಪಾಕಿಸ್ತಾನದ ಸೇನೆ ಅಥವಾ ಸರಕಾರದ ನಾಯಕರು ಬಾಂಗ್ಲಾದೇಶದ ವ್ಯವಹಾರಗಳಲ್ಲಿ ಮೂಗು ತೂರಿಸಲು ಯಾವುದೇ ಕಾರಣಕ್ಕೂ ಹಸೀನಾ ಅವಕಾಶ ನೀಡುತ್ತಿರಲಿಲ್ಲ.
ಹೀಗಾಗಿ ಭಯೋತ್ಪಾದನೆಯನ್ನು ಪೋಷಿಸುವವರು ಶೇಖ್ ಹಸೀನಾರನ್ನು ಹೇಗಾದರೂ ಮಾಡಿ ಮುಗಿಸಬೇಕು ಎಂದು ಪ್ರಯತ್ನಿಸುತ್ತಲೇ ಇದ್ದಾರೆ. ಆದರೆ ಅವರ ಕೈಗೆ ಶೇಖ್ ಹಸೀನಾ ಈಗ ಸಿಗುವುದಿಲ್ಲ. ಆಕೆ ಭಾರತದಲ್ಲಿ ಆಶ್ರಯ ಪಡೆದಿದ್ದಾರೆ. ಹೀಗಾಗಿ ಅವರನ್ನು ಬಾಂಗ್ಲಾದೇಶಕ್ಕೆ ಹಸ್ತಾಂತರ ಮಾಡಬೇಕೆಂದು ಅಲ್ಲಿನ ಸರಕಾರ ಕೇಳುತ್ತಲೇ ಇದೆ. ಆದರೆ ಯಾಕಾಗಿ ಹಸ್ತಾಂತರ ಮಾಡಬೇಕು? ಸ್ನೇಹಿತರಿಗೆ ಮೋಸ ಮಾಡುವುದು ಭಾರತದ ರಕ್ತ ದಲ್ಲೇ ಇಲ್ಲ.
ನಾವು ಶೇಖ್ ಹಸೀನಾ ಪರ ನಿಂತಿದ್ದೇವೆ. ಮುಂದೆಯೂ ಅವರ ಪರವಾಗಿಯೇ ನಿಲ್ಲುತ್ತೇವೆ. ತೀವ್ರಗಾಮಿಗಳಿಗೆ ಭಾರತವನ್ನು ಅಸ್ಥಿರಗೊಳಿಸಬೇಕು ಎಂಬ ಆಸೆ. ಹೀಗಾಗಿ ಢಾಕಾದಲ್ಲಿ ರುವ ಭಾರತದ ಹೈಕಮಿಷನ್ ಕಚೇರಿಯತ್ತ ಅಲ್ಲಿನ ಪ್ರತಿಭಟನಾಕಾರರ ಮೆರವಣಿಗೆ ಧಾವಿಸುತ್ತಿತ್ತು. 1979ರಲ್ಲಿ ಪಾಕಿಸ್ತಾನದಲ್ಲಿ ಅಮೆರಿಕದ ದೂತಾವಾಸದ ಕಚೇರಿಯನ್ನು ಧ್ವಂಸ ಮಾಡಿದಂತೆಯೇ ಈಗ ಢಾಕಾದಲ್ಲಿರುವ ಭಾರತೀಯ ದೂತಾವಾಸ ವನ್ನು ಧ್ವಂಸ ಮಾಡಬೇಕು ಎಂಬುದು ಅವರ ಉದ್ದೇಶವಾಗಿತ್ತು.
ಢಾಕಾದಲ್ಲಿ ಬೀಡುಬಿಟ್ಟಿರುವ ಪಾಕ್‌ನ ಐಎಸ್‌ಐ ಅಧಿಕಾರಿಗಳ ಅಜೆಂಡಾ ಇದೇ ಆಗಿದೆ. ಆದರೆ ಹಾಗೆಲ್ಲ ಹಿಂದಿನಿಂದ ಬಂದು ತಳ್ಳಿದರೆ ಭಾರತ ಸುಲಭಕ್ಕೆ ಕೆಳಗೆ ಬೀಳುವುದಿಲ್ಲ ಎಂಬುದನ್ನು ಬಾಂಗ್ಲಾದೇಶದಲ್ಲಿ ಅಧಿಕಾರ ನಡೆಸುತ್ತಿರುವವರು ಅರ್ಥಮಾಡಿಕೊಳ್ಳಬೇಕು.
ಭಯೋತ್ಪಾದಕರನ್ನು ಹೇಗೆ ಮಟ್ಟಹಾಕಬೇಕು ಎಂಬುದು ಭಾರತಕ್ಕೆ ಗೊತ್ತಿದೆ. ಭಯೋತ್ಪಾ ದಕರು ಅಮೆರಿಕದ ಹಿಂದಾದರೂ ಅಡಗಿರಲಿ, ಚೀನಾದ ಮಡಿಲಿನಲ್ಲಾದರೂ ಮಲಗಿರಲಿ ಅಥವಾ ಪಾಕಿಸ್ತಾನದ ಜತೆಗಾದರೂ ಕೈಜೋಡಿಸಿರಲಿ- ಅವರನ್ನು ತನಗಿಷ್ಟವಾದ ಸಮಯ ದಲ್ಲಿ ಹೇಗೆ ನೋಡಿಕೊಳ್ಳಬೇಕೋ ಹಾಗೆ ನೋಡಿಕೊಳ್ಳುವುದು ಭಾರತಕ್ಕೆ ತಿಳಿದಿದೆ.
ಆದ್ದರಿಂದ ಭಾರತದ ತಂಟೆಗೆ ಬರುವವರು ಇತಿಮಿತಿಯಲ್ಲಿ ಇದ್ದರೆ ಅವರ ಆರೋಗ್ಯಕ್ಕೇ ಒಳ್ಳೆಯದು. ಮುಗಿಸುವ ಮುನ್ನ: ಈಗಷ್ಟೇ ದೆಹಲಿಯಿಂದ ಮರಳಿದೆ. ಅಲ್ಲಿನ ವಾತಾವರಣ ನೋಡಿ ತುಂಬಾ ಆತಂಕವಾಗಿದೆ. ದೆಹಲಿಯ ಅನೇಕ ಪ್ರದೇಶಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ ಎಕ್ಯುಐ 600 ದಾಟಿದೆ.
ಎಕ್ಯುಐ 100ರ ಮೇಲೆ ಇದ್ದರೆ ಒಳ್ಳೆಯದಲ್ಲ. ಹಾಗಿರುವಾಗ 600 ದಾಟಿದೆ ಅಂದರೆ ದೆಹಲಿ ಯ ಕತೆ ಏನಾಗಿರಬೇಕು ಎಂಬುದನ್ನು ಊಹಿಸಿಕೊಳ್ಳಿ. ನನಗೊಂದು ಪ್ರಶ್ನೆ ಕೇಳಬೇಕು ಅನ್ನಿಸುತ್ತಿದೆ. ಭಾರತ ಇಂದು ವೈಜ್ಞಾನಿಕವಾಗಿ ಇಷ್ಟೊಂದು ದೊಡ್ಡ ಪ್ರಗತಿ ಸಾಧಿಸಿರು ವಾಗ ದೆಹಲಿಯ ಮಂಜು, ಹೊಗೆ ಮತ್ತು ಧೂಳಿನ ಮಿಶ್ರಣದ ಕೆಟ್ಟ ಗಾಳಿಗೆ ಪರಿಹಾರ ಹುಡುಕಲು ಸಾಧ್ಯವಿಲ್ಲವೆ? ದೆಹಲಿಯ ಜನರನ್ನು ಹೀಗೇ ಸಾಯಲು ಬಿಡಬೇಕೇ? ಅಲ್ಲಿನ ಮಕ್ಕಳು, ವೃದ್ಧರ ಗತಿಯೇನು?
(ಲೇಖಕರು ಹಿರಿಯ ಪತ್ರಿಕೋದ್ಯಮಿ)