ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Harish Kera Column: ಸ್ಪರ್ಧೆಯಲ್ಲಿ ಸೋತ ಕತೆಗಾರನಿಗೆ ಒಂದು ಪತ್ರ

ಕಮರ್ಷಿಯಲ್ ಸಿನಿಮಾದಲ್ಲಿ ಯಾವ ಎಲಿಮೆಂಟ್ ಎಲ್ಲಿ ತಂದರೆ ‘ಗಿಟ್ಟುತ್ತದೆ‘ ಎಂದು ಲೆಕ್ಕ ಹಾಕು ವಂತೆ ತೂಕ ಹಾಕಿ ಬರೆದ ಕತೆಗಳು ಬರಲು ಶುರುವಾಗುತ್ತದೆ. ಇದನ್ನೇ ಫಾರ್ಮ್ಯಾಟ್ ಕತೆಗಳು ಎನ್ನುತ್ತಾರೆ ಪ್ರಕಾಂಡ ವಿಮರ್ಶಕರು. ಹಾಗೆಂದರೆ ಸಿದ್ಧ ಸೂತ್ರದ ಕತೆಗಳು. ಇದು ಕತಾ ಸ್ಪರ್ಧೆ ಗಳಿಂದಷ್ಟೇ ಆಗಿರುವ ಅನಾಹುತವೇನಲ್ಲ. ಇದೇ ಮಾದರಿಯ ಜನಪ್ರಿಯ ಕತೆಗಳೂ ಇವೆ.

ಕಾಡುದಾರಿ

ಪ್ರಿಯ ಕತೆಗಾರ ಗೆಳೆಯ,

ಸತತ ಹತ್ತನೇ ಬಾರಿಗೂ ನಿನ್ನ ಕತೆ ಸ್ಪರ್ಧೆಯಲ್ಲಿ ತಿರಸ್ಕೃತವಾಯಿತು ಎಂದು ತಿಳಿಯಿತು. ಇದರಿಂದ ನೀನು ಆಘಾತಗೊಂಡಿರುವುದು ಸಹಜ. ಸ್ಪರ್ಧೆಗಳ ಕುರಿತು ನಿನ್ನ ಆಕ್ರೋಶದ ಮಾತುಗಳು ನನ್ನನ್ನು ಚಿಂತೆಗೀಡು ಮಾಡಿದವು. ಇದೆಲ್ಲದರಿಂದ ನೀನು ಖಿನ್ನತೆಯ ಕಡೆಗೆ ಸರಿಯುವ ಸಂಭವ ಕಾಣಿಸಿತು. ಹಾಗೇ ‘ಸ್ಪರ್ಧೆಯಲ್ಲಿ ತಿರಸ್ಕೃತನಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡ ಮೊದಲ ಕತೆಗಾರ’ ಎಂದು ಕನ್ನಡ ಸಾಹಿತ್ಯ ಇತಿಹಾಸದಲ್ಲಿ ನಿನ್ನ ಹೆಸರು ದಾಖಲಾಗಬಾರದು. ಹೀಗಾಗಿ ಈ ಪತ್ರ. ಬಹುಮಾನ ಬಂದವರಿಗೇ ಮತ್ತೆ ಮತ್ತೆ ಬರುತ್ತಿದೆ ಎಂಬುದು ನಿನ್ನ ಮೊದಲ ಆಕ್ಷೇಪ. ಯಾಕೆ ಬರಬಾರದು? ತೀರ್ಪುಗಾರರು ಕತೆಗಳನ್ನು ನೋಡುತ್ತಾರೆ ಹೊರತು ಕತೆಗಾರರು ಯಾರು ಎಂಬು ದನ್ನಲ್ಲ.

ತೀರ್ಪುಗಾರರಿಗೆ ಕತೆಗಾರ ಯಾರು ಎಂಬುದು ಗೊತ್ತಾಗದಂತೆ ಕತೆಗಳನ್ನು ನೀಡಲಾಗಿರುತ್ತದೆ ಎಂಬುದು ನಿನಗೆ ಗೊತ್ತಿದೆ. ಗುರುಸೇವೆ ಮಾಡಿ ಡಾಕ್ಟರೇಟ್ ದಕ್ಕಿಸಿಕೊಳ್ಳುವ ಶಿಷ್ಯರಂತೆ ಈ ಕತೆಗಾರರೇನೂ ತೀರ್ಪುಗಾರರ ಸೇವೆ ಮಾಡಿ ಬಹುಮಾನ ದಕ್ಕಿಸಿಕೊಳ್ಳುವುದಿಲ್ಲ ಎಂಬುದು ಖಾತ್ರಿ.

ಯಾಕೆಂದರೆ ಯಾರು ಕತೆಗಾರರು ಎಂದು ತೀರ್ಪುಗಾರರಿಗೂ, ಯಾರು ತೀರ್ಪುಗಾರರು ಎಂದು ಕತೆಗಾರರಿಗೂ ಗೊತ್ತಿರುವುದಿಲ್ಲವಲ್ಲ. ಹೀಗಾಗಿ ಸಾಕಷ್ಟು ಉತ್ತಮವಾದ ಕತೆಗಳಿಗೇ ಬಹುಮಾನ ನೀಡಲು ನಮ್ಮ ಜಡ್ಜ್‌ಗಳು ಬದ್ಧರಾಗಿರುತ್ತಾರೆ ಎಂಬುದು ನಿಜ.

ಆದರೆ ಇನ್ನೊಂದು ಸಂಗತಿಯನ್ನೂ ಗಮನಿಸಬೇಕು. ರಾತ್ರಿ ಕರೆಂಟ್ ಹೋದಾಗ, ಮನೆಯೊಳಗೆ ನಾವು ಯಾವುದೇ ಬೆಳಕಿನ ಸಹಾಯ ಇಲ್ಲದೆ ಓಡಾಡುವ ಹಾಗೆ, ಈ ತೀರ್ಪುಗಾರರು ಸಾಮಾನ್ಯವಾಗಿ ಸ್ಪರ್ಧೆಗೆ ಬರುವ ಕತೆಗಳ ವಸ್ತು ಶೈಲಿ ಎಡವು ತಡವುಗಳನ್ನೆ ನೋಡಿ ಇವು ಯಾರ ಕತೆಗಳು ಎಂದು ಅಂದಾಜಿನ ಮೇಲೇ ಊಹಿಸಬಲ್ಲರು.

ಇದನ್ನೂ ಓದಿ: Harish Kera Column: ತಾಲಿಬಾನ್‌ ಸಚಿವರಿಗೆ ಸುಶ್ಮಿತಾ ಆತ್ಮಕತೆಯ ಗಿಫ್ಟ್‌

ಅದು ಸ್ಪರ್ಧಾರಣ್ಯದೊಳಗೆ ಸತತ ಓಡಾಡಿ ದಕ್ಕಿಸಿಕೊಂಡ ಅಭ್ಯಾಸಬಲ. ಹೀಗಾಗಿ ತಮ್ಮ ಆಪ್ತರ ಕತೆ ಯಾವುದೆಂದು ಊಹಿಸುವ ಸಾಧ್ಯತೆ ಇದೆ. ಇದು ಕೂಡ ಊಹೆ ಮಾತ್ರ. ಇದರಿಂದ ಜಡ್ಜು ಗಳನ್ನು ಕಟಕಟೆಯಲ್ಲಿ ನಿಲ್ಲಿಸಲು ಸಾಧ್ಯವಿಲ್ಲ. ತೀರ್ಪುಗಾರರು ನ್ಯಾಯ ಅಥವಾ ಅನ್ಯಾಯದ ತಕ್ಕಡಿ ತೂಗಲು ಅಲ್ಲಿ ಕುಳಿತಿಲ್ಲ.

ಕತೆಗಾರನ ಸಾಮರ್ಥ್ಯ ಅಳೆಯುವುದು ಅವರ ಕೆಲಸವಲ್ಲ. ತನ್ನ ಮುಂದಿರುವ ಕತೆಗಳಲ್ಲಿ ಆ ಕ್ಷಣಕ್ಕೆ ಮಹತ್ವದ್ದು ಎಂದು ಅವರಿಗೆ ಅನಿಸುವ ಕತೆಗಳನ್ನು ಅವರು ಆಯುತ್ತಾರೆ. ನೀನು ಇದಲ್ಲದೇ ಬೇರೊಂದು ಕತೆ ಕಳಿಸಿದ್ದರೆ, ಮೊದಲ ಬಹುಮಾನ ಪಡೆದವನು ಆ ಕತೆಯಲ್ಲದೇ ಬೇರೊಂದನ್ನು ಕಳಿಸಿದ್ದರೆ, ಸ್ಪರ್ಧೆಯ ಮೊದಲ ಸುತ್ತಿನ ಆಯ್ಕೆ ಇನ್ಯಾರೋ ಮಾಡಿದ್ದರೆ, ತೀರ್ಪುಗಾರರ ಸ್ಥಾನದಲ್ಲಿ ಬೇರೊಬ್ಬರು ಇದ್ದಿದ್ದರೆ, ತೀರ್ಪುಗಾರರ ಆ ಕ್ಷಣದ ಮೂಡ್ ಬೇರೆಯದಾಗಿದ್ದರೆ ಕೂಡ ಜಡ್ಜ್‌ಮೆಂಟ್ ಬೇರೆಯೇ ಆಗಬಹುದಿತ್ತು. ಬ್ರಹ್ಮಾಂಡದಲ್ಲಿ ಒಂದು ಚಿಟ್ಟೆ ಎಲ್ಲಾ ರೆಕ್ಕೆ ಅಲುಗಿಸಿದರೆ ಇನ್ನೆ ಸುಂಟರ ಗಾಳಿ ಎದ್ದು ಬಿಡುವಂತೆ ಇದೆಲ್ಲ.

ಇದು ಮೇಲಿನ ಹಂತದ ಜಡ್ಜುಗಳ ಪಾಡು. ಮೊದಲ ಹಂತದ ಆಯ್ಕೆ ಸಮಿತಿಯ ಪಾಡು ಬೇರೆಯೇ. ಕನ್ನಡದಲ್ಲಿ ಇಂದು ತಿಣುಕಿದನು ಫಣಿರಾಯ ಕತೆಗಾರರ ಭಾರದಲಿ ಎಂಬಂತಿದೆ. ಸ್ಪರ್ಧೆಗೆ ಬರುವ ನೂರಾರು, ಕೆಲವೊಮ್ಮೆ ಸಾವಿರಾರು ಕತೆಗಳನ್ನು ಓದಿ ಆಯ್ದ ಇಪ್ಪತ್ತೈದು ಕತೆಗಳನ್ನು ಆರಿಸ ಬೇಕಾದರೆ ಆಯ್ಕೆ ಸಮಿತಿಯವರ ಹೆಣ ಬಿದ್ದು ಹೋಗುತ್ತದೆ. ಇದೇ ಪರಿಸ್ಥಿತಿ ಮುಂದುವರಿದರೆ ಅಂಗಿ ಹರಿದುಕೊಂಡು ಬೀದಿಯಲ್ಲಿ ಓಡುವ ತೀರ್ಪುಗಾರರನ್ನೂ ನಾವು ನೋಡಬೇಕಾದೀತು.

Screenshot_6 ಋ

ನೂರಾರು ಕತೆಗಳನ್ನು ಓದೀ ಓದೀ ಕೊನೆಕೊನೆಗೆ ಎಲ್ಲ ಕತೆಗಳು ವೈರಿಗಳಂತೆ ಕಾಣಿಸಲು ಶುರು ವಾಗುತ್ತವೆ. ಅಂಥ ಸನ್ನಿವೇಶದಲ್ಲಿ ನಿನ್ನ ಕತೆ ತಂಗಾಳಿಯಂತೆ ಬೀಸಿದರೆ ಮಾತ್ರ ಮೇಲೆ ಬರಲು ಸಾಧ್ಯವಿದೆ.

ನಾನು ಹಳ್ಳಿಯಿಂದ ಬಂದವನು. ಹೀಗಾಗಿಯೇ ನನಗೆ ಅನ್ಯಾಯ ಆಗುತ್ತಿದೆ ಎಂಬುದು ನಿನ್ನ ಮತ್ತೊಂದು ಆರೋಪ. ಹಾಗೇನಿಲ್ಲ. ಕನ್ನಡದಲ್ಲಿ ನಡೆಯುವ ಬಹಳಷ್ಟು ಕತಾಸ್ಪರ್ಧೆಗಳಲ್ಲಿ ಗ್ರಾಮೀಣ ಪ್ರದೇಶಗಳಿಂದ ಬಂದವರೇ ಗೆದ್ದಿದ್ದಾರೆ. ಜೊತೆಗೆ ದಲಿತರು, ಅಲ್ಪಸಂಖ್ಯಾತರು, ಎಲ್‌ಜಿ ಬಿಟಿಯವರಿಗೆ ನ್ಯಾಯಯುತ ಪಾಲು ಸಿಕ್ಕಿದೆ.

ಕನ್ನಡ ಕಥಾಲೋಕ ಆ ಮಟ್ಟಿಗೆ ವೈವಿಧ್ಯವನ್ನು ಗೌರವಿಸಿದ ಕ್ಷೇತ್ರ. ಕೆಲವು ವಿಮರ್ಶಕರು ಮಾತ್ರ ಇನ್ನೂ ’ಗ್ರಾಮೀಣ ಸಂವೇದನೆ’ ಹಾಗೂ ’ನಗರ ಸಂವೇದನೆ’ ಎಂದು ವರ್ಗೀಕರಿಸುತ್ತಾರೆ. ‘ನಗರ ಸಂವೇದನೆಯ ಕತೆಗಳು ಬರಬೇಕು‘ ಅನ್ನುತ್ತಾರೆ. ನಿಜಕ್ಕೂ ಅಂಥ ವರ್ಗೀಕರಣಕ್ಕೆ ಅರ್ಥವಿಲ್ಲ. ಇಂದು ಕತೆಗಳು ನಗರ ಸಂವೇದನೆ, ಐಟಿ ಸಂವೇದನೆ, ಎನ್ ಆರ್‌ಐ ಸಂವೇದನೆ, ಕಾರ್ಪೊರೇಟ್ ಸಂವೇದನೆಗಳನ್ನೆಲ್ಲ ದಾಟಿ ಎಐ ಸಂವೇದನೆಯವರೆಗೆ ಬಂದು ನಿಂತಿವೆ.

ಕತೆಗಾರ ಸ್ಪಂದನಶೀಲನಾಗಿದ್ದಷ್ಟೂ ಅವನ ಕತೆ ಇಂಥ ಗಡಿಗಳನ್ನು ಮೀರುತ್ತದೆ. ಗಿರಡ್ಡಿ ಗೋವಿಂದರಾಜರು ಒಂದು ಕಡೆ ಹೇಳಿದ್ದರು- ಮೊದಲ ಪ್ರಶಸ್ತಿ ಬರುವುದೇ ಕಷ್ಟ. ಆಮೇಲೆ ಒಂದರ ಹಿಂದೊಂದರಂತೆ ಎಲ್ಲ ಬರಲು ಶುರುವಾಗುತ್ತವೆ. ಒಂದು ಬಹುಮಾನ ಬಂದಾಗ ಎಲ್ಲರೂ ನಿನ್ನನ್ನು ಗುರುತಿಸುತ್ತಾರೆ.

ಪ್ರಶಸ್ತಿ ಕೊಡುವವರಿಗೆ ‘ಇದೊಂದು ಮಿಕ ಇದೆ’ ಅನಿಸಲು ಶುರುವಾಗುತ್ತದೆ. ಕತಾಸ್ಪರ್ಧೆಯಲ್ಲೂ ಇದು ನಡೆಯುತ್ತದೆ. ಆದರೆ ಇಲ್ಲಿ ಆಗುವ ಬದಲಾವಣೆ ಕತೆಗಾರರ ಹೊರತು ಸ್ಪರ್ಧೆ ನಡೆಸುವವ ರಲ್ಲಿ ಅಲ್ಲ. ನಿನ್ನ ಒಂದು ಕತೆಗೆ ಬಹುಮಾನ ಬಂತು ಎಂದಿಟ್ಟುಕೊ. ಅಲ್ಲಿಗೆ ಎಂಥ ಕತೆ ಬರೆದರೆ ಬಹುಮಾನ ಬರುತ್ತದೆ ಎಂಬುದು ಕೂಡ ನಿನಗೆ ಖಚಿತವಾಗುತ್ತದೆ.

ಕಮರ್ಷಿಯಲ್ ಸಿನಿಮಾದಲ್ಲಿ ಯಾವ ಎಲಿಮೆಂಟ್ ಎಲ್ಲಿ ತಂದರೆ ‘ಗಿಟ್ಟುತ್ತದೆ‘ ಎಂದು ಲೆಕ್ಕ ಹಾಕುವಂತೆ ತೂಕ ಹಾಕಿ ಬರೆದ ಕತೆಗಳು ಬರಲು ಶುರುವಾಗುತ್ತದೆ. ಇದನ್ನೇ ಫಾರ್ಮ್ಯಾಟ್ ಕತೆಗಳು ಎನ್ನುತ್ತಾರೆ ಪ್ರಕಾಂಡ ವಿಮರ್ಶಕರು. ಹಾಗೆಂದರೆ ಸಿದ್ಧ ಸೂತ್ರದ ಕತೆಗಳು. ಇದು ಕತಾ ಸ್ಪರ್ಧೆ ಗಳಿಂದಷ್ಟೇ ಆಗಿರುವ ಅನಾಹುತವೇನಲ್ಲ. ಇದೇ ಮಾದರಿಯ ಜನಪ್ರಿಯ ಕತೆಗಳೂ ಇವೆ.

ಅಲ್ಲೂ ಕೆಲವು ಲೆಕ್ಕಾಚಾರ ಇವೆ. ಕತೆ ಎಷ್ಟು ಸಾಧ್ಯವೋ ಅಷ್ಟು ಮೀಡಿಯೋಕರ್ ಆಗಿರತಕ್ಕದ್ದು. ಬರಹದ ಶೈಲಿ ಎಲ್ಲೂ ಓದುಗನಿಗೆ ಕಷ್ಟ ಕೊಡುವಂತಿರಬಾರದು ಮತ್ತು ಘಟನೆಗಳ ಮೇಲೆ ಘಟನೆ ಗಳು ಚಕಚಕಾಂತ ನಡೆಯುತ್ತಿರಬೇಕು. ಟಿವಿ ಸೀರಿಯಲ್‌ಗಳಷ್ಟೇ ಸರಳವಾದ ಸಂಭಾಷಣೆ ಗಳಿರಬೇಕು. ಸಾಕಷ್ಟು ಕಣ್ಣೀರು ಮತ್ತು ಪ್ರೇಮ ಇರಬೇಕು. ಸ್ಪರ್ಧೆಗೆ ಇಂಥ ಕತೆಗಳೂ ಬರುತ್ತವೆ. ಆದರೆ ಮೊದಲ ಸುತ್ತಿನ ನಪಾಸಾಗುತ್ತವೆ. ಸ್ಪರ್ಧೆಯ ಸೂತ್ರಗಳೇ ಬೇರೆ. ಶೋಷಣೆ, ಮತೀಯ ಕ್ರೌರ್ಯ, ಸಾಮಾಜಿಕ ನ್ಯಾಯ, ಲಿಂಗತ್ವ ನ್ಯಾಯ, ಕೋಮು ಸಾಮರಸ್ಯ ಮುಂತಾದ ಪರಿಕಲ್ಪನೆ ಗಳಿಗೆ ಇಲ್ಲಿ ಪ್ರಾಧಾನ್ಯ.

ಬದಲಾದ ಕಾಲಮಾನದಲ್ಲಿ ಕಾರ್ಪೊರೇಟ್ ಕ್ರೌರ್ಯ ಮತ್ತು ಎಐ ಸೋಜಿಗಗಳೂ ಇಲ್ಲಿ ಸೇರಿ ಕೊಂಡಿವೆ. ಇದೆ ಅಪ್ರಸ್ತುತ ಎಂದು ನನ್ನ ವಾದವಲ್ಲ. ಆದರೆ ಈ ವಸ್ತುಗಳನ್ನು ನಿರ್ವಹಿಸು ವಲ್ಲಿ ಸೂಕ್ಷ ತೆ ಅಗತ್ಯ. ಈ ಸೂಕ್ಷ ಗಳು ಕಳೆದುಹೋದಾಗ ಕತೆಗಳು ಒಂದೇ ಜಾಡಿಗೆ ಬೀಳುತ್ತವೆ.

ಸಮಸ್ಯೆ ಇರುವುದು ಮೊಂಡು ಬಿದ್ದಿರುವ ನಮ್ಮ ಜಡ್ಜ್‌ಮೆಂಟ್‌ಗಳಲ್ಲಿ. ನಮ್ಮ ಕತೆಗಾರರೂ ತೀರ್ಪುಗಾರರೂ ಬಹಳ ವರ್ಷಗಳಿಂದ ಬದಲಾಗಿಯೇ ಇಲ್ಲ. ಇನ್ನೂ ಅದೇ ಹಳೆಯ ನಿರೂಪಣಾ ವಿಧಾನಗಳಿಗೆ ಜೋತುಬಿದ್ದಿದ್ದಾರೆ. ಕಡಲಾಚೆಯ ಕತೆಗಾರರು ನಮ್ಮನ್ನೆಲ್ಲ ದಾಟಿ ಬಹಳ ಮುಂದೆ ಹೋಗಿ ಬಿಟ್ಟಿದ್ದಾರೆ.

ಇಮ್ಮರ್ಸಿವ್, ಇಂಟರ್ಯಾಕ್ಟಿವ್ ಕಥನಗಾರಿಕೆಗಳು ಬಂದಿವೆ. ಮಲ್ಟಿಮೀಡಿಯಾ ಕಥನಗಳು ಬಂದಿವೆ. ಮೆಟಾಫಿಕ್ಷನ್ ಬಂದಿದೆ. ಹ್ಯೂಮನ್ ಲೈಬ್ರರಿಗಳಿವೆ. ಎಐ ನೆರವಂತೂ ಎಲ್ಲ ಕಡೆಯೂ ಯಥೇಚ್ಛವಾಗಿದೆ. ನಾವೀಗ ಓದಿ ಮೆಚ್ಚಿಕೊಳ್ಳುತ್ತಿರುವ ಅರುಂಧತಿ ರಾಯ್ ಅವರ ‘ಮದರ್ ಮೇರಿ ಕಮ್ಸ ಟು ಮಿ’ ಕೃತಿಯಲ್ಲಿ ಫಿಕ್ಷನ್ ಎಷ್ಟು, ನಿಜ ಎಷ್ಟು ಎಂಬುದು ಪತ್ತೆ ಹಚ್ಚುವುದು ಕಷ್ಟ. ಹಾಗೆಯೇ ಫಿಕ್ಷನ್ ಎಂದು ಕರೆಸಿಕೊಂಡ ಕೃತಿಗಳಲ್ಲಿ ಎಐಯ ಕೊಡುಗೆ ಎಷ್ಟು ಎಂದು ಕಂಡು ಹಿಡಿಯುವುದು ಕಷ್ಟವಿದೆ.

ಆದರೆ ನಮ್ಮ ಜಡ್ಜುಗಳು ಮಾತ್ರ ತಮ್ಮ ಹತ್ಯಾರಗಳಿಗೆ ಸಾಣೆ ಹಿಡಿಯದೆ ಇನ್ನೂ ದಶಕಗಳ ಹಳೆಯ ಮಾನದಂಡ ಗಳನ್ನು ಹಿಡಿದುಕೊಂಡು ಕತೆಗಳನ್ನು ಅಳೆಯುತ್ತಿದ್ದಾರೆ. ಹೊಸ ಕತೆಗಾರರು ಬಂದಿ ದ್ದಾರೆ, ಆದರೆ ಹೊಸ ಬಗೆಯ ಕತೆಗಾರಿಕೆಯನ್ನು ಹೇಗೆ ಕಾಣಬೇಕು ಎಂಬುದು ಹಿರಿಯರಿಗೆ ಗೊತ್ತಾಗುತ್ತಿಲ್ಲ. ಹೊಸ ಕತೆಗಳು ಮೊದಲ ಸುತ್ತಿನಿಂದ ಮುಂದಕ್ಕೆ ಹೋಗುತ್ತಿಲ್ಲ. ಹೀಗಾಗಿ ಜಡ್ಜುಗಳು ಕೂಡ ಕತ್ತಲಲ್ಲಿದ್ದಾರೆ. ಅವರನ್ನು ನಮ್ಮ ಕತೆಗಾರರೇ ಕೈಹಿಡಿದು ಮುನ್ನಡೆಸಬೇಕಿದೆ.

ಏನೋ ಹೇಳಲು ಹೋಗಿ ಏನೋ ಹೇಳಿದೆ. ನಿನ್ನ ಕತೆಗಾರಿಕೆಯ ವಿಧಾನ ಯಾರಿಗೂ ಅರ್ಥ ವಾಗುತ್ತಿಲ್ಲ ಎಂದು ಕೊರಗಬೇಡ. ಎರಡು ಸಾಧ್ಯತೆಗಳಿವೆ- ಒಂದೋ ನಿನ್ನ ಕತೆ ಅತ್ಯಂತ ಕಳಪೆ ಯಾಗಿರಬೇಕು, ಇಲ್ಲವೇ ಯಾರಿಗೂ ಅರ್ಥವಾಗದಷ್ಟು ಹೊಚ್ಚ ಹೊಸ ರೀತಿಯದಾಗಿರಬೇಕು. ಮೊದಲಿನದನ್ನು ಸುಧಾರಿಸಿಕೊಳ್ಳಬಹುದು. ಎರಡನೆಯದನ್ನು ಓದುಗರೇ ಬರಮಾಡಿಕೊಳ್ಳ ಬೇಕಷ್ಟೆ. ಆದರೆ ಓದುಗರ ಮೇಲೆ ನನಗೆ ಅಂಥ ಭರವಸೆಯೇನಿಲ್ಲ.

ಅವರು ಒಳ್ಳೆಯ ಕಥೆ ಸಿಗದಿದ್ದರೆ ಬೇಸರ ಮಾಡಿಕೊಳ್ಳದೆ ರೀಲ್ಸ ನೋಡುತ್ತಾ ಆಯುಷ್ಯ ಕಳೆಯ ಬಲ್ಲರು. ಕತಾಲೋಕದಲ್ಲಿ ತನ್ನ ಸ್ಥಾನವನ್ನು ಕಂಡುಕೊಳ್ಳುವ ಹೊಣೆ ಕತೆಗಾರನದ್ದೇ ಇರುತ್ತದೆ. ಸ್ಪರ್ಧೆಯಲ್ಲಿ ಗೆಲ್ಲದ ಕತೆ, ಒಳ್ಳೆಯ ಕತೆಯಲ್ಲ ಎಂದೂ ಭಾವಿಸಬೇಕಿಲ್ಲ. ಕನ್ನಡದ ಅನೇಕ ಒಳ್ಳೆಯ ಕತೆಗಳು ಸ್ಪರ್ಧೆಗಳಿಂದ ಬಂದವಲ್ಲ. ಗೋಪಾಲಕೃಷ್ಣ ಅಡಿಗರು ಕತೆಗಾರ ಕೆ. ಸದಾಶಿವ ತೀರಿ ಕೊಂಡಾಗ ‘ನಮ್ಮಸದಾಶಿವ’ ಎಂಬ ಕವಿತೆ ಬರೆದಿದ್ದರು.

ಅದರ ಸಾಲುಗಳು ಹೀಗಿವೆ- ‘ಕಥೆ ಬರೆದನಂತೆ- ಕತೆಯೇನು ಮಣ್ಣು- ತನ್ನೆದೆಯ/ ಖಂಡ ಖಂಡ ಕತ್ತರಿಸಿ ಕಿತ್ತು ಹಿಡಿದು ಹಿಂಡಿ ಹಿಂಡಿ/ ಭಟ್ಟಿಯಿಳಿಸಿದ ತೊಟ್ಟು ತೊಟ್ಟು/ ನಾಗಾಲೋಟದಲ್ಲು ಅಲ್ಲಲ್ಲಿ ತಡೆತಡೆದು ಕೆತ್ತಿರುವ ತಳದ ಗುಟ್ಟು.’ ಕತೆಗಾರನಾಗಿ ನೀನು ನಿನ್ನದೇ ದನಿಯೊಂದನ್ನು ಕಂಡುಕೊಳ್ಳುವುದು ಬಹಳ ಮುಖ್ಯ. ಎದೆಯ ಖಂಡವನ್ನೇ ಕತ್ತರಿಸಿ ಹಿಂಡಿ ಭಟ್ಟಿಯಿಳಿಸಿದಂತೆ ಬರೆದವರ ಕತೆಗಳು ಅಮರವಾಗಿವೆ.

ಅದರಲ್ಲಿ ಜೀವನಾನುಭವ, ಕಲ್ಪಕಶಕ್ತಿ, ಬರೆಯುವ ಕೌಶಲ್ಯ ಎಲ್ಲ ಹದವಾಗಿ ಎರಕವಾಗಿವೆ. ಅಂಥದ್ದನ್ನು ಬರೆಯುತ್ತಾ ಬರೆಯುತ್ತಾ ನೀನೇ ಕಥೆಯಾಗುತ್ತೀ. ಆಗ ನಿನ್ನ ಕಣ್ಣಿನಲ್ಲಿ ಒಬ್ಬಾನೊಬ್ಬ ಓದುಗ ಮಾತ್ರ ಜೀವಂತವಾಗಿರುತ್ತಾನೆ. ಆತ ಬೇರೆ ಯಾರೂ ಅಲ್ಲದೆ ನೀನೇ ಆಗಿರುತ್ತೀ. ‘ನಾನು ಓದಬಯಸುವಂಥ ಕತೆಯನ್ನು ನಾನು ಬರೆಯುತ್ತೇನೆ’ ಎನ್ನುತ್ತಾನೆ ಮಾರ್ಕ್ ಟ್ವೇನ್.

ತನಗೆ ತಾನೇ ಆಡಿಕೊಂಡ ಮಾತಿಗೆ ಹತ್ತು ಜನ ಕೇಳಬಹುದಾದ ಜೀವಂತಿಕೆಯೂ ಇರುತ್ತದೆ. ಆಗ ಇತರರು ನಿನ್ನನ್ನು ಗುರುತಿಸಿದರೋ ಇಲ್ಲವೋ, ಸ್ಪರ್ಧೆಯಲ್ಲಿ ಗೆzಯೋ ಇಲ್ಲವೋ ಎಂಬುದೆಲ್ಲ ಅಮುಖ್ಯವಾಗುತ್ತವೆ. ಮುಂದಿನ ಸಲ ಸ್ಪರ್ಧೆಗಾಗಿ ಕತೆ ಬರೆಯಬೇಡ. ನಿನಗೆ ನೀನೇ ಸ್ಪರ್ಧೆಯಾಗು. ಅದೇ ಗೆಲ್ಲುವ ದಾರಿ.

ಹರೀಶ್‌ ಕೇರ

View all posts by this author