ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Harish Kera Column: ತಾಲಿಬಾನ್‌ ಸಚಿವರಿಗೆ ಸುಶ್ಮಿತಾ ಆತ್ಮಕತೆಯ ಗಿಫ್ಟ್‌

ಅಫ್ಘಾನಿಸ್ತಾನದಿಂದ ಪಲಾಯನ ಮಾಡಲು ಎರಡು ವಿಫಲ ಪ್ರಯತ್ನಗಳನ್ನು ಮಾಡಿದಳು. ಆಕೆಯನ್ನು ಬಂಧಿಸಿ ಗೃಹಬಂಧನದಲ್ಲಿ ಇರಿಸಲಾಯಿತು. ಆಗ ಅಲ್ಲಿದ್ದ ತಾಲಿಬಾನ್ ಆಡಳಿತ ಆಕೆಯ ವಿರುದ್ಧ ಫತ್ವಾ ಹೊರಡಿಸಿತು. ಆ ಸಮಯದಲ್ಲಿ ಹಾಗೂ ಮುಂದೆ ಏನೇನಾಯಿತು ಎಂಬುದನ್ನು ಸುಶ್ಮಿತಾ ತಮ್ಮ ‘ಕಾಬೂಲಿ ವಾಲರ್ ಬಂಗಾಲಿ ಬೌ’ ಆತ್ಮಕತೆಯಲ್ಲಿ ಬರೆದು ಕೊಂಡಿದ್ದಾರೆ.

Harish Kera Column: ತಾಲಿಬಾನ್‌ ಸಚಿವರಿಗೆ ಸುಶ್ಮಿತಾ ಆತ್ಮಕತೆಯ ಗಿಫ್ಟ್‌

-

ಹರೀಶ್‌ ಕೇರ ಹರೀಶ್‌ ಕೇರ Oct 16, 2025 7:58 AM

ಕಾಡುದಾರಿ

ಸುಶ್ಮಿತಾ ಬ್ಯಾನರ್ಜಿ ಎಂಬವರು ಬಂಗಾಲಿ ಲೇಖಕಿ, ಸಾಹಿತಿ. ಕೋಲ್ಕತ್ತಾದಲ್ಲಿ ಮಧ್ಯಮವರ್ಗದ ಕುಟುಂಬದಲ್ಲಿ ಜನಿಸಿದವಳು. ತಂದೆ ನಾಗರಿಕ ರಕ್ಷಣಾ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಮೂವರು ಸಹೋದರರಿಗೆ ಏಕೈಕ ಸಹೋದರಿ. ಕೋಲ್ಕತ್ತಾದಲ್ಲಿ ನಡೆದ ಒಂದು ರಂಗಭೂಮಿ ರಿಹರ್ಸಲ್‌ನಲ್ಲಿ ಅಫಘಾನಿಸ್ತಾನ ಮೂಲದ ಉದ್ಯಮಿ ಜಾನ್‌ಬಾಜ್ ಖಾನ್ ಎಂಬಾತನನ್ನು ಭೇಟಿ ಮಾಡುತ್ತಾಳೆ.

ನಂತರ ಪ್ರಣಯ. 1988ರಲ್ಲಿ ಗುಟ್ಟಾಗಿ ಅವನನ್ನು ಮದುವೆಯಾಗುತ್ತಾಳೆ. ಹೆತ್ತವರು ವಿರೋಧಿಸುತ್ತಾರೆ ಎಂಬ ಭಯ. ನಿರೀಕ್ಷಿಸಿದಂತೆಯೇ ತಂದೆ ತಾಯಿ ಇದನ್ನು ವಿರೋಧಿಸಿದರು. ಸುಶ್ಮಿತಾ, ಖಾನ್ ಜೊತೆ ಅಫ್ಘಾನಿಸ್ತಾನಕ್ಕೆ ಓಡಿ ಹೋದರು. ಅಲ್ಲಿ ಗೊತ್ತಾಗಿದ್ದೆಂದರೆ, ಪತಿ ಜಾನ್‌ಬಾಜ್‌ಗೆ ಈಗಾಗಲೇ ಇನ್ನೊಬ್ಬಳು ಪತ್ನಿ ಇದ್ದಾಳೆ ಎಂಬುದು. ಗುಲ್ಗುಟಿ ಎಂದವಳ ಹೆಸರು. ಸುಶ್ಮಿತಾಗೆ ಆಘಾತವಾಯಿತು.

ಪಾಟಿಯಾ ಗ್ರಾಮದಲ್ಲಿರುವ ಅವರ ಭಾರಿ ಮನೆಯಲ್ಲಿ ಸುಶ್ಮಿತಾಳನ್ನು ತಮ್ಮ ಮೂವರು ಸೋದರ ಮಾವಂದಿರು, ಅವರ ಪತ್ನಿಯರ ಕಣ್ಗಾವಲಲ್ಲಿ ಇಟ್ಟು ಖಾನ್ ಬ್ಯುಸಿನೆಸ್‌ಗಾಗಿ ಕೋಲ್ಕತ್ತಾಗೆ ಮರಳಿದ. ಅವನೊಂದಿಗೇ ಬರಲು ಸುಶ್ಮಿತಾ ಮಾಡಿದ ಪ್ರಯತ್ನ ವಿಫಲವಾಯಿತು.

ಅಫ್ಘಾನಿಸ್ತಾನದಿಂದ ಪಲಾಯನ ಮಾಡಲು ಎರಡು ವಿಫಲ ಪ್ರಯತ್ನಗಳನ್ನು ಮಾಡಿದಳು. ಆಕೆಯನ್ನು ಬಂಧಿಸಿ ಗೃಹಬಂಧನದಲ್ಲಿ ಇರಿಸಲಾಯಿತು. ಆಗ ಅಲ್ಲಿದ್ದ ತಾಲಿಬಾನ್ ಆಡಳಿತ ಆಕೆಯ ವಿರುದ್ಧ ಫತ್ವಾ ಹೊರಡಿಸಿತು. ಆ ಸಮಯದಲ್ಲಿ ಹಾಗೂ ಮುಂದೆ ಏನೇನಾಯಿತು ಎಂಬುದನ್ನು ಸುಶ್ಮಿತಾ ತಮ್ಮ ‘ಕಾಬೂಲಿ ವಾಲರ್ ಬಂಗಾಲಿ ಬೌ’ ಆತ್ಮಕತೆಯಲ್ಲಿ ಬರೆದು ಕೊಂಡಿದ್ದಾರೆ.

H Kera 16

’ಕಾಬೂಲಿವಾಲಾನ ಬಂಗಾಲಿ ಹೆಂಡತಿ’ ಎಂಬ ಹೆಸರಿನಲ್ಲಿ ಕನ್ನಡಕ್ಕೂ ಇವರ ಕತೆ ಮನಿಷಾ ಕೊಯಿರಾಲ ಅಭಿನಯದಲ್ಲಿ ’ಎಸ್ಕೇಪ್ ಫ್ರಂ ತಾಲಿಬಾನ್’ ಹೆಸರಿನಲ್ಲಿ (೨೦೦೩) ಸಿನಿಮಾ ಕೂಡ ಆಗಿದೆ. ಸುಶ್ಮಿತಾ ಒಂದು ಲೇಖನದಲ್ಲಿ ಆಗಿನ ಅಫಘಾನಿಸ್ತಾನದ ಸ್ಥಿತಿಗತಿ, ತಮ್ಮ ಜೀವನದ ಬಗ್ಗೆ ತಾವೇ ಬರೆದುಕೊಂಡಿದ್ದನ್ನು ಈಗ ಓದಿ: ಅಫಘಾನಿಸ್ತಾನ... ಅಲ್ಲಿ ನಾನು ಗಂಡನ ಮೂವರು ಸಹೋದರರು, ಅವರ ಪತ್ನಿಯರು ಹಾಗೂ ನನ್ನ ಪತಿಯ ಮೊದಲ ಹೆಂಡತಿ ಜತೆ ದಿನದೂಡುತ್ತಿದ್ದೆ.

ಗುಲ್ಗುಟ್ಟಿ ಸಾಮಾನ್ಯವಾಗಿ ಮೌನ ವಾಗಿರುತ್ತಿದ್ದ ನಾಚಿಕೆ ಸ್ವಭಾವದ ಸರಳ ಹೆಣ್ಣು ಮಗಳು. ನನ್ನ ಪತಿ ಅವಳನ್ನು ೧೦ ವರ್ಷದ ಹಿಂದೆ ವಿವಾಹವಾಗಿದ್ದರು. ಅವಳು ನನ್ನನ್ನು ಸಾಹಿಬ್ ಕಮಲ್ ಎಂಬ ಹೆಸರಿನಿಂದ ಕರೆಯುತ್ತಿದ್ದಳು. ಆ ವರ್ಷಗಳಲ್ಲಿ ಹಲವು ಬದಲಾವಣೆಗಳು ಘಟಿಸಿದವು. ತಾಲಿಬಾನಿಗಳು ಸಾಮಾನ್ಯ ಜನರ ಸಂತಸದ ಬದುಕಿನ ಮೇಲೆ ಸವಾರಿ ಮಾಡಲಾರಂಭಿಸಿದರು.

ಅವರ ನಿರಂಕುಶ ಪ್ರಭುತ್ವದಿಂದ ಉಸಿರುಗಟ್ಟಿಸುವ ವಾತಾವರಣ ನಿರ್ಮಾಣವಾಯ್ತು. ಅವರು ಪುಸ್ತಕಗಳನ್ನು ನಿಷೇಧಿಸಿದರು. ಟೆಲಿವಿಷನ್, ರೇಡಿಯೋ, ವೃತ್ತಪತ್ರಿಕೆಗಳು, ಎಲ್ಲ ಬ್ಯಾನ್ ಆದವು. ಮಹಿಳೆಯರ ಸ್ಥಿತಿಯಲ್ಲಂತೂ ಗುರುತರ ಬದಲಾವಣೆಗಳಾದವು. ಗಂಡನನ್ನು ಹೊರತುಪಡಿಸಿ ಉಳಿದ ಗಂಡಸರ ಹತ್ತಿರ ಅವಳು ಮಾತಾಡುವುದೂ ಶಿಕ್ಷಾರ್ಹ.

ಮನೆಯಿಂದ ಹೊರಗೆ ಕಾಲಿಡುವುದಂತೂ ದೂರದ ಮಾತು. ಎಂತಹ ದಾರುಣ ಸ್ಥಿತಿಯಲ್ಲೂ ಅವಳು ಆಸ್ಪತ್ರೆಯ ಮೆಟ್ಟಿಲು ಹತ್ತುವಂತಿರಲಿಲ್ಲ. ಏನೇ ಆದರೂ ಹೆಂಗಸರು ಮನೆಯ ಸಾಯಬೇಕಿತ್ತು. ನಾನಿದ್ದ ಪಟಿಯಾ ಹಳ್ಳಿಯಲ್ಲಿ ಆಸ್ಪತ್ರೆಗಳೇ ಇರಲಿಲ್ಲ, ಏನನ್ನಾದರೂ ಮಹಿಳೆ ವಿರೋಧಿಸಿದರೆ, ಅವಳನ್ನು ಮೈದಾನಕ್ಕೆಳೆದು ತಂದು ಶೂಟ್ ಮಾಡುತ್ತಿದ್ದರು.

ಇದನ್ನೂ ಓದಿ: Harish Kera Column: ಚಿಂಪಾಂಜಿಗಳ ನಾಡಿನ ಸವಿ ಜೇನು

ಆ ದಿನಗಳಲ್ಲಿ ತೀರಾ ಅಮಾನವೀಯ ಎನಿಸುವ ಸಾಕಷ್ಟು ಘಟನೆಗಳನ್ನು ಕಣ್ಣಾರೆ ಕಂಡೆ. ಅವುಗಳಂದು ನನ್ನ ವಾರಗಿತ್ತಿಯ ಹೆರಿಗೆ ಸಮಯದದದ್ದು, ಅವಳು ಗಂಡು ಮಗುವೊಂದಕ್ಕೆ ಜನ್ಮ ನೀಡಿದ್ದಳು. ಅಷ್ಟರಗಲೇ ಏಳು ಜನ ಗಂಡು ಮಕ್ಕಳಿದ್ದರೂ ಅವಳ ಗಂಡನಿಗೆ ಇನ್ನೂ ಮಕ್ಕಳು ಬೇಕಿತ್ತು. ಅವಳ ಹೆರಿಗೆಯಾದದ್ದು ಮನೆಯ. ತಾಯಿಮಾಸು ಇನ್ನೂ ಹೊರಬಂದಿರಲಿಲ್ಲ, ಒಂದೇ ಸವನೆ ನೋವು, ಮಿಡ್‌ವೈಫ್ ಯಾವುದೇ ಅರಿವಳಿಕೆ ನೀಡದೆ ಕೇವಲ ಒಂದು ಕತ್ತರಿಯಿಂದ ಅದನ್ನು ಹೊರತೆಗೆದಳು.

ಪರಿಣಾಮ ನಂಜೇರಿ ನನ್ನ ನಾದಿನಿ ಮೃತಪಟ್ಟಳು. ಯಾರೂ ಇದನ್ನು ಗಣನೆಗೇ ತೆಗೆದುಕೊಳ್ಳಲಿಲ್ಲ, ಅವಳ ಗಂಡ ಹಾಗೂ ಇತರರು ಮಗ ಹುಟ್ಟಿದ ಖುಷಿಯಲ್ಲಿದ್ದರು. ಮೂಲತಃ ನಾನೊಬ್ಬ ನರ್ಸ್, ಅದರಲ್ಲೂ ಗೈನಕಾಲಜಿಯಲ್ಲಿ ತರಬೇತಾದವಳು. ಸ್ವಲ್ಪ ಸಮಯದ ಗುಟ್ಟಾಗಿ ನಾನೊಂದು ಕ್ಲಿನಿಕ್ ಆರಂಭಿಸಿದೆ. ಊರಿನ ಮಹಿಳೆಯರೊಂದಿಗೆ ಚರ್ಚಿಸಿದೆ. ಅವರಿಗಾಗುತ್ತಿರುವ ಅನ್ಯಾಯದ ಕುರಿತಾಗಿ ತಿಳಿಸಿ ಹೇಳುವ ಪ್ರಯತ್ನ ಮಾಡಿದೆ.

ಅದು ೧೯೯೫ರ ಮೇ ತಿಂಗಳ ಒಂದು ದಿನ. ಒಂದಿಷ್ಟು ಮಂದಿ ನನ್ನ ಕ್ಲಿನಿಕ್‌ನ್ನು ಪತ್ತೆ ಹಚ್ಚಿದರು. ಮಾರಣಾಂತಿಕವಾಗಿ ನನ್ನ ಮೇಲೆ ಹಲ್ಲೆ ಮಾಡಿದರು. ನಾನು ಅಲ್ಲಿಂದ ಭಾರತಕ್ಕೆ ಪಲಾಯನ ಮಾಡಲು ನಿರ್ಧರಿಸಿದೆ. ಹೇಗೇಗೋ ಪರದಾಡಿ ಜೀಪೊಂದನ್ನು ಗೊತ್ತು ಮಾಡಿದೆ. ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯವರೆಗೆ ಹೋದೆ. ಅಲ್ಲಿ ಬಾನೆತ್ತರಕ್ಕೆ ಹಾರಾಡುತ್ತಿದ್ದ ಭಾರತದ ಧ್ವಜ ಕಂಡಾಗ ಆದ ಖುಷಿಯನ್ನು ಹೇಗೆ ವರ್ಣಿಸಲಿ? ತಾಯ್ನಾಡನ್ನು ಮತ್ತೆ ಕಾಣುವುದೇ ನನ್ನ ಪಾಲಿನ ಸೌಭಾಗ್ಯವಾಗಿತ್ತು.

ಆದರೆ ದುರದೃಷ್ಟ ನನ್ನ ಬೆನ್ನು ಬಿಡಲಿಲ್ಲ. ಅಲ್ಲಿ ನನಗೆ ಯಾವುದೇ ಸಹಾಯ ಸಿಗಲಿಲ್ಲ, ಬದಲಿಗೆ ಮೋಸ ಮಾಡಿ ನನ್ನನ್ನು ಮತ್ತೆ ತಾಲಿಬಾನಿಗಳ ಕೈಗೊಪ್ಪಿಸಿದರು. ನಾನು ಹತಾಶಳಾಗಲಿಲ್ಲ, ಎರಡನೇ ಸಲ ಪಲಾಯನಕ್ಕೆ ಸಿದ್ದಳಾದೆ. ಮನೆಯಿಂದ ಹೊರಬಿದ್ದು ಓಡೋಡುತ್ತಲೇ ಇಡೀ ರಾತ್ರಿ ಕಳೆದೆ.

ಮತ್ತೊಮ್ಮೆ ಪ್ರಯತ್ನ ವಿಫಲವಾಗಿ ತಾಲಿಬಾನಿಗಳಿಂದ ಬಂಧಿತಳಾದೆ. ನನ್ನ ವಿರುದ್ಧ ಫತ್ವಾ ಜಾರಿಯಾಯ್ತು. ೧೯೯೫, ಜುಲೈ ೨೨ರಂದು ನನ್ನ ಹತ್ಯೆಗೆ ದಿನ ನಿಗದಿಗೊಳಿಸಲಾಯ್ತು. ಹೋರಾಟ ಗಾರ್ತಿಯೊಬ್ಬಳು ನನ್ನಲ್ಲಿ ಸದಾ ಜಾಗೃತಳಾಗಿದ್ದ ಕಾರಣ ಮೂರನೇ ಬಾರಿ ನಾನು ತಪ್ಪಿಸಿಕೊಳ್ಳಲು ಸಿದ್ಧಳಾದೆ. ನಮ್ಮ ಹಳ್ಳಿಯ ಮುಖ್ಯಸ್ಥ ಡ್ರನೈ ಚಾಚ ನನ್ನ ಸಹಾಯಕ್ಕೆ ಬಂದರು. ಕೆಲದಿನಗಳ ಹಿಂದೆ ತಾಲಿಬಾನಿಗಳ ದೌರ್ಜನ್ಯದ ವಿರುದ್ಧ ದನಿಯೆತ್ತಿದ್ದಕ್ಕಾಗಿ ಚಾಚನ ಮಗನನ್ನು ಅವರು ಕೊಂದುಹಾಕಿದ್ದರು. ಅವರಿಗೆ ತಾಲಿಬಾನಿಗಳ ಮೇಲೆ ಸಿಟ್ಟಿತ್ತು. ಹೀಗಾಗಿ ನನಗೆ ಸಹಾಯ ಮಾಡಿದರು. ಆ ದಿನ ನಾನು ಎಕೆ೪೭ ರೈಫಲ್ ಹಿಡಿದುಕೊಂಡೇ ಹೊರಟಿದ್ದೆ.

ಅದು ಹೆಚ್ಚಿನೆಲ್ಲ ಆಫಘನಿಗಳ ಮನೆಯಲ್ಲಿ ಸಾಮಾನ್ಯವಾಗಿದ್ದ ಆಯುಧ. ಅಡ್ಡ ಹಾಕಿದ ಮೂವರು ತಾಲಿಬಾನಿಗಳನ್ನು ಶೂಟ್ ಮಾಡಿದೆ. ಚಾಚಾ ಜೀಪ್‌ನಲ್ಲಿ ನನ್ನನ್ನು ಕಾಬೂಲ್‌ಗೆ ಕರೆದೊಯ್ದರು. ಅಲ್ಲಿ ನನಗೆ ವೀಸಾ ಹಾಗೂ ಪಾಸ್‌ಪೋರ್ಟ್ ಸಿಕ್ಕಿತು. ಅಲ್ಲಿಂದ ವಿಮಾನದಲ್ಲಿ ದಿಲ್ಲಿಗೆ ಬಂದಿಳಿದೆ. ಆ ದಿನ ನನಗಿವತ್ತೂ ನೆನಪಿದೆ. ಅದೆಷ್ಟೋ ಕಾಲಾನಂತರ ನನ್ನ ತಾಯ್ನಾಡಿನ ಮಣ್ಣಿಗಡಿಯಿಟ್ಟಿದ್ದೆ.

ಹೊರಗೆ ಜೋರಾಗಿ ಮಳೆ ಸುರಿಯುತ್ತಿತ್ತು. ಜನರೆಲ್ಲ ಸೂರಿನಡಿ ನಿಂತಿದ್ದರು. ನಾನು ಮಳೆಯಲ್ಲಿ ನಿಂತೆ. ಈ ವರೆಗಿನ ನನ್ನ ನೋವೆಲ್ಲ ಸುರಿವ ಈ ಮಳೆಯಲ್ಲಿ ಕೊಚ್ಚಿಕೊಂಡು ಹೋಗಲಿ, ಅಲ್ಲಿ ಆಫ್ಘಾನ್ ನೆಲದಲ್ಲಿ ಅಷ್ಟೆಲ್ಲವನ್ನು ತಾಳಿಕೊಂಡ ನಾನು, ತಾಯ್ನೆಲದಲ್ಲಿ ಮಳೆಯನ್ನು ತಾಳಿಕೊಳ್ಳಲಾರೆನೇ? ಕಾಲದ ಹಂಗಿಲ್ಲದೇ ನಿಂತಿದ್ದೆ.

ಆ.೧೨, ೧೯೯೫ರಂದು ಕೋಲ್ಕತ್ತಾಗೆ ಹಿಂತಿರುಗಿದೆ. ಅಫಘಾನಿಸ್ತಾನದಲ್ಲಿರುವಾಗ ನಿತ್ಯ ಡೈರಿ ಬರೆಯುತ್ತಿದ್ದೆ. ಭಾರತಕ್ಕೆ ಹಿಂತಿರುಗಿದ ಮೇಲೆ ನನ್ನ ಅನುಭವಗಳನ್ನು ’ಕಾಬೂಲಿವಾಲಾಸ್ ಬೆಂಗಾಲಿ ವೈಫ್’ ಪುಸ್ತಕವಾಗಿಸಿದೆ. ೧೯೯೭ರಲ್ಲಿ ಅದು ಪ್ರಕಟ ವಾಯ್ತು. ಉಜ್ವಲ್ ಚಟರ್ಜಿ ಇದನ್ನು ಆಧರಿಸಿ ಮಾಡಿದ ಸಿನಿಮಾಕ್ಕೂ ಸಹಕರಿಸಿದೆ. ಒಂದು ದಿನ ಮತ್ತೆ ನಾನಲ್ಲಿಗೆ ವಾಪಾಸ್ ಹೋಗುತ್ತೇನೆ, ಅವರ ಸ್ವಾತಂತ್ರ್ಯವನ್ನು ಮರಳಿಸುತ್ತೇನೆ.

ಹೀಗೆ ಬರೆದುಕೊಂಡ ಸುಶ್ಮಿತಾ ಬ್ಯಾನರ್ಜಿಯ ಕತೆ ಮುಂದೇನಾಯಿತು ಎಂಬುದನ್ನೂ ಕೇಳಿ. ತಾಲಿಬಾನಿಗಳ ಅಮಾನುಷತೆಯ ನಡುವೆಯೇ ತಮ್ಮ ಸ್ವಾತಂತ್ರ್ಯ ಕಾಪಾಡಿಕೊಳ್ಳಲು ೧೯೯೫ರಲ್ಲಿ ಭಾರತಕ್ಕೆ ಓಡಿಬಂದ ಸುಶ್ಮಿತಾ, ೨೦೧೩ರವರೆಗೆ ಭಾರತದಲ್ಲಿ ವಾಸಿಸುತ್ತಿದ್ದರು. ಹಲವಾರು ಪುಸ್ತಕ ಗಳನ್ನು ಪ್ರಕಟಿಸಿದರು.

ಕೊನೆಗೊಂದು ದಿನ ಅವರ ಪತಿ ಜಾನ್‌ಬಾಜ್ ಆಗಮಿಸಿದ. ತನ್ನ ಜೊತೆ ಬರುವಂತೆ ಮನವೊಲಿಸಿದ. ಸುಶ್ಮಿತಾ ಆತನ ಮಾತನ್ನು ನಂಬಿ, ೨೦೧೩ರಲ್ಲಿ ಅಫಘಾನಿಸ್ತಾನಕ್ಕೆ ಹೋದರು. ಅಲ್ಲಿಗೆ ಹೋದ ನಂತರ ಅಲ್ಲಿನ ಮಹಿಳೆಯರ ಜೀವನ ಸುಧಾರಣೆಯ ಕೆಲಸಗಳಲ್ಲಿ ಆಕೆ ತೊಡಗಿಕೊಂಡರು. ಆಗ್ನೇಯ ಅಫ್ಘಾನಿಸ್ತಾನದ ಪಕ್ತಿಕಾ ಪ್ರಾಂತ್ಯದಲ್ಲಿ ಆರೋಗ್ಯ ಕಾರ್ಯಕರ್ತೆಯಾಗಿ ಕೆಲಸ ಮಾಡಿದರು.

ಸ್ಥಳೀಯ ಮಹಿಳೆಯರ ಜೀವನವನ್ನು ಚಿತ್ರೀಕರಿಸಲು ಪ್ರಾರಂಭಿಸಿದರು. ಇದನ್ನೆಲ್ಲ ಗಮನಿಸುತ್ತಿದ್ದ ತಾಲಿಬಾನಿಗಳು ಒಂದು ರಾತ್ರಿ ಆಕೆಯ ಮನೆಗೆ ನುಗ್ಗಿ ಅಕೆಯನ್ನು ಅಪಹರಿಸಿ ಕೊಂಡೊಯ್ದರು. ಮರುದಿನ ಆಕೆಯ ಶವ ಸಿಕ್ಕಿತು. ಆಕೆಯ ದೇಹದ ತುಂಬ ೨೦ ಗುಂಡುಗಳಿದ್ದವು. ಈಕೆಯ ಕತೆ‌ ಯನ್ನು ಈಗ ಯಾಕೆ ಬರೆಯ ಬೇಕಾಗಿ ಬಂತು ಎಂಬುದನ್ನು ಹೇಳಲೇಬೇಕು.

ಕಳೆದ ವಾರ ಅಫಘಾನಿಸ್ತಾನದ ತಾಲಿಬಾನ್ ಸರಕಾರದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ದೇಶಕ್ಕೆ ಆಗಮಿಸಿದರು. ಈ ಹಿಂದಿನ ಅಶ್ರಫ್ ಘನಿ ನೇತೃತ್ವದ ಸರಕಾರದ ಜೊತೆ‌ ಭಾರತದ ಸಂಬಂಧ ಚೆನ್ನಾಗಿತ್ತು. ಅಲ್ಲಿ ಕೆಲವು ಅಭಿವೃದ್ಧಿ ಕೆಲಸಗಳಲ್ಲಿ ಭಾರತ ಕೈಜೋಡಿಸಿತ್ತು ಕೂಡ. ಆದರೆ ಮರಳಿ ತಾಲಿಬಾನ್ ಆಗಮನದ ಬಳಿಕ ಅವೆಲ್ಲ ಹಳಿತಪ್ಪಿದ್ದವು. ಮಹಿಳೆಯರ ಸ್ಥಿತಿಗತಿ ಶಿಲಾಯುಗಕ್ಕೆ ಮರಳಿತ್ತು.

ಇದೀಗ ತಾಲಿಬಾನ್ ನೇತೃತ್ವದ ಸರಕಾರದ ಪ್ರಮುಖ ಸಚಿವರ ಮೊದಲ ಭಾರತ ಭೇಟಿ ಇದು. ಭಾರತವೇನೋ ತಾಲಿಬಾನ್ ಸಚಿವರನ್ನು ಸಹಜ ರಾಯಭಾರ ನಿಲುವಿನಲ್ಲಿ ಸ್ವಾಗತಿಸಿದೆ. ಸದ್ಯ ಪಾಕಿಸ್ತಾನದ ವಿರುದ್ಧ ಗುಟುರು ಹಾಕುತ್ತಿರುವ ತಾಲಿಬಾನ್ ಅನ್ನು ಸ್ವಾಗತಿಸಲು ಭಾರತಕ್ಕೆ ರಾಜಕೀಯ ಕಾರಣಗಳೂ ಇರಬಹುದು.

ಆದರೆ ಮುತ್ತಕಿಯ ಪ್ರೆಸ್‌ಮೀಟ್‌ಲ್ಲಿ ಮಹಿಳಾ ಪತ್ರಕರ್ತರಿಗೆ ಅವಕಾಶ ನೀಡಿಲ್ಲ. ಇದು ಎಲ್ಲ ಪತ್ರಕರ್ತರನ್ನು ಕೆರಳಿಸಿದೆ. ಅದು ದೊಡ್ಡ ಸುದ್ದಿಯಾಗಿ, ಡ್ಯಾಮೇಜ್ ಕಂಟ್ರೋಲ್ ಮಾಡಲು ಮಹಿಳೆಯರದೇ ಇನ್ನೊಂದು ಪತ್ರಿಕಾಗೋಷ್ಠಿಯನ್ನೂ ನಡೆಸಲಾಗಿದೆ.

ತಾಲಿಬಾನ್ ಪ್ರಭುತ್ವದ ಸ್ತ್ರೀ ವಿರೋಧಿ ನಿಲುವನ್ನು ಬಲ್ಲವರಿಗೆ ಇದೇನೂ ಆಶ್ಚರ್ಯದ ವಿಷಯ ವಲ್ಲ. ತಾಲಿಬಾನ್ ಇರುವುದೇ ಹಾಗೆ. ಆದರೆ ಭಾರತ ಸರಕಾರವಾದರೂ ತನ್ನ ನೆಲದಲ್ಲೂ ನಿಮ್ಮ ನೆಲದಲ್ಲೂ ಸ್ತ್ರೀಯರನ್ನು ಸಮಾನವಾಗಿ ನಡೆಸಿಕೊಳ್ಳಿ ಎಂದು ಗಟ್ಟಿ ಧ್ವನಿಯಿಂದ ಹೇಳದೆ ಹೋದರೆ ಇಂಥ ಅಪಸವ್ಯಗಳೆಲ್ಲ ಆಗುತ್ತವೆ. ಆಫ್ಘನ್ ನೆಲದಲ್ಲಿ ಹೊಸ ಚೈತನ್ಯ ತುಂಬಲು ಯತ್ನಿಸಿದ ಸುಶ್ಮಿತಾ ಬ್ಯಾನರ್ಜಿಯಂಥ ಎಷ್ಟೋ ಜೀವಗಳನ್ನು ತಾಲಿಬಾನ್ ಹೊಸಕಿ ಹಾಕಿದೆ.

ಇದಕ್ಕೆಲ್ಲ ನ್ಯಾಯ ಕೇಳುವ ಮಾತು ಹಾಗಿರಲಿ, ಇನ್ನು ಮುಂದೆಯಾದರೂ ಮನುಷ್ಯರಂತೆ ನಡೆದುಕೊಳ್ಳಿ ಎಂದು ನಾವು ಹೇಳಬೇಕಲ್ಲವೇ. ‘ಮುತ್ತಕಿಗೆ ಭಾರತದಲ್ಲಿ ಸಿಕ್ಕ ಸ್ವಾಗತ ನೋಡಿ ನನಗೆ ನಾಚಿಕೆಯಾಗುತ್ತಿದೆ’ ಎಂದಿರುವ ಜಾವೇದ್ ಅಖ್ತರ್ ಅವರ ಧ್ವನಿ ನಮ್ಮದೂ ಹೌದು ಎನ್ನಬೇಕು. ಸುಶ್ಮಿತಾ ಬ್ಯಾನರ್ಜಿ ಅವರ ಆತ್ಮಕತೆಯನ್ನು ಮುತ್ತಕಿಗೆ ಗಿಫ್ಟ್ ಆಗಿ ಕೊಡಬೇಕು.