ಹೊರಸೂಸುವ ಮನ
ಸುಸಾನ್ ಥಾಮಸ್
ಕೇರಳದ ಎರ್ನಾಕುಲಂಗೆ ಇತ್ತೀಚೆಗೆ ಪ್ರವಾಸಕ್ಕೆಂದು ನಾನು ತೆರಳಿದ್ದಾಗ ಮಸಾಲೆ ದೋಸೆ ಯನ್ನು ಸವಿಯಲೆಂದು ಅಲ್ಲಿನ ‘ಭಾರತ್ ಟೂರಿಸ್ಟ್ ಹೋಮ್’ಗೆ ಲಗ್ಗೆಯಿಟ್ಟೆ. ಹಾಗೆ ನೋಡಿ ದರೆ, ನಾನು ಬೆಳೆದದ್ದು ಎರ್ನಾಕುಲಂನ; ಆಕಾಶದೆತ್ತರಕ್ಕೂ ಮೈಚಾಚಿರುವ ಗಗನಚುಂಬಿ ಕಟ್ಟಡಗಳು ಮತ್ತು ಅವು ಹುಟ್ಟುಹಾಕುವ ನೋಟ ಕ್ಷಣಕ್ಷಣಕ್ಕೂ ಬದಲಾಗುವ ತಾಣವಿದು.
ಇಂಥದೊಂದು ಜಾಗದಲ್ಲಿ, ನಾನು ಬಾಲ್ಯದಲ್ಲಿ, ತಾರುಣ್ಯದಲ್ಲಿ ಭೇಟಿಕೊಟ್ಟ ಮತ್ತು ಈಗಿನ ನನ್ನ 40ರ ಹರೆಯದಲ್ಲಿ ಭೇಟಿಕೊಡುವ ಇಂಥ ತಿನಿಸು ತಾಣವೊಂದಕ್ಕೆ ಮತ್ತೊಮ್ಮೆ ಲಗ್ಗೆ ಹಾಕುವುದು ನಿಜಕ್ಕೂ ಹೃದಯಸ್ಪರ್ಶಿ ಸಂದರ್ಭವಾಗಿತ್ತು ಎನ್ನಿ.
ಆ ತಾಣದ ಬಾಹ್ಯಸ್ವರೂಪ ಮತ್ತು ವಿನ್ಯಾಸಗಳು ಬದಲಾಗಿದ್ದರೂ, ಅದು ಮೊಗೆದು ಕೊಡುತ್ತಿದ್ದ ತಿನಿಸುಗಳ ರುಚಿ ಬದಲಾಗಿರಲಿಲ್ಲ. ಪ್ಲೇಟಿನ ಆಚೆಗೆ ಇಣುಕುವಷ್ಟರ ಮಟ್ಟಿಗೆ ಹರಡಿಕೊಂಡಿರುವ ಆ ಮಸಾಲೆದೋಸೆ, ಗಟ್ಟಿಯಾದ ಹಾಲು ಬೆರೆಸಿ ತಯಾರಿಸಲಾದ ಚಹಾ ಇವನ್ನು ಸವಿಯುವಾಗ ನಿಜಾರ್ಥದಲ್ಲಿ ಮೈಮರೆತಿದ್ದೆ.
ಇವೆಲ್ಲದರ ಜತೆಗೆ ನನಗೆ ಅತೀವ ತೃಪ್ತಿಯನ್ನು ನೀಡಿದ ಸಂಗತಿಯೆಂದರೆ, ಒಂದು ಕಾಲಕ್ಕೆ ಕುರ್ಚಿಯಲ್ಲಿ ಕೂತರೆ ಕಾಲುಗಳು ನೆಲಕ್ಕೆ ಸೋಕಲಾಗದಷ್ಟು ಪುಟ್ಟ ಹುಡುಗಿಯಾಗಿದ್ದಾಗ ಈ ಹೋಟೆಲ್‌ನಲ್ಲಿ ನನಗೆ ತಿಂಡಿ-ತಿನಿಸುಗಳನ್ನು ಸರ್ವ್ ಮಾಡಿದವರೇ ಅಂದು ನನಗೆ ಮಸಾಲೆದೋಸೆ-ಚಹಾವನ್ನು ಸರ್ವ್ ಮಾಡಿದ್ದು!
ಸೇವಾಬದ್ಧತೆಯ ಪ್ರತೀಕವೆಂಬಂತೆ ಎದೆಯ ಮೇಲೆ ಬ್ಯಾಡ್ಜ್ ಒಂದನ್ನು ಲಗತ್ತಿಸಿಕೊಂಡಿದ್ದ ತಮ್ಮ ನೀಲಿ ಸಮವಸ್ತ್ರದ ಅಂಗಿಯನ್ನು ನವಿರಾಗಿ ನೀವಿಕೊಳ್ಳುತ್ತಾ ಬಂದ ಆ ಸಪ್ಲೈ ಯರ್, “ನೋಡನೋಡುತ್ತಲೇ 38 ವರ್ಷಗಳು ಕಳೆದುಹೋಗಿಬಿಟ್ಟವು, ಅಲ್ವಾ?" ಎಂದರು.
ಇದನ್ನೂ ಓದಿ: Susan Thomas Column: ಪೆಂಗ್ವಿನ್ ಮತ್ತು ಪಂಚ್ ಆಧುನಿಕ ನಿರ್ವಾತವನ್ನು ಹೇಗೆ ತುಂಬುತ್ತದೆ ?
ವ್ಯಕ್ತಿಯೊಬ್ಬರು ತಾವು ನಿರ್ವಹಿಸುತ್ತಿರುವ ಕೆಲಸವನ್ನು ಪದೇಪದೆ ಬದಲಾಯಿಸುವುದೇ ಸರ್ವೇಸಾಮಾನ್ಯವಾಗಿರುವ ಈ ಕಾಲಘಟ್ಟದಲ್ಲಿ, ಇಷ್ಟೊಂದು ಸುದೀರ್ಘ ವರ್ಷಗಳ ನಂತರವೂ ಆ ಸಪ್ಲೈಯರ್ ಅಲ್ಲಿಯೇ ಕೆಲಸ ಮುಂದುವರಿಸಿರುವುದು ಮತ್ತು ಅವರನ್ನು ಮತ್ತೊಮ್ಮೆ ಭೇಟಿಯಾಗುವ ಅವಕಾಶ ನನಗೆ ಸಿಕ್ಕಿದ್ದು ನಿಜಕ್ಕೂ ಸಂತಸವನ್ನು ತಂದಿತು.
ಬಾಂಧವ್ಯದ ಅಣೆಕಟ್ಟು ತನ್ನ ಎಲ್ಲ ಬಾಗಿಲುಗಳನ್ನೂ ತೆರೆದು, ಮಧುರ ನೆನಪುಗಳಲ್ಲಿ ನಿಮ್ಮನ್ನು ಹೀಗೆ ಮುಳುಗಿಸಬೇಕೆಂದರೆ ಅದಕ್ಕೆ ಇಂಥ ಒಂದೇ ಒಂದು ಪರಿಚಿತ ಮತ್ತು ಆಪ್ತ ಮುಖ ಸಾಕು.
ಸರಕಾರದೊಂದಿಗಿನ ಕಾರ್ಯನಿರ್ವಹಣೆಯಲ್ಲಿ ಇದು ನನ್ನ 25ನೇ ವರ್ಷ. ಈ ಅವಧಿ ಯಲ್ಲಿ ನನ್ನನ್ನು ಎರಡು ಸಚಿವಾಲಯಗಳಲ್ಲಿ ನಿಯೋಜಿಸಲಾಗಿದೆ; ಇಂಥ ವೇಳೆ ಇಲ್ಲ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ ಮತ್ತು ಬಗೆಬಗೆಯ ತಂಡಗಳಲ್ಲಿ ಒಬ್ಬಳಾಗಿ ದುಡಿದ ಹೆಮ್ಮೆ ನನ್ನದು. ಆದರೆ, ಇಷ್ಟೂ ಅವಧಿಯಲ್ಲಿ ‘ಉತ್ತಮ ಆಡಳಿತ’ ಮತ್ತು ‘ಸಾರ್ವಜನಿಕ ಸೇವೆ’ ಎಂಬುದೇ ಪ್ರಧಾನ ಆಶಯವಾಗಿತ್ತು ಎಂದು ಹೇಳಬಲ್ಲೆ.
ಎರ್ನಾಕುಲಂನ ಆ ಹೋಟೆಲ್‌ನ ಅದೇ ಕಟ್ಟಡದಲ್ಲಿ ಸರಿಸುಮಾರು ನಾಲ್ಕು ದಶಕಗಳಿಂದ ಕೆಲಸ ಮಾಡುತ್ತಿರುವ ಆ ಪ್ರಧಾನ ಮಾಣಿಗಿಂತ ಭಿನ್ನವಾಗಿ, ದೇಶದ ಅನೇಕ ರಾಜ್ಯಗಳಲ್ಲಿ ಮತ್ತು ಅಲ್ಲಿನ ಕಚೇರಿ ಕಟ್ಟಡಗಳಲ್ಲಿ ನಾನು ಕಾರ್ಯನಿರ್ವಹಿಸಿದ್ದಿದೆ. ಈಗಲೂ ಆ ಮಾಣಿ ಯ ಮುಖದಲ್ಲಿ ಹೊಮ್ಮುವ ಹೃತ್ಪೂರ್ವಕವಾದ, ತೃಪ್ತಿಭರಿತ ನಗುವನ್ನು ನೋಡಿದರೆ, ಅವರು ತಮ್ಮ ಸಮಯವನ್ನು ಉತ್ತಮವಾಗಿಯೇ ಕಳೆಯುತ್ತಿದ್ದಾರೆ ಹಾಗೂ ಜನರೊಂದಿ ಗಿನ ಸಾಂಗತ್ಯವನ್ನು ಅವರು ಖುಷಿಯಿಂದಲೇ ಅನುಭವಿಸುತ್ತಿದ್ದಾರೆ ಎಂದು ನನಗನಿಸು ತ್ತದೆ. ಪ್ರತಿದಿನವೂ ಹೊಸ ಹೊಸ ಮುಖಗಳು ಹೋಟೆಲ್‌ಗೆ ದಾಂಗುಡಿಯಿಡುತ್ತಿದ್ದರೂ ಅವರ ಚಹರೆಯಲ್ಲಿ ಬದಲಾವಣೆಯಾಗಿಲ್ಲ!
ಅಕ್ಷರಶಃ ಮರಗಟ್ಟಿಸುವ ದೆಹಲಿಯ ಚಳಿಯಲ್ಲಿ ಕುಳಿತು, ಬಿಗಿದುಕೊಂಡಿರುವ ಬೆರಳು ಗಳಿಂದ ಈ ಸಾಲುಗಳನ್ನು ಪಟ್ಟುಹಿಡಿದು ಬರೆಯುತ್ತಿರುವಾಗಲೇ ನನ್ನ ಮನಸ್ಸು ಬೆಂಗಳೂರಿನತ್ತ ಹಿಂದಕ್ಕೆ ಓಡಿತು. ಸಸ್ಯಸಂಪತ್ತಿನ ನಡುವೆ ಮೈದಳೆದಿರುವ ಅಲ್ಲಿನ ಎನ್‌ಐಎಫ್ʼಟಿಯಲ್ಲಿ ಒಮ್ಮೆ ನಾನು ನಿರ್ದೇಶಕಿಯಾಗಿ ಕೆಲಸ ಮಾಡುತ್ತಿದ್ದಾಗಿನ ಕಾಲ ಘಟ್ಟವದು.
ಮೂರೇ ತಿಂಗಳಲ್ಲಿ ಉದ್ಯೋಗಕ್ಕೆ ರಾಜೀನಾಮೆ ನೀಡಿದ, ಮಧ್ಯದಲ್ಲಿಯೇ ಇಂಟರ್ನ್‌ಶಿಪ್ ಅನ್ನು ಕೈಬಿಟ್ಟ, ಯಾವುದೇ ಪೂರ್ವಸೂಚನೆಯಿಲ್ಲದೆಯೇ ಬದಲಾಯಿಸಲ್ಪಟ್ಟ ಅಥವಾ ಎರಡು ವಾರಗಳ ನಂತರ ಆಯ್ಕೆಗಳಿಂದ ಹೊರಗುಳಿದ ವಿದ್ಯಾರ್ಥಿಗಳ ಬದುಕನ್ನು ಅರ್ಥ ಪೂರ್ಣವಾಗಿಸಲು ನಾನು ಯತ್ನಿಸಿದ್ದು ಈ ಅವಧಿಯಲ್ಲಿಯೇ.
ಸಣ್ಣದೊಂದು ಅನನುಕೂಲಕ್ಕೂ ಹಾಗೆ ನಿರ್ಗಮಿಸುವುದು ನಮಗೆ ಸಾಮಾನ್ಯವಾಗಿ ಬಿಟ್ಟಿದೆ; ನಮ್ಮ ಇಡೀ ದೇಹ-ಮನಸ್ಸನ್ನು ಒಂದೇ ನಿರ್ದಿಷ್ಟ ನೆಲೆಯಲ್ಲಿ ಸ್ಥಿರವಾಗಿ ಇರಿಸದೆ, ಇತರ ಆಯ್ಕೆಗಳ ಕಡೆಗೇ ನೋಡುತ್ತಿರುವ ಮತ್ತು ಒಂದು ನೆಲೆಯಿಂದ ಮತ್ತೊಂದು ನೆಲೆಗೆ ಸಂಚರಿಸುತ್ತಲೇ ಇರುವ ಪರಿಪಾಠವಿದು ಎನ್ನಲಡ್ಡಿಯಿಲ್ಲ.
ಹಾಗಾದರೆ, ಒಂದೇ ನೆಲೆಗೆ ಹಾಗೆ ಅಂಟಿಕೊಂಡಿರುವಂತೆ ಮಾಡುವ ಶಕ್ತಿಯಾದರೂ ಯಾವುದು? ಹಲ್ಲಿಗಳ ವಿಷಯದಲ್ಲಿ ಅವುಗಳ ಪಾದಗಳಲ್ಲಿರುವ ರೋಮಭರಿತ ಬಂಧಕ ರಚನೆಗಳು ಹೀಗೊಂದು ಬಲವನ್ನು ಅವುಗಳಲ್ಲಿ ತುಂಬುತ್ತವೆ ಮತ್ತು ಈ ಬಲದಿಂದಾ ಗಿಯೇ ಹಲ್ಲಿಗಳು ಗೋಡೆಗಳಿಗೆ ಮತ್ತು ಚಾವಣಿಗಳಿಗೆ ಅಂಟಿಕೊಳ್ಳುತ್ತವೆ.
ಹಾಗಾದರೆ, ವ್ಯಕ್ತಿಗಳು ತಮ್ಮ ಇತರ ಒಡನಾಡಿಗಳಿಗೆ ಮತ್ತು ಉದ್ಯೋಗಗಳಿಗೆ, ಕಚೇರಿಗಳಿಗೆ ಮತ್ತು ಮನೆಗಳಿಗೆ, ಉದ್ಯಾನಗಳಿಗೆ ಮತ್ತು ಹೋಟೆಲ್‌ಗಳಿಗೆ ಹೀಗೆ ಅಂಟಿಕೊಂಡಿರುವಂತೆ ಮಾಡಬಲ್ಲ ಶಕ್ತಿ ಯಾವುದು? ಇಲ್ಲಿ ಅಂಥ ಶಕ್ತಿಯಾಗಿ ಕೆಲಸಮಾಡುವುದು ದೃಷ್ಟಿಕೋನ ವಾ ಅಥವಾ ಮಿಕ್ಕ ಜನರಾ (ತಂಡವಾ)? ಆಪ್ತತೆಯ ಅನುಕೂಲತೆಯು ಇಲ್ಲಿ ಇಂಧನವಾಗಿ ಕೆಲಸ ಮಾಡುತ್ತದಾ? ನೀವು ನಿಮ್ಮ ಹಳೆಯ ಉಡುಪನ್ನು ಈಗೊಮ್ಮೆ ಧರಿಸಿದಾಗ ಅಥವಾ ನಿಮ್ಮ ಹಳೆಯ ದಿಂಬಿನ ಮೇಲೆ ಒಮ್ಮೆ ತಲೆಯಾನಿಸಿ ಆಘ್ರಾಣಿಸಿದಾಗ, ಹೊಮ್ಮುವ ಅಸ್ಪಷ್ಟ ಭಾವನೆಯನ್ನೊಮ್ಮೆ ಮನದಂಗಳಕ್ಕೆ ಇಳಿಸಿಕೊಂಡರೆ ಈ ನಿಟ್ಟಿನಲ್ಲಿ ಒಂದು ಹೊಳಹು ಸಿಕ್ಕೀತು.
ಹಾಗಾದರೆ, ಕೆಲವೊಂದು ವ್ಯಕ್ತಿಗಳು ಹೊಸ ಸವಾಲುಗಳನ್ನು ಅಥವಾ ಸಂಭಾವ್ಯ ಅಪಾಯ ಗಳನ್ನು ಎದುರಿಸಲು ಸಿದ್ಧರಿಲ್ಲದ ಮನಸ್ಥಿತಿಯವರಾ? ಅಥವಾ ತಾವಿದ್ದ ಕಡೆಯಲ್ಲಿಯೇ ಆಮೋದ -ಪ್ರಮೋದಗಳನ್ನು ಕಂಡುಕೊಳ್ಳಲು ಇಂಥ ಕೆಲವರು ಕಲಿತುಬಿಡುತ್ತಾರಾ? ಎಂಬ ಪ್ರಶ್ನೆಗಳು ಇಲ್ಲಿ ಮೂಡುತ್ತವೆ.
ನನ್ನ ಅಭಿಪ್ರಾಯವನ್ನು ಕೇಳುವುದಾದರೆ, ಇದು ಅಂಥ ಎಲ್ಲ ಅಂಶಗಳ ಒಂದು ಹದವಾದ ಸಮ್ಮಿಶ್ರಣವಾಗಿರುತ್ತದೆ. ನಿರ್ದಿಷ್ಟ ಕಾರ್ಯ ಅಥವಾ ಕ್ಷೇತ್ರದೆಡೆಗೆ ತೋರುವ ಬದ್ಧತೆಯು ಶ್ಲಾಘನೀಯವಾದರೂ, ಅದನ್ನು ಸಾರ್ಥಕಪಡಿಸುವವರು ಅಥವಾ ಅದರ ನೆರವೇರಿಕೆ ಯಲ್ಲಿ ಕೈಜೋಡಿಸುವವರು ಸುತ್ತಮುತ್ತಲಿನ ಜನರೇ ಆಗಿರುತ್ತಾರೆ.
ಇಲ್ಲಿ ನಿಮಗೊಂದು ಸಂಗತಿಯನ್ನು ಹೇಳಬೇಕು. ಕೊಟ್ಟಾಯಂ ಪಟ್ಟಣಕ್ಕೆ ಆಗಾಗ ತೆರಳುವುದು ನನ್ನ ತಾತನ ಪರಿಪಾಠವಾಗಿತ್ತು. ಇಂಥ ಭೇಟಿಯ ವೇಳೆ ಅಲ್ಲಿನ ‘ಬೆಸ್ಟ್ ಬೇಕರಿ’ಗೆ ತೆರಳಿ, ಬಟರ್ ಪೇಪರ್‌ನಲ್ಲಿ ಸುತ್ತಿಕೊಡುತ್ತಿದ್ದ, ಪದರಪದರವಾಗಿರುವ ಉಪ್ಪುರುಚಿಯ ಬಿಸ್ಕತ್ತುಗಳನ್ನು ತರಲು ಅವರು ಮರೆಯುತ್ತಿರಲಿಲ್ಲ. ಜನರು ಸಂಬಂಧ ಗಳನ್ನು ಕಟ್ಟಿ, ಗಟ್ಟಿಮಾಡಿಕೊಳ್ಳುವುದು ಕ್ರಮೇಣವಾಗಿ. ತಾತನಿಗೆ ಆ ಬೇಕರಿಯವರು ಆಪ್ತರಾದರು. ಅದೇ ಆಪ್ತತೆಯನ್ನು ಗಟ್ಟಿಮಾಡಿಕೊಂಡ ಬೇಕರಿಯವರು ತಾತ ಏನನ್ನು ಆರ್ಡರ್ ಮಾಡುತ್ತಾರೆ ಎಂದು ಮುಂಚಿತವಾಗಿಯೇ ಗ್ರಹಿಸುವಷ್ಟು ಪಳಗಿಬಿಟ್ಟಿದ್ದರು.
ತಮಗೆ ಆಪ್ತವಾದ ಮುಖಗಳ ಜತೆಗೆ ಒಡನಾಟ ಬೆಳೆಸಿಕೊಂಡ ಜನರು, ಅವರೊಂದಿಗೇ ಉಳಿದರು, ಸಂಪರ್ಕಗಳನ್ನು ರೂಪಿಸಿ ಗಟ್ಟಿಮಾಡಿಕೊಂಡರು. ಅಲೆಮಾರಿ ಜೀವನದ ವೈಭವೀಕರಣಕ್ಕಾಗಲೀ ಅಥವಾ ಬದುಕಿನ ಕಟುವಾಸ್ತವಗಳಿಂದ ತಪ್ಪಿಸಿಕೊಳ್ಳುವ ಹಂಬಲವಾಗಲೀ ಅವರಲ್ಲಿರಲಿಲ್ಲ.
ಬೇಕಿದ್ದರೆ ಒಮ್ಮೆ ಗಮನಿಸಿ ನೋಡಿ, ವ್ಯಕ್ತಿಯೊಬ್ಬರು ಸುಮಾರು 35 ವರ್ಷಗಳವರೆಗೆ ಒಂದೇ ಉದ್ಯೋಗವನ್ನು ನಿರ್ವಹಿಸಿ ನಿವೃತ್ತರಾದಾಗ, ಅವರ ಸುತ್ತಲೂ ಒಂದು ಅಶಾಂತಿಯ ಪ್ರಭಾವಳಿ ಆವರಿಸಿರುತ್ತದೆ. ವರ್ತಮಾನದಲ್ಲಿ ಇದೊಂದು ಅನಿವಾರ್ಯತೆ ಎನ್ನಿ. ಸಣ್ಣಪುಟ್ಟ ಹಂಗಾಮಿ/ತಾತ್ಕಾಲಿಕ ಕೆಲಸಗಳನ್ನು ಮಾಡುವುದು, ಬೇರೆ ಬೇರೆ ನಗರಗಳಿಗೆ ಸ್ಥಳಾಂತರಗೊಳ್ಳುವುದು, ‘ಹೊಸ’ ಜನರನ್ನು ಭೇಟಿಯಾಗುವುದು ಮತ್ತು ‘ಹೊಸ’ ಸ್ಥಳಗಳನ್ನು ನೋಡುವುದು ಈಗ ಅವರ ಗುರಿಯಾಗಿರುವಂತೆ ತೋರುತ್ತದೆ.
ಇಲ್ಲಿ, ‘ಹೊಸ’ದರ ಮೇಲಿನ ಆಕರ್ಷಣೆ ಎಂಬುದು ಹೊಸದಲ್ಲ; ನವೋದಯದ ಪರ್ವ ವನ್ನು ಮತ್ತು ಅದರ ಸಾಹಸಗಳನ್ನೂ ಮುನ್ನಡೆಸುವ ಭಾವ ಇಲ್ಲಿ ಕೆಲಸ ಮಾಡುತ್ತದೆ. ಇಟಲಿಯ ಅನ್ವೇಷಕ ವೆಸ್‌ಪುಚಿ ಅವರು ಅಮೆರಿಕವನ್ನು ‘ಮುಂಡಸ್ ನೋವಸ್’ (ಹೊಸ ಪ್ರಪಂಚ) ಎಂದು ಕರೆದರು; ಹಾಗೆ ನೋಡಿದರೆ, ಅವರ ಈ ಪರ್ಯಟನೆಯು ಹೊಸದರ ಬಗ್ಗೆ ಇರುವ ಹಸಿವಿನಿಂದ ಪ್ರೇರಿತವಾಗಿತ್ತು.
ನಿರಂತರತೆ ಮತ್ತು ಪಟ್ಟುಹಿಡಿದು ಮಾಡುವ ಸಾಧನೆ, ಹಾಗೂ ಸುದೀರ್ಘ ಕಾಲದವರೆಗೆ ನೆಲೆನಿಲ್ಲುವ ಪರಿಪಾಠದಿಂದ ದಕ್ಕುವ ಶಾಂತತೆ ಮತ್ತು ನಿರೀಕ್ಷಿತ ಫಲಿತಾಂಶದ ಬಗ್ಗೆ ಬಹುತೇಕರು ಮಾತನಾಡುವುದಿಲ್ಲ ಎನ್ನಬೇಕು. ಹಳೆಯ ಉದ್ಯೋಗವನ್ನು, ಹಳೆಯ ಸಂಗಾತಿಯನ್ನು ಮತ್ತು ಹಳೆಯದು ಎನಿಸಿದ ಇನ್ನೂ ಅನೇಕ ಬಾಬತ್ತುಗಳನ್ನು ಕೈಬಿಡಲು ಕೆಲವರಿಗೆ ಹಲವು ಹನ್ನೊಂದು ಕಾರಣಗಳಿರಬಹುದು; ಆದರೆ ಹೀಗೆ ವಾಲಿಕೊಳ್ಳದೆ ಪಟ್ಟುಹಿಡಿದು ಮುಂದುವರಿಯುವುದಕ್ಕೂ ಏನಾದರೊಂದು ಬಲವಾದ ಕಾರಣವೂ ಇದ್ದೇ ಇರುತ್ತದೆ.
ಆದ್ದರಿಂದ, ಬದಲಾಯಿಸಬಹುದಾದ ಮತ್ತು ಬದಲಾಯಿಸಲಾಗದ ವಿಷಯಗಳ ನಡುವಿನ ವ್ಯತ್ಯಾಸವನ್ನು ತಿಳಿಯುವ ವಿವೇಚನೆಯನ್ನು ಹೊಂದುವುದು ಇಂದು ಹಿಂದೆಂದಿ ಗಿಂತಲೂ ಹೆಚ್ಚು ಪ್ರಸ್ತುತವಾಗಿದೆ. ನಾನು ಬೆಂಗಳೂರಿನಲ್ಲಿ ಒಂದು ದಶಕಕ್ಕೂ ಹೆಚ್ಚು ಕಾಲದವರೆಗೆ ಇದ್ದುದುಂಟು. ಈ ಅವಽಯಲ್ಲಿ, ರೆಸ್ಟೋರೆಂಟ್ʼಗಳು ಕಣ್ಣು ಮಿಟುಕಿಸುವು ದರೊಳಗೆ ತೆರೆದು ಮುಚ್ಚುವುದನ್ನು ನಾನು ಕಂಡಿರುವೆ.
ಇದರ ನಡುವೆ, ಕುಶಲಕರ್ಮಿಗಳ ಕಾಫಿ ಮತ್ತು ನೂಡಲ್ ಬಾರ್‌ಗಳು ಕೆಲವೇ ನಿಮಿಷ ಗಳಲ್ಲಿ ತೆರೆಯುತ್ತಿದ್ದರೂ, ಅಲ್ಲಿ ಕುಳಿತು ಕಟ್ಲೆಟ್‌ಗಳು ಮತ್ತು ಕಾಫಿಯನ್ನು ಸವಿಯುವುದು ಭರವಸೆಯನ್ನು ತುಂಬುತ್ತದೆ.
ತಮ್ಮ ಜೀವಿತಾವಧಿಯಲ್ಲಿ ಉದ್ಯಾನಗಳು ಮುಚ್ಚಲ್ಪಡುವುದನ್ನು, ವೆರಾಂಡಗಳಿಂದ ಆವರಿಸಲ್ಪಟ್ಟಿರುವ ಬಂಗಲೆಗಳು ಗಗನಚುಂಬಿ ಕಟ್ಟಡಗಳ ನಿರ್ಮಾಣಕ್ಕೆಂದು ಕೆಡವಲ್ಪಡು ತ್ತಿರುವುದನ್ನು, ಕೈತೋಟಗಳು ಕಣ್ಮರೆಯಾಗುತ್ತಿರುವುದನ್ನು ಹಾಗೂ ಕೆರೆ/ಸರೋವರಗಳ ಅಂಗಳಗಳು ಕೆಲ ವ್ಯಕ್ತಿಗಳ ದುರಾಸೆಗೆ ಸಿಲುಕಿ ಕಬಳಿಸಲ್ಪಡುತ್ತಿರುವುದನ್ನು ಕಂಡವರಿದ್ದಾರೆ.
ಆದರೆ, ಶಾಶ್ವತತೆ, ಬೇರು ಬಿಡುವಿಕೆ ಮತ್ತು ದೀರ್ಘಾವಧಿಯ ಉಳಿಯುವಿಕೆ ಮುಂತಾದವು ತಂದುಕೊಡುವ ಸಂತೋಷಗಳ ಬಗ್ಗೆ ನಾವೇಕೆ ಮಾತನಾಡುತ್ತಿಲ್ಲ? ನೀವು ಬಾಲ್ಯದಲ್ಲಿ ಕಾಲಿಟ್ಟಿರಬಹುದಾದ ಎರ್ನಾಕುಲಂನಲ್ಲಿನ ‘ಭಾರತ್ ಟೂರಿಸ್ಟ್ ಹೋಮ್’, ತಿರುವನಂತ ಪುರಂನಲ್ಲಿನ ‘ಇಂಡಿಯನ್ ಕಾಫಿ ಹೌಸ್’ ಅಥವಾ ಬೆಂಗಳೂರಿನಲ್ಲಿನ ಕೋಶಿಸ್ ರೆಸ್ಟೋ ರೆಂಟ್‌ಗಳಂಥ ಪ್ರತಿಷ್ಠಿತ ತಿನಿಸುತಾಣಗಳಿಗೆ ಈಗ ಮತ್ತೊಮ್ಮೆ ಭೇಟಿ ನೀಡಿದ್ದೇ ಹೌದಾದರೆ, ಅದು ನೀಡುವ ಅನುಭವವು ಅಭೂತಪೂರ್ವವಾಗಿರುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.
ಉತ್ತರ ಭಾರತದ ಬೆಳೆದ ನನ್ನ ಗೆಳತಿಯರನ್ನು ಒಮ್ಮೆ ಕೇಳಿದರೆ, ದೆಹಲಿಯಲ್ಲಿನ ‘ಕ್ವಾಲಿಟೀಸ್ ಚೋಲೆ ಭಟೂರೆ’ ಮತ್ತು ಲಖನೌನಲ್ಲಿನ ‘ದೌಲತ್ ಕಾ ಚಾಟ’ ಕುರಿತಾಗಿ ಬಾಯಿ ಚಪ್ಪರಿಸಿಕೊಂಡು ಹೇಳುತ್ತಾರೆ. ಅದರಲ್ಲೂ ವಿಶೇಷವಾಗಿ, ಇಂಥ ತಿನಿಸು ತಾಣ ಗಳಲ್ಲಿ ಸೇವೆ ಸಲ್ಲಿಸಿಕೊಂಡೇ ವಯಸ್ಸಾಗಿರುವವರಿಂದ ಈಗಲೂ ತಿಂಡಿ-ತಿನಿಸಿನ ಸೇವೆ ಪಡೆಯುವುದಿದೆಯ, ಅದು ಸ್ವರ್ಗಸದೃಶ ಎಂದರೆ ಅತಿಶಯೋಕ್ತಿ ಆಗಲಾರದು. ಅದೊಂಥರಾ, ಮನೆಯನ್ನು ತಲುಪಿದಾಗ ಮನೆಯವರಿಂದ ಸಿಗುವ ಬೆಚ್ಚಗಿನ ಅಪ್ಪುಗೆ ಯಂತೆ...
(ಲೇಖಕಿ ಐಆರ್‌ಎಸ್ ಅಧಿಕಾರಿ. ಪ್ರಸ್ತುತ ಆದಾಯ ತೆರಿಗೆ
ಪ್ರಧಾನ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ)