ಒಂದೊಳ್ಳೆ ಮಾತು
ಒಂದು ಸಲ ರಾಜನ ಆಸ್ಥಾನಕ್ಕೆ ಇಬ್ಬರು ಮಹಿಳೆಯರು ಒಂದು ಮಗುವಿನ ಜತೆಯಲ್ಲಿ ನ್ಯಾಯಕ್ಕಾಗಿ ಬಂದಿದ್ದರು. ಅವರಲ್ಲಿ ಆ ಮಗು ತನ್ನದೆಂದು ಒಬ್ಬಳು, ತನ್ನದೆಂದು ಇನ್ನೊಬ್ಬಳು ಕಿತ್ತಾಡುತ್ತಿದ್ದರು. ಆ ಇಬ್ಬರು ಮಹಿಳೆಯರ ಗಂಡಂದಿರೂ ರಾಜನಿಗೋಸ್ಕರ ಯುದ್ಧದಲ್ಲಿ ಹೋರಾಡಿ ಮಡಿದಿದ್ದರು. ಇವರಿಗೆ ಇದರ ಬಗ್ಗೆ ಬೇರೆ ಯಾವ ಸಾಕ್ಷಿ ಆಧಾರ ಗಳೂ ಇರಲಿಲ್ಲ.
ರಾಜ ತಮಗೇ ನ್ಯಾಯ ದೊರಕಿಸಿ ಕೊಡಬೇಕೆಂದು ಇಬ್ಬರೂ ಆಸ್ಥಾನಕ್ಕೆ ಬಂದಿದ್ದರು. ರಾಜನಿಗೀಗ ಧರ್ಮಸಂಕಟಕ್ಕೆ ಇಟ್ಟುಕೊಂಡಿತು. ಸಾಕಷ್ಟು ತಲೆಕೆಡಿಸಿಕೊಂಡರೂ ಅವನಿಗೆ ಪರಿಹಾರ ದೊರೆಯಲಿಲ್ಲ. ರಾಜ ದಿಕ್ಕು ಕಾಣದೆ, ವಯಸ್ಸಾದ ಸಂತರೊಬ್ಬರ ಮೊರೆ ಹೊಕ್ಕ.
ಸಂತರು ಮುಗುಳ್ನಗೆ ಬೀರುತ್ತಾ, “ಇದು ಬಹಳ ಸುಲಭ, ಮಗುವನ್ನು ಇತ್ತ ಕೊಡಿ" ಎಂದರು. ಮಗುವನ್ನು ರಾಜನ ಕೈಗೆ ಕೊಟ್ಟು ಸಂತರು, “ಈ ಮಗುವನ್ನು ಸರಿಯಾಗಿ ಅರ್ಧಕ್ಕೆ ಸೀಳಿ, ಇಬ್ಬರಿಗೂ ಒಂದೊಂದು ಸಮಭಾಗವನ್ನು ಕೊಟ್ಟುಬಿಡಿ" ಎಂದು ಹೇಳಿದರು.
ಇದನ್ನೂ ಓದಿ: Roopa Gururaj Column: ಪ್ರಾಮಾಣಿಕತೆ ಕೊಡುವ ಸಾತ್ವಿಕ ಗತ್ತು
ಗಾಬರಿಯಾದ ರಾಜ, “ಗುರುಗಳೇ ನೀವು ಇದೇನು ಹೇಳುತ್ತಿರುವಿರಿ?" ಎಂದು ಕೇಳಲು, ಸಂತರು “ಇದರಲ್ಲೇನು ಸಮಸ್ಯೆ? ಇಬ್ಬರೂ ಈ ಮಗುವನ್ನು ತಮ್ಮದೆನ್ನುತ್ತಿದ್ದಾರೆ, ಬೇರೆ ಯಾವ ಸಾಕ್ಷಿ ಆಧಾರಗಳೂ ಇಲ್ಲ. ನ್ಯಾಯ ದೊರಕಬೇಕಾದರೆ ಮಗುವನ್ನು ಎರಡು ಭಾಗ ಮಾಡಲೇಬೇಕು" ಎಂದೆನ್ನುತ್ತಾ, ರಾಜನ ಸೊಂಟದಲ್ಲಿದ್ದ ಕತ್ತಿಯನ್ನು ಹೊರಗೆಳೆದರು.
ಆಶ್ಚರ್ಯಚಕಿತನಾದ ರಾಜ ಚೇತರಿಸಿಕೊಳ್ಳುವಷ್ಟರಲ್ಲಿ, ಒಬ್ಬ ಹೆಂಗಸು ಮುಂದೆ ಬಂದು ಸಂತರನ್ನು ತಡೆಯುತ್ತಾ, “ದಯವಿಟ್ಟು ಬೇಡ ಸ್ವಾಮಿ, ಆ ಮಗು ನನ್ನದಲ್ಲ. ಅದು ಅವಳದ್ದೇ, ಅವಳಿಗೇ ಕೊಟ್ಟುಬಿಡಿ" ಎಂದು ಕಣ್ಣೀರಿಡುತ್ತಾ ಸಂತರನ್ನು ತಡೆದಳು. ಆಗ ಸಂತರು ತಮ್ಮನ್ನು ತಡೆದ ಮಹಿಳೆಗೆ ಮಗುವನ್ನು ಕೊಡುತ್ತಾ “ತೆಗೆದುಕೋ ತಾಯಿ, ಇದು ನಿನ್ನದೇ ಮಗು" ಎಂದರು.
ನಡೆದುದೆಲ್ಲವನ್ನೂ ಆಶ್ಚರ್ಯದಿಂದ ನೋಡುತ್ತಿದ್ದ ರಾಜ, “ಗುರುಗಳೇ, ನನಗೊಂದೂ ಅರ್ಥವಾಗುತ್ತಿಲ್ಲ. ಆಕೆ ಆ ಮಗು ತನ್ನದಲ್ಲವೆಂದು ಸ್ಪಷ್ಟವಾಗಿ ಹೇಳಿದ ಮೇಲೂ ಆ ಮಗು ಅವಳದ್ದೇ ಎಂದು ನೀವು ಹೇಗೆ ತೀರ್ಮಾನಿಸಿದಿರಿ?" ಎಂದು ಕೇಳಿದ.
ಆಗ ಸಂತರು, “ನಿಜವಾದ ತಾಯಿಯು ತನ್ನ ಮಗುವಿಗೆ ನೋವಾಗುವುದನ್ನು ಎಂದೂ ಸಹಿಸಲಾರಳು. ಆದರೆ ತಾನು ತಾಯಿ ಎಂದು ಸುಳ್ಳು ಹೇಳಿಕೊಳ್ಳುವವಳು ಮಗು ತುಂಡಾ ಗುತ್ತದೆಯೆಂದು ಗೊತ್ತಾಗಿಯೂ ಸುಮ್ಮನೆ ನಿಂತಿದ್ದಳು. ಮಗುವಿಗೆ ಏನಾದರೂ ಅವಳಿಗೆ ಏನೂ ಚಿಂತೆ ಇಲ್ಲ, ಅವಳು ತುಂಡಾದ ಮಗುವನ್ನು ಕೂಡಾ ಪಡೆಯಲು ತಯಾರಾಗೇ ನಿಂತಿದ್ದಾಳೆ.
ಮಗುವಿಗೆ ಏನಾದರೇನು? ಅದು ಹೇಗೂ ಅವಳ ಮಗುವಲ್ಲ! ಆದರೆ ನಿಜವಾದ ತಾಯಿ, ಅದು ಕ್ಷೇಮವಾಗಿದ್ದರೆ ಸಾಕೆಂದು ಅದನ್ನು ಬಿಟ್ಟುಕೊಡಲೂ ತಯಾರಿದ್ದಳು. ಇದರಿಂದಲೇ ಗೊತ್ತಾಗುವುದಿಲ್ಲವೇ, ನಿಜವಾದ ಮಗುವಿನ ತಾಯಿ ಯಾರೆಂದು?" ಎಂದು ಹೇಳಿದರು.
ನಮಗೆಲ್ಲ ನಮ್ಮ ತಾಯಿಯ ಬೆಲೆ ತಿಳಿಯುವುದು ನಾವು ತಾಯಿಯ ಸ್ಥಾನಕ್ಕೆ ಬಂದಾಗಲೇ. ಮನೆಯಲ್ಲಿ ತಾಯಿ, ನಿಷ್ಠುರವಾಗಿ ಮಾತನಾಡಿ ಹಠ ಹಿಡಿದರೂ ಅದರ ಬೆನ್ನ ಹಿಂದೆಯೇ ಅವಳಿಗೆ ನಮ್ಮ ಬಗ್ಗೆ ಅಪಾರವಾದ ಕಾಳಜಿ ಇರುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ, ನಾವು ಮಾಡುವ ತಪ್ಪುಗಳನ್ನು, ನಮ್ಮ ಸುಳ್ಳುಗಳನ್ನ ಮೊದಲು ಗಮನಿಸಿ ನಮ್ಮನ್ನು ಹಿಡಿಯು ವುದೇ ತಾಯಿ. ಅವಳಲ್ಲಿ ನಮ್ಮ ತಪ್ಪುಗಳಿಗೆ ಎಂದಿಗೂ ಮೃದು ಧೋರಣೆ ಇರುವುದಿಲ್ಲ. ದಂಡಿಸಿ ಬೈದು ಬುದ್ಧಿ ಹೇಳಿ ನಮ್ಮನ್ನು ಸಮಾಜಮುಖಿಯಾಗಿಸುವುದರಲ್ಲಿ ತಾಯಿಯ ಪಾತ್ರ ಬಹಳ ದೊಡ್ಡದು.
ಅವಳು ನಮ್ಮನ್ನು ಎಷ್ಟೇ ದಂಡಿಸಿದರೂ ಹೊರಗಿನ ಪ್ರಪಂಚದ ಯಾರಾದರೂ ನಮಗೆ ತೊಂದರೆ ಕೊಡುತ್ತಿದ್ದಾರೆ ಎಂದು ಗೊತ್ತಾದರೆ ಸಾಕು, ರೌದ್ರರೂಪ ತಾಳಿ ಅವರಿಗೆ ತಕ್ಕ ಶಾಸ್ತಿ ಕಲಿಸಲು ನಮ್ಮ ಬೆನ್ನ ಹಿಂದೆಯೇ ನಿಲ್ಲುತ್ತಾಳೆ. ಇಂಥ ತಾಯಿಯ ನೆರಳು, ಆಶೀರ್ವಾದ ಜೀವನದಲ್ಲಿ ಇರುವವರೆಗೆ ನಮಗೆ ಯಾವ ದುಷ್ಟ ಶಕ್ತಿಯ ಭಯವೂ ಇರುವುದಿಲ್ಲ. ನೂರು ದೇವರುಗಳಿಗಿಂತ, ತಾಯಿದೇವರು ಮೇಲು. ತಾಯಿಯ ಮನಸ್ಸನ್ನು ಎಂದಿಗೂ ನೋಯಿಸಬೇಡಿ. ಅವಳು ನಿಟ್ಟುಸಿರಿಟ್ಟರೆ ನಮಗೆ ಖಂಡಿತ ಒಳ್ಳೆಯದಾಗುವು ದಿಲ್ಲ.