ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Leena Joshi Column: ಒಬ್ಬಳಿಗೆ ನಿಗೂಢ ಅಂತ್ಯ, ಮತ್ತೊಬ್ಬಳಿಗೆ ವಿಶ್ವಗೌರವ

ಪಾಕಿಸ್ತಾನದ ಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ ಅವರ ತಂಗಿ ‘ಫಾತಿಮಾ ಜಿನ್ನಾ’ ಮತ್ತು ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ತಂಗಿ ‘ವಿಜಯಲಕ್ಷ್ಮಿ ಪಂಡಿತ್’. ಇಬ್ಬರೂ ವಿದ್ಯಾವಂತರು, ಇಬ್ಬರೂ ರಾಷ್ಟ್ರೀಯ ಚಳವಳಿಯ ಕಾಲವನ್ನು ಕಂಡವರು, ಇಬ್ಬರೂ ತಮ್ಮ ಅಣ್ಣಂದಿರ ರಾಜಕೀಯ ಬದುಕಿನೊಂದಿಗೆ ನಿಕಟವಾಗಿ ಸಂಪರ್ಕ ಹೊಂದಿದವರು, ಇಬ್ಬರೂ ಸಾರ್ವಜನಿಕ ಜೀವನದಲ್ಲಿ ಮಹತ್ತರ ಪಾತ್ರ ವಹಿಸಿದವರು.

ಅಮೃತಕಾಲ

ರಕ್ಷಾಬಂಧನವೆಂದರೆ ಅಣ್ಣ-ತಂಗಿಯರ ಸಂಬಂಧವನ್ನು ನೆನಪಿಸುವ ಹಬ್ಬ. ತಂಗಿ ರಾಖಿ ಕಟ್ಟುತ್ತಾಳೆ; ಅಣ್ಣ ರಕ್ಷಣೆಯ ಭರವಸೆ ನೀಡುತ್ತಾನೆ. ರಕ್ಷಾಬಂಧನವನ್ನು ಕುಟುಂಬದ ಭಾವನೆ ಯಷ್ಟೇ ಅಲ್ಲ, ರಾಜಕೀಯ ಮತ್ತು ಇತಿಹಾಸದ ಕನ್ನಡಿಯಲ್ಲಿ ನೋಡಿದಾಗ ಕೂಡ ಸ್ಪಷ್ಟ ಸಂದೇಶ ಗೋಚರಿಸುತ್ತದೆ. ಭಾರತ ಮತ್ತು ಪಾಕಿಸ್ತಾನ, 1947ರಲ್ಲಿ ವಿಭಜನೆಯಾದ ಎರಡು ರಾಷ್ಟ್ರಗಳು. ಈ ಎರಡೂ ರಾಷ್ಟ್ರಗಳ ನಿರ್ಮಾಣದ ಇತಿಹಾಸದಲ್ಲಿ ಇಬ್ಬರು ಸಹೋದರಿಯರ ಬದುಕುಗಳು ಗಮನಾರ್ಹ ಹೋಲಿಕೆಯನ್ನು ನೀಡುತ್ತವೆ.

ಪಾಕಿಸ್ತಾನದ ಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ ಅವರ ತಂಗಿ ‘ಫಾತಿಮಾ ಜಿನ್ನಾ’ ಮತ್ತು ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ತಂಗಿ ‘ವಿಜಯಲಕ್ಷ್ಮಿ ಪಂಡಿತ್’. ಇಬ್ಬರೂ ವಿದ್ಯಾವಂತರು, ಇಬ್ಬರೂ ರಾಷ್ಟ್ರೀಯ ಚಳವಳಿಯ ಕಾಲವನ್ನು ಕಂಡವರು, ಇಬ್ಬರೂ ತಮ್ಮ ಅಣ್ಣಂದಿರ ರಾಜಕೀಯ ಬದುಕಿನೊಂದಿಗೆ ನಿಕಟವಾಗಿ ಸಂಪರ್ಕ ಹೊಂದಿದವರು, ಇಬ್ಬರೂ ಸಾರ್ವಜನಿಕ ಜೀವನದಲ್ಲಿ ಮಹತ್ತರ ಪಾತ್ರ ವಹಿಸಿದವರು. ಈ ಇಬ್ಬರು ಮಹಿಳೆಯರಿಗೆ ಎರಡು ರಾಷ್ಟ್ರಗಳು ಕೊನೆಯಲ್ಲಿ ಯಾವ ರೀತಿಯ ಬದುಕನ್ನು ನೀಡಿದವು? ಈ ಪ್ರಶ್ನೆಗೆ ಉತ್ತರ ಹುಡುಕಿ ದಾಗ, ಮಹಿಳೆಯರ ಪಾಲಿಗೆ ಭಾರತವು ಹೆಚ್ಚು ಅವಕಾಶ, ಸಾರ್ವಜನಿಕ ಸ್ಥಾನಮಾನ ಮತ್ತು ರಾಜಕೀಯ ಸ್ವಾತಂತ್ರ್ಯ ಒದಗಿಸಿದ ದೇಶ ಎಂಬ ವಾದಕ್ಕೆ ಐತಿಹಾಸಿಕ ಉದಾಹರಣೆ ಸಿಗುತ್ತದೆ.

1893ರಲ್ಲಿ ಜನಿಸಿದ ಫಾತಿಮಾ ಆ ಕಾಲಕ್ಕೆ ಆಧುನಿಕ ಶಿಕ್ಷಣ ಪಡೆದ ಮಹಿಳೆ. ಮುಂಬೈನ ಬಾಂದ್ರಾ ಕಾನ್ವೆಂಟ್‌ನಲ್ಲಿ ವಿದ್ಯಾಭ್ಯಾಸ ಮಾಡಿದ ನಂತರ ಕಲ್ಕತ್ತಾದ ಡಾ.ಆರ್.ಅಹ್ಮದ್ ಡೆಂಟಲ್ ಕಾಲೇಜಿನಲ್ಲಿ ದಂತವೈದ್ಯಶಾಸ ಅಧ್ಯಯನ ಮಾಡಿದರು. 1923ರಲ್ಲಿ ದಂತವೈದ್ಯಕೀಯ ಪದವಿ ಪಡೆದು ಮುಂಬಯಿಯಲ್ಲಿ ಸ್ವಂತ ಕ್ಲಿನಿಕ್ ಆರಂಭಿಸಿದರು.

ಇದನ್ನೂ ಓದಿ: Leena Joshi Column: 1947ರಲ್ಲಿ ಬ್ರಿಟಿಷರು ಸುಟ್ಟ 4 ಟನ್‌ ರಹಸ್ಯ !

1920ರ ದಶಕದಲ್ಲಿ ಒಬ್ಬ ಮುಸ್ಲಿಂ ಮಹಿಳೆ ವೃತ್ತಿಪರ ದಂತವೈದ್ಯೆಯಾಗಿರುವುದು ಸಾಮಾನ್ಯ ಸಂಗತಿಯಲ್ಲ. 1929ರಲ್ಲಿ ಜಿನ್ನಾ ಪತ್ನಿ ರಟ್ಟೀ ಆತ್ಮಹತ್ಯೆ ಮಾಡಿಕೊಂಡ ನಂತರ, ಫಾತಿಮಾ ತಮ್ಮ ದಂತವೈದ್ಯ ವೃತ್ತಿಯನ್ನು ಬಿಟ್ಟು ಅಣ್ಣನೊಂದಿಗೆ ವಾಸಿಸಲು ತೆರಳಿದರು. ಅಲ್ಲಿಂದ ಮುಂದೆ ಅವರು ಜಿನ್ನಾ ಅವರ ಅತ್ಯಂತ ನಿಕಟ ಸಂಗಾತಿ ಮತ್ತು ರಾಜಕೀಯ ಸಹಚರಿಯಾದರು.

ಪ್ರತ್ಯೇಕ ದೇಶಕ್ಕಾಗಿ ಎದ್ದ ಕೂಗಿನಲ್ಲಿ ಮಹಿಳೆಯರನ್ನು ರಾಜಕೀಯವಾಗಿ ಸಂಘಟಿಸುವ ಕೆಲಸದಲ್ಲೂ ಪಾಲ್ಗೊಂಡರು. ಪಾಕಿಸ್ತಾನ ಹುಟ್ಟಿದ ನಂತರ ನಿರಾಶ್ರಿತರ ನೆರವು, ಮಹಿಳೆಯರು ಮತ್ತು ಮಕ್ಕಳ ಕಲ್ಯಾಣ ಸೇರಿದಂತೆ ಹಲವು ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡರು. ಮಹಿಳೆಯರ ಸ್ವಯಂಸೇವಕ ಸಂಘಟನೆಗಳನ್ನು ನಿರ್ಮಿಸುವಲ್ಲಿ ಅವರು ಮಹತ್ತರ ಪಾತ್ರ ವಹಿಸಿದರು. ಪಾಕಿಸ್ತಾನದ ಜನರು ಅವರಿಗೆ ಮದರ್-ಇ-ಮಿಲ್ಲತ್- ರಾಷ್ಟ್ರಮಾತೆ ಎಂಬ ಗೌರವ ನೀಡಿದರು.

ಆದರೆ ರಾಷ್ಟ್ರಮಾತೆಯ ನಂತರದ ಬದುಕು ಶೋಚನೀಯ. ಜಿನ್ನಾ 1948ರಲ್ಲಿ ನಿಧನರಾದ ನಂತರ ಫಾತಿಮಾರ ಬದುಕು ಮೂರಾಬಟ್ಟೆಯಾಯಿತು. ಜಿನ್ನಾರ ಇತರ ಒಡಹುಟ್ಟಿದವರು ಪಾಕಿಸ್ತಾನಕ್ಕೆ ಸ್ಥಳಾಂತರಗೊಳ್ಳಲಿಲ್ಲ. ಫಾಲ್ಲತಿಮಾ ಸಾಯುವವರೆಗೂ ಏಕಾಂಗಿಯಾಗಿ ಕರಾಚಿಯಲ್ಲೇ ಇದ್ದರು. 1958ರಲ್ಲಿ ಅಯೂಬ್ ಖಾನ್ ಸೈನಿಕ ಆಡಳಿತದ ಮೂಲಕ ಅಧಿಕಾರಕ್ಕೆ ಬಂದರು. 1965ರ ಅಧ್ಯಕ್ಷೀಯ ಚುನಾವಣೆಯಲ್ಲಿ ವಿರೋಧ ಪಕ್ಷಗಳು ಫಾತಿಮಾ ಜಿನ್ನಾ ಅವರನ್ನು ಅಭ್ಯರ್ಥಿ ಯನ್ನಾಗಿ ಮಾಡಿದವು. ದೇಶದ ಸ್ಥಾಪಕನ ತಂಗಿ, ‘ರಾಷ್ಟ್ರಮಾತೆ’ ಎಂದು ಕರೆಯಲ್ಪಟ್ಟ ಮಹಿಳೆ, ಸೈನಿಕ ಆಡಳಿತಗಾರನ ವಿರುದ್ಧ ಚುನಾವಣಾ ಕಣಕ್ಕೆ ಇಳಿದರು, ಸೋತರು.

622

1967ರಲ್ಲಿ ಫಾತಿಮಾ ಜಿನ್ನಾ ಕರಾಚಿಯಲ್ಲಿ ನಿಧನರಾದರು. ಅವರ ಸಾವಿನ ಸುತ್ತ ನಂತರ ಹಲವು ಅನುಮಾನಗಳು ಹುಟ್ಟಿಕೊಂಡವು. ಕೆಲವು ವ್ಯಕ್ತಿಗಳು ಅವರ ದೇಹದ ಮೇಲೆ ಗಾಯದ ಗುರುತು ಗಳಿದ್ದವು ಎಂದು ಹೇಳಿಕೆ ನೀಡಿದರು. ಕೆಲವರು ಅವರನ್ನು ಹತ್ಯೆ ಮಾಡಿರಬಹುದು ಎಂದು ಶಂಕಿಸಿದರು.

ಇನ್ನೂ ಕೆಲವು ದಾಖಲೆಗಳ ಪ್ರಕಾರ, ಅವರ ತಲೆಯನ್ನು ಕಡಿದು ಕೊಲ್ಲಲಾಗಿತ್ತು. ಆಕೆಯ ಕುತ್ತಿಗೆ ಯ ಮೇಲೆ ದೊಡ್ಡದಾದ ಗಾಯವಾಗಿ, ಮುಖವು ತೀವ್ರವಾಗಿ ಊದಿಕೊಂಡಿತ್ತು ಮತ್ತು ಆಕೆಯ ಹೊಟ್ಟೆಯಲ್ಲಿ ಆಳವಾದ ಗಾಯದಿಂದ ರಕ್ತ ಸೋರುತಿತ್ತು ಎಂಬ ವದಂತಿ ಹರಡಿತ್ತು. ಅಧಿಕೃತ ತನಿಖೆ ನಡೆಯಲಿಲ್ಲ. ಫಾತಿಮಾ ಜಿನ್ನಾರನ್ನು ಕೊಲೆ ಮಾಡಲಾಯಿತೇ? ಎಂಬ ಪ್ರಶ್ನೆ ದಶಕಗಳ ವರೆಗೆ ಪಾಕಿಸ್ತಾನದಲ್ಲಿ ಉಳಿಯಿತು.

ಈಗ ಭಾರತದ ಪ್ರಥಮ ಪ್ರಧಾನಿ ನೆಹರೂರ ಕುಟುಂಬದತ್ತ ಒಂದು ದೃಷ್ಟಿ ಹರಿಸೋಣ. ನೆಹರೂರ ತಂಗಿ ವಿಜಯಲಕ್ಷ್ಮಿ ಪಂಡಿತ್. ಅವರು ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು, ಜೈಲು ಶಿಕ್ಷೆ ಅನುಭವಿಸಿದರು, ಸಚಿವೆಯಾದರು. ಭಾರತದ ರಾಯಭಾರಿಯಾಗಿ ಹಲವು ಪ್ರಮುಖ ರಾಷ್ಟ್ರಗಳಲ್ಲಿ ಸೇವೆ ಸಲ್ಲಿಸಿದರು. 1953ರಲ್ಲಿ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷೆ ಯಾದರು- ಆ ಹುದ್ದೆ ಅಲಂಕರಿಸಿದ ಮೊದಲ ಮಹಿಳೆ ಎಂಬ ಐತಿಹಾಸಿಕ ಗೌರವ ಅವರಿಗೆ ಸಲ್ಲುತ್ತದೆ.

ಮಹಾರಾಷ್ಟ್ರದ ರಾಜ್ಯಪಾಲೆಯಾದರು. ತಮ್ಮ ವಿಶ್ರಾಂತಿ ಜೀವನವನ್ನು ಗೌರವದಿಂದಲೇ ಕಳೆದು, 1990ರಲ್ಲಿ ಡೆಹ್ರಾಡೂನ್‌ನಲ್ಲಿ 90ನೇ ವಯಸ್ಸಿನಲ್ಲಿ ನಿಧನರಾದರು. 1975ರಲ್ಲಿ ಇಂದಿರಾ ಗಾಂಧಿ ಭಾರತದಲ್ಲಿ ತುರ್ತು ಪರಿಸ್ಥಿತಿಯನ್ನು ( Emergency ) ಹೇರಿದಾಗ, ವಿಜಯಲಕ್ಷ್ಮಿ ಪಂಡಿತ್ ಅವರು ಅದನ್ನು ತೀವ್ರವಾಗಿ ವಿರೋಧಿಸಿದರು. ಸ್ವಂತ ಕುಟುಂಬದ ವಿರುದ್ಧವೇ ನಿಂತು ಪ್ರಜಾಪ್ರಭುತ್ವದ ಪರವಾಗಿ ಹೋರಾಡುವ ಸ್ವಾತಂತ್ರ್ಯ ಅವರಿಗೆ ಭಾರತದ ವ್ಯವಸ್ಥೆಯಲ್ಲಿ ಸಿಕ್ಕಿತು. ಆದರೆ ಪಾಕಿಸ್ತಾನದ ಮಿಲಿಟರಿ ಆಡಳಿತವು ಫಾತಿಮಾ ಜಿನ್ನಾ ಅವರನ್ನು ‘ದೇಶದ್ರೋಹಿ’ ಎಂದು ಬಿಂಬಿಸಿತು ಮತ್ತು ಚುನಾವಣೆಯಲ್ಲಿ ಅಕ್ರಮ ಎಸಗಿ ಅವರನ್ನು ಸೋಲಿಸಲಾಯಿತು.

1967ರಲ್ಲಿ ಅವರ ನಿಗೂಢ ಸಾವು ಮತ್ತು ಅದರ ಸುತ್ತಲಿನ ವಿವಾದಗಳು ಪಾಕಿಸ್ತಾನದ ರಾಜಕೀಯ ವ್ಯವಸ್ಥೆಯಲ್ಲಿದ್ದ ಕ್ರೌರ್ಯವನ್ನು ತೋರಿಸುತ್ತವೆ.

ಫಾತಿಮಾ ಜಿನ್ನಾ ಸಾರ್ವಜನಿಕ ಜೀವನದಲ್ಲಿ ಮಹತ್ವದ ವ್ಯಕ್ತಿ. ಆದರೆ ಅವರ ಕೊನೆಯ ವರ್ಷಗಳು ರಾಜಕೀಯ ಸಂಘರ್ಷ ಮತ್ತು ಸಾವಿನ ಸುತ್ತಲಿನ ಅನುಮಾನಗಳಿಂದ ಗುರುತಿಸಲ್ಪಟ್ಟವು. ವಿಜಯಲಕ್ಷ್ಮಿ ಪಂಡಿತ್ ದೀರ್ಘ ಸಾರ್ವಜನಿಕ ಜೀವನ ನಡೆಸಿ, ಸಚಿವೆಯಾಗಿ, ರಾಜತಾಂತ್ರಿಕೆ ಯಾಗಿಯೂ, ವಿಶ್ವಸಂಸ್ಥೆಯ ಅಧ್ಯಕ್ಷೆಯಾಗಿಯೂ, ರಾಜ್ಯಪಾಲೆಯಾಗಿಯೂ ಗೌರವ ಪಡೆದರು.

ಜಿನ್ನಾ ಕುಟುಂಬ ಮತ್ತು ನೆಹರು ಕುಟುಂಬಗಳ ನಡುವೆ ಕುತೂಹಲಕಾರಿ ಸಾಮ್ಯವಿದೆ. ಎರಡೂ ಕುಟುಂಬಗಳ ಪುತ್ರಿಯರು ಪಾರ್ಸಿ ಪುರುಷರನ್ನು ವಿವಾಹವಾದರು. ಆದರೆ ತಂದೆಯ ಪ್ರತಿಕ್ರಿಯೆ ಮತ್ತು ನಂತರದ ಕುಟುಂಬ ಸಂಬಂಧಗಳ ಸ್ವರೂಪದಲ್ಲಿ ವ್ಯತ್ಯಾಸವಿತ್ತು. ನೆಹರೂರ ಪುತ್ರಿ ಇಂದಿರಾ ಗಾಂಧಿಯ ವಿವಾಹವೂ ಈ ಹೋಲಿಕೆಗೆ ಇನ್ನೊಂದು ಆಯಾಮ ನೀಡುತ್ತದೆ. ಇಂದಿರಾ ಪಾರ್ಸಿ ಯುವಕ ಫಿರೋಜ್ ಗಾಂಧಿಯನ್ನು ವಿವಾಹವಾದರು. ಆರಂಭದಲ್ಲಿ ಕುಟುಂಬದಲ್ಲಿ ಅಸಮ್ಮತಿ ಇದ್ದರೂ, ನೆಹರು ಕೊನೆಗೆ ಮಗಳ ವೈಯಕ್ತಿಕ ಆಯ್ಕೆಯನ್ನು ಗೌರವಿಸಿದರು.

ಮೊಮ್ಮಕ್ಕಳ ಜೊತೆ ನೆಹರೂ ಸಮಯ ಕಳೆದರು, ಮಗಳನ್ನು ರಾಜಕೀಯದಲ್ಲಿ ಬೆಳೆಸಿದರು. ಜಿನ್ನಾರ ಏಕೈಕ ಮಗಳು ದಿನಾ, ಪಾರ್ಸಿ ಉದ್ಯಮಿ ನೆವಿಲ್ ವಾಡಿಯಾರನ್ನು ವಿವಾಹವಾಗಲು ನಿರ್ಧರಿಸಿದಾಗ ಜಿನ್ನಾ ಆ ವಿವಾಹವನ್ನು ತೀವ್ರವಾಗಿ ವಿರೋಧಿಸಿದರು. 1938ರಲ್ಲಿ ನಡೆದ ಮದುವೆಯಿಂದ ತಂದೆ-ಮಗಳ ಸಂಬಂಧದಲ್ಲಿ ದೀರ್ಘ ಅಂತರ ಉಂಟಾಯಿತು.

ಜಿನ್ನಾ ಅಳಿಯನನ್ನು ಮನಃಪೂರ್ವಕವಾಗಿ ಸ್ವೀಕರಿಸಲಿಲ್ಲ. ನೆಹರೂ ತಮ್ಮ ಮಗಳ ಆಯ್ಕೆಯನ್ನು ಒಪ್ಪಿಕೊಂಡರು ಮತ್ತು ಸಂಬಂಧವನ್ನು ಮುಂದುವರಿಸಿದರು. ಇದು ಕೇವಲ ಇಬ್ಬರು ತಂದೆಯರ ವೈಯಕ್ತಿಕ ಸ್ವಭಾವದ ಕಥೆಯಲ್ಲ. ಆ ಕಾಲದಲ್ಲಿ ಮಹಿಳೆಯ ವೈಯಕ್ತಿಕ ಆಯ್ಕೆ, ಧರ್ಮಾಂತರ ಸಂಬಂಧ ಮತ್ತು ಕುಟುಂಬದ ಗೌರವದ ಪ್ರಶ್ನೆಗಳನ್ನು ಸಮಾಜ ಹೇಗೆ ನೋಡುತ್ತಿತ್ತು ಎಂಬುದರ ಪ್ರತಿಬಿಂಬವೂ ಹೌದು.

ಭಾರತ ಮತ್ತು ಪಾಕಿಸ್ತಾನದ ನಡುವಿನ ಹೋಲಿಕೆಯಲ್ಲಿ ಯಾವುದು ಮಹಿಳೆಯರಿಗೆ ಉತ್ತಮ ದೇಶ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ಮಹಿಳೆಯೊಬ್ಬಳಿಗೆ ಕುಟುಂಬದ ಗುರುತನ್ನು ಮೀರಿ ಸಾರ್ವಜನಿಕ ಜೀವನದಲ್ಲಿ ಸ್ವತಂತ್ರ ಸ್ಥಾನ ಪಡೆಯಲು ಭಾರತ ಹೆಚ್ಚು ಅವಕಾಶ ನೀಡಿದ ಉದಾ ಹರಣೆ ಸ್ಪಷ್ಟವಾಗಿ ಕಾಣುತ್ತದೆ.

ಭಾರತ, ವಿಜಯಲಕ್ಷ್ಮಿ ಪಂಡಿತ್ ಅವರನ್ನು ನೆಹರು ಅವರ ತಂಗಿ ಎಂಬ ಕಾರಣಕ್ಕೆ ಮಾತ್ರ ನೆನಪಿಸಿಕೊಳ್ಳಲಿಲ್ಲ. ಅವರನ್ನು ಸಚಿವೆಯಾಗಿ, ರಾಜತಾಂತ್ರಿಕರಾಗಿ, ವಿಶ್ವಸಂಸ್ಥೆಯ ಅಧ್ಯಕ್ಷೆಯಾಗಿ ಮತ್ತು ರಾಜ್ಯಪಾಲೆಯಾಗಿ ಗುರುತಿಸಿತು. ಇದು ಮಹಿಳೆಗೆ ನೀಡಿದ ನಿಜವಾದ ಗೌರವ.

ಭಾರತ ತನ್ನ ಮಹಿಳೆಯರಿಗೆ ಉತ್ತಮ ರಾಜಕೀಯ ಅವಕಾಶ ನೀಡಿದ ರಾಷ್ಟ್ರ ಎಂಬ ವಾದವನ್ನು ವಿಜಯಲಕ್ಷ್ಮಿ ಪಂಡಿತ್ ಅವರ ಬದುಕಿನ ನಿದರ್ಶನ ಬಲಪಡಿಸುತ್ತದೆ. ರಕ್ಷಾಬಂಧನದಂದು ಅಣ್ಣ ತಂಗಿಯನ್ನು ರಕ್ಷಿಸುವುದಾಗಿ ಭರವಸೆ ನೀಡುತ್ತಾನೆ. ಆದರೆ ಒಂದು ರಾಷ್ಟ್ರ ತನ್ನ ಮಹಿಳೆಯನ್ನು ನಿಜವಾಗಿ ಹೇಗೆ ರಕ್ಷಿಸುತ್ತದೆ? ಅವಳನ್ನು ಮನೆಯೊಳಗೆ ಇಟ್ಟುಕೊಳ್ಳುವುದರಿಂದ ಅಲ್ಲ, ಅವಳ ಆಯ್ಕೆಯನ್ನು ಗೌರವಿಸುವುದರಿಂದ, ಅವಳ ಶಿಕ್ಷಣಕ್ಕೆ ಅವಕಾಶ ನೀಡುವುದರಿಂದ, ಅವಳು ಅಣ್ಣನ ನೆರಳಿನಿಂದ ಹೊರಬಂದು ತನ್ನದೇ ಹೆಸರಿನಲ್ಲಿ ಬದುಕಲು ಅವಕಾಶ ನೀಡುವುದರಿಂದ.

ಫಾತಿಮಾ ಜಿನ್ನಾ ವಿದ್ಯಾವಂತರು, ದಂತವೈದ್ಯರು, ಸಮಾಜಸೇವಕರು ಮತ್ತು ಪ್ರಜಾಪ್ರಭುತ್ವಪರ ರಾಜಕೀಯ ನಾಯಕಿಯಾಗಿದ್ದರು. ವಿಜಯಲಕ್ಷ್ಮಿ ಪಂಡಿತ್ ಸ್ವಾತಂತ್ರ್ಯ ಹೋರಾಟಗಾರ್ತಿ, ಸಚಿವೆಯು, ರಾಜತಾಂತ್ರಿಕರು, ವಿಶ್ವಸಂಸ್ಥೆಯ ಅಧ್ಯಕ್ಷೆ ಮತ್ತು ರಾಜ್ಯಪಾಲೆಯಾದರು. ಇಬ್ಬರೂ ಗೌರವಕ್ಕೆ ಅರ್ಹರು. ಒಂದು ದೇಶ ತನ್ನ ಮಹಿಳೆಯರನ್ನು ಎಷ್ಟು ಎತ್ತರಕ್ಕೆ ಏರಲು ಬಿಡುತ್ತದೆ ಎಂಬುದೇ ಆ ದೇಶದ ಪ್ರಜಾಪ್ರಭುತ್ವದ ನಿಜವಾದ ಪರೀಕ್ಷೆ. ಈ ನಿರ್ದಿಷ್ಟ ಐತಿಹಾಸಿಕ ಹೋಲಿಕೆ ಯಲ್ಲಿ, ಭಾರತ ತನ್ನ ಮಹಿಳೆಗೆ ಹೆಚ್ಚು ವಿಶಾಲವಾದ ಸಾರ್ವಜನಿಕ ವೇದಿಕೆ ನೀಡಿದ ದೇಶವಾಗಿ ಕಾಣುತ್ತದೆ.

ಆದ್ದರಿಂದ ಈ ರಕ್ಷಾಬಂಧನದಂದು ರಾಖಿಯ ದಾರಿಯನ್ನು ಕೇವಲ ಕುಟುಂಬದ ಸಂಬಂಧದ ಸಂಕೇತವಾಗಿ ನೋಡದೆ, ಮಹಿಳೆಯ ಸ್ವಾತಂತ್ರ್ಯದ ಸಂಕೇತವಾಗಿಯೂ ನೋಡೋಣ. ಮಹಿಳೆ ಯನ್ನು ಸಹೋದರ ರಕ್ಷಿಸುವ ಸಂಕೇತ ರಾಖಿ. ಆದರೆ ಮಹಿಳೆ ಸ್ವತಂತ್ರ ವ್ಯಕ್ತಿತ್ವ ಹೊಂದಿದವಳು ಕೂಡ. ಮಹಿಳೆಗೆ ತನ್ನದೇ ಧ್ವನಿ, ತನ್ನದೇ ಸ್ಥಾನ ಮತ್ತು ತನ್ನದೇ ಇತಿಹಾಸ ಕಟ್ಟಿಕೊಳ್ಳುವ ಅವಕಾಶ ನೀಡುವಲ್ಲಿ- ಭಾರತದ ಸದಾ ಮುಂದಿದೆ.