ಮನಿ ಮೈಂಡೆಡ್
ಹಣಕಾಸು ಜಗತ್ತಿನಲ್ಲಿ ಭಾರತೀಯರು ಹೊಸ ಇತಿಹಾಸ ಬರೆಯುತ್ತಿದ್ದಾರೆ. ಬ್ಯಾಂಕ್ ಠೇವಣಿ ಯಂತಹ ಸಾಂಪ್ರದಾಯಿಕ ಉಳಿತಾಯ ಪದ್ಧತಿಯಿಂದ ಆಚೆ ಬಂದು, ಮ್ಯೂಚುಯಲ್ ಫಂಡ್ ಗಳತ್ತ ಹೆಜ್ಜೆ ಹಾಕಿರುವ ಭಾರತೀಯರ ಹೂಡಿಕೆಯ ಮನಸ್ಥಿತಿ ಈಗ ಬದಲಾಗಿದೆ. ಇದಕ್ಕೆ ತಾಜಾ ಸಾಕ್ಷಿ ಎಂಬಂತೆ, 2026ರ ಜುಲೈ ಅಂತ್ಯದ ವೇಳೆಗೆ ಭಾರತೀಯ ಮ್ಯೂಚುಯಲ್ ಫಂಡ್ ವಲಯ ದಲ್ಲಿ ನಿರ್ವಹಣೆ ಯಾಗುತ್ತಿರುವ ಒಟ್ಟು ಆಸ್ತಿ ಮೌಲ್ಯ (AUM) ಬರೋಬ್ಬರಿ 85 ಲಕ್ಷ ಕೋಟಿ ರುಪಾಯಿಗಳ ಗಡಿಯನ್ನು ದಾಟಿದೆ!
ಭಾರತೀಯ ಮ್ಯೂಚುಯಲ್ ಫಂಡ್ ಉದ್ಯಮದ ಈ ಪ್ರಯಾಣವು ರೋಚಕವಾಗಿದೆ ಮತ್ತು ಅಷ್ಟೇ ವೇಗವಾಗಿದೆ. 2014ರಲ್ಲಿ 10 ಲಕ್ಷ ಕೋಟಿ ರುಪಾಯಿಯಷ್ಟಿದ್ದ ಎಯುಎಂ, 2017ರ ವೇಳೆಗೆ 20 ಲಕ್ಷ ಕೋಟಿಗೆ ಏರಿತು. 202ರಲ್ಲಿ 30 ಲಕ್ಷ ಕೋಟಿ ಮತ್ತು 2026ರ ಜುಲೈ ವೇಳೆಗೆ 85 ಲಕ್ಷ ಕೋಟಿ ರುಪಾಯಿ ಗಳ ಮಟ್ಟವನ್ನು ದಾಟಿದೆ.
ಒಂದು ಕಾಲದಲ್ಲಿ ಮ್ಯೂಚುವಲ್ ಫಂಡ್ ಎಂದರೆ ಸಾಕು, ಯಾವ ಫಂಡ್ ಮ್ಯಾನೇಜರ್ ಉತ್ತಮ ರಿಟರ್ನ್ ಕೊಡುತ್ತಾರೆ? ಯಾವ ಸ್ಟಾಕ್ ಮೇಲೆ ಹೆಚ್ಚು ನಂಬಿಕೆ ಇಡಬಹುದು? ಎಂಬಿತ್ಯಾದಿ ಚರ್ಚೆ ಗಳೇ ಮುಂಚೂಣಿಯಲ್ಲಿರುತ್ತಿದ್ದವು. ಆದರೆ ಕಳೆದ ಐದು ವರ್ಷಗಳಲ್ಲಿ ಭಾರತೀಯ ಹೂಡಿಕೆದಾರರ, ವಿಶೇಷ ವಾಗಿ ಚಿಲ್ಲರೆ (ರಿಟೇಲ್) ಹೂಡಿಕೆದಾರರ ಮನಸ್ಥಿತಿಯಲ್ಲಿ ಒಂದು ಮಹತ್ವದ ಮತ್ತು ಆಸಕ್ತಿದಾಯಕ ಬದಲಾವಣೆ ಜರುಗಿದೆ.
ಇದನ್ನೂ ಓದಿ: Keshava Prasad B Column: ಸಣ್ಣ ಉಳಿತಾಯ ಯೋಜನೆಗಳು ಈಗಲೂ ಏಕೆ ಆಕರ್ಷಕ ?
AMFI- Crisil Factbook 2026ರ ಇತ್ತೀಚಿನ ವರದಿಯ ಪ್ರಕಾರ, ರಿಟೇಲ್ ಹೂಡಿಕೆದಾರರ ಒಟ್ಟು ಪ್ಯಾಸಿವ್ ಅಸೆಟ್ಸ್ (AUM) ಪೈಕಿ ಇಂಡೆಕ್ಸ್ ಫಂಡ್‌ಗಳ (Index Funds) ಪಾಲು ಕೇವಲ ಶೇ. 11.5ರಿಂದ ಪ್ರಚಂಡ ಶೇ. 55ಕ್ಕೆ ಜಿಗಿದಿದೆ. ಅಂದರೆ, ಐದು ವರ್ಷಗಳ ಹಿಂದೆ ಪ್ರತಿ 100 ರೂಪಾಯಿಗಳಲ್ಲಿ ಕೇವಲ 12 ರೂ. ಇದ್ದ ಇಂಡೆಕ್ಸ್ -ಫಂಡ್ ಹೂಡಿಕೆ, ಇಂದು 55 ರೂ.ಗಳಿಗೆ ಏರಿದೆ. ಮ್ಯೂಚುವಲ್ ಫಂಡ್ ಹೂಡಿಕೆದಾರರು ಸಾಂಪ್ರದಾಯಿಕ ಸಕ್ರಿಯ ಹೂಡಿಕೆಯಿಂದ ರೂಲ್-ಬೇ ಕಡೆಗೆ ಒಲವು ತೋರಿಸು ತ್ತಿರುವುದನ್ನು ಇದು ಬಿಂಬಿಸಿದೆ. ಹಾಗಾದರೆ ಮಾರುಕಟ್ಟೆಯನ್ನು ಮೀರಿಸಿ ಬೆಳೆಯಲು ಹರಸಾಹಸ ಪಡುವ ಆಕ್ಟಿವ್ ಫಂಡ್ ಮ್ಯಾನೇಜರ್‌ಗಳ ಮೇಲಿನ ನಂಬಿಕೆ ಸ್ವಲ್ಪ ಸಡಿಲಗೊಳ್ಳುತ್ತಿದೆಯೇ? ಬಹುಶಃ ಹೌದು ಎನ್ನುತ್ತದೆ ಈ ವರದಿ.
ಹೂಡಿಕೆದಾರರು ಈಗ ಜಟಿಲವಾದ ರಿಸರ್ಚ್‌ಗಳು ಮತ್ತು ಫಂಡ್ ಮ್ಯಾನೇಜರ್‌ಗಳ ವೈಯಕ್ತಿಕ ನಿರ್ಧಾರ ಗಳ ಬದಲು, ಮಾರುಕಟ್ಟೆಯ ಸೂಚ್ಯಂಕದ (Index) ನಡವಳಿಕೆಯನ್ನು ನೇರವಾಗಿ ಅನುಸರಿಸುವ ಸರಳ, ಪಾರದರ್ಶಕ ಮತ್ತು ಕಡಿಮೆ ವೆಚ್ಚದ ಮಾರ್ಗವನ್ನು ಆರಿಸಿಕೊಳ್ಳುತ್ತಿರು ವುದು ಗಮನಾರ್ಹ ಎನ್ನುತ್ತಿದೆ ಈ ವರದಿ. ಪ್ಯಾಸಿವ್ ಫಂಡ್ (Passive Fund) ಎನ್ನುವುದು ಒಂದು ಮ್ಯೂಚುಯಲ್ ಫಂಡ್ ಅಥವಾ ಎಕ್ಸ್‌ಚೇಂಜ್ ಟ್ರೇಡೆಡ್ ಫಂಡ್ ಆಗಿದ್ದು, ಇದು ನಿರ್ದಿಷ್ಟ ಮಾರುಕಟ್ಟೆ ಸೂಚ್ಯಂಕವನ್ನು (ಉದಾಹರಣೆಗೆ ನಿಫ್ಟಿ 50 ಅಥವಾ ಸೆನ್ಸೆಕ್ಸ್) ನೇರವಾಗಿ ಅನುಸರಿಸು ತ್ತದೆ.
2021-2026ರ ಅವಧಿಯಲ್ಲಿ ಪ್ಯಾಸಿವ್ ಫಂಡ್‌ಗಳ ಒಟ್ಟು ಚಿತ್ರಣವನ್ನು ನೋಡೋಣ. 2021ರ ಮಾರ್ಚ್‌ನಲ್ಲಿ ರೂ.4.25 ಲಕ್ಷ ಕೋಟಿ ಇದ್ದ ಒಟ್ಟು ಪ್ಯಾಸಿವ್ ಫಂಡ್ ಆಸ್ತಿ, 2026ರ ಮಾರ್ಚ್ ವೇಳೆಗೆ ಬರೋಬ್ಬರಿ ರೂ.13.73 ಲಕ್ಷ ಕೋಟಿಗೆ ತಲುಪಿದೆ. (ಶೇ.34.7ರ ವಾರ್ಷಿಕ ಬೆಳವಣಿಗೆ). ಭಾರತದ ಒಟ್ಟು ಮ್ಯೂಚುವಲ್ ಫಂಡ್ ಉದ್ಯಮದಲ್ಲಿ ಪ್ಯಾಸಿವ್ ಫಂಡ್‌ಗಳ ಪಾಲು ಶೇ. 9.8ರಿಂದ ಶೇ. 18.6ಕ್ಕೆ ಏರಿದೆ.
ಇದು ಕೇವಲ ಹೂಡಿಕೆಯ ಶೈಲಿಯ ಬದಲಾವಣೆ ಮಾತ್ರವಲ್ಲ, ಬದಲಿಗೆ ಭಾರತದ ಹೂಡಿಕೆ ದಾರರು ಹೆಚ್ಚು ಪ್ರಬುದ್ಧರಾಗುತ್ತಿದ್ದಾರೆ ಎಂಬುದಕ್ಕೆ ಉದಾಹರಣೆಯಾಗಿದೆ ಎನ್ನುತ್ತಾರೆ ತಜ್ಞರು. ಕಳೆದ ಐದು ವರ್ಷಗಳ ಈ ಹಾದಿಯಲ್ಲಿ ಎಲ್ಲ ಫಂಡ್‌ಗಳೂ ಒಂದೇ ರೀತಿಯ ಬೆಳವಣಿಗೆ ಕಂಡಿಲ್ಲ. ಇಲ್ಲಿ ಕೆಲವರು ಲಾಭ ಮಾಡಿಕೊಂಡರೆ, ಇನ್ನು ಕೆಲವರು ಹಿನ್ನಡೆ ಅನುಭವಿಸಿದ್ದಾರೆ.
ರಿಟೇಲ್ ಪ್ಯಾಸಿವ್ ಹೂಡಿಕೆಯಲ್ಲಿ ಇತರೆ ಇಟಿಎಫ್ʼಗಳ ಪಾಲು ಹಿಂದೊಮ್ಮೆ ಶೇ. 83.8ರಷ್ಟಿತ್ತು. ಆದರೆ 2026ಕ್ಕೆ ಅದು ಶೇ.30ಕ್ಕೆ ಇಳಿದಿದೆ. ಈ ಖಾಲಿಯಾದ ಸಿಂಹಪಾಲನ್ನು ಇಂಡೆಕ್ಸ್ ಫಂಡ್ ಗಳು ವಹಿಸಿಕೊಂಡು ಶೇ.55ರ ಗಡಿಯನ್ನು ಮುಟ್ಟಿವೆ. ರಿಟೇಲ್ ಹೂಡಿಕೆದಾರರ ಗೋಲ್ಡ್ ಇಟಿಎಫ್ ಪಾಲು ಶೇ. 4.6ರಿಂದ ಶೇ. 14.9ಕ್ಕೆ ವೃದ್ಧಿಸಿದೆ.
ಅನಿಶ್ಚಿತ ಜಾಗತಿಕ ಆರ್ಥಿಕ ವಾತಾವರಣದಲ್ಲಿ ಸುರಕ್ಷಿತ ಹೂಡಿಕೆಯಾಗಿ ಚಿನ್ನದ ಮೇಲಿನ ಒಲವು ಹೆಚ್ಚಿರುವುದನ್ನು ಇದು ತೋರಿಸುತ್ತದೆ. ಇಂಡೆಕ್ಸ್ ಫಂಡ್ ಗಳಲ್ಲಿ ಕೇವಲ ಒಟ್ಟು ಹೂಡಿಕೆ ಮಾತ್ರ ವಲ್ಲದೆ, ಎಸ್‌ಐಪಿ ಮೂಲಕವೂ ಹೂಡಿಕೆ ಗಣನೀಯವಾಗಿ ಏರಿದ್ದು, ಕೇವಲ ಇಂಡೆಕ್ಸ್ ಫಂಡ್ ಎಸ್‌ಐಪಿ ಮೊತ್ತವೇ ರೂ. 46000 ಕೋಟಿಗಳನ್ನು ಮುಟ್ಟಿದೆ.
ಕೇವಲ ಕಾರ್ಪೊರೇಟ್ ದಿಗ್ಗಜರು ಮಾತ್ರವಲ್ಲದೆ, ವೈಯಕ್ತಿಕವಾಗಿ ಶ್ರೀಮಂತರು ಮತ್ತು ಚಿಲ್ಲರೆ ಹೂಡಿಕೆದಾರರು ಕೂಡ ಪ್ಯಾಸಿವ್ ಹೂಡಿಕೆಯ ಶಕ್ತಿಯನ್ನು ಮನಗಂಡು ಮುನ್ನುಗ್ಗುತ್ತಿದ್ದಾರೆ. ಹೂಡಿಕೆ ಲೋಕದಲ್ಲಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಎಂಬ ಸೂತ್ರಕ್ಕೆ ಈಗಿನ ಪೀಳಿಗೆ ಹೆಚ್ಚು ಮಹತ್ವ ನೀಡುತ್ತಿದೆ. ಇಂಡೆಕ್ಸ್ ಫಂಡ್‌ಗಳ ಕಡಿಮೆ ವೆಚ್ಚದ ರಚನೆ (Expense Ratio) ಮತ್ತು ದೀರ್ಘಾವಧಿಯಲ್ಲಿ ಸ್ಥಿರವಾದ ಬೆಳವಣಿಗೆಯನ್ನು ನೀಡುವ ಸಾಮರ್ಥ್ಯವು ಇವುಗಳನ್ನು ಜನ ಸಾಮಾನ್ಯರ ಮೆಚ್ಚಿನ ಆಯ್ಕೆಯನ್ನಾಗಿ ಮಾಡಿದೆ.
ಐದು ವರ್ಷಗಳ ಹಿಂದೆ ಯಾರೂ ಗಂಭೀರವಾಗಿ ಪರಿಗಣಿಸದ ಇಂಡೆಕ್ಸ್ ಫಂಡ್‌ಗಳು ಇಂದು ರಿಟೇಲ್ ಮಾರುಕಟ್ಟೆಯ ಅರ್ಧಕ್ಕಿಂತ ಹೆಚ್ಚು ಭಾಗವನ್ನು ಆವರಿಸಿಕೊಂಡಿರುವುದು ಭಾರತೀಯ ಹೂಡಿಕೆ ಸಂಸ್ಕೃತಿಯಲ್ಲಿ ಬಂದಿರುವ ಒಂದು ಸ್ವಾಗತಾರ್ಹ ಬದಲಾವಣೆಯಾಗಿದೆ. ಇಂಡೆಕ್ಸ್ ಫಂಡ್ ಎಂದರೇನು? ಅದರಲ್ಲಿ ಹೂಡಿಕೆ ಮಾಡುವುದು ಹೇಗೆ? ಸರಳವಾಗಿ ಹೇಳುವುದಾದರೆ, ಇಂಡೆಕ್ಸ್ ಫಂಡ್ ಎಂದರೆ ಮಾರುಕಟ್ಟೆಯ ಸೂಚ್ಯಂಕವನ್ನು (ಉದಾಹರಣೆಗೆ ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್‌ನ Nifty 50 ಅಥವಾ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನ Sensex ಹುಟ್ಟುಹಾಕಿರುವ ಕಂಪನಿಗಳ ಮಾದರಿಯನ್ನೇ ಸಂಪೂರ್ಣವಾಗಿ ಅನುಸರಿಸುವ ಒಂದು ಮ್ಯೂಚುವಲ್ ಫಂಡ್.
ಸಾಮಾನ್ಯ ಆಕ್ಟಿವ್ ಫಂಡ್ʼಗಳಲ್ಲಿ ಹಣವನ್ನು ಎಲ್ಲಿ ಹೂಡಿಕೆ ಮಾಡಬೇಕು ಎಂದು ನಿರ್ಧರಿಸಲು ಒಬ್ಬ ‘-ಫಂಡ್ ಮ್ಯಾನೇಜರ್’ ಇರುತ್ತಾರೆ ಮತ್ತು ಅದಕ್ಕಾಗಿ ಅವರು ಹೆಚ್ಚು ಶುಲ್ಕ ವಿಧಿಸುತ್ತಾರೆ. ಆದರೆ ಇಂಡೆಕ್ಸ್ -ಫಂಡ್‌ನಲ್ಲಿ ಯಾವುದೇ ಮ್ಯಾನೇಜರ್ ತಮ್ಮ ಸ್ವಂತ ನಿರ್ಧಾರ ತೆಗೆದುಕೊಳ್ಳುವು ದಿಲ್ಲ.
ನಿಫ್ಟಿ 50 ಸೂಚ್ಯಂಕದಲ್ಲಿ ಯಾವ್ಯಾವ ಟಾಪ್ 50 ಕಂಪನಿಗಳಿವೆಯೋ (ರಿಲಯನ್ಸ್, ಟಿಸಿಎಸ್, ಇನ್ಫೋಸಿಸ್ ಮುಂತಾದವು), ಅದೇ ಕಂಪನಿಗಳಲ್ಲಿ, ಅದೇ ಅನುಪಾತದಲ್ಲಿ ಈ ಫಂಡ್ ನಿಮ್ಮ ಹಣವನ್ನು ಹೂಡಿಕೆ ಮಾಡುತ್ತದೆ. ಇಲ್ಲಿ ಮ್ಯಾನೇಜರ್ ಸ್ಟಾಕ್ ಆಯ್ಕೆ ಮಾಡಲು ಹೆಚ್ಚು ತಲೆಕೆಡಿಸಿ ಕೊಳ್ಳದ ಕಾರಣ, ಇದರ ನಿರ್ವಹಣಾ ವೆಚ್ಚ ಬಹಳ ಕಡಿಮೆ ಇರುತ್ತದೆ.
ಹೀಗಾಗಿ ನಿಮ್ಮ ಹಣದ ಉಳಿತಾಯವಾಗುತ್ತದೆ. ಮಾರುಕಟ್ಟೆ ಎಲ್ಲಿಗೆ ಹೋಗುತ್ತದೋ ನಿಮ್ಮ ಹೂಡಿಕೆಯೂ ಅಲ್ಲಿಗೆ ಹೋಗುತ್ತದೆ. ಇಲ್ಲಿ ಯಾವುದೇ ಗೌಪ್ಯ ರಿಸ್ಕ್ ಇರುವುದಿಲ್ಲ. ಜನಸಾಮಾನ್ಯರು ಇಂಡೆಕ್ಸ್ ಫಂಡ್‌ನಲ್ಲಿ ಹೂಡಿಕೆ ಮಾಡಬಹುದೇ? ಖಂಡಿತವಾಗಿಯೂ ಹೂಡಿಕೆ ಮಾಡಬಹುದು. ಬದಲಿಗೆ, ಸ್ಟಾಕ್ ಮಾರ್ಕೆಟ್ ಬಗ್ಗೆ ಹೆಚ್ಚಿನ ಜ್ಞಾನವಿಲ್ಲದ, ದಿನನಿತ್ಯದ ಕೆಲಸದಲ್ಲಿ ಬ್ಯುಸಿ ಇರುವ ಜನಸಾಮಾನ್ಯರಿಗೆ ಇಂಡೆಕ್ಸ್ ಫಂಡ್‌ಗಳೇ ಅತ್ಯಂತ ಸೂಕ್ತವಾದ ಹೂಡಿಕೆ ಮಾರ್ಗ. ಇದಕ್ಕೆ ದೊಡ್ಡ ಮೊತ್ತದ ಹೂಡಿಕೆಯ ಅವಶ್ಯಕತೆಯೂ ಇಲ್ಲ.
ಕೇವಲ ರೂ. 100ರಿಂದ ರೂ. 500ರಷ್ಟು ಅತ್ಯಂತ ಕಡಿಮೆ ಮೊತ್ತದಲ್ಲೂ ನೀವು ‘ಎಸ್‌ಐಪಿ’ (SIP- Systematic Investment Plan) ಮೂಲಕ ಹೂಡಿಕೆ ಆರಂಭಿಸಬಹುದು. ದೀರ್ಘಾವಧಿಯಲ್ಲಿ (ಉದಾಹರಣೆಗೆ 5 ರಿಂದ 10 ವರ್ಷಗಳು) ಸ್ಥಿರವಾಗಿ ಹೂಡಿಕೆ ಮಾಡುತ್ತಾ ಹೋದರೆ, ಇದು ಮಾರುಕಟ್ಟೆಯ ಸರಾಸರಿ ಬೆಳವಣಿಗೆಗೆ ತಕ್ಕಂತೆ ಉತ್ತಮ ಸಂಪತ್ತು ಸೃಷ್ಟಿಸಲು ನೆರವಾಗುತ್ತದೆ.
ಹಾಗಾದರೆ ಇಂಡೆಕ್ಸ್ ಫಂಡ್ʼಗಳಲ್ಲಿ ಹೂಡಿಕೆ ಮಾಡುವುದು ಹೇಗೆ? ಇವುಗಳಲ್ಲಿ ಹೂಡಿಕೆ ಮಾಡುವ ಪ್ರಕ್ರಿಯೆ ಈಗ ತಂತ್ರಜ್ಞಾನದ ಕಾರಣದಿಂದ ಬಹಳ ಸುಲಭವಾಗಿದೆ. ಮ್ಯೂಚುವಲ್ ಫಂಡ್ ಹೂಡಿಕೆ ಆಪ್‌ಗಳಾದ ಗ್ರೋ, ಜೆರೋಧಾ ಅಥವಾ ನೇರವಾಗಿ ಮ್ಯೂಚುವಲ್ ಫಂಡ್ ಕಂಪನಿಯ ಅಧಿಕೃತ ವೆಬ್‌ಸೈಟ್ ಬಳಸಿ ಹೂಡಿಕೆ ಮಾಡಬಹುದು. ನಿಮ್ಮ ಪಾನ್ ಕಾರ್ಡ್, ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ವಿವರಗಳನ್ನು ನೀಡಿ ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
ಇಂಡೆಕ್ಸ್ ಫಂಡ್ ವಿಭಾಗಕ್ಕೆ ಭೇಟಿ ನೀಡಿ, ನಿಮಗೆ ಇಷ್ಟವಾದ ಮತ್ತು ಉತ್ತಮ ರೇಟಿಂಗ್ ಇರುವ ನಿಫ್ಟಿ 50 ಅಥವಾ ಸೆನ್ಸೆಕ್ಸ್ ಇಂಡೆಕ್ಸ್ ಫಂಡ್ ಆಯ್ಕೆ ಮಾಡಿ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಒಟ್ಟು ಹಣವನ್ನು ಒಮ್ಮೆಗೇ ಅಥವಾ ಪ್ರತಿ ತಿಂಗಳು ನಿರ್ದಿಷ್ಟ ಮೊತ್ತವನ್ನು ಎಸ್ ಐಪಿ ಮೂಲಕ ಆಟೋ-ಡೆಬಿಟ್ ಮುಖಾಂತರ ಹೂಡಿಕೆ ಮಾಡಬಹುದು. ಭಾರತದಲ್ಲಿ ಜನಪ್ರಿಯವಾಗಿರುವ ಪ್ರಮುಖ ಇಂಡೆಕ್ಸ್ ಫಂಡ್ʼಗಳನ್ನು ನೋಡೋಣ.
ಯುಟಿಐ ನಿಫ್ಟಿ 50 ಇಂಡೆಕ್ಸ್ ಫಂಡ್: ಭಾರತದ ಅತ್ಯಂತ ಹಳೆಯ ಮತ್ತು ಹೆಚ್ಚು ನಂಬಿಕಾರ್ಹ ನಿಫ್ಟಿ 50 ಇಂಡೆಕ್ಸ್ ಫಂಡ್ ಗಳಲ್ಲಿ ಇದು ಮುಂಚೂಣಿಯಲ್ಲಿದೆ.
ಎಚ್‌ಡಿಎಫ್ʼಸಿ ಫಂಡ್- ನಿಫ್ಟಿ 50 ಪ್ಲಾನ್: ಕಡಿಮೆ ವೆಚ್ಚದ ಅನುಪಾತ ಮತ್ತು ಅತ್ಯುತ್ತಮ ನಿರ್ವಹಣೆಗೆ ಹೆಸರುವಾಸಿಯಾಗಿದೆ.
ನಿಪ್ಪಾನ್ ಇಂಡೆಕ್ಸ್ ಫಂಡ್ - ನಿಫ್ಟಿ 50 ಪ್ಲಾನ್: ಚಿಲ್ಲರೆ ಹೂಡಿಕೆದಾರರ ನಡುವೆ ವ್ಯಾಪಕವಾಗಿ ಬಳಕೆಯಲ್ಲಿರುವ ಮತ್ತೊಂದು ಜನಪ್ರಿಯ ಫಂಡ್.
ಮಿರಾಯ್ ಅಸೆಟ್ ನಿಫ್ಟಿ 50 ಫಂಡ್: ಸ್ಥಿರವಾದ ಮಾರುಕಟ್ಟೆ ಆದಾಯದಿಂದ ಹೂಡಿಕೆದಾರರ ಗಮನ ಸೆಳೆದಿರುವ ಆಧುನಿಕ ಫಂಡ್‌ಗಳಲ್ಲಿ ಒಂದಾಗಿದೆ. ಹೀಗಿದ್ದರೂ, ಮಾರುಕಟ್ಟೆಯಲ್ಲಿನ ಹೂಡಿಕೆಗಳು ಆರ್ಥಿಕ ರಿಗೆ ಒಳಪಟ್ಟಿರುತ್ತವೆ. ಹೂಡಿಕೆ ಮಾಡುವ ಮುನ್ನ ನಿಮ್ಮ ಹಣಕಾಸಿನ ಗುರಿಗಳನ್ನು ಪರಿಗಣಿಸಿ ಅಥವಾ ಅಧಿಕೃತ ಸಲಹೆಗಾರರ ಸಲಹೆ ಪಡೆಯಿರಿ.
ಒಟ್ಟಾರೆಯಾಗಿ ಹೇಳುವುದಿದ್ದರೆ, ಜಟಿಲ ಲೆಕ್ಕಾಚಾರಗಳು ಮತ್ತು ಫಂಡ್‌ಗಳ ಆಯ್ಕೆಯ ಗೊಂದಲ ವಿಲ್ಲದೆ, ದೀರ್ಘಾ ವಧಿಯಲ್ಲಿ ಸುರಕ್ಷಿತವಾಗಿ ಮತ್ತು ಸ್ಥಿರವಾಗಿ ಸಂಪತ್ತು ಗಳಿಸಲು ಬಯಸುವವರಿಗೆ ಇಂಡೆಕ್ಸ್ ಫಂಡ್ʼಗಳು ಆಯ್ಕೆಯಾಗಬಹುದು.