ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Suresh Hakkimani Column: ಬೆಳಕು ಚೆಲ್ಲಿ ಮರೆಯಾದ ಶ್ರೇಷ್ಠ ಚೇತನ

ಮಾನವ ಜನ್ಮದ ಸಾರ್ಥಕತೆ ಇರುವುದು ಕೇವಲ ನಮಗಾಗಿ ನಾವು ಬಾಳುವುದರಲ್ಲಲ್ಲ, ಬದಲಿಗೆ ನಮ್ಮ ಸುತ್ತಲಿನ ನೊಂದ ಜೀವಿಗಳ ಕಣ್ಣೀರು ಒರೆಸಿ, ಅವರ ಬದುಕಿಗೆ ಬೆಳಕಾಗುವುದರಲ್ಲಿ. ಅಂತಹ ನಿಃಸ್ವಾರ್ಥ ಹಾಗೂ ಸಾರ್ಥಕ ಜೀವನವನ್ನು ನಡೆಸಿ, ಸಮಾಜದ ಪ್ರತಿಯೊಂದು ಸ್ತರದಲ್ಲೂ ಅಳಿಸಲಾಗದ ಪ್ರೀತಿಯ ಅನುಬಂಧವನ್ನು ಬೆಳೆಸಿ ಅಗಲಿದ ಮಹಾನ್ ಚೇತನವೇ ದಿವಂಗತ ಉಮೇಶ ಭಟ್ ಅವರು.

ಪುಣ್ಯಸ್ಮರಣೆ

ಸುರೇಶ ಹಕ್ಕಿಮನೆ

ಅಂಕೋಲಾದ ಶಾಸಕರಾಗಿದ್ದ, ಸಾರ್ವಜನಿಕ ಪ್ರತಿನಿಧಿಗೆ ಇರಬೇಕಾದ ಸೌಜನ್ಯ ಮತ್ತು ಸಂಸ್ಕಾರದ ಮಾದರಿಯಂತಿದ್ದ ಉಮೇಶ ಭಟ್ ಅವರ ನೆನಪಿನ ದಿನ ಇಂದು (ಆ.13). ಅವರ ಸ್ಮರಣೆಗೆ ಈ ಲೇಖನ.

ಮಾನವ ಜನ್ಮದ ಸಾರ್ಥಕತೆ ಇರುವುದು ಕೇವಲ ನಮಗಾಗಿ ನಾವು ಬಾಳುವುದರಲ್ಲಲ್ಲ, ಬದಲಿಗೆ ನಮ್ಮ ಸುತ್ತಲಿನ ನೊಂದ ಜೀವಿಗಳ ಕಣ್ಣೀರು ಒರೆಸಿ, ಅವರ ಬದುಕಿಗೆ ಬೆಳಕಾಗು ವುದರಲ್ಲಿ. ಅಂತಹ ನಿಃಸ್ವಾರ್ಥ ಹಾಗೂ ಸಾರ್ಥಕ ಜೀವನವನ್ನು ನಡೆಸಿ, ಸಮಾಜದ ಪ್ರತಿಯೊಂದು ಸ್ತರದಲ್ಲೂ ಅಳಿಸಲಾಗದ ಪ್ರೀತಿಯ ಅನುಬಂಧವನ್ನು ಬೆಳೆಸಿ ಅಗಲಿದ ಮಹಾನ್ ಚೇತನವೇ ದಿವಂಗತ ಉಮೇಶ ಭಟ್ ಅವರು. ಉತ್ತರ ಕನ್ನಡ ಜಿಲ್ಲೆಯ ರಾಜಕೀಯ, ಶೈಕ್ಷಣಿಕ ಹಾಗೂ ಪತ್ರಿಕೋದ್ಯಮ ರಂಗಗಳಲ್ಲಿ ಪ್ರಾಮಾಣಿಕತೆ, ನಿಷ್ಕಲ್ಮಷ ಪ್ರೀತಿ ಮತ್ತು ಉದಾರತೆಯಿಂದಲೇ ಜನರ ಹೃದಯ ಸಾಮ್ರಾಜ್ಯವನ್ನು ಗೆದ್ದ ಅಪರೂಪದ ನಾಯಕ ಅವರು.

ಮುಖದಲ್ಲಿ ಸದಾ ಮಿನುಗುತ್ತಿದ್ದ ಅಪ್ಯಾಯಮಾನವಾದ ನಗು, ಅಂತರಂಗದ ಅತಿಯಾದ ಕಾಳಜಿಯನ್ನು ತೆರೆದಿಡುತ್ತಿದ್ದ ನೇರ ನುಡಿ ಹಾಗೂ ಪ್ರತಿಯೊಬ್ಬರ ಕಷ್ಟಕ್ಕೂ ತಕ್ಷಣವೇ ಮಿಡಿಯುತ್ತಿದ್ದ ಅವರ ಮೃದು ಅಂತರಂಗ ಪ್ರತಿಯೊಬ್ಬರಿಗೂ ಅವರನ್ನು ಅತ್ಯಂತ ಆಪ್ತರನ್ನಾಗಿಸಿತ್ತು. ಅಧಿಕಾರ ಹಾಗೂ ಪ್ರಚಾರದ ಹಂಬಲವಿಲ್ಲದೆ, ಆಡಂಬರವಿಲ್ಲದ ಸರಳತೆಯನ್ನೇ ತಮ್ಮ ಉಸಿರಾಗಿಸಿಕೊಂಡಿದ್ದ ಅವರು, ಇಂದಿನ ಕಲ್ಮಷ ರಾಜಕೀಯ ವಾತಾವರಣದಲ್ಲಿ ಸಮಾಜ ಕಂಡ ಅಪರೂಪದ ‘ನಿಗರ್ವಿ ಹಾಗೂ ಸಜ್ಜನ ರಾಜಕಾರಣಿ’.

ಮಾಜಿ ಮುಖ್ಯಮಂತ್ರಿ ಗುಂಡೂರಾವ್‌ರವರ ಸೂಚನೆಯ ಮೇರೆಗೆ 1989ರ ವಿಧಾನಸಭಾ ಚುನಾವಣೆಯಲ್ಲಿ ಅಂಕೋಲಾ ಕ್ಷೇತ್ರದಿಂದ ಜನತಾ ಪಕ್ಷದ ಆರ್.ಜಿ. ಭಟ್ ಹಾಗೂ ಬಿಜೆಪಿಯ ಜಿ.ಎಸ್. ಹೆಗಡೆ ಕಡೇಕೋಡಿ ಅವರ ವಿರುದ್ಧ ಗೆಲುವು ಸಾಧಿಸಿ (1989-1994) ಶಾಸಕರಾಗಿ ತಮ್ಮ ಕಾರ್ಯದಕ್ಷತೆಯನ್ನು ಮೆರೆಯುತ್ತಾರೆ.

ಶಾಸಕರಾಗಿ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕರಾಗಿ ಉಮೇಶ ಭಟ್ಟರು ತೋರಿದ ಸೌಜನ್ಯ ಮತ್ತು ಸಂಸ್ಕಾರ ಪ್ರತಿಯೊಬ್ಬ ಸಾರ್ವಜನಿಕ ಪ್ರತಿನಿಧಿಗೂ ಮಾದರಿಯಾದುದು. ರಾಜಕೀಯ ಎಂದರೆ ಕೇವಲ ಅಽಕಾರ ಹಿಡಿಯುವುದಲ್ಲ, ಅದು ಜನಸೇವೆಯ ಪವಿತ್ರ ಮಾಧ್ಯಮ ಎಂದು ನಂಬಿ ಬಾಳಿದವರು. ಹಿರಿಯ ನಾಯಕರಾದ ದಿವಂಗತ ಕೆ.ಎಚ್. ಪಾಟೀಲರನ್ನು ಅತ್ಯಂತ ಹೃದಯಪೂರ್ವಕವಾಗಿ ‘ಕಾಕಾ’ ಎಂದು ಕರೆಯುತ್ತಿದ್ದ ಅವರ ಆಪ್ತ ಸೌಹಾರ್ದತೆಯು, ಅವರಲ್ಲಿದ್ದ ನಿಸ್ಪೃಹ ಆತ್ಮೀಯತೆಗೆ ಕನ್ನಡಿ ಹಿಡಿದಂತಿತ್ತು.

ಇದನ್ನೂ ಓದಿ: Vijay Darda Column: ಜೆನ್ ಝೀಯಿಂದ ಗಡಿ ಜಗಳದವರೆಗೆ: ಮಾತುಕತೆಯೇ ಪರಿಹಾರ!

ಪಕ್ಷ, ಮತ, ಭೇದ-ಭಾವಗಳ ಎಲ್ಲೆ ಮೀರಿ ಎಲ್ಲರನ್ನೂ ಒಪ್ಪಿಕೊಳ್ಳುತ್ತಿದ್ದ ಅವರ ವಿಶಾಲ ಮನೋಭಾವ ಅಪಾರವಾದದ್ದು. ಅಂಕೋಲಾ ಕ್ಷೇತ್ರದ ಶಾಸಕರಾಗಿ ಜನರಿಗಾಗಿ ಹಗಲಿರುಳು ಶ್ರಮಿಸಿದ ಅವರು, ತಮ್ಮ ಅತಿಯಾದ ಉದಾರತೆಯಿಂದ ಅನಗತ್ಯವಾಗಿ ಹಲವರಿಗೆ ಸಹಾಯ ಹಸ್ತ ಚಾಚಿದರು. ಕೆಲವರು ಅವರ ಒಳ್ಳೆಯತನ ಹಾಗೂ ನಂಬಿಕೆ ಯನ್ನು ದುರುಪಯೋಗಪಡಿಸಿಕೊಂಡು ವಂಚಿಸಿದರೂ, ಅವರ ಮೇಲೆ ಕಿಂಚಿತ್ತೂ ಕಹಿ ಉಳಿಸಿಕೊಳ್ಳದೆ ದೊಡ್ಡ ಮನಸ್ಸಿನಿಂದ ಕ್ಷಮಿಸಿದ ದಿವ್ಯ ಗುಣ ಅವರದ್ದಾಗಿತ್ತು. ಅತ್ಯುನ್ನತ ರಾಜಕೀಯ ಸ್ಥಾನಕ್ಕೇರುವ ಎಲ್ಲ ಅರ್ಹತೆ ಹಾಗೂ ಪ್ರಭಾವಗಳಿದ್ದರೂ, ಅವರ ಮೃದು ಹೃದಯ, ಸರಳತೆ ಮತ್ತು ಕೆಲವೊಮ್ಮೆ ವ್ಯಕ್ತವಾಗುತ್ತಿದ್ದ ಅಲಕ್ಷ್ಯ ವೇ ಅವರ ವೈಯಕ್ತಿಕ ಬೆಳವಣಿಗೆಗೆ ಅಡ್ಡಿಯಾಯಿತೇನೋ ಎನ್ನುವಷ್ಟರ ಮಟ್ಟಿಗೆ ಸಜ್ಜನಿಕೆ ಅವರಲ್ಲಿ ಮನೆಮಾಡಿತ್ತು.

ಉಮೇಶ ಭಟ್ಟರು ಕೇವಲ ಒಬ್ಬ ವ್ಯಕ್ತಿಯಲ್ಲ; ಅವರೊಂದು ವಿಶಾಲ ಸಮಾಜಮುಖಿ ಸಿದ್ಧಾಂತ. ಭೌತಿಕವಾಗಿ ಅವರು ಇಂದು ನಮ್ಮೊಂದಿಗಿಲ್ಲದಿರಬಹುದು, ಆದರೆ ಅವರು ಉರಿಸಿದ ಶಿಕ್ಷಣದ ದೀಪದಲ್ಲಿ, ಕಟ್ಟಿಬೆಳೆಸಿದ ‘ಲೋಕಧ್ವನಿ’ಯ ಧ್ವನಿಯಲ್ಲಿ ಹಾಗೂ ಅವರು ಹಂಚಿದ ಅಪರಿಮಿತ ಪ್ರೀತಿಯಲ್ಲಿ ಅವರು ಸದಾ ಜೀವಂತ. ಅವರನ್ನು ವಿನೋದಕ್ಕಾಗಿ ಕಿಚಾಯಿಸಿದರೆ ಅಷ್ಟೇ ತಮಾಷೆಯ ಪ್ರತ್ಯುತ್ತರ ಅವರಿಂದ ಬರುತ್ತಿತ್ತು. ಒಮ್ಮೆ ಶ್ರೀಮತಿ ಮಾರ್ಗರೇಟ್ ಆಳ್ವ ಅವರ ಚುನಾವಣೆಯ ಸಂದರ್ಭ ‘ಭಟ್ಟರೆ ನಿಮ್ಮ ಕ್ರೇಜ್ ಮುಗದೋಯ್ತು’ ಎಂದು ನಾನು ಕಾಲೆಳೆದಾಗ ಅದಕ್ಕೆ ಅವರು ‘ಬಾ ನಾಳೆ ನನ್ ಹವಾ ತೋರಿಸ್ತೆ’ ಹೇಳಿದವರೇ ಕುದುರ್ಗೋಡು ಗ್ರಾಮಕ್ಕೆ ಕರೆದುಕೊಂಡು ಹೋಗ್ತಾರೆ. ಅಲ್ಲಿ ಜನ ಮುತ್ತುತ್ತಾರೆ.

‘ಓ ಕೆರಿಯ, ಟೀಕ್ರು ಎಲ್ಲ ಆರಾಮಿದ್ದರನಾ?’ ಆತ್ಮೀಯವಾಗಿ ಕೇಳುತ್ತಾರೆ. ತಕ್ಷಣದಲ್ಲಿ ನಾನು ‘ನಿಮಗೆ ಇವರ ಹೆಸರು ಎಲ್ಲ ಗೊತ್ತಿದ್ದನ್ರಾ’ ಎಂದು ಕೇಳಲಾಗಿ ಅದಕ್ಕೆ ಅವರ ಉತ್ತರ ಸ್ವಾರಸ್ಯಕವಾಗಿತ್ತು. ‘ಇಲ್ಲಿ ಈ ಹೆಸರೇ ಜಾಸ್ತಿ, ಸುರೇಶ, ಪ್ರಕಾಶ ಹೇಳಿ ಹೆಸರು ಇಡುದು ಕಡಿಮೆ. ಯಾರಾದ್ರೂ ಒಬ್ಬ ಹೂಗುಡ್ತಾ, ನೋಡ್ತಾ ಇರು’ ಎನ್ನುತ್ತಿದ್ದಂತೆ ಗುಂಪಿನಿಂದ ‘ಹೌದ್ರಾ’ ಎಂಬ ಉತ್ತರ. ಭಟ್ಟರು ಮಾರ್ಗರೇಟ್ ಆಳ್ವ ಅವರಿಗೆ ಮತಯಾಚಿಸುತ್ತಾರೆ. ಆಗ ಜನ ಮುತ್ತಿಕೊಂಡು ‘ನಾವು ಕಳೆದ ಚುನಾವಣೆಯಲ್ಲಿ ಯಾರದ್ದೋ ಮಾತು ಕೇಳಿ ನಿಮಗ್ ವೋಟ್ ಹಾಕದೆ ತಪ್ ಮಾಡ್ಬಿಟ್ಟೊ ಭಟ್ಟರೆ, ಈಗ ನೀವೇ ನಿಲ್ಬೇಕಾಗಿತ್ತು. ನಾವೆಲ್ಲ ನಿಮ್ಮ ಬಿಟ್ಟು ಕೊಡು ಮಾತೇ ಇಲ್ಲಾಗಿತ್ತು’ ಎಂದು ಹೇಳಿದಾಗ ಅವರು ನನ್ನತ್ತ ಓರೆಗಣ್ಣಲ್ಲಿ ನೋಡಿ ‘ಹೇಗೆ ಕಂಡ್ಯ ನನ್ನ ಹವಾ’ ಎಂಬ ಮುಖಭಾವ ವ್ಯಕ್ತಪಡಿಸಿದ್ದು ಎಂದೂ ಮರೆಯದ ಪ್ರಸಂಗ.

Screenshot_3 ok

ರಾಜ್ಯಮಟ್ಟದ ಪ್ರಭಾವಿ ನಾಯಕರಾಗಿದ್ದರೂ, ಮುಂಬೈನ ತಾಜ್ ಮಹಲ್ ಹೋಟೆಲ್‌ಗೆ ಹೋದಾಗಲೂ ಬೆಳಗಿನ ತಿಂಡಿಗೆ ‘ಅವಲಕ್ಕಿ’ ಆರ್ಡರ್ ಮಾಡಿ ತಿನ್ನುತ್ತಿದ್ದ ಅವರ ಸರಳತೆ ದಂಗುಬಡಿಸುವಂಥದ್ದು. ಅಂದಿನ ಮಹಾರಾಷ್ಟ್ರ ರಾಜ್ಯಪಾಲರಾಗಿದ್ದ ಎಸ್.ಎಮ್. ಕೃಷ್ಣ ಅವರೊಂದಿಗೆ ಅತ್ಯಂತ ನಿಕಟ ಬಾಂಧವ್ಯ ಹೊಂದಿದ್ದ ಭಟ್ಟರು ರಾಜ್ಯಪಾಲರ ನಿವಾಸಕ್ಕೆ ಮುಕ್ತ ಪ್ರವೇಶ ಹೊಂದಿದ್ದರು. ಆದರೂ ಆ ಪ್ರಭಾವವನ್ನು ಎಂದಿಗೂ ಸ್ವಪ್ರತಿಷ್ಠೆಗೆ ಬಳಸದೆ, ಉತ್ತರ ಕನ್ನಡ ಜಿಲ್ಲೆಯ ಉದ್ಯಮಿಗಳನ್ನು ರಾಜ್ಯಪಾಲರಿಗೆ ಭೇಟಿ ಮಾಡಿಸಿ ಜಿಲ್ಲೆಯ ಹಿತ ಕಾಯಲು ಬಳಸಿಕೊಂಡರು. ಇವರ ಕಾರ್ಯದಕ್ಷತೆಯನ್ನು ಸೂಕ್ಷ್ಮವಾಗಿ ಗಮನಿಸಿದ್ದ ಎಸ್ ಎಂ ಕೃಷ್ಣರವರು ಮುಖ್ಯಮಂತ್ರಿಯಾಗಿದ್ದಾಗ ತಮ್ಮ ಅಧೀನದಲ್ಲಿದ್ದ ಬಿಎಂಆರ್‌ಸಿಎಲ್ (ಬೆಂಗಳೂರು ಮೆಟ್ರೋ) ಅಧ್ಯಕ್ಷ ಪಟ್ಟವನ್ನೇ ಇವರಿಗೆ ಕಟ್ಟಿದ್ದರು. ಅಲ್ಲಿಯೂ ಕೃಷ್ಣ ಅವರಿಟ್ಟ ನಂಬಿಕೆಯನ್ನು ಹುಸಿಗೊಳಿಸದೆ ಕಾರ್ಯದಕ್ಷತೆಯನ್ನು ಮೆರೆದರು.

ಅಽಕಾರಿಗಳು ಅಥವಾ ರಾಜಕಾರಣಿಗಳಿಂದ ಆಗದಂತಹ ಎಷ್ಟೋ ಕಷ್ಟದ ಕೆಲಸಗಳನ್ನು ಸಾರ್ವಜನಿಕರಿಗಾಗಿ ಮಾಡಿಸಿಕೊಟ್ಟ ಭಟ್ಟರು, ಕೆಲಸ ಜನರದ್ದಾಗಬೇಕು, ನನ್ನ ಹೆಸರಲ್ಲ ಎಂಬ ಸೇವಾ ನಿಲುವನ್ನು ಹೊಂದಿದ್ದರು. ಶಿರಸಿಯ ವಿನಾಯಕ ಕಾಲೋನಿಯ ದೇವಸ್ಥಾನ ದ ನಿರ್ಮಾಣದ ಸಮಯದಲ್ಲಿ ಮೂರ್ತಿಯ ಸಂಪೂರ್ಣ ವೆಚ್ಚವನ್ನು ತಾವೇ ಭರಿಸಿ ತಮ್ಮ ಉದಾರತೆಯನ್ನು ಮೆರೆದಿದ್ದರು.

ಇದರ ಜೊತೆಗೆ ಪ್ರಕೃತಿಯನ್ನು ಪ್ರೀತಿಸುತ್ತಿದ್ದ ಅವರು, ಯಲ್ಲಾಪುರದಲ್ಲಿ ಕೃಷಿ ತೋಟಗಳನ್ನು ಅಭಿವೃದ್ಧಿ ಪಡಿಸಿ, ಹೊಸ ತಂತ್ರಜ್ಞಾನಗಳ ಮೂಲಕ ಹೂವು ಹಾಗೂ ಸುವರ್ಣ ಗೆಡ್ಡೆ ಬೆಳೆಯುವ ವೈವಿಧ್ಯಮಯ ಪ್ರಯೋಗಗಳನ್ನು ಕೈಗೊಂಡಿದ್ದರು. ಕೃಷಿ ಭೂಮಿಯನ್ನು ಪಾಳು ಬಿಡುವುದು ಅವರಿಗೆ ಎಂದೂ ಆಗುತ್ತಿರಲಿಲ್ಲ.

ಒಮ್ಮೆ ಶಿರಸಿ -ಯಲ್ಲಾಪುರ ರಸ್ತೆಯಲ್ಲಿ ಹಾದು ಹೋಗುತ್ತಿರುವ ಸಂದರ್ಭದಲ್ಲಿ ಅವರ ಆತ್ಮೀಯರೊಬ್ಬರ ಗದ್ದೆ ಪಾಳು ಬಿದ್ದಿರುವುದನ್ನು ಗಮನಿದ ಭಟ್ಟರು ಅವರನ್ನು ಕರೆಸಿ ವಿಚಾರಿಸುತ್ತಾರೆ. ಹೊಲದ ಮಾಲೀಕ ತನ್ನ ಸಹೋದರರರೊಂದಿಗೆ ಮನಸ್ತಾಪವೇ ಹೊಲವನ್ನು ಪಾಳು ಬಿಡಲು ಕಾರಣ ಎಂದಾಗ ಭಟ್ಟರು ಕೋಪದಿಂದ ನಿಮ್ಮ ಭಿನ್ನಾಭಿ ಪ್ರಾಯ ಬದಿಗಿಟ್ಟು ಈ ಬಂಗಾರದ ಭೂಮಿಯನ್ನು ಸಾಗುವಳಿ ಮಾಡಿ. ನಿಮ್ಮ ಮನಸ್ತಾಪ ಬಗೆಹರಿಸುವ ಎಂದು ಸಂತೈಸುತ್ತಾರೆ. ಇದೆಲ್ಲ ಅವರಿಗೆ ಕೃಷಿಹಾಗೂ ಜನರ ಮೇಲಿರುವ ಪ್ರೀತಿಗೆ ಸಾಕ್ಷಿ.

ಲೋಕಧ್ವನಿ- ನಿಃಸ್ವಾರ್ಥ ಯತ್ನ

ಪತ್ರಿಕಾರಂಗವು ಕೇವಲ ವಾಣಿಜ್ಯ ಕ್ಷೇತ್ರವಾಗದೆ, ನೊಂದವರ ಮತ್ತು ತುಳಿತಕ್ಕೊಳಗಾದ ವರ ಸತ್ಯಸಂಧ ದನಿಯಾಗಬೇಕು ಎನ್ನುವುದು ಸಂಸ್ಥಾಪಕರಾದ ಗೋಪಾಲಕೃಷ್ಣ ಅನವಟ್ಟಿ ಅವರ ಪವಿತ್ರ ಕನಸಾಗಿತ್ತು. ಈ ಕನಸಿಗೆ ಜೀವ ತುಂಬಲು ಸಂಸ್ಥಾಪಕ ಟ್ರಸ್ಟಿ ಯಾಗಿ, ಮುಂದೆ ಪತ್ರಿಕೆಯ ಜವಾಬ್ದಾರಿಯನ್ನು ವಹಿಸಿಕೊಂಡು ಮುಂಚೂಣಿಯಲ್ಲಿ ನಿಂತವರು ಉಮೇಶ ಭಟ್ಟರು.

ನನಗೆ ಪತ್ರಿಕೋದ್ಯಮದ ಗಂಧಗಾಳಿಯೂ ತಿಳಿದಿಲ್ಲ ಎಂದು ಅತ್ಯಂತ ಅಹಂರಹಿತವಾಗಿ ವಿನಮ್ರತೆ ಯಿಂದ ಹೇಳಿಕೊಳ್ಳುತ್ತಿದ್ದ ಭಟ್ಟರು, ತಮ್ಮ ಅಖಂಡ ಶ್ರಮ ಹಾಗೂ ಇಚ್ಛಾಶಕ್ತಿ ಯಿಂದ ಪತ್ರಿಕೆಗೆ ಹೊಸ ಚೈತನ್ಯ ತಂದಿತ್ತರು. ಅವರ ಅಪಾರ ಕೊಡುಗೆಯಿಂದಾಗಿಯೇ ‘ಲೋಕಧ್ವನಿ’ ಸ್ವಂತ ಕಟ್ಟಡ ಹಾಗೂ ಪ್ರಿಂಟಿಂಗ್ ಯಂತ್ರವನ್ನು ಹೊಂದಲು ಸಾಧ್ಯ ವಾಯಿತು. ಸಂಪಾದಕೀಯ ವಿಭಾಗದ ಸ್ವತಂತ್ರ ವಿಚಾರಗಳಿಗೆ ಪೂರ್ಣ ಸ್ವಾತಂತ್ರ್ಯ ನೀಡುವ ಮೂಲಕ ಮಾಧ್ಯಮ ಕ್ಷೇತ್ರದಲ್ಲೂ ತಮ್ಮದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದರು.

‘ವಿಶ್ವದರ್ಶನ’ ವಿದ್ಯೆಯ ಬೆಳಗು

ಉಮೇಶ ಭಟ್ಟರ ಅಂತರಂಗದ ತಾಯ್ತನ ಮತ್ತು ಮಾನವೀಯತೆಗೆ ಹಿಡಿದ ಕನ್ನಡಿ ಯೆಂದರೆ ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ. ಒಮ್ಮೆ ಬಡ ಮಹಿಳೆಯೊಬ್ಬಳು ತನ್ನ ಮಗಳಿಗೆ ಶಾಲೆಗೆ ಪ್ರವೇಶ ಸಿಗದೆ ಕಣ್ಣೀರಿಟ್ಟಾಗ, ಆ ತಾಯಿಯ ಅಶ್ರುತರ್ಪಣ ಭಟ್ಟರ ಮನಸ್ಸನ್ನು ಕರಗಿಸಿತು. ಅದೇ ಘಟನೆ ‘ವಿಶ್ವದರ್ಶನ ಶಿಕ್ಷಣ ಸಂಸ್ಥೆ’ಯ ಸ್ಥಾಪನೆಗೆ ಪ್ರೇರಣೆ ಯಾಯಿತು.

ಶೈಕ್ಷಣಿಕವಾಗಿ ಹಿಂದುಳಿದ ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಅಕ್ಷರ ದಾಸೋಹ ನೀಡಬೇಕೆಂಬ ತೀವ್ರ ತುಡಿತದಿಂದ ಇಡಗುಂದಿ ಮತ್ತು ಯಲ್ಲಾಪುರಗಳಲ್ಲಿ ಶಾಲೆಗಳನ್ನು ತೆರೆದು, ಹಳ್ಳಿಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿದರು. ತದನಂತರ ಅಂಕೋಲಾದಲ್ಲಿ ನರ್ಸಿಂಗ್ ಕಾಲೇಜು ಸ್ಥಾಪಿಸಿ ಉನ್ನತ ಶಿಕ್ಷಣದ ಹಾದಿಯನ್ನು ಸುಗಮಗೊಳಿಸಿದರು. ಆರ್ಥಿಕ ಸಂಕಷ್ಟಗಳು ಹಾಗೂ ಸವಾಲುಗಳು ಎದುರಾದರೂ ನಾವು ಪಡೆದ ಸಮಾಜಕ್ಕೆ ವಿದ್ಯೆಯ ಬೆಳಕನ್ನು ನೀಡಿ ಋಣ ತೀರಿಸಬೇಕು ಎಂಬ ಧೃಢ ನಿರ್ಧಾರದಿಂದ ಸಂಸ್ಥೆಯನ್ನು ಕಟ್ಟಿ ಬೆಳೆಸಿದರು. ಸಂಸ್ಥೆಯ ಸಂಪೂರ್ಣ ಹಣಕಾಸು ಮತ್ತು ಜವಾಬ್ದಾರಿಯನ್ನು ತಾವೇ ಹೆಗಲಿ ಗೇರಿಸಿಕೊಂಡು ನಡೆಸಿದ ಈ ಸಂಸ್ಥೆ ಇಂದು ಸಾವಿರಾರು ಕುಟುಂಬಗಳ ಪಾಲಿಗೆ ಆಶಾಕಿರಣವಾಗಿದೆ.

ನೆನಪುಗಳ ಮೆರವಣಿಗೆ

ತಮ್ಮ ಒಡನಾಡಿಗಳನ್ನು ಅತ್ಯಂತ ಪ್ರೀತಿಯಿಂದ ‘ಅಣ್ಣ’ ಎಂದು ಕರೆಯುತ್ತಾ, ಪ್ರತಿಯೊಬ್ಬರ ಸುಖ-ದುಃಖಗಳಲ್ಲಿ ಭಾಗಿಯಾಗುತ್ತಿದ್ದ ಅವರ ಧ್ವನಿ ಇಂದಿಗೂ ಕಿವಿಯಲ್ಲಿ ಮಾರ್ದನಿಸುತ್ತಿದೆ. ಅವರು ತೋರಿದ ಸನ್ಮಾರ್ಗ ಮತ್ತು ಅವರೊಂದಿಗಿನ ಸುಮಧುರ ಒಡನಾಟದ ನೆನಪುಗಳು ಕಾಲದ ಗರ್ಭದಲ್ಲಿ ಎಂದಿಗೂ ಅಳಿಸಿಹೋಗುವುದಿಲ್ಲ. ಅವರ ಏಳನೇ ಪುಣ್ಯಸ್ಮರಣೆಯ ಈ ಪವಿತ್ರ ಸಂದರ್ಭದಲ್ಲಿ, ಅಮರ ಸಾಧಕ ದಿವಂಗತ ಉಮೇಶ ಭಟ್ ಅವರ ದಿವ್ಯಾತ್ಮಕ್ಕೆ ಅಂತರಂಗದ ಶ್ರದ್ಧಾಪೂರ್ವಕ ಭಾವಪೂರ್ಣ ಪ್ರಣಾಮಗಳು.