ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Uma Mahesh Vaidya Column: ಆಸ್ಪತ್ರೆ ಶುಲ್ಕ ಪಾವತಿಗೆ ರೋಗಿ ಒತ್ತೆಯಾಳಲ್ಲ

ವೈದ್ಯ ವೃತ್ತಿ ಒಂದು ಪವಿತ್ರವಾದ ವೃತ್ತಿಯಾಗಿ ಉಳಿಯದೇ ಜನರ ಬೆವರು ಬಸಿದು ಗಳಿಸಿದ ಉಳಿತಾಯದ ಹಣವನ್ನು ಲಪಟಾಯಿಸುವ ದಂಧೆಯಾಗಿ ಬೆಳೆಯಿತು. ರೋಗಿಗಳನ್ನು ತಾಯಿಗಿಂತ ಹೆಚ್ಚಿನ ವಾತ್ಸಲ್ಯ ದಿಂದ ನೋಡಿಕೊಳ್ಳುವ ಡಾಕ್ಟರ್‌ಗಳೂ, ಮಾನವೀಯ ಗುಣದ ಆಸ್ಪತ್ರೆಗಳೂ ಬಹಳ ಸಂಖ್ಯೆಯಲ್ಲಿದ್ದಾರೆ. ಈ ಲೇಖನ ಅಂಥವರ ಕುರಿತಲ್ಲ.

ಉಪಶಮನ

ಉಮಾ ಮಹೇಶ್‌ ವೈದ್ಯ

ಜನಮನಗಳ ದನಿಯಾಗಿರುವ ‘ವಿಶ್ವವಾಣಿ’ ದಿನಪತ್ರಿಕೆಯಲ್ಲಿ 2020ರ ನವೆಂಬರ್ 3ರಂದು ‘ಬಿಲ್ ಪಾವತಿಸಿಲ್ಲವೆಂದು ರೋಗಿಯನ್ನು ಅಥವಾ ಶವವನ್ನು ಒತ್ತೆಯಾಳಾಗಿ ಇಟ್ಟುಕೊಳ್ಳುವಂತಿಲ್ಲ’ ಎಂಬ ತಲೆ ಬರಹದಡಿಯಲ್ಲಿ ವೈದ್ಯಕೀಯ ಲೋಕದಲ್ಲಿ ಕೆಲವರು ಎಸಗುವ ಕರಾಳ ಕೃತ್ಯಗಳ ಮೇಲೆ ಬೆಳಕು ಚೆಲ್ಲಿ ಸರ್ಕಾರದ ಗಮನಕ್ಕೆ ತಂದು ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿತ್ತು.

ಇಂದಿನ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಬಹಳ ದಿನಗಳ ಆಗ್ರಹವನ್ನು ಪರಿಗಣಿಸಿ, ಶವ ನೀಡದೇ ಬಿಲ್ಲಿಗೆ ಒತ್ತಾಯ ಮಾಡುವಂತಿಲ್ಲ ಎಂಬ ನಿಯಮ ಹೊರಡಿಸಲು ಉದ್ದೇಶಿಸಿದ್ದಾರೆ. ಸಚಿವರ ಹಾಗೂ ಸರ್ಕಾರದ ಈ ಕ್ರಮ ನಿಜಕ್ಕೂ ಸ್ವಾಗತಾರ್ಹ ಹಾಗೂ ಶೋಷಣೆಗೆ ಒಳಗಾಗುವ ಅಸಾಹಾಯಕ ಜನರಿಗೆ ನೆಮ್ಮದಿ ನೀಡುವಂತಹ ಹೆಜ್ಜೆ. ಅಂದು ಪ್ರಕಟಿಸಿದ ಲೇಖನದ ಸಂಗತಿಗಳು ಇಂದಿಗೂ ಪ್ರಸ್ತುತ. ಇಂದು ವೈದ್ಯ ವೃತ್ತಿ ತೀರಾ ವಾಣಿಜ್ಯೀಕರಣಗೊಂಡಿರುವುದು ನಮಗೆಲ್ಲ ಕಾಣಬರುವ ವಾಸ್ತವ ಸಂಗತಿ.

ಈ ಹಿನ್ನಲೆಯಲ್ಲಿ, ತನ್ನ ಬಳಿ ಬಂದ ರೋಗಿಯನ್ನು ಹಲವು ಡಾಕ್ಟರ್‌ಗಳು ಒಂದು ಆದಾಯದ ಮೂಲವಾಗಿ ನೋಡುತ್ತಿರುವುದು ಸಹ ಅಷ್ಟೇ ಕಟು ಸತ್ಯ. ವಾಣಿಜ್ಯೀಕರಣಗೊಂಡ ವೈದ್ಯ ವೃತ್ತಿಯು ಮತ್ತಷ್ಟು ವ್ಯಾಪಾರೀಕರಣಗೊಂಡು, ಬಹಳಷ್ಟು ಆಸ್ಪತ್ರೆಗಳು ಆದಾಯ ಹಾಗೂ ಲಾಭದ ಗುರಿಗಳನ್ನು ನಿಶ್ಚಿತಗೊಳಿಸಿಕೊಂಡು ಪದವಿ ಪಡೆದ ಡಾಕ್ಟರ್‌ಗಳನ್ನು ಸಂಬಳದ ಆಧಾರದ ಮೇಲಿನ ನೌಕರರಂತೆ ನೇಮಿಸಿಕೊಂಡು ಅವರಿಗೆ ಗಳಿಕೆಯ ಗುರಿಯನ್ನು ನಿಗದಿಪಡಿಸಿದವು.

ಇದನ್ನೂ ಓದಿ: Uma Mahesh Vaidya Column: ತನಿಖಾಧಿಕಾರಿಗಳ ಮನೋಸ್ಥೈರ್ಯ ಕುಸಿಯುತ್ತಿದೆಯೇ ?

ವೈದ್ಯ ವೃತ್ತಿ ಒಂದು ಪವಿತ್ರವಾದ ವೃತ್ತಿಯಾಗಿ ಉಳಿಯದೇ ಜನರ ಬೆವರು ಬಸಿದು ಗಳಿಸಿದ ಉಳಿತಾಯದ ಹಣವನ್ನು ಲಪಟಾಯಿಸುವ ದಂಧೆಯಾಗಿ ಬೆಳೆಯಿತು. ರೋಗಿಗಳನ್ನು ತಾಯಿಗಿಂತ ಹೆಚ್ಚಿನ ವಾತ್ಸಲ್ಯ ದಿಂದ ನೋಡಿಕೊಳ್ಳುವ ಡಾಕ್ಟರ್‌ಗಳೂ, ಮಾನವೀಯ ಗುಣದ ಆಸ್ಪತ್ರೆಗಳೂ ಬಹಳ ಸಂಖ್ಯೆಯಲ್ಲಿದ್ದಾರೆ. ಈ ಲೇಖನ ಅಂಥವರ ಕುರಿತಲ್ಲ.

ಹಲವು ಕಾರ್ಪೊರೇಟ್ ಆಸ್ಪತ್ರೆಗಳು ತಮ್ಮಲ್ಲಿ ಜಾಗತಿಕ ಮಟ್ಟದ ಶ್ರೇಷ್ಠ ಡಾಕ್ಟರುಗಳು ಸೇವೆಗಾಗಿ ಲಭ್ಯವಿದ್ದು, ರೋಗಗಳನ್ನು ಪತ್ತೆ ಮಾಡುವ ಆಧುನಿಕ ತಂತ್ರಜ್ಞಾನದ ಜೊತೆ ಪಂಚತಾರಾ ಸೌಲಭ್ಯದ ಸೌಕರ್ಯಗಳಿವೆ ಎಂದು ಪ್ರಚಾರ ಮಾಡುತ್ತಾರೆ. ಈ ಜಾಹೀರಾತು ನಂಬಿ, ಅಥವಾ ಈ ಕಾರ್ಪೊರೇಟ್ ಆಸ್ಪತ್ರೆಗಳ ಕಮಿಷನ್ ಏಜೆಂಟರಾಗಿ ಕೆಲಸ ಮಾಡುವ ಡಾಕ್ಟರ್ ಮುಖವಾಡದ ದಲ್ಲಾಳಿಗಳ ಮೂಲಕ ಈ ಆಸ್ಪತ್ರೆಗಳಲ್ಲಿ ದಾಖಲಾಗಲು ಬರುವ ರೋಗಿಗಳಿಂದ ಮೊದಲು ಮುಂಗಡವಾಗಿ ಹಣವನ್ನು ಪಡೆದುಕೊಳ್ಳಲಾಗುತ್ತದೆ.

ಈ ರೀತಿ ಮುಂಗಡ ಹಣ ಪಡೆಯುವ ಪದ್ಧತಿ ಭಾರತೀಯ ವೈದ್ಯಕೀಯ ಮಂಡಳಿಯಿಂದ ಮನ್ನಣೆ ಪಡೆದ ರೂಢಿಯಲ್ಲ. ಈ ಹಿಂದೆ ಆ ರೋಗಿ ಮಾಡಿಸಿಕೊಂಡ ಲ್ಯಾಬೊರೇಟರಿ ವರದಿಗಳನ್ನು ಬದಿಗಿಟ್ಟು, ಮತ್ತೊಮ್ಮೆ ತಮ್ಮ ಆಸ್ಪತ್ರೆಯಲ್ಲಿ ಮತ್ತದೇ ಪರೀಕ್ಷೆಗಳನ್ನು ಮಾಡಿಸಿ ಶುಲ್ಕ ಪಡೆದು, ನಂತರ ಚಿಕಿತ್ಸೆಗೆಂದು ಔಷಽಗಳನ್ನು ತಮ್ಮ ಆಸ್ಪತ್ರೆಯಲ್ಲಿರುವ ಮೆಡಿಕಲ್ ಸ್ಟೋರ್‌ನಲ್ಲಿಯೇ ಖರೀದಿಸಿ ತರುವಂತೆ ಹೇಳಿ ಉದ್ದನೆಯ ಪಟ್ಟಿ ನೀಡುತ್ತಾರೆ.

62 ok

ದಾಖಲಾಗಿರುವ ರೋಗಿಯ ಬ್ಯಾಂಕ್ ಬ್ಯಾಲೆನ್ಸ್ ಚೆನ್ನಾಗಿದೆ ಎಂದು ತಿಳಿದುಬಂದರೆ, ಅಥವಾ ಆರೋಗ್ಯವಿಮೆ ಇದೆ ಎಂದು ಗೊತ್ತಾದರೆ, ಚಿಕಿತ್ಸೆಯ ದರಗಳು ಹಾಗೂ ಒಳರೋಗಿಯಾಗಿ ಚಿಕಿತ್ಸೆ ಪಡೆಯುವ ಅವಧಿ ಹೆಚ್ಚತೊಡಗುತ್ತವೆ. ಚಿಕಿತ್ಸಾ ವೆಚ್ಚದ ಬಾಲ ಬೆಳೆಯತೊಡಗುತ್ತದೆ.

ವಿಮೆ ಹಣದ ವ್ಯಾಪ್ತಿ ಮುಗಿದ ನಂತರ ಅಥವಾ ರೋಗಿಯ ಆರ್ಥಿಕ ಸ್ಥಿತಿ ಶಿಥಿಲವಾಗುತ್ತಿರುವುದು ಅರಿವಿಗೆ ಬರುತ್ತಿರುವಂತೆಯೇ, ರೋಗಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡುವುದಾಗಿ ಹೇಳಿ, ಸಂಬಂಧಿಕರಿಗೆ ಅಂತಿಮ ಬಿಲ್ಲನ್ನು ಪಾವತಿಸುವಂತೆ ಹೇಳಿ ಬಿಲ್ಲಿನ ಮೊತ್ತವನ್ನು ಹೇಳಿದಾಗ ಸಂಬಂಧಿಕರಿಗೆ ಆಘಾತ ವಾಗುವದಂತೂ ನಿಜ.

ಹಲವು ಲಕ್ಷಗಳಲ್ಲಿ ಪಾವತಿಸುವಂತೆ ಆ ಬಿಲ್ಲು ಸಂಬಂಧಿಕರಿಗೆ ಬಾಣದಂತೆ ಚುಚ್ಚುತ್ತಿರುವಾಗ, ಆರ್ಥಿಕ ಅನನುಕೂಲತೆಯಿಂದ ಅಷ್ಟು ಹಣ ಪಾವತಿಸಲು ಸಾಧ್ಯವಿಲ್ಲವೆಂದು ಹೇಳಿದರೆ, ಪಾವತಿಸುವವರೆಗೂ ರೋಗಿಯನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲವೆಂದು ಖಂಡತುಂಡವಾಗಿ ಹೇಳಿ ಬಿಡುತ್ತಾರೆ. ರೋಗಿಯನ್ನು ಆಸ್ಪತ್ರೆಯ ಕಪಿಮುಷ್ಟಿಯಿಂದ ಬಿಡುಗಡೆ ಮಾಡಿಸಿಕೊಳ್ಳಲು ಸಾಲಸೋಲ ಮಾಡಿ, ಹಣ ಹೊಂದಿಸಿಕೊಂಡು ಬಂದು ಆಸ್ಪತ್ರೆಗೆ ಪಾವತಿಸಿದ ನಂತರ ಆ ಒಳ ರೋಗಿಗೆ ಬಿಡುಗಡೆಯ ಭಾಗ್ಯ ದೊರಕುತ್ತದೆ.

ರೋಗಿ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದರೆ, ಶವವನ್ನು ಶೀತಲ ಕೋಣೆ ಯಲ್ಲಿರಿಸಿ ಅಂತಿಮ ಬಿಲ್ಲಿನ ಮೊತ್ತ ಪಾವತಿಸುವವರೆಗೂ ಶವವನ್ನು ಸಂಬಂಧಿಕರಿಗೆ ನೀಡುವು ದಿಲ್ಲ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ಹೇಳಿದ ನಂತರ, ಸಂಬಂಧಿಕರಿಗೆ ಇತ್ತ ತಮ್ಮವರನ್ನು ಕಳೆದುಕೊಂಡ ಬಗ್ಗೆ ದುಃಖ, ನೋವು ಅನುಭವಿಸಬೇಕೋ? ಅಥವಾ ಶವವನ್ನು ಆಸ್ಪತ್ರೆಯಿಂದ ಬಿಡಿಸಿಕೊಳ್ಳಲು ಹಣ ಹೊಂದಾಣಿಕೆ ಮಾಡಲು ಅಡ್ಡಾಡಬೇಕೋ? ಎಂಬ ದ್ವಂದ್ವ.

ಹಿಡಿಶಾಪ ಹಾಕುತ್ತ ಆಸ್ತಿಯನ್ನು ಅಡವಿಟ್ಟೋ, ಮಾರಿಯೋ ಹಣ ಹೊಂದಾಣಿಕೆ ಮಾಡಿಕೊಂಡು ಬಂದು ಬಿಲ್ಲು ಪಾವತಿಸಿದ ನಂತರ ಶವಕ್ಕೆ ಆ ಶೀತಲ ಕೋಣೆಯಿಂದ ಮುಕ್ತಿ. ಶವದ ಜೊತೆ ಈ ಜೀವಂತ ಶವಗಳೂ ಸಹ ಆಸ್ಪತ್ರೆಯಿಂದ ಹೊರಡುವುದನ್ನು ನೋಡುವ ನಾಗರಿಕ ಸಮಾಜ, ನಿಜಕ್ಕೂ ವೈದ್ಯ ವೃತ್ತಿ ಇಂದು ಅಮಾನವೀಯ ವೃತ್ತಿಯಾಗಿ ಇನ್ನೊಬ್ಬರ ರಕ್ತ ಮಾಂಸಗಳನ್ನೇ ಬುನಾದಿಯಾಗಿರಿಸಿಕೊಂಡು ತಮ್ಮ ಅರಮನೆಗಳನ್ನು ಕಟ್ಟಿಕೊಳ್ಳುವ ವೃತಿಯಾಗಿದೆ ಎಂದು ಅಸಹಾಯಕ ನಿಟ್ಟುಸಿರು ಬಿಡುತ್ತಿರುವ ಅನುಭವ ನಮಗೆಲ್ಲ ಆಗಿರಲಿಕ್ಕೆ ಸಾಕು.

ನಿಜಕ್ಕೂ ಆಸ್ಪತ್ರೆಗಳಿಗೆ, ತಮ್ಮ ಸೇವಾ ಶುಲ್ಕದ ಬಿಲ್ಲನ್ನು ಪಾವತಿಸುವವರೆಗೂ ಒಳ ರೋಗಿಯನ್ನು ಅಥವಾ ಶವವನ್ನು ಬಂಽಯಾಗಿರಿಸುವ ಅಥವಾ ಒತ್ತೆಯಾಳಾಗಿ ಇರಿಸಿಕೊಳ್ಳಲು ಅಽಕಾರವಿದೆಯೇ? ಇದಕ್ಕೆ ಉತ್ತರ ಸ್ಪಷ್ಟವಾಗಿ ನಕಾರಾತ್ಮಕವಾಗಿದೆ. ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಬರುವ ರೋಗಿಗಳು ಶುಲ್ಕವನ್ನು ನೀಡಿ ಆಸ್ಪತ್ರೆಯ ಡಾಕ್ಟರ್‌ಗಳಿಂದ ಚಿಕಿತ್ಸೆಯನ್ನು ಪಡೆಯುವಾಗ ಆ ಡಾಕ್ಟರ್ ಹಾಗೂ ರೋಗಿಯ ನಡುವೆ ಒಂದು ಒಡಂಬಡಿಕೆ ಉಂಟಾಗುತ್ತದೆ.

ಶುಲ್ಕ ನೀಡಿದರೆ, ನಿನಗೆ ಚಿಕಿತ್ಸೆ ನೀಡುತ್ತೇನೆಂದು ಹೇಳುವ ಡಾಕ್ಟರ್ ಹಾಗೂ ಅದನ್ನು ಒಪ್ಪಿ ಚಿಕಿತ್ಸೆ ಪಡೆಯುವ ರೋಗಿಯ ನಡುವಿನ ಈ ಒಪ್ಪಂದವು ಭಾರತೀಯ ಕರಾರು ಅಧಿನಿಯಮದಡಿಯ ಕಾನೂನುಗಳಿಗೆ ಒಳಪಡುತ್ತದೆ. ಅಂತಿಮ ಬಿಲ್ಲುಗಳನ್ನು ಪಾವತಿಸಲು ವಿಫಲರಾದ ರೋಗಿಯನ್ನು ಅಥವಾ ಶವವನ್ನು ಆ ಬಿಲ್ಲುಗಳ ಮೊತ್ತ ಪಾವತಿಯಾಗುವವರೆಗೆ ಇಟ್ಟುಕೊಳ್ಳಲು ಆ ಕಾನೂನಿನಡಿ ಅವಕಾಶವಿದೆಯೇ? ಖಂಡಿತವಾಗಿಯೂ ಭಾರತೀಯ ಕರಾರು ಅಧಿನಿಯಮದಲ್ಲಿ ಆಸ್ಪತ್ರೆಗಳಿಗೆ ತಮ್ಮ ಪಾಲಿನ ಹಣ ಪಾವತಿಯಾಗುವವರೆಗೂ ಯಾವುದೇ ರೋಗಿ ಅಥವಾ ಶವವನ್ನು ಇಟ್ಟು ಕೊಳ್ಳಲು ಕಾನೂನಿನಡಿ ಅವಕಾಶವಿಲ್ಲ. ಇದನ್ನು ಸಾರ್ವಜನಿಕರು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಬೇಕು.

ಬಿಲ್ ಪಾವತಿಸದ ರೋಗಿಯ ಅಥವಾ ಮರಣ ಹೊಂದಿದ ವ್ಯಕ್ತಿಯ ವಾರಸುದಾರರಿಂದ ಅಂತಿಮ ಬಿಲ್ಲಿನ ಮೊತ್ತವನ್ನು ಪಡೆದುಕೊಳ್ಳಲು ಇರುವ ದಾರಿಯಾದರೂ ಯಾವುದು? ಎಂದು ಪ್ರಶ್ನಿಸಿದರೆ, ಉತ್ತರ ಬಹಳ ಸರಳ. ಈ ಅಧಿನಿಯಮದಲ್ಲಿಯೇ ಉಲ್ಲೇಖವಿರುವಂತೆ, ತನಗೆ ಬರಬೇಕಾದ ಹಣವನ್ನು ಪಡೆಯಲು ಆ ಆಸ್ಪತ್ರೆ ಅಥವಾ ಡಾಕ್ಟರುಗಳು ಸಕ್ಷಮ ನ್ಯಾಯಾಲಯಕ್ಕೆ ಸಿವಿಲ್ ದಾವೆಯನ್ನು ದಾಖಲಿಸಿ ನ್ಯಾಯಾಲಯದ ಡಿಕ್ರೀ ಮೂಲಕ ಬಿಲ್ಲಿನ ಹಣವನ್ನು ಪಡೆಯಲು ಕ್ರಮ ಕೈಗೊಳ್ಳಬೇಕೇ ವಿನಃ ರೋಗಿಯನ್ನು ಅಥವಾ ಶವವನ್ನು ಒತ್ತೆಯಾಳಾಗಿ ಇರಿಸಿಕೊಳ್ಳಲು ಬರುವು ದಿಲ್ಲ.

ಒಂದು ವೇಳೆ, ರೋಗಿಯನ್ನು ಅಥವಾ ಶವವನ್ನು ಒತ್ತೆಯಾಳಾಗಿ ಇರಿಸಿಕೊಂಡರೆ ಶಿಕ್ಷಾರ್ಹ ಅಪರಾಧವಾಗುತ್ತದೆಯೇ? ಖಂಡಿತವಾಗಿಯೂ ಇದೊಂದು ಶಿಕ್ಷಾರ್ಹ ಅಪರಾಧ. ಭಾರತೀಯ ದಂಡ ಸಂಹಿತೆಯ ಕಲಂ 340ರಲ್ಲಿ ‘ಅಕ್ರಮ ಕೂಡಿಡುವಿಕೆ’ ಪರಿಭಾಷೆಯಲ್ಲಿ ಯಾವುದೇ ವ್ಯಕ್ತಿಯನ್ನು ಅಕ್ರಮವಾಗಿ ಆತನು ಬಯಸಿದಂತೆ ಹೋಗಗೊಡದೆ ಒಂದು ಮಿತಿಯಲ್ಲಿ ತಡೆದು ಕೂಡಿಟ್ಟರೆ ಅದನ್ನು ಅಕ್ರಮ ಕೂಡಿಡುವಿಕೆ ಎಂದು ಪರಿಗಣಿಸಬೇಕಾಗುತ್ತದೆ. ಈ ರೀತಿಯ ಕೃತ್ಯವು ಕಲಂ 342ರಡಿ ಒಂದು ವರ್ಷದವರೆಗೂ ವಿಸ್ತರಿಸಬಹುದಾದ ಜೈಲು ಶಿಕ್ಷೆಯನ್ನು ಒಳಗೊಂಡ ಅಪರಾಧ. ಇದಕ್ಕೆ ಪೂರಕವಾಗಿ, ಗುಣ ಹೊಂದಿದ ರೋಗಿಗೆ ಚಿಕಿತ್ಸೆಯ ಹೆಸರಿನಲ್ಲಿ ಅನವಶ್ಯಕವಾಗಿ ಔಷಧಗಳನ್ನು ನೀಡಿದರೆ, ಆ ರೀತಿಯ ಕೃತ್ಯವನ್ನು ನ್ಯಾಯೋಚಿತವಲ್ಲದ ಸೇವಾ ನ್ಯೂನತೆಯೆಂದು ಪರಿಗಣಿತವಾಗಿ ಆ ರೋಗಿಗೆ ಪರಿಹಾರವನ್ನು ನೀಡಬೇಕಾದ ಹೊಣೆಗಾರಿಕೆಯನ್ನು ಸ್ಥಿರೀಕರಿಸುತ್ತದೆ.

ಒಂದು ವೇಳೆ ಗುಣವಾಗಿದ್ದಾನೆಂದು ಹೇಳಿ, ಅಂತಿಮ ಬಿಲ್ಲಿನ ಮೊತ್ತ ಪಾವತಿಸುವವರೆಗೂ ರೋಗಿಯನ್ನು ಬಿಡುಗಡೆ ಮಾಡದೇ, ಚಿಕಿತ್ಸೆಯ ಹೆಸರಿನಲ್ಲಿ ಅನಗತ್ಯವಾಗಿ ಔಷಧ ನೀಡಿ ಅಥವಾ ತುರ್ತು ಚಿಕಿತ್ಸಾ ಘಟಕದಲ್ಲಿರಿಸಿಕೊಂಡು, ನಂತರ ಆ ರೋಗಿ ಮೃತಪಟ್ಟರೆ, ಈ ಕೃತ್ಯ ಭಾರತೀಯ ದಂಡ ಸಂಹಿತೆಯ ‘ನರ ಹತ್ಯೆ’ ಪರಿಭಾಷೆಯಲ್ಲಿ ಬರುತ್ತವೆ.

ರೋಗದಿಂದ ವಾಸಿಗೊಂಡ ರೋಗಿಯನ್ನು ಅಕ್ರಮವಾಗಿ ತಮ್ಮ ಬಳಿಯೇ ಇಟ್ಟುಕೊಳ್ಳುವುದು ಆ ರೋಗಿಯ ಸಂವಿಧಾನಾತ್ಮಕ ಹಕ್ಕುಗಳನ್ನು ಕಸಿದುಕೊಂಡಂತೆ. ಇತ್ತೀಚೆಗೆ, ಕೇರಳ ರಾಜ್ಯದ ಉಚ್ಛ ನ್ಯಾಯಾಲಯದಲ್ಲಿ ರೀಜಾ ಎಸ್. ಎಂಬವರು ಎಸ್.ಕೆ.ಹಾಸ್ಪಿಟಲ್ ತಿರುವನಂತಪುರಂ ಇತರರ ಮೇಲೆ ರಿಟ್ ಅರ್ಜಿ ದಾಖಲಿಸಿದರು. ಬಿಲ್ ಹಣ ಪಾವತಿಸಿಲ್ಲವೆಂದು ಹೇಳಿ ಆಸ್ಪತ್ರೆಯವರು ತನ್ನ ಮಗನನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದು, ಬಿಡುಗಡೆ ಮಾಡುವಂತೆ ಕೋರಿದರು.

ಆಸ್ಪತ್ರೆಗೆ ಛೀಮಾರಿ ಹಾಕಿದ ಹೈಕೋರ್ಟ್ ಮಗನನ್ನು ಕೂಡಲೆ ಬಿಡುಗಡೆ ಮಾಡುವಂತೆ ಆದೇಶ ನೀಡಿತು. ಪಾವತಿಸದ ಬಿಲ್ಲಿನ ಮೊತ್ತವನ್ನು ಕಾನೂನಿನಲ್ಲಿ ಇರುವ ನಿಯಮಗಳನುಸಾರ ವಸೂಲಿಗೆ ಕ್ರಮ ಕೈಗೊಳ್ಳಬೇಕೇ ವಿನಃ ರೋಗಿಯನ್ನು ಒತ್ತೆಯಾಳಾಗಿ ಇಟ್ಟುಕೊಳ್ಳುವಂತಿಲ್ಲವೆಂದು ನಿರ್ಣಯ ನೀಡಿತು. ಮೃತ ಹೊಂದಿದ ರೋಗಿಯ ಶವವನ್ನು ಬಿಲ್ಲು ಪಾವತಿಸುವವರೆಗೂ ನೀಡುವುದಿಲ್ಲ ವೆಂಬ ಕ್ರಮವು ಆ ಆಸ್ಪತ್ರೆಯ ಆಡಳಿತ ಮಂಡಳಿಯನ್ನು ಗಂಭೀರವಾದ ಶಿಕ್ಷಾರ್ಹ ಅಪರಾಧಕ್ಕೆ ಒಳಪಡಿಸುತ್ತದೆ.

ಒಬ್ಬ ವ್ಯಕ್ತಿಯ ಮರಣಾನಂತರ ಅವನ ಶವ ವಾರಸುದಾರರಿಗೆ ಸೇರಿದ ಸ್ವತ್ತೆಂದು ಕಾನೂನಿನಡಿ ಪರಿಗಣಿಸಲಾಗುತ್ತದೆ. ಈ ವಾರಸುದಾರರಿಗೆ ಆ ಶವವನ್ನು ಹಸ್ತಾಂತರಿಸದೇ ಅಕ್ರಮವಾಗಿ ಇಟ್ಟು ಕೊಂಡಲ್ಲಿ ಈ ಕೃತ್ಯವು ಭಾರತೀಯ ದಂಡ ಸಂಹಿತೆಯ ಕಲಂ 390ರಡಿ ‘ಸುಲಿಗೆ’ ಪರಿಭಾಷೆಯಲ್ಲಿ ಬರುತ್ತಿದ್ದು ಈ ಅಪರಾಧಕ್ಕೆ ಹತ್ತು ವರ್ಷದವರೆಗೆ ಕಾರಾಗೃಹವಾಸ ಹಾಗು ದಂಡದ ಶಿಕ್ಷೆ ನಿಗದಿಪಡಿಸಲಾಗಿದೆ.

ಇದೇ ಸುಲಿಗೆ ಕೃತ್ಯವನ್ನು ಐದು ಅಥವಾ ಹೆಚ್ಚು ಜನ ಸೇರಿ ಎಸಗಿದರೆ ಅಥವಾ ಪ್ರಯತ್ನಿಸಿದರೆ ಆ ಕೃತ್ಯವನ್ನು ‘ದರೋಡೆ’ ಪರಿಭಾಷೆಯಲ್ಲಿ ಪರಿಗಣಿಸಬೇಕಾಗುತ್ತದೆ. ಇದಕ್ಕೆ ಕಾನೂನಿನಡಿ ಹತ್ತು ವರ್ಷಗಳವರೆಗೆ ಕಠಿಣ ಕಾರಾಗೃಹ ಸಜೆ ಹಾಗೂ ದಂಡ ಇದೆ. ಇದರ ಅರ್ಥ, ಆಸ್ಪತ್ರೆಗಳು ಹಾಗೂ ಡಾಕ್ಟರ್‌ಗಳು ತಮ್ಮ ಚಿಕಿತ್ಸಾ ಬಿಲ್ ಪಾವತಿಸಿಲ್ಲವೆಂದು ರೋಗಿಯನ್ನು ಅಥವಾ ರೋಗಿಯ ಶವವನ್ನು ಬಿಲ್ಲಿನ ಹಣ ಪಾವತಿಸುವವರೆಗೂ ಒತ್ತೆಯಾಳಾಗಿರಿಸಿಕೊಂಡರೆ ಅದನ್ನು ಶಿಕ್ಷಾರ್ಹ ಅಪರಾಧ, ಸುಲಿಗೆ, ದರೋಡೆಯೆಂದೇ ಪರಿಗಣಿಸಬೇಕಾಗುತ್ತದೆ.

ಈ ಕುರಿತಂತೆ, ಆಸ್ಪತ್ರೆಯ ಅಥವಾ ಡಾಕ್ಟರ್ ವಿರುದ್ಧ ಪೊಲೀಸ್ ಠಾಣಾಧಿಕಾರಿ ದೂರನ್ನು ಸ್ವೀಕರಿಸಿದರೆ, ಕೂಡಲೇ ಪ್ರಕರಣ ದಾಖಲಿಸಿಕೊಳ್ಳಬೇಕು. ಏಕೆಂದರೆ ಈ ಎಲ್ಲ ಶಿಕ್ಷಾರ್ಹ ಅಪರಾಧಿಕ ಕೃತ್ಯಗಳು ಸಂಜ್ಞೇಯ ಅಪರಾಧಗಳಾಗಿದ್ದು, ಪ್ರಕರಣ ದಾಖಲಿಸಲು ನಿರಾಕರಿಸುವಂತಿಲ್ಲ. ನಾಗರಿಕ ಸಮಾಜದಲ್ಲಿ, ಆರೋಗ್ಯವನ್ನು ಕಾಪಾಡುವ ಡಾಕ್ಟರ್ ಗಳು, ಆಸ್ಪತ್ರೆಗಳು ಸಾವನ್ನು ಎದರಿಸುತ್ತಿರುವ ರೋಗಿಗಳ ಪಾಲಿಗೆ ದೈವ ಸಮಾನರು, ಸಂಜೀವಿನಿಗಳು. ಆದರೆ ತಮ್ಮ ಅನೈತಿಕ ವೃತ್ತಿ ನೀತಿಗಳಿಂದ, ಹಣ ಗಳಿಕೆಯ ಹಂಬಲದಲ್ಲಿ ಮಾನವೀಯತೆಯನ್ನು ಮರೆತು ದಾನವರಂತೆ ವರ್ತಿಸಿದರೆ ಕಾನೂನಿನಡಿ ಯಾವುದೇ ವಿನಾಯತಿ ಇಲ್ಲವೆಂಬುದನ್ನು ಅರಿಯಬೇಕು.

ಜನ ಜಾಗೃತವಾಗಿ ಹಾಗೂ ನ್ಯಾಯಾಲಯಗಳು ಮತ್ತಷ್ಟು ಕಠಿಣವಾದರಷ್ಟೇ ಈ ರೀತಿಯ ಸುಲಿಗೆ, ದರೋಡೆಗಳಿಗೆ ವಿರಾಮ ಹಾಕಲು ಸಾಧ್ಯ. ಕಾನೂನುಗಳನ್ನು ಮೀರುವುದರ ಜೊತೆ ಮಾನವೀಯತೆ ಯನ್ನೂ ಮರೆತ ಈ ಆಸ್ಪತ್ರೆಗಳನ್ನು ಸರ್ಕಾರವೇ ಸೂಕ್ತವಾಗಿ ಕಾನೂನಿನ ಚೌಕಟ್ಟಿನಲ್ಲಿ ತರುವುದು ಇಂದಿನ ಅತ್ಯಗತ್ಯವಾಗಿದೆ.