ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vishweshwar Bhat Column: ಅಪ್ಪನ ಕೊನೆಯುಸಿರ ಹಾದಿಯಲ್ಲಿ ಮಗನ ಜತೆ ಭಾವಪೂರ್ಣ ಪಯಣ

ಒಂದು ದೇಶದ ನಾಯಕನಾಗಿ ಇಡೀ ಜಗತ್ತು ಕೊಂಡಾಡಿದ, ನೆನಪಿಟ್ಟುಕೊಂಡ ವ್ಯಕ್ತಿ, ಈ ಮನುಷ್ಯ ನಿಗೆ ಕೇವಲ ಒಬ್ಬ ‘ಅಪ್ಪ’ ಮಾತ್ರ ಆಗಿದ್ದರು ಎನ್ನುವ ಸರಳ ಸತ್ಯ ನನ್ನ ಕಣ್ಣೆದುರು ನಿಂತಿತ್ತು. ಮಗನ ಕಣ್ಣುಗಳಲ್ಲಿ ನಾಯಕನ ಮೇಲಿನ ಅಭಿಮಾನಕ್ಕಿಂತ ಹೆಚ್ಚಾಗಿ, ಕಳೆದುಹೋದ ಅಪ್ಪನ ಮೂಲ ಹುಡುಕುವ ಮಗುವಿನ ಬೆರಗು ಮತ್ತು ಅಸಹಾಯಕತೆ ಮುಸುಕಿಕೊಂಡಿತ್ತು.

ನೂರೆಂಟು ವಿಶ್ವ

ತಾಷ್ಕೆಂಟ್! ಈ ಹೆಸರು ಬಾಲ್ಯದಿಂದಲೂ ನಮ್ಮ ಕಿವಿಯೊಳಗೆ ಯಾವುದೋ ನಿಗೂಢವಾದ, ಮಂಜು ಕವಿದ ಒಂದು ಹಳೆಯ ನಿಲ್ದಾಣದಂತೆ ಮನಸ್ಸಿನಲ್ಲಿ ಕುಳಿತುಬಿಟ್ಟಿದೆ. ಶಾಲೆ ಮುಗಿಸಿ ಮನೆಗೆ ಓಡುವ ದಾರಿಯಲ್ಲಿ, ಬಾನುಲಿ ಧ್ವನಿಯಲ್ಲಿ ಅಥವಾ ಪತ್ರಿಕೆಯ ಮುಖಪುಟದ ಕಪ್ಪು-ಬಿಳುಪು ಫೋಟೋದಲ್ಲಿ ಕೇಳಿಬಂದ ಆ ಹೆಸರು, ನಮ್ಮ ಮನಸ್ಸಿನಲ್ಲಿ ಉಳಿದು ಹೋಗಿದ್ದು ಒಬ್ಬ ಸಣ್ಣ ನಿಲುವಿನ, ಬಿರು ನಗೆಯ ಮನುಷ್ಯನ ಕೊನೆಯ ಉಸಿರಿನ ಜಾಗವಾಗಿ.

ಇವತ್ತು ಯಾರೇ ಆದರೂ ಬ್ಯಾಗು ಹೊತ್ತು ವಿಮಾನ ಹತ್ತಿ ಆ ನಗರಕ್ಕೆ ಹೋಗಿ ಇಳಿದುಬಿಡ ಬಹುದು. ಆದರೆ ಇತಿಹಾಸದ ಹಾದಿ ಕೇವಲ ಟಿಕೆಟ್ ಕಾಯ್ದಿರಿಸುವಷ್ಟು ಸುಲಭವಲ್ಲ; ಅಲ್ಲಿಗೆ ಹೋಗಿ ನಿಂತಾಗ ನೆಲದಡಿ ಯಿಂದ ಎದ್ದುಬರುವ ನಿಶ್ಯಬ್ದವನ್ನು ಎದುರಿಸುವುದು ಅಷ್ಟು ಸರಳ ವಾದ ಸಂಗತಿಯೇನೂ ಅಲ್ಲ. ನಗರಗಳು ತಮ್ಮ ಮೈಮೇಲೆ ಎಷ್ಟೊಂದು ಯುದ್ಧಗಳ, ಒಪ್ಪಂದಗಳ, ಒಡಂಬಡಿಕೆಗಳ ಹೊಲಿಗೆಗಳನ್ನು ಹೊದ್ದು ಮಲಗಿರುತ್ತವೆ. ತಾಷ್ಕೆಂಟಿನ ರಸ್ತೆಗಳ ಮೇಲೆ ನಡು ಹಗಲಿನ ಬಿಸಿಲು ಇಳಿಯುತ್ತಿದ್ದಾಗಲೂ, ಅಲ್ಲಿನ ಗಾಳಿಯಲ್ಲಿ ಒಂದು ತಣ್ಣನೆಯ, ಅನಾಥವಾದ ಸೆಳೆತವಿತ್ತು.

ಯಾವುದೋ ಅಪರಿಚಿತ ಮರದ ಎಲೆಗಳು ಸದ್ದು ಮಾಡದೇ ಉದುರುತ್ತಿದ್ದವು. ಈ ನೆಲದಲ್ಲಿ ಭಾರತದ ಇತಿಹಾಸದ ಒಂದು ಮಹತ್ವದ ಪುಟ ಶಾಶ್ವತವಾಗಿ ಮಡಚಿಕೊಂಡು ಬಿಟ್ಟಿತು ಎನ್ನುವ ಕಲ್ಪನೆಯೇ ಎದೆಯನ್ನು ಒಮ್ಮೆ ಕಲಕಿಬಿಡುತ್ತದೆ. ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಸ್ಮಾರಕ ದತ್ತ ಹೆಜ್ಜೆ ಹಾಕುವಾಗ, ನನ್ನ ಪಕ್ಕದ ಅವರದೇ ರಕ್ತದ ಕಣವೊಂದು ಮೌನವಾಗಿ ನಡೆದು ಬರುತ್ತಿತ್ತು. ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಮಗ ಸುನೀಲ್ ಶಾಸ್ತ್ರಿ ನನ್ನ ಜತೆಯಲ್ಲಿದ್ದರು. ಅವರ ಕೈಯನ್ನು ಹಿಡಿದು ಆ ಪಾದಚಾರಿ ಮಾರ್ಗ ದಲ್ಲಿ ನಡೆಯುತ್ತಿದ್ದ ಕ್ಷಣಗಳು, ಕಾಲದ ಕನ್ನಡಿಯೊಳಗೆ ನಾವಿಬ್ಬರೂ ಇಳಿದು ಹೋದಂತೆ ಭಾಸವಾಗುತ್ತಿತ್ತು.

ಇದನ್ನೂ ಓದಿ: Vishweshwar Bhat Column: ಪೇಪರ್ ಕ್ಲಿಪ್ ಮ್ಯಾಕ್ಸಿಮೈಜರ್

ಒಂದು ದೇಶದ ನಾಯಕನಾಗಿ ಇಡೀ ಜಗತ್ತು ಕೊಂಡಾಡಿದ, ನೆನಪಿಟ್ಟುಕೊಂಡ ವ್ಯಕ್ತಿ, ಈ ಮನುಷ್ಯ ನಿಗೆ ಕೇವಲ ಒಬ್ಬ ‘ಅಪ್ಪ’ ಮಾತ್ರ ಆಗಿದ್ದರು ಎನ್ನುವ ಸರಳ ಸತ್ಯ ನನ್ನ ಕಣ್ಣೆದುರು ನಿಂತಿತ್ತು. ಮಗನ ಕಣ್ಣುಗಳಲ್ಲಿ ನಾಯಕನ ಮೇಲಿನ ಅಭಿಮಾನಕ್ಕಿಂತ ಹೆಚ್ಚಾಗಿ, ಕಳೆದುಹೋದ ಅಪ್ಪನ ಮೂಲ ಹುಡುಕುವ ಮಗುವಿನ ಬೆರಗು ಮತ್ತು ಅಸಹಾಯಕತೆ ಮುಸುಕಿಕೊಂಡಿತ್ತು.

ಎರಡು ವರ್ಷಗಳ ಹಿಂದೆ ನಾನೊಬ್ಬನೇ ಇದೇ ಸ್ಮಾರಕದ ಮುಂದೆ ನಿಂತಿದ್ದೆ. ಆಗ ಅಲ್ಲಿನ ಶಿಲೆಯ ತಣ್ಣನೆಯ ಸ್ಪರ್ಶ ನನ್ನ ಬೆರಳುಗಳಿಗೆ ಸೋಕಿದಾಗ, ಒಂಟಿತನ ವಿಪರೀತ ಕಾಡಿತ್ತು. ಇದ್ದಕ್ಕಿದ್ದಂತೆ ಸುನೀಲ್ ಶಾಸ್ತ್ರಿ ಅವರಿಗೆ ಅಲ್ಲಿಂದಲೇ ಫೋನ್ ಮಾಡಿದೆ- ‘ಸರ್, ನಾನು ನಿಮ್ಮ ತಂದೆಯ ಸ್ಮಾರಕದ ಮುಂದೆ ನಿಂತಿದ್ದೇನೆ’ ಎಂದಷ್ಟೇ ಹೇಳಿದೆ. ಆ ಕಡೆಯಿಂದ ಕೆಲ ಕ್ಷಣ ಕೇವಲ ಉಸಿರಿನ ಸದ್ದು ಮಾತ್ರ ಕೇಳಿಸಿತು.

ನಂತರ ಅವರು ಗದ್ಗದಿತ ಧ್ವನಿಯಲ್ಲಿ, ‘ಭಟ್ ಜೀ, ಮುಂದಿನ ಬಾರಿ ನೀವು ಅಲ್ಲಿಗೆ ಹೋಗುವಾಗ ನಾನೂ ನಿಮ್ಮ ಜತೆ ಬರುತ್ತೇನೆ, ನನ್ನನ್ನೂ ಕರೆದುಕೊಂಡು ಹೋಗಿ’ ಎಂದಿದ್ದರು. ಆ ಮಾತು ಕೇವಲ ಸ್ನೇಹದ ಆಹ್ವಾನವಾಗಿರಲಿಲ್ಲ. ಮಗನೊಬ್ಬ ತನ್ನ ತಂದೆಯ ಕೊನೆಯ ಹೆಜ್ಜೆಗುರುತು ಗಳನ್ನು ಹುಡುಕಿಕೊಂಡು ಹೊರಡುವ ಹಂಬಲವಾಗಿತ್ತು. ಸುನಿಲ್ ಶಾಸ್ತ್ರಿ ಅವರೊಂದಿಗೆ ನನ್ನದು ಸುಮಾರು ಇಪ್ಪತ್ತು ವರ್ಷಗಳ ಸಂಬಂಧ, ಒಡನಾಟ. ತಿಂಗಳಿಗೆ ಒಂದೆರಡು ಬಾರಿ ಫೋನಿನಲ್ಲಿ ಮಾತಾಡುತ್ತೇವೆ.

L B S

ನಾನು ದೆಹಲಿಗೆ ಹೋದಾಗಲೆಲ್ಲ ಅವರನ್ನು ಭೇಟಿ ಮಾಡುತ್ತೇನೆ. ಅವರು ಬೆಂಗಳೂರಿಗೆ ಬಂದಾ ಗಲೆಲ್ಲ ನನ್ನ ಮನೆಗೆ ಬರುತ್ತಾರೆ. ಫೋನ್ ಮಾಡಿದಾಗಲೆಲ್ಲ ಪತ್ನಿ, ಮಗನ ಬಗ್ಗೆ ವಿಚಾರಿಸಿ ಕೊಳ್ಳುತ್ತಾರೆ. ಏ He is very loveable person. ಕೊನೆಗೂ ಆ ಮಾತು ನಿಜವಾಗಿತ್ತು. ಸುನೀಲ್ ಶಾಸ್ತ್ರಿ ಅವರು ತಮ್ಮ ಧರ್ಮಪತ್ನಿ ಮೀರಾ ಶಾಸಿ ಜತೆ ತಾಷ್ಕೆಂಟಿಗೆ ಬಂದಿಳಿದಾಗ, ಅವರ ಮುಖದಲ್ಲಿ ಒಂದು ಅಪರೂಪದ ಸಂಕೋಚ ಮತ್ತು ಆತಂಕ ಒಟ್ಟಿಗೇ ಮನೆಮಾಡಿದ್ದವು. ನಾಲ್ಕು ದಿನಗಳ ಕಾಲ ಅವರು ನಮ್ಮೊಂದಿಗೆ ಕಳೆದ ಆ ಕ್ಷಣಗಳು, ದಿನಚರಿಯ ಪುಟಗಳಿಂದ ಬೇರೆಯೇ ಆಗಿ ನಿಂತುಬಿಟ್ಟವು.

ಊಟದ ಮೇಜಿನ ಬಳಿ ಕುಳಿತಾಗ, ಕಾರಿನಲ್ಲಿ ಕಿಟಕಿಯಾಚೆ ನೋಡುತ್ತಿರುವಾಗ, ಇಲ್ಲವೇ ಬೀದಿಯಂಚಿನ ಕಾಫಿ ಶಾಪ್‌ನಲ್ಲಿ ಕೂತು ಆವಿಯಾಗುವ ಕಪ್ ಹಿಡಿದಾಗಲೆಲ್ಲ ಅವರ ಮಾತುಗಳು ಕಾಲದ ಯಾವುದೋ ಅಜ್ಞಾತ ಗುಹೆಯೊಳಗೆ ಇಳಿದು ಹೋಗುತ್ತಿದ್ದವು. ಸ್ಮಾರಕದ ಎದುರು ಬಂದು ನಿಂತಾಗ, ‘ಕಾಲ’ ಒಮ್ಮೆಲೇ ನಿಂತುಹೋದಂತಾಯಿತು. ಕಲ್ಲಿನಲ್ಲಿ ಕೆತ್ತಲಾದ ಶಾಸ್ತ್ರೀಜಿಯವರ ಸೌಮ್ಯ ಮುಖ, ಆ ಮುಗ್ಧ ಕಣ್ಣುಗಳು, ಆ ಶಾಂತ ನಗೆ-ಎಲ್ಲವೂ ಅಲ್ಲಿ ಮೊದಲಿನಂತೆಯೇ ಇದ್ದವು.

ಸುನೀಲ್ ಶಾಸ್ತ್ರಿ ಪುಷ್ಪಗುಚ್ಛವನ್ನಿಟ್ಟು ಆ ಶಿಲೆಯ ಪಾದವನ್ನು ಮುಟ್ಟಿ ನಮಸ್ಕರಿಸಿದಾಗ, ಅವರ ಕೈಗಳು ಸೂಕ್ಷ್ಮವಾಗಿ ನಡುಗುತ್ತಿದ್ದವು. ಅವರ ಗಂಟಲಿನಿಂದ ಯಾವುದೇ ಶಬ್ದ ಹೊರಬರಲಿಲ್ಲ. ಕೇವಲ ಒಂದು ದೀರ್ಘವಾದ ನಿಟ್ಟುಸಿರು ಮತ್ತು ಕಣ್ಣಂಚಿನಲ್ಲಿ ಮಡುಗಟ್ಟಿದ ಹನಿಗಳು ಮಾತ್ರ ಎಲ್ಲವನ್ನೂ ಹೇಳಿಬಿಟ್ಟವು. ಆ ಕ್ಷಣದಲ್ಲಿ ಅಲ್ಲಿ ನಿಂತಿದ್ದು ಯಾವುದೇ ರಾಜಕೀಯ ನಾಯಕನ ಮಗನಲ್ಲ, ಅಪ್ಪನ ನೆರಳಿಗಾಗಿ ಹಾತೊರೆಯುವ ಸಾಮಾನ್ಯ ಮಗುವಷ್ಟೇ. ಅಲ್ಲಿಂದ ಹೊರಬಂದ ಮೇಲೂ ಸುನೀಲ್ ಶಾಸ್ತ್ರಿ ಮಾತಾಡಲು ಕೆಲಕ್ಷಣ ತೆಗೆದುಕೊಂಡರು.

ಯಾವುದೋ ಅಪರಿಚಿತ ದೇಶದ, ಹಿಮ ಮುಸುಕಿದ ಕೊಠಡಿಯೊಂದರಲ್ಲಿ ತಮ್ಮ ತಂದೆ ಕೊನೆಯುಸಿರೆಳೆದರು ಎನ್ನುವ ಆ ಕಟು ವಾಸ್ತವವನ್ನು ಅವರ ಮನಸ್ಸು ಇಂದಿಗೂ ಪೂರ್ತಿಯಾಗಿ ಒಪ್ಪಿಕೊಂಡಂತಿರ ಲಿಲ್ಲ. ‘ಭಟ್ ಜೀ, ಯುದ್ಧವನ್ನು ಗೆದ್ದು, ಶಾಂತಿಯ ಪತ್ರಕ್ಕೆ ಸಹಿ ಹಾಕಿ, ಮನೆಗೆ ಬರುತ್ತೇನೆ ಎಂದು ಹೋದ ಅಪ್ಪ ಮರಳಿ ಬರಲೇ ಇಲ್ಲ... ಪರದೇಶದ ನೆಲದಲ್ಲಿ ಅವರು ಆ ಕೊನೆಯ ರಾತ್ರಿ ಹೇಗೆ ಕಳೆದಿದ್ದಾರೋ, ಯಾರಿಗೆ ಗೊತ್ತು?’ ಎಂದು ಅವರು ಹೇಳಿದಾಗ, ಆ ಮಾತಿನ ಭಾರ ಇಡೀ ವಾತಾವರಣವನ್ನೇ ತೇವಗೊಳಿಸಿ ಬಿಟ್ಟಿತು.

ಮಾನವೀಯ ಸಂಬಂಧಗಳ ವಿಚಿತ್ರ ನೋಡಿ, ನಮಗೆ ಇತಿಹಾಸ ಎನ್ನುವುದು ಕೇವಲ ದಿನಾಂಕಗಳು ಮತ್ತು ಒಪ್ಪಂದಗಳ ಪಟ್ಟಿ. ಆದರೆ ಆ ಘಟನೆಯ ನೆರಳಿನಲ್ಲಿ ಬೆಳೆದ ಕುಟುಂಬಕ್ಕೆ ಅದು ಎಂದಿಗೂ ಒಣಗದ ಹಸಿ ಗಾಯ. 1966ರ ಆ ಜನವರಿಯ ಕೊರೆವ ಚಳಿಯ ರಾತ್ರಿ, ರಷ್ಯಾದ ಆತಿಥ್ಯದಲ್ಲಿ ನಡೆದ ಮಾತುಕತೆಗಳ ನಡುವೆ, ಭಾರತದ ನಾಯಕನೊಬ್ಬ ತನ್ನ ಎದೆಯ ನೋವನ್ನು ಯಾರಲ್ಲೂ ಹೇಳಿಕೊಳ್ಳದೇ ಮೌನವಾಗಿ ಕಣ್ಮುಚ್ಚಿದ ಆ ಕ್ಷಣ, ದಶಕಗಳು ಕಳೆದರೂ ಇಂದಿಗೂ ಇವರ ಕಣ್ಣು ಗಳಲ್ಲಿ ಹನಿಯಾಗಿ ಇಳಿಯುತ್ತಲೇ ಇತ್ತು.

ನಾಲ್ಕು ದಿನಗಳ ಆ ಒಡನಾಟದಲ್ಲಿ ಸುನೀಲ್ ಶಾಸ್ತ್ರಿ ತಮ್ಮ ತಂದೆಯ ರಾಜಕೀಯ ತಂತ್ರಗಾರಿಕೆ ಗಿಂತ ಅವರ ಮನೆಯೊಳಗಿನ ಮೌನವನ್ನು, ಸರಳತೆಯನ್ನು ಹೆಚ್ಚು ನೆನಪಿಸಿಕೊಂಡರು. ಹರಿದ ಕುರ್ತಾವನ್ನು ತಾವೇ ಹೊಲಿದುಕೊಳ್ಳುತ್ತಿದ್ದ ಆ ಪ್ರಧಾನಿ, ಮಕ್ಕಳ ಜತೆ ಅಂಗಳದಲ್ಲಿ ಆಡುತ್ತಿದ್ದ ಆ ಮನುಷ್ಯ, ಅಽಕಾರದ ಯಾವುದೇ ಅಹಂ ಇಲ್ಲದೇ ಬದುಕಿದ ಆ ಋಷಿತುಲ್ಯ ವ್ಯಕ್ತಿತ್ವದ ಸಣ್ಣ ಸಣ್ಣ ಚೂರುಗಳನ್ನು ಅವರು ಜೋಡಿಸಿಡುತ್ತಿದ್ದರು.

ನಾನು ಆ ಕಥೆಗಳನ್ನು ಕೇಳುತ್ತಾ, ಇತಿಹಾಸದ ಪುಸ್ತಕಗಳು ದಾಖಲಿಸದ ‘ಭಾರತ ಕಂಡ ಆ ಅಪರೂಪದ ನಾಯಕ’ನನ್ನು ಕಲ್ಪಿಸಿಕೊಳ್ಳುತ್ತಿದ್ದೆ. ವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸಭೆಯನ್ನುದ್ದೇಶಿಸಿ ಮಾತಾಡುತ್ತಾ, ‘ಭಟ್ ಜೀ, ನಾನು ನನ್ನ ತಂದೆಯವರ ಬಗ್ಗೆ ಬರೆದ ಪುಸ್ತಕವೊಂದಿದೆ. ಅದನ್ನು ನೀವು ಕನ್ನಡಕ್ಕೆ ಅನುವಾದಿಸುತ್ತೇನೆ ಎಂದು ಹೇಳಿದ್ದಿರಿ. ಇದು ನನ್ನ ಆಸೆ ಮಾತ್ರವಲ್ಲ, ನಿಮ್ಮ ಮೇಲಿರುವ ಹಕ್ಕು. ಈ ಆಸೆಯನ್ನು ನೀವು ಈಡೇರಿಸಿಕೊಡಲೇಬೇಕು.

ಶಾಸ್ತ್ರಿಯವರಿಗೆ ಕರ್ನಾಟಕ ಅಂದ್ರೆ ವಿಶೇಷ ಅಭಿಮಾನವಿತ್ತು. ನೀವು ಈ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸುವ ಮೂಲಕ ನಾನು ಬರೆದ ಪುಸ್ತಕವನ್ನು ಕನ್ನಡಿಗರಿಗೆ ತಲುಪಿಸಬೇಕು’ ಎಂದು ಅತ್ಯಂತ ಆಗ್ರಹಪೂರ್ವಕವಾಗಿ, ಪ್ರೀತಿಯಿಂದ ಒತ್ತಾಯಿಸಿದರು. ಆ ಮಾತು ನನ್ನೊಳಗೆ ಯಾವುದೋ ತಂತಿಯನ್ನು ಮೀಟಿದಂತಾಯಿತು. ಭಾಷಾಂತರ ಎನ್ನುವುದು ಕೇವಲ ಒಂದು ಭಾಷೆಯ ಶಬ್ದಗಳನ್ನು ಇನ್ನೊಂದು ಭಾಷೆಗೆ ಜೋಡಿಸುವುದಲ್ಲ; ಅದು ಒಂದು ಜೀವದ ಸಂವೇದನೆಯನ್ನು, ನೋವನ್ನು, ಪ್ರೀತಿಯನ್ನು ಇನ್ನೊಂದು ಮಣ್ಣಿಗೆ ತಂದು ನೆಡುವ ಕೆಲಸ.

ಕನ್ನಡಿಗರಿಗೆ ಶಾಸ್ತ್ರೀಜಿಯವರ ಬಗ್ಗೆ ಅಪಾರವಾದ ಪ್ರೀತಿಯಿದೆ. ಆ ಪ್ರೀತಿಯ ಮಣ್ಣಿಗೆ ಅವರ ಮಗನ ಒಡಲಾಳದ ನೆನಪುಗಳನ್ನು ತಲುಪಿಸುವ ಹೊಣೆಗಾರಿಕೆಯನ್ನು ಅವರು ನನ್ನ ಹೆಗಲ ಮೇಲೆ ಇಡುತ್ತಿದ್ದರು. ಅವರ ಮಾತಿನಲ್ಲಿದ್ದ ಆ ಪ್ರಾಮಾಣಿಕ ಕಳಕಳಿಯ ಒತ್ತಾಸೆ ನನ್ನಲ್ಲಿ ಯಾವುದೇ ಉತ್ತರವನ್ನೂ ಉಳಿಸ ಲಿಲ್ಲ. ನಾನದನ್ನು ಮೌನವಾಗಿಯೇ ತಲೆದೂಗಿ ಒಪ್ಪಿಕೊಂಡೆ. ಯಾವುದೋ ಹಳೆಯ ಋಣ ನಮ್ಮನ್ನು ಹೀಗೆ ಅನಿರೀಕ್ಷಿತವಾಗಿ ಬೆಸೆಯುತ್ತದೆ.

ತಾಷ್ಕೆಂಟ್‌ನಂಥ ದೂರದ ನೆಲದಲ್ಲಿ, ಇತಿಹಾಸದ ಕಹಿ ನೆನಪೊಂದು ಕರಗಿ ಹೀಗೆ ಅಕ್ಷರದ, ಸ್ನೇಹದ ಸಿಹಿಯಾಗಿ ಬದಲಾಗುವುದು ಬದುಕಿನ ಸೋಜಿಗಗಳಂದು. ಆ ನಾಲ್ಕು ದಿನಗಳಲ್ಲಿ ನಾವು ಕೇವಲ ಪ್ರವಾಸಿಗರಾಗಿರಲಿಲ್ಲ, ಕಾಲದ ನದಿಯಂಚಿನಲ್ಲಿ ನಿಂತು ಪರಸ್ಪರರ ಎದೆಯ ಬಡಿತವನ್ನು ಆಲಿಸಿದ ಆಪ್ತರಾಗಿದ್ದೆವು.

ಸುನೀಲ್ ಶಾಸ್ತ್ರಿ ಅವರ ಪತ್ನಿ ಕೂಡ ಆ ಮೌನದ ಎಲ್ಲವನ್ನೂ ಹಂಚಿಕೊಳ್ಳುತ್ತಿದ್ದರು. ಹೆಣ್ಣು ಮಕ್ಕಳ ಸಹನೆ ಮತ್ತು ಸಾಂತ್ವನ ಇಡೀ ವಾತಾವರಣಕ್ಕೆ ಒಂದು ಹಿರಿಯಕ್ಕನ ಅಕ್ಕರೆಯ ಲೇಪವನ್ನು ಕೊಡುತ್ತಿತ್ತು. ಅಲ್ಲಿಂದ ಹೊರಡುವ ಮುನ್ನ ಮತ್ತೊಮ್ಮೆ ಆ ಸ್ಮಾರಕದತ್ತ ಕಣ್ಣು ಹಾಯಿಸಿದೆ. ಮಧ್ಯಾಹ್ನದ ಬಿಸಿಲಿನಲ್ಲಿ ಆ ಕಲ್ಲಿನ ಪ್ರತಿಮೆ ಇನ್ನಷ್ಟು ಗಂಭೀರವಾಗಿ, ಆದರೆ ಅಷ್ಟೇ ಕರುಣಾಮ ಯಿಯಾಗಿ ಕಾಣುತ್ತಿತ್ತು. ನಗರದ ಟ್ರಾಫಿಕ್‌ನ ಗದ್ದಲಗಳು, ರಸ್ತೆಯಂಚಿನ ಜನರ ಓಡಾಟ-ಯಾವುದೂ ಆ ಶಿಲೆಯ ಒಳಗಿರುವ ಆಳವಾದ ಪ್ರಶಾಂತತೆಯನ್ನು ಅಲುಗಾಡಿಸಲು ಸಾಧ್ಯ ವಿರಲಿಲ್ಲ. ಆ ಮನುಷ್ಯ ಬದುಕಿದ್ದಾಗಲೂ ಹೀಗೇ ಇದ್ದಿರಬೇಕು.

ಜಗತ್ತಿನ ಎಲ್ಲ ಗದ್ದಲಗಳ ನಡುವೆಯೂ ತನ್ನೊಳಗಿನ ಅಹಿಂಸೆಯ, ಶಾಂತಿಯ ಕೇಂದ್ರವನ್ನು ಬಿಟ್ಟು ಕೊಡದ ಸ್ಥಿತಪ್ರಜ್ಞ. ವಿಮಾನ ನಿಲ್ದಾಣದಲ್ಲಿ ಬೀಳ್ಕೊಳ್ಳುವಾಗ ಸುನೀಲ್ ಜೀ ನನ್ನನ್ನು ತಬ್ಬಿ ಕೊಂಡರು. ಆ ಆಲಿಂಗನದಲ್ಲಿ ಕೃತಜ್ಞತೆಗಿಂತ ಹೆಚ್ಚಾಗಿ, ಕಳೆದುಕೊಂಡದ್ದನ್ನು ಎಲ್ಲಾ ಸ್ವಲ್ಪ ಮಟ್ಟಿಗೆ ಮರಳಿ ಪಡೆದ ಸಮಾಧಾನವಿತ್ತು.

‘ನಾವು ಮತ್ತೆ ಸಿಗುತ್ತೇವೆ ಭಟ್ ಜೀ, ಪುಸ್ತಕದ ಹಸ್ತಪ್ರತಿಯೊಂದಿಗೆ’ ಎಂದು ಅವರು ನಕ್ಕಾಗ, ಅವರ ಕಣ್ಣುಗಳಲ್ಲಿದ್ದ ಹಳೆಯ ಮಬ್ಬು ಕರಗಿ ಒಂದು ಸಣ್ಣ ಬೆಳಕು ಮೂಡಿತ್ತು. ಲಾಲ್ ಬಹದ್ದೂರ್ ಶಾಸಿಯವರು ತಾಷ್ಕೆಂಟ್ ಘೋಷಣೆಗೆ ಸಹಿ ಹಾಕಿದಂತೆ, ನಾನೂ ಕೂಡ, ‘ಆ ಪುಸ್ತಕವನ್ನು ಕನ್ನಡದಲ್ಲಿ ಆದಷ್ಟು ಶೀಘ್ರ ಬರೆದು ಪ್ರಕಟಿಸುವ ಘೋಷಣೆಗೆ ಸಹಿ’ ಹಾಕಿದೆ!

ಸುನೀಲ್ ಶಾಸ್ತ್ರಿಯವರು ನನ್ನ ಕೈಗಿತ್ತ ಆ ಪುಸ್ತಕದ ಹೊಣೆಗಾರಿಕೆ ಕೇವಲ ಕಾಗದದ ಹಾಳೆಗಳ ಭಾಷಾಂತರ ವಲ್ಲ. ಅದು ಒಬ್ಬ ಮಗ ತನ್ನ ತಂದೆಯ ನೆನಪಿಗೆ ಕಟ್ಟುತ್ತಿರುವ ಅಕ್ಷರದ ಸ್ಮಾರಕ. ತಾಷ್ಕೆಂಟಿನ ಆ ಶಿಲೆಯ ಪ್ರತಿಮೆಗಿಂತಲೂ ಜೀವಂತವಾದ, ಕನ್ನಡಿಗರ ಮನೆ-ಮನಗಳನ್ನು ತಲುಪಬಲ್ಲ ಭಾವನಾತ್ಮಕ ಸೇತುವೆ. ಆ ನಾಲ್ಕು ದಿನಗಳ ಒಡನಾಟ ನನ್ನೊಳಗೆ ಮನುಷ್ಯ ಸಂಬಂಧಗಳ ಹೊಸದೊಂದು ಬಾಗಿಲನ್ನು ತೆರೆದಿತ್ತು.

ಇತಿಹಾಸದ ಗರ್ಭದಲ್ಲಿ ಹುದುಗಿಹೋದ ದುರಂತವೊಂದು ಹೀಗೆ ಅನಿರೀಕ್ಷಿತವಾಗಿ ಅಕ್ಕರೆಯಾಗಿ, ಸ್ನೇಹವಾಗಿ, ಅಕ್ಷರದ ಋಣವಾಗಿ ನಮ್ಮಿಬ್ಬರನ್ನು ಬೆಸೆದುಬಿಡುತ್ತದೆ ಎಂದು ನಾನೆಂದೂ ಊಹಿಸಿರ ಲಿಲ್ಲ. ಮಣ್ಣಿನ ಮೇಲಿನ ಹೆಜ್ಜೆಗಳು ಅಳಿಸಿಹೋಗಬಹುದು, ಆದರೆ ಎದೆಯಾಳದಲ್ಲಿ ಬಿದ್ದ ಇಂಥ ಮೌನದ ಗೆರೆಗಳು ಎಂದಿಗೂ ಅಳಿಸುವುದಿಲ್ಲ. ವಿಮಾನದ ಕಿಟಕಿಯಿಂದ ಕೆಳಗೆ ನೋಡಿದಾಗ ತಾಷ್ಕೆಂಟ್ ನಗರ ಸಣ್ಣದಾಗಿ, ಕ್ರಮೇಣ ಮೋಡಗಳ ಮರೆಯಲ್ಲಿ ಮರೆಯಾಗುತ್ತಿತ್ತು. ಆದರೆ ಮನಸ್ಸಿನೊಳಗೆ ಆ ನಗರ ಶಾಶ್ವತವಾಗಿ ಅಚ್ಚೊತ್ತಿಹೋಗಿತ್ತು.

ಕೇವಲ ಕದನ ವಿರಾಮದ ಒಪ್ಪಂದದ ಜಾಗವಾಗಿ ಅಲ್ಲ; ಒಬ್ಬ ಮಗನ ಅಸಹಾಯಕ ಪ್ರೀತಿಯ, ಕಳೆದುಹೋದ ಅಪ್ಪನ ಹುಡುಕಾಟದ ಮತ್ತು ಇಬ್ಬರು ಮನುಷ್ಯರ ನಡುವೆ ಅಕ್ಷರದ ಮೂಲಕ ಹುಟ್ಟಿಕೊಂಡ ಹೊಸತೊಂದು ಕರುಳಬಳ್ಳಿಯ ಸಾಕ್ಷಿಯಾಗಿ. ಈ ಭೇಟಿ ನನ್ನ ಪಾಲಿಗೆ ಕೇವಲ ಒಂದು ಪ್ರವಾಸವಾಗಿರಲಿಲ್ಲ, ಬದುಕಿನ ಅತ್ಯಂತ ಆರ್ದ್ರವಾದ, ಹೃದಯಸ್ಪರ್ಶಿ ಅನುಭವವಾಗಿ ಎದೆಯ ಮೂಲೆಯಲ್ಲಿ ಶಾಶ್ವತವಾಗಿ ಉಳಿದುಹೋಯಿತು.

ವಿಶ್ವೇಶ್ವರ ಭಟ್‌

View all posts by this author