ಕಾನೂನ್ ಸೆನ್ಸ್
ತಿಮ್ಮಣ್ಣ ಭಾಗವತ್
ಸತ್ಯಾಗ್ರಹ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಮೂಲ ಮಂತ್ರವಾಗಿತ್ತು. ಹಿಂಸೆ, ಕೂಗಾಟ, ಅವಹೇಳನ, ಮೆರವಣಿಗೆ, ಕಲ್ಲು ತೂರಾಟ, ಬೆಂಕಿ ಹಚ್ಚುವದು ಇಂಥದ್ದೇನೂ ಇಲ್ಲದ ಪ್ರತಿಭಟನೆ ಎನ್ನುವದೇ ಜಗತ್ತು ಅದುವರೆಗೆ ಕೇಳಿರದ ವಿಶಿಷ್ಟವಾದ ಪದ್ಧತಿ. ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ನಡೆದ ದಮನಕಾರಿ ನೀತಿಯೇ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂವಿಧಾನದಲ್ಲಿ ಅಷ್ಟೊಂದು ಪ್ರಾಮುಖ್ಯ ದೊರಕಲು ಕಾರಣ ವಾಗಿರಬೇಕು. ಸಂವಿಧಾನದ 19(1)ಎ ಮತ್ತು 19(1)ಬಿ ಅನುಕ್ರಮ ವಾಗಿ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಶಾಂತಿಯುತವಾಗಿ ಆಯುಧಗಳಿಲ್ಲದೆ ಸಭೆ ಸೇರುವ ( Unarmed Peaceful Assembly) ಸ್ವಾತಂತ್ರ್ಯವನ್ನು ಒದಗಿಸುತ್ತವೆ.
ಆದರೆ ಅಭಿವ್ಯಕ್ತಿ ಸ್ವಾತಂತ್ರ್ಯ ಸೇರಿದಂತೆ ಯಾವ ಮೂಲಭೂತ ಹಕ್ಕುಗಳೂ ಅನಿಯಮಿತವಲ್ಲ. 19 (2) ವಿಧಿಯ ಪ್ರಕಾರ ದೇಶದ ಸಮಗ್ರತೆ, ಆಂತರಿಕ ಭದ್ರತೆ ಹಾಗೂ ಸಾರ್ವಜನಿಕ ಶಾಂತಿಗಳಿಗೆ ಧಕ್ಕೆಯಾಗುವ ಸಂದರ್ಭಗಳಲ್ಲಿ ಅವುಗಳ ಮೇಲೆ ಸಮಂಜಸವಾದ ನಿರ್ಬಂಧ ಹೇರುವ ಅಧಿಕಾರ ಆಡಳಿತ ಯಂತ್ರಕ್ಕೆ ಇದೆ. ಸ್ವಾತಂತ್ರ್ಯವೆಂದರೆ ಸ್ವೇಚ್ಛಾಚಾರವಲ್ಲವೆಂಬುದು ಇದರ ಅರ್ಥ.
ನೀಟ್ ಪ್ರಶ್ನೆ ಪತ್ರಿಕೆ ಲೀಕ್ ವಿಷಯದಲ್ಲಿ ಇತ್ತೀಚೆಗೆ ನಡೆದ ಆಂದೋಲನ ಸಾಮಾಜಿಕ ಮಾಧ್ಯಮ ದಲ್ಲಿ ಪೋಸ್ಟ್‌ಗಳನ್ನು ಹಾಕುವ ಮೂಲಕ ಆರಂಭವಾದರೂ ಅದು ಪ್ರತಿಭಟನೆಯ ಸ್ವರೂಪ ಪಡೆದದ್ದು ಸೋನಮ್ ವಾಂಗ್‌ಚುಕ್ ಅವರು ಉಪವಾಸ ಸತ್ಯಾಗ್ರಹ ಆರಂಭಿಸಿದಾಗ. ಉಪವಾಸ ದಿಂದ ಆರೋಗ್ಯ ಕ್ಷೀಣಿಸಿದ್ದರಿಂದ ದೆಹಲಿ ಹೈಕೋರ್ಟಿನ ಆದೇಶ ಮತ್ತು ವೈದ್ಯರ ಸಲಹೆಯ ಮೇರೆಗೆ ಪೊಲೀಸರು ಅವರನ್ನು ಒತ್ತಾಯಪೂರ್ವಕವಾಗಿ ಆಸ್ಪತ್ರೆಗೆ ಸೇರಿಸಿದರು.
ಇದನ್ನೂ ಓದಿ: Thimmanna Bhagwat Column: ವೈದ್ಯ ವೃತ್ತಿಯ ನೀತಿ ಸಂಹಿತೆ ಕೇವಲ ಕಾಗದದ ತುಂಡಾ?
ಪೊಲೀಸರ ಈ ಕ್ರಮವನ್ನು ವಾಂಗ್‌ಚುಕ್‌ರ ಪತ್ನಿ ಸೇರಿದಂತೆ ಅನೇಕರು ಟೀಕಿಸಿದರು. ಅದು ಅವರ ಮೂಲಭೂತ ಹಕ್ಕಿನ ಉಲ್ಲಂಘನೆ ಎಂಬುದು ಅವರ ವಾದ. ಉಪವಾಸ ಸತ್ಯಾಗ್ರಹಕ್ಕೆ ಸ್ವಾತಂತ್ರ್ಯ ಸಂಗ್ರಾಮದ ಐತಿಹಾಸಿಕ ಹಿನ್ನೆಲೆಯಿದೆ. ಅಲ್ಲದೆ ಆ ಮೂಲಕ ಪ್ರತಿಭಟನೆ ನಡೆಸುವದು ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗವೇ ಆಗುತ್ತದೆ. ಜೈನ ಮುನಿಗಳು ನಡೆಸುವ ಸಲ್ಲೇಖನವನ್ನು ಕ್ರಿಮಿನಲ್ ಅಪರಾಧವೆಂದು ಪರಿಗಣಿಸುವ ರಾಜಸ್ಥಾನ ಹೈಕೋರ್ಟಿನ ಆದೇಶಕ್ಕೆ (ನಿಖಿಲ್ ಸೋನಿ ವರ್ಸಸ್ ಭಾರತ ಸರಕಾರ) ಅದು ಜೈನ ಧರ್ಮ ಅನುಯಾಯಿಗಳ ಧಾರ್ಮಿಕ ಹಕ್ಕು ಎಂಬ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಆದರೆ ಆ ಕುರಿತು ಅಂತಿಮ ಆದೇಶ ಇನ್ನೂ ಬಾಕಿಯಿದೆ.
ರಾಜಕೀಯ ಅಥವಾ ಇನ್ನಿತರ ಸಾಮಾಜಿಕ ಕಾರಣಗಳಿಗಾಗಿ ಆಮರಣಾಂತ ಉಪವಾಸ ಕೈಗೊಳ್ಳುವ ವಿಷಯ ಸಂಕೀರ್ಣವಾದದ್ದು. ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗವೇ ಆಗಿರುವ ಅದನ್ನು ತಡೆಯುವದು ಅಂಥ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂಬ ವಾದವನ್ನು ಪೂರ್ತಿ ಅಲ್ಲಗಳೆಯಲಾಗುವದಿಲ್ಲ. ಆಮರಣಾಂತ ಉಪವಾಸವು ಆತ್ಮಹತ್ಯೆಯ ಪ್ರಯತ್ನ ಎಂಬ ಹಿನ್ನೆಲೆಯಲ್ಲಿ ಅದನ್ನು ಐಪಿಸಿ 309ನೇ ಕಲಮಿನಡಿ ಅಪರಾಧವೆಂದು ಪರಿಗಣಿಸಲಾಗಿತ್ತು (ಮೇಧಾ ಪಾಟ್ಕರ್ ಪ್ರಕರಣ).
ಆದರೆ 2017ರ ಮಾನಸಿಕ ಆರೋಗ್ಯ ಕಾಳಜಿ ಕಾಯಿದೆ ಮತ್ತು ಹೊಸ ಬಿಎನ್‌ಎಸ್ ಕಾಯಿದೆಗಳ ಪ್ರಕಾರ ಆತ್ಮಹತ್ಯೆ ಪ್ರಯತ್ನ ಈಗ ಅಪರಾಧವಲ್ಲ. ಸಂವಿಧಾನದ 21ನೇ ವಿಧಿಯನ್ವಯ ಒದಗುವ ಜೀವನದ ಹಕ್ಕಿನ ಅನ್ವಯ ಉಪವಾಸ ದಿಂದ ಸಾಯದಂತೆ ಅಂಥ ವ್ಯಕ್ತಿಗೆ ಅವನ ಇಚ್ಛೆಯ ವಿರುದ್ಧವಾಗಿಯಾದರೂ ಒತ್ತಾಯಪೂರ್ವಕವಾಗಿ ಆಹಾರ ಅಥವಾ ಜೀವ ರಕ್ಷಕ ಪೋಷಕಾಂಶ ಗಳನ್ನು ನೀಡುವ ಅಧಿಕಾರ ಆಡಳಿತ ಯಂತ್ರಕ್ಕೆ ಇದೆ ಎಂಬ ವಾದವನ್ನು ಹಲವು ಪ್ರಕರಣಗಳಲ್ಲಿ ಮಾಡಲಾಗಿದೆ. ಜಗಜಿತ್ ಸಿಂಗ್ ದಲ್ಲೆವಾಲ್ ಪ್ರಕರಣದಲ್ಲಿ ಅವರನ್ನು ಆಸ್ಪತ್ರೆಗೆ ಸೇರಿಸಬೇಕೆಂಬ ಪಂಜಾಬ್ ಹೈಕೋರ್ಟಿನ ಆದೇಶವನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟು, ಹಾಗೆಂದ ಮಾತ್ರಕ್ಕೆ ಅವರು ತಮ್ಮ ಉಪವಾಸವನ್ನು ಮುರಿಯಬೇಕೆಂಬ ಅರ್ಥವಲ್ಲ.
ಇನ್ನೊಬ್ಬರಿಗೆ ತೊಂದರೆ ಯಾಗದಂತೆ ಉಪವಾಸ ಮಾಡುವ ಮೂಲಕ ಪ್ರತಿಭಟಿಸುವ ಹಕ್ಕು ಕಾನೂನುಬಾಹಿರವಲ್ಲ. ಇಂಥ ವಿಷಯದಲ್ಲಿ ಸರಕಾರ ಅತ್ಯಂತ ಸಂಯಮ ಮತ್ತು ಕಾಳಜಿಯಿಂದ ವ್ಯವಹರಿಸಬೇಕು ಎಂದು ಹೇಳಿತು. ಇಂಥದ್ದೇ ಆದೇಶಗಳನ್ನು ತ್ಯಾಗರಾಜನ್ ವರ್ಸಸ್ ಚೆನ್ನೆ ಪೊಲೀಸ್ ಕಮಿಶನರ್, ರಾಮಲೀಲಾ ಮೈದಾನ್ ಪ್ರಕರಣಗಳಲ್ಲೂ ನೀಡಲಾಗಿದೆ. ಆದರೆ ಖ್ಯಾತ ನಾಮರ ಆಮರಣಾಂತ ಉಪವಾಸದಿಂದ ಅವರ ಜೀವಕ್ಕೆ ಅಪಾಯವಾದರೆ ಅದರಿಂದ ಸಾರ್ವಜನಿಕ ಅಶಾಂತಿ ಮತ್ತು ಅತೀವ ಕಾಯಿದೆ ಸುವ್ಯವಸ್ಥೆಯ ಸಮಸ್ಯೆಗಳು ತಲೆದೋರಬಹುದು.
ದೇಶಾದ್ಯಂತ ದಂಗೆ, ಗಲಭೆ ಆಗಬಹುದು ಎಂಬ ಸಾಧ್ಯತೆ ಕಂಡು ಬಂದಾಗ ಮುನ್ನೆಚ್ಚರಿಕಾ ಕ್ರಮ ವಾಗಿ ಸರಕಾರ ಅಂಥವರನ್ನು ಆಸ್ಪತ್ರೆಗೆ ಸೇರಿಸುವ ಮೂಲಕ ಅವರ ಜೀವ ರಕ್ಷಣೆಗೆ ಮುಂದಾ ಗಬೇಕಾಗುತ್ತದೆ. ಇದು ಆಂತರಿಕ ಭದ್ರತೆಯ ದೃಷ್ಟಿಯಿಂದ ಕೂಡಾ ಅಗತ್ಯ. ಈ ಹಿನ್ನೆಲೆಯಲ್ಲಿ ಕೂಡಾ ವಾಂಗ್‌ಚುಕ್‌ರ ವಿಷಯದಲ್ಲಿ ಪೊಲೀಸರ ನಡೆ ಸಮರ್ಥನೀಯವೆನಿಸುತ್ತದೆ. ಈ ಹಿಂದೆ ಬಾಬಾ ರಾಮದೇವ್ ಅವರ ಉಪವಾಸದ ಸಂದರ್ಭದಲ್ಲಿ ಕೂಡಾ ಪೋಲೀಸರು ಅವರನ್ನು ಒತ್ತಾಯಪೂರ್ವಕವಾಗಿ ಆಸ್ಪತ್ರೆಗೆ ಸೇರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಶಾಂತಿಯುತ ಪ್ರತಿಭಟನೆ ನಡೆಸುವ ಹಕ್ಕಿನ ಕುರಿತು ಅನೇಕ ಪ್ರಕರಣ ಗಳು ನಡೆದಿವೆ ಮತ್ತು ಈ ಕುರಿತು ಸುಪ್ರೀಂ ಕೋರ್ಟು ಮತ್ತು ವಿವಿಧ ಹೈಕೋರ್ಟುಗಳು ಸಮಗ್ರ ಅವಲೋಕನ ಗಳನ್ನು ಮಾಡಿವೆ. ಜಂತರ್ ಮಂತರ್‌ನಲ್ಲಿ ವಿವಿಧ ಸಂಘಟನೆಗಳು ಮತ್ತು ವ್ಯಕ್ತಿಗಳು ವರ್ಷವಿಡೀ ನಡೆಸುವ ಧರಣಿ ಮತ್ತು ಪ್ರತಿಭಟನೆಗಳಿಂದ ಅಲ್ಲಿ ಸುತ್ತ ಮುತ್ತ ಇರುವ ಲೋಕಸಭಾ ಸದಸ್ಯರು ಮತ್ತು ಇತರ ನಿವಾಸಿಗಳಿಗೆ ದಿನನಿತ್ಯ ಅಗುತ್ತಿರುವ ಕಿರಿಕಿರಿ, ಶಬ್ದ ಮತ್ತು ಪರಿಸರ ಮಾಲಿನ್ಯ ಮತ್ತು ಆರೋಗ್ಯ ಸಮಸ್ಯೆಗಳ ಕುರಿತು ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ರಾಷ್ಟ್ರೀಯ ಹಸಿರು ಟ್ರಿಬ್ಯುನಲ್ (ಎನ್‌ಜಿಟಿ) ಅಲ್ಲಿ ಯಾವುದೇ ಪ್ರತಿಭಟನೆ ನಡೆಸಕೂಡದೆಂದು 2018ರಲ್ಲಿ ಆದೇಶ ನೀಡಿತ್ತು.
ಇದೇ ಸಮಯದಲ್ಲಿ ಜಂತರ್ ಮಂತರ್ ಪ್ರದೇಶವು ಸಂಸದ್ ಭವನ, ನಾರ್ಥ್ ಮತ್ತು ಸೌತ್ ಬ್ಲಾಕ್, ಸೆಂಟ್ರಲ್ ವಿಸ್ಟಾ ಮುಂತಾದ ಪ್ರಮುಖ ಕೇಂದ್ರಗಳನ್ನು ಹೊಂದಿರುವದರಿಂದ ಈ ಸೂಕ್ಷ್ಮ ಪ್ರದೇಶ ಗಳ ಮತ್ತು ಅಲ್ಲಿನ ನಿವಾಸಿಗಳ ಸುರಕ್ಷತೆ ಹಾಗೂ ಸಾರ್ವಜನಿಕ ಶಾಂತಿಯನ್ನು ಕಾಪಾಡುವ ಹಿನ್ನೆಲೆಯಲ್ಲಿ ಅಲ್ಲಿ ಯಾವದೇ ಪ್ರತಿಭಟನೆಯನ್ನು ನಡೆಸುವುದರ ವಿರುದ್ಧ ಸಿಆರ್‌ಪಿಸಿಯ 144ನೇ ಕಲಮಿನ ಅಡಿ ಪ್ರತಿಬಂಧಕ ಆಜ್ಞೆಯನ್ನು ದಿಲ್ಲಿ ಜಿಲ್ಲೆಯ ಅಸಿಸ್ಟಂಟ್ ಪೊಲೀಸ್ ಕಮಿಶನರ್ ಹೊರಡಿಸಿದ್ದರು.
ಈ ಕುರಿತಾದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟು, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸಂಬಂಧಿತ ವಿಷಯಗಳ ಕುರಿತು ವಿವರವಾದ ಆದೇಶ ನೀಡಿತು. (ಮಜ್ದೂರ್ ಕಿಸಾನ್ ಶಕ್ತಿ ಸಂಘಟನ್ ವರ್ಸಸ್ ಭಾರತ ಸರಕಾರ 2018). ಜಗದ್ಗುರು ಆದಿ ಶಂಕರಾಚಾರ್ಯರ ‘ಯದ್ಯಪಿ ಶುದ್ಧಮ್ ಲೋಕ ವಿರುದ್ಧಂ ನಾಚರಣೀಯಂ ನ ಚ ಕರಣೀಯಂ’ ಎಂಬ ಶ್ಲೋಕವನ್ನು ಉಲ್ಲೇಖಿ ಸಿದ ಕೋರ್ಟು, ಅಭಿವ್ಯಕ್ತಿ ಸ್ವಾತಂತ್ರ್ಯದ ಮಿತಿಯನ್ನು ಸ್ಪಷ್ಟವಾಗಿ ವಿವರಿಸಿದೆ.
ಅಂಥ ಸ್ವಾತಂತ್ರ್ಯಕ್ಕೆ ನಿರ್ಬಂಧ ಹೇರಲು ಇರುವ ಅಧಿಕಾರವನ್ನು ಸೂಕ್ತವಾಗಿ ಬಳಸಿಕೊಂಡು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸುವ್ಯವಸ್ಥೆಯ ನಡುವೆ ಸಮತೋಲನ ಸಾಧಿಸುವ ಮೂಲಕ ಸಮಸ್ಯೆ ಯನ್ನು ಬಗೆಹರಿಸಬೇಕು ಎಂಬ ತಾತ್ಪರ್ಯದ ಆದೇಶವನ್ನು ಸರಕಾರಕ್ಕೆ ನೀಡಿತು.
ಅಮಿತ್ ಸಾಹ್ನಿ ವರ್ಸಸ್ ದಿಲ್ಲಿ ಪೊಲೀಸ್ ಕಮಿಶನರ್ (ಅಕ್ಟೋಬರ್ 2020) ಪ್ರಕರಣದಲ್ಲಿ ನಾಗರಿಕತ್ವ ತಿದ್ದುಪಡಿ ಕಾಯಿದೆ (ಸಿಎಎ, ಎನ್‌ಆರ್‌ಸಿ) ವಿರುದ್ಧ ಕೆಲವರು ನಿರಂತರವಾಗಿ ನಡೆಸುತ್ತಿದ್ದ ಪ್ರತಿಭಟನೆಯಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಕುರಿತಾಗಿನ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ‘ಎಷ್ಟು ಜನ ಬೇಕಾದರೂ ಅವರ ಇಚ್ಛೆಯ ಪ್ರಕಾರ ಎಲ್ಲೆಂದರಲ್ಲಿ ಗುಂಪು ಸೇರಿ ಪ್ರತಿಭಟನೆ ನಡೆಸಬಹುದು ಎಂಬ ವಾದವನ್ನು ಒಪ್ಪಲಾಗುವದಿಲ್ಲ.
ತಾಂತ್ರಿಕತೆಯ ಈ ಯುಗದಲ್ಲಿ ಯಾವುದೇ ವಿಷಯಗಳು ಸೂಕ್ತ ನಾಯಕತ್ವ ಇಲ್ಲದ ದಿಢೀರ್ ಪ್ರತಿಭಟನೆಯಾಗಿ ರೂಪುಗೊಳ್ಳುವ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಅನಿಯಂತ್ರಿತ ಸಂವಹನಗಳನ್ನು ಜಗತ್ತಿನಾದ್ಯಂತ ಹರಡುವ ಮೂಲಕ ರಚನಾತ್ಮಕವಲ್ಲದ ಚರ್ಚೆ ಹಾಗೂ ಕ್ರಿಯೆಗಳಿಗೆ ಕಾರಣವಾಗಬಲ್ಲ ವಾತಾವರಣದಲ್ಲಿ ನಾವಿದ್ದೇವೆ. ಈ ಕಾರಣಕ್ಕೆ ಪ್ರತಿಭಟನೆಗಳಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಆಡಳಿತ ವ್ಯವಸ್ಥೆ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಆದೇಶಿಸಿತ್ತು.
ಜಂತರ್ ಮಂತರ್‌ನಲ್ಲಿ ಇತ್ತೀಚೆಗೆ ನಡೆದ ಕಾಕ್ರೋಚ್ ಜನತಾ ಪಕ್ಷದ್ದೆಂದು ಹೇಳಲಾದ ಪ್ರತಿಭಟನೆ ಯ ವಿಷಯದಲ್ಲಿ ಆಡಳಿತಯಂತ್ರ ತೋರಿದ ಸಂಯಮ ನಿಜಕ್ಕೂ ಆಶ್ಚರ್ಯಕರ. ಇಂಥ ಆಂದೋ ಲನಗಳನ್ನು ಸಂಘಟಿಸುವವರಿಗೆ ಯಾವದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳುವ ಜವಾಬ್ದಾರಿ ಇರುತ್ತದೆ. ಅವರು ಪೊಲೀಸರಿಗೆ ಆ ಕುರಿತು ಲಿಖಿತ ಭರವಸೆ ನೀಡಬೇಕಾಗುತ್ತದೆ. ಆದರೆ ಅವರ ವಿಚಾರ ಶೈಲಿಯೇ ಬೇರೆಯಿತ್ತು.
ಸಂಸತ್ ಚಲೋ ನಡೆದಾಗ ಅನೇಕ ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಗಳೂ ಸೇರಿ ಸಾವಿರಗಟ್ಟಲೆ ಜನರಿದ್ದ ಪ್ರತಿಭಟನಾ ಮೆರವಣಿಗೆ ಸಂಸತ್ ಭವನದಿಂದ ಕೇವಲ 100 ಮೀಟರ್‌ಗಿಂತ ಕಡಿಮೆ ದೂರದವ ರೆಗೂ ಸಾಗಿತ್ತು ಎಂಬ ಅಂಶ ನಿಜವಾದರೆ ಅದು ದೇಶದ ಭದ್ರತೆಯ ದೃಷ್ಟಿಯಿಂದ ಬಹುದೊಡ್ಡ ಅಪಾಯ ವಾಗಬಹುದಿತ್ತು ಎಂಬುದು ಸ್ಪಷ್ಟ.
ಆದರೆ ಸರಕಾರಕ್ಕೆ ಅಂಥ ಎಲ್ಲ ಸಂಭಾವ್ಯ ಘಟನೆಗಳನ್ನು ನಿಭಾಯಿಸುವ ಗುರುತರ ಜವಾಬ್ದಾರಿ ಯಿತ್ತು. ಗೊಂದಲಗಳಿಂದ ಕೂಡಿದ ಈ ಪ್ರಹಸನದಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದರೂ ಅನೇಕ ವಿದ್ಯಾರ್ಥಿಗಳ ಹಾಗೂ ಪ್ರತಿಭಟನಾಕಾರರ ಜೀವಕ್ಕೆ ಅಪಾಯವಾಗುವದರ ಜೊತೆಗೆ ಸಾರ್ವಜನಿಕ ಆಸ್ತಿ ಪಾಸ್ತಿಗಳು, ಸಂಸತ್‌ನಂಥ ಪ್ರಮುಖ ಕಟ್ಟಡಗಳು ಅದರಲ್ಲಿರುವ ಜನಪ್ರತಿನಿಧಿಗಳ ಭದ್ರತೆ ಯಂಥ ಸೂಕ್ಷ್ಮ ವಿಷಯಗಳ ಪ್ರಶ್ನೆಗಳಿದ್ದವು. ಬಹುಶಃ ಅಂಥ ಹಿಂಸೆ, ಜೀವಹಾನಿ ಮತ್ತು ಆಸ್ತಿ ಪಾಸ್ತಿಗಳ ಹಾನಿಯನ್ನು ತಪ್ಪಿಸುವ ಸಲುವಾಗಿಯೇ ಎಲ್ಲಾ ಪ್ರತಿಷ್ಟೆಯನ್ನು ಬದಿಗಿರಿಸಿ ಪ್ರತಿಭಟನಾ ಕಾರರ ಜೊತೆ ಮಾತುಕತೆ ನಡೆಸಿ ಅವರ ಬೇಡಿಕೆಗಳನ್ನೆಲ್ಲವನ್ನೂ ಒಪ್ಪುವ ಅನಿವಾರ್ಯತೆ ಸರಕಾರಕ್ಕೆ ಬಂತು.
ಆದರೆ ಇದರಿಂದ ದೊಡ್ಡ ಸಂಖ್ಯೆಯ ಮತದಾರರಾಗಿರುವ ವಿದ್ಯಾರ್ಥಿಗಳು ಮತ್ತು ಜೆನ್-ಜಿಗಳ ಹೆಸರಿನಲ್ಲಿ ನಡೆಸಬಹುದಾದ ಆಂದೋಲನಗಳಿಗೆ ಸರಕಾರ ಮಣಿಯುತ್ತದೆ ಎಂಬ ತಪ್ಪು ಸಂದೇಶ ರವಾನೆಯಾಗುವ ಸಾಧ್ಯತೆ ಖಂಡಿತ ಇದೆ. ಈ ಒಪ್ಪಂದ, ವಿಮಾನ ಅಪಹರಣದಂಥ ಸಂದರ್ಭ ಗಳಲ್ಲಿ ಒತ್ತೆಯಾಳುಗಳ ರಕ್ಷಣೆಗಾಗಿ ನೀಡುವ ಬಿಡುಗಡೆ (Ransom) ರಕಮಿನಂತಿದೆ.
ಸರಕಾರವೇ ಒತ್ತೆಯಾಳಾಗಿತ್ತು ಎಂದು ಕೂಡಾ ಕೆಲವರು ಠೀಕಿಸಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ದಿಢೀರನೆ ಬೆಳಕಿಗೆ ಬಂದ ಕೇವಲ ಬೆರಳೆಣಿಕೆಯ ಮುಂದಾಳುಗಳನ್ನು ನಿಯಂತ್ರಿಸದಷ್ಟು ದೇಶದ ಗುಪ್ತಚರ ಮತ್ತು ಸುರಕ್ಷಾ ವ್ಯವಸ್ಥೆಗಳು ದುರ್ಬಲವೆ? ಬಾಂಗ್ಲಾ, ನೇಪಾಳಗಳಲ್ಲಾದದ್ದು ಭಾರತದಲ್ಲೂ ಆಗಬಹುದೇ? ಎಂಬೆಲ್ಲ ಪ್ರಶ್ನೆಗಳಿಗೆ ಕಾಲವೇ ಉತ್ತರಿಸಬೇಕು. ಈ ಘಟನಾವಳಿಗಳ ಕುರಿತು ಸೂಕ್ತ ಕ್ರಮಗಳನ್ನು ಇನ್ನು ಮುಂದಾದರೂ ಕೈಗೊಳ್ಳಬೇಕು.
ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳ ಸೋಗಿನಲ್ಲಿ ಸೇರಿಕೊಂಡು ಕ್ರಿಮಿನಲ್ ಅಪರಾಧ ನಡೆಸಿದವರಿಗೆ ಸೂಕ್ತ ಶಿಕ್ಷೆಯಾಗಬೇಕು. ಆಂತರಿಕ ಗಲಭೆಗಳಿಗೆ ಕಾರಣವಾಗಬಹುದಾದ ದೇಶ ವಿರೋಧಿ, ಧರ್ಮಾ ಧಾರಿತ ದೂಷಣೆ, ಘೋಷಣೆಗಳನ್ನು ಕೂಗಿದವರು ಹಾಗೂ ದೇಶದ ಪ್ರಧಾನಿಗಳು ಸೇರಿದಂತೆ ಪ್ರಮುಖ ಅಧಿಕಾರಸ್ಥರ ವಿರುದ್ಧ ಅಶ್ಲೀಲ, ಅಸಂವಿಧಾನಿಕ ಘೋಷಣೆಗಳನ್ನು ಕೂಗಿ ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಂದರಲ್ಲಿ ಹರಿಯ ಬಿಟ್ಟವರೆಲ್ಲ ಸೂಕ್ತ ಕಾನೂನು ಕ್ರಮಕ್ಕೆ ಬಾಧ್ಯಸ್ಥರು.
ಮನೆಗೆ ಬೆಂಕಿ ಬಿದ್ದಾಗ ಚಳಿ ಕಾಯಿಸುವ ಚಾಳಿಯುಳ್ಳ ವಿರೋಧ ಪಕ್ಷಗಳು ಬೆಂಕಿ ಬಿದ್ದದ್ದು ನಮ್ಮ ಮನೆಗೇನೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರಕಾರಗಳ ಅಳಿವು, ಉಳಿವಿಗೆ ಪ್ರಜಾಸತ್ತಾತ್ಮಕ ವ್ಯವಸ್ಥೆಯೇ ಆಧಾರವಾಗಬೇಕು ಹೊರತು ಗಲಾಟೆ, ಗಲಭೆಗಳಲ್ಲ. ಪೊಲೀಸರು ತೋರಿಸಿದ ಸಂಯಮ ನಿಜಕ್ಕೂ ಹೆಚ್ಚಿನದು. ಅನೇಕ ಪೋಲೀಸರಿಗೆ ನೋವು, ಗಾಯಗಳಾಗಿವೆ. ಆದರೆ ಪೊಲೀಸರ ವಿರುದ್ಧವೇ ಕೆಲವರು ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಅತಿಯಾದ ಸಂಯಮ ದೌರ್ಬಲ್ಯವಾಗುತ್ತದೆ. ಅದನ್ನು ಸಮಾಜ ಘಾತುಕರು ದುರುಪಯೋಗ ಪಡಿಸಿಕೊಳ್ಳುತ್ತಾರೆ.