ಶಶಾಂಕಣ
ಇಂದಿನ ‘ಆಧುನಿಕ’ ಯುಗದಲ್ಲಿ, ಅರಣ್ಯಗಳ ವಿಚಾರಕ್ಕೆ ಬಂದಾಗ, ಎಲ್ಲಿ ಕಂಡರೂ ಅರಣ್ಯ ನಾಶ, ಮರಗಳ ನಾಶ, ನೆಡುತೋಪು ನಾಶಗಳೇ ಕಾಣಿಸುತ್ತಿವೆ. ದಟ್ಟವಾದ ಅರಣ್ಯ ವನ್ನು ತೆಳುಮಾಡುವುದು, ತೆಳುವಾದ ಅರಣ್ಯವನ್ನು ಬೋಳು ಮಾಡುವುದು, ಹೊಲ ಗದ್ದೆಗಳ ಅಂಚಿನಲ್ಲಿರುವ ಅರಣ್ಯ ಪ್ರದೇಶವನ್ನು ಸಾಗುವಳಿಗೆ ಒಳಪಡಿಸುವ ಮೂಲಕ ಅಲ್ಲಿನ ಜೀವ ವೈವಿಧ್ಯವನ್ನು ನಾಶಮಾಡುವುದು ಮೊದಲಾದ ಚಟುವಟಿಕೆಗಳು ಬಹಳ ಮಾಮೂಲು ಎನಿಸುವ ಸುದ್ದಿಗಳಾಗಿವೆ.
ನಮ್ಮ ರಾಜ್ಯದ ಸುದ್ದಿಗಳನ್ನೇ ಗಮನಿಸಿದರೆ, ಕೆರೆಗಳ ಸುತ್ತಲಿನ ಬಫರ್ ಜೋನ್ ಅನ್ನು ಸರಕಾರದ ಇಲಾಖೆಗಳೇ ಕಡಿಮೆ ಮಾಡಿ, ಆ ಮೂಲಕ ಕೆರೆಗಳ ಅಂಚಿನಲ್ಲಿ ಬೆಳೆದಿರುವ ಗಿಡ ಮರಗಳು, ಹುಲ್ಲು ಸಸ್ಯಗಳು, ಕುರುಚಲು ಕಾಡನ್ನು ನಾಶ ಮಾಡಲು ಅನುಮತಿ ನೀಡುವ ಕೆಲಸ ನಡೆಯುತ್ತಿದೆ.
ಅತ್ತ, ಪರಿಸರ ಸೂಕ್ಷ್ಮ ಜಾಗ ಎನಿಸಿರುವ, ವಿಶ್ವಪರಂಪರೆಯ ತಾಣದ ಭಾಗವಾಗಿರುವ ಆಗುಂಬೆಯ ಸುತ್ತಲಿರುವ ನಿತ್ಯಹರಿದ್ವರ್ಣ ಕಾಡನ್ನು ನಾಶಮಾಡಲು ಸುರಂಗ ತೋಡುವ ಪ್ರಸ್ತಾಪವನ್ನು ಪಕ್ಷಭೇದವಿಲ್ಲದೇ ರಾಜಕೀಯ ನಾಯಕರು ಬೆಂಬಲಿಸುತ್ತಿರುವಂತೆ ಕಾಣಿಸು ತ್ತಿದೆ.
ಆಗುಂಬೆಯ ಸುತ್ತಲಿನ ದಟ್ಟ ಅರಣ್ಯವನ್ನು ನಾಶ ಮಾಡಿದರೆ, ಮುಂದಿನ ದಶಕಗಳಲ್ಲಿ ಶಿವಮೊಗ್ಗ, ಚಿಕ್ಕಮಗಳೂರು ಪರಿಸರದ ಹಳ್ಳಿಗಳಲ್ಲಿ ಕುಡಿಯುವ ನೀರಿನ ಅಭಾವ ತಲೆದೋರಬಹುದು ಎಂಬ ವಿಚಾರದ ಸ್ಥೂಲ ಅರಿವಿದ್ದರೂ, ಅಲ್ಲಿನ ಅರಣ್ಯ ನಾಶಕ್ಕೆ ಪ್ರಬಲವಾದ ನೆಪಗಳನ್ನು ಮುಂದೊಡ್ಡಿ, ಕೋಟಿಗಟ್ಟಲೆ ಅಂದಾಜು ವೆಚ್ಚದ ‘ಕಾಮಗಾರಿ’ ಗಳನ್ನು ಜಾರಿಗೆ ತರುವ ಪ್ರಯತ್ನ ನಡೆಯುತ್ತಿದೆ.
ಇದನ್ನೂ ಓದಿ: Shashidhara Halady Column: ಬೇಕೆ ಇಂತಹ ವಿನಾಶ! ಹೆದ್ದಾರಿಗಾಗಿ ಕಾಡು ನಾಶ !
ಈಗ ನಮ್ಮಲ್ಲಿ ಉಳಿದುಕೊಂಡಿರುವ ಅರಣ್ಯ, ಹುಲ್ಲುಗಾವಲು, ಕುರುಚಲು ಕಾಡು, ಬೆಟ್ಟಗುಡ್ಡಗಳ ಕಲ್ಲುಬಂಡೆಗಳ ನಡುವಿನ ಪರಿಸರ ಇವುಗಳನ್ನು ರಕ್ಷಿಸುವುದರ ಕುರಿತು ‘ಪಠ್ಯ ಪುಸ್ತಕಗಳಲ್ಲಿ’ ಪಾಠಗಳನ್ನು ಸೇರಿಸುವ ಕೆಲಸವಾಗುತ್ತಿರುವುದು ನಿಜ; ಆದರೆ, ನಿಜಜೀವನದಲ್ಲಿ ನಮ್ಮ ಸುತ್ತಲೂ ಇರುವ ಹಸಿರು ಕವಚ, ಗಿಡ, ಮರ, ಬಳ್ಳಿ, ಕುರುಚಲು ಕಾಡು, ಜೀವವೈವಿಧ್ಯಕ್ಕೆ ಆಸರೆ ನೀಡುವ ತಾಣಗಳ ನಾಶವೇ ಢಾಳಾಗಿ ಕಾಣಿಸುತ್ತಿದೆ.
ಇಂಥ ಸನ್ನಿವೇಶದಲ್ಲಿರುವ ನಾವು, ಒಂದು ಗೊಂಡಾರಣ್ಯಕ್ಕೆ ಮರುಹುಟ್ಟು ನೀಡಿದ ಅಭೂತಪೂರ್ವ ಪ್ರಕ್ರಿಯೆಯನ್ನು ಪುಸ್ತಕಗಳಲ್ಲಿ, ಬರಹಗಳಲ್ಲಿ ಓದುವ ಮೂಲಕ ವಾದರೂ, ತುಸು ಸಮಾಧಾನ ಹೊಂದಬೇಕು ಮತ್ತು ಕೆಲವು ಬಾರಿ ಅಂಥ ಪುನರ್ಜನ್ಮ ಪಡೆದ ಗೊಂಡಾರಣ್ಯಗಳು ನಮ್ಮ ನಾಡಿನ ಅರಣ್ಯಗಳ ರಕ್ಷಣೆಗೆ ಸ್ಪೂರ್ತಿ ತುಂಬಬಲ್ಲವು ಎಂದು ಸದಾಶಯವನ್ನೂ (ಇದು ಅಲ್ಪ ತೃಪ್ತಿ ಎನಿಸಿದರೂ) ಇಟ್ಟುಕೊಳ್ಳಬಹುದು!
ದೂರದ ಆಸ್ಟ್ರೇಲಿಯಾದಲ್ಲಿ ಒಂದು ಗೊಂಡಾರಣ್ಯಕ್ಕೆ ಪುನರ್ಜನ್ಮ ನೀಡಲಾಗಿದೆ. ಪೂರ್ತಿ ನಾಶವಾಗಿದ್ದ ಅಂಥದೊಂದು ಅರಣ್ಯಕ್ಕೆ ಪುನರ್ಜನ್ಮ ನೀಡಿದ್ದು ಒಬ್ಬ ಮಹಿಳೆ ಎಂಬ ವಿಚಾರವೂ ಬೆರಗನ್ನು ಮೂಡಿಸುತ್ತದೆ. ಬೇರೆ ಬೇರೆ ಉದ್ದೇಶಗಳಿಗೆ, ಕೃಷಿಯ ಪ್ರಯತ್ನಗಳಿಗೆ ಒಳಗಾಗಿದ್ದ ಕಾಡಿನ ಭಾಗವು, ಸಂಪೂರ್ಣ ಬರಡು ಸ್ವರೂಪವನ್ನು ಪಡೆದಿದ್ದ ಸಂದರ್ಭ ದಲ್ಲಿ, ಆ ವಿಶಾಲ ಜಾಗವನ್ನು ಖರೀದಿಸಿ, ಅಲ್ಲಿ ಮೊದಲಿದ್ದಂತೆ ಕಾಡನ್ನು ಬೆಳೆಸುವ ಪ್ರಯತ್ನ ಮಾಡಿದಾಕೆ, ಜರ್ಮೇನ್ ಗ್ರಿಯರ್ (ಜನನ 1939) ಎಂಬ ಮಹಿಳೆ.
ಈಕೆ ಜನಿಸಿದ್ದು ಆಸ್ಟ್ರೇಲಿಯಾದಲ್ಲಿ. ಕೇಂಬ್ರಿಜ್ ವಿಶ್ವವಿದ್ಯಾನಿಲಯದಲ್ಲಿ 1967ರಲ್ಲಿ ಪಿಎಚ್‌ಡಿ ಮಾಡಿದ ನಂತರ, ವಾರ್ವಿಕ್ ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ಸಾಹಿತ್ಯ ಮತ್ತು ತೌಲನಿಕ ಅಧ್ಯಯನದಲ್ಲಿ ಅಧ್ಯಾಪನ ಮಾಡುತ್ತಿದ್ದವಳು.
ಸ್ತ್ರೀ ವಾದವನ್ನು ಬೇರೊಂದು ಆಯಾಮದಲ್ಲಿ ಮುಂಚೂಣಿಗೆ ತಂದಿದ್ದು ಈಕೆಯ ಆರಂಭಿಕ ಸಾಹಸಗಳಲ್ಲಿ ಒಂದು. 1970ರ ದಶಕದಲ್ಲಿ ತಾನು ಪ್ರಕಟಿಸಿದ ‘ಫಿಮೇಲ್ ಎನುಚ್’ ಪುಸ್ತಕದಿಂದಾಗಿ ಹೆಸರುವಾಸಿಯಾದಾಕೆ. ಆನಂತರ ಕೆಲವು ಸ್ತ್ರೀ ಕೇಂದ್ರಿತ ಕೃತಿ ಗಳನ್ನು ಪ್ರಕಟಿಸಿದ್ದುಂಟು.
2004ರಲ್ಲಿ ‘ಷೇಕ್ಸ್ ಪಿಯರ‍್ಸ್ ವೈಫ್’ ಎಂಬ ವಿನೂತನ ಗ್ರಂಥದಲ್ಲಿ ಆ ಪ್ರಸಿದ್ಧ ನಾಟಕ ಕಾರನ ಪತ್ನಿಯ ದಿನಚರಿ ಹೇಗಿರಬಹುದು ಎಂಬ ಸಂಶೋಧನಾತ್ಮಕ ಚಿಂತನೆಯನ್ನು ತೋಡಿಕೊಂಡಿದ್ದು ವಿಮರ್ಶಾ ವಲಯದ ಗಮನ ಸೆಳೆದಿತ್ತು. ಅಂಥ ಚಿಂತಕರ, ಬರಹ ಗಾರರ ವಲಯದಲ್ಲಿ ಪ್ರಸಿದ್ಧಿ ಪಡೆದಿದ್ದ ಈ ದಿಟ್ಟ ಲೇಖಕಿ, ಒಂದು ದಿನ ತನ್ನ ಬದುಕಿನ ದಿಕ್ಕನ್ನೇ ಬದಲಿಸುವ ನಿರ್ಧಾರ ತೆಗೆದುಕೊಂಡಳು!
ತಾನು ಜನಿಸಿದ ದೇಶಕ್ಕೆ ವಾಪಸಾಗಿ, ಪರಿಸರ ಚಿಂತನೆ ಮತ್ತು ಪರಿಸರ ರಕ್ಷಣೆಯಲ್ಲಿ ಆಕೆ ತೊಡಗಿಕೊಂಡಿದ್ದೇ ಒಂದು ವಿಸ್ಮಯ. ಬರವಣಿಗೆ, ಸ್ತ್ರೀ ವಾದ ಮತ್ತು ಹೋರಾಟದಲ್ಲಿ ತೊಡಗಿಕೊಂಡಿದ್ದ ಜರ್ಮೇನ್ ಗ್ರಿಯರ್, ವಿದೇಶವನ್ನು ತೊರೆದು, ಆಸ್ಟ್ರೇಲಿಯಾ ದೇಶಕ್ಕೆ ವಾಪಸಾಗಿ, ತನ್ನ 62ನೆಯ ವಯಸ್ಸಿನಲ್ಲಿ ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ಪ್ರದೇಶದ ಮಳೆಕಾಡಿನ ನಡುವೆ ಪಾಳು ಬಿದ್ದಿದ್ದ 60 ಹೆಕ್ಟೇರ್ ಜಮೀನನ್ನು ಕೊಂಡು, ಆ ಜಾಗವು ಪುನಃ ತನ್ನ ಮೂಲಸ್ವರೂಪವಾದ ಮಳೆಕಾಡಿನ ಸ್ವರೂಪವನ್ನು ಪಡೆದುಕೊಳ್ಳಲಿ ಎಂದು ಪ್ರಾಮಾಣಿಕ ಪ್ರಯತ್ನ ನಡೆಸಿದಳು.
ತನ್ನ ಜೀವಿತಾವಧಿಯ ಸಂಪಾದನೆಯನ್ನು ಬಳಸಿ, ಆ ಪಾಳುಜಾಗವನ್ನು ಖರೀದಿಸಿದಳು. ಲಂಟಾನಾ ಮತ್ತಿತರ ಕಳೆಗಳು ದಂಡಿಯಾಗಿ ಬೆಳೆದುಕೊಂಡಿದ್ದ ಆ ಜಾಗವು ತನ್ನ ಮೂಲ ರೂಪವಾದ ಮಳೆಕಾಡು ಅಥವಾ ಪುರಾತನ ಗೊಂಡ್ವಾನಾ ರೂಪವನ್ನು ತಳೆಯಲಿ ಎಂದು ಆಶಿಸಿದ ಆಕೆಯ ಕನಸನ್ನು ಕಂಡು ಆಕೆಯ ಕೆಲವು ಹಿತೈಷಿಗಳು ಕನಿಕರಿಸಿದ್ದೂ ಉಂಟು.
ಇನ್ನು ಕೆಲವರು ಪ್ರೋತ್ಸಾಹ ರೂಪದಲ್ಲಿ ಬೆನ್ನು ತಟ್ಟಿದ್ದೂ ಉಂಟು. ಇದೊಂದು ದುಃಸ್ಸಾ ಹಸ ಎಂದು ಬೆದರಿಸಿದವರೂ ಇದ್ದರು. ಬಾಳೆ ಮತ್ತು ಇತರ ಬೆಳೆಗಳ ಕೃಷಿಗಾಗಿ ಆ ಜಾಗ ದಲ್ಲಿ ಅಪಾರ ಪ್ರಮಾಣದ ಗೊಬ್ಬರ ಮತ್ತು ಕೀಟನಾಶಕಗಳನ್ನು ಸುರಿಯಲಾಗಿತ್ತು; ಹಲವು ವರ್ಷಗಳ ನಂತರ ಭೂಮಿ ನಂಜಾಗಿ, ಇಳುವರಿ ಕಡಿಮೆಯಾದಾಗ, ಆ ಜಾಗವನ್ನು ಪಾಳು ಬಿಟ್ಟಿದ್ದರು.
ಅದೊಂದು ರಾಸಾಯನಿಕ ಮರುಭೂಮಿಯ ರೀತಿ ಇತ್ತು. ಅಲ್ಲಿ ಬೆಳೆದಿದ್ದ ಕಳೆಗಳನ್ನು ಸವರಿ, ಕೆಲವು ಸಸ್ಯಶಾಸ್ತ್ರಜ್ಞರ ಸಲಹೆಯ ಮೇರೆಗೆ ಸ್ಥಳೀಯ ಸಸ್ಯಗಳನ್ನು ನೆಟ್ಟು ಬೆಳೆಸಲು ಆಕೆ ಗಂಭೀರ ಯತ್ನ ನಡೆಸಿದಳು. ಅಂಥ ಪ್ರದೇಶವನ್ನು ಅದರಷ್ಟಕ್ಕೇ ಬಿಟ್ಟುಬಿಟ್ಟರೆ, ಪುನಃ ಕಾಡು ತನ್ನ ಮೂಲರೂಪವನ್ನು ಕಂಡುಕೊಳ್ಳುತ್ತದೆ ಎಂದು ಯಾರೋ ನೀಡಿದ ಸಲಹೆ ಯನ್ನು ಕೇಳಿ ಅಂಥ ಪ್ರಯತ್ನವನ್ನು ಸಹಾ ಮಾಡಿದಳು.
ಪಾಳು ಬಿದ್ದಿದ್ದ ಆ ಜಾಗವನ್ನು ಹಾಗೆಯೇ ಬಿಟ್ಟಾಗ, ಒಂದು ದಶಕದ ನಂತರ, ಅಲ್ಲಿ ಹಸಿರು ಚಿಗುರೊಡೆಯಿತು! ಮಳೆಕಾಡಿನಲ್ಲಿ ಸಹಜವಾಗಿ ಕಂಡುಬರುವ ಹಲವು ಸಸ್ಯಗಳು ಪುನ ರ್ಜನ್ಮ ಪಡೆದುಕೊಂಡವು! ಜರ್ಮೇನ್ ಗ್ರಿಯರ್ ಸಹೋದರಿ ಸಸ್ಯಶಾಸ್ತ್ರಜ್ಞೆ, ಆಕೆಯ ಸಹಾಯವೂ ದೊರಕಿತು ಮತ್ತು ಸ್ಥಳೀಯ ಸಸ್ಯಗಳ ಮತ್ತು ಅವಕ್ಕೆ ಸಂಬಂಧಿಸಿದ ಇತಿಹಾಸವನ್ನು ತಿಳಿಯಲು ಅನುಕೂಲವಾಯಿತು.
60 ಹೆಕ್ಟೇರ್ ಪ್ರದೇಶದಲ್ಲಿ ನಿಧಾನವಾಗಿ ಹಸಿರು ತುಂಬತೊಡಗಿತು. ಆಗ ಒಂದು ಸಣ್ಣ ಪವಾಡವೂ ನಡೆಯಿತು! ಆ ಸುತ್ತಮುತ್ತಲಿರುವ ಮಳೆಕಾಡಿನಲ್ಲಿ ತೊಂದರೆಗೊಳಗಾದ ಪ್ರಾಣಿ-ಪಕ್ಷಿಗಳು ಈಕೆಯ ‘ಸುರಕ್ಷಿತ’ ಪ್ರದೇಶಕ್ಕೆ ಬಂದು ನೆಲೆಕಂಡುಕೊಳ್ಳಲು ಆರಂಭಿಸಿ ದವು.
ಹೆಬ್ಬಾವುಗಳು, ಕಾಡುನಾಯಿಗಳು, ದೊಡ್ಡ ಜಾತಿಯ ಉಡಗಳು, ವಿವಿಧ ಹಕ್ಕಿಗಳು, ಕೀಟ ಗಳು, ಮರಕಪ್ಪೆಗಳು ಇಂಥ ಹಲವು ಜೀವಿಗಳು ಇವರ ಮಳೆಕಾಡಿನಲ್ಲಿ ತಮ್ಮ ಚಟುವಟಿಕೆ ಗಳನ್ನು ಆರಂಭಿಸಿದವು. ವಾಸ್ತವವೆಂದರೆ, ಈ 60 ಹೆಕ್ಟೇರಿನ ಸುತ್ತಮುತ್ತಲೂ ಹರಡಿ ಕೊಂಡಿರುವುದು ಸಹಾ ಆಸ್ಟ್ರೇಲಿಯಾದ ಮಳೆಕಾಡುಗಳ ಪ್ರದೇಶವೇ.
ಆದರೆ, ಆ ಸುತ್ತಮುತ್ತಲಿನ ಸಾವಿರಾರು ಹೆಕ್ಟೇರ್ ಪ್ರದೇಶವನ್ನು ಆಧುನಿಕ ಮಾನವನು ‘ಅಭಿವೃದ್ಧಿ’ ಪಡಿಸಲು ಪ್ರಯತ್ನಿಸಿದ್ದರಿಂದಾಗಿ, ಅಲ್ಲೆಲ್ಲಾ ಪರಿಸರ ನಲುಗಿತ್ತು. ‘ಕಾಡಿನ ನಡುವೆ ದಿನ ಕಳೆಯಲು ಬನ್ನಿ’ ಎಂದು ಪ್ರಚಾರ ಮಾಡುತ್ತಿದ್ದ ಅಲ್ಲಿನ ಹಲವು ರೆಸಾರ್ಟ್‌ಗ ಳನ್ನು ನಡೆಸುವವರು ಆರ್ಥಿಕ ಚಟುವಟಿಕೆಗೆ ಮತ್ತು ಬೇಗನೆ ಲಾಭವನ್ನು ತರಲು ಪೂರಕ ವಾದ ಕ್ರಮಗಳನ್ನು ಮಾತ್ರ ಪ್ರೋತ್ಸಾಹಿಸುತ್ತಿದ್ದರು.
ಅಲ್ಲಿದ್ದ ದಟ್ಟವಾದ ಕಾಡನ್ನು ಸವರಿ, ಅಲ್ಲಿ ಬಾಳೆ ಮೊದಲಾದ ಆರ್ಥಿಕ ಬೆಳೆಗಳನ್ನು ಬೆಳೆದಿದ್ದರು. ಆರ್ಥಿಕ ಲಾಭ ಮತ್ತು ತ್ವರಿತ ಬೆಳೆ ಬರಲು ಅಲ್ಲಿನ ನೆಲಕ್ಕೆ ನಾನಾ ರೀತಿಯ ವಿಷವಸ್ತುಗಳನ್ನು ಮತ್ತು ಕಳೆನಾಶಕಗಳನ್ನು ಸುರಿದಿದ್ದರು. ಕಳೆ ಅಥವಾ ಇತರ ಸಸ್ಯ ಗಳನ್ನು ನಾಶಪಡಿಸಲು, ವಿಯೆಟ್ನಾಂನಲ್ಲಿ ಯುದ್ಧದ ಸಮಯದಲ್ಲಿ ಅಲ್ಲಿನ ದಟ್ಟ ಕಾಡುಗಳ ಮೇಲೆ ಸುರಿದಿದ್ದ ಘನಘೋರ ವಿಷವನ್ನು ಸಹಾ ಹಾಕಿ ಅಲ್ಲಿನ ನೆಲವನ್ನು ಹಾಳುಗೆಡವಿದ್ದರು.
ದೊಡ್ಡ ಗಾತ್ರದಲ್ಲಿ ಡೈರಿ ಫಾರ್ಮಿಂಗ್ ಮಾಡಿ, ಹಾಲು ಮತ್ತು ಇತರ ಉತ್ಪನ್ನಗಳನ್ನು ತಯಾರಿಸುವ ಭರದಲ್ಲಿ, ಪರಸರಕ್ಕೆ ಸಾಕಷ್ಟು ಧಕ್ಕೆ ತಂದಿದ್ದರು. ಇವೆಲ್ಲವೂ, ಆಸ್ಟ್ರೇಲಿ ಯಾದ ಬಿಳಿ ಜನರು ಅಥವಾ ಲೇಖಕಿಯ ಜನಾಂಗದವರು ತಮ್ಮ ವಸಾಹತುಶಾಹಿ ಧೋರಣೆಯಿಂದ ನಡೆಸಿದ ಅಚಾತುರ್ಯ ಅಥವಾ ಕುಕೃತ್ಯಗಳು!
ಕುಕೃತ್ಯ ಎಂಬ ಶಬ್ದ ಏಕೆಂದರೆ, ತನ್ನ ಕುಲದವರು ಸ್ಥಳೀಯ ಆದಿಮ ಜನಾಂಗದವರ ಮೇಲೆ ನಡೆಸಿದ ದಬ್ಬಾಳಿಕೆ ಮತ್ತು ದೌರ್ಜನ್ಯದ ಕುರಿತು ಲೇಖಕಿ ಜರ್ಮೇನ್ ಗ್ರಿಯರ್‌ಗೆ ಸಾಕಷ್ಟು ಪಶ್ಚಾತ್ತಾಪವಿದೆ. ಆ 60 ಹೆಕ್ಟೇರ್ ಪ್ರದೇಶದಲ್ಲಿ ಕಾಡು ಬೆಳೆಸಲು ಪಟ್ಟ ಸಾಹಸದ ಕುರಿತು ಆಕೆ ಬರೆದ ಪುಸ್ತಕ ‘ವೈಟ್ ಬೀಚ್’- ಇದರಲ್ಲಿ ಕಾಡು ಬೆಳೆಸುವ ಸಾಹಸದ ಜತೆ ಯಲ್ಲೇ, ಆ ಸುತ್ತಲಿನಲ್ಲಿದ್ದ ಆಸ್ಟ್ರೇಲಿಯಾದ ಆದಿಮ ಜನಾಂಗದ ಕುರಿತು ವಿವರಗಳಿವೆ.
19ನೆಯ ಮತ್ತು 20ನೆಯ ಶತಮಾನದ ಉದ್ದಕ್ಕೂ, ಸ್ಥಳೀಯ ಜನರನ್ನು ಬಿಳಿಜನರು ಹತ್ತಿಕ್ಕಿದ ಇತಿಹಾಸದ ತುಣುಕುಗಳನ್ನು ಲೇಖಕಿಯು ತನ್ನ ಪುಸ್ತಕದುದ್ದಕ್ಕೂ ಅಲ್ಲಲ್ಲಿ ನೀಡುತ್ತಾಳೆ. ಡೈರಿ ಫಾರಂನ ಹೊರಭಾಗ ದಲ್ಲಿ ದೊರೆಯುತ್ತಿದ್ದ ಹಾಲಿನ ಕೆನೆಯನ್ನು ಕದ್ದು ನೆಕ್ಕಲು ರಾತ್ರಿ ಹೊತ್ತು ಬರುತ್ತಿದ್ದ ಹಸಿದಿದ್ದ ಅನಕ್ಷರಸ್ಥ ಸ್ಥಳೀಯರನ್ನು ಅದು ಹೇಗೆ ವಿಷಭರಿತ ಕೆನೆಯನ್ನು ಬಳಸಿ ಕೊಂದರು ಎಂಬ ವಿವರ, ಕ್ಷುಲ್ಲಕ ಕಾರಣಕ್ಕಾಗಿ ಸ್ಥಳೀಯ ಜನರನ್ನು ಗುಂಡಿಟ್ಟು ಕೊಂದ ವಿವರಗಳು ಈ ಪುಸ್ತಕದಲ್ಲಿವೆ. ಆದಿಮ ಜನಾಂಗ ಬಳಸುತ್ತಿ ದ್ದುದು ಬಿಲ್ಲು, ಬಾಣ, ಈಟಿ ಮೊದಲಾದ ಆಯುಧಗಳನ್ನು; ಬಿಳಿಜನರ ಕೈಯಲ್ಲಿತ್ತು ಬಂದೂಕು!
ತಮಗೆ ಸೂಕ್ತ ಎನಿಸುವ ಕಾನೂನನ್ನು ಮಾಡಿಕೊಂಡು ಆದಿಮ ಜನರನ್ನು ಅವರು ಎರಡು ಶತಮಾನಗಳ ಕಾಲ ಬೇಟೆಯಾಡಿದರು. ಆಸ್ಟ್ರೇಲಿಯಾದ ಆದಿಮ ಜನರನ್ನು ‘ಅಬಾರಿಜಿ ನಲ್’ ಎನ್ನಲಾಗುತ್ತಿದ್ದು, ಅಲ್ಲಿನ ಪ್ರಾಣಿಗಳೊಂದಿಗೆ ಬದುಕಿಕೊಂಡಿದ್ದ ಅವರನ್ನು ನಾಮಾ ವಶೇಷ ಮಾಡಿ, ಬಿಳಿಜನರು ಅಲ್ಲಿ ನೆಲೆಯೂರಿದ ಇತಿಹಾಸದ ಕುರಿತು ಲೇಖಕಿಗೆ ಆಳವಾದ ಜ್ಞಾನವಿದ್ದು, ‘ವೈಟ್ ಬೀಚ್’ ಕೃತಿಯುದ್ದಕ್ಕೂ ಅದನ್ನು ಆಕೆ ಪ್ರಸ್ತಾಪಿಸುವುದು ಕುತೂಹಲ ಕಾರಿ.
ಅಂಥ ರಕ್ತಸಿಕ್ತ ಇತಿಹಾಸವನ್ನು ಪ್ರಸ್ತಾಪಿಸಲು ತನ್ನ ನೆಲದಲ್ಲಿ ಹೂತಿಟ್ಟುಕೊಂಡಿರುವ ಜಾಗವೊಂದನ್ನು ಖರೀದಿಸಿ, ಅಲ್ಲಿ ಪುನಃ ಗೊಂಡಾರಣ್ಯವನ್ನು ಬೆಳೆಸುವ ಪ್ರಯತ್ನ ಮಾಡಿರುವ ಲೇಖಕಿಯು, ‘ಅಲ್ಲಿನ ಮೂಲನಿವಾಸಿಯು ಬಂದು ಈ ಜಾಗ ನಮ್ಮ ಕುಲಕ್ಕೆ ಸೇರಿದ್ದು, ನಮಗೆ ಬಿಟ್ಟುಕೊಡಿ’ ಎಂದು ಹಕ್ಕೊತ್ತಾಯ ಮಾಡಿದರೆ, ಆ ಜಾಗವನ್ನು ಅವರಿಗೆ ಬಿಟ್ಟುಕೊಡಲು ತಾನು ತಯಾರಿದ್ದೇನೆ ಎಂದು ಒಂದೆಡೆ ಹೇಳಿಕೊಳ್ಳುತ್ತಾಳೆ.
60 ಹೆಕ್ಟೇರ್ ಜಾಗವನ್ನು ಲೇಖಕಿಯು ಹಣಕೊಟ್ಟು ಖರೀದಿಸಿದ್ದರೂ, ಅದರ ಒಡೆತನವನ್ನು ಆಕೆ ಇಟ್ಟುಕೊಳ್ಳಲು ಬಯಸಲಿಲ್ಲ. ‘ಗೊಂಡ್ವಾನಾ ರೈನ್ ಫಾರೆಸ್ಟ್’ ಎಂಬ ಟ್ರಸ್ಟ್ ರಚಿಸಿ, ಅದನ್ನು ಆಸ್ಟ್ರೇಲಿಯಾದ ಒಂದು ಲಾಭರಹಿತ ಟ್ರಸ್ಟ್ ಆಗಿಸಿ, ಆ ಮಳೆಕಾಡನ್ನು ಆ ಟ್ರಸ್ಟ್‌ಗೆ ವಹಿಸಿಕೊಟ್ಟಿದ್ದಾಳೆ.
ತನ್ನ 62ನೆಯ ವಯಸ್ಸಿನಲ್ಲಿ, ಆಸ್ಟ್ರೇಲಿಯಾದಲ್ಲಿ ಬರಡು ಭೂಮಿಯನ್ನು ಖರೀದಿಸಿ, ಗೊಂಡಾರಣ್ಯವನ್ನು ಮರುಬೆಳೆಸುವ ಆಕೆಯ ಪ್ರಯತ್ನ ಬಹು ವಿಶಿಷ್ಟ ಎಂಬುದರಲ್ಲಿ ಅನುಮಾನವಿಲ್ಲ. ಆಕೆಯು ತನ್ನ ಅನುಭವಗಳನ್ನು ನಿವೇದಿಸಿರುವ ಈ ಪುಸ್ತಕವನ್ನು ಓದಿದಾಗ, ಕಾಡಿನ ಕನಸು ಕಾಡುತ್ತದೆ, ಆದಿಮ ಜನರ ನೋವು ಮನತಟ್ಟುತ್ತದೆ. ಆಕೆ ಬೆಳೆಸಿದ ಅರಣ್ಯವು ಇಂದು ಜೀವವೈವಿಧ್ಯವನ್ನು ಪೋಷಿಸುವ ದಟ್ಟ ಕಾಡಿನ ರೀತಿ ಬೆಳೆದುಕೊಂಡಿದೆ; ಆಸ್ಟ್ರೇಲಿಯಾದಂಥ ಮುಂದುವರಿದ ದೇಶದಲ್ಲೂ, ಗೊಂಡಾರಣ್ಯ ವನ್ನು ಮತ್ತೆ ನಿರ್ಮಿಸಬಹುದು ಎಂದು ಆಕೆಯ ಸಾಹಸ ತೋರಿಸಿಕೊಟ್ಟಿದೆ.
ನಮ್ಮ ವಿಶ್ವದ ಕೆಲವು ಮುಂದುವರಿದ ದೇಶಗಳಲ್ಲಿ ಗೊಂಡಾರಣ್ಯಗಳನ್ನು ಕಾಪಿಟ್ಟು ಕೊಳ್ಳಲು ಬಿಗಿಯಾದ ಕಾನೂನುಗಳನ್ನು ಮಾಡಿಕೊಂಡಿದ್ದಾರೆ. ನಮ್ಮ ದೇಶದಲ್ಲೂ ಹಲವು ಕಾನೂನುಗಳ ಮೂಲಕ ವನ್ಯಜೀವಿ ಮತ್ತು ಅರಣ್ಯಗಳನ್ನು ರಕ್ಷಿಸುವ ಪ್ರಯತ್ನ ಗಳು ನಡೆದಿವೆ.
ಆದರೆ, ಈಚಿನ ವರ್ಷಗಳಲ್ಲಿ, ಅಧಿಕಾರದಲ್ಲಿರುವವರೇ ಅಂಥ ಕಾನೂನುಗಳನ್ನು ದುರ್ಬಲ ಗೊಳಿಸುವ ಪ್ರಯತ್ನಗಳು ನಡೆಯುತ್ತಿವೆಯೇ ಎಂಬ ಸಂಶಯವೂ ಮೂಡುತ್ತಿದೆ. ವಿಶ್ವ ಪರಂಪರೆಯ ತಾಣ ಎನಿಸಿರುವ ಪಶ್ಚಿಮ ಘಟ್ಟಗಳ ಗರ್ಭದಲ್ಲಿರುವ ಆಗುಂಬೆಯ ಅರಣ್ಯದಲ್ಲಿ ಸುರಂಗ ತೋಡುವ ಪ್ರಯತ್ನವು ಇಂಥ ಸಂಶಯಕ್ಕೆ ಇಂಬುಕೊಡುತ್ತಿದೆ.
ಅಭಿವೃದ್ಧಿಗಾಗಿ ಕಾಡನ್ನು ನಾಶಮಾಡುವಷ್ಟು ಸಿರಿವಂತರಾಗಿ ನಾವು ಇಂದು, ಈ 21ನೆಯ ಶತಮಾನದಲ್ಲಿ, ಉಳಿದಿಲ್ಲ; 20ನೆಯ ಶತಮಾನದಲ್ಲಿ ಅಭಿವೃದ್ಧಿಗಾಗಿ ಪರಿಸರ ನಾಶ ವಾಗಿತ್ತು; ಆದರೆ, ಪರಿಸರ ಸಂಪತ್ತಿನ ದೃಷ್ಟಿಯಲ್ಲಿ ನಾವು ಈಗ ಬಡವರು!
ನಮ್ಮಲ್ಲಿ ಈಗ ಇರುವ ದಟ್ಟ ಅರಣ್ಯವನ್ನು ಪರಿಸರವನ್ನು, ಕಾಪಿಟ್ಟುಕೊಂಡು, ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದು ಇಂದಿನ ಆಧುನಿಕ ಮಾನವನ ಕರ್ತವ್ಯವೇ ಸರಿ.