ಜನಪಥ
ರಾಘವ ಶರ್ಮ ನಿಡ್ಲೆ
ಬಿಹಾರದ ಭೋಜ್‌ಪುರ ಜಿಲ್ಲೆಯಿಂದ ಪಟನಾಕ್ಕೆ ವಾಪಸಾಗುತ್ತಿದ್ದೆ. ಪಟನಾ ಇನ್ನೂ 45 ಕಿ.ಮೀ. ದೂರದಲ್ಲಿತ್ತು. ಚಹಾ ಕುಡಿಯಬೇಕೆಂದು ಕಾರಿನ ಕಿಟಕಿಯಾಚೆ ನೋಡುತ್ತಿದ್ದಾಗ ಜನ ತುಂಬಿದ್ದ ಕಾಲನಿಯೊಂದು ಕಾಣಿಸಿತು. ಗಾಡಿ ನಿಲ್ಲಿಸಲು ಚಾಲಕನಿಗೆ ಹೇಳಿದೆ.
ಅದು ಮನೇರ್ ವಿಧಾನಸಭೆಯ ಅಹಿಯಾಪುರ ಎಂಬ ಮಾಂಜಿ (ಮುಸಹರರು) ಸಮುದಾ ಯದ ಕಾಲನಿಯಾಗಿತ್ತು. ಹರಿದ ಬಟ್ಟೆಗಳನ್ನು ಹಾಕಿದ್ದ ಸಣ್ಣ ಮಕ್ಕಳು ಬೌಲ್ ಗಳಲ್ಲಿ ಅನ್ನ ತಿನ್ನುತ್ತಿದ್ದರು. ಕೆದರಿದ ಕೂದಲುಗಳು, ಬಾಡಿದ ಮುಖ. ಮಳೆ ಬರುತ್ತಿದ್ದು ದರಿಂದ ಸುತ್ತಮುತ್ತ ಕೆಸರು. ವಾಹನಗಳ ರಭಸದ ಓಡಾಟದಿಂದ ರಾಷ್ಟ್ರೀಯ ಹೆದ್ದಾರಿಗೆ ತಾಗಿ ಕೊಂಡಿದ್ದ ಅವರ ಕಾಲನಿಯ ಮನೆ ಗೋಡೆಗಳಿಗೆ ಮಣ್ಣು-ನೀರು ಬಡಿಯುತ್ತಿತ್ತು. ಮಳೆ ಇಲ್ಲದಿದ್ದಾಗ ಅದು ಧೂಳುಮಯ.
ಅಲ್ಲಿ ಬಡತನ ತಾಂಡವವಾಡುತ್ತಿತ್ತು. ಅಹಿಯಾಪುರ ಕಾಲನಿಗೆ ಪ್ರವೇಶ ಮಾಡುತ್ತಲೇ, ಯಾರೋ ಸರಕಾರಿ ಸಾಹೇಬರು ತಮ್ಮ ಕಾಲನಿಗೆ ಬಂದಿದ್ದಾರೆ ಎಂದು ನಿವಾಸಿಗಳು ಕುತೂಹಲದಿಂದ, ಆಸೆಗಣ್ಣಿನಿಂದ ಹೊರಬಂದರು. “ನಾನು ಮಾಧ್ಯಮದವನು, ಕರ್ನಾಟಕದಿಂದ ಬಂದಿದ್ದೇನೆ" ಎಂದು ಹೇಳಿಕೊಂಡೆ.
ಇದನ್ನೂ ಓದಿ: Raghav Sharma Nidle Column: ಬಿಹಾರ ಜೆಡಿಯು ಕಚೇರಿಯೊಳಗೆ ಕಾಪುವಿನ ಹುಡುಗ !
‘ಸರಕಾರಿ ಆದ್ಮಿ’ ಅಲ್ಲ ಎಂದು ಗೊತ್ತಾದರೂ, ಬೇರೆ ರಾಜ್ಯದ ಮಂದಿ ತಮ್ಮ ಕಾಲನಿಗೆ ಬಂದದ್ದು ಅವರಲ್ಲಿ ಆಶ್ಚರ್ಯ ಮೂಡಿಸಿತು. ‘ಇನು ಮಣ್ಣಂಗಟ್ಟಿ ಇದೆ ಎಂದು ಬಂದಿzರೆ’ ಎಂಬ ಪ್ರಶ್ನೆಗಳು ಮೂಡಿದ್ದು ಆ ಮುಖಗಳನ್ನು ನೋಡಿದಾಗಲೇ ಗೊತ್ತಾಗಿತ್ತು. “ಬಿಹಾರದಾದ್ಯಂತ ಪ್ರವಾಸ ಮಾಡುತ್ತಿದ್ದೇನೆ, ನಿಮ್ಮ ಕಾಲನಿ ಸಮಸ್ಯೆ ಬಗ್ಗೆ ಬರೆಯೋಣ ಎಂದು ಯೋಚಿಸಿ ಇಲ್ಲಿಗೆ ಬಂದೆ" ಎಂದಾಗ, “ನಮ್ಮ ಸಮಸ್ಯೆಗಳ ಬಗ್ಗೆ ಏನು ಕೇಳುತ್ತೀರಿ ಸರ್? ಈವರೆಗೆ ಒಬ್ಬನೇ ಒಬ್ಬ ನೇತಾ ಇಲ್ಲಿಗೆ ಬಂದಿಲ್ಲ.
ಕಷ್ಟ ಕೇಳಿಲ್ಲ. ಸರಕಾರಗಳು ಇಷ್ಟು ಬಂದರೂ ಎಂಥಾ ದುಸ್ಥಿತಿಯಲ್ಲಿದ್ದೇವೆ ಎನ್ನುವುದು ನಿಮ್ಮ ಕಣ್ಣಿಗೇ ಕಾಣುತ್ತಿದೆಯಲ್ಲ" ಎನ್ನುತ್ತಾ ತ್ಯಾಜ್ಯ ಸಂಗ್ರಹಾಗಾರದಂತಿದ್ದ ಅಂಗನ ವಾಡಿಯನ್ನು ತೋರಿಸಿದರು. ಹೆಸರಿಗಷ್ಟೇ ಅದು ಅಂಗನವಾಡಿ ಆಗಿತ್ತು. ಜೋರುಮಳೆ ಬಂದು, ಕಾಲನಿಯೊಳಗೆ ನೀರು ಹರಿದಾಗ, ಜನ ಮನೆಯಿಂದ ಓಡೋಡಿ ಬಂದು ನಿಲ್ಲು ವುದು ಇಲ್ಲೇ.
ನನ್ನನ್ನು ನೋಡಿ ಅಲ್ಲಿನ ಅನೇಕ ಮಹಿಳೆಯರು ಕೂಡ ಸುತ್ತುವರಿದರು. “ದಯವಿಟ್ಟು ಇಲ್ಲಿ ಬನ್ನಿ, ನಮ್ಮ ಮನೆಗಳನ್ನು ಒಮ್ಮೆ ನೋಡಿ" ಎಂದು ಅಲವತ್ತುಕೊಂಡರು. ಅವರೊಂದಿಗೆ ಹೋದೆ. ಕುಸಿದ ಮನೆಗಳನ್ನು ತೋರಿಸಿದರು. “ನೀವು ಇಲ್ಲೇ ಬದುಕು ತ್ತಿದ್ದೀರಾ? ಎಷ್ಟು ವರ್ಷಗಳಿಂದ ಈ ಮನೆಗಳಲ್ಲಿ ಇದ್ದೀರಿ? ೧೦-೧೨ ಮಂದಿ ಒಂದು ಕುಟುಂಬದಲ್ಲಿ ಇದ್ದೀರಿ. ಈ ಜಾಗ ಸಾಕೇ?" ಎಂದೆ ಕೇಳಿದೆ.
“ತಲೆಮಾರುಗಳಿಂದ ನಮ್ಮ ಮಂದಿ ಇಲ್ಲೇ ಹುಟ್ಟಿ ಇಲ್ಲೇ ಸಾಯುತ್ತಿದ್ದಾರೆ" ಎನ್ನುತ್ತಾ ದುರ್ಬಲ ಮೇಲ್ಚಾವಣಿಗಳನ್ನು ತೋರಿಸಿದರು. ಅವುಗಳು ಯಾವಾಗ ಕುಸಿಯುತ್ತದೋ ಗೊತ್ತಿಲ್ಲ. ಜೂಲಿ ಕುಮಾರಿ ಎಂಬುವವಳು ಮಳೆಗೆ ಕುಸಿದು ಬಿದ್ದಿರುವ ತನ್ನ ಮನೆ ತೋರಿಸಿದಳು. ಆ ಮನೆಯಲ್ಲಿ ವಾಸ ಅಸಾಧ್ಯವಾದ ಕಾರಣ ಅದೇ ಕಾಲನಿಯಲ್ಲಿ ಬೇರೊಬ್ಬರ ಮನೆಯಲ್ಲಿ ಬಾಡಿಗೆಗಿzಳೆ. ಲಖ್ಪತಿಯಾ ದೇವಿ ಎಂಬಾಕೆ, “ಸಾಬ್, ಇಲ್ಲಿ ಬನ್ನಿ" ಎಂದು ತನ್ನ ಮನೆ ತೋರಿಸಿದಾಗ, ಇದು ಮನುಷ್ಯರ ವಾಸಸ್ಥಾನವೋ ಅಥವಾ ಪ್ರಾಣಿ ಗಳದ್ದೋ ಎಂದು ಅರ್ಥವಾಗಲಿಲ್ಲ.
“ಪ್ರತಿ ಮಳೆಗಾಲದಲ್ಲಿ ನಮ್ಮದು ಇದೇ ಗೋಳು. ಘನತೆಯಿಂದ ಬದುಕಲು ಒಂದು ಮನೆ ಕಟ್ಟಿಕೊಡಿ ಎನ್ನುವುದು ನಮ್ಮ ಒಂದೇ ಒಂದು ಬೇಡಿಕೆ. ನಮಗೆ ಬೇರೇನೂ ಬೇಡ ಸಾಹೇಬ್. ನೀವಾದರೂ ಸರಕಾರಕ್ಕೆ ಹೇಳಿ" ಎಂದು ಗೋಗರೆದರು ಆ ಮಹಿಳೆಯರು. ನನಗೂ ಏನು ಹೇಳುವುದೆಂದು ತೋಚಲಿಲ್ಲ. ಅವರ ಕಣ್ಣಾಲಿಗಳು ಒದ್ದೆಯಾಗಿದ್ದವು.
ಸಣ್ಣ ಬಾಗಿಲುಗಳಿದ್ದ, ತಲೆಗೆ ಮೇಲ್ಚಾವಣಿ ತಾಗುವಂತಿದ್ದ ಮನೆಗಳವು; ತಲೆಗೆ ತಾಗಿಸಿ ಕೊಂಡೇ, ಬಹಳ ಕಷ್ಟಪಟ್ಟು ಆ ಮನೆಗಳೊಳಗೆ ಹೋಗಿ ಬಂದೆ. “ನಿಮ್ಮಲ್ಲಿ ಶೌಚಾಲಯ ಎಲ್ಲಿ?" ಎಂದು ಕೇಳಿದೆ.
“ನಮ್ಮಲ್ಲಿ ಯಾರ ಮನೆಯಲ್ಲೂ ಶೌಚಾಲಯಗಳಿಲ್ಲ. ನಲ್ಲಿ ನೀರಿನ ವ್ಯವಸ್ಥೆ ಇಲ್ಲ. ನೀರು ಹರಿದುಹೋಗುತ್ತಿಲ್ಲ. ಶೌಚಾಲಯ ಕಟ್ಟಲು ಜಾಗವೂ ಇಲ್ಲ" ಎಂದು ಗೋಳು ತೋಡಿ ಕೊಂಡರು. “ಬಯಲಿಗೆ ಹೋದಾಗ ಹುಡುಗರು ಛೇಡಿಸುತ್ತಾರೆ" ಎಂದು 25ರ ಜೂಲಿ ಕುಮಾರಿ ಕೊರಗಿದಾಗ, ಅಕ್ಷಯ್ ಕುಮಾರ್ ನಟಿಸಿದ್ದ ‘ಟಾಯ್ಲೆಟ್’ ಎಂಬ ಬಾಲಿವುಡ್ ಚಲನಚಿತ್ರ ನೆನಪಾಯಿತು.
ಶೌಚಾಲಯದ ಅಗತ್ಯದ ಬಗ್ಗೆ ಆ ಚಿತ್ರ ಅತ್ಯಂತ ಪರಿಣಾಮಕಾರಿ ಸಂದೇಶ ಕೊಟ್ಟಿತ್ತು. ಪ್ರಧಾನಿ ಮೋದಿ ಅವರೂ ಚಿತ್ರವನ್ನು ಮೆಚ್ಚಿಕೊಂಡಿದ್ದರು. ಚಿತ್ರ ಬಿಡುಗಡೆಯಾಗಿ ೮ ವರ್ಷ ಕಳೆದಿದೆ. ಬಿಹಾರದ ಗ್ರಾಮೀಣ ಭಾಗಗಳಲ್ಲಿ ಇನ್ನೂ ಟಾಯ್ಲೆಟ್ ಇಲ್ಲವ ಎಂದು ಬೇಸರವಾಯಿತು.
45 ಕಿ.ಮೀ. ದೂರದಲ್ಲಿ ರಾಜಧಾನಿ ಪಟನಾ ಝಗ ಮಗಿಸುತ್ತಿದೆ. ಆದರೆ, ರಾಷ್ಟ್ರೀಯ ಹೆಲ್ಲೇರಿಗೆ ಅಂಟಿಕೊಂಡಿದ್ದ ಮಾಂಜಿಗಳ ಕಾಲನಿ ಅಂಧಕಾರದಲ್ಲಿ ಮುಳುಗಿತ್ತು. ಬರೋ ಬ್ಬರಿ ೧೦ ವರ್ಷಗಳ ಹಿಂದೆ 2015ರ ವಿಧಾನಸಭೆ ಚುನಾವಣೆ ವರದಿಗಾಗಿ ಬಂದಿದ್ದಾಗ, ಲಾಲೂ ಪ್ರಸಾದ್ ಯಾದವರ ಹುಟ್ಟೂರಾಗಿದ್ದ ಗೋಪಾಲ್‌ಗಂಜ್ ಜಿಲ್ಲೆಯ ಪುಲ್ವಾರಿ ಯಾದ ಸನಿಹದಲ್ಲಿದ್ದ ಸಬೈ ಮುಸಹರ ಟೋಲಿ ಮತ್ತು ಕೇಂದ್ರ ಸಚಿವ ಜೀತನ್ ರಾಮ್ ಮಾಂಜಿಯವರು ಜನಿಸಿದ್ದ ಗಯಾ ಜಿಲ್ಲೆಯ ಮಖ್‌ದುಮ್‌ಪುರ್ ಎಂಬ ಮುಸಹರ ಟೋಲಿಗಳನ್ನು ನೋಡಿ ಬಂದಿದ್ದೆ.
ಎರಡೂ ಕಡೆ ಮಕ್ಕಳಿಗೆ ಧರಿಸಲು ಸರಿಯಾಗಿ ಬಟ್ಟೆಯಿರಲಿಲ್ಲ. ಶಿಥಿಲಾವಸ್ಥೆಯಲ್ಲಿದ್ದ ಮಣ್ಣಿನ ಮನೆಗಳಿಗೆ ಸರಿಯಾಗಿ ಗೋಡೆಗಳಿರಲಿಲ್ಲ. ಮಳೆಗಾಲದಲ್ಲಿ ನೀರು ಸೋರಿಕೆ ಯಾದರೆ ಒದ್ದಾಟದ ಬದುಕು ಮತ್ತೆ ಶುರು. ಮಳೆಗಾಲದಲ್ಲಿ ನಿದ್ದೆಯೇ ಇಲ್ಲ.
ಸೋರುವ ಕಡೆ ಬಕೆಟ್‌ಗಳನ್ನಿಟ್ಟು ತುಂಬಿದ ಕೂಡಲೇ ಆ ನೀರು ಹೊರ ಚೆಲ್ಲುತ್ತಲೇ ರಾತ್ರಿ ಕಳೆದು ಬೆಳಗಾಗಿರುತ್ತದೆ. ಇಂಥದ್ದೇ ಪರಿಸ್ಥಿತಿ ಈ ಸಲ ಪಟನಾ ಪಕ್ಕದಲ್ಲಿದ್ದ ಅಹಿಯಾಪುರ ಕಾಲನಿ, ಮುಜಫರಪುರದ ವಿವಿಧ ಮಾಂಜಿ ಟೋಲಿಗಳಲ್ಲಿ ಕಂಡುಬಂತು.
ಗಯಾ ಜಿಲ್ಲೆಯ ಪರ್ವತ ಪುರುಷ (ಮೌಂಟೇನ್ ಮ್ಯಾನ್) ದಶರಥ ಮಾಂಜಿಯ ಗೆಹ್ಲೋರ್‌ಗೆ ಹೋದಾಗಲೂ ಪರಿಸ್ಥಿತಿ ಭಿನ್ನವಾಗೇನೂ ಇರಲಿಲ್ಲ. ಐದಾರು ಮಹಿಳೆಯರೊಂದಿಗೆ ಮಾತನಾಡಿದಾಗ ಮಕ್ಕಳಿಗೆ ಇನ್ನೂ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ. ಹೀಗೇ ಆದರೆ ಅವರದ್ದೂ ನಮ್ಮಂತೆ ದರಿದ್ರ ಬದುಕಾಗಿ ಬಿಡುತ್ತದೆ ಎಂಬ ಭಯ ಅವರದ್ದು.
೨ ತಿಂಗಳಿಂದ ಕರುಣೋದಯ ಫೌಂಡೇಷನ್ ಎಂಬ ಸರಕಾರೇತರ ಸಂಸ್ಥೆ ಬೆರಳೆಣಿಕೆ ಮಕ್ಕಳಿಗೆ ವಿದ್ಯಾರ್ಥಿನಿಯೊಬ್ಬಳಿಂದ ಪಾಠ ಹೇಳಿ ಕೊಡುವ ಕೆಲಸ ಶುರುಮಾಡಿದೆ. ೧೫-೨೦ ವರ್ಷಗಳ ಹಿಂದಿನ ಕಾಲಕ್ಕೆ ಹೋಲಿಸಿದರೆ ಗೆಹ್ಲೋರ್‌ನಲ್ಲಿ ರಸ್ತೆ ಸುಧಾರಣೆಯಾಗಿರುವುದು ಬಿಟ್ಟರೆ ಸಮಾಜದ ಮುಖ್ಯ ವೇದಿಕೆಗೆ ಬರಲು ಈ ಮಾಂಜಿಗಳಿಗೆ ಸಾಧ್ಯವಾಗಿಲ್ಲ.
ಬಿಹಾರದ ಮುಸಹರರು ಅಥವಾ ಮಾಂಜಿಗಳು ಇಲಿ ತಿನ್ನುವವರು ಎಂಬ ಗುರುತು ಹೊಂದಿದ್ದಾರೆ. ಆದರೆ, ಇಲಿ ತಿನ್ನುವವರ ಪ್ರಮಾಣ ಈಗ ಮೊದಲಿಗಿಂತ ಕಡಿಮೆ. ಸರಕಾರ ಉಚಿತ ದವಸ-ಧಾನ್ಯಗಳನ್ನು ನೀಡುತ್ತಿರುವುದು ಕೂಡ ಇದಕ್ಕೆ ಕಾರಣ. ಮುಸಹರ ಪದದಲ್ಲಿ ಮೂಸಾ ಎಂದರೆ ಇಲಿ ಮತ್ತು ಆಹಾರ ಎಂದರೆ ತಿನ್ನುವ ಆಹಾರ.
ತೀವ್ರ ಬಡತನದಿಂದ ಆಹಾರ ಖರೀದಿ ಸಾಧ್ಯವಾಗದೆ ಇಲಿಗಳನ್ನು ಹಿಡಿದು ತಿನ್ನುವುದು ಅವರ ಸಮುದಾಯದಲ್ಲಿ ಸಾಂಪ್ರದಾಯಿಕವಾಗಿ ನಡೆದುಕೊಂಡು ಬಂದಿತ್ತು. ಅಂಚಿ ನಲ್ಲಿರುವ ದಲಿತ ಮಾಂಜಿಗಳು ಹೆಚ್ಚಾಗಿ ಬಿಹಾರ ಮತ್ತು ಉತ್ತರ ಪ್ರದೇಶದ ಪೂರ್ವ ಗಂಗಾ ಬಯಲು ಪ್ರದೇಶಗಳಲ್ಲಿ ಕಾಣುತ್ತಾರೆ.
2007ರಿಂದ ಬಿಹಾರದಲ್ಲಿ ಅವರನ್ನು ಮಹಾದಲಿತರೆಂದು ವರ್ಗೀಕರಿಸಲಾಯಿತು. 2023ರ ಬಿಹಾರ ಜಾತಿ ಜನಗಣತಿ ಪ್ರಕಾರ 40.34 ಲಕ್ಷ ಮುಸಹರರು (ಜನ ಸಂಖ್ಯೆಯ ಶೇ. 3.08ರಷ್ಟು ಪಾಲು) ಅಲ್ಲಿದ್ದಾರೆ. ಹೀಗಿದ್ದರೂ, ಶೇ.0.26ರಷ್ಟು ಮಂದಿ ಮಾತ್ರ ಸರಕಾರಿ ನೌಕರಿಯಲ್ಲಿ ದ್ದಾರೆ.
ಸುಮಾರು ಶೇ.45ರಷ್ಟು ಕುಟುಂಬಗಳು ಜೋಪಡಿಗಳಲ್ಲಿದ್ದರೆ, ಶೇ.18ರಷ್ಟು ಕುಟುಂಬಗಳು ೧ ಕೋಣೆಯ ಪಕ್ಕಾ-ಮನೆಯಲ್ಲಿವೆ. ಶೇ.99.55ರಷ್ಟು ಜನರಲ್ಲಿ ವಾಹನ ಬಿಡಿ, ಮೋಟಾರು ಬೈಕ್ ಕೂಡ ಇಲ್ಲ. ಬಹುಪಾಲು ಮುಸಹರರು ಜಮೀನುದಾರರ ಕೃಷಿ ಭೂಮಿಗಳಲ್ಲಿ ಕೂಲಿ ಮಾಡುತ್ತಾರೆ. ಈಗ ಕೆಲ ಮಂದಿ ಸಣ್ಣ ಜಮೀನುಗಳ ಮಾಲೀಕರಾಗಿರುವುದು ಹೊಸ ಬೆಳವಣಿಗೆ. ಮೇಲ್ಜಾತಿಗಳ ಪ್ರಾಬಲ್ಯ, ಶೋಷಣೆ ಕಡಿಮೆಯಾಗಿದೆ.
ಜಮೀನಿನಲ್ಲಿ ಕೆಲಸಕ್ಕೆ ಬನ್ನಿ ಎಂದು ದಬ್ಬಾಳಿಕೆಯಿಂದ ಎಳೆದುಕೊಂಡು ಹೋಗುವ ಕಾಲ ಈಗಿಲ್ಲ. ಮಾಂಜಿಗಳನ್ನು ಮುಟ್ಟುವುದೂ ಅಪಶಕುನ ಎಂಬ ಕಾಲವಿತ್ತು. ಸಾಮಾ ಜಿಕ ಸುಧಾರಣೆಗಳು ಅದನ್ನು ತಗ್ಗಿಸಿವೆ. ಕೆಲವೆಡೆ ಗ್ರಾಮದ ಮುಖಿಯಾಗಳು ಈಗಲೂ ದೂರ ನಿಂತು ಮಾತನಾಡುತ್ತಾ ರಂತೆ. ಸರಕಾರದಿಂದ ರೇಷನ್ ಅಕ್ಕಿಗಳು ಪೂರ್ಣ ಪ್ರಮಾಣದಲ್ಲಿ ಸಿಗುವುದೇ ಇಲ್ಲ.
೫ ಕೆ.ಜಿ. ಬದಲಿಗೆ ೩-೩.೫ ಕೆ.ಜಿ. ಅಕ್ಕಿ/ಧಾನ್ಯಗಳನ್ನಷ್ಟೇ ನೀಡುತ್ತಾರಂತೆ. ಹಾಗೆ ನೋಡಿದರೆ, ಉಚಿತ ಅಕ್ಕಿ ವಿತರಣೆಯಗುವ ಗೋಲ್‌ಮಾಲ್ ಮಾಂಜಿ ಗಳಿಗೆ ಮಾತ್ರ ಸೀಮಿತವಾಗಿಲ್ಲ. ಇದು ಬಹುಪಾಲು ಹಿಂದುಳಿದ ವರ್ಗಗಳ ಜನರ ಆರೋಪವಾಗಿತ್ತು. ಕೊಡಬೇಕಾದ ಅಕ್ಕಿ-ಧಾನ್ಯಗಳಲ್ಲಿ ಕೊಂಚ ಪ್ರಮಾಣ ಉಳಿಸಿ, ಅದನ್ನು ತಮ್ಮ ಜಾತಿಗಳ ಮಂದಿಗೆ ಈ ದಲ್ಲಾಳಿ ಗಳು ನೀಡುತ್ತಾರೆ ಎನ್ನುವುದು ಅನೇಕರ ಕಂಪ್ಲೇಂಟ್. ಅಂದರೆ, ಎಷ್ಟರಮಟ್ಟಿಗೆ ಇಲ್ಲಿ ಜಾತಿ ಪ್ರಾಬಲ್ಯ ನೆಲೆಯೂರಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬಹುದು.
2014ರ ಮೇ ತಿಂಗಳಲ್ಲಿ ಲೋಕಸಭೆ ಚುನಾವಣೆಯಲ್ಲಿ ಜೆಡಿಯುವಿನ ಹೀನಾಯ ಪ್ರದರ್ಶನಕ್ಕೆ ನೈತಿಕ ಹೊಣೆ ಹೊತ್ತು ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದ ನಿತೀಶ್ ಕುಮಾರ್, ಮಾಂಜಿ ಸಮುದಾಯದ ಜೀತನ್ ರಾಮ್ ಮಾಂಜಿಯವರಿಗೆ ಮುಖ್ಯಮಂತ್ರಿ ಸ್ಥಾನ ನೀಡಿದ್ದರು. ಆದರೆ, ೯ ತಿಂಗಳಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ನಿತೀಶ್ ಒತ್ತಡ ಹೇರಿದ್ದರಿಂದ ಜೆಡಿಯು ತೊರೆದು, ಹಿಂದುಸ್ಥಾನಿ ಅವಾಮಿ (ಎಚ್‌ಎಎಂ) ಮೋರ್ಚಾ ಎಂಬ ಹೊಸ ಪಕ್ಷವನ್ನು (ಎಚ್‌ಎಎಂ) ಜೀತನ್ ರಾಮ್ ಸ್ಥಾಪನೆ ಮಾಡಿದರು.
ಈಗ ಎಚ್‌ಎಎಂ ಪಕ್ಷವು ‘ಎನ್‌ಡಿಎ’ ಮೈತ್ರಿಕೂಟದಲ್ಲಿದೆ. 2024ರ ಲೋಕಸಭೆ ಚುನಾವಣೆ ಯಲ್ಲಿ ಗಯಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಜೀತನ್ ರಾಮ್ ಮಾಂಜಿ ಕೇಂದ್ರ ಮಂತ್ರಿಯಾಗಿ ದ್ದಾರೆ. ವಿಧಾನಸಭೆ ಚುನಾವಣೆಗೆ ಅವರ ಪಕ್ಷ ೬ ಸೀಟುಗಳಿಂದ ಸ್ಪರ್ಧಿಸಿದೆ. ದುರಂತ ಎಂದರೆ, ೬ರಲ್ಲಿ ೨ ಕ್ಷೇತ್ರಗಳಿಂದ ಜೀತನ್ ಮಾಂಜಿ ಸೊಸೆ ದೀಪಾ ಮತ್ತು ಅವರ ತಾಯಿಗೆ ಟಿಕೆಟ್ ಸಿಕ್ಕಿದೆ. ಆರ್‌ಜೆಡಿ ನಾಯಕ ಲಾಲೂ ಪ್ರಸಾದ್ ಯಾದವರ ಕುಟುಂಬ ರಾಜಕಾರಣ ದಂತೆ ಜೀತನ್ ಮಾಂಜಿ ಕೂಡ ‘ಕುಟುಂಬಪ್ರೇಮ’ ಮೆರೆದಿದ್ದಾರೆ.
ಮಾಂಜಿಗಳ ಹಿತರಕ್ಷಣೆಗೆ ಏನು ಮಾಡಿದ್ದಾರೆ ಎಂಬ ಪ್ರಶ್ನೆಗಳಿಗೆ ಅವರ ಕಾಲನಿಗಳಲ್ಲಿ ಉತ್ತರವಂತೂ ನನಗೆ ಕಾಣಲಿಲ್ಲ/ಸಿಗಲಿಲ್ಲ.
ಬಿಹಾರ ಪ್ರವಾಸದಲ್ಲಿ ನನ್ನೊಂದಿಗೆ ಎಲ್ಲಾ ಕಡೆ ಬರುತ್ತಿದ್ದ ಕಾರಿನ ಟ್ಯಾಕ್ಸಿ ಚಾಲಕ ವಿಜಯ್ ಕುಮಾರ್ ಯಾದವ್, ಮಾಂಜಿಗಳ ಭೋಜ್‌ಪುರಿ ಮಿಶ್ರಿತ ಹಿಂದಿಯನ್ನು ಅರ್ಥ ಮಾಡಿಸುತ್ತಿದ್ದ. ಮಾಂಜಿ ಕಾಲನಿಗಳಿಂದ ಹೊರ ಬಂದಾಗಲೆ ಅವನ ಆಕ್ರೋಶ ಹೆಚ್ಚಾಗು ತ್ತಿತ್ತು. “ಯಾವ ಸರಕಾರ ಬಂದರೆಷ್ಟು ಬಿಟ್ಟರೆಷ್ಟು. ಮಾಂಜಿಗಳ ಗೋಳಿಗೆ ಕೊನೆ ಇಲ್ಲ. ನಿಮ್ಮ ಕರ್ನಾಟಕದಲ್ಲಿ ಹೀಗಿಲ್ಲವಲ್ಲ ಸರ್. ನೀವು ಭಾಗ್ಯವಂತರು" ಎಂಬ ಅವನ ಮಾತುಗಳಿಗೆ ನಾನು ಮೌನದಿಂದ ಕಿವಿಯಾಗುತ್ತಿದ್ದೆ...