ಪ್ರಕಾಶಪಥ
ಪ್ರಕಾಶ್ ಶೇಷರಾಘವಾಚಾರ್
ಮೋದಿಯುಗದಲ್ಲಿ ಬಿಜೆಪಿ ಹೊಸ ಹೊಸ ಪರಂಪರೆಗಳಿಗೆ ನಾಂದಿ ಹಾಡುತ್ತಿದೆ. ಬದಲಾಗು ತ್ತಿರುವ ರಾಜಕೀಯ ವಾತಾವರಣಕ್ಕೆ ತಕ್ಕ ನಿರ್ಧಾರಗಳನ್ನು ಕೈಗೊಳ್ಳುವುದು ಮೋದಿ ಮತ್ತು ಅಮಿತ್ ಶಾ ಜೋಡಿಯ ವೈಶಿಷ್ಟ್ಯ. ಹೊಸರಕ್ತ ಮಾತ್ರವೇ ಪಕ್ಷದ ಬೆಳವಣಿಗೆಗೆ ಹೊಸ ವೇಗವನ್ನು ನೀಡಲು ಸಾಧ್ಯ ಎಂಬುದನ್ನು ಈ ಇಬ್ಬರು ನಾಯಕರು ಅರಿತು, ಅದಕ್ಕೆ ತಕ್ಕಂಥ ವೇದಿಕೆಯನ್ನು ಸಿದ್ಧಗೊಳಿಸುತ್ತಿದ್ದಾರೆ.
ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್‌ರವರು ಇತ್ತೀಚೆಗೆ ಪತ್ರಿಕಾ ಹೇಳಿಕೆ ಯೊಂದನ್ನು ಬಿಡುಗಡೆ ಮಾಡಿ, ಬಿಹಾರದ ಸಚಿವರಾದ ನಿತಿನ್ ನಬೀನ್‌ರವರನ್ನು ಬಿಜೆಪಿಯ ನೂತನ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿರುವ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರು.
ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಯ ವಿಷಯವು ಅನೇಕ ದಿನಗಳಿಂದ ಕುತೂಹಲವನ್ನು ಕೆರಳಿಸಿದೆ. ಯಾರೂ ಊಹಿಸಿರದ ನಬೀನ್ ಅವರು ಪಕ್ಷದ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದು, ಕಾರ್ಯಕರ್ತರನ್ನೊಳಗೊಂಡಂತೆ ರಾಜಕೀಯ ವಿಶ್ಲೇಷಕರಿಗೂ ಮತ್ತು ಮಾಧ್ಯಮದವರಿಗೂ ಬಹುದೊಡ್ಡ ಅಚ್ಚರಿಯಾಗಿದೆ. 2014ರ ನಂತರ ಮೋದಿಯವರ ಸಾರಥ್ಯದಲ್ಲಿ ಈ ರೀತಿಯ ಊಹೆಗೂ ನಿಲುಕದ ನೇಮಕಾತಿಗಳು ಹಾಗೂ ಪ್ರಮುಖ ನಿರ್ಧಾರಗಳು ಹೊಮ್ಮುವುದು ಸಾಮಾನ್ಯ ವಾಗಿದೆ. ಇದಕ್ಕೆ Out of the Box ತಂತ್ರ ಗಾರಿಕೆಯೆನ್ನುತ್ತಾರೆ. ಸಂಪೂರ್ಣ ಗೌಪ್ಯತೆ ಕಾಪಾಡಿ ಕೊಂಡಿದ್ದ ಈ ನೇಮಕಾತಿಗಳು ಮಾಧ್ಯಮ ಗಳನ್ನು ಒಂದಿಷ್ಟು ಅಚ್ಚರಿಗೆ ನೂಕಿವೆ; ಈ ಬೆಳವಣಿಗೆ ಯು ‘ಬ್ರೇಕಿಂಗ್ ನ್ಯೂಸ್’ ದುನಿಯಾದವ ರನ್ನು ಬಹುವಾಗಿ ಕಾಡುವಂತಾಗಿದೆ.
2014ರಲ್ಲಿ, ಪ್ರಮಾಣವಚನ ಸ್ವೀಕಾರಕ್ಕೆ ಮುನ್ನ, ಸಂಪುಟ ಸೇರುವ ಕೆಲವು ಹೆಸರುಗಳು ಮತ್ತು ಅವರ ಖಾತೆಗಳ ವಿವರ ಪತ್ರಿಕೆಗಳಿಗೆ ಸೋರಿಕೆಯಾಗಿತ್ತು. ಪ್ರಾಯಶಃ, ಅಧಿಕೃತ ಪ್ರಕಟಣೆಯಾಗುವ ಮುನ್ನ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗಿದ್ದು ಅದೇ ಕೊನೆಯಾಗಿತ್ತು. ದೆಹಲಿಯಲ್ಲಿ ಚಲಾವಣೆ ಯಲ್ಲಿರಲು ಸುದ್ದಿ ಸೋರಿಕೆಯಿಂದಲೇ ತಮ್ಮ ಬೇಳೆ ಬೇಯಿಸಿಕೊಳ್ಳುವ ಜಾಲವೇ ಇಂದಿಗೂ ಎಲ್ಲ ಪಕ್ಷಗಳಲ್ಲೂ ಇರುವುದು ತಳ್ಳಿಹಾಕಲಾಗದ ಸತ್ಯ.
ಇದನ್ನೂ ಓದಿ: Prakash Shesharaghavachar Column: ಜನರ ಜೀವಕ್ಕೆ ಕಿಂಚಿತ್ತೂ ಬೆಲೆ ಇಲ್ಲವಾಗಿದೆ
201ರಲ್ಲಿ, ಉಪರಾಷ್ಟ್ರಪತಿ ಹಮೀದ್ ಅನ್ಸಾರಿಯವರ ನಂತರ ಮುಂದಿನ ಉಪರಾಷ್ಟ್ರಪತಿಯವರ ಬಗ್ಗೆ ಒಂದಿಷ್ಟು ಊಹಾಪೋಹ/ಗಾಳಿಸುದ್ದಿಗಳು ಹರಿದಾಡಿದವು. ಕೇಂದ್ರ ಸರಕಾರದಲ್ಲಿ ನಗರಾಭಿ ವೃದ್ಧಿ ಸಚಿವರಾಗಿದ್ದ ವೆಂಕಯ್ಯನಾಯ್ಡುರವರ ಹೆಸರು ಎಲ್ಲಿಯೂ ಪ್ರಸ್ತಾಪವಾಗಿರಲಿಲ್ಲ.
ಎಲ್ಲರೂ ಆಶ್ಚರ್ಯಪಡುವಂತೆ ಅವರ ಹೆಸರನ್ನು ಘೋಷಿಸಲಾಯಿತು. ಅದರೊಂದಿಗೆ ಅವರ ಸಕ್ರಿಯ ರಾಜಕಾರಣಕ್ಕೂ ಮಂಗಳವನ್ನು ಹಾಡಲಾಯಿತು. ಪ್ರಾಯಶಃ, ಸ್ವತಃ ವೆಂಕಯ್ಯನಾಯ್ಡು ಅವರಿಗೂ ಉಪರಾಷ್ಟ್ರಪತಿ ಅಭ್ಯರ್ಥಿಯಾಗುವ ಕಲ್ಪನೆಯೂ ಇರಲಿಲ್ಲವೇನೋ! ಅವರು ಆ ವೇಳೆ ಅರೆಮನಸ್ಕರಾಗಿಯೇ ಈ ಸ್ಥಾನಕ್ಕೆ ಸ್ಪರ್ಧಿಸಿದ್ದು ಗುಟ್ಟಾಗೇನೂ ಇರಲಿಲ್ಲ.
2017ರಲ್ಲಿ ಉತ್ತರ ಪ್ರದೇಶ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿಗೆ ಬಹುಮತ ದೊರೆತಾಗ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜನಾಥ್ ಸಿಂಗ್, ಕೇಶವಪ್ರಸಾದ್ ಮೌರ್ಯ, ಮನೋಜ್ ಸಿನ್ಹಾ ಅವರ ಹೆಸರುಗಳು ಮುನ್ನೆಲೆಗೆ ಬಂದಿದ್ದವು. ಆದರೆ, ಅಂತಿಮವಾಗಿ ಆಯ್ಕೆಯಾಗಿದ್ದು, ಯಾರೂ ನಿರೀಕ್ಷೆ ಮಾಡಿರದಿದ್ದ, ಗೋರಖ್‌ಪುರ ಕ್ಷೇತ್ರದ ಅಂದಿನ ಸಂಸದ ಯೋಗಿ ಆದಿತ್ಯನಾಥ್ ರವರು.
ಹಿರಿಯ ಪತ್ರಕರ್ತ ರಾಜ್‌ದೀಪ್ ಸರ್‌ದೇಸಾಯಿ ಅವರಂತೂ ಇವರ ಆಯ್ಕೆಯಿಂದ ಆಕಾಶವೇ ಕಳಚಿಬಿತ್ತೇನೋ ಎಂಬಂತೆ ಭಾವಿಸಿ, “ಉತ್ತರ ಪ್ರದೇಶದಲ್ಲಿ ಕೋಮುಭಾವನೆ ಕೆರಳಿಸುವ ವ್ಯಕ್ತಿಯ ಆಯ್ಕೆಯಾಗಿರುವುದರಿಂದಾಗ ದಿಗ್ಭ್ರಾಂತಿಯುಂಟಾಗಿದೆ" ಎಂದು ಬಡಬಡಿಸಿದ್ದು ನೋಡಲು ಸೋಜಿಗವನ್ನುಂಟು ಮಾಡಿತ್ತು.
2017ರಲ್ಲಿ ರಾಷ್ಟ್ರಪತಿಗಳ ಚುನಾವಣೆ ನಡೆದಾಗ, ಬಿಹಾರದ ರಾಜ್ಯಪಾಲರಾಗಿದ್ದ ರಾಮನಾಥ ಕೋವಿಂದ ಅವರನ್ನು ಎನ್‌ಡಿಎ ಒಕ್ಕೂಟದ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಯಿತು. ಚುನಾ ವಣೆಗೆ ಮುನ್ನ, ಇವರ ಆಯ್ಕೆಯ ಬಗ್ಗೆ ಮಾಧ್ಯಮಗಳಲ್ಲಿ ಸಣ್ಣ ಸುಳಿವೂ ಇರಲಿಲ್ಲ. ಗುಜರಾತಿನಲ್ಲಿ ಸುಮಾರು 82 ಕ್ಷೇತ್ರದಲ್ಲಿ ಕೋವಿಂದ್‌ರವರ ‘ಕೋಲಿ ಸಮಾಜ’ದ ಪ್ರಭಾವವಿತ್ತು; ಅವರ ಆಯ್ಕೆಗೆ ಈ ಸಂಗತಿಯೂ ಪ್ರಮುಖ ಪಾತ್ರ ವಹಿಸಿರುವುದನ್ನು ತಳ್ಳಿಹಾಕಲಾಗದು.
ಹೆಮ್ಮೆಯ ಸಂಗತಿಯೆಂದರೆ, ರಾಮನಾಥ ಕೋವಿಂದ್‌ರವರು ಬಿಜೆಪಿ ಮೂಲದ ಮೊದಲ ರಾಷ್ಟ್ರ ಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ರಾಮನಾಥ ಕೋವಿಂದ್ ಅವರ ಅವಧಿ ಮುಗಿದ ತರುವಾಯ, ಉಪರಾಷ್ಟ್ರಪತಿಗಳಾಗಿದ್ದ ವೆಂಕಯ್ಯ ನಾಯ್ಡು ಅವರ ಹೆಸರು ರಾಷ್ಟ್ರಪತಿ ಹುದ್ದೆಗೆ ಬಲವಾಗಿ ಕೇಳಿಬಂತು. ಆದರೆ ಮೋದಿಯರ ಲೆಕ್ಕಾಚಾರವೇ ಬೇರೆಯದಾಗಿತ್ತು.
ಆದಿವಾಸಿ ಸಮುದಾಯಕ್ಕೆ ಸೇರಿದ್ದ ದ್ರೌಪದಿ ಮುರ್ಮು ಅವರು ಮೋದಿಯವರ ಆಯ್ಕೆ ಆಗಿದ್ದರು. ಹೀಗಾಗಿ, ಮುರ್ಮು ಅವರು ಆ ಸಮುದಾಯಕ್ಕೆ ಸೇರಿದ ದೇಶದ ಮೊಟ್ಟಮೊದಲ ರಾಷ್ಟ್ರಪತಿ ಎನಿಸಿಕೊಳ್ಳುವಂತಾಯಿತು. 2019ರಲ್ಲಿ, ಮೋದಿಯವರು ಎರಡನೆಯ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾದ ತರುವಾಯ, ವಿದೇಶಾಂಗ ಖಾತೆಯು ಯಾರ ಮಡಿಲಿಗೆ ಬೀಳಲಿದೆ ಎಂಬುದು ಕುತೂಹಲದ ವಿಷಯವಾಗಿತ್ತು.
ಕಾರಣ, 2014ರಲ್ಲಿ ಈ ಖಾತೆಯ ಸಚಿವೆಯಾಗಿದ್ದ ಸುಷ್ಮಾ ಸ್ವರಾಜ್‌ರವರು ಅನಾರೋಗ್ಯದ ಕಾರಣ ಚುನಾವಣೆಗೆ ಸ್ಪರ್ಧಿಸಿರಲಿಲ್ಲ. ವಿದೇಶಾಂಗ ಕಾರ್ಯದರ್ಶಿಯಾಗಿ ನಿವೃತ್ತರಾಗಿದ್ದ ಎಸ್.ಜೈಶಂಕರ್ ಅವರು ವಿದೇಶಾಂಗ ಸಚಿವರಾಗಿದ್ದು ಅಚ್ಚರಿಯ ಬೆಳವಣಿಗೆಯಾಗಿತ್ತು. 2021ರಲ್ಲಿ, ಗುಜರಾತ್ ಮುಖ್ಯಮಂತ್ರಿಯಾಗಿದ್ದ ವಿಜಯ್ ರೂಪಾನಿಯವರಿಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸೂಚಿಸಲಾಯಿತು. ಇವರ ಉತ್ತರಾಧಿಕಾರಿಯ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯಿತು.
ನಿತಿನ್ ಪಟೇಲ್, ಗೋರ್ದನ್ ಜಡಾಫಿಯಾ, ಸಿ.ಆರ್.ಪಾಟೀಲ್ ಮುಂತಾದವರ ಹೆಸರುಗಳು ಮಾಧ್ಯಮಗಳಲ್ಲಿ ಹರಿದಾಡಿದವು. ಆದರೆ, ಶಾಸಕಾಂಗ ಪಕ್ಷದ ಸಭೆಯಲ್ಲಿ ಕೊನೆಯ ಸಾಲಿನಲ್ಲಿ ಕುಳಿತಿದ್ದ ಭೂಪೇಂದ್ರ ಪಟೇಲ್‌ರವರನ್ನು ಮುಖ್ಯಮಂತ್ರಿಯಾಗಿ ಘೋಷಿಸಲಾಯಿತು.
ಭೂಪೇಂದ್ರರಿಗೂ ಈ ಆಯ್ಕೆಯು ಅಚ್ಚರಿಯ ಸಂಗತಿಯಾಗಿತ್ತು. 2017ರಲ್ಲಿ ಮೊದಲ ಬಾರಿಗೆ ಶಾಸಕರಾಗಿದ್ದ ಭೂಪೇಂದ್ರರು 2021ರಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸು ವಂತಾದ ಬೆರಗಿನ ಬೆಳವಣಿಗೆ ಸಂಭವಿಸಿತ್ತು. ಅಚ್ಚರಿಯ ಆಯ್ಕೆಯ ಮುಂದಿನ ಸರದಿ, ರಾಜಸ್ಥಾನದ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಅವರದ್ದು.
ಅದುವರೆಗೂ ಸಿಎಂ ಹುದ್ದೆಗೆ ವಸುಂಧರ ರಾಜೆ, ಅರ್ಜುನ್ ಮೇಘವಾಲ್, ಗಜೇಂದ್ರ ಸಿಂಗ್ ಶೇಖಾ ವತ್ ಮುಂತಾದವರ ಹೆಸರುಗಳು ದಟ್ಟವಾಗಿ ಕೇಳಿ ಬರುತ್ತಿದ್ದವು. ಆದರೆ, ಮೊದಲ ಬಾರಿಗೆ ಶಾಸಕ ರಾಗಿ ಆಯ್ಕೆಯಾಗಿದ್ದ ಮತ್ತು ಸುದ್ದಿಯಲ್ಲೇ ಇರದ ಭಜನ್‌ಲಾಲ್ ಶರ್ಮಾ ಅವರು ಮುಖ್ಯಮಂತ್ರಿ ಯಾಗಿ ಆಯ್ಕೆಯಾಗಿ ವಿಜಯದ ನಗೆ ಬೀರಿದರು.
ಅನೇಕ ದಿಗ್ಗಜರು, ಅನುಭವಿ-ಆಕಾಂಕ್ಷಿಗಳಿದ್ದರೂ, ಭವಿಷ್ಯದ ದೃಷ್ಟಿಯಿಂದ ಹೊಸಮುಖಕ್ಕೆ ಮಣೆ ಹಾಕಲಾಗಿತ್ತು. 2024ರ ನವೆಂಬರ್‌ನಲ್ಲಿ, ಮಧ್ಯಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ಅಭೂತಪೂರ್ವ ವಿಜಯವನ್ನು ಸಾಧಿಸಿತು, ಮುಖ್ಯಮಂತ್ರಿಯಾಗಿ ಶಿವರಾಜ್‌ಸಿಂಗ್ ಚೌಹಾಣ್‌ರ ಪುನರಾಯ್ಕೆಯು ಕೇವಲ ಔಪಚಾರಿಕವಷ್ಟೇ ಎಂದು ಭಾವಿಸಲಾಗಿತ್ತು. ಆದರೆ ಎಲ್ಲರ ನಂಬಿಕೆ ಸುಳ್ಳಾಗಿ ಮೋಹನ್ ಯಾದವ್‌ರನ್ನು ಮುಖ್ಯಮಂತ್ರಿಯಾಗಿ ಆಯ್ಕೆಮಾಡಲಾಯಿತು.
ಅನುಭವಿ ಎನಿಸಿದ್ದ ಶಿವರಾಜ್‌ಸಿಂಗ್‌ರವರ ಸುದೀರ್ಘ ರಾಜಕೀಯ ಹೆಜ್ಜೆಯ ಹಾದಿಯನ್ನು ಒಮ್ಮೆಗೇ ಬದಲಾಯಿಸಿ ಹೊಸಪೀಳಿಗೆಯ ನಾಯಕನಿಗೆ ಅವಕಾಶ ನೀಡಲಾಯಿತು.
ರಾಜಕೀಯದಲ್ಲಿ ಅದೃಷ್ಟವಿದ್ದರೆ ಅಧಿಕಾರವು ಹೇಗೆ ಅರಸಿಕೊಂಡು ಬರುತ್ತದೆ ಎಂಬುದಕ್ಕೆ ಸಿ.ಪಿ.ರಾಧಾಕೃಷ್ಣನ್ ರವರನ್ನು ಉದಾಹರಿಸಬಹುದು. 2022ರಲ್ಲಿ ಉಪರಾಷ್ಟ್ರಪತಿಯಾಗಿ ಆಯ್ಕೆ ಯಾಗಿದ್ದ ಜಗದೀಪ್ ಧನಕರ್‌ರವರು ಅನಾರೋಗ್ಯದ ಕಾರಣ ನೀಡಿ ದಿಢೀರನೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. ಪ್ರಾಯಶಃ ಅವರು, ತಾವು ಸಾಗುತ್ತಿದ್ದ ವೇಗದಲ್ಲಿ ನಿಯಂತ್ರಣವನ್ನು ಕಳೆದುಕೊಂಡು, ತಮ್ಮ ಸ್ಥಾನವನ್ನೂ ಕಳೆದುಕೊಂಡರು ಎಂದು ದೆಹಲಿಯ ಮೂಲಗಳು ಹೇಳುತ್ತವೆ.
ಏಕೆಂದರೆ, ಮೋದಿಯವರ ಸಾಮರ್ಥ್ಯವನ್ನು ಸಮರ್ಥವಾಗಿ ಅಂದಾಜು ಮಾಡುವಲ್ಲಿ ಧನಕರ್ ಅವರು ಸೋತಿದ್ದರು. ಹೊಸ ಆಯ್ಕೆಯಾಗಿ ಶೇಷಾದ್ರಿ ಚಾರಿಯವರ ಹೆಸರು ಸೇರಿದಂತೆ ಅನೇಕ ಹೆಸರುಗಳು ಕೇಳಿ ಬರುತ್ತಿದ್ದವು; ಆದರೆ ಅಂತಿಮ ಆಯ್ಕೆ ಎನಿಸಿಕೊಂಡಿದ್ದು ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದ ಸಿ.ಪಿ.ರಾಧಾಕೃಷ್ಣನ್ ಅವರು. ಸಂತಸದ ಸಂಗತಿಯೆಂದರೆ, ಇದೇ ಮೊದಲ ಬಾರಿಗೆ ಇಂದು ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಇಬ್ಬರೂ ಬಿಜೆಪಿ ಸಂಘಟನೆಯಿಂದ ಬಂದವ ರಾಗಿದ್ದಾರೆ.
ಬಿಜೆಪಿಯ ನೂತನ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಯು ಕಳೆದ 30 ತಿಂಗಳಿನಿಂದ ತಡವಾಗಿದೆ. ಹಲವಾರು ಚುನಾವಣೆಗಳ ನಡುವೆ ಈ ಆಯ್ಕೆಯು ಮುಂದಕ್ಕೆ ಹೋಗುತ್ತಲೇ ಇದೆ. ಆದರೆ, ಡಿಸೆಂಬರ್ 14ರ ರಾತ್ರಿ ಮಾಧ್ಯಮಗಳಲ್ಲಿ ಏಕಾಏಕಿ, ‘ನಿತಿನ್ ನಬೀನ್ ಅವರನ್ನು ಬಿಜೆಪಿ ರಾಷ್ಟ್ರೀ ಯ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ’ ಎಂಬ ಪತ್ರಿಕಾ ಹೇಳಿಕೆಯು ಹೊರಬಿತ್ತು. ಇದು ‘ಅಚ್ಚರಿಯಲ್ಲಿ ಅಚ್ಚರಿ’ ಎನ್ನುವಂಥ ಬೆಳವಣಿಗೆಯಾಗಿತ್ತು.
ಬಿಹಾರದ ಗಡಿಯಾಚೆ ಹೆಚ್ಚಿನ ಪರಿಚಯವಿಲ್ಲದ ವ್ಯಕ್ತಿಯೊಬ್ಬರು, ವಿಶ್ವದ ಅತಿದೊಡ್ಡ ಪಕ್ಷ ಸಂಘಟನೆಯ ಕಾರ್ಯಾಧ್ಯಕ್ಷರಾಗುವುದು ಮಹತ್ವದ ಬೆಳವಣಿಗೆಯೇ ಸರಿ. ಬಿಹಾರದಲ್ಲಿ ಐದು ಬಾರಿ ಶಾಸಕರು, ಹಾಲಿ ಸಚಿವರಾಗಿರುವ 45 ವರ್ಷದ ನಿತಿನ್ ನಬೀನ್ ಅವರು ಈ ಅತ್ಯುನ್ನತ ಹುದ್ದೆಗೆ ಆಯ್ಕೆಯಾಗಿದ್ದರಿಂದ, ಧರ್ಮೇಂದ್ರ ಪ್ರಧಾನ್, ಭೂಪೇಂದ್ರ ಯಾದವ್ ಮುಂತಾದವರ ಹೆಸರುಗಳನ್ನು ನೆಚ್ಚಿಕೊಂಡಿದ್ದ ಮಾಧ್ಯಮಗಳ ನಿರೀಕ್ಷೆಯು ಬುಡಮೇಲಾಯಿತು.
ಎಲೆಮರೆಯ ಕಾಯಿಯಂತೆ ಪಕ್ಷದ ಕಾರ್ಯಚಟುವಟಿಕೆಗಳನ್ನು ಮಾಡಿಕೊಂಡು ಹೋಗುತ್ತಿದ್ದ ಮತ್ತು ಮುಂದಿನ ಪೀಳಿಗೆಯ ಸಂಕೇತವಾಗಿರುವ ನಿತಿನ್ ನಬೀನ್‌ರವರಿಗೆ ಈಗ ಭಾರಿ ಹೊರೆಯೇ ಬಿದ್ದಿದೆ; ಪಕ್ಷದ ಚುಕ್ಕಾಣಿಯನ್ನು ಹಿಡಿದು ಮುನ್ನಡೆಸುವ ಗುರುತರ ಜವಾಬ್ದಾರಿಯು ಅವರ ಹೆಗಲೇರಿದೆ. ಮೋದಿಯವರು ಈ ಆಯ್ಕೆಯನ್ನು ಸ್ವಾಗತಿಸುತ್ತಾ, “ನಿತಿನ್ ನಬೀನ್ ಒಬ್ಬ ಯುವ ಮತ್ತು ಶ್ರಮಶೀಲ ನಾಯಕರಾಗಿದ್ದು, ಶ್ರೀಮಂತ ಸಾಂಸ್ಥಿಕ ಅನುಭವವನ್ನು ಹೊಂದಿದ್ದಾರೆ ಮತ್ತು ಬಿಹಾರದಲ್ಲಿ ಶಾಸಕರಾಗಿ, ಒಂದಷ್ಟು ಅವಧಿಗೆ ಸಚಿವರಾಗಿ ಪ್ರಭಾವಶಾಲಿ ದಾಖಲೆಯನ್ನು ಹೊಂದಿದ್ದಾರೆ" ಎಂದು ಪ್ರಶಂಸಿಸಿದ್ದು ಗಮನಾರ್ಹ.
ಜಗತ್ ಪ್ರಕಾಶ್ ನಡ್ಡಾ ಅವರು ಕೂಡ ರಾಷ್ಟ್ರೀಯ ಅಧ್ಯಕ್ಷರಾಗಿ ಔಪಚಾರಿಕವಾಗಿ ಆಯ್ಕೆ ಯಾಗುವುದಕ್ಕೂ ಮುನ್ನ ಕಾರ್ಯಾಧ್ಯಕ್ಷರಾಗಿ ನೇಮಕವಾಗಿದ್ದವರೇ. ಆ ಸ್ಥಾನದ ಕರ್ತವ್ಯವನ್ನು ನಿರ್ವಹಿಸುವ ಮುನ್ನ, ಅದರ ಪರಿಚಯ ಮಾಡಿಕೊಡಲು ಈ ಹೊಸ ಪದ್ಧತಿಯನ್ನು ಆರಂಭಿಸ ಲಾಗಿದೆ ಎನ್ನಲಡ್ಡಿಯಿಲ್ಲ.
ಮೋದಿಯವರ ಯುಗದಲ್ಲಿ ಬಿಜೆಪಿಯು ಹೊಸಹೊಸ ಪದ್ಧತಿ ಮತ್ತು ಪರಂಪರೆಗಳಿಗೆ ನಾಂದಿ ಹಾಡುತ್ತಿದೆ. ಮುಂದಿನ ನಾಯಕತ್ವದ ಸಜ್ಜಿಕೆಯನ್ನು ಗಮನದಲ್ಲಿರಿಸಿಕೊಂಡು ಇಂಥ ತೀರ್ಮಾನ ಗಳನ್ನು ಕೈಗೊಳ್ಳಲಾಗುತ್ತಿದೆ. ಬದಲಾಗುತ್ತಿರುವ ರಾಜಕೀಯ ವಾತಾವರಣಕ್ಕೆ ತಕ್ಕಂಥ ನಿರ್ಧಾರ ಗಳನ್ನು ಕೈಗೊಳ್ಳುವುದು ಮೋದಿ ಮತ್ತು ಅಮಿತ್ ಶಾ ಜೋಡಿಯ ವೈಶಿಷ್ಟ್ಯ. ಹೊಸ ರಕ್ತ ಮಾತ್ರವೇ ಪಕ್ಷದ ಬೆಳವಣಿಗೆಗೆ ಹೊಸ ಆಯಾಮ ಮತ್ತು ವೇಗವನ್ನು ನೀಡಲು ಸಾಧ್ಯ ಎಂಬುದನ್ನು ಈ ಇಬ್ಬರು ನಾಯಕರು ಅರಿತು, ಅದಕ್ಕೆ ತಕ್ಕಂಥ ವೇದಿಕೆಯನ್ನು ಸಿದ್ಧಗೊಳಿಸುತ್ತಿದ್ದಾರೆ.
ಈ ದೂರದೃಷ್ಟಿಯ ಹೆಜ್ಜೆಯು ಪಕ್ಷದ ಭವಿಷ್ಯದ ದೃಷ್ಟಿಯಿಂದ ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಮೋದಿ ಮತ್ತು ಶಾ ಜೋಡಿಯು ರಾಜಕೀಯ ವಿಶ್ಲೇಷಕರ ಊಹೆಗೆ ನಿಲುಕದೆ, ಮಾಧ್ಯಮಗಳ ‘ಬ್ರೇಕಿಂಗ್ ನ್ಯೂಸ್’ಗೆ ಆಹಾರವಾಗದೆ, ಭಾರತದ ರಾಜಕಾರಣದಲ್ಲಿ ಅಚ್ಚರಿಯ ಫಲಿತಾಂಶವನ್ನು ಸಾಧಿಸುತ್ತಿರುವುದರೊಂದಿಗೆ, ಅಚ್ಚರಿಯ ನೇಮಕಾತಿಗಳನ್ನೂ ಕೈಗೊಳ್ಳುತ್ತಾ ಬಂದಿದೆ.
ತನ್ಮೂಲಕ, ಬಿಜೆಪಿಯನ್ನು ಆಯಾ ಕಾಲಘಟ್ಟಕ್ಕೆ ತಕ್ಕಂತೆ ಸನ್ನದ್ಧಗೊಳಿಸುತ್ತಾ, ರಾಜಕೀಯ ವಿರೋಧಿಗಳನ್ನು ಕಂಗೆಡಿಸುತ್ತಿದೆ. ಇದು ಬಿಜೆಪಿಯ ಹೊಸ ಚಹರೆಯ ವೈಶಿಷ್ಟ್ಯ ಎಂದರೆ ಅತಿಶಯೋಕ್ತಿ ಆಗಲಾರದು...
(ಲೇಖಕರು ಬಿಜೆಪಿಯ ವಕ್ತಾರರು)