ಸಂಪಾದಕೀಯ ಸದ್ಯಶೋಧನೆ
ಒಂದು ಭೌತಿಕ ಕಾರ್ಡ್ ಅಂಚೆ ಮೂಲಕ ತಲುಪುವಾಗ ಸುಮಾರು 140 ಗ್ರಾಂ ಇಂಗಾಲದ ಡೈಆಕ್ಸೈಡ್ (CO2) ಹೊರಸೂಸುವಿಕೆಗೆ ಕಾರಣವಾಗುತ್ತದೆ. ಈ 140 ಗ್ರಾಂ ಲೆಕ್ಕಾಚಾರ ದಲ್ಲಿ ಕಾರ್ಡ್ ತಯಾರಿಕೆಗೆ ಬಳಸಿದ ಕಾಗದ, ಅದರ ಮೇಲಿನ ಮುದ್ರಣ, ಅದನ್ನು ಸಾಗಿಸಲು ಬಳಸಿದ ವಾಹನಗಳ ಇಂಧನ ಮತ್ತು ನಂತರ ಆ ಕಾರ್ಡ್ ಅನ್ನು ಮರುಬಳಕೆ ಮಾಡಿದಾಗ ಉಳಿತಾಯವಾಗುವ ಇಂಗಾಲದ ಪ್ರಮಾಣ- ಎಲ್ಲವನ್ನೂ ಸೇರಿಸಲಾಗಿದೆ.
ಇದನ್ನು ಸರಳವಾಗಿ ಅರ್ಥಮಾಡಿಕೊಳ್ಳಬೇಕೆಂದರೆ, ನೀವು ಒಂದು ವರ್ಷದಲ್ಲಿ ಅಂಚೆ ಮೂಲಕ 50 ಕಾರ್ಡ್‌ಗಳನ್ನು ಕಳುಹಿಸಿದರೆ, ಅದು ಒಂದು ದೊಡ್ಡ 44 ಜೀಪ್ ಅಥವಾ ಕಾರನ್ನು ಸತತವಾಗಿ 5 ಮೈಲುಗಳಷ್ಟು ಓಡಿಸಿದಾಗ ಹೊರ ಬರುವ ಹೊಗೆಗೆ ಸಮಾನ ವಾಗಿರುತ್ತದೆ ಅಥವಾ ನಿಮ್ಮ ಮನೆಯ ಒಂದು ಬಲ್ಬ್ ಅನ್ನು ಸತತವಾಗಿ ಒಂದು ವಾರ ಕಾಲ ಆಫ್ ಮಾಡದೆ ಉರಿಯಲು ಬಿಟ್ಟರೆ ಎಷ್ಟು ವಿದ್ಯುತ್ ವ್ಯಯವಾಗಿ ಇಂಗಾಲ ಬಿಡುಗಡೆಯಾಗುತ್ತದೆಯೋ, ಅಷ್ಟು ಮಾಲಿನ್ಯ ಈ 50 ಕಾರ್ಡ್‌ಗಳಿಂದಾಗುತ್ತದೆ. ಕಾಗದದ ಬಳಕೆಯಿಲ್ಲದ ಕಾರಣ ಇ-ಕಾರ್ಡ್‌ಗಳು ಸಂಪೂರ್ಣ ಪರಿಸರಸ್ನೇಹಿ ಎಂದು ನಾವು ಭಾವಿಸುತ್ತೇವೆ. ಆದರೆ ಅದೂ ಕೂಡ ಇಂಗಾಲವನ್ನು ಬಿಡುಗಡೆ ಮಾಡುತ್ತದೆ!
ಇದನ್ನೂ ಓದಿ: Vishweshwar Bhat Column: ಯಾರ ಕೈಗೂ ಸಿಗದ ಜಾರ್ಜ್
ಭಾರಿ ಗಾತ್ರದ ಗ್ರಾಫಿಕ್ಸ್ ಅಥವಾ ಚಿತ್ರಗಳನ್ನು ಒಳಗೊಂಡಿರುವ ಒಂದು ಇ-ಕಾರ್ಡ್ ಅನ್ನು ಇಮೇಲ್ ಮೂಲಕ ಕಳುಹಿಸಿದರೆ ಸುಮಾರು 50 ಗ್ರಾಂ CO2 ಉತ್ಪತ್ತಿಯಾಗುತ್ತದೆ. ಡಿಜಿಟಲ್ ಕಾರ್ಡ್ ಕಳುಹಿಸುವಾಗ ನೀವು ಬಳಸುವ ಕಂಪ್ಯೂಟರ್/ಮೊಬೈಲ್‌ನ ವಿದ್ಯುತ್, ಇಂಟರ್ನೆಟ್ ನೆಟ್ವರ್ಕ್ ಮತ್ತು ಆ ಫೈಲ್ ಅನ್ನು ಸಂಗ್ರಹಿಸಿಡುವ ಜಾಗತಿಕ ದತ್ತಾಂಶ ಕೇಂದ್ರಗಳ (Email Servers) ದೈತ್ಯ ಸರ್ವರ್‌ಗಳು ಬಳಸುವ ಅಪಾರ ಪ್ರಮಾಣದ ವಿದ್ಯುತ್ ನಿಂದಾಗಿ ಈ ಇಂಗಾಲ ಬಿಡುಗಡೆಯಾಗುತ್ತದೆ. ಆದರೂ, ಭೌತಿಕ ಕಾರ್ಡ್‌ಗೆ ಹೋಲಿಸಿದರೆ ಇದು ಉತ್ತಮ. ಏಕೆಂದರೆ ಮೂರು ಇ-ಕಾರ್ಡ್‌ಗಳನ್ನು ಕಳುಹಿಸುವುದು ಕೇವಲ ಒಂದು ಭೌತಿಕ ಕಾರ್ಡ್ ಕಳುಹಿಸುವುದಕ್ಕೆ ಸಮನಾಗಿರುತ್ತದೆ. ನೀವು ಪರಿಸರದ ಬಗ್ಗೆ ಅತ್ಯಂತ ಕಾಳಜಿ ಉಳ್ಳವರಾಗಿದ್ದರೆ, ಯಾವುದೇ ಚಿತ್ರ ಅಥವಾ ಇ-ಕಾರ್ಡ್ ಲಗತ್ತಿಸದೆ (Attachment) ಕೇವಲ ಇಮೇಲ್‌ನಲ್ಲಿ ‘Happy Birthday’ ಎಂದು ಟೈಪ್ ಮಾಡಿ ಕಳುಹಿಸಿದರೆ, ಅದರ ಇಂಗಾಲದ ಹೆಜ್ಜೆಗುರುತು ಕೇವಲ 4 ಗ್ರಾಂ ಮಾತ್ರ! ಇದಕ್ಕಿಂತಲೂ ಅತ್ಯುತ್ತಮ ಮತ್ತು ಕನಿಷ್ಠ ಮಾಲಿನ್ಯದ ದಾರಿ ಎಂದರೆ ಮೊಬೈಲ್ ಮೂಲಕ ಕಳುಹಿಸುವ ಸಾಮಾನ್ಯ ಟೆಕ್ಸ್ಟ್ ಮೆಸೇಜ್ (SMS).
ಒಂದು ಸಾಮಾನ್ಯ ಜನ್ಮದಿನದ ಟೆಕ್ಸ್ಟ್ ಸಂದೇಶವು ಕೇವಲ 0.014 ಗ್ರಾಂ CO2 ಅನ್ನು ಮಾತ್ರ ಉತ್ಪಾದಿಸುತ್ತದೆ. ಇದರ ಗಣಿತ ಎಷ್ಟು ರೋಮಾಂಚಕವಾಗಿದೆ ಎಂದರೆ, ನೀವು ಕಳುಹಿಸುವ ಕೇವಲ 1 ಭೌತಿಕ ಜನ್ಮದಿನದ ಕಾರ್ಡ್‌ನ ಇಂಗಾಲದ ಪ್ರಮಾಣಕ್ಕೆ ಸಮನಾಗ ಬೇಕಾದರೆ, ಬರೋಬ್ಬರಿ 10000 ಟೆಕ್ಸ್ಟ್ ಸಂದೇಶಗಳನ್ನು ಕಳುಹಿಸಬೇಕಾಗುತ್ತದೆ!
ತಾಂತ್ರಿಕವಾಗಿ ಟೆಕ್ಸ್ಟ್ ಮೆಸೇಜ್ ಅಥವಾ ಇಮೇಲ್ ಜಗತ್ತಿಗೆ ಅತ್ಯಂತ ಒಳ್ಳೆಯದು ಎನ್ನು ವುದು ನಿಜ. ಆದರೆ, ‘ಕೇವಲ 0.014 ಗ್ರಾಂ ಇಂಗಾಲದ ಉಳಿತಾಯವಾಯಿತು’ ಎಂದು ಪ್ರೀತಿ ಪಾತ್ರರಿಗೆ ಕೇವಲ ಒಂದು ಒಣ ಸಂದೇಶ ಕಳುಹಿಸಿದರೆ ಅದರಲ್ಲಿ ಹಬ್ಬದ ಅಥವಾ ಪ್ರೀತಿಯ ಅತ್ಮೀಯತೆ ಎಲ್ಲಿದೆ? ಕೈಯಾರೆ ಬರೆದ ಪತ್ರ ಅಥವಾ ಕಾರ್ಡ್ ನೀಡುವ ಸ್ಪರ್ಶ ಮತ್ತು ಸಂತೋಷವನ್ನು ಕೇವಲ ಒಂದು ವಾಟ್ಸಾಪ್ ಅಥವಾ ಎಸ್‌ಎಂಎಸ್ ಸಂದೇಶ ನೀಡಲು ಸಾಧ್ಯವಿಲ್ಲ. ಹಾಗಾದರೆ ಇದಕ್ಕೆ ಪರಿಹಾರವೇನು? ಪರಿಸರವನ್ನು ಉಳಿಸಲು ನಾವು ನಮ್ಮ ಬದುಕಿನ ಸಣ್ಣಪುಟ್ಟ ಆನಂದಗಳನ್ನು ತ್ಯಾಗ ಮಾಡಬೇಕೇ? ಖಂಡಿತ ಇಲ್ಲ.
ತಜ್ಞರು ಹೇಳುವ ಪ್ರಕಾರ, ಹುಟ್ಟುಹಬ್ಬದ ಕಾರ್ಡ್‌ಗಳನ್ನು ಕಳುಹಿಸುವ ಪ್ರೀತಿಯ ಸಂಪ್ರದಾಯವನ್ನು ನಿಲ್ಲಿಸುವ ಅಗತ್ಯವಿಲ್ಲ. ಬದಲಿಗೆ, ಆ ಕಾರ್ಡ್‌ನಿಂದ ಉಂಟಾಗುವ 140 ಗ್ರಾಂ ಇಂಗಾಲದ ನಷ್ಟವನ್ನು ನಾವು ನಮ್ಮ ದೈನಂದಿನ ಬದುಕಿನ ಬೇರೆ ಚಟುವಟಿಕೆ ಗಳಲ್ಲಿ ಸರಿದೂಗಿಸಬಹುದು (Carbon Offsetting). ಉದಾಹರಣೆಗೆ, ಹತ್ತಿರದ ಅಂಗಡಿಗೆ ಹೋಗುವಾಗ ಬೈಕ್ ಅಥವಾ ಕಾರ್ ಬಳಸುವ ಬದಲು ನಡೆದುಕೊಂಡು ಹೋಗುವುದು ಅಥವಾ ಸೈಕಲ್ ಬಳಸುವುದು. ಇದರಿಂದ ಕಾರ್ಡ್‌ಗಿಂತ ನೂರಾರು ಪಟ್ಟು ಹೆಚ್ಚಿನ ಇಂಧನ ಮತ್ತು ಇಂಗಾಲ ಉಳಿತಾಯವಾಗುತ್ತದೆ.
ನಡೆದುಕೊಂಡು ಹೋಗುವುದರಿಂದ ಪರಿಸರವೂ ಉಳಿಯುತ್ತದೆ, ಜತೆಗೆ ನಿಮ್ಮ ಜನ್ಮದಿನ ದಂದು ತಿಂದ ಕೇಕ್‌ನ್ನ ಹೆಚ್ಚುವರಿ ಕ್ಯಾಲೊರಿಗಳೂ ಬರ್ನ್ ಆಗಿ ಆರೋಗ್ಯವೂ ವೃದ್ಧಿಸು ತ್ತದೆ.