ಶಶಾಂಕಣ
ನಮ್ಮ ರಾಜ್ಯದಲ್ಲಿ ಚಾರಣ ಮಾಡಲು ಅಕ್ಟೋಬರ್ನಿಂದಾರಂಭಿಸಿ ಎರಡು ಮೂರು ತಿಂಗಳುಗಳ ಕಾಲ ಪ್ರಶಸ್ತ ಕಾಲ. ಸಾಮಾನ್ಯವಾಗಿ ಎಲ್ಲಾ ಕಡೆ ಸ್ವಲ್ಪವಾದರೂ ಮಳೆಯಾಗಿ, (ಎಲ್ ನಿನೋ ಪ್ರಭಾವದಿಂದಾಗಿ ಈ ವರ್ಷ ಕೆಲವೆಡೆ ಕಡಿಮೆಯಾಗಿದ್ದರೂ) ಗಿಡ ಮರಗಳು ಹಸುರಿ ನಿಂದ ತುಂಬಿರುವ ಕಾಲವಿದು. ಜತೆಗೆ, ಪರ್ವತಗಳ ಮಧ್ಯೆ, ಬಯಲು ಸೀಮೆಯ ಬೆಟ್ಟಗಳ ಅಂಚಿನಲ್ಲಿರುವ ಮೈದಾನದಂತಹ ಜಾಗಗಳಲ್ಲಿ ಹುಲ್ಲು ಬೆಳೆದು, ನೋಡಲು ನಿಜಕ್ಕೂ ಚಂದ ಎನಿಸುವ ದೃಶ್ಯ ಕಾಣಿಸುತ್ತದೆ.
ಈ ಸಮಯದಲ್ಲಿ, ಕುದುರೆಮುಖ ಶಿಖರಕ್ಕೆ ಚಾರಣ ಮಾಡಿದರೆ, ಅಲ್ಲಿರುವ ಒಂಟಿ ಮರ ಎಂಬ ತಾಣದಿಂದ ದಿಟ್ಟಿ ಹಾಯಿಸಿದರೆ, ಎಲ್ಲಾ ಪರ್ವತಗಳ ಇಳಿಜಾರುಗಳು ಹುಲ್ಲುಗಾವಲಿನ ರೀತಿಯೇ ಕಾಣಿಸುತ್ತದೆ. ಪೂರ್ತಿ ಹಸುರು ತುಂಬಿದ ಬೆಟ್ಟದ ಇಳಿಜಾರುಗಳು, ಒಬ್ಬೊಬ್ಬರ ಮನದಲ್ಲಿ ಒಂದೊಂದು ಭಾವಗಳನ್ನು ಉದಿಸಬಲ್ಲದು.
ಕವಿ ಹೃದಯದವರಿಗೆ ಕವನ ಬರೆಯುವ ಸ್ಫೂರ್ತಿಯನ್ನೂ, ಭಾವ ಜೀವಿಗಳಿಗೆ ರೆಕ್ಕೆಕಟ್ಟಿಕೊಂಡು ಹಾರುವ ಹುಮ್ಮಸ್ಸನ್ನೂ, ರಸಿಕರಿಗೆ ನಾನಾ ಕನಸಿನ ಮೋಹಕ ಲೋಕವನ್ನೂ ತೆರೆದುಕೊಡ ಬಲ್ಲದು, ಆ ಇಳಿಜಾರು. ಬಯಲು ಸೀಮೆಯ ಬೆಟ್ಟ ಗುಡ್ಡಗಳು, ಕುರುಚಲು ಪ್ರದೇಶಗಳು ಸಹ ಸಾಕಷ್ಟು ಹಸುರಿನಿಂದ ತುಂಬಿರುವ ಕಾಲವಿದು; ಸುಮಾರು ಜನವರಿಯ ನಂತರ, ಕಡಿಮೆ ಮಳೆಯಾಗುವ ಜಾಗಗಳಲ್ಲಿ ಹಸುರು ಕಡಿಮೆ ಯಾಗತೊಡಗುತ್ತದೆ, ಬಿಸಿಲಿನ ಝಳ ಆರಂಭ ವಾಗುತ್ತದೆ.
ಇದನ್ನೂ ಓದಿ: Sanmati Hegde Column: ಬೇಡ್ತಿ ತಿರುವು: ಜೆನ್ʼಝಿ ವಿದ್ಯಾರ್ಥಿಯ ಆತಂಕ
ಆದ್ದರಿಂದಲೇ, ಚಾರಣಕ್ಕೆ ವರ್ಷದ ಈಗಿನ ಋತುಗಳು ಪ್ರಶಸ್ತ ಕಾಲ. ನಮ್ಮ ಜನರಲ್ಲಿ ಒಂದು ಸಣ್ಣ ತಪ್ಪು ಕಲ್ಪನೆಯಿದೆ; ಅದೇನೆಂದರೆ, ಚಾರಣ ಮಾಡಲು ದಟ್ಟ ಕಾಡಿನಿಂದ ತುಂಬಿದ ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಸಾಧ್ಯ, ಬೇರೆ ಕಡೆ ಅಂತಹ ರೋಮಾಂಚಕ ಅನುಭವ ದೊರಕುವುದಿಲ್ಲ ಎಂಬ ಅಭಿಪ್ರಾಯ ಅದು.
ನಿಜ ಹೇಳಬೇಕೆಂದರೆ, ಚಾರಣವನ್ನು ಎಲ್ಲಿ ಬೇಕಾದರೂ ಮಾಡಬಹುದು. ದಟ್ಟ ಕಾಡಿನಲ್ಲೂ ಮಾಡಬಹುದು, ಮರುಭೂಮಿಯಲ್ಲೂ ಮಾಡಬಹುದು, ಹಿಮ ತುಂಬಿದ ಶಿಖರಗಳ ಅಂಚಿನಲ್ಲೂ, ಕಣಿವೆಗಳಲ್ಲೂ ನಡೆಯುತ್ತಾ ಸಂತಸ ಪಡಬಹುದು. ನಮ್ಮ ರಾಜ್ಯದಲ್ಲಿ ದಟ್ಟ ಕಾಡಿನಿಂದ ಕೂಡಿದ ಪಶ್ಚಿಮಘಟ್ಟಗಳು ಇರುವುದರಿಂದಾಗಿ, ಅಲ್ಲಿನ ಚಾರಣದ ಅನುಭವ ದೊರಕಿದರೆ ನಿಜಕ್ಕೂ ರೋಚಕವೇ ಸರಿ.
ಕುದುರೆಮುಖ, ಕೊಡಚಾದ್ರಿ, ಕುಮಾರ ಪರ್ವತ, ನೇತ್ರಾವತಿ ಶಿಖರ (ಈಚಿನ ವರ್ಷಗಳಲ್ಲಿ ಇದು ಬಲು ಜನಪ್ರಿಯ) ಇತ್ಯಾದಿಗಳಲ್ಲಿ ನಡೆದಾಡಿದರೆ, ಕಾಡಿನ ಸಾಂಗತ್ಯವೂ ದೊರಕೀತು, ಚಂದದ ದೃಶ್ಯಗಳನ್ನೂ ಕಣ್ತುಂಬಿಕೊಳ್ಳಬಹುದು. ಇದನ್ನು ಹೊರತುಪಡಿಸಿಯೂ, ನಮ್ಮ ರಾಜ್ಯದಲ್ಲಿ ನಾನಾ ರೀತಿಯ ತಾಣಗಳಲ್ಲಿ ಸೊಗಸಾದ ಚಾರಣ ಮಾಡಬಹುದು.
ರಾಮನಗರ ಸುತ್ತಲಿನ ಬೆಟ್ಟಗಳು, ಕಾವೇರಿ ತೀರದ ಕಾಡುಪ್ರದೇಶ, ಚಿತ್ರದುರ್ಗ ಸನಿಹದ ಬೆಟ್ಟಗಳು, ಸಂಡೂರಿನ ಹಸಿರು ಶ್ರೇಣಿ, ಮಲೆ ಮಾದೇಶ್ವರ ಬೆಟ್ಟಗಳು ಹೀಗೆ. ಇಂತಹದ್ದೇ ಒಂದು ಚಾರಣ ಅನುಭವ ವನ್ನು ನಾನು ಪಡೆದದ್ದು ಅರಸಿಕೆರೆ ಗರುಡನ ಗಿರಿ ಬೆಟ್ಟದಲ್ಲಿ ಮತ್ತು ಅದಕ್ಕೆ ಸಮಾನಾಂತರವಾಗಿ ಹಬ್ಬಿಕೊಂಡಿರುವ ಹಿರೆಕಲ್ಲು ಗುಡ್ಡಗಳ ಶ್ರೇಣಿಯಲ್ಲಿ. ಅಲ್ಲಿನ ಗುಡ್ಡಗಳಲ್ಲಿ ನಡೆದಾಡುತ್ತಾ ಕಳೆದು ಹೋಗುವ ಅಪೂರ್ವ ಅನುಭವ ದೊರಕಲು, ಅದಕ್ಕೂ ಮುಂಚೆ ಚಾರಣದ ರುಚಿಯನ್ನು ಹತ್ತಿಸಿದ ಪಶ್ಚಿಮ ಘಟ್ಟಗಳಿಗೆ ಧನ್ಯವಾದ ಹೇಳಬೇಕು.
ಕೆಲವು ದಶಕಗಳ ಹಿಂದೆ, ಸಹ್ಯಾದ್ರಿಯಲ್ಲಿ ಮೊದಲ ಚಾರಣ ನಡೆಸಿದ ಆ ಅನುಭವ ಇನ್ನೂ ಮನದಲ್ಲಿ ಹಸಿರಾಗಿದೆ. ಕರಾವಳಿ ಜಿಲ್ಲೆಯ ಪುಣ್ಯಕ್ಷೇತ್ರ ಎನಿಸಿರುವ ಕೊಲ್ಲೂರಿನ ಪೂರ್ವದಿಕ್ಕಿನಲ್ಲಿ ತಲೆ ಎತ್ತಿ ನಿಂತಿರುವ ಕೊಡಚಾದ್ರಿ ಶಿಖರಕ್ಕೆ ನಾನು ಒಂಭತ್ತು ಬಾರಿ ಚಾರಣ ಮಾಡಿದ್ದೆ; ಎಲ್ಲಾ ಬಾರಿಯೂ ಗೆಳೆಯರ ಜತೆಯಲ್ಲೇ ಹೋಗಿದ್ದು; ಅಲ್ಲಿ ಏಕಾಂಗಿಯಾಗಿ ಚಾರಣ ಮಾಡುವ ಕನಸು ಇನ್ನೂ ಬಾಕಿಯಿದೆ!
ನನ್ನ ಚಾರಣದ ಗುರು ಚಂದ್ರಕಾಂತ ಕಾಮತ್ ಎಂಬುವವರು ಕೆಲವು ದಶಕಗಳ ಹಿಂದೆ, ಕೊಡಚಾದ್ರಿಗೆ ಕರೆದೊಯ್ದು, ಕಾಡುಮೇಡುಗಳಲ್ಲಿ ಸುತ್ತಾಡಿಸಿ, ಅಲ್ಲೇ ಕಳೆದು ಹೋದಾಗ ಸಿಗುವ ಅಪೂರ್ವ ಅನುಭವದ ರುಚಿ ಹಚ್ಚಿಸಿದವರು; ಅದು ನನ್ನ ಮೊದಲ ಚಾರಣ; ಅವರೆಷ್ಟು ಉದಾರಿಗಳು ಎಂದರೆ, ಎರಡನೆಯ ಚಾರಣವಾಗಿ ಅವರ ಜತೆ ನನ್ನನ್ನು ಗಡಾಯಿ ಕಲ್ಲು (ಜಮಲಾಬಾದ್)ಗೆ ಕರೆದೊಯ್ದು, ಅವರ ಇತರ ಚಾರಣಿಗರಿಂದ ನಿಷ್ಠುರವನ್ನೂ ಕಟ್ಟಿಕೊಳ್ಳ ಬೇಕಾಯ್ತು; ತಮ್ಮ ಪ್ರೈವೆಸಿಗೆ ಭಂಗ ತರುವ ಈ ಹೊಸ ವ್ಯಕ್ತಿ ಯಾಕೆ ಎಂಬ ಅಭಿಪ್ರಾಯ ಅವರ ಗೆಳೆಯರದು.
ಮೊದಲ ಬಾರಿ ಕೊಡಚಾದ್ರಿಗೆ ಅವರ ಜತೆ ಹೋಗಿದ್ದಾಗ, ನಾಗೋಡಿಯಿಂದ ಹೊರಟು, ದಟ್ಟ ಕಾಡಿನ ನಡುವಿನ ಏರುದಾರಿಯಲ್ಲಿ ನಡೆದು ಸುಸ್ತಾಗಿ, ಕಲ್ಲಿನ ಮೇಲೆ ಕುಳಿತು, ಎಲ್ಲರೂ ಒಂದೊಂದು ಕಿತ್ತಳೆ ಹಣ್ಣನ್ನು ತಿನ್ನುವಾಗ ಕೇಳಿದ್ದೆ: ‘ಕೊಡಚಾದ್ರಿಗೆ ಒಬ್ಬರೇ ನಡೆದು ಹೋಗಲು ಸಾಧ್ಯವೆ?’ ಚಂದ್ರಕಾಂತ ಕಾಮತರು ನನ್ನನ್ನು ತುಸು ದೀರ್ಘವಾಗಿ ನೋಡಿ, ‘ಆಗದೇ ಏನು? ಒಬ್ಬೊಬ್ಬರು ನಡೆದಾಡಿಕೊಂಡು ಈ ಪರ್ವತಕ್ಕೆ ಆಗಾಗ ಬರುವುದುಂಟು’ ಎಂದರು. ಆಗಿನಿಂದಲೂ, ಅದೇಕೋ ಬೆಟ್ಟಗುಡ್ಡಗಳಲ್ಲಿ ಏಕಾಂಗಿಯಾಗಿ ನಡೆಯುತ್ತಾ ಸಾಗಬೇಕೆಂಬ ತುಡಿತ!
ಆದರೆ ಕೊಡಚಾದ್ರಿಯಂತಹ ದಟ್ಟ ಕಾಡಿನ ನಡುವೆ ಇರುವ ಶಿಖರಗಳಿಗೆ ಏಕಾಂಗಿ ಚಾರಣದಲ್ಲಿ ಸಣ್ಣ ಮಟ್ಟದ ಅಪಾಯ ಸಾಧ್ಯತೆ ಇದೆ; ದಟ್ಟ ಕಾಡಿನ ನಡುವೆ ಸಾಗುವ ಅಲ್ಲಿನ ಚಾರಣ ದಾರಿಯುದ್ದಕ್ಕೂ, ನಿರ್ಜನ ಪ್ರದೇಶ. ಸುಸ್ತಾದರೆ, ಅಥವಾ ಬೇರೆ ತುರ್ತು ಸಂದರ್ಭ ಎದುರಾದರೆ, ತಕ್ಷಣ ಸಹಾಯ ದೊರಕುವುದು ಕಷ್ಟ. (ಈಚಿನ ದಶಕಗಳಲ್ಲಿ ಕೊಡಚಾದ್ರಿಯ ತುದಿಗೆ ಹೋಗಲು, ಜೀಪ್ಗಳ ಸಾಹಸ ಯಾನದ ಅವಕಾಶ ಕೂಡಿಬಂದಿದೆ.) ಕೊನೆಗೂ, ಕೊಡಚಾದ್ರಿಗೆ ಏಕಾಂಗಿಯಾಗಿ ಚಾರಣ ಮಾಡುವ ನನ್ನ ಆಸೆ ಇನ್ನೂ ಕನಸಾಗಿಯೇ ಉಳಿದಿದೆ.
ನನ್ನ ಏಕಾಂಗಿ ಚಾರಣದ ಕನಸನ್ನು ಸಮಾಧಾನ ಪಡಿಸಿಕೊಳ್ಳಲು, ಬೇರೊಂದು ಸಂದರ್ಭದಲ್ಲಿ ಅರಸಿಕೆರೆ ಸನಿಹದ ಹಿರೆಕಲ್ಲು ಗುಡ್ಡದಲ್ಲಿ ಅವಕಾಶ ಸಿಕ್ಕಿತು! ಅದುವರೆಗೆ ದಟ್ಟ ಕಾಡಿನಲ್ಲಿ ಹಲವು ಬಾರಿ ಚಾರಣ ನಡೆಸುವ ಅವಕಾಶ ದೊರಕಿತ್ತು; ಆದರೆ, ಬಯಲು ಸೀಮೆಯ ಮಧ್ಯದಲ್ಲಿ ಹರಡಿಕೊಂಡಿರುವ ಇಂತಹದೊಂದು ಬೆಟ್ಟಗಳ ನಡುವೆ ನಡೆಯುತ್ತಾ, ವಿಶಿಷ್ಟ ಅನುಭವವನ್ನು ಪಡೆಯಬಹುದು ಎಂದು ಅರಿತಾಗ, ನಿಜಕ್ಕೂ ಖುಷಿಯಾಗಿತ್ತು. ಬಯಲುಸೀಮೆಯಾದರೇನು, ಮಲೆಸೀಮೆಯಾ ದರೇನು, ನಡೆಯುವ ಹುಮ್ಮಸ್ಸು, ಆಸಕ್ತಿ ಮನದಲ್ಲಿದ್ದರೆ, ಚಾರಣ ಸುಖ ದಕ್ಕುತ್ತದೆ!
ಅರಸಿಕೆರೆ ಸನಿಹದ ಹಿರೆಕಲ್ಲು ಗುಡ್ಡಗಳ ನಡುವೆ ಏಕಾಂಗಿಯಾಗಿ ನಡೆಯುವ ಮೊದಲು, ಅದೇ ಸರಹದ್ದಿ ನಲ್ಲಿರುವ ಗರುಡನಗಿರಿ ಮತ್ತು ಹಿರೆಕಲ್ಲು ಗುಡ್ಡಗಳಿಗೆ ಸ್ಥಳೀಯ ಗೆಳೆಯರ ಜತೆ ಚಾರಣ ಹೋಗಿದ್ದೆ. ಹಾಗೆ ನೋಡಿದರೆ, ಹಿರೆಕಲ್ಲು ಗುಡ್ಡ ಸಾಕಷ್ಟು ವಿಶಾಲವಾದ ಪ್ರದೇಶ; ಹದವಾದ ಕಾಡು, ಕಲ್ಲುಗಳ ವಿನ್ಯಾಸ ಗಳು, ಕಾಡಿನ ನಡುವೆ ಸಾಗುವ ದಾರಿಗಳು ಅಲ್ಲಿನ ವಿಶೇಷ. ಜತೆಗೆ, ಆ ಬೆಟ್ಟಶ್ರೇಣಿಯ ನಡುವೆ, ಅಲ್ಲಲ್ಲಿ ಕೆಲವು ದೇವಾಲಯಗಳಿವೆ; ಆ ಬೆಟ್ಟ ಸಾಲಿನ ತುದಿಯಲ್ಲಿ, ಕಾಡಿನ ಗರ್ಭದಲ್ಲಿರುವ ಆ ದೇಗುಲಗಳನ್ನು ತಲುಪಲು ನಾಲ್ಕೆಂಟು ಕಿ.ಮೀ. ನಡೆಯಬೇಕು.
ಅಲ್ಲಿನ ಸಿದ್ಧರ ಬೆಟ್ಟ, ಕೊಟ್ಟೂರೇಶ್ವರ ಗುಡಿ, ಶಂಕರ ಮಠ, ಬ್ರಿಟಿಷ್ ಬಂಗಲೆ ಮೊದಲಾದ ಕಡೆ, ಗೆಳೆಯರ ಜತೆ ನಡೆದಿದ್ದು ಕೆಲವು ಬಾರಿ. ದೂರದಿಂದ ಕಾಣುವಾಗ ಮೇಲ್ನೋಟಕ್ಕೆ ಪೂರ್ತಿ ಒಣಪ್ರದೇಶದಂತೆ ಕಾಣುವ, ಹತ್ತಾರು ಕಿ.ಮೀ. ಉದ್ದವಿರುವ ಆ ಬೆಟ್ಟ ಶ್ರೇಣಿಯ ಆಳದಲ್ಲಿ, ಸಾಕಷ್ಟು ಕಾಡು ಬೆಳೆದಿತ್ತು!
ಮರ, ಗಿಡ, ಬಳ್ಳಿ, ವಿಚಿತ್ರ ಬಂಡೆಗಳೇ ತುಂಬಿರುವ ಆ ಬೆಟ್ಟಗಳಲ್ಲಿ ನಡೆದಾಡುವುದು ಒಂದು ಸುಂದರ ಅನುಭವ. ಆ ಬೆಟ್ಟಗಳ ಮೋಡಿಗೆ ನಾನೆಷ್ಟು ಒಳಗಾಗಿದ್ದೆನೆಂದರೆ, ಸ್ಥಳೀಯ ಹುಡುಗ ರನ್ನು ಪುಸಲಾಯಿಸಿ, ಜತೆ ಮಾಡಿಕೊಂಡು, ಅಲ್ಲಿನ ನರಸೀಪುರ ಎಂಬ ಹಳ್ಳಿಯ ಬಳಿ ಬೆಳಗ್ಗೆ ಹಿರೆಕಲ್ಲು ಬೆಟ್ಟವೇರಿ, ಹಗಲಿಡೀ ನಡೆದು, ಮಧ್ಯಾಹ್ನ ದಾಟುವ ವೇಳೆಗೆ ಅರಸಿಕೆರೆ ಬಳಿಯ ಮಾಲೆಕಲ್ಲು ತಿರುಪತಿ ಬೆಟ್ಟದ ಬಳಿಗೆ ಬೆಟ್ಟದಲ್ಲೇ ನಡೆದು ಬಂದು, ವಿರುದ್ಧ ದಿಕ್ಕಿನಲ್ಲಿ ನಡೆದು ಕೊನೆಗೆ, ಸಂಜೆಯ ಹೊತ್ತಿಗೆ ಅರಸಿಕೆರೆಯನ್ನು ತಲುಪಿದ್ದೆವು. ಇಂತಹ ಹಿರೆಕಲ್ಲು ಗುಡ್ಡಗಳನ್ನು ನೋಡಲು, ಅದೇಕೆ ಅಲ್ಲೊಂದು ಏಕಾಂಗಿ ಚಾರಣ ಮಾಡಬಾರದು ಎಂಬ ಉತ್ಸಾಹ ತುಂಬಿ ಬಂತು.
ಬೆಳಗಿನ ತಿಂಡಿ ತಿಂದು, ಬಸ್ನಲ್ಲಿ ಕುಳಿತು, ನಾನಿದ್ದ ಆಗ ವಾಸವಿದ್ದ ಸ್ಥಳದಿಂದ ಹತ್ತು ಕಿ.ಮೀ. ದೂರದಲ್ಲಿದ್ದ ನರಸೀಪುರ ಎಂಬ ಪುಟ್ಟ ಹಳ್ಳಿಯಲ್ಲಿಳಿದೆ. ಆ ಊರಿನಿಂದ ಆರೇಳು ಕಿ.ಮೀ. ದೂರ ಕಾಲ್ದಾರಿಯಲ್ಲಿ ನಡೆದು, ಸುಮಾರು 500 ಮೀಟರ್ ಎತ್ತರವನ್ನು ಕಾಡು ದಾರಿಯಲ್ಲಿ ಏರಿದರೆ, ಕೊಟ್ಟೂರೇಶ್ವರ ದೇಗುಲ ಸಿಗುತ್ತದೆ; ಆ ದೇಗುಲದಿಂದಾಗಿ ಅದಕ್ಕೆ ಕೊಟ್ರಪ್ಪನ ಬೆಟ್ಟ ಎಂದೇ ಹೆಸರು. ನರಸೀಪುರದಿಂದ ಒಬ್ಬನೇ ಬೆಟ್ಟದತ್ತ ಕಾಲು ಹಾಕಿದೆ.
ದಾರಿಯಲ್ಲಿ ಸಿಗುವ ಹಳ್ಳಿಯ ಕೆಲವು ಜನರು ಈ ಏಕಾಂಗಿ ಚಾರಣಿಗನನ್ನು ವಿಚಿತ್ರವಾಗಿ ನೋಡಿ ದರು; ಮೂರು ದಶಕಗಳ ಹಿಂದಿನ ಮಾತಿದು: ಯುವಕನೊಬ್ಬ ಅದೇಕೆ ಒಬ್ಬನೇ ನಡೆದುಕೊಂಡು ಹೋಗುತ್ತಿದ್ದಾನೆ ಎಂದು ಅರ್ಥೈಸಿಕೊಳ್ಳಲು ಅವರಿಂದ ಕಷ್ಟವಾಗಿರಬೇಕು! ಏಕೆಂದರೆ, ಚಾರಣ ಎಂಬ ಪದ ಅವರಿಗೆ ಗೊತ್ತಿಲ್ಲ; ಬೆಟ್ಟಗಳಲ್ಲಿರುವ ದೇಗುಲಗಳಿಗೆ ಜನರು ಹೋಗುವುದು ಅವರಿಗೆ ಗೊತ್ತಿತ್ತು; ಹುಣ್ಣಿಮೆ, ಹಬ್ಬ ಹರಿದಿನಗಳಲ್ಲಿ ಹಳ್ಳಿಯ ಜನರು ಗುಂಪಾಗಿ ಆ ಬೆಟ್ಟದ ನಡುವಿನ ದೇಗುಲಗಳಿಗೆ ಭೇಟಿ ನೀಡುತ್ತಿದ್ದರು; ಹೊರತು ಒಬ್ಬರೇ ನಡೆಯುತ್ತಾ ಸಾಗುವ ವಿಚಾರ ಅವರಿಗೆ ಹೊಸತು.
ಒಂದೆರಡು ಹಳ್ಳಿ ದಾಟಿದ ನಂತರ ಬಹುತೇಕ ನಿರ್ಜನ ಪ್ರದೇಶ. ಹಿರೆಕಲ್ಲು ಬೆಟ್ಟ ಶ್ರೇಣಿಯ ಕೆಳಗೆ, ಕೊಟ್ಟುರಪ್ಪನ ಬೆಟ್ಟದ ತಳದಲ್ಲಿ ಒಂದು ಕೆರೆಯಿದೆ; ಅಲ್ಲಿಂದ ಮುಂದೆ ಏರುದಾರಿ; ಅಲ್ಲಲ್ಲಿ ಕಲ್ಲಿನಿಂದಲೇ ಮೆಟ್ಟಿಲುಗಳನ್ನು ನಿರ್ಮಿಸಿದ್ದರು. ದಟ್ಟ ಕಾಡಲ್ಲದ, ಅಲ್ಲಲ್ಲಿ ಕೆಲವು ಮರಗಿಡಗಳು ಬೆಳೆದ ಪ್ರದೇಶ; ಆ ನಡುವೆ ಸಾಗುವ ಒಂದು ದಾರಿ. ಏರುತ್ತಾ, ಏರುತ್ತಾ ಸುಮಾರು ನಾಲ್ಕು ಕಿ.ಮೀ. ಕ್ರಮಿಸಿದಾಗ, ಂದು ಪುಟ್ಟ ದೇಗುಲ ಸಿಕ್ಕಿತು. ಅದೇ ಅಂದಿನ ನನ್ನ ಗಮ್ಯಸ್ಥಾನ. ಅಲ್ಲಿದ್ದ ಅರ್ಚಕರು ವಿಜಯಪುರದ ಕಡೆಯವರು; ಆತ್ಮೀಯವಾಗಿ ಮಾತನಾಡಿಸಿದರು.
‘ಏನು ಒಬ್ಬರೇ ಬಂದಿದ್ದೀರಿ? ನಿಮ್ಮ ಗೆಳೆಯರು ಎಲ್ಲಿ?’ ಎಂದರು. ಹಿಂದೊಮ್ಮೆ ಒಂದಿಬ್ಬರು ಗೆಳೆಯರ ಜತೆ ಬಂದು, ಅಲ್ಲಿಂದ ಕಾಡಿನೊಳಗೆ ಸಾಗುವ ದಾರಿಯಲ್ಲಿ ಹಗಲಿಡೀ ನಡೆದು, ನಡುಕಾಡಿ ನಲ್ಲಿ ಸಿಗುವ ಶಂಕರಮಠ, ಬ್ರಿಟಿಷ್ ಬಂಗಲೆಗಳನ್ನು ನೋಡಿಕೊಂಡು, ಸಂಜೆಯ ಹೊತ್ತಿಗೆ ಅರಸಿಕೆರೆ ತಲುಪಿದ್ದೆವು; ಆಗ ಅವರು ನಮಗೆ ಉಪ್ಪಿಟ್ಟು ಮಾಡಿ ಕೊಟ್ಟಿದ್ದರು! ಅದೇ ನೆನಪಿನಿಂದ ಆತ್ಮೀಯವಾಗಿ ಮಾತನಾಡಿಸಿದರು. ‘ಬೆಟ್ಟ ಗುಡ್ಡ ನೋಡುವ ಎನಿಸಿತು. ಅದಕ್ಕೇ ಒಬ್ಬನೇ ಬಂದೆ. ಅವರೆಲ್ಲಾ ಬಂದಿಲ್ಲ’ ಎಂದೆ.
‘ಖುಷಿ ಆಯಿತು, ದೇವರ ದರ್ಶನ ಮಾಡುವ ನಿಮ್ಮ ಆಸಕ್ತಿ ಕಂಡು ಖುಷಿ ಆಯ್ತು’ ಎಂದರು. ಆದರೆ, ನಾನು ಅಲ್ಲಿಗೆ ಬಂದದ್ದು ಪ್ರಮುಖವಾಗಿ ಪ್ರಕೃತಿ ದೇವತೆಯನ್ನು ನೋಡುವ ಉದ್ದೇಶದಿಂದ ಏಕಾಂಗಿಯಾಗಿ ಅಲ್ಲಿಗೆ ಬಂದಿದ್ದು ಎಂದು, ಅವರಿಗೆ ವಿವರಿಸಿ ಹೇಳಲು ನಾನು ಹೋಗಲಿಲ್ಲ. ಆ ಬೆಟ್ಟಗಳ ನಡುವೆ ಇರುವ ಕೊಟ್ಟೂರೇಶ್ವರನ ದೇಗುಲವನ್ನು ನೋಡಿದರೆ, ದೇವರನ್ನೂ ಕಂಡಂತಾ ಗುತ್ತದೆ, ಅಲ್ಲಿನ ಸುತ್ತಮುತ್ತಲಿನ ಪ್ರಕೃತಿಯನ್ನೂ ಕಂಡಂತಾಗುತ್ತದೆ ಎಂದು ನನ್ನ ಮನದಲ್ಲೇ ಅಂದುಕೊಂಡೆ. ಆ ದೇಗುಲದ ಅರ್ಚಕರು ವಿಶ್ವಾಸದಿಂದ ಮಾಡಿ ಕೊಟ್ಟ ಉಪ್ಪಿಟ್ಟು ತಿಂದೆ; ಆ ಬೆಳಗ್ಗೆ ಅಲ್ಲಿಗೆ ಹೆಚ್ಚಿನ ಜನರು, ಭಕ್ತರು, ಹಳ್ಳಿಯವರು ಬಂದಿರಲಿಲ್ಲ; ಬಂದ ವರಿಗೆ ಉಪ್ಪಿಟ್ಟನ್ನೋ ಬೇರೇನನ್ನೋ ಮಾಡಿ, ಉಣ ಬಡಿಸುವುದು ಆ ಅರ್ಚಕರ ಕೈಂಕರ್ಯ. ಬಹುಷಃ, ಅದು ಆ ದೇಗುಲದ ಪರಂಪರೆಯಲ್ಲಿ ಬೆಳೆದು ಬಂದಿರುವ ಪುರಾತನ ಸಂಸ್ಕಾರದ ಒಂದು ಭಾಗವೇ ಇರಬೇಕು; ಬರುವ ಎಲ್ಲರಿಗೂ ಆಹಾರ ನೀಡಬೇಕು, ಪ್ರತಿ-ಲಾಪೇಕ್ಷೆ ಇಲ್ಲದೇ ಜನರ ಹಿತ ಬಯಸಬೇಕು ಎಂಬುದು ಅಲ್ಲಿನ ಪರಂಪರೆಯೇ ಇದ್ದೀತು.
ಕಾಡುಪ್ರದೇಶದ ನಡುವೆ ಕಂಡ ಇಂತಹ ಮಾನವೀಯತೆಯು, ಮನಸ್ಸಿಗೆ ಹಿಡಿಸಿತು. ಸ್ವಲ್ಪ ಹೊತ್ತು ಅಲ್ಲೇ ಇದ್ದು, ಸುತ್ತ ಮುತ್ತಲಿನ ಕಾಡು ಪ್ರದೇಶವನ್ನು ಕಂಡೆ; ಒಂದಷ್ಟು ಹೊತ್ತು ಕುಳಿತೆ. ನಂತರ, ಕಾಡು ಗುಡ್ಡದ ನಡುವಿನ ಕಾಲ್ದಾರಿ ಹಿಡಿದು, ಬೆಟ್ಟವಿಳಿದೆ; ನರಸಿಪುರ ಎಂಬ ಪುಟ್ಟ ಹಳ್ಳಿ ಸಿಕ್ಕಿತು; ಅಲ್ಲಿನ ಬಸ್ಸ್ಟಾಪ್ನಲ್ಲಿ ಕಾಯುವುದಾಯ್ತು; ಆ ದಿನಗಳಲ್ಲಿ ಅಲ್ಲಿಗೆ ದಿನಕ್ಕೆ ಎರಡೋ ಮೂರೋ ಬಸ್ಸುಗಳು ಮಾತ್ರ ಬರುತ್ತಿದ್ದವು. ಸಾಕಷ್ಟು ಸಮಯ ಕಾದ ನಂತರ ಬಂದ ಬಸ್ ಏರಿ, ಸಂಜೆಯಾಗುವ ಹೊತ್ತಿಗೆ ಮನೆ ಸೇರಿಕೊಂಡೆ.