ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shashidhara Halady Column: ಕರಡಿಗಳ ಊರು ಗರುಡನಗಿರಿಗೆ ʼಸೋಲೋ ಟ್ರಿಪ್‌ʼ !

ಒಂದು ಬಾರಿ ಬೆಟ್ಟದ ತುದಿಗೆ ಹೋಗಿದ್ದಾಗ, ಕೆಲವೇ ಮೀಟರುಗಳಷ್ಟು ದೂರದಲ್ಲಿ ನಾಲ್ಕು ಕರಡಿಗಳನ್ನೂ ನೋಡಿದ್ದೆವು. ಅವು ಪಾಪ, ನಡು ಮಧ್ಯಾಹ್ನದ ನಿದ್ದೆಗಾಗಿ, ಬಂಡೆಯ ಮರೆಯಲ್ಲಿ ಮಲಗಿದ್ದವು; ನಾವು ಆ ಬಂಡೆಯ ತುದಿಯಲ್ಲಿ ಶಿಖರದ ಬಳಿಯಿದ್ದೆವು. ಆದ್ದರಿಂದ ಅಪಾಯವೇನೂ ಇರಲಿಲ್ಲ.

ಶಶಾಂಕಣ

ಗರುಡನಗಿರಿ ಬೆಟ್ಟಕ್ಕೆ ಸಾಗುವ ಹಾದಿಯ ಸುತ್ತಲಿನ ಹಸಿರುಗಿಡಗಳನ್ನು ಕುರಿ-ಮೇಕೆ ಗಳು ಮೇದು ಬೋಳಿಸಿಬಿಟ್ಟಿದ್ದವು. ವಾಸ್ತವವಾಗಿ ಅದೊಂದು ಪುರಾತನ ರಿಸರ್ವ್ ಫಾರೆಸ್ಟ್. ಗರುಡನಗಿರಿ ರಿಸರ್ವ್ ಫಾರೆಸ್ಟ್ ಎಂಬ ಪುರಾತನ ಶಿಲಾಫಲಕವೂ ಅಲ್ಲಿದೆ! ಬಹುಶಃ, ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಅದನ್ನು ಗುರುತಿಸಿ, ಕಲ್ಲಿನ ಮೇಲೆ ಅದನ್ನು ಬರೆಯಿಸಿ, ಫಲಕವನ್ನು ಪ್ರದರ್ಶಿಸಿದ್ದರು. ಆದರೆ, ನಾವು ಹೋದಾಗ, ಅಲ್ಲೆಲ್ಲೂ ಜಾಸ್ತಿ ಮರಗಳೇ ಇರಲಿಲ್ಲ, ಆ ಪ್ರದೇಶವೆಲ್ಲಾ ಪೂರ್ತಿ ಬೋಳಾಗಿತ್ತು.

ಅರಸೀಕೆರೆ ತಾಲೂಕಿನ ಬಾಣಾವರದ ಬಳಿ ರಸ್ತೆಯಲ್ಲಿ ಪಯಣಿಸುವಾಗ, ನೀವೇನಾದರೂ ಪೂರ್ವದಿಕ್ಕನ್ನು ಗಮನಿಸಿದರೆ, ಅಲ್ಲೊಂದು ಉದ್ದವಾದ ಬೆಟ್ಟ ಶ್ರೇಣಿ ಮತ್ತು ಒಂದು ಶಿಖರ ಕಾಣಿಸುತ್ತದೆ. ದೂರದಿಂದ ನೋಡುವಾಗ ಬರೀ ಕಲ್ಲುಗಳನ್ನೇ ತುಂಬಿಕೊಂಡಂತೆ ಕಾಣಿಸುವ ಆ ಬೆಟ್ಟ ಶ್ರೇಣಿಯ ಹೆಸರು ಹಿರೆಕಲ್ಲು ಗುಡ್ಡ; ಆದರೆ ಅಲ್ಲಿಗೆ ಚಾರಣ ಹೋಗಿ ನೋಡಿದರೆ, ಒಳಗೆಲ್ಲಾ ಸಾಕಷ್ಟು ಕಾಡು ಇದೆ.

ಇದೇ ಬೆಟ್ಟ ಶ್ರೇಣಿಯಿಂದ ತುಸು ಬೇರೆಯಾಗಿ, ತಲೆ ಎತ್ತಿ ನಿಂತಿರುವ ಶಿಖರದ ಹೆಸರು ಗರುಡನಗಿರಿ ಬೆಟ್ಟ. ಬಯಲು ಸೀಮೆಯ ವಿಶಾಲ ದಿಗಂತಕ್ಕೆ ಅಡ್ಡಲಾಗಿ ತಲೆ ಎತ್ತಿ ನಿಂತಿರುವ ಗರುಡನ ಗಿರಿಯು, ನೋಡಲು ಒಂದು ಸುಂದರ ಗಿರಿ ಶಿಖರ. ಚಾರಣದಲ್ಲಿ, ಪ್ರವಾಸದಲ್ಲಿ ಆಸಕ್ತಿ ಇರುವ ಯಾರಿಗಾದರೂ, ಅದನ್ನು ಕಂಡ ಕ್ಷಣ, ಅಲ್ಲಿಗೆ ಹೋಗಬೇಕು ಎನಿಸಿದರೆ ಅಚ್ಚರಿಯಿಲ್ಲ.

ಹೆದ್ದಾರಿಯಿಂದ ಹತ್ತು ಕಿ.ಮೀ. ದೂರ ಪೂರ್ವ ದಿಕ್ಕಿಗೆ ಕ್ರಮಿಸಿದರೆ, ಆ ಗಿರಿಯ ಬಳಿ ತಲುಪಬಹುದು. ಇಂಥ ಸುಂದರ ಬೆಟ್ಟ ಇರುವ ಗರುಡನಗಿರಿಯಿಂದ ಎಂಟು ಕಿ.ಮೀ. ದೂರದ ಒಂದು ಹಳ್ಳಿಯಲ್ಲಿ ನಾನು ಎಂಟಕ್ಕೂ ಅಧಿಕ ವರ್ಷ ವಾಸವಾಗಿದ್ದೆ; ಆ ಸಮಯ ದಲ್ಲಿ ಸಣ್ಣ ಪುಟ್ಟ ಚಾರಣ ಮಾಡುವ ಆಸೆಯಾದಾಗೆಲ್ಲಾ, ಗರುಡನಗಿರಿ ಮತ್ತು ಹಿರೇಕಲ್ಲು ಗುಡ್ಡದತ್ತ ನನ್ನ ಪಯಣ. ಸ್ನೇಹಿತರೊಡನೆ, ಸಹೋದ್ಯೋಗಿಗಳೊಡನೆ ಗರುಡನಗಿರಿಯನ್ನು ಏರಿದ್ದು ಹಲವು ಬಾರಿ.

ಇದನ್ನೂ ಓದಿ: Shashidhara Halady Column: ದೀಪೋತ್ಸವದ ದಿನದಂದೇ ಸುಟ್ಟುಹೋದ ಗುಡಿಸಲು !

ಒಂದು ಬಾರಿ ಬೆಟ್ಟದ ತುದಿಗೆ ಹೋಗಿದ್ದಾಗ, ಕೆಲವೇ ಮೀಟರುಗಳಷ್ಟು ದೂರದಲ್ಲಿ ನಾಲ್ಕು ಕರಡಿಗಳನ್ನೂ ನೋಡಿದ್ದೆವು. ಅವು ಪಾಪ, ನಡು ಮಧ್ಯಾಹ್ನದ ನಿದ್ದೆಗಾಗಿ, ಬಂಡೆಯ ಮರೆಯಲ್ಲಿ ಮಲಗಿದ್ದವು; ನಾವು ಆ ಬಂಡೆಯ ತುದಿಯಲ್ಲಿ ಶಿಖರದ ಬಳಿಯಿದ್ದೆವು. ಆದ್ದರಿಂದ ಅಪಾಯವೇನೂ ಇರಲಿಲ್ಲ. ಅವು ಮಲಗಿದ್ದ ಗುಹೆಯಂಥ, ಬಂಡೆಯ ಮರೆಯಲ್ಲಿದ್ದ ಜಾಗಕ್ಕೆ ನಾವು ಚಾರಣಿಗರು, ಹುಡುಗರು ನಿಧಾನವಾಗಿ, ಇಣುಕಿ ನೋಡಿ ದಾಗ, ಒಮ್ಮೆಗೇ ಅವಕ್ಕೆ ಗಾಬರಿಯಾಗಿರಬೇಕು!

ತಡಬಡಾಯಿಸಿ ಎದ್ದು, ದುಡುದುಡನೆ ಓಡತೊಡಗಿದವು. ಅವು ಬಳಸುದಾರಿಯಲ್ಲಿ ಓಡುತ್ತಾ, ಕೆಲವು ನಿಮಿಷಗಳ ನಂತರ, ಗರುಡನಗಿರಿ ಶಿಖರವನ್ನು ಏರುವ, ಅಗಲ ಕಿರಿದಾದ ದಾರಿಯಲ್ಲೇ ಇಳಿದು, ಬೇರೆಲ್ಲೋ ಸಾಗಿದವು. ಅಕಸ್ಮಾತ್, ಆ ಸಮಯದಲ್ಲಿ, ಗರುಡನಗಿರಿ ಹಳ್ಳಿಯಿಂದ, ಬೆಟ್ಟವೇರುತ್ತಾ ಯಾರಾದರೂ ಬಂದಿದ್ದರೆ, ಕರಡಿಗೆ ಎದುರಾಗಿರುತ್ತಿದ್ದರು!

ಅಂಥ ಸಂದರ್ಭದಲ್ಲಿ ಅಪಾಯ ಖಚಿತ. ಏಕೆಂದರೆ, ಕರಡಿಗಳು ರಭಸವಾಗಿ ತಿವಿದುಬಿಟ್ಟರೆ, ಆ ಗಾಯವು ಪ್ರಾಣಾಂತಿಕ! ಆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವರ್ಷದಲ್ಲಿ ಒಂದೆರಡಾ ದರೂ ಅಂಥ ತಿವಿತಗಳು, ಗಾಯಗಳು, ಕೆಲವೊಮ್ಮೊ ಪ್ರಾಣಹಾನಿಯೂ ಸಂಭವಿಸುತ್ತಿತ್ತು.

Screenshot_7 R

ಅಲ್ಲಿ ಕರಡಿಗಳು ಇವೆ ಎಂಬ ಅರಿವಿದ್ದರೂ, ಆ ಗರುಡನಗಿರಿ ಶಿಖರದ ತುದಿಗೆ ಒಮ್ಮೆಯಾ ದರೂ ಏಕಾಂಗಿಯಾಗಿ ಚಾರಣ ಮಾಡಬೇಕೆಂಬ ಆಸೆ ನನ್ನಲ್ಲಿತ್ತು. ಅದರಲ್ಲೂ, ಬೆಟ್ಟದ ತಳದಲ್ಲಿದ್ದ ಹಳ್ಳಿಯ ಮೂಲಕ ಸಾಗುವ ದಾರಿಯನ್ನು ಬಿಟ್ಟು. ಪೂರ್ವ ದಿಕ್ಕಿನಿಂದ, ನೇರವಾಗಿ ಏರಬೇಕೆಂಬ ಆಸೆ! ಆದರೆ, ಹಿಂದೊಮ್ಮೆ ಹಲವು ಗೆಳೆಯರೊಡನೆ ಶಿಖರವೇರಿ ದಾಗ ಕರಡಿಗಳನ್ನು ಕಂಡಿದ್ದರಿಂದ, ಆ ರೀತಿ ಏಕಾಂಗಿಯಾಗಿ ಬೆಟ್ಟವೇರುವುದು ಅಪಾಯ ಕಾರಿ ಎಂಬ ಅರಿವು ನನ್ನಲ್ಲಿತ್ತು. ಆದ್ದರಿಂದ ನನ್ನ ಸೊಲೋ ಟ್ರಿಪ್ ಆಸೆಯನ್ನು ತುಸು ಬದಲಿಸಿ, ರವಿ ಎಂಬ ವಿದ್ಯಾರ್ಥಿಯನ್ನು ಜತೆ ಮಾಡಿಕೊಂಡೆ.

ಆತ ಪಿಯುಸಿ ಮುಗಿಸಿ, ಆ ಹಳ್ಳಿಯಲ್ಲಿ ಠಳಾಯಿಸುತ್ತಿದ್ದ. ‘ಗರುಡನಗಿರಿಗೆ ಬರ‍್ತೀಯಾ’ ಎಂದೆ, ಹೂಂ ಎಂದ. ಬಹುಶಃ, ಹಲವು ಗೆಳೆಯರು ಸೇರಿ ಹೋಗುವುದು ಎಂದುಕೊಂಡಿದ್ದನೋ ಏನೊ! ನನ್ನ ಸೋಲೋ ಟ್ರಿಪ್ ಪರಿಕಲ್ಪನೆಯ ಚಾರಣಕ್ಕೆ, ತನ್ನನ್ನು ಒಬ್ಬ ಜತೆಗಾರ ನನ್ನಾಗಿಸಿಕೊಂಡು ಹೊರಟಿದ್ದು ಎಂದು ಗೊತ್ತಾಗಿದ್ದರೆ, ಆತ ಬರುತ್ತಿರಲಿಲ್ಲವೇನೋ? ಅದೂ, ಮಾಮೂಲಿ ದಾರಿ ಬಿಟ್ಟು, ಪೂರ್ವದ ನೇರ ಮೈಯಲ್ಲಿ ಏರುವುದು ಎಂದು ಗೊತ್ತಿದ್ದರೆ, ಆತ ಸುತರಾಂ ಒಪ್ಪುತ್ತಿರಲಿಲ್ಲ.

ಒಂದು ಭಾನುವಾರ ಬೆಳಗ್ಗೆ ೧೦ ಗಂಟೆಯ ಬಸ್ ಏರಿ, ೮ ಕಿ.ಮೀ. ದೂರದ ಕಲ್ಲುಸಾದರ ಹಳ್ಳಿಗೆ ಹೊರಟೆವು. ನಾವಿಬ್ಬರಿದ್ದೆವು. ಆದರೆ, ಸೋಲೋಟ್ರಿಪ್‌ನ ರೋಚಕತೆ ನನ್ನಲ್ಲಿ ತುಂಬಿತ್ತು ಯಾವುದೇ ತಯಾರಿ ಇಲ್ಲದೆ ಆ ದಿನ ಹೊರಟಿದ್ದೆವು. ನಾನು ವಾಸವಿದ್ದ ಹಳ್ಳಿಯಿಂದ ಮೊದಲಿಗೆ ನಾಲ್ಕಾರು ಕಿ.ಮೀ. ಸಾಗಿದರೆ, ಗರುಡನಗಿರಿಯ ಬಳಿಗೆ ಬರಬಹು ದಿತ್ತು.

ಬೆಳಗ್ಗೆ ಬೇಗನೆದ್ದು, ಅಲ್ಲಿಗೆ ಬಸ್ ನಲ್ಲಿ ಹೋಗುತ್ತಿದ್ದಾಗ, ಪಕ್ಕದ ಹಳ್ಳಿಯ ರಾಮಸ್ವಾಮಿ ಎಂಬ ಯುವಕರು ಸಿಕ್ಕಿದರು. ‘ಯಾವ ಕಡೆ ಹೊರಟದ್ದು?’ ಎಂದು ಅವರ ಪ್ರಶ್ನೆ. ‘ಗರುಡನ ಗಿರಿಗೆ’ ‘ಯಾರ‍್ಯಾರು’ ‘ನಾವಿಬ್ಬರೇ! ಇದೊಂದು ರೀತಿಯ ಏಕಾಂಗಿ ಪ್ರವಾಸ ಅಂದ್ಕಳಿ’ ‘ನಿಮಗಿಬ್ಬರಿಗೇ ಕಷ್ಟವಾಗೊಲ್ವಾ? ಅಲ್ಲಿ ಕರಡಿಗಳು ಬೇರೆ ಇದಾವೆ. ಇಬ್ಬರೇ ಹೋಗುವುದು ರಿಸ್ಕ್ ಸರ್’ ‘ಇರಲಿ ಪರವಾಗಿಲ್ಲ, ಮುಂಚೆ ಹೋಗಿ ಗೊತ್ತು’ ‘ಹೂ... ಆದರೂ...’ ‘ಈ ಸಲ ಕಲ್ಲುಸಾದರ ಹಳ್ಳಿಯಿಂದ ನೇರಮೈ ಏರುವುದು ಅಂದು ಕೊಂಡಿದ್ದೇನೆ’ ‘ಆಂ, ಹೌದಾ? ಹಾಗಾದರೆ ನಾನೂ ಬರ‍್ತೇನೆ’ ಎಂದರು ರಾಮಸ್ವಾಮಿ.

ಯಾವುದೇ ತಯಾರಿ ಇಲ್ಲದೇ ಹೊರಟಿದ್ದೆವು ನಾವು. ನಮ್ಮ ಜತೆ, ಇನ್ನೂ ಏನೂ ತಯಾರಿ ಇಲ್ಲದೇ ಅವರು ಚಾರಣಕ್ಕೆ ಬರುತ್ತಾರೆ ಎಂದಾಗ ನನಗೋ ಅಚ್ಚರಿ!

‘ನೀವಾ? ಯಾಕೆ?’ ‘ನಮ್ಮೂರು ಅಲ್ಲೇ ಹತ್ತಿರ...’ ‘ಆಗಲಿ.... ಆದರೂ....’ ‘ನಿಮಗಿಬ್ಬರಿಗೇ ಆ ದಾರಿ ಕಷ್ಟ. ನೀವಿಬ್ಬರೂ ಹೊಸಬರು ಅಲ್ವಾ? ಅದರಲ್ಲೂ ಕಲ್ಲುಸಾದರ ಹಳ್ಳಿಯಿಂದ ನೇರವಾಗಿ, ಬಂಡೆ ಏರಿ ಹೋಗ್ತೀರಿ ಅಂತೀರಾ? ಅದು ಇನ್ನೂ ಕಷ್ಟ. ದಾರಿ ತೋರಿಸಲು ನಾನೂ ಬರ‍್ತೇನೆ’. ರಾಮಸ್ವಾಮಿ ಎಂಬ ಆ ಯುವಕ ಎಂಥಾ ಸಜ್ಜನರು ಎಂದರೆ, ತಮ್ಮ ಹಳ್ಳಿಯ ಪಕ್ಕದ ಬೆಟ್ಟವನ್ನೇರುವ ನನ್ನ ಮೇಲಿನ ಕಾಳಜಿಯಿಂದಾಗಿ, ದಾರಿ ತೋರಿಸಲು ಜತೆಯಾಗಿ ಬಂದರು! ಅವರು ಮೊದಲಿಗೆ ತಮಾಷೆ ಮಾಡುತ್ತಿದ್ದಾರೆ ಅಂದುಕೊಂಡೆ. ಆದರೆ, ಅವರ ಮನೆಯಿಂದ ಸ್ವಲ್ಪ ಕುರುಕಲು ತಿಂಡಿಯನ್ನು ಕಟ್ಟಿಸಿಕೊಂಡು, ನಮ್ಮ ಜತೆಗೆ ಬೆಟ್ಟವೇರಲು ಬಂದೇಬಿಟ್ಟರು.

ಕಲ್ಲುಸಾದರ ಹಳ್ಳಿ ಎಂಬ ಹಳ್ಳಿಯ ಬಳಿ ಬಸ್ ಇಳಿದೆವು. ಕಲ್ಲುಸಾದರ ಹಳ್ಳಿಯ ಹೊರ ವಲಯದ ಹೊಲಗಳಲ್ಲಿ ತುಸು ದೂರ ನಡೆದಾಗ, ಗರುಡನಗಿರಿ ಬೆಟ್ಟದ ಪೂರ್ವ ಮೈ ಎದುರಾಯಿತು. ಬಯಲಿನ ಕೊನೆಯಲ್ಲಿ, ಆ ಬೆಟ್ಟವು ನೇರವಾಗಿ, ಕಡಿದಾಗಿ ಏರಿಹೋಗಿತ್ತು. ವಾಸ್ತವವಾಗಿ, ಗರುಡನಗಿರಿ ಬೆಟ್ಟವನ್ನು ಏರಲು, ಇನ್ನೂ ತುಸು ಮುಂದೆ ಇರುವ ಗರುಡನ ಗಿರಿ ಎಂಬ ಹಳ್ಳಿಯಿಂದ ಚಾರಣದ ದಾರಿ ಇದೆ.

ಹಿಂದೆ ಹಲವು ಬಾರಿ ಗರುಡನಗಿರಿಯನ್ನು ಏರಿದ್ದಾಗ, ಅದೇ ದಾರಿಯಲ್ಲಿ ಹೋಗಿದ್ದೆ. ಆ ಬೆಟ್ಟದ ತುದಿಯಲ್ಲಿ ಕೋಟೆಯೂ ಇದೆ. ಆ ಕೋಟೆಯನ್ನು ಯಾರು ಕಟ್ಟಿಸಿದರು ಎಂಬ ಮಾಹಿತಿ, ಸ್ವತಃ ಆ ಹಳ್ಳಿಯ ಜನರಿಗೇ ಇಲ್ಲ! ನಮ್ಮ ದೇಶದಲ್ಲಿ ಹೆಚ್ಚಿನ ಕಡೆ ಹಾಗೇ ತಾನೆ, ತಮ್ಮ ತಮ್ಮ ಊರುಗಳ ಐತಿಹಾಸಿಕ ಕೋಟೆ ಮತ್ತು ಇತರ ರಚನೆಗಳ ಕುರಿತು ಸ್ಥಳೀಯರಿಗೆ ಮಾಹಿತಿಯೇ ಇರುವುದಿಲ್ಲ!

ಗರುಡನಗಿರಿ ಬೆಟ್ಟದ ನೇರ ಮೈ ಏರುವ ಉದ್ದೇಶದಿಂದ, ಮೊದಲಿಗೆ ಮೇಕೆಗಳು ಸಾಗುವ ದಾರಿಯಲ್ಲಿ ಸ್ವಲ್ಪ ದೂರ ಏರಿದೆವು; ಕುರಿ, ಮೇಕೆಗಳು ಅಲ್ಲಿ ಮೇದೂ ಮೇದೂ, ಆ ಸುತ್ತಲಿನ ಹಸಿರುಗಿಡಗಳನ್ನು ಪೂರ್ತಿ ಬೋಳಿಸಿ ಬಿಟ್ಟಿದ್ದವು.

ವಾಸ್ತವವಾಗಿ ಅದೊಂದು ಪುರಾತನ ರಿಸರ್ವ್ ಫಾರೆಸ್ಟ್. ಗರುಡನಗಿರಿ ರಿಸರ್ವ್ ಫಾರೆಸ್ಟ್ ಎಂಬ ಪುರಾತನ ಶಿಲಾಫಲಕವೂ ಅಲ್ಲಿದೆ! ಬಹುಶಃ, ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಅಂಥದೊಂದು ರಿಸರ್ವ್ ಫಾರೆಸ್ಟ್ ಅನ್ನು ಗುರುತಿಸಿ, ಕಲ್ಲಿನ ಮೇಲೆ ಅದನ್ನು ಬರೆಯಿಸಿ, ಫಲಕವನ್ನು ಪ್ರದರ್ಶಿಸಿದ್ದರು.

ಆದರೆ, ನಾವು ಹೋದಾಗ, ಅಲ್ಲೆಲ್ಲೂ ಜಾಸ್ತಿ ಮರಗಳೇ ಇಲ್ಲ, ಆ ಪ್ರದೇಶವೆಲ್ಲಾ ಪೂರ್ತಿ ಬೋಳಾಗಿದೆ. ಒಂದೆರಡು ಕಿ.ಮೀ. ನಡೆದ ನಂತರ ಕಡಿದಾದ ಏರುದಾರಿ ಬಂತು. ತುಸು ಮುಂದೆ ಒಂದು ಕಲ್ಲಿನಕೋಟೆ ಎದುರಾಯ್ತು. ಕೆಲವು ನೂರು ವರ್ಷಗಳ ಹಿಂದೆ ಟಿಪ್ಪು ಸುಲ್ತಾನನೋ, ಅದಕ್ಕೂ ಮುಂಚಿನ ಪಾಳೆಯಗಾರರೋ ನಿರ್ಮಿಸಿದ ಕೋಟೆ ಅದು. ಆ ಕಲ್ಲಿನ ಗೋಡೆ ಉದ್ದಕ್ಕೂ ಬೆಟ್ಟವನ್ನು ಬಳಸಿ ಸಾಗಿತ್ತು. ಅದರ ಬುಡದಲ್ಲೇ ಸ್ವಲ್ಪ ದೂರ ನಡೆದೆವು. ಆದರೆ, ಅದನ್ನು ಏರುವ ಬಗೆ ಸ್ಪಷ್ಟವಾಗಲಿಲ್ಲ.

ಕೋಟೆಯ ಗೋಡೆಯು ಸುತ್ತುಸುತ್ತು ಹಾಕುತ್ತಾ ಸಾಗಿತ್ತು. ನೂರಾರು ವರ್ಷಗಳ ಹಿಂದಿನ ಕೋಟೆಯಾಗಿದ್ದರಿಂದ, ಕಲ್ಲಿನ ಗೋಡೆಯ ಬಳಿ ಮುಳ್ಳಿನ ಗಿಡಗಳು, ಬೇರೆ ನಾನಾ ರೀತಿಯ ಗಿಡಗಳು, ಲಾಂಟಾನಾ ಪೊದೆಗಳು, ಕಾಡು ಬಳ್ಳಿಗಳು ಬೆಳೆದುಕೊಂಡಿದ್ದು, ಆ ಗೋಡೆಯ ಬುಡವನ್ನು ತಲುಪುವುದೇ ಕಷ್ಟ ಎನಿಸಿತು.

ಕೊನೆಗೆ, ಕೋಟೆಯ ಕಲ್ಲಿನ ಸಂದಿಗಳಲ್ಲಿ ಬೇರೂರಿ ಬೆಳೆದ ಆಲದ ಮರವೊಂದರ ರೆಂಬೆ ಕೊಂಬೆಗಳು, ಕೆಳಗೆ ಇಳಿದುಕೊಂಡು ಬಂದಿದ್ದವು. ಅದನ್ನು ಹಿಡಿದು, ನಿಧಾನವಾಗಿ ಕೋಟೆಯ ಗೋಡೆಯನ್ನೇರಿದೆವು. ಸುಮಾರು ಹತ್ತು ಹನ್ನೆರಡು ಅಡಿಗಳಷ್ಟು ಎತ್ತರವನ್ನು ಕಷ್ಟದಿಂದ ಏರಿದಾಗ, ಕೋಟೆಯನ್ನೇ ಜಯಿಸಿದ ಅನುಭವ!

ಕೋಟೆಯ ಗೋಡೆಯ ಮೇಲಕ್ಕೇರಿದ ನಂತರ ಸಲೀಸು ದಾರಿ. ಆ ಗೋಡೆಯ ಮೇಲೆಯೇ ನಡೆಯುವಂಥ ದಾರಿ ಇದೆ. ಅದರ ಮೇಲೆ ನಡೆಯುತ್ತಾ, ಕೋಟೆಯೊಳಗೆ ಹೋಗಿ, ಸ್ವಾಗತ ಗೋಪುರಗಳನ್ನು, ಮಂಟಪಗಳನ್ನು ದಾಟಿ, ಕಾಲ್ದಾರಿ ಹಿಡಿದು ಶಿಖರವನ್ನು ತಲುಪಿದೆವು. ಶಿಖರ ತಲುಪಿದಾಗ, ತಂಗಾಳಿಯ ಸ್ವಾಗತ. ಜತೆಗೆ, ನಮ್ಮೆದರು ಹರಡಿದ್ದ ವಿಶಾಲವಾದ ಬಯಲುಸೀಮೆಯ ನೋಟವು ಕಣ್‌ತಣಿಸಿತು.

ಆ ಬೃಹತ್ ಬೆಟ್ಟವು ಒಂದು ಕಡೆ ಪೂರ್ತಿ ಬಂಡೆಯಿಂದ ಆವೃತವಾಗಿದ್ದು, ಆ ಬಂಡೆಯ ಭವ್ಯ ನೋಟವೂ ಆಕರ್ಷಕ. ನಾವು ಮನೆಯಿಂದ ತಂದಿದ್ದ ತಿಂಡಿಯ ಪೊಟ್ಟಣವನ್ನು ಹೊರತೆಗೆದೆವು. ಕುರುಕಲು ತಿಂಡಿಯನ್ನು ತಂದಿದ್ದ ನಮ್ಮ ಗೆಳೆಯರು ಅದನ್ನೂ ತಿನ್ನಿಸಿ ದರು. ‘ನಿಮ್ಮ ಧೈರ್ಯ ಮೆಚ್ಚತಕ್ಕದ್ದು’ ಎಂದರು ರಾಮಸ್ವಾಮಿ.

‘ಏಕೆ?’ ಎಂದೆ. ‘ನೀವು ದೂರದ ಊರಿನವರು. ಇಲ್ಲಿಗೆ ಬಂದು ಈ ಕಡಿದಾದ ಕೋಟೆ ಏರುವುದಕ್ಕೆ ಆಸಕ್ತಿ ತೋರಿದೀರಾ ಅಂದ್ರೆ ನಮಗೂ ಹೆಮ್ಮೆ..’ ‘ನೀವು ಬಂದಿದ್ದು ಸಂತೋಷ .. ಆದರೂ...’ ‘ಏನು?’ ‘ನೀವು ಅಕಸ್ಮಾತ್ ಬಸ್‌ನಲ್ಲಿ ಸಿಕ್ಕಿ, ಜತೆಗೆ ಬಂದಿರಿ. ಈ ರವಿ ಸಹಾ ನಿನ್ನೆಯೇ ಜತೆಗಾರನಾಗಿ ಸಿಕ್ಕಿದ್ದು; ಯಾರೂ ಸಿಗದಿದ್ದರೂ, ನಾನು ಇವತ್ತಿನ ಮಟ್ಟಿಗೆ ಒಬ್ಬನೇ ಆದರೂ ಗರುಡನಗಿರಿ ಏರುತ್ತಿದ್ದೆ!’ ‘ಅದೇಕೆ ಸಾರ್, ಅಷ್ಟೊಂದು ಹುಚ್ಚು!’ ‘ಅದೇ ಕಣ್ರೀ, ಅದನ್ನು ಹೇಗೆಂದು ವಿವರಿಸಿ ಹೇಳೋದು ಕಷ್ಟ; ಅದು ಸೋಲೋ ಟ್ರಿಪ್ ಹುಚ್ಚು!’ ‘ನಿಜ, ಸೋಲೋ ಟ್ರಿಪ್ ಹುಚ್ಚು ಹತ್ತಿದ್ರೆ, ಅದನ್ನು ತೀರಿಸಿಕೊಳ್ಳುವ ಇರಾದೆ ಮನಸ್ಸಿನಲ್ಲಿ ಹುಟ್ಟುತ್ತದೆ. ನಿಜ.

ಆದರೂ?’ ‘ಏನು ಆದರೂ?’

ಈ ಗರುಡನಗಿರಿ, ಹಿರೆಕಲ್ಲು ಗುಡ್ಡ ಇಲ್ಲೆಲ್ಲಾ ಕರಡಿಗಳಿವೆ. ಇದು ಮನುಷ್ಯರ ವಾಸಸ್ಥಳದ ಜತೆಯಲ್ಲೇ ಕರಡಿಗಳಿಗೂ ವಾಸಸ್ಥಳ. ಆದ್ದರಿಂದ ಒಬ್ಬೊಬ್ಬರೇ ಬರುವುದು ತುಸು ಅಪಾಯ. ಇದು ಕರಡಿಗಳ ಊರು ಅಲ್ವಾ!’ ಎಂದು ನಸುನಕ್ಕರು ರಾಮಸ್ವಾಮಿ. ಚಾರಣ ಮುಗಿಸಿ, ಮನೆಯ ಹಾದಿ ಹಿಡಿದಾಗ, ಅದಾಗಲೇ ಇಳಿಸಂಜೆ.

ಶಶಿಧರ ಹಾಲಾಡಿ

View all posts by this author