ಸದಾಶಯ
ಡಾ.ಜಿತೇಂದ್ರ ಸಿಂಗ್
ಮುಂಗಾರು ದಖನ್ ಪ್ರಸ್ಥಭೂಮಿಯನ್ನು ಮೊದಲು ಸ್ಪರ್ಶಿಸಿದಾಗ, ಲಕ್ಷಾಂತರ ಪುಟ್ಟ ತೊರೆಗಳು ತಾವಾಗಿಯೇ ಬೆಸೆದುಕೊಂಡು ನದಿಗಳಾಗುತ್ತವೆ. ಇದು ನೀರನ್ನು ಶಕ್ತಿಯನ್ನಾಗಿ ಬದಲಿಸುವ ಕೇವಲ ಗುಡುಗಿನ ಸದ್ದಲ್ಲ; ಅದು ತೊರೆಯಿಂದ ತೊರೆಗೆ, ಹಳ್ಳಿಯಿಂದ ಹಳ್ಳಿಗೆ ತಾಳ್ಮೆಯಿಂದ ಸೇರಿಕೊಳ್ಳು ವಿಕೆ- ಆ ಹರಿವು ಒಂದು ನಗರವನ್ನು ಬೆಳಗುವಷ್ಟು ಆತ್ಮವಿಶ್ವಾಸವನ್ನು ಪಡೆಯುವವರೆಗೆ ಸಾಗು ತ್ತದೆ.
ಪರಮಾಣುವಿನೊಂದಿಗೆ ಭಾರತದ ಪಯಣವೂ ಹಾಗೆಯೇ ಭಾಸವಾಗುತ್ತಿದೆ: ದಶಕಗಳಿಂದ ಹರಿದ ವಿಜ್ಞಾನದ ಶಾಂತ ಕಾಲುವೆಗಳು ಒಂದಾಗುತ್ತಿವೆ, ಈಗ ಅವು ಮಧ್ಯರಾತ್ರಿಯಲ್ಲಿ ದತ್ತಾಂಶ ಕೇಂದ್ರಕ್ಕೆ ವಿದ್ಯುತ್ ನೀಡುವಷ್ಟು, ಮಧ್ಯಾಹ್ನ ಆಹಾರವನ್ನು ಶುದ್ಧೀಕರಿಸುವಷ್ಟು ಮತ್ತು ಸಂಜೆಯ ವೇಳೆಗೆ ವೈದ್ಯರು ಮಗುವನ್ನು ಉಳಿಸಲು ಸಹಾಯ ಮಾಡುವಷ್ಟು ಪ್ರಬಲವಾದ ನದಿಯಾಗಿ ರೂಪುಗೊಳ್ಳು ತ್ತಿವೆ.
‘ಭಾರತದ ಪರಿವರ್ತನೆಗಾಗಿ ಪರಮಾಣು ಶಕ್ತಿಯ ಸುಸ್ಥಿರ ಬಳಕೆ ಮತ್ತು ಪ್ರಗತಿ ವಿಧೇಯಕ, 2025’- ಅಂದರೆ ‘ಶಾಂತಿ’ (Sustainable Harnessing and Advancement of Nuclear Energy for Trans forming India- SHANTI) ವಿಧೇಯಕದ ಪರಿಚಯದೊಂದಿಗೆ, ನಾವು ಆ ನದಿಯ ಪಾತ್ರವನ್ನು ರೂಪಿಸುತ್ತಿದ್ದೇವೆ; ಇದರಿಂದಾಗಿ ಈ ಹರಿವು ವಿಶ್ವಾಸಾರ್ಹ, ಸ್ವಚ್ಛ ಇಂಧನ ಮತ್ತು ಜೀವನವನ್ನು ಸುಧಾರಿಸುವ ತಂತ್ರಜ್ಞಾನಗಳ ಅಗತ್ಯವಿರುವ ಪ್ರತಿ ಮನೆ, ಕೈಗಾರಿಕೆ ಮತ್ತು ಸಂಸ್ಥೆಯನ್ನು ತಲುಪ ಲಿದೆ.
ಈ ಕ್ಷಣ ಏಕೆ ಮುಖ್ಯ ಎಂಬುದನ್ನು ಅರ್ಥಮಾಡಿಕೊಳ್ಳಲು, ನಾವು ಅದರ ಹಿನ್ನೆಲೆಯಿಂದ ಪ್ರಾರಂ ಭಿಸಬೇಕು. 2014ಕ್ಕಿಂತ ಮೊದಲು, ಭಾರತದ ಪರಮಾಣು ಚೌಕಟ್ಟು ಎರಡು ಪ್ರತ್ಯೇಕ ಶಾಸನಗಳಲ್ಲಿ ನೆಲೆಗೊಂಡಿತ್ತು: ಅಭಿವೃದ್ಧಿ ಮತ್ತು ನಿಯಂತ್ರಣಕ್ಕೆ ಮಾರ್ಗದರ್ಶನ ನೀಡುತ್ತಿದ್ದ ‘ಪರಮಾಣು ಇಂಧನ ಕಾಯ್ದೆ, 1962’ ಮತ್ತು ದೋಷರಹಿತ ಪರಿಹಾರ ವ್ಯವಸ್ಥೆಯನ್ನು ಒದಗಿಸುತ್ತಿದ್ದ ‘ಪರಮಾಣು ಹಾನಿಗಾಗಿ ನಾಗರಿಕ ಹೊಣೆಗಾರಿಕೆ ಕಾಯ್ದೆ, 2010’.
ಇದನ್ನೂ ಓದಿ: Vishweshwar Bhat Column: ಸಂಭವಿಸದ ವೈಫಲ್ಯಗಳಿಗೆ ಸಿದ್ಧತೆ
ಇವೆರಡೂ ಆಯಾ ಕಾಲಕ್ಕೆ ತಕ್ಕಂತೆ ಸೇವೆ ಸಲ್ಲಿಸಿವೆ; ಆದರೆ ಪರಮಾಣು ಸಾಮರ್ಥ್ಯವು ಪ್ರಾಥಮಿಕ ವಾಗಿ ಸರಕಾರದ ಪ್ರಯತ್ನವಾಗಿದ್ದ ಕಾಲವನ್ನು ಅವು ಪ್ರತಿಬಿಂಬಿಸುತ್ತಿದ್ದವು. ಆ ಸಮಯದಲ್ಲಿ ಉತ್ಪಾದನೆ, ಹಣಕಾಸು, ವಿಮೆ, ನವೋದ್ಯಮಗಳು ಮತ್ತು ಸುಧಾರಿತ ಸಂಶೋಧನೆಯಂಥ ವಿಶಾಲ ವಾದ ಪರಿಸರ ವ್ಯವಸ್ಥೆಯು ಇದರಲ್ಲಿ ಪಾಲ್ಗೊಳ್ಳಲು ಬಹಳ ಸೀಮಿತ ಅವಕಾಶಗಳಿದ್ದವು.
‘ಶಾಂತಿ’ (SHANTI) ಈ ಎಲ್ಲಾ ಎಳೆಗಳನ್ನು ಒಟ್ಟಿಗೆ ಸೇರಿಸುತ್ತದೆ; ಈ ಎರಡೂ ಹಳೆಯ ಕಾನೂನು ಗಳನ್ನು ರದ್ದುಗೊಳಿಸಿ ಅವುಗಳ ಸ್ಥಾನದಲ್ಲಿ ಏಕರೂಪದ, ಆಧುನಿಕ ಸಂರಚನೆಯನ್ನು ತರುತ್ತದೆ. ಇದು ಒಂದೇ ಹಂತದಲ್ಲಿ ನಮ್ಮ ನಿಯಂತ್ರಕ ಸಂಸ್ಥೆಯಾದ ‘ಪರಮಾಣು ಇಂಧನ ನಿಯಂತ್ರಣ ಮಂಡಳಿ’ಗೆ (ಎಇಆರ್‌ಬಿ) ಶಾಸನಬದ್ಧ ಸ್ಥಾನಮಾನವನ್ನು ನೀಡುತ್ತದೆ, ಪಾತ್ರಗಳು ಮತ್ತು ಜವಾಬ್ದಾರಿಗಳನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸುತ್ತದೆ ಮತ್ತು ಸೂಕ್ಷ್ಮ ಕಾರ್ಯಗಳನ್ನು ಸರಕಾರದ ಅಧೀನದ ಉಳಿಸಿಕೊಂಡು, ಸಾರ್ವಜನಿಕ-ಖಾಸಗಿ ಸಹಭಾಗಿತ್ವಕ್ಕೆ ಜವಾಬ್ದಾರಿಯುತ ಮಾರ್ಗ ಗಳನ್ನು ಮುಕ್ತಗೊಳಿಸುತ್ತದೆ.
ಈ ನದಿ ಎಷ್ಟು ವಿಸ್ತಾರವಾಗಿದೆ ಎಂಬುದನ್ನು ಒಂದು ಹೋಲಿಕೆಯು ನಮಗೆ ತಿಳಿಸುತ್ತದೆ. ಕಳೆದ ದಶಕದಲ್ಲಿ, ಭಾರತವು ಪರಮಾಣು ಇಂಧನ ಚಕ್ರದಾದ್ಯಂತ ಸ್ವಾವಲಂಬನೆಯನ್ನು ಸಾಧಿಸಿದೆ ಮತ್ತು ಈ ಕಾರ್ಯಕ್ರಮವನ್ನು ಜವಾಬ್ದಾರಿಯುತವಾಗಿ ನಡೆಸಿಕೊಂಡು ಬಂದಿದೆ; ಈಗ ನಾವು ಇದರ ವ್ಯಾಪ್ತಿಯನ್ನು ವಿಸ್ತರಿಸಲು ಸಿದ್ಧರಾಗಿದ್ದೇವೆ- 2047ರ ವೇಳೆಗೆ 100 ಗಿಗಾವಾಟ್ ಪರಮಾಣು ಸಾಮರ್ಥ್ಯದ ರಾಷ್ಟ್ರೀಯ ಗುರಿಯನ್ನು ತಲುಪುವುದು ಮತ್ತು ಕೃತಕ ಬುದ್ಧಿಮತ್ತೆ (ಎಐ), ಕ್ವಾಂಟಮ್ ಕಂಪ್ಯೂಟಿಂಗ್, ಸ್ಥಳೀಯ ಸೆಮಿಕಂಡಕ್ಟರ್ ತಯಾರಿಕೆ ಮತ್ತು ಬೃಹತ್ ಪ್ರಮಾಣದ ದತ್ತಾಂಶ ಸಂಶೋಧನೆಯನ್ನು ಬೆಂಬಲಿಸಲು ವಿಶ್ವಾಸಾರ್ಹ ‘ಬೇಸ್‌ಲೋಡ್’ ವಿದ್ಯುತ್ ಅನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ.
ಈ ವಿಧೇಯಕವು ಅಂಥ ಸಿದ್ಧತೆಯನ್ನು ಅಧಿಕೃತಗೊಳಿಸುತ್ತದೆ: ಇದು ಏಕೀಕೃತ ಪರವಾನಗಿ ಮತ್ತು ಸುರಕ್ಷತಾ ಅಧಿಕಾರ ವ್ಯವಸ್ಥೆಯನ್ನು ರೂಪಿಸುತ್ತದೆ; ಇದು ನಿರ್ವಾಹಕರಿಗೆ ಹಂತ ಹಂತದ ಹೊಣೆ ಗಾರಿಕೆಯನ್ನು ನಿಗದಿಪಡಿಸುತ್ತದೆ- ದೊಡ್ಡ ರಿಯಾಕ್ಟರ್‌ಗಳಿಗೆ 3000 ಕೋಟಿ ರು.ಗಳಿಂದ ಹಿಡಿದು ಸಣ್ಣ ರಿಯಾಕ್ಟರ್‌ಗಳು ಮತ್ತು ಇಂಧನ ಚಕ್ರ ಘಟಕಗಳಿಗೆ 100 ಕೋಟಿ ರು.ಗಳವರೆಗೆ- ಇದರಿಂದ ಸಣ್ಣ ರಿಯಾಕ್ಟರ್‌ಗಳು ಮತ್ತು ಸಣ್ಣ ಮಾಡ್ಯುಲರ್ ರಿಯಾಕ್ಟರ್‌ಗಳಂಥ (ಎಸ್‌ಎಂಆರ್) ನಾವೀನ್ಯ ಗಳು ಸೂಕ್ತ ಸುರಕ್ಷತಾ ಕ್ರಮಗಳೊಂದಿಗೆ ಮುಂದುವರಿಯಬಹುದು.
ಇದು ನಿರ್ವಾಹಕರ ಮಿತಿಗಿಂತ ಹೆಚ್ಚಿನ ಪರಿಹಾರದ ಅಗತ್ಯವಿರುವ ಸಂದರ್ಭಗಳಿಗಾಗಿ ‘ಪರಮಾಣು ಹೊಣೆಗಾರಿಕೆ ನಿಧಿ’ಯನ್ನು ಸ್ಥಾಪಿಸುತ್ತದೆ ಮತ್ತು ಅಂತಾರಾಷ್ಟ್ರೀಯ ಪೂರಕ ಪರಿಹಾರ ಸಮಾವೇಶದ ನೆರವನ್ನು ಒದಗಿಸುತ್ತದೆ- ಏಕೆಂದರೆ ಮಾನವೀಯ ಕಾಳಜಿಯು ತಂತ್ರಜ್ಞಾನದಷ್ಟೇ ವಿಶಾಲವಾಗಿರಬೇಕು.
ಅತ್ಯಂತ ಅರ್ಥಪೂರ್ಣವಾದ ಬದಲಾವಣೆ ಎಂದರೆ ಅದು ಸಾಮಾನ್ಯ ನಾಗರಿಕನಿಗೆ ಅನುಭವಕ್ಕೆ ಬರುವಂತಿರಬೇಕು. ಆರೋಗ್ಯ ರಕ್ಷಣೆಯಲ್ಲಿ, ಪರಮಾಣು ಔಷಧವು ಭರವಸೆಯ ಹಂತದಿಂದ ಬಳಕೆಯ ಹಂತಕ್ಕೆ ಬಂದಿದೆ: ಬಾಲ್ಯದ ರಕ್ತದ ಕ್ಯಾನ್ಸರ್ ಮತ್ತು ಪ್ರಾಸ್ಟೇಟ್ ಮಾರಕ ಕಾಯಿಲೆಗಳಿಗೆ ಉದ್ದೇಶಿತ ಚಿಕಿತ್ಸೆಗಳು ಈಗ ಟಾಟಾ ಮೆಮೋರಿಯಲ್‌ನಂಥ ಕೇಂದ್ರಗಳಿಂದ ಲಭ್ಯವಾಗುತ್ತಿವೆ; ಇದು ಐಸೋಟೋಪ್‌ಗಳನ್ನು ಗುಣಪಡಿಸುವ ಸಾಧನಗಳನ್ನಾಗಿ ಪರಿವರ್ತಿಸುತ್ತಿದೆ.
ಒಂದು ದಶಕದಲ್ಲಿ ನಾವು ಸಾಕಷ್ಟು ಪ್ರಗತಿ ಸಾಧಿಸಿದ್ದೇವೆ; ಈಗ ನಾವು ಸಂಶೋಧನಾ ಮಾರ್ಗ ಗಳನ್ನು ಉದಾರೀಕರಣ ಗೊಳಿಸುತ್ತಿದ್ದೇವೆ, ಇದರಿಂದ ಸಮರ್ಥ ಖಾಸಗಿ ಸಂಸ್ಥೆಗಳು ತಮ್ಮ ನವೀನ ಚಿಂತನೆಗಳನ್ನು ರಾಷ್ಟ್ರೀಯ ಸಾಮರ್ಥ್ಯಕ್ಕೆ ಸೇರಿಸಬಹುದು. ಆಹಾರ ಮತ್ತು ಕೃಷಿಯಲ್ಲಿ, ವಿಕಿರಣ ತಂತ್ರeನಗಳು ಈಗಾಗಲೇ ಉತ್ಪನ್ನಗಳನ್ನು ಸಂರಕ್ಷಿಸಲು, ಅವುಗಳ ಬಾಳಿಕೆ ಅವಧಿಯನ್ನು ಹೆಚ್ಚಿಸಲು ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತಿವೆ; ‘ಶಾಂತಿ’ ವಿಧೇಯಕವು ಆಸ್ಪತ್ರೆಯ ಚಿಕಿತ್ಸಾ ವಿಭಾಗವಿರಲಿ ಅಥವಾ ಕಾರ್ಖಾನೆಯ ಗುಣಮಟ್ಟ ತಪಾಸಣಾ ವಿಭಾಗವಿರಲಿ, ವಿಕಿರಣ ಸೌಲಭ್ಯಗಳನ್ನು ಮತ್ತು ಉತ್ಪಾದನಾ ಉಪಕರಣಗಳನ್ನು ಗುರುತಿಸುತ್ತದೆ ಹಾಗೂ ಅವುಗಳ ದೈನಂದಿನ ಬಳಕೆಯಲ್ಲಿ ಸ್ಪಷ್ಟತೆ ಮತ್ತು ಭದ್ರತೆಯನ್ನು ತರುತ್ತದೆ.
ನಾವು ಇನ್ನು ಮುಂದೆ ಒಡನಾಡಲಿರುವ ಕೆಲವು ತಾಂತ್ರಿಕ ಪದಗಳನ್ನು ಇಲ್ಲಿ ವಿವರಿಸುತ್ತೇನೆ. ‘ಪರಮಾಣು ಘಟನೆ’ (Nuclear incident) ಎಂದರೆ ಪರಮಾಣು ಹಾನಿಯನ್ನು ಉಂಟು ಮಾಡುವ ಒಂದು ಸಂಭವ (ಅಥವಾ ಸಂಬಂಧಿತ ಸರಣಿ ಘಟನೆಗಳು)- ಅಥವಾ ಸಮಂಜಸವಾದ ಮುನ್ನೆಚ್ಚ ರಿಕೆ ಕ್ರಮಗಳ ಹೊರತಾಗಿಯೂ, ಅಂಥ ಹಾನಿಯನ್ನುಂಟು ಮಾಡುವ ಗಂಭೀರವಾದ ಮತ್ತು ಸನ್ನಿಹಿತವಾದ ಅಪಾಯವನ್ನು ಒಡ್ಡಿದ ಸಂದರ್ಭ.
‘ಪರಮಾಣು ಹಾನಿ’ (Nuclear damage) ಎಂಬುದು ಮೊದಲಿಗಿಂತಲೂ ಈಗ ವಿಸ್ತಾರವಾಗಿದೆ: ಇದು ಜೀವಹಾನಿ ಅಥವಾ ಗಾಯ (ದೀರ್ಘಕಾಲದ ಆರೋಗ್ಯದ ಮೇಲಿನ ಪರಿಣಾಮವೂ ಸೇರಿ), ಆಸ್ತಿಪಾಸ್ತಿ ನಷ್ಟ ಅಥವಾ ಹಾನಿ, ಪರಿಸರ ಮರುಸ್ಥಾಪನೆಯ ವೆಚ್ಚಗಳು, ಪರಿಸರದ ಬಳಕೆಗೆ ಸಂಬಂಧಿಸಿದ ಆದಾಯದ ನಷ್ಟ ಮತ್ತು ತಡೆಗಟ್ಟುವ ಹಾಗೂ ಉಪಶಮನ ಕ್ರಮಗಳ ವೆಚ್ಚಗಳನ್ನು ಒಳಗೊಂಡಿದೆ.
‘ಸುರಕ್ಷತಾ ಅಧಿಕಾರ’ (Safety authorisation) ಎಂಬುದು ಎಇಆರ್‌ಬಿ ನೀಡುವ ಲಿಖಿತ ಅನುಮತಿ ಯಾಗಿದೆ; ಇದು ವಿಕಿರಣ ಉಪಕರಣಗಳು, ರೇಡಿಯೋಐಸೋಟೋಪ್‌ಗಳು ಮತ್ತು ಅಯಾನೀಕರಿ ಸುವ ವಿಕಿರಣಕ್ಕೆ ವ್ಯಕ್ತಿಗಳನ್ನು ಒಡ್ಡಿಕೊಳ್ಳುವಂತೆ ಮಾಡುವ ಸೌಲಭ್ಯಗಳನ್ನು ವಿನ್ಯಾಸಗೊಳಿಸು ವಾಗ, ಸ್ಥಳ ನಿಗದಿಪಡಿಸುವಾಗ, ನಿರ್ವಹಿಸುವಾಗ ಮತ್ತು ಸ್ಥಗಿತಗೊಳಿಸುವಾಗ- ಸುರಕ್ಷತೆಗೆ ಪ್ರಥಮ ಆದ್ಯತೆ ನೀಡುವ ಮಾನದಂಡಗಳನ್ನು ಅನುಸರಿಸಲಾಗಿದೆಯೇ ಎಂಬುದನ್ನು ಖಚಿತಪಡಿಸುತ್ತದೆ.
ಸುರಕ್ಷತೆ ಎಂಬುದು ಕೇವಲ ಒಂದು ಘೋಷಣೆಯಲ್ಲ; ಅದು ಅಂಕಿ-ಅಂಶಗಳು ಮತ್ತು ದಿನಚರಿ ಗಳನ್ನೊಳಗೊಂಡ ಒಂದು ಶಿಸ್ತು. ಭಾರತದ ಕಾರ್ಯನಿರತ ಸ್ಥಾವರಗಳ ನಿರ್ಮಾಣದ ಸಮಯದಲ್ಲಿ ಪ್ರತಿ 3 ತಿಂಗಳಿಗೊಮ್ಮೆ ಮತ್ತು ಕಾರ್ಯಾಚರಣೆಯ ಸಮಯದಲ್ಲಿ ಪ್ರತಿ 6 ತಿಂಗಳಿಗೊಮ್ಮೆ ತಪಾ ಸಣೆ ಮಾಡಲಾಗುತ್ತದೆ; ಪ್ರತಿ 5 ವರ್ಷಗಳಿಗೊಮ್ಮೆ ಪರವಾನಗಿಗಳನ್ನು ನವೀಕರಿಸಲಾಗುತ್ತದೆ.
ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯು (ಐಎಇಎ) ನಮ್ಮ ಮಾನದಂಡಗಳನ್ನು ಮೌಲ್ಯೀ ಕರಿಸುತ್ತದೆ, ಮತ್ತು ಈಗ ಎಇಆರ್‌ಬಿ ಪಡೆದಿರುವ ಶಾಸನಬದ್ಧ ಸ್ಥಾನಮಾನವು ಅದಕ್ಕೆ ಹೆಚ್ಚಿನ ಅಧಿಕಾರ ಮತ್ತು ಬಲವನ್ನು ನೀಡಿದೆ. ವಿಕಿರಣವನ್ನು ಮೈಕ್ರೋಸೀವರ್ಟ್‌ಗಳಲ್ಲಿ ಅಳೆಯಲಾಗು ತ್ತದೆ: ಸಾರ್ವಜನಿಕರಿಗೆ ವಾರ್ಷಿಕ ಮಿತಿ 1000 ಮೈಕ್ರೋಸೀವರ್ಟ್ ಆಗಿದ್ದರೆ, ನಮ್ಮ ಕೇಂದ್ರಗಳಲ್ಲಿನ ಹೊರಸೂಸುವಿಕೆ ಇದರ ಅತ್ಯಲ್ಪ ಭಾಗ ಮಾತ್ರ- ಉದಾಹರಣೆಗೆ, ಕೂಡಂಕುಲಂ ನಲ್ಲಿ ಈ ಪ್ರಮಾಣ ವು ಆ ಮಿತಿಯ 0.002ರಷ್ಟಿದ್ದರೆ, ತಾರಾಪುರದಲ್ಲಿ ಸುಮಾರು 0.2ರಷ್ಟಿದೆ.
ವಿನ್ಯಾಸ ಮತ್ತು ಕಾರ್ಯಾಚರಣೆಯು ವಿಕಿರಣದ ಪ್ರಮಾಣವನ್ನು ನಿಗದಿತ ಮಿತಿಗಿಂತಲೂ ಸಾಕಷ್ಟು ಕಡಿಮೆ ಇರಿಸುತ್ತವೆ ಎಂಬುದಕ್ಕೆ ಇದೇ ಸಾಕ್ಷಿ. ಭೂಕಂಪನದ ಮುನ್ನೆಚ್ಚರಿಕೆಯನ್ನೂ ಇದರಲ್ಲಿ ಅಳವಡಿಸಲಾಗಿದೆ: ಪೂರ್ವ ಮತ್ತು ಪಶ್ಚಿಮ ಕರಾವಳಿ ತಾಣಗಳನ್ನು ಹೆಚ್ಚಿನ ಅಪಾಯದ ವಲಯಗಳಿಂದ ನೂರಾರು ಅಥವಾ ಸಾವಿರಾರು ಕಿಲೋಮೀಟರ್‌ಗಳಷ್ಟು ದೂರದಲ್ಲಿ ಗುರುತಿಸ ಲಾಗಿದೆ- ಏಕೆಂದರೆ ಭೌಗೋಳಿಕತೆ ಯನ್ನು ಸಹ ಸುರಕ್ಷತೆಯ ಭಾಗವಾಗಿಯೇ ರೂಪಿಸಬೇಕಾಗುತ್ತದೆ.
ಹಾಗಾದರೆ, ನಾಗರಿಕನ ದೈನಂದಿನ ಜೀವನದಲ್ಲಿ ಏನು ಬದಲಾಗುತ್ತದೆ? ಮೊದಲನೆಯದಾಗಿ, ನೀವು ನಂಬಬಹುದಾದ ವಿದ್ಯುತ್- ಇದು 24*7 ಲಭ್ಯವಿರುತ್ತದೆ, ಕಡಿಮೆ ಇಂಗಾಲದ ಹೊರಸೂಸುವಿಕೆ ಯನ್ನು ಹೊಂದಿರುತ್ತದೆ ಮತ್ತು ಹವಾಮಾನದ ಏರಿಳಿತಗಳಿಗೆ ಬದ್ಧವಾಗಿರುವುದಿಲ್ಲ.
ಒಂದು ಬಟ್ಟೆ ಉತ್ಪಾದನಾ ಕೇಂದ್ರವು ತನ್ನ ಇಂಧನ ಬಳಕೆಗೆ ಸಣ್ಣ ಮಾಡ್ಯುಲರ್ ರಿಯಾಕ್ಟರ್ ಅನ್ನು ಸೇರಿಸಿಕೊಂಡಾಗ, ಅದು ಅಲ್ಲಿನ ಮಗ್ಗಗಳನ್ನು ಮತ್ತು ಕಾರ್ಮಿಕರ ಜೀವನೋಪಾಯವನ್ನು ಸ್ಥಿರಗೊಳಿಸುತ್ತದೆ. ಒಂದು ಜಿಲ್ಲಾ ಆಸ್ಪತ್ರೆಯು ಸ್ಕ್ಯಾನಿಂಗ್, ರೇಡಿಯೋಥೆರಪಿ ಮತ್ತು ಡಿಜಿಟಲ್ ದಾಖಲೆಗಳಿಗಾಗಿ ನಿರಂತರ ವಿದ್ಯುತ್ ಮೇಲೆ ಅವಲಂಬಿತವಾದಾಗ, ರೋಗಿಯ ಆತಂಕವು ಒಂದು ವಿಷಯಕ್ಕೆ ಮಾತ್ರ ಸೀಮಿತವಾಗುತ್ತದೆ, ಅದನ್ನು ಯಾವ ಕಾನೂನೂ ಗುಣಪಡಿಸಲು ಸಾಧ್ಯವಿಲ್ಲ- ಅದೇ ‘ಕಾಯುವ ಸಮಯ’.
‘ಶಾಂತಿ’ ವಿಧೇಯಕದ ಹಂತ-ಹಂತದ ಹೊಣೆಗಾರಿಕೆಯ ವ್ಯವಸ್ಥೆಯು ಕಟ್ಟುನಿಟ್ಟಾದ ಜವಾಬ್ದಾರಿ ಯನ್ನು ಕಾಯ್ದುಕೊಳ್ಳುತ್ತಲೇ, ಸಣ್ಣ ಹೂಡಿಕೆದಾರರು ಇಂಥ ಸ್ಥಾವರಗಳನ್ನು ನಿರ್ಮಿಸಲು ಇರುವ ಅಡೆತಡೆಗಳನ್ನು ಕಡಿಮೆ ಮಾಡುತ್ತದೆ ಮತ್ತು ಇದರ ಏಕೀಕೃತ ನಿಯಮಗಳು ವಿನ್ಯಾಸದಿಂದ ಕಾರ್ಯಾಚರಣೆಯವರೆಗಿನ ಪ್ರಯಾಣ ವನ್ನು ಸರಳಗೊಳಿಸುತ್ತವೆ.
ಎರಡನೆಯದಾಗಿ, ಅಚಾತುರ್ಯಗಳು ಸಂಭವಿಸಿದಾಗ ಉತ್ತಮ ಪರಿಹಾರ ವ್ಯವಸ್ಥೆ. ಈ ವಿಧೇಯ ಕವು ‘ಪರಮಾಣು ಇಂಧನ ಪರಿಹಾರ ಸಲಹಾ ಮಂಡಳಿ’ಯನ್ನು ರಚಿಸುತ್ತದೆ- ಇದರಲ್ಲಿ ಎಇಸಿ ಅಧ್ಯಕ್ಷರು, ಬಿಎಆರ್‌ಸಿ ನಿರ್ದೇಶಕರು, ಎಇಆರ್‌ಬಿ ಅಧ್ಯಕ್ಷರು ಮತ್ತು ಸಿಇಎ ಅಧ್ಯಕ್ಷರು ಇರುತ್ತಾರೆ. ಇವರು ಮರುಪರಿಶೀಲನಾ ಅರ್ಜಿಗಳ ವಿಚಾರಣೆ ನಡೆಸುತ್ತಾರೆ ಮತ್ತು ತಾಂತ್ರಿಕ ಆಳದೊಂದಿಗೆ ಸಂಧಾನ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತಾರೆ.
ಯಾವುದೇ ಘಟನೆ ಸಂಭವಿಸಿ ಅಧಿಸೂಚನೆ ಹೊರಬಂದ 30 ದಿನಗಳ ಒಳಗೆ, ಪರಿಹಾರವನ್ನು ತ್ವರಿತವಾಗಿ ನಿರ್ಧರಿಸಲು ಪರಿಹಾರ ಆಯುಕ್ತರನ್ನು ನೇಮಿಸಲಾಗುತ್ತದೆ. ಅಲ್ಲದೆ, ಗಂಭೀರ ಪ್ರಕರಣ ಗಳಿಗಾಗಿ ಸಿವಿಲ್ ನ್ಯಾಯಾಲಯಗಳ ಮಾದರಿಯಲ್ಲಿರುವ ‘ಅರೆ-ನ್ಯಾಯಾಂಗ’ ಅಧಿಕಾರ ಹೊಂದಿದ ‘ಪರಮಾಣು ಹಾನಿ ಪರಿಹಾರ ಆಯೋಗ’ವನ್ನು ರಚಿಸಲು ಸರಕಾರಕ್ಕೆ ಅಧಿಕಾರ ನೀಡುತ್ತದೆ.
ಇದು ವೇಗ ಮತ್ತು ಸಂವೇದನಾಶೀಲತೆಗಾಗಿ ‘ಸಹಜ ನ್ಯಾಯ’ದ ತತ್ವಗಳಿಂದ ಮಾರ್ಗದರ್ಶನ ಪಡೆಯುತ್ತದೆ. ಇದು ತುರ್ತು ಸಂದರ್ಭಗಳಿಗಾಗಿಯೇ ರೂಪಿಸಲಾದ ನ್ಯಾಯದಾನ ವ್ಯವಸ್ಥೆ ಯಾಗಿದೆ.
ಮೂರನೆಯದಾಗಿ, ಸುರಕ್ಷಿತ ಮತ್ತು ಪಾರದರ್ಶಕ ಪರಿಸರ ವ್ಯವಸ್ಥೆ. ‘ನಿರ್ಬಂಧಿತ ಮಾಹಿತಿ’ಯ ನಿಬಂಧನೆಗಳು ತಾಣಗಳು, ವಸ್ತುಗಳು ಮತ್ತು ವಿನ್ಯಾಸಗಳ ಬಗ್ಗೆ ಸೂಕ್ಷ್ಮ ದತ್ತಾಂಶವನ್ನು ರಕ್ಷಿಸು ತ್ತವೆ- ಆದರೆ ಇದು ಸುರಕ್ಷತೆಯ ಕುರಿತಾದ ಸಾರ್ವಜನಿಕ ಸಂಪರ್ಕ ಮತ್ತು ಜಾಗೃತಿ ಕಾರ್ಯಕ್ರಮ ಗಳಿಗೆ ಅಡ್ಡಿಯಾಗುವುದಿಲ್ಲ.
ಯುರೇನಿಯಂ ಪುಷ್ಟೀಕರಣ (enrichment), ಬಳಕೆಯಾದ ಇಂಧನದ ಮರುಸಂಸ್ಕರಣೆ, ಭಾರಜಲ ಉತ್ಪಾದನೆ ಮತ್ತು ಐಸೋಟೋಪಿಕ್ ಪ್ರತ್ಯೇಕತೆಯ ಮೇಲೆ ಸರಕಾರವು ಸಂಪೂರ್ಣ ನಿಯಂತ್ರಣ ವನ್ನು ಹೊಂದಿರುತ್ತದೆ. ಬಳಸಿದ ಎಲ್ಲಾ ಇಂಧನವನ್ನು ತಂಪಾಗಿಸಿ ಅಂತಿಮವಾಗಿ ಸರಕಾರದ ಸುಪರ್ದಿಗೇ ಒಪ್ಪಿಸಲಾಗುತ್ತದೆ- ಅದನ್ನು ಎಂದಿಗೂ ಖಾಸಗಿ ನಿರ್ವಾಹಕರು ನಿರ್ವಹಿಸುವುದಿಲ್ಲ- ಹೀಗೆ ದೀರ್ಘಕಾಲದ ಉಸ್ತುವಾರಿಯು ಸರಕಾರದ ಜವಾಬ್ದಾರಿಯಾಗಿಯೇ ಉಳಿಯುತ್ತದೆ.
ಅದೇ ಸಮಯದಲ್ಲಿ, ಸಂಶೋಧನೆ, ವಿನ್ಯಾಸ ಮತ್ತು ನಾವೀನ್ಯಗಳನ್ನು ಪರವಾನಗಿ ಪಡೆಯುವ ಪ್ರಕ್ರಿಯೆಯಿಂದ ಮುಕ್ತಗೊಳಿಸಲಾಗಿದೆ (ಸುರಕ್ಷತೆ ಮತ್ತು ರಾಷ್ಟ್ರೀಯ ಭದ್ರತೆಯ ಷರತ್ತು ಗಳೊಂದಿಗೆ); ಇದರಿಂದಾಗಿ ನವೋದ್ಯಮಗಳು ಮತ್ತು ವಿಶ್ವವಿದ್ಯಾಲಯಗಳು ಮೂಲಮಾದರಿಗಳು, ಸಂವೇದಕಗಳು, ಎಐ-ಚಾಲಿತ ಮೇಲ್ವಿಚಾರಣೆ ಮತ್ತು ಸುಧಾರಿತ ವಸ್ತುಗಳ ಮೇಲೆ ಪ್ರಯೋಗ ನಡೆಸಲು ಸಾಧ್ಯವಾಗುತ್ತದೆ, ಇದು ರಿಯಾಕ್ಟರ್ʼಗಳನ್ನು ಹೆಚ್ಚು ಸುರಕ್ಷಿತವಾಗಿಸುತ್ತದೆ ಮತ್ತು ವಿಕಿರಣದ ಬಳಕೆಯನ್ನು ಹೆಚ್ಚು ನಿಖರವಾಗಿಸುತ್ತದೆ.
ನಮ್ಮ ಈ ಪಯಣವು ನೆರೆಯ ವಲಯಗಳಿಂದಲೂ ಪಾಠಗಳನ್ನು ಕಲಿತಿದೆ. ಐದು ವರ್ಷಗಳ ಹಿಂದೆ ನಾವು ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿ ಸಹಭಾಗಿತ್ವಕ್ಕೆ ಮುಕ್ತಗೊಳಿಸಿದಾಗ, ಅಂಬೆಗಾಲಿಡುತ್ತಿದ್ದ ಆರ್ಥಿಕತೆಯು 8 ಬಿಲಿಯನ್ ಡಾಲರ್‌ಗೆ ಬೆಳೆಯಿತು; ಅಲ್ಲಿ 300ಕ್ಕೂ ಹೆಚ್ಚು ನವೋದ್ಯಮಗಳು ಹುಟ್ಟಿಕೊಂಡವು ಮತ್ತು ಒಂದು ದಶಕದಲ್ಲಿ 5 ಪಟ್ಟು ವೃದ್ಧಿಯಾಗುವ ಹಾದಿಯಲ್ಲಿದೆ.
ಇಲ್ಲೂ ಅಂಥದ್ದೇ ಆತ್ಮವಿಶ್ವಾಸದ ಪರಿಣಾಮವನ್ನು ನಾವು ನಿರೀಕ್ಷಿಸುತ್ತಿದ್ದೇವೆ: ‘ಶಾಂತಿ’ ವಿಧೇಯ ಕರ ಜತೆಗೆ, ನಾವು ಸಣ್ಣ ಮಾಡ್ಯುಲರ್ ರಿಯಾಕ್ಟರ್‌ಗಳಿಗಾಗಿ 20000 ಕೋಟಿ ರು. ಮೀಸಲಿಟ್ಟ ಮಿಷನ್ ಅನ್ನು ಘೋಷಿಸಿದ್ದೇವೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಖಾಸಗಿ ವಲಯವನ್ನು ಉತ್ತೇಜಿಸಲು 1 ಲಕ್ಷ ಕೋಟಿ ರು.ಗಳ ‘ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯ’ ನಿಧಿಯನ್ನು ಸ್ಥಾಪಿಸಿದ್ದೇವೆ.
ಪರಮಾಣು ಶಕ್ತಿಯು ಕೇವಲ ಒಂದು ಪ್ರತ್ಯೇಕ ವಿಭಾಗವಾಗಿ ಉಳಿಯುವುದಿಲ್ಲ; ಅದು ಭಾರತದ ವಿಶಾಲವಾದ ನಾವೀನ್ಯದ ಅಲೆಯ ಪ್ರಮುಖ ಕೊಂಡಿಯಾಗಲಿದೆ. ಕೆಲವರು ಹೊಣೆಗಾರಿಕೆ ಮತ್ತು ನ್ಯಾಯಾಲಯಗಳ ಬಗ್ಗೆ ಆತಂಕ ವ್ಯಕ್ತಪಡಿಸುತ್ತಾರೆ; ಆದರೆ ‘ಶಾಂತಿ’ ಈ ವಿಷಯದಲ್ಲಿ ಸ್ಪಷ್ಟ ವಾಗಿದೆ.
ಸ್ಥಾವರದ ಸಾಮರ್ಥ್ಯಕ್ಕೆ ಅನುಗುಣವಾಗಿ ನಿರ್ವಾಹಕರು ಹಂತ-ಹಂತದ ಹೊಣೆಗಾರಿಕೆಯನ್ನು ಹೊಂದಿರುತ್ತಾರೆ, ಇದಕ್ಕೆ ಕಡ್ಡಾಯ ವಿಮೆ ಅಥವಾ ಹಣಕಾಸಿನ ಭದ್ರತೆಯ ಬೆಂಬಲವಿರುತ್ತದೆ; ಒಂದು ವೇಳೆ ಹಾನಿಯು ಆ ಮಿತಿಯನ್ನು ಮೀರಿದರೆ, ‘ಪರಮಾಣು ಹೊಣೆಗಾರಿಕೆ ನಿಧಿ’ ಮತ್ತು ಅಗತ್ಯವಿದ್ದರೆ ಅಂತಾರಾಷ್ಟ್ರೀಯ ಪೂರಕ ಪರಿಹಾರ ನಿಧಿಯನ್ನು ಬಳಸಿಕೊಳ್ಳಬಹುದು.
ಸಿವಿಲ್ ನ್ಯಾಯಾಲಯಗಳು ತಾಂತ್ರಿಕ ದೂರುಗಳಿಂದ ತುಂಬಿಹೋಗುವುದಿಲ್ಲ; ಬದಲಾಗಿ ವಿಶೇಷ ಪರಿಹಾರ ಆಯೋಗವು ಇವುಗಳನ್ನು ನಿರ್ಧರಿಸುತ್ತದೆ. ಇದರ ಮೇಲ್ಮನವಿಗಳನ್ನು ವಿದ್ಯುತ್ ಮೇಲ್ಮನವಿ ನ್ಯಾಯಮಂಡಳಿಗೆ (ಇದರಲ್ಲಿ ಈಗ ಪರಮಾಣು ತಾಂತ್ರಿಕ ಸದಸ್ಯರನ್ನೂ ಸೇರಿಸ ಲಾಗಿದೆ) ಮತ್ತು ಅಂತಿಮವಾಗಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಬಹುದು. ಇದರ ಉದ್ದೇಶ ನ್ಯಾಯ ವನ್ನು ತಪ್ಪಿಸುವುದಲ್ಲ, ಬದಲಾಗಿ ವೇಗ, ಪರಿಣತಿ ಮತ್ತು ಘನತೆಯೊಂದಿಗೆ ನ್ಯಾಯವನ್ನು ಒದಗಿಸುವುದಾಗಿದೆ.
ಮತ್ತೆ ಕೆಲವರು ಇದರಿಂದ ದೇಶದ ಸಾರ್ವಭೌಮತ್ವಕ್ಕೆ ಧಕ್ಕೆಯಾಗಬಹುದು ಎಂದು ಆತಂಕ ಪಡುತ್ತಾರೆ; ಆದರೆ ವಾಸ್ತವದಲ್ಲಿ ಇದಕ್ಕೆ ವಿರುದ್ಧವಾದುದು ನಿಜ. ಮೂಲ ಮತ್ತು ವಿದಳನಕಾರಿ ವಸ್ತುಗಳು ಸರಕಾರದ ಕಣ್ಗಾವಲು ಹಾಗೂ ಲೆಕ್ಕಾಚಾರದಲ್ಲಿಯೇ ಉಳಿಯುತ್ತವೆ; ಅಧಿಸೂಚಿತ ಮಟ್ಟಕ್ಕಿಂತ ಹೆಚ್ಚಿನ ಪ್ರಮಾಣದ ಯುರೇನಿಯಂ ಮತ್ತು ಥೋರಿಯಂ ಗಣಿಗಾರಿಕೆಯು ಸರಕಾರಿ ಸಂಸ್ಥೆಗಳಿಗೆ ಮಾತ್ರ ಮೀಸಲಿರುತ್ತದೆ; ಸೂಕ್ಷ್ಮ ಪ್ರಕರಣಗಳಲ್ಲಿ ಸ್ವಾಧೀನಪಡಿಸಿಕೊಳ್ಳುವ ಹಕ್ಕುಗಳು ಕೇಂದ್ರ ಸರಕಾರದ ಬಳಿಯೇ ಇರುತ್ತವೆ; ಮತ್ತು ರಾಷ್ಟ್ರವು ಬಯಸಿದರೆ ತುರ್ತು ಸಂದರ್ಭಗಳಲ್ಲಿ ಎಲ್ಲಾ ಸೌಲಭ್ಯಗಳು ಮತ್ತು ವಸ್ತುಗಳ ನಿಯಂತ್ರಣವನ್ನು ಸರಕಾರವೇ ವಹಿಸಿಕೊಳ್ಳಲು ಅವಕಾಶ ವಿದೆ. ಇಲ್ಲಿ ಸಾರ್ವಭೌಮತ್ವ, ಸುರಕ್ಷತೆ ಮತ್ತು ಬೆಳವಣಿಗೆಯ ವ್ಯಾಪ್ತಿ ಇವು ಒಂದನ್ನೊಂದು ಬಲಪಡಿಸುತ್ತವೆ.
ಅಂತಿಮವಾಗಿ, ಒಂದು ಕಾನೂನು ಅದು ಸೇವೆ ಸಲ್ಲಿಸುವ ಜನರಷ್ಟೇ ಜೀವಂತವಾಗಿರುತ್ತದೆ. ಹತ್ತಿರದ ರಿಯಾಕ್ಟರ್ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ಕಾರಣ ಮಧ್ಯರಾತ್ರಿಯಲ್ಲೂ ಬೀದಿದೀಪಗಳು ಮಿಣಮಿಣ ಎನ್ನದೆ ಬೆಳಗುತ್ತಿರುವ ಒಂದು ಸಣ್ಣ ಪಟ್ಟಣವನ್ನು ನಾನು ಕಲ್ಪಿಸಿ ಕೊಳ್ಳುತ್ತೇನೆ; ವಿಕಿರಣ ತಂತ್ರಜ್ಞಾನದಿಂದ ಸಂಸ್ಕರಿಸಿದ ಈರುಳ್ಳಿಗಳು ದೀರ್ಘಕಾಲದ ಬಾಳಿಕೆ ಹೊಂದಿ ಉತ್ತಮ ಬೆಲೆ ಪಡೆಯುತ್ತಿರುವ ರೈತನನ್ನು ನಾನು ಕಾಣುತ್ತೇನೆ; ಲೀನಿಯರ್ ಆಕ್ಸಿಲರೇಟರ್ ಜೀವ ಉಳಿಸುವ ನಿಖರವಾದ ಪ್ರಮಾಣವನ್ನು ಮಾಪನ ಮಾಡುವುದನ್ನು ಗಮನಿಸುತ್ತಿರುವ ಒಬ್ಬ ತಾಯಿಯನ್ನು ನಾನು ನೋಡುತ್ತೇನೆ; ಯಾವುದೇ ಸಣ್ಣ ವ್ಯತ್ಯಾಸವು ದೊಡ್ಡ ಅಚಾತುರ್ಯ ವಾಗುವ ಮೊದಲೇ ಅದನ್ನು ಪತ್ತೆ ಹಚ್ಚುವ ಅಲ್ಗಾರಿದಮ್ ಬರೆಯುತ್ತಿರುವ ಯುವ ಇಂಜಿನಿಯರ್ ಅನ್ನು ನಾನು ಕಲ್ಪಿಸಿಕೊಳ್ಳುತ್ತೇನೆ.
ಇದುವೇ ‘ಶಾಂತಿ’ ವಿಧೇಯಕವು ಸಾಕಾರಗೊಳಿಸಲು ಬಯಸುತ್ತಿರುವ ಭಾರತ: ಸ್ವಚ್ಛ, ವಿಶ್ವಾಸಾರ್ಹ ಇಂಧನದಿಂದ ಸಬಲಗೊಂಡ, ಬಲವಾದ ನಿಯಮಗಳಿಂದ ರಕ್ಷಿಸಲ್ಪಟ್ಟ ಮತ್ತು ತನ್ನ ನಾಗರಿಕರ ನಾವೀನ್ಯದಿಂದ ಮುನ್ನಡೆಯುವ ‘ವಿಕಸಿತ ಭಾರತ’.ನದಿಗಳು ಸಮುದ್ರದ ಹಾದಿಗಾಗಿ ವಾದಿಸುವು ದಿಲ್ಲ; ಅವು ಅದನ್ನು ಕಂಡುಕೊಳ್ಳುತ್ತವೆ. ‘ಶಾಂತಿ’ ವಿಧೇಯಕದೊಂದಿಗೆ, ಭಾರತದ ಪರಮಾಣು ಎಂಬ ನದಿಯು ತನ್ನ ಪಥವನ್ನು ಕಂಡುಕೊಂಡಿದೆ- ಅದು ಸುರಕ್ಷಿತವಾಗಿದೆ, ಸಾರ್ವಭೌಮವಾಗಿದೆ ಮತ್ತು ಪ್ರತಿಯೊಬ್ಬ ನಾಗರಿಕನನ್ನು ತನ್ನೊಂದಿಗೆ ಕೊಂಡೊಯ್ಯು ವಷ್ಟು ಉದಾರವಾಗಿದೆ.
(ಲೇಖಕರು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು)