ಶಶಾಂಕಣ
ಹೆಚ್ಚಿನ ತಾಪಮಾನವಿರುವ ಬೇಸಗೆಯ ದಿನಗಳು ಬಂದಾಗಲೆಲ್ಲಾ, ನೆನಪಾಗುವುದು ನಮ್ಮ ಹಳ್ಳಿಯಲ್ಲಿ ಕಳೆದ ಬೇಸಗೆಯ ದಿನಗಳು. ಕರಾವಳಿಯ ಕುಗ್ರಾಮವಾದ, ಮುಖ್ಯ ರಸ್ತೆಯಿಂದ ಮೂರು ಕಿ.ಮೀ. ದೂರದಲ್ಲಿದ್ದ ನಮ್ಮ ಹಳ್ಳಿಯಲ್ಲಿ, ಬೇಸಗೆಯ ದಿನನಿತ್ಯದ ಬದಲಾವಣೆಗಳು, ವಾತಾವರಣ ದ ಏರುಪೇರುಗಳು, ಆಗಾಗ ಆಗಸದಲ್ಲಿ ಕಪ್ಪನೆಯ ಗೂಳಿಗಳಂತೆ ಸಾಗುತ್ತಿದ್ದ ಮೋಡಗಳು, ಗುಡುಗು ಮಿಂಚುಗಳು - ಇವೇ ಎಲ್ಲರಿಗೂ ಪ್ರಮುಖ ಸುದ್ದಿ; ಇಂದಿನಂತೆ ರಾಜಕೀಯ ಮತ್ತು ಇತರ ವಿದ್ಯಮಾನಗಳ ಕುರಿತು ಮಾತನಾಡಲು ಅವಕಾಶವಿಲ್ಲದ, ಮಾಹಿತಿ ಇಲ್ಲದ ಅಂದಿನ ಗ್ರಾಮೀಣರಿಗೆ, ಬೇಸಗೆಯ ಸೆಕೆ ಮತ್ತು ಆ ದಿನಗಳಲ್ಲಿ ಕಾಣಬರುತ್ತಿದ್ದ ಮೋಡ, ಮಳೆ, ದೂಳು, ಗಾಳಿ, ಕಾಡಿನ ಹಣ್ಣುಗಳು, ಕೃಷಿಯ ಸಮಸ್ಯೆಗಳು ಇವೇ ಚರ್ಚಿಸುವ, ಲೋಕಾಭಿರಾಮ ಹರಟೆಯ ‘ಸುದ್ದಿಗಳು’.
ಬೇಸಗೆಯ ದಿನಗಳಲ್ಲಿ ನಮ್ಮ ಮನೆ ಸುತ್ತಲಿದ್ದ ಪುಟ್ಟ ಕಾಡು, ಹಕ್ಕಲು, ಹಾಡಿಗಳಲ್ಲಿ ಮಾಗುತ್ತಿದ್ದ ಹಣ್ಣುಗಳ ವೈವಿಧ್ಯವೂ ನಮ್ಮ ಚರ್ಚೆಯ ಸುದ್ದಿ, ವಿಷಯಗಳಾಗುತ್ತಿದ್ದವು! ಆ ಹಕ್ಕಲಿನಲ್ಲಿ ಮುರಿನ ಹಣ್ಣು ತುಂಬಾ ಆಗಿದೆ, ಈ ಹಾಡಿಯಲ್ಲಿನ ಕಾಟುಮಾವಿನ ಮರದಲ್ಲಿ ರಾಶಿ ರಾಶಿ ಕಾಯಿಗಳಿವೆ, ಹಣ್ಣಾಗಿ ನೆಲಕ್ಕೆ ಬೀಳುತ್ತದೆ, ಆ ತೋಡಿನ ಅಂಚಿನಲ್ಲಿರುವ ಚೇಂಪಿ ಮರದಲ್ಲಿ ಹಣ್ಣುಬಿಟ್ಟಿವೆ ಮೊದಲಾದ ಸುದ್ದಿಗಳು ಚರ್ಚೆಗೆ ಒಳಗಾಗಿ, ಅವನ್ನು ಅರಸುತ್ತಾ ಹೋಗುವುದು ಮಕ್ಕಳ ಕೆಲಸ!
ಅಷ್ಟಕ್ಕೂ, ನಮ್ಮ ಸುತ್ತಲೂ ಇದ್ದ ಹಕ್ಕಲು, ಹಾಡಿಗಳಲ್ಲಿ, ಕುರುಚಲು ಗಿಡಗಳಿದ್ದ ಬೋಳು ಗುಡ್ಡಗಳಲ್ಲಿ ಬೇಸಗೆಯಲ್ಲಿ ಕಾಣಿಸುತ್ತಿದ್ದ ಕಾಡು ಹಣ್ಣುಗಳಾದರೂ ಸ್ವಲ್ಪವೇ! ಬಿರು ಬಿಸಿಲು ತಣಿದು, ಸಂಜೆಯ ಹೊತ್ತಿನಲ್ಲಿ ಪ್ರತಿದಿನ ಅಲ್ಲೆಲ್ಲಾ ಅಲೆದಾಡಿದರೂ, ಎಲ್ಲಾ ಮಕ್ಕಳಿಗೆ, ಕೆಲವು ಬಾರಿ ಮನೆಗೂ ಆಗುವಷ್ಟು ಹಣ್ಣುಗಳು ದೊರಕುತ್ತಿದ್ದವು.
ಇದನ್ನೂ ಓದಿ: Shashidhara Halady Column: ಚಿತ್ರದಲ್ಲೇ ಕಥೆ ಕೇಳಿದ ರಘುರಾಯ್
ಕಾಟು ಮಾವಿನ ಮರಗಳು ದಂಡಿಯಾಗಿ ಬೆಳೆಯುತ್ತಿದ್ದ ಅಂದಿನ ಕಾಲದಲ್ಲಿ, ಮಾವಿನ ಕಾಯಿ ಮತ್ತು ಹಣ್ಣುಗಳ ಸಂಗ್ರಹಕ್ಕೆ ಹೋದವರಿಗೆ ಯಾರಿಗೂ ಕೊರತೆಯಾಗದಷ್ಟು ಹಣ್ಣುಗಳು, ಕಾಯಿ ಗಳು ದೊರಕುತ್ತಿದ್ದವು. ಹೇರಳವಾಗಿ ತಮ್ಮಷ್ಟಕ್ಕೆ ಬೆಳೆದಿದ್ದ ಅಂತಹ ಬೃಹದಾಕಾರದ ಕಾಟು ಮಾವಿನ ಮರಗಳು, ಇಪ್ಪತ್ತೊಂದನೆಯ ಶತಮಾನ ಉದಯವಾಗುವಷ್ಟರಲ್ಲಿ ಬಹುಪಾಲು ಕಣ್ಮರೆಯಾಗಿದ್ದೂ ಒಂದು ಕಹಿ ಸತ್ಯ.
‘ಅಂಗಾರ ಅಂಗಾರ ಅಪ್ಪಯ್ಯ, ತಗ್ಗಿಗೆ ಬಿದ್ದರೆ ಕುಪ್ಪಯ್ಯ, ಒತ್ತಿ ಕಂಡರೆ ಕೆಂಪಯ್ಯ’ ಇದು ಹೆಬ್ಬಲಸಿನ ಹಣ್ಣಿನ ಬಗ್ಗೆ ಇರುವ ಒಂದು ಎದುರುಕಥೆ (ಒಗಟು). ಹೆಬ್ಬಲಸು ಗೊತ್ತು ತಾನೆ? ದಟ್ಟ ಕಾಡಿನಲ್ಲಿ ಮತ್ತು ಕಾಡಂಚಿನ ಊರುಗಳಲ್ಲಿ ಇರುವ ಬೃಹತ್ ಮರ. ನಮ್ಮ ಮನೆ ಹತ್ತಿರ, ದರೆಗೆ ತಾಗಿಕೊಂಡು ಐದು ದೊಡ್ಡ ಗಾತ್ರದ ಹೆಬ್ಬಲಸಿನ ಮರಗಳಿದ್ದವು.
ಹೆಸರು ‘ಹಿರಿದಾದ ಹಲಸು’ ಆದರೂ, ಇದು ಕೊಡುವ ಕಾಯಿಯ ಗಾತ್ರ ಮಾತ್ರ ಹೆಸರಿಗೆ ವ್ಯತಿರಿಕ್ತ. ಪುಟಾಣಿ ಹಣ್ಣು ಇದು. ಹಲಸಿನ ಹಣ್ಣಿನ ಮಿನಿಯೇಚರ್ ಎನಿಸುವ ಹೆಬ್ಬಲಸಿನ ಹಣ್ಣನ್ನು, ನಗರದವರು, ಬಯಲುಸೀಮೆಯವರು ನೋಡಿರುವ ಸಾಧ್ಯತೆ ಕಡಿಮೆ.
ಎತ್ತರವಾದ ಹೆಬ್ಬಲಸಿನ ಮರದ ತುದಿಯಲ್ಲಿ ಬಿಡುವ ನೂರಾರು ಹಣ್ಣುಗಳು ಬೆಳಗಿನ ಬಿಸಿಲಿಗೆ ಹೊಳೆಯುವ ಸೊಗಸನ್ನು ಕಂಡೇ, ಜನಪದರು ಮೇಲಿನ ಎದುರುಕಥೆಯನ್ನು ಕಟ್ಟಿರಬೇಕು. ‘ಮರದ ತುದಿಯಲ್ಲಿ, ಬಹು ಎತ್ತರದಲ್ಲಿರುವ ಆ ಬಣ್ಣ ಬಣ್ಣದ ಹಣ್ಣುಗಳು, ಕೆಳಗೆ ಬಿದ್ದರೆ ಮುದ್ದೆಯಾಗು ತ್ತವೆ, ಒಳಗೆ ಹೊಳೆವ ಬಣ್ಣದ ತೊಳೆಗಳಿವೆ’ ಎಂಬುದೇ ಆ ಒಗಟಿನ ಅರ್ಥ.
ಬೇಸಿಗೆ ಕಾಲಿಡುವ ಸಮಯದಲ್ಲಿ, ಹೆಬ್ಬಲಸಿನ ಮರಗಳಲ್ಲಿ ನೂರಾರು ಹಣ್ಣುಗಳು ಮಾಗುತ್ತವೆ. ಎರಡು ಮುಷ್ಟಿ ಗಾತ್ರದ ಈ ಹಣ್ಣೊಂದರಲ್ಲಿ ಐವತ್ತರಿಂದ ನೂರು ತೊಳೆಗಳು. ಚಿನ್ನದ ಬಣ್ಣದ ಒಂದೊಂದೇ ತೊಳೆಯನ್ನು ಬಾಯಿಗೆ ಹಾಕಿಕೊಂಡು, ರುಚಿ ಸವಿದು, ಬೀಜ ಉಗಿಯಬೇಕು.
ಸಾಮಾನ್ಯವಾಗಿ ಎತ್ತರವಾಗಿ ಬೆಳೆಯುವ ಹೆಬ್ಬಲಸಿನ ಮರದ ತುದಿಯಿಂದ ಬಲಿತ, ರುಚಿಕರ ಹಣ್ಣು ಗಳನ್ನು ಸಂಗ್ರಹಿಸುವುದೇ ಒಂದು ಕಲೆ. ಏಕೆಂದರೆ, ಮರ ಹತ್ತಿ ಹಣ್ಣನ್ನು ಕೊಯ್ದು ಕೆಳಕ್ಕೆ ಎಸೆದರೆ, ಮಿದುವಾದ ಆ ಹಣ್ಣು ಮುದ್ದೆಯಾಗಿ ತೊಳೆಗಳೆಲ್ಲ ಮಣ್ಣು ಸೇರುತ್ತವೆ. ಬುಟ್ಟಿ ಅಥವಾ ಗೋಣಿ ಚೀಲ ಹಿಡಿದು ಮರಹತ್ತಿ ಕಾಯಿ ಕೊಯ್ದು ಕೆಳಗಿಳಿಸಿದರೆ ಮಾತ್ರ ರುಚಿ ರುಚಿಯಾದ ಹಣ್ಣನ್ನು ತಿನ್ನಬಹುದು.
ನಮ್ಮೂರಿನ ಕೆಲವು ಸಾಹಸಿ ಯುವಕರು, ಬಳ್ಳಿಗಳನ್ನು ಒಂದಕ್ಕೊಂದು ಬಿಗಿದು, ಮೂವತ್ತು ಅಡಿ ಉದ್ದದ ದಾರ ಮಾಡಿ, ಅದರ ಒಂದು ತುದಿಗೆ ಹಣ್ಣನ್ನು ಕಟ್ಟಿ, ಕೆಳಗೆ ನಿಂತವರ ಕೈಗೆ ಸಿಗುವಂತೆ ನಿಧಾನವಾಗಿ ಕೆಳಗಿಳಿಸುತ್ತಿದ್ದರು!
ಹೆಬ್ಬಲಸಿನ ಕಾಯಿಗಳನ್ನು ತಂದು, ಮನೆ ಎದುರಿನ ಹುಲ್ಲುಕುತ್ರಿಯ ಅಡಿ ಇಟ್ಟರೆ, ನಾಲ್ಕಾರು ದಿನಗಳಲ್ಲಿ ಹಣ್ಣಾಗುತ್ತದೆ. ಆದರೆ ಮರದಲ್ಲೇ ಲಿತು, ಹಣ್ಣಾದಾಗ ಇರುವ ರುಚಿ ಇದಕ್ಕೆ ಬರುವು ದಿಲ್ಲ. ಪ್ರತಿ ಬೇಸಿಗೆಯಲ್ಲೂ ಹತ್ತಾರು ಹೆಬ್ಬಲಸಿನ ಹಣ್ಣುಗಳನ್ನು ತಿಂದ ಸವಿರುಚಿಯ ನೆನಪು ಮನದಲ್ಲಿ ಸದಾ ಹಸಿರು. ಈ ಹಣ್ಣಿನ ಬೀಜ ಬುಟ್ಟಿಗಳಲ್ಲಿ ಸಂಗ್ರಹಿಸಿ, ಚೆನ್ನಾಗಿ ಕುದಿಸಿ, ಎಣ್ಣೆ ಯನ್ನು ತಯಾರಿಸುತ್ತಿದ್ದರೆಂದು ನಮ್ಮ ಅಮ್ಮಮ್ಮ ಹೇಳುತ್ತಿದ್ದರು.
ಅದನ್ನು ದೀಪ ಬೆಳಗಲೂ ಉಪಯೋಗಿಸಬಹುದಿತ್ತು. ಇದೇ ರೀತಿ, ಹಿಂದಿನ ದಿನಗಳಲ್ಲಿ, ನಮ್ಮ ಹಳ್ಳಿಯ ಅಂಗಡಿಗಳಲ್ಲಿ ಸೀಮೆ ಎಣ್ಣೆ ದೊರೆಯುವ ಮುಂಚೆ, ತೋಡಿನ ಸಾಲಿನಲ್ಲಿ ಬೆಳೆಯುವ ಹೊನ್ನೆಮರದ ಕಾಯಿಯಿಂದಲೂ ಎಣ್ಣೆ ಮಾಡಿ, ದೀಪ ಹಚ್ಚುತ್ತಿದ್ದರಂತೆ.
ಕಾಡಿನ ನಡುವೆ, ಗದ್ದೆಯಂಚಿನಲ್ಲಿ, ಹಕ್ಕಲಿನ ಮೂಲೆಯಲ್ಲಿ ಬೃಹದಾಕಾರವಾಗಿ ಬೆಳೆಯತ್ತಿದ್ದ ಹಲವು ಕಾಟುಮಾವಿನ ಮರಗಳ ಕಥೆಯಂತೂ ಇನ್ನೂ ರುಚಿಕರ. ಒಂದೊಂದು ಮರದ ಹಣ್ಣು ಒಂದೊಂದು ರುಚಿ. ಆ ಪುಟಾಣಿ ಹಣ್ಣುಗಳಲ್ಲಿ, ಕೆಲವು ಈಗಿನ ಮಲ್ಲಿಕಾ ಹಣ್ಣಿನ ರುಚಿ! ಬೇಸಗೆಯ ಬಿಸಿಲಿನಲ್ಲಿ ನೆರಳು ನೀಡುವ ಆ ಬೃಹತ್ ಮಾವಿನ ಮರದ ಅಡಿ ಹೋದರೆ, ಒಂದಾದರೂ ಹಣ್ಣು ಸಿಗದಿದ್ದರೆ ಹೇಳಿ!
ಕೆಲವು ಮರಗಳ ಬುಡದಲ್ಲಿ ನೂರಾರು ಕಾಟು ಮಾವಿನ ಹಣ್ಣುಗಳು ಬಿದ್ದಿರುತ್ತಿದ್ದುದೂ ಇದೆ. ಈ ಕಾಟು ಹಣ್ಣುಗಳಲ್ಲಿ ಮಾಂಸಲ ಭಾಗ ಕಡಿಮೆ, ಗೊರಟನ್ನು ಚೀಪುತ್ತಾ, ಬಹು ರುಚಿಕರ ಎನಿಸುವ ಆ ಹಣ್ಣುಗಳನ್ನು ತಿಂದು, ಗೊರಟನ್ನು ಎಸೆಯುವಾಗ ಒಂದು ನುಡಿಗಟ್ಟು ‘ಏ ಅಣ್ಣಾ, ಗೊರಟಿನ ಬೆನ್ನರ ಓಡು!’ ಎಂದು ಪಕ್ಕದಲ್ಲಿದ್ದವರಿಗೆ ಹೇಳುವ ಹಾಸ್ಯ.
ಅವರು ಅದನ್ನು ಕೇಳಿ ಸುಮ್ಮನಿರುತ್ತಾರಾ? ಇನ್ನೊಂದು ಹಾಸ್ಯಚಟಾಕಿ ಹಾರಿಸುತ್ತಾರೆ! ‘ಹೆಣ್ತಿನ ಮಾರಿ ಕುದುರೆ ತಂದುಕೊಡು! ’ಬೇಸಗೆಯ ಈ ದಿನಗಳಲ್ಲೇ ಶಾಲೆಗೆ ಒಂದೆರಡು ತಿಂಗಳುಗಳ ರಜೆ; ಮಕ್ಕಳು ತಮ್ಮ ಮನೆಯ ಫಾಸಲೆಯ ಯಾವ ಯಾವ ಮರಗಳಲ್ಲಿ ಹಣ್ಣಾಗಿದೆ, ಯಾವ ಮರದ ಹಣ್ಣಿನ ರುಚಿ ಜಾಸ್ತಿ, ಯಾವ ಮರದ ಹಣ್ಣು ಹುಳಿ, ಯಾವ ಮರದ ಅಡಿ ಹೋದರೆ ತಕ್ಷಣ ಹಣ್ಣು ಸಿಗುತ್ತದೆ ಎಂದು ತಮ್ಮ ಮನದಲ್ಲೇ ಪಟ್ಟಿ ತಯಾರು ಮಾಡಿಕೊಂಡಿರುತ್ತಿದ್ದರು.
ಬೆಳಗಿನ ಹೊತ್ತೋ, ಮಧ್ಯಾಹ್ನ ಊಟವಾದ ಮೇಲೋ ಅಂತಹ ಮರಗಳ ಬುಡದಲ್ಲಿ ಠಳಾಯಿಸಿ, ಮರದ ಕೆಳಗೆ ಬಿದ್ದಿರುವ ಹಣ್ಣನ್ನು ಆಯ್ದು, ಸೊನೆಯನ್ನು ಮರಕ್ಕೆ ಉಜ್ಜಿ, ಹಣ್ಣನ್ನು ಚೀಪಿ ತಿನ್ನುತ್ತಿದ್ದರು. ಇನ್ನೂ ಜಾಸ್ತಿ ಇದ್ದರೆ ಮನೆಗೆ ತರುತ್ತಿದ್ದುದೂ ಇದೆ. ಬೃಹತ್ ಮಾವಿನ ಮರದ ಅಡಿ ಹಣ್ಣು ಬಿದ್ದಿರದೇ ಇದ್ದರೆ, ಮರದ ಮೇಲಿರುವ ಅಳಿಲನ್ನು ಕೇಳಿಕೊಳ್ಳುವ ನುಡಿಗಟ್ಟೂ ಉಂಟು!
‘ಚಣಿಲಣ್ಣ, ಮಣಿಲಣ್ಣ, ನಂಗೊಂದು ಹಣ್, ನಿಂಗೊಂದು ಹಣ್ ದಡ್ಡೋ ಬುಡ್ಡೋ’. ಮರದ ಮೇಲೆ ಓಡಾಡುವ ಅಳಿಲುಗಳು, ಹಣ್ಣುಗಳನ್ನು ಗುರುತಿಸಿ, ಅದನ್ನು ಅರ್ಧ ತಿಂದು ಕೆಳಗೆ ಎಸೆಯುತ್ತವೆ ಎಂಬ ಆಸೆ, ಈ ನುಡಿಗಟ್ಟಿನಲ್ಲಿದೆ. ಅಳಿಲುಗಳಿಂದಾಗಿ ತುದಿಯಲ್ಲಿರುವ ಹಣ್ಣುಗಳು ಅಲುಗಾಡಿ ಕೆಳಗೆ ಬೀಳುತ್ತವೆ.
ಮೇ ತಿಂಗಳಲ್ಲಿ ಆಗಾಗ ಬರುವ ಬೀಸುಗಾಳಿಯ ಸಮಯದಲ್ಲಿ ಇಂತಹ ದೊಡ್ಡ ಕಾಟುಮಾವಿನ ಮರಗಳ ಅಡಿ ಹೋಗಿ, ಗಾಳಿಗೆ ಬಿದ್ದಿದ್ದ ನೂರಾರು ಹಣ್ಣುಗಳನ್ನು ಬುಟ್ಟಿಯಲ್ಲಿ ಆಯ್ದು ತಂದು, ಅದರ ಗೊರಟುಗಳನ್ನು ಬೇರ್ಪಡಿಸಿ, ಅರೆಯುವ ಕಲ್ಲಿನಲ್ಲಿ ಹಾಕಿ ಅರೆದು, ರಸ ಮಾಡಿ, ಬೆತ್ತದ ಗೆರಸಿಯ ಮೇಲೆ ಹರಡಿ, ಒಣಗಿಸಿದರೆ, ಮಾವಿನ ಹಣ್‌ಚಟ್ ತಯಾರಾಗುತ್ತಿತ್ತು.
ಹತ್ತಾರು ದಿನ ಈ ರೀತಿ ರಸವನ್ನು ಹಲವು ಪದರಗಳಾಗಿ ಹರಡಿ, ಒಣಗಿಸಿದರೆ, ಎರಡು ಅಥವಾ ಮೂರು ಸೆಂಟಿ ಮೀಟರ್ ದಪ್ಪದ ಹಣ್ ಚಟ್ ಸಿದ್ಧ. ಮಳೆಗಾಲದಲ್ಲಿ ಇದರ ಚಟ್ನಿ, ಗೊಜ್ಜು ಮಾಡಿದರೆ, ಬಹು ರುಚಿಕರ. ಒಂದೆರಡು ಅಡಿ ಅಗಲ ಇರುವ ಈ ಹಣ್‌ಚೆಟ್‌ನ್ನು ದೂಪದ ಎಲೆಯಲ್ಲಿ ಸುತ್ತಿ, ಚೆನ್ನಾಗಿ ಒಣಗಿಸಿ ಇಡಬೇಕು. ಇಲ್ಲವಾದರೆ, ಎರಡು ಮೂರು ತಿಂಗಳುಗಳಲ್ಲಿ ಅದರಲ್ಲಿ ಪುಟಾಣಿ ಹುಳಗಳಾಗುತ್ತಿದ್ದವು!
ಅಂದ ಹಾಗೆ, ಹಣ್ಣುಗಳಲ್ಲಿ ಕಾಣಿಸುವ ಪುಟಾಣಿ ಹುಳಗಳ ಕುರಿತು ಬಲೇ ಮಜವಾದ ಒಂದು ನಂಬಿಕೆ ನಮ್ಮೂರಿನಲ್ಲಿದೆ! ಗೋಡಂಬಿ ಹಣ್ಣು (ಗೋಯ್ ಹಣ್ಣು) ಹೆಚ್ಚು ಮಾಗಿದರೆ, ಅದರಲ್ಲಿ ಪುಟಾಣಿ ಗಾತ್ರದ, ಬಿಳಿ ಬಣ್ಣದ ಹುಳಗಳಿರುವುದು ತುಸು ಸಾಮಾನ್ಯ. ಅಂತಹ ಗೋಯ್ ಹಣ್ಣು ಅಥವಾ ಅಪರೂಪಕ್ಕೆ ಮಾವಿನ ಹಣ್ಣಿನಲ್ಲಿ ಕಾಣಸಿಗುವ ಬಿಳಿ ಪುಟಾಣಿ ಹುಳಗಳೆಂದರೆ, ರೈತ ಮಕ್ಕಳಿಗೆ ತೀರ ರೇಜಿಗೆ ಇಲ್ಲ! ಏಕೆಂದರೆ ‘ಹಣ್ಣಿನ ಹುಳ ಕಣ್ಣಿಗೆ ತಂಪು’ ಎಂಬ ಗಾದೆಯನ್ನು ಹೇಳುತ್ತಾ, ಕಣ್ಣಿಗೆ ಕಾಣಿಸಿದ ಹುಳವನ್ನು ಬಿಸಾಕಿ, ಹಣ್ಣನ್ನು ಸ್ವಾಹಾ ಮಾಡುವವರೂ ನಮ್ಮೂರ ಲ್ಲಿದ್ದಾರೆ.
ಕಣ್ಣಿಗೆ ಕಾಣಿಸದ ಇನ್ನೂ ಪುಟಾಣಿ ಹುಳಗಳಿದ್ದರೆ, ಗೊತ್ತೇ ಆಗುತ್ತಿರಲಿಲ್ಲ! ಆ ರೀತಿಯ ನಿರುಪದ್ರವ ಕಾರಿ ಹುಳಗಳಿರುವ ಹಣ್ಣುಗಳನ್ನು ತಿಂದರೆ, ಅಕಸ್ಮಾತ್ ಆ ಹುಳವನ್ನೂ ಸಹ ಹಣ್ಣಿನ ಜತೆ ಹೊಟ್ಟೆ ಸೇರಿಸಿದರೆ, ಕಣ್ಣಿನ ದೃಷ್ಟಿಗೆ ಉತ್ತಮ ಎಂಬ ನಂಬಿಕೆ ಈ ಗಾದೆಯಲ್ಲಿದೆ! ಅದು ಅನುಭವ ಜನ್ಯವೂ ಇರಬಹುದು; ಕೆಲವು ಪ್ರಭೇದದ ಕೀಟಗಳನ್ನು, ಗೆದ್ದಲು ಹುಳದ ರಾಣಿಹುಳವನ್ನು ನಮ್ಮ ಹಳ್ಳಿಯ ಕೆಲವು ಪಂಗಡಗಳವರು ಆಗಾಗ ತಿನ್ನುವ ಹಿನ್ನೆಲೆಯಲ್ಲಿ, ಇಂತಹ ಗಾದೆಗಳು ಹುಟ್ಟಿಕೊಂಡಿರ ಬಹುದು.
ನಮ್ಮೂರಿನ ಶ್ರಮಿಕ ವ್ಯಕ್ತಿಗಳು, ವರ್ಷಕ್ಕೆ ಒಮ್ಮೆಯಾದರೂ ಗೆದ್ದಲು ಹುಳುವಿನ ರಾಣಿಯನ್ನು ತಿನ್ನಬೇಕು ಎಂದು ತವಕಿಸುವುದಿದೆ; ಅದರಿಂದಾಗಿ, ಅವರ ಅಪಾರ ದೈಹಿಕ ಶ್ರಮದ ಕೆಲಸಕ್ಕೆ ಶಕ್ತಿ ಕೂಡಿಬರುತ್ತದಂತೆ!
ನಮ್ಮ ಹಳ್ಳಿ ಮನೆ ಹಿಂದಿನ ಸೇಡಿಮಣ್ಣಿನ ದರೆಯನ್ನು ಹತ್ತಿ ಹೋದರೆ, ಒಂದು ಹಕ್ಕಲು ಇದೆ. ಒಂದೆರಡು ಎಕರೆ ವಿಸ್ತೀರ್ಣವಿರುವ ಆ ಜಾಗದಲ್ಲಿ ನೂರಾರು ಗಿಡಮರಬಳ್ಳಿಗಳ ಸಂತೆ. ಹಕ್ಕಲು ಎಂದರೆ, ದೊಡ್ಡ ಮರಗಳಿಲ್ಲದ, ಮಧ್ಯಮ ಗಾತ್ರದ ಮರಗಳ ತಾಣ. ಇಲ್ಲಿದ್ದ ಗೋಯ್ ಮರದಲ್ಲಿ (ಗೋಡಂಬಿ) ನೂರಾರು ಹಣ್ಣುಗಳಾಗುತ್ತಿದ್ದವು.
ಬೇಸಗೆಯಲ್ಲಿ ಅವು ಹಣ್ಣು ಬಿಟ್ಟಾಗ, ಅದರ ರಸವನ್ನು ಹೀರಿ ಕುಡಿದಾಗ, ಗಂಟಲಿನಲ್ಲಿ ಒಂದು ರೀತಿಯ ನವೆ, ಕೆರತ. ಆದರೂ ಗೋವೆ ಹಣ್ಣು ಎಂದರೆ ಮಕ್ಕಳಿಗೆ ಇಷ್ಟ. ಆ ಗೋಯ್ ಹಣ್ಣುಗಳಲ್ಲಿ ಕೆಲವನ್ನು ಮಾತ್ರ ತಿಂದು, ಉಳಿದವನ್ನು ಜಾನುವಾರುಗಳಿಗೆ ಹಾಕುವ ಪದ್ಧತಿ; 1980ರ ದಶಕದಲ್ಲಿ ನಮ್ಮ ಹಳ್ಳಿಯ ಹಲವು ಮನೆಗಳಲ್ಲಿ ಗೋಬರ್ ಗ್ಯಾಸ್ ಅನಿಲ ಸ್ಥಾವರ ಸ್ಥಾಪನೆಯಾದ ನಂತರ, ಅದರ ಡ್ರಮ್‌ಗೆ ಗೋಯ್ ಹಣ್ಣನ್ನು ಜಜ್ಜಿ ಹಾಕುವ ಪದ್ಧತಿ ಬಂತು; ಅದನ್ನು ಸಗಣಿಯ ಜತೆ ಸೇರಿಸಿ ಹಾಕಿದರೆ, ಹೆಚ್ಚು ಗೋಬರ್ ಗ್ಯಾಸ್ ಉತ್ಪತ್ತಿಯಾಗುತ್ತದೆ ಎನ್ನುತ್ತಿದ್ದರು ಹಳ್ಳಿಯ ಜನರು; ಇಂದಿನ ಸಿಲಿಂಡರ್ ಗ್ಯಾಸ್ ರೀತಿಯೇ, ಗ್ಯಾಸ್ ಸ್ಟೌನಲ್ಲಿ ಉರಿಯುತ್ತಿದ್ದ ಆ ಗೋಬರ್ ಗ್ಯಾಸ್, ಹಳ್ಳಿಯ ಜನರಿಗೆ ಅಡುಗೆಯನ್ನು ಬಹಳ ಸುಲಭ ಮಾಡಿದ್ದಂತೂ, ಅಂದಿನ ಸತ್ಯ. ಅದಕ್ಕೆ ಗೋಯ್ ಹಣ್ಣಿನ ಕೊಡುಗೆ ಯೂ ಇರುವುದು ವಿಶೇಷ.
ನಮ್ಮ ಮನೆ ಹಿಂದಿನ ಹಕ್ಕಲಿನ ತುದಿಯಲ್ಲಿ ಕೆಲವು ಮಧ್ಯಮ ಗಾತ್ರದ ಮರಗಳಿದ್ದವು. ನಮ್ಮ ಪಿಯು ಮತ್ತು ಪದವಿ ಪರೀಕ್ಷೆಗಳ ಸಮಯದಲ್ಲಿ, ಹಿಂದೆ ಮತ್ತು ಮುಂದೆ, ಹಲವು ವಾರಗಳ ಕಾಲ ರಜೆ ಇರುತ್ತಿತ್ತು; ಆ ಪರೀಕ್ಷೆಗಳಿಗೆ ಅಧ್ಯಯನ ಮಾಡಲೆಂದು, ಬೆಳಿಗ್ಗೆ ತಿಂಡಿ ಮುಗಿಸಿ, ಹಕ್ಕಲಿಗೆ ಬಂದು ೧೫ ಅಡಿ ಎತ್ತರವಿದ್ದ ಒಂದು ಮರವನ್ನು ಹತ್ತಿ ಕುಳಿತರೆ, ಮಧ್ಯಾಹ್ನದ ಊಟದ ತನಕವೂ ಅದೇ ನನ್ನ ಸ್ಟಡಿ ಟೇಬಲ್. ಆ ರೀತಿ ಮರ ಹತ್ತಿ ಕುಳಿತು ಓದಿ, ಬೋರ್ ಆದಾಗ, ಇಳಿದು, ಆ ಹಕ್ಕಲಿನ ಯಾವ ಮರಗಳಲ್ಲಿ ಹಣ್ಣುಗಳಾಗಿವೆ ಎಂದು ಹುಡುಕುವ ಕೆಲಸ!
ಅಲ್ಲೇ ಸನಿಹದಲ್ಲಿರುವ ವೈವಿಧ್ಯಮಯ ಮರಗಳಲ್ಲಿ, ಗೋಯ್ ಹಣ್ಣು, ಕಾಟು ಮಾವಿನ ಹಣ್ಣು, ಪುನರ್ಪುಳಿ ಹಣ್ಣು, ಹೆಬ್ಬಲಸಿನ ಹಣ್ಣುಗಳು ಬಣ್ಣ ಬಣ್ಣದಿಂದ ಅಂಬರದಲ್ಲಿ ಕಂಗೊಳಿಸುವಾಗ, ದೀರ್ಘಕಾಲ ಪುಸ್ತಕದಲ್ಲಿ ಮುಖ ಹುದುಗಿಸಿಕೊಂಡು ಕುಳಿತಿರಲು ಹೇಗೆ ತಾನೆ ಸಾಧ್ಯ? ಆಗಾಗ ಕುಳಿತ ಮರದಿಂದ ಕೆಳಗಿಳಿದು ಬಂದು, ಯಾವುದಾದರೂ ಒಂದು ಹಣ್ಣನ್ನು ಸ್ವಾಹಾ ಮಾಡಿ, ಪುನಃ ಅಧ್ಯಯನ. ಈ ರೀತಿ ಅಧ್ಯಯನ ಮಾಡಿದ ನಂತರ, ಪರೀಕ್ಷೆಯಲ್ಲಿ ಗಳಿಸಿದ ಅಂಕಗಳು ಅಷ್ಟಕ್ಕಷ್ಟೇ!
ಆದರೆ, ಆ ಸುತ್ತಲೂ ಯಾವ ಯಾವ ತಿಂಗಳುಗಳಲ್ಲಿ, ಅದರಲ್ಲೂ ಬೇಸಗೆಯಲ್ಲಿ, ಯಾವ ಯಾವ ಮರಗಳಲ್ಲಿ ಯಾವ ರೀತಿಯ ಹಣ್ಣುಗಳು ಬಿಡುತ್ತಿವೆ, ಅದರಲ್ಲಿ ಯಾವ ಹಣ್ಣು ಹೆಚ್ಚು ರುಚಿಕರ ಎಂದು ಪತ್ತೆ ಮಾಡಿ, ನೆನಪಿನಲ್ಲಿಟ್ಟುಕೊಳ್ಳಲು ಈ ಚಟುವಟಿಕೆಯಿಂದ ಸಾಧ್ಯವಾಯಿತು!