ಭರವಸೆ
ಪಿಯೂಷ್ ಗೋಯೆಲ್
ದೂರಸಂಪರ್ಕ, ನಿರ್ಮಾಣ, ಐಟಿ, ಹಣಕಾಸು ಸೇವೆಗಳು, ಪ್ರಯಾಣ ಮತ್ತು ಪ್ರವಾಸೋ ದ್ಯಮ ಸೇರಿದಂತೆ ತನ್ನ ಎಲ್ಲಾ 118 ಸೇವಾ ಕ್ಷೇತ್ರಗಳಿಗೆ ಭಾರತವು ಅತ್ಯುತ್ತಮ ಮಾರುಕಟ್ಟೆ ಪ್ರವೇಶವನ್ನು ಪಡೆದುಕೊಂಡಿದೆ. ಈ ವಿಸ್ತರಿತ ಮಾರುಕಟ್ಟೆ ಲಭ್ಯತೆಯು ಭಾರತೀಯ ವೃತ್ತಿ ಪರರು ಮತ್ತು ವ್ಯವಹಾರಗಳಿಗೆ ದೊಡ್ಡ ಪ್ರಮಾಣದ ಉದ್ಯೋಗ ಮತ್ತು ಹೊಸ ಬೆಳವಣಿಗೆ ಯ ಮಾರ್ಗಗಳನ್ನು ಸೃಷ್ಟಿಸುತ್ತದೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವ್ಯಾಪಾರ ರಾಜತಾಂತ್ರಿಕತೆಯಲ್ಲಿ ಭಾರತ-ನ್ಯೂಜಿಲೆಂಡ್ ಮುಕ್ತ ವ್ಯಾಪಾರ ಒಪ್ಪಂದವು(ಎಫ್ಟಿಎ) ಪ್ರಮುಖ ಕಾರ್ಯತಂತ್ರದ ಹೆಜ್ಜೆಯನ್ನು ಸೂಚಿಸುತ್ತದೆ- ಇದು ಉದ್ಯೋಗ ಸೃಷ್ಟಿಯನ್ನು ವೇಗಗೊಳಿಸುತ್ತದೆ, ಹೂಡಿಕೆಯನ್ನು ಹೆಚ್ಚಿಸುತ್ತದೆ ಮತ್ತು ಭಾರತ ದಾದ್ಯಂತ ಸಣ್ಣ ಉದ್ಯಮಗಳು, ವಿದ್ಯಾರ್ಥಿಗಳು, ಮಹಿಳೆಯರು, ರೈತರು ಹಾಗೂ ಯುವಕರಿಗೆ ಪರಿವರ್ತನಾತ್ಮಕ ಅವಕಾಶಗಳನ್ನು ತೆರೆಯುತ್ತದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ನ್ಯೂಜಿಲೆಂಡ್ ಪ್ರಧಾನಮಂತ್ರಿ ಗೌರವಾನ್ವಿತ ಕ್ರಿಸ್ಟೋ-ರ್ ಲುಕ್ಸನ್ ಅವರು ಜಂಟಿಯಾಗಿ ಘೋಷಿಸಿದ ಈ ಒಪ್ಪಂದವು ಮೋದಿ ಸರಕಾರವು ಮಾತುಕತೆ ನಡೆಸಿದ ಏಳನೇ ಮುಕ್ತ ವ್ಯಾಪಾರ ಒಪ್ಪಂದವಾಗಿದೆ.
ಬ್ರಿಟನ್ ಮತ್ತು ಒಮಾನ್ ಜತೆಗಿನ ಮಹತ್ವಾಕಾಂಕ್ಷೆಯ ಒಪ್ಪಂದಗಳ ಬಳಿಕ 2025ರಲ್ಲಿ ಅಂತಿಮ ಗೊಳಿಸಲಾದ ಮೂರನೇ ಪ್ರಮುಖ ವ್ಯಾಪಾರ ಒಪ್ಪಂದ ಇದಾಗಿದೆ. ಈ ಎಲ್ಲಾ ಮುಕ್ತ ವ್ಯಾಪಾರ ಒಪ್ಪಂದಗಳು ನಡೆದಿರುವುದು ಭಾರತಕ್ಕಿಂತ ಗಣನೀಯವಾಗಿ ಹೆಚ್ಚಿನ ತಲಾ ಆದಾಯವನ್ನು ಹೊಂದಿರುವ ಅಭಿವೃದ್ಧಿ ಹೊಂದಿದ ಆರ್ಥಿಕತೆಗಳೊಂದಿಗೆ ಎಂಬುದು ಗಮನಾರ್ಹ.
ಇದು ಜಾಗತಿಕ ವ್ಯಾಪಾರ ಮಾತುಕತೆಗಳಲ್ಲಿ ಭಾರತದ ಹೆಚ್ಚುತ್ತಿರುವ ಶಕ್ತಿ ಮತ್ತು ವಿಶ್ವಾಸಾರ್ಹತೆ ಯನ್ನು ಒತ್ತಿ ಹೇಳುತ್ತದೆ. ಪ್ರತಿ ಒಪ್ಪಂದದ ಬಗ್ಗೆ ಮಾತುಕತೆಗೂ ಮುನ್ನ ಎಲ್ಲಾ ಮಧ್ಯಸ್ಥಗಾರ ರೊಂದಿಗೆ ವ್ಯಾಪಕ ಸಮಾಲೋಚನೆಗಳನ್ನು ನಡೆಸಲಾಗಿದೆ. ಆ ಮೂಲಕ ಫಲಿತಾಂಶಗಳಲ್ಲಿ ಸಮತೋಲನ ಮತ್ತು ಅಭಿವೃದ್ಧಿ ಹೊಂದಿದ ಪ್ರಪಂಚದೊಂದಿಗೆ ನೈಜವಾದ ಪರಸ್ಪರ ಗೆಲುವಿನ ಒಡನಾಟವನ್ನು ಖಾತರಿಪಡಿಸಲಾಗಿದೆ.
ಉದ್ಯೋಗಗಳು, ಬೆಳವಣಿಗೆ ಮತ್ತು ಮಾರುಕಟ್ಟೆ ಪ್ರವೇಶ: ಈ ಮುಕ್ತ ವ್ಯಾಪಾರ ಒಪ್ಪಂದದ ಕೇಂದ್ರ ಆಧಾರಸ್ತಂಭವೆಂದರೆ ಉದ್ಯೋಗ ಸೃಷ್ಟಿ. ನ್ಯೂಜಿಲೆಂಡ್ ದೇಶವು ಭಾರತದ ರಫ್ತು ಉತ್ಪನ್ನ ಗಳಿಗೆ ಶೇ.100ರಷ್ಟು ಶೂನ್ಯ ಸುಂಕ ಪ್ರವೇಶವನ್ನು ಒದಗಿಸುತ್ತದೆ. ಇದು ಭಾರತದ ‘ಕಾರ್ಮಿಕ-ತೀವ್ರ’ ವಲಯಗಳಾದ ಜವಳಿ, ಚರ್ಮ, ಉಡುಪುಗಳು, ಪಾದರಕ್ಷೆಗಳು, ಸಾಗರ ಉತ್ಪನ್ನಗಳು, ರತ್ನಗಳು ಮತ್ತು ಆಭರಣಗಳು, ಕರಕುಶಲ ವಸ್ತುಗಳು ಮತ್ತು ಎಂಜಿನಿಯರಿಂಗ್ ಸರಕುಗಳಿಗೆ ಪ್ರಮುಖ ಉತ್ತೇಜನವನ್ನು ನೀಡುತ್ತದೆ. ಇದು ಭಾರತೀಯ ಕಾರ್ಮಿಕರು, ಕುಶಲಕರ್ಮಿಗಳು, ಮಹಿಳಾ ಉದ್ಯಮಿಗಳು, ಯುವಕರು ಮತ್ತು ‘ಎಂಎಸ್‌ಎಂಇ’ಗಳಿಗೆ ನೇರವಾಗಿ ಪ್ರಯೋಜನವನ್ನು ನೀಡು ತ್ತದೆ.
ದೂರಸಂಪರ್ಕ, ನಿರ್ಮಾಣ, ಐಟಿ, ಹಣಕಾಸು ಸೇವೆಗಳು, ಪ್ರಯಾಣ ಮತ್ತು ಪ್ರವಾಸೋದ್ಯಮ ಸೇರಿದಂತೆ ತನ್ನ ಎಲ್ಲಾ 118 ಸೇವಾ ಕ್ಷೇತ್ರಗಳಿಗೆ ಭಾರತವು ಅತ್ಯುತ್ತಮ ಮಾರುಕಟ್ಟೆ ಪ್ರವೇಶವನ್ನು ಪಡೆದುಕೊಂಡಿದೆ. ಈ ವಿಸ್ತರಿತ ಮಾರುಕಟ್ಟೆ ಲಭ್ಯತೆಯು ಭಾರತೀಯ ವೃತ್ತಿಪರರು ಮತ್ತು ವ್ಯವಹಾರಗಳಿಗೆ ದೊಡ್ಡ ಪ್ರಮಾಣದ ಉದ್ಯೋಗ ಮತ್ತು ಹೊಸ ಬೆಳವಣಿಗೆಯ ಮಾರ್ಗಗಳನ್ನು ಸೃಷ್ಟಿಸುತ್ತದೆ.
ವೃತ್ತಿಪರರು, ವಿದ್ಯಾರ್ಥಿಗಳು ಮತ್ತು ಯುವಕರಿಗೆ ಅವಕಾಶಗಳು: ಈ ಒಪ್ಪಂದವು ಭಾರತೀಯ ವೃತ್ತಿಪರರು ಮತ್ತು ವಿದ್ಯಾರ್ಥಿಗಳಿಗೆ ಸುಧಾರಿತ ಪ್ರವೇಶ ಮತ್ತು ವಾಸ್ತವ್ಯದ ಅವಕಾಶಗಳನ್ನು ಒದಗಿಸುತ್ತದೆ. ಇದು ಅಧ್ಯಯನದ ಸಮಯದಲ್ಲಿ ಕೆಲಸದ ಅವಕಾಶಗಳು, ಅಧ್ಯಯನದ ನಂತರದ ಉದ್ಯೋಗ ಮತ್ತು ರಚನಾತ್ಮಕ ಕೆಲಸ-ರಜಾದಿನದ ವೀಸಾ ನೀತಿಯನ್ನು ಸಕ್ರಿಯಗೊಳಿಸುತ್ತದೆ.
‘ಸ್ಟೆಮ್’ (ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ) ವಿಭಾಗದ ಪದವೀಧರರು ಹಾಗೂ ಸ್ನಾತಕೋತ್ತರ ಪದವೀಧರರು ಈಗ ಮೂರು ವರ್ಷಗಳವರೆಗೆ ಕೆಲಸ ಮಾಡಬಹುದು. ಇದೇವೇಳೆ, ಡಾಕ್ಟರೇಟ್ ವಿದ್ವಾಂಸರು ನಾಲ್ಕು ವರ್ಷಗಳ ಕಾಲ ಕೆಲಸ ಮಾಡಬಹುದು. ಇದು ಭಾರತದ ಯುವಕರಿಗೆ ಅಭೂತಪೂರ್ವ ಜಾಗತಿಕ ಮಾನ್ಯತೆ ಮತ್ತು ವೃತ್ತಿ ಮಾರ್ಗಗಳನ್ನು ಸೃಷ್ಟಿಸು ತ್ತದೆ. ಹೊಸ ತಾತ್ಕಾಲಿಕ ಉದ್ಯೋಗ ಪ್ರವೇಶ ವೀಸಾ ಸೌಲಭ್ಯವು ಅಂತಾರಾಷ್ಟ್ರೀಯ ಅವಕಾಶ ಗಳನ್ನು ಬಯಸುವ ನುರಿತ ಭಾರತೀಯ ವೃತ್ತಿಪರರಿಗೆ ಮತ್ತಷ್ಟು ನೆರವಾಗಲಿದೆ.
ಏಳಿಗೆಯ ಹಾದಿಯಲ್ಲಿ ರೈತರು: ಭಾರತೀಯ ರೈತರು ಜಾಗತಿಕ ವೇದಿಕೆಯಲ್ಲಿ ಅರ್ಥಪೂರ್ಣ ಪಾತ್ರ ವಹಿಸಬೇಕು ಎಂಬುದು ಪ್ರಧಾನಮಂತ್ರಿ ಮೋದಿಯವರ ಸ್ಪಷ್ಟ ಆಶಯವಾಗಿದೆ. ಮುಕ್ತ ವ್ಯಾಪಾರ ಒಪ್ಪಂದವು ಈ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
ದೇಶೀಯ ಉತ್ಪಾದಕತೆ ಮತ್ತು ರೈತರ ಆದಾಯ ಹೆಚ್ಚಳ ಉದ್ದೇಶದ ಹಲವು ಅಂಶಗಳನ್ನು ಈ ಪ್ಪಂದವು ಒಳಗೊಂಡಿದೆ. ಸೇಬುಗಳು, ಕಿವಿ ಹಣ್ಣು ಮತ್ತು ಜೇನುತುಪ್ಪವನ್ನು ಒಳಗೊಂಡ ಕೃಷಿ ಉತ್ಪಾದಕತೆ ಪಾಲುದಾರಿಕೆಯೂ ಇದರ ಭಾಗವಾಗಿದೆ. ಬಾಸ್ಮತಿ ಅಕ್ಕಿಗೆ ‘ಜಿಐ’-ಮಟ್ಟದ ರಕ್ಷಣೆ ಒದಗಿಸುವ ನ್ಯೂಜಿಲೆಂಡ್‌ನ ಬದ್ಧತೆಯು ಭಾರತೀಯ ಭತ್ತದ ರೈತರಿಗೆ ಬಲವಾದ ಬೆಂಬಲವನ್ನು ನೀಡುತ್ತದೆ.
ಅತ್ಯಂತ ಮುಖ್ಯವಾಗಿ ಅಕ್ಕಿ, ಕ್ಷೀರ, ಗೋಧಿ, ಸೋಯಾದಂಥ ಸೂಕ್ಷ್ಮ ವಲಯಗಳು ಹಾಗೂ ಇತರ ಪ್ರಮುಖ ಕೃಷಿ ಉತ್ಪನ್ನಗಳಿಗೆ ಸಂಪೂರ್ಣ ಸಂರಕ್ಷಣೆ ದೊರೆಯುವುದನ್ನು ಭಾರತವು ಖಚಿತ ಪಡಿಸಿದೆ. ಆ ಮೂಲಕ ದೇಶೀಯ ಜೀವನೋಪಾಯಕ್ಕೆ ಹಾನಿ ಮಾಡುವಂಥ ಯಾವುದೇ ಮುಕ್ತ ಮಾರುಕಟ್ಟೆಗೆ ಭಾರತ ಅವಕಾಶ ಒದಗಿಸಿಲ್ಲ.
ನವೀನ ಮುಕ್ತ ವ್ಯಾಪಾರ ಒಪ್ಪಂದಗಳು ಮತ್ತು ಹೂಡಿಕೆ ಬದ್ಧತೆಗಳು: ಭಾರತದ ಮುಕ್ತ ವ್ಯಾಪಾರ ಒಪ್ಪಂದಗಳು ಇಂದು ಬರೀ ಸುಂಕ ಕಡಿತಕ್ಕಿಂತಲೂ ಮಿಗಿಲಾದವಾಗಿವೆ. ಅವು ರಾಷ್ಟ್ರೀಯ ಹಿತಾಸಕ್ತಿಗಳನ್ನು ಕಾಪಾಡುವ ಜತೆಗೆ ರೈತರು, ‘ಎಂಎಸ್‌ಎಂಇ’ಗಳು, ಮಹಿಳೆಯರು ಮತ್ತು ಯುವಕರಿಗೆ ಹೊಸ ಅವಕಾಶಗಳನ್ನು ತೆರೆಯುವ ಸಾಧನಗಳಾಗಿವೆ.
ವಿವಿಧ ವ್ಯಾಪಾರ ಒಪ್ಪಂದಗಳಿಂದಾಗಿ ಭಾರತದ ರಫ್ತುಗಳು ತಕ್ಷಣದ ಅಥವಾ ತ್ವರಿತ ಸುಂಕ ನಿರ್ಮೂಲನೆಯ ಪ್ರಯೋಜನ ಪಡೆಯಲಿವೆ. ಆದರೆ ಭಾರತ ಮಾತ್ರ ತನ್ನ ಮಾರುಕಟ್ಟೆಯನ್ನು ಮುಕ್ತಗೊಳಿಸುವ ವಿಚಾರದಲ್ಲಿ ಬಹಳ ಲೆಕ್ಕಾಚಾರದ ನಿರ್ಣಯ ಮತ್ತು ಕಾಲ ಕ್ರಮೇಣ ಮುಕ್ತ ಗೊಳಿಸುವ ಆಯ್ಕೆಯನ್ನು ಉಳಿಸಿಕೊಂಡಿದೆ.
ನ್ಯೂಜಿಲೆಂಡ್ ಮುಂದಿನ 15 ವರ್ಷಗಳಲ್ಲಿ 20 ಶತಕೋಟಿ ಡಾಲರ್ ವಿದೇಶಿ ನೇರ ಹೂಡಿಕೆಗೆ ಬದ್ಧವಾಗಿದೆ. ಇದು ‘ಇಎಫ್ ಟಿಎ’ ದೇಶಗಳಾದ ಸ್ವಿಜರ್ಲೆಂಡ್, ನಾರ್ವೆ, ಐಸ್‌ಲ್ಯಾಂಡ್ ಮತ್ತು ಲೀಚ್ಟೆನ್‌ಸ್ಟೈನ್ ಜತೆಗೆ ಮುಕ್ತ ವ್ಯಾಪಾರ ಒಪ್ಪಂದದಲ್ಲಿ ಭಾರತ ಹೊಂದಿರುವ ನವೀನ ಹೂಡಿಕೆ-ಸಂಬಂಧಿತ ನಿಬಂಧನೆಗಳನ್ನು ಪ್ರತಿಬಿಂಬಿಸುತ್ತದೆ.
ನ್ಯೂಜಿಲೆಂಡ್ ಪಾಲಿಗೆ ಇದು ಭಾರತದಲ್ಲಿ ವಿದೇಶಿ ನೇರ ಹೂಡಿಕೆಯಲ್ಲಿ ದೊಡ್ಡ ಜಿಗಿತವನ್ನು ಸೂಚಿಸುತ್ತದೆ. ಕಳೆದ 25 ವರ್ಷಗಳಲ್ಲಿ ನ್ಯೂಜಿಲೆಂಡ್ ಭಾರತದಲ್ಲಿ ಸುಮಾರು 643 ಕೋಟಿ ರುಪಾಯಿಗಳನ್ನು ಹೂಡಿಕೆ ಮಾಡಿದೆ. 15 ವರ್ಷಗಳಲ್ಲಿ ಸುಮಾರು 1.8 ಲಕ್ಷ ಕೋಟಿ ರು.ಗಳನ್ನು ಹೂಡಿಕೆ ಮಾಡುವ ಹೊಸ ಬದ್ಧತೆಯು ಗಮನಾರ್ಹ ವಿಸ್ತರಣೆಯನ್ನುಸೂಚಿಸುತ್ತದೆ.
ಹೂಡಿಕೆಯ ಗುರಿಗಳನ್ನು ಪೂರೈಸದಿದ್ದರೆ ‘ಕ್ಲಾಬ್ಯಾಕ್‘ ಕಾರ್ಯವಿಧಾನದ ಮೂಲಕ ಸವಲತ್ತು ಗಳನ್ನು ಹಿಂಪಡೆಯುವ ಷರತ್ತನ್ನೂ ಇದು ಒಳಗೊಂಡಿದೆ. ಈ ಹೂಡಿಕೆಯ ಬಹುಪಾಲು ಕೃಷಿ, ಹೈನುಗಾರಿಕೆ, ‘ಎಂಎಸ್ಎಂಇ’ಗಳು, ಶಿಕ್ಷಣ, ಕ್ರೀಡೆ ಮತ್ತು ಯುವ ಅಭಿವೃದ್ಧಿಯನ್ನು ಬೆಂಬಲಿಸು ತ್ತದೆ, ವಿಶಾಲ ಮತ್ತು ಎಲ್ಲರನ್ನೂ ಒಳಗೊಂಡ ಬೆಳವಣಿಗೆಯನ್ನು ಖಚಿತಪಡಿಸುತ್ತದೆ.
ಮಹಿಳಾ ನೇತೃತ್ವದ ಮೊದಲ ಮುಕ್ತ ವ್ಯಾಪಾರ ಒಪ್ಪಂದ: ಇದು ಭಾರತದ ಮಹಿಳಾ ನೇತೃತ್ವದ ಮೊದಲ ಮುಕ್ತ ವ್ಯಾಪಾರ ಒಪ್ಪಂದವಾಗಿದ್ದು, ಈ ನಿಟ್ಟಿನಲ್ಲಿ ಐತಿಹಾಸಿಕ ಮೈಲಿಗಲ್ಲು ಎನಿಸಿದೆ. ಮುಖ್ಯ ಸಮಾಲೋಚಕರು ಮತ್ತು ಉಪ ಮುಖ್ಯ ಸಮಾಲೋಚಕರಿಂದ ಹಿಡಿದು ಸರಕು ಗಳು, ಸೇವೆಗಳು, ಹೂಡಿಕೆ ಮತ್ತು ನ್ಯೂಜಿಲೆಂಡ್‌ನ ನಮ್ಮ ರಾಯಭಾರಿಯವರೆಗೆ ಬಹುತೇಕ ಇಡೀ ಸಮಾಲೋಚನಾ ತಂಡವು ಮಹಿಳೆಯರನ್ನು ಒಳಗೊಂಡಿತ್ತು. ಪ್ರಧಾನಮಂತ್ರಿಯವರ ಅಭಿವೃದ್ಧಿ ಕಾರ್ಯಸೂಚಿಯಲ್ಲಿ ನಮ್ಮ ಮಹಿಳೆಯರು ಹೆಚ್ಚು ನಾಯಕತ್ವದ ಪಾತ್ರ ವಹಿಸುತ್ತಿದ್ದಾರೆ.
ಮುಕ್ತ ವ್ಯಾಪಾರ ಕಾರ್ಯತಂತ್ರ: ಭಾರತೀಯ ಉತ್ಪನ್ನಗಳೊಂದಿಗೆ ಅನ್ಯಾಯದ ರೀತಿಯಲ್ಲಿ ಸ್ಪರ್ಧಿಸದೆ, ಭಾರತದ ‘ಶ್ರಮ-ತೀವ್ರ’ ಕೈಗಾರಿಕೆಗಳಿಗೆ ತಮ್ಮ ಮಾರುಕಟ್ಟೆಗಳನ್ನು ತೆರೆಯುವ ಅಭಿವೃದ್ಧಿ ಹೊಂದಿದ ಆರ್ಥಿಕತೆಗಳೊಂದಿಗೆ ಪಾಲುದಾರಿಕೆ ಹೊಂದುವುದು ಭಾರತದ ಕಾರ್ಯ ತಂತ್ರವಾಗಿದೆ.
ಭಾರತ-ನ್ಯೂಜಿಲೆಂಡ್ ಮುಕ್ತ ವ್ಯಾಪಾರ ಒಪ್ಪಂದವು ಭಾರತದ ಈ ಕಾರ್ಯತಂತ್ರಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ಮೋದಿ ಸರಕಾರದ ಅಡಿಯಲ್ಲಿ ವ್ಯಾಪಾರ ಒಪ್ಪಂದಗಳು ಕೇವಲ ವಹಿವಾ ಟಿಗೆ ಸಂಬಂಧಿಸಿದಂಥವಲ್ಲ- ಅವು ಆರ್ಥಿಕತೆಯನ್ನು ಬಲಪಡಿಸುವ ಮತ್ತು ಭಾರತೀಯರ, ವಿಶೇಷವಾಗಿ ಕಡುಬಡವರ ಜೀವನವನ್ನು ಸುಧಾರಿಸುವ ವಿಶಾಲ ಧ್ಯೇಯದ ಭಾಗವಾಗಿವೆ.
2014ರಲ್ಲಿ ದುರ್ಬಲ ಐದು ದೇಶಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದ ಭಾರತವು ಇಂದು ಜಾಗತಿಕ ಬೆಳವಣಿಗೆಯ ಎಂಜಿನ್ ಆಗಿದೆಯೆಂದರೆ ಮತ್ತು ವಿಶ್ವಾದ್ಯಂತ ವ್ಯಾಪಾರ ಮತ್ತು ಹೂಡಿಕೆಗೆ ಆದ್ಯತೆಯ ಪಾಲುದಾರನಾಗಿದೆಯೆಂದರೆ, ಅದಕ್ಕೆ ಈ ಕಾರ್ಯತಂತ್ರವೇ ಕಾರಣ. ಇಂದು, ಭಾರತವು ಆತ್ಮವಿಶ್ವಾಸದಿಂದ ಮತ್ತು ಸಶಕ್ತ ಸ್ಥಾನದಲ್ಲಿ ಕುಳಿತು ಮಾತುಕತೆ ನಡೆಸುತ್ತದೆ.
ಕೃಷಿ, ಹೈನುಗಾರಿಕೆ ಮತ್ತು ಇತರ ಸೂಕ್ಷ್ಮ ಕ್ಷೇತ್ರಗಳ ಸಂಪೂರ್ಣ ರಕ್ಷಣೆಯನ್ನು ಖಾತರಿಪಡಿಸುತ್ತದೆ. ಜತೆಗೆ ಈ ಕ್ಷೇತ್ರಗಳಿಂದ ಪರಸ್ಪರ ಲಾಭವಾಗುವುದಿದ್ದರೆ ಮಾತ್ರ ಮಾತ್ರ ಒಪ್ಪಂದಗಳಿಗೆ ಸಹಿ ಹಾಕುವುದನ್ನು ಖಚಿತಪಡಿಸುತ್ತದೆ.
ವ್ಯಾಪಾರ ಆಡಳಿತದಲ್ಲಿ ಉಲ್ಲಾಸದಾಯಕ ಬದಲಾವಣೆ: ಭಾರತದ ಪ್ರಸ್ತುತ ಕಾರ್ಯ ವಿಧಾನ ವು ಈ ಹಿಂದಿನದಕ್ಕೆ ಹೋಲಿಸಿದರೆ ತದ್ವಿರುದ್ಧವಾಗಿದೆ. ಹಿಂದಿನ ವ್ಯಾಪಾರ ಕಾರ್ಯತಂತ್ರಗಳು ಅಜಾಗರೂಕತೆಯಿಂದ ಭಾರತೀಯ ಮಾರುಕಟ್ಟೆಗಳನ್ನು ಅಗ್ಗದ ಆಮದು ಸರಕುಗಳ ಎದುರು ಸ್ಪರ್ಧೆಗೆ ತೆರೆದಿಡುತ್ತಿದ್ದವು. ಆ ಮೂಲಕ ಸಣ್ಣ ಉದ್ಯಮಗಳು ಮತ್ತು ಉದ್ಯೋಗಗಳನ್ನು ಅಪಾಯ ಕ್ಕೆ ಸಿಲುಕಿಸಿದವು.
ಒಪ್ಪಂದಕ್ಕೆ ಸಹಿ ಹಾಕುವ ಮುನ್ನ ಮಧ್ಯಸ್ಥಗಾರರೊಂದಿಗೆ ಸಾಕಷ್ಟು ಸಮಾಲೋಚನೆಯಿಲ್ಲದೆ ನಿರ್ಧಾರ ಕೈಗೊಳ್ಳುತ್ತಿದ್ದದ್ದು ಇದಕ್ಕೆ ಕಾರಣವಾಗಿತ್ತು. ಪ್ರಧಾನ ಮಂತ್ರಿ ಮೋದಿಯವರ ನಿರ್ಣಾ ಯಕ ನಾಯಕತ್ವವು ಜಾಗತಿಕ ವೇದಿಕೆಯಲ್ಲಿ ಭಾರತದ ಘನತೆ, ವಿಶ್ವಾಸಾರ್ಹತೆ ಮತ್ತು ಶಕ್ತಿಯನ್ನು ಮರುಸ್ಥಾಪಿಸಿದೆ.
ಭಾರತೀಯ ಉದ್ಯಮದಾದ್ಯಂತ ಎಡೆ ಮೆಚ್ಚುಗೆ ಗಳಿಸಿರುವ ಭಾರತ-ನ್ಯೂಜಿಲೆಂಡ್ ಮುಕ್ತ ವ್ಯಾಪಾರ ಒಪ್ಪಂದವು, 2014ರಿಂದ ಆಡಳಿತದಲ್ಲಿ ಕಂಡುಬಂದಿರುವ ಬದಲಾವಣೆಯ ಫಲವಾಗಿದೆ. ಈ ಒಪ್ಪಂದವು ರಾಷ್ಟ್ರೀಯ ಹಿತಾಸಕ್ತಿಗಳನ್ನು ಕಾಪಾಡುವುದರ ಜತೆಗೆ ಸರಕುಗಳು, ಸೇವೆಗಳು, ಹೂಡಿಕೆ ಮತ್ತು ಚಲನಶೀಲತೆಯನ್ನು ಸಂಯೋಜಿಸುತ್ತದೆ. ಆ ಮೂಲಕ ಭಾರತದ ಆಧುನಿಕ, ಎಲ್ಲರನ್ನೂ ಒಳಗೊಂಡ ಮತ್ತು ಸಮತೋಲಿತ ವ್ಯಾಪಾರ ರಾಜತಾಂತ್ರಿಕತೆಯನ್ನು ಈ ಒಪ್ಪಂದವು ಪ್ರತಿಬಿಂಬಿಸುತ್ತದೆ.
ಭಾರತ ಮತ್ತು ನ್ಯೂಜಿಲೆಂಡ್ ದೇಶಗಳು ತಮ್ಮ ಆರ್ಥಿಕ ಸಂಯೋಜನೆಯನ್ನು ಆಳಗೊಳಿಸುತ್ತಿರುವ ಹೊತ್ತಿನಲ್ಲಿ, ವ್ಯಾಪಾರವು ಹೇಗೆ ಮಾರುಕಟ್ಟೆಗಳನ್ನು ಮುಕ್ತಗೊಳಿಸಬಲ್ಲದು ಹಾಗೂ ಮಾನವ ಕೇಂದ್ರಿತ ಬೆಳವಣಿಗೆ ಮತ್ತು ಪರಸ್ಪರ ಸಮಾನ ಸಮೃದ್ಧಿಗೆ ಹೇಗೆ ಕಾರಣವಾಗಬಲ್ಲದು ಎಂಬುದನ್ನು ಈ ಒಪ್ಪಂದವು ತೋರಿಸುತ್ತದೆ.
(ಲೇಖಕರು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರು)