ಕಾಡುದಾರಿ
ನಾವು ಈಗಾಗಲೇ ಹಲವು ಬಾರಿ ಓದಿರಬಹುದಾದ ಲೇಖಕರ ಪುಸ್ತಕಗಳು ಪರಿಚಿತ ಪಟ್ಟಣದ ಗಲ್ಲಿಗಳಂತೆ. ಅವೇ ಗಲ್ಲಿಗಳು, ಎದುರಾಗುವ ಜನಗಳು ಮಾತ್ರ ಬೇರೆ. ಅಪರಿಚಿತರ ಪುಸ್ತಕಗಳೆಂದರೆ ಪಟ್ಟಣವೂ ಹೊಸತು, ಗಲ್ಲಿಗಳೂ ಬೇರೆ, ಜನರೂ ಭಿನ್ನ. ಆ ಲೇಖಕ/ಕಿಯ ವೀಣೆಯ ತಾನ್‌ಗಳೂ ಬೇರೆ. ನಿಮ್ಮ ಶ್ರುತಿ ತಾನಾಗಿ ಆ ಲೇಖಕ/ಕಿಯ ಶ್ರುತಿಗೆ ಹೊಂದಿ ಕೊಂಡು ಅರಳುವುದನ್ನು ನೀವೇ ನೋಡಿ ಅಚ್ಚರಿ ಗೊಳ್ಳುವಿರಿ.
ಡಿಸೆಂಬರ್ ಹಾಗೂ ಜನವರಿಯಲ್ಲಿ ಹೆಚ್ಚಿನ ಎಲ್ಲ ಪತ್ರಿಕೆಗಳು ಆ ವರ್ಷ ಪ್ರಕಟವಾದ ಮಹತ್ವದ ಕೃತಿಗಳ ವಿವರಗಳನ್ನು ಪ್ರಕಟಿಸುತ್ತವೆ. ಇಂಗ್ಲಿಷ್ ಪತ್ರಿಕೆಗಳು ಇಂಗ್ಲಿಷ್ ಪುಸ್ತಕ ಗಳನ್ನೂ ಕನ್ನಡ ಪತ್ರಿಕೆಗಳು ಕನ್ನಡ ಪುಸ್ತಕಗಳನ್ನೂ ಪರಿಚಯಿಸಿ, ಹೊಸ ವರ್ಷ ಬರಲಿ ರುವ ಮಹತ್ವದ ಕೃತಿಗಳ ಬಗ್ಗೆಯೂ ಒಂದು ಮುನ್ನೋಟ ಕೊಡುತ್ತವೆ. ಈ ಸಲ ಇದನ್ನು ಗಮನಿಸುತ್ತಿದ್ದಂತೆ ಒಂದು ವಿಚಿತ್ರವಾದ ಆತಂಕ ಕವಿಯಿತು.
ಆ ಪಟ್ಟಿಯಲ್ಲಿರುವ ಶೇಕಡಾ ಹತ್ತರಷ್ಟು ಪುಸ್ತಕಗಳನ್ನೂ ನಾನು ಓದಿರಲಿಲ್ಲ. ಓದಲು ಸಮಯವಿರಲಿಲ್ಲ ಎಂದಲ್ಲ. ಮೊದಲು ಓದಿಗೆ ವಿನಿಯೋಗಿಸುತ್ತಿದ್ದ ಸಮಯದ ಅರ್ಧ ಪಾಲನ್ನು ಈಗ ಪಾಡ್‌ಕ್ಯಾಸ್ಟ್‌ಗಳು ತುಂಬಿಕೊಂಡಿದ್ದವು.
ಇನ್ನುಳಿದ ಕಾಲು ಭಾಗವನ್ನು ಡಾಕ್ಯುಮೆಂಟರಿಗಳು, ಸಿನಿಮಾಗಳು, ರೀಲ್ಸ್‌ಗಳು ಮುಗಿಸಿ ದ್ದವು. ಬಿಡುಗಡೆಯ ದಿನವೇ ಓದಲೆಂದು ಖರೀದಿಸಿ ತಂದ ಪುಸ್ತಕಗಳು ಶೆಲ್‌ನಲ್ಲಿ ಅಣಕಿಸುತ್ತ ಕೂತಿದ್ದವು.
ಅವುಗಳ ಜೊತೆ ಅದಕ್ಕೂ ಹಿಂದಿನ ವರ್ಷ, ಮತ್ತೂ ಹಿಂದಿನ ವರ್ಷ, ಐದು, ಹತ್ತು ವರ್ಷ ಹಿಂದಿನ ಪುಸ್ತಕಗಳು. ವಿಲಕ್ಷಣವಾದ ದಿಗಿಲು ಉಂಟಾಯಿತು. ಇವುಗಳನ್ನು ಓದಿ ಮುಗಿಸಲು ಆಯುಷ್ಯ ಸಾಲದಾದೀತು ಎಂಬ ಅರಿವಿನಿಂದ ಹುಟ್ಟಿದ ದಿಗಿಲು.
ಇದನ್ನೂ ಓದಿ: Harish Kera Column: ಅಂಗಾಲಿನಡಿಗೆ ಕಾಲದ ಕಚಗುಳಿ
ಅದೇ ವಿಷಣ್ಣತೆಯೊಂದಿಗೆ ಹೆಜ್ಜೆ ಹಾಕುತ್ತಿದ್ದಾಗ ಹಳೆ ಪುಸ್ತಕದಂಗಡಿ ಕಣ್ಣಿಗೆ ಬಿತ್ತು. ಕಾಲುಗಳು ಅತ್ತಲೇ ಒಯ್ದವು. ಪರಿಚಿತ ಪುಸ್ತಕಗಳು, ಅಪರಿಚಿತ ಕೃತಿಗಳು, ಜನಪ್ರಿಯ ಹೊತ್ತಿಗೆಗಳು, ಎಲ್ಲ ಭಾಷೆಯ ಲೇಖಕರು, ನಾನು ಹೆಚ್ಚು ಸೇಲ್ ಆಗುವೆನು ಎಂಬ ಧಿಮಾಕಿನ, ನನ್ನನ್ನು ಎತ್ತಿಕೊಳ್ಳಿ ಎಂಬ ವಿನಯದ, ನಿಮ್ಮ ಮಕ್ಕಳಿಗೆ ಕೊಡಿಸಿ ಎಂಬ ಪ್ರೀತಿಯ, ಧೂಳು ಕುಳಿತ, ಮೂಲೆಯಲ್ಲಿ ಸಿಕ್ಕಿಹಾಕಿಕೊಂಡ, ಭಾರದ ಕೃತಿಗಳ ಕೆಳಗೆ ನಜ್ಜುಗುಜ್ಜಾದ, ಬಿಸಿಲಿಗೆ ಒಣಗಿದ, ಕವಿ ಮಡಚಿಸಿಕೊಂಡ ಪುಸ್ತಕಗಳು. ಅವುಗಳ ನಡುವೆ ಧ್ಯಾನಶೀಲನಂತೆ ಕುಳಿತಿದ್ದ ‘ಹಿಮಾಲಯದ ಕರೆ’ ಎಂಬ ಪುಸ್ತಕ ಗಮನ ಸೆಳೆಯಿತು.
ಅಂಗಡಿಯವನಿಗೇನೂ ಅದರ ಬಗ್ಗೆ ಹೆಚ್ಚಿನ ಆಸ್ಥೆ ಇದ್ದಂತಿರದ ಕಾರಣ ಕ್ರಯವೂ ಹೆಚ್ಚಿಗಿರಲಿಲ್ಲ. ಎತ್ತಿಕೊಂಡು ಬಂದೆ. 1995ರಲ್ಲಿ ಪ್ರಕಟವಾದದ್ದು. ಜಿ.ಕೆ.ಪ್ರಧಾನ್ ಎಂಬವರು ಮೂಲ ಲೇಖಕರು. ಕನ್ನಡಕ್ಕೆ ಕೃ.ಶಿ. ಹೆಗಡೆ ಎಂಬವರು ಅನುವಾದಿಸಿದ್ದರು.
ಸಾಧಕನೊಬ್ಬನ ಆತ್ಮಾನ್ವೇಷಣೆಯ ಜೀವನ ಪ್ರವಾಸದ ಅನುಭವ ಕಥನ. ಮೊದಲ ವಾಕ್ಯ ದಿಂದಲೇ ಓದಿಗೆ ತೊಡಗಿಸಿಕೊಂಡಿತು. ‘ಹಿಮಾಲಯದ ಕರೆ’ಯನ್ನು ಓದಿ ಮುಗಿಸಿ ದಾಗ ಶೆಲ್‌ನಲ್ಲಿ ಈಗಾಗಲೇ ವರ್ಷಗಳಿಂದ ಕೂತಿದ್ದ ಗ್ರಂಥಗಳು ನನ್ನನ್ನು ಕೆಕ್ಕರಿಸಿಕೊಂಡು ನೋಡಿದ್ದರೆ ಆಶ್ಚರ್ಯವಿಲ್ಲ.
ವಿಚಿತ್ರ, ಈ ಕೃತಿ ಬರೆದವರೂ ಅನುವಾದಿಸಿದವರೂ ಯಾರೋ ಗೊತ್ತೇ ಇಲ್ಲ. ಯಾರೂ ಅದನ್ನು ಇನ್‌ಸ್ಟಾಗ್ರಾಂನಲ್ಲಿ ಪ್ರಮೋಟ್ ಮಾಡಿಲ್ಲ. ಯಾವುದೇ ಸಾಲಿನ ಮಹತ್ವದ ಪುಸ್ತಕಗಳ ಪಟ್ಟಿಯಲ್ಲಿ ಅದಿಲ್ಲ. ಅಂಗಡಿಯಲ್ಲಿ ಕಣ್ಣಿಗೆ ಬೀಳುವವರೆಗೂ ಅಂಥದೊಂದು ಪುಸ್ತಕ ಇದೆ ಎಂಬುದೇ ಗೊತ್ತಿರಲಿಲ್ಲ.
ತೊಂಬತ್ತರ ದಶಕದ ಅನ್ವೇಷಕ ಬರಹದ ಶೈಲಿ. ಸ್ವಲ್ಪ ಮಟ್ಟಿಗೆ ಭೈರಪ್ಪನವರ ‘ನಿರಾಕರಣ’ ವನ್ನು ಹೋಲುತ್ತದೆ. ಇದರ ಕಡೆಗೆ ನನ್ನನ್ನು ಸೆಳೆದದ್ದು ಏನು ಎಂದು ಪ್ರಶ್ನಿಸಿಕೊಂಡೆ. ಮುಖಪುಟ ಎನ್ನೋಣ ಎಂದರೆ, ಅಂಥ ಆಕರ್ಷಕವೇನಿಲ್ಲ. ಶೀರ್ಷಿಕೆ ಸ್ವಲ್ಪ ಮಟ್ಟಿಗೆ. ಇದ್ಯಾವುದೂ ಅಲ್ಲ, ಅದರ ಯಾದೃಚ್ಛಿಕತೆಯೇ (Randomness) ಬಹುಮಟ್ಟಿಗೆ ಕಾರಣ.
ನನ್ನ ಈಗಿನ ಓದಿನ ಹಂಬಲ, ಅಗತ್ಯಗಳೆಲ್ಲ ಇದಕ್ಕಿಂತ ಬೇರೆಯೇ. ಆದರೂ ಯಾವುದೋ ಒಂದು ಇದನ್ನು ಕೈಗೆತ್ತಿಕೊಳ್ಳುವಂತೆ ಮಾಡಿತು. ಹಾಗೆ ಮಾಡಿದ್ದರಿಂದ ನಿರಾಸೆಯಾಗಲಿಲ್ಲ. ಇದ್ದಕ್ಕಿದ್ದಂತೆ ಯಾವುದೋ ಒಂದು ಭಾನುವಾರ, ಮುಂಜಾನೆ ಎದ್ದು ಎಲ್ಲಿಗಂತಲೂ ಪ್ಲಾನ್ ಮಾಡದೇ ಕಾರು ಡ್ರೈವ್ ಮಾಡುತ್ತಾ ನೂರಾರು ಕಿಲೋಮೀಟರ್ ಹೋಗಿ, ಯಾವು ದೋ ಹೊಲದಲ್ಲಿ ಕುಳಿತು, ಯಾವುದೋ ಮರದ ಹಕ್ಕಿ ಹಾಡನ್ನು ಆಲಿಸಿ, ಅದೇ ಊರಿನ ರೈತ ಕೆತ್ತಿಕೊಟ್ಟ ಎಳನೀರು ಕುಡಿದು ಹಿಂದುರುಗಿದಾಗ ಸಿಗುವ ಒಂದು ಸಂತೋಷ, ಏನದರ ಹೆಸರು. ಅದಕ್ಕೆ ಹೆಸರಿಲ್ಲವೆಂದಾದರೆ ಇದಕ್ಕೂ ಹೆಸರಿಲ್ಲ.
ಅಪರಿಚಿತ ಲೇಖಕರ ಪುಸ್ತಕಗಳನ್ನು ಓದಿದರೆ ನಮಗೆ ಗೊತ್ತಿರದ ಹೊಸ ಲೋಕವೊಂದು ತೆರೆದುಕೊಳ್ಳುತ್ತದೆ. ನಾವು ಈಗಾಗಲೇ ಹಲವು ಬಾರಿ ಓದಿರಬಹುದಾದ ಲೇಖಕರ ಪುಸ್ತಕ ಗಳು ಪರಿಚಿತ ಪಟ್ಟಣದ ಗಲ್ಲಿಗಳಂತೆ. ಅವೇ ಗಲ್ಲಿಗಳು, ಎದುರಾಗುವ ಜನಗಳು ಮಾತ್ರ ಬೇರೆ.
ಅಪರಿಚಿತರ ಪುಸ್ತಕಗಳೆಂದರೆ ಪಟ್ಟಣವೂ ಹೊಸತು, ಗಲ್ಲಿಗಳೂ ಬೇರೆ, ಜನರೂ ಭಿನ್ನ. ಆ ಲೇಖಕ/ಕಿಯ ವೀಣೆಯ ತಾನ್‌ಗಳೂ ಬೇರೆ. ನೀವು ಈಗಾಗಲೇ ಹೊಂದಿಕೊಂಡಿರುವ ಸ್ವರ ವಲಯವನ್ನು ದಾಟಿ ಮಂದ್ರದಿಂದ ತಾರಕದ ನಡುವಿನ ಇನ್ಯಾವುದೋ ಶ್ರುತಿಯಲ್ಲಿ ಬಿಡುಬೀಸಾಗಿ ಸ್ವರ ಸೇರಿಸಿದಂತೆ.
ನಿಮ್ಮ ಶ್ರುತಿ ತಾನಾಗಿ ಆ ಲೇಖಕ/ಕಿಯ ಶ್ರುತಿಗೆ ಹೊಂದಿಕೊಂಡು ಅರಳುವುದನ್ನು ನೀವೇ ನೋಡಿ ಅಚ್ಚರಿಗೊಳ್ಳುವಿರಿ. ಮಹತ್ವದ ಪುಸ್ತಕಗಳೆಂದು ಪಟ್ಟಿ ಮಾಡಿದ, ಅಥವಾ ನಾವು ಹಾಗೆ ಭಾವಿಸಿದ ಕೃತಿಗಳು ಅನೇಕ ಸಾರಿ ನಮ್ಮದೇ ಪೂರ್ವಗ್ರಹಗಳ ಮೊತ್ತ.
ಯಾರೋ ರೆಕಮಂಡ್ ಮಾಡುತ್ತಾರೆ, ಎಲ್ಲಾ ವಿಮರ್ಶೆ ಬಂದಿರುತ್ತದೆ, ಇನ್ಯಾರೋ ಹೊಗಳಿ ರುತ್ತಾರೆ, ಟ್ರೆಂಡ್‌ನಲ್ಲಿರುತ್ತದೆ, ನೀವಿಷ್ಟ ಪಡುವ ಪ್ರಕಾರದ್ದೇ ಆಗಿರುತ್ತದೆ. ಮನಸ್ಸೂ ಕಣ್ಣು ಗಳೂ ಯೋಚನೆಯೂ ಆ ಧಾಟಿಗೂ ಶೈಲಿಗೂ ವಿಚಾರಲಹರಿಗೂ ಹೊಂದಿಕೊಂಡು ಬಿಟ್ಟಿರುತ್ತದೆ.
ಯುಟ್ಯೂಬ್ ನೋಡುವಾಗ ಗಮನಿಸಿದ್ದೀರಾ? ನೀವು ದಿನವಿಡೀ ಸದ್ಗುರುವಿನ ವಿಡಿಯೋ ಗಳನ್ನು ನೋಡಿದರೆ ಮರುದಿನ ನಿಮಗೆ ಅಂಥವೇ ವಿಡಿಯೋಗಳನ್ನು ರೆಕಮಂಡ್ ಮಾಡುತ್ತದೆ. ಅದರ ಆಲ್ಗಾರಿದಂ ಇರುವುದೇ ಹಾಗೆ. ನಮ್ಮ ಮನಸ್ಸೂ ಅದಕ್ಕಿಂತ ದೊಡ್ಡ ಆಲ್ಗಾರಿದಂ. ಅದು ರೂಢಿಗೆ ಬಿದ್ದಿರುತ್ತದೆ. ಪರಿಚಿತ ದಾರಿಗಳನ್ನೇ ಮತ್ತೆ ಹಿಡಿಯುತ್ತದೆ.
ಅಪರಿಚಿತ ಪುಸ್ತಕಗಳ ಓದು ಈ ಅಭ್ಯಾಸವನ್ನು ನಿಮ್ಮನ್ನೂ ಕದಲಿಸಿಬಿಡುತ್ತದೆ. ಇದು ಅರ್ಥವಾದ ಬಳಿಕ ಓದುವುದು ಬಾನಿನಲ್ಲಿ ಬೆಳ್ಳಕ್ಕಿ ಹಾರಿದಷ್ಟೇ ಹಗುರವಾದ ಕ್ರಿಯೆಯಾಗಿ ಬಿಡುತ್ತದೆ. ಹಕ್ಕಿಗೆ ಹಾರುವಿಕೆ ಬದುಕು ಮತ್ತು ಆನಂದ ಎರಡೂ. ಈ ಮೊದಲು ಓದುವಿಕೆ ಎಂಬುದು ಎಷ್ಟೊಂದು ಒತ್ತಡದ ಕೆಲಸ ಆಗಿತ್ತು.
ಎಷ್ಟೊಂದು ಆತಂಕಗಳು- ಟ್ರೆಂಡ್‌ನಲ್ಲಿರುವುದನ್ನು ಓದದಿದ್ದರೆ ಹಿಂದುಳಿದು ಬಿಡುತ್ತೇವೆ. ಗೆಳಯರ ಬಳಗದವರೆ ಓದುತ್ತಿರುವುದನ್ನು ನಾನು ಓದದೇ ಹೋದರೆ ಅವರ ಬಳಿ ಮಾತನಾಡಲು ವಿಷಯವಿರೋಲ್ಲ. ಇನ್ʼಸ್ಟಾಗ್ರಾಂನಲ್ಲಿ ಪಾಪ್ಯುಲರ್ ಆಗಿದ್ದನ್ನು ಓದದಿದ್ದರೆ ನಾನು ಪುರಾತನ ಮನುಷ್ಯ ಆಗಿಬಿಡುತ್ತೇನೆ.
ಖ್ಯಾತ ವಿಮರ್ಶಕರ ಪುಸ್ತಕ ಓದದೇ ಹೋದರೆ ದಡ್ಡರಲ್ಲಿ ಒಬ್ಬನೆಂದು ಪರಿಗಣಿಸುತ್ತಾರೆ. ನನ್ನ ಪಂಥದ ಸಿದ್ಧಾಂತಕ್ಕೆ ಪೂರಕವಾದ ಪುಸ್ತಕ ಓದಲೇಬೇಕಲ್ಲ. ಇಲ್ಲವಾದರೆ ಎದುರಾಳಿ ಗಳ ಜೊತೆ ಕ್ಯಾತೆ ತೆಗೆಯಲು ವಿಷಯ ಎಲ್ಲಿರುತ್ತದೆ. ಸುಪ್ರಸಿದ್ಧ ಸಾಹಿತಿಯ ಆ ಪುಸ್ತಕ ಇನ್ನೂ ಓದಿಲ್ವಾ ಎಂಬ ವರೇಣ್ಯರ ಚುಚ್ಚುಮಾತುಗಳನ್ನು ಹೇಗೆ ಸಹಿಸುವುದು. ಆ ಜನಪ್ರಿಯ ಪುಸ್ತಕ ನನ್ನ ಶೆಲ್‌ನಲ್ಲಿ ಇಲ್ಲದೇ ಹೋದರೆ ನನ್ನ ಬೆಲೆಯೇನು!
ಇಂಥ ಒತ್ತಡಯುಕ್ತ ಓದನ್ನು ನಿರಾಕರಿಸುವುದು ಮತ್ತು ತನ್ನದೇ ಓದಿನ ಪಥವನ್ನು ರೂಪಿಸಿಕೊಳ್ಳುವುದು ಸವಾಲು. ಹೀಗಾಗೇ ಯಾದೃಚ್ಛಿಕ ಓದು ಮುಖ್ಯ. ಹಳೆಯ ಪುಸ್ತಕ ದಂಗಡಿಗಳ ಸೊಗಸೇ ಇದು. ನಾವು ಊಹಿಸಿರದೇ ಇದ್ದ ಯಾವುದೋ ಪುಸ್ತಕವನ್ನು ಥಟ್ಟನೆ ನಿಮ್ಮ ಮುಂದಿಟ್ಟುಬಿಡುತ್ತದೆ. ಆ ಅಚ್ಚರಿಯೇ ಕೂಡಲೇ ಓದುವಂತೆ ಪ್ರೇರೇಪಿಸುತ್ತದೆ.
ಈ ವಾರ ಬಿಡುಗಡೆಯಾದ ಪುಸ್ತಕವನ್ನು ನಾವು ಓದದಿರಬಹುದು- ಯಾಕೆಂದರೆ ಅದು ಎಲ್ಲ ಕಡೆ, ಬೇಕಾದಾಗ, ಇನ್ನೂ ಬಹಳ ಕಾಲ ಸಿಗುತ್ತಿರುತ್ತೆ- ಓದಿದರಾಯ್ತು ಎಂಬ ಭಾವ. ಅಪರೂಪದ ಪುಸ್ತಕಗಳು ತಕ್ಷಣದ ಓದಿಗೆ ನಮ್ಮನ್ನು ದೂಡುತ್ತವೆ. ಸಾವಿರ ಪುಸ್ತಕಗಳ ನಡುವೆ ಒಂದನ್ನು ಆಯ್ದುಕೊಳ್ಳುವುದು ಬಳಲಿಕೆ. ಕೈಗೆ ಸಿಕ್ಕಿದ್ದನ್ನು ಓದುವುದು ಬಯಸದೇ ದೊರೆಯುವ ಬಿಡುಗಡೆ.
ಲೈಬ್ರರಿಗಳು ಮಾಡಿದ್ದು ಇದನ್ನೇ. ಅಲ್ಲಿ ಸಾವಿರ ಪುಸ್ತಕಗಳಿರುತ್ತಿದ್ದವು. ಅವುಗಳ ನಡುವೆ ನಮ್ಮ ಗಮನ ಸೆಳೆಯುವ ಯಾವುದೋ ಒಂದು ಶೀರ್ಷಿಕೆ, ಯಾರೋ ಒಬ್ಬ ಸಾಹಿತಿ ಇದ್ದೇ ಇರುತ್ತಿದ್ದರು. ಖರೀದಿಸುವ ಕಷ್ಟ ಇರಲಿಲ್ಲ. ಬೇಕಾದ್ದನ್ನು ಥಟ್ಟನೆ ಎತ್ತಿಕೊಂಡು ಓದಬಹು ದಾಗಿತ್ತು.
ತನ್ನ ಇಷ್ಟದ ಪ್ರಕಾರದ ಪುಸ್ತಕ ಅಲ್ಲದಿದ್ದರೂ ಒಮ್ಮೆ ಓದಿ ನೋಡಿ ಪ್ರಯತ್ನಿಸಲು ಕಷ್ಟ ವಿರಲಿಲ್ಲ. ರೆಫರೆನ್ಸ್‌ಗೆ ಮಾತ್ರವೇ ಇಟ್ಟ ಬಲು ದುಬಾರಿಯ ಪುಸ್ತಕಗಳನ್ನೂ ಅ ಓದಬಹು ದಿತ್ತು. ಇಷ್ಟವಾಗದಿದ್ದರೆ ಅರ್ಧದ ಕೈಬಿಡಬಹುದಾಗಿತ್ತು. ಖರೀದಿಸಿದ ಪುಸ್ತಕದ ಓದು ಅರ್ಧದ ನಿಲ್ಲಿಸುವಂತಾದರೆ ಬೇಜಾರು. ಗ್ರಂಥಾಲಯದ ಪುಸ್ತಕಗಳಿಗೆ ಅಂಥ ಬೇಸರವಿಲ್ಲ. ಅವು ನೀವಲ್ಲದಿದ್ದರೆ ಇನ್ನೊಬ್ಬ ಓದುಗನನ್ನು ಹುಡುಕಿಕೊಳ್ಳುತ್ತವೆ.
ಬೆಂಗಳೂರಿನ ಕಬ್ಬನ್ ಪಾರ್ಕ್‌ನ ಸೆಂಟ್ರಲ್ ಲೈಬ್ರರಿಗೆ ಹೋದರೆ ಆ ಗ್ರಂಥಾರಣ್ಯದಲ್ಲಿ ಲಕ್ಷಾಂತರ ಪಿಸುದನಿಗಳು ಪುಸ್ತಕದ ರ್‌ಯಾಕ್‌ಗಳಿಂದ ನಿಮ್ಮನ್ನು ಕರೆಯುತ್ತವೆ. ಪ್ರತಿ ಪುಸ್ತಕಕ್ಕೂ ಒಬ್ಬ ಓದುಗನಿರುತ್ತಾನೆ. ಆತ ಎಂದೋ ಬರುವನೆಂಬ ಭರವಸೆಯಲ್ಲಿ ಅದು ಕಾಯುತ್ತದೆ. ಹಾಗೇ ನಾವೂ ಸೂಕ್ತ ಪುಸ್ತಕಕ್ಕೆ ಕಾಯುತ್ತಿರುತ್ತೇವೆ.
ಯಾದೃಚ್ಛಿಕ ಪುಸ್ತಕಗಳನ್ನು ಆಯ್ದುಕೊಳ್ಳುವುದೆಂದರೆ ಮೊದಲ ನೋಟದ ಪ್ರೇಮದ ಹಾಗೆ. ಅದು ಯಾಕೋ ಏನೋ ಅರಿಯೆ ಎನ್ನುತ್ತಾರಲ್ಲ ಹಾಗೆ. ಯೋಚಿಸಿ ಯೋಜಿಸಿ ಪುಸ್ತಕ ಆಯ್ದುಕೊಂಡು ಓದುವುದು ನಮ್ಮ ಜ್ಞಾನವನ್ನೇನೋ ಹೆಚ್ಚಿಸಬಹುದು, ಆದರೆ ಯಾದೃಚ್ಛಿಕ ಓದು ನಮ್ಮ ಅಂತರಂಗವನ್ನು ವಿಸ್ತರಿಸುತ್ತದೆ. ಓದುವಿಕೆಯೂ ಒಂದು ಸಾಹಸದ, ಬೆರಗಿನ ಕ್ರಿಯೆಯಾಗುವಂತೆ ಪ್ರಚೋದಿಸುತ್ತದೆ. ಓದು ಬರೀ ಕ್ರಿಯೆಯಾಗಿರದೆ ಆನಂದವಾಗುತ್ತದೆ.
ಬಹುಶಃ ಯಾದೃಚ್ಛಿಕ ಓದಿನ ಈ ಗುಣವನ್ನು ನಮ್ಮ ಇತರ ಹವ್ಯಾಸಗಳಿಗೂ ಅನ್ವಯಿಸ ಬಹುದು ಎಂದು ಹೊಳೆಯುತ್ತಿದೆ. ಯುಟ್ಯೂಬ್‌ನ ಉದಾಹರಣೆಯನ್ನು ಮೇಲೆ ಹೇಳಿದೆ. ಒಂದು ಸಲ ನಮ್ಮ ಸೋಶಿಯಲ್ ಮೀಡಿಯಾಗಳನ್ನು, ನಾವು ಪದೇ ಪದೆ ನೋಡುವ ವೆಬ್‌ಸೈಟ್‌ಗಳನ್ನು, ನಮ್ಮ ಒಟಿಟಿ ಶೋ ಆದ್ಯತೆಗಳನ್ನು ಪರಿಶೀಲಿಸಿದರೆ ನಮಗೇ ಅರ್ಥ ವಾಗುತ್ತದೆ- ನಾವೆಷ್ಟು ಒಂದೇ ಜಾಡಿಗೆ ಬಿದ್ದಿದ್ದೇವೆ ಎಂಬುದು.
ಆಗಾಗ ಯಾದೃಚ್ಛಿಕ ನೋಡುವಿಕೆ, ಓದುವಿಕೆಗೆ ಹೊರಳದೇ ಇದ್ದರೆ ನಮ್ಮದೇ ಗ್ಯಾಸ್ ಚೇಂಬರ್ʼಗಳಲ್ಲಿ ನಾವೇ ನರಳುವಂತಾಗುತ್ತದೆ. ಭಿಒಂದೇ ಕಥೆಗೆ ಕಟ್ಟುಬೀಳುವುದು ಅಪಾಯಭಿ ಎಂದು ನೈಜೀರಿಯದ ಚಿಮಾಮಂಡಾ ಎಂಬ ಲೇಖಕಿ ಎಚ್ಚರಿಸುತ್ತಾಳೆ.
ಅಮೆರಿಕನ್ ಲೇಖಕರನ್ನು ಮಾತ್ರ ಓದಿ ಮೂಲ ಇಂಡಿಯನ್ನರ ಕತೆಗಳನ್ನು ಕಡೆಗಣಿಸು ವುದು, ಪುರುಷರ ಕತೆಗಳನ್ನು ಮಾತ್ರ ಓದಿ ಮಹಿಳೆಯರ ಸ್ವರಗಳನ್ನು ಆಲಿಸದಿರುವುದು, ದೊಡ್ಡ ಗಂಟಲಿನ ಲೇಖಕರನ್ನು ಓದುತ್ತ ಸೌಮ್ಯ ಧ್ವನಿಗಳನ್ನು ಕೇಳಿಸಿಕೊಳ್ಳದಿರುವುದು, ಸದಾ ಕೇಂದ್ರದಲ್ಲಿರುತ್ತ ಅಂಚನ್ನು ಮರೆಯುವುದು ಅಪಾಯಕಾರಿ.