ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Harish Kera Column: ಅಂಗಾಲಿನಡಿಗೆ ಕಾಲದ ಕಚಗುಳಿ

ಮೊಬೈಲು ಬರುವ ಮುನ್ನ ಗಡಿಯಾರದಂಗಡಿಯೂ ಅಲ್ಲಿ ರಿಪೇರಿಗೆ ಬಂದ ನೂರಾರು ಗಡಿಯಾರ ಗಳೂ ಸಾಮಾನ್ಯ ದೃಶ್ಯ ಆಗಿದ್ದವು. ಈಗ ಅಂಥ ಗಡಿಯಾರದಂಗಡಿಯ ಸಮಯವೂ ನಿಂತು ಹೋದಂತಿದೆ. ಮುಂದೆ ಹೋದಂತೆ ಕವಿಗೆ ವಸಂತಾದಿ ಋತುಗಳೆಲ್ಲವೂ ಭಿನ್ನಭಿನ್ನ ಚಿತ್ರಿಕೆಗಳಾಗಿ ಕಾಣಿಸುತ್ತವೆ.

Harish Kera Column: ಅಂಗಾಲಿನಡಿಗೆ ಕಾಲದ ಕಚಗುಳಿ

-

ಹರೀಶ್‌ ಕೇರ
ಹರೀಶ್‌ ಕೇರ Jan 1, 2026 7:17 AM

ಕಾಡುದಾರಿ

ಆಲೋಚಿಸಿದರೆ ಗಾಬರಿಯಾಗುತ್ತದೆ- ಎಷ್ಟು ಬೇಗ ಕಾಲ ಸರಿದುಹೋಗುತ್ತದೆ. ಮೊನ್ನೆ ಮೊನ್ನೆ ತಾನೇ 2025ರ ಕ್ಯಾಲೆಂಡರನ್ನು ಗೋಡೆಗೆ ತೂಗುಹಾಕಿದಂತಿದೆ. ಇಂದು ಅದರ ಜಾಗದಲ್ಲಿ ಮತ್ತೊಂದು ದಿನದರ್ಶಿಕೆ ಬಂದು ಕುಳಿತಿದೆ. ಮುಂಜಾನೆ ಬೇಗನೆ ಎದ್ದು ಹೊರಗೆ ಹೆಜ್ಜೆ ಹಾಕಿದರೆ ಮಂಜು ಕವಿದಿದೆ. ಹುಲ್ಲಿನ ಮೇಲೆ ಇಬ್ಬನಿ ಕುಳಿತು ಕಾಲಿಗೆ ಕಚಗುಳಿ ಇಡುತ್ತಿದೆ.

ಅರಳಿ ಮರದಲ್ಲಿ ಕುಳಿತು ಕೂಗುತ್ತಿರುವ ಹಕ್ಕಿಗೆ ಹೆಸರಿಲ್ಲ. ಅದರ ತುದಿಯಲ್ಲಿ ಕುಳಿತ ಹದ್ದು ರೆಕ್ಕೆ ಬಡಿದ ಫಡಫಡ ಸದ್ದು ಇಷ್ಟು ಕೆಳಕ್ಕೂ ಕೇಳಿಸುತ್ತಿದೆ. ಅದು ಈಗ ಮೇಲೆದ್ದು ಬಾನಿನಲ್ಲಿ ಇನ್ನಷ್ಟು ಮತ್ತಷ್ಟು ಎತ್ತರಕ್ಕೇರಿ ವರ್ತುಲಾಕಾರದಲ್ಲಿ ಸುತ್ತಬಹುದು. ನಮ್ಮ ಕಾಲ- ದೇಶ ಆ ಎತ್ತರದಿಂದ ಅದಕ್ಕೆ ಹೇಗೆ ಕಾಣಿಸುತ್ತದೋ ಏನೋ.

ಕವಿ ಕೆ.ಎಸ್.ನರಸಿಂಹಸ್ವಾಮಿ ಬಣ್ಣಿಸುತ್ತಾರೆ- ಗಡಿಯಾರದಂಗಡಿಯ ಮುಂದೆ ಬೆದರಿದೆ ಕುದುರೆ/ ಕಣ್ಣಪಟ್ಟಿಯ ಕಂಡು ಕನ್ನಡಿಯಲಿ/ ಗಂಟೆ ಎಷ್ಟೆಂದು ಕೇಳಿದರೇನ ಹೇಳಲೆ? ಎಷ್ಟೊಂದು ಗಡಿಯಾರ ಅಂಗಡಿಯಲಿ! ಹೌದು, ಇದು ಮಾರಾಟಕ್ಕಿಟ್ಟ ವಾಚುಗಳ ಅಂಗಡಿಯಲ್ಲ, ರಿಪೇರಿಗೆ ಬಂದ ಗಡಿಯಾರಗಳ ಅಂಗಡಿ. ಹೀಗಾಗಿ ಒಂದೊಂದು ಗಡಿಯಾರವೂ ಒಂದೊಂದು ಸಮಯ ತೋರಿಸುತ್ತಿದೆ.

ಇದನ್ನೂ ಓದಿ: Harish Kera Column: ಎರಡು ಕವಿತೆ, ಇಬ್ಬರು ಪಯಣಿಗರು

ಮೊಬೈಲು ಬರುವ ಮುನ್ನ ಗಡಿಯಾರದಂಗಡಿಯೂ ಅಲ್ಲಿ ರಿಪೇರಿಗೆ ಬಂದ ನೂರಾರು ಗಡಿಯಾರ ಗಳೂ ಸಾಮಾನ್ಯ ದೃಶ್ಯ ಆಗಿದ್ದವು. ಈಗ ಅಂಥ ಗಡಿಯಾರದಂಗಡಿಯ ಸಮಯವೂ ನಿಂತು ಹೋದಂತಿದೆ. ಮುಂದೆ ಹೋದಂತೆ ಕವಿಗೆ ವಸಂತಾದಿ ಋತುಗಳೆಲ್ಲವೂ ಭಿನ್ನಭಿನ್ನ ಚಿತ್ರಿಕೆಗಳಾಗಿ ಕಾಣಿಸುತ್ತವೆ.

ವಸಂತ- ಆಗ ಚೈತ್ರದ ಮಾವು ಜೂಲುನಾಯಿಯ ಜೋಲಿ/ ತಳಿರ ಕೆನ್ನಾಲಗೆಯ ಬೆಂಕಿ ಪರದೆ. ಗ್ರೀಷ್ಮ- ಹುಚ್ಚಿಬೇವಿನ ತಲೆಗೆ ಹಕ್ಕಿ ಹಾಡಿನ ಹೆಡಿಗೆ/ ಬಂಗಾರದಂಗಾಲು ಮೋಡದೊಳಗೆ. ವರ್ಷ ಋತು- ಅಲ್ಲಿಂದ ಮುಂದೆ ಮುಂಗಾರು ಕಂಬನಿ ಕೊಡಿಗೆ/ಜಿಂಕೆ ಚಕ್ಕಳದಂಚು ಕಾಡುಹೊಳೆಗೆ.

ಇನ್ನು ಹೇಮಂತ- ಮಳೆ ನಿಂತು ಚಳಿ ಬಂತು ಗಲ್ಲ ಬೆಳ್ಳಗೆ ಹುಡುಗಿ/ ಬಿಳಿಹೂವ ಮುಟ್ಟಿಸಿದೆ ನನ್ನ ತುಟಿಗೆ. ಶಿಶಿರ- ಸಂಜೆಗೊಬ್ಬಳು ಮುದುಕಿ ಕೊನೆಯ ಕೆಂಡವ ಕೆದಕಿ/ ಎತ್ತಿ ಮುಡಿದಳು ತನ್ನ ಗಂಟು ಜಡೆಗೆ. ಕೆಎಸ್‌ನ ಹೀಗೆ ಕವಿತೆ ಪ್ರತಿಮೆ ರೂಪಕಗಳಲ್ಲಿಯೇ ಇಡೀ ಕಾಲದ ಪಯಣವನ್ನು ಹಿಡಿದಿಡು ತ್ತದೆ.

ಸಮಾಜಪುರುಷನ ಅಂಗವೇ ಆಗಿರುವ ಕವಿಗೂ ಸಂಸಾರ ತಾಪತ್ರಯಗಳು, ಈ ಜಗದ ಮನುಜನ ಸಂಕಷ್ಟ ಜಂಜಡಗಳು ಇಲ್ಲದಿಲ್ಲ. ಕತ್ತು ಹಿಸುಕಿದ ಬಳ್ಳಿ ಕಳೆದ ಬೆಳಗು, ಜೇನು ತಲೆಹೊಕ್ಕಿರುವ ತನಿಗುದುರೆಯೋಟ, ಸಂಜೆ ತೀರದ ಸಾಲ, ಹಡಗು ಮುಳುಗು, ಬಿರುಗಾಳಿ ಬೀಳಿಸಿದ ಮೂರನೆಯ ದಾರಿ- ಮನೆ, ಅಂದು ಒಂದೆ ಸಮನೆ ಅಳುವ ಮಗು- ಹೀಗೆ. ಕವಿಗೂ ಇತ್ತು ಮೊದಲಿಗಿವನೆಲ್ಲ ಬದಲಿಸುವಾಸೆ.

clock

ಅದಕ್ಕಾಗಿ ‘ಮೂಳೆ ಬಿಲ್ಲನು ಹಿಡಿದು ಮುಂದೆ ನಡೆದೆ’. ಆದರೇನಾಯ್ತು- ‘ನನಗಿಂತ ಮೊದಲೆ ಬದಲಾದ ಬಂಡೆಯ ಕಂಡೆ’- ಬದಲಿಸಲು ಹೊರಟವರು ಬದಲಿಸುವ ಮೊದಲೇ ತಾವೇ ಬದಲಾಗು ವರು. ಇದು ಕಾಲದ ಚೋದ್ಯ.

ಕವಿತೆಯ ಕೊನೆಗೆ ಕವಿ ತಲುಪುವ ತೀರ್ಮಾನ ಹೃದಯವೇಧಕವಾಗಿದೆ- ಗಂಟೆ ಎಷ್ಟೆಂದು ಕೇಳಿದೆ ನೀನು. ಹೇಳಿದೆನೆ/ ಗಡಿಯಾರ ನಡೆದಷ್ಟು ಗಂಟೆ. It is not an explanation of things, It is some thing better ಅಂದರೆ ಕಾಲವನ್ನು ವಿವರಿಸುವುದಷ್ಟೇ ಅಲ್ಲ- ಅನುಭವಿಸುವುದು. ಈ ಅರ್ಥದಲ್ಲಿ ಕಾಲವೂ ಬದುಕೂ ಬೇರೆ ಇಲ್ಲ.

ಎರಡೂ ಒಂದರೊಡನೊಂದು ಜೋಡಿಕೊಂಡಿವೆ. ನಿಶ್ಶಬ್ದ ರಾತ್ರಿಯಲ್ಲಿ ಅನಂತ ಅಕಾಶದಲ್ಲಿ ಮಿನುಗುತ್ತಿರುವ ಲಕ್ಷಾಂತರ ಚುಕ್ಕಿಗಳನ್ನು ನೋಡುತ್ತಿರುವಾಗ, ಗಂಭೀರವಾಗಿ ಮೊರೆಯುತ್ತಿರುವ ಕಡಲಿನ ತೀರದಲ್ಲಿ ನಿಂತು ಉರುಳುವ ಹೆದ್ದಾರೆಗಳನ್ನು ಗಮನಿಸುತ್ತಿರುವಾಗ, ಎಕರೆಗಟ್ಟಲೆ ಹಬ್ಬಿರುವ ಜೋಳ- ಭತ್ತದ ಹೊಲಗಳಲ್ಲಿ ತೆನೆಗಳು ರೈತರ ಬೆವರು ತುಂಬಿಕೊಂಡು ಗಾಳಿಗೆ ತಲೆ ದೂಗುತ್ತಿರುವುದನ್ನು ಕಂಡಾಗ ಇದು ಅನುಭವವಾಗುತ್ತದೆ.

ಇಂಥ ಕಾಲಕ್ಕೆ ಒಂದು ಆರಂಭದ ಬಿಂದು ಇದೆಯೆ? ಈ ಪ್ರಶ್ನೆಗೆ ಉತ್ತರಿಸುವುದು ಬಲು ಕಷ್ಟ. ದೇವರನ್ನು ನಂಬುವವರು ಅಥವಾ ಆಸ್ತಿಕರಿಗೆ ಇದು ಒಂದು ಜಟಿಲವಾದ ಪ್ರಶ್ನೆಯಲ್ಲ. ವಿಶ್ವದಂತೆ ಕಾಲವೂ ದೇವರ ಸೃಷ್ಟಿ. ದೇವರು ಯಾವಾಗ ಬ್ರಹ್ಮಾಂಡವನ್ನು ಸೃಷ್ಟಿಸಿದನೋ ಅಂದಿನಿಂದ ಕಾಲದ ಸೃಷ್ಟಿಯಾಯಿತು.

ಇದು ಕ್ರೆಸ್ತರ ಚಿಂತನೆ. ಆದರೆ ವೇದಾಂತದ ಅರಿವು ಸ್ವಲ್ಪ ಬೇರೆ. ದೇವರು ಅನಾದಿ, ಅನಂತ, ನಿರ್ಗುಣವಾಗಿರುವಂತೆ ಕಾಲವೂ ಅನಾದಿ, ಅನಂತ ಮತ್ತು ನಿರ್ಗುಣ. ಇದನ್ನು ಸೂಚಿಸಲೆಂದೇ ನಾಲ್ಕು ಯುಗಗಳು- ಕೃತ, ತ್ರೆತಾ, ದ್ವಾಪರ ಮತ್ತು ಕಲಿ. ಕಲಿಯುಗ ಮುಗಿದ ಬಳಿಕ ಪ್ರಳಯವಾಗಿ ಮತ್ತೆ ಮೊದಲಿನಂತೆ ಕೃತಯುಗ ಆರಂಭವಾಗುತ್ತದೆ. ಅಂದರೆ ಕಾಲಕ್ಕೆ ಆದಿಯಿಲ್ಲ, ಅಂತ್ಯವಿಲ್ಲ, ಆದರೆ ಚಕ್ರೀಯಗತಿಯಿದೆ.

ಸಾವಿರ ಚತುರ್ಯುಗಗಳು ಸೃಷ್ಟಿಕರ್ತ ಬ್ರಹ್ಮನ ಒಂದು ಹಗಲು. ಬ್ರಹ್ಮನಿಗೂ ನೂರು ವರ್ಷ ವಯಸ್ಸು. ಈಗ ನಡೆಯುತ್ತಿರುವುದು ಬ್ರಹ್ಮನ ಐವತ್ತೊಂದನೇ ವರ್ಷ. ಇದಕ್ಕೆ ಶ್ವೇತವರಾಹ ಕಲ್ಪವೆಂಬ ಚಂದದ ಹೆಸರಿದೆ. ಈ ಲೆಕ್ಕ ಅರ್ಥ ಮಾಡಿಕೊಳ್ಳುವುದು ಸುಲಭವಲ್ಲ.

ಆದರೆ ವಿಜ್ಞಾನಿಗಳು ಕಾಲ ಯಾವಾಗ ಆರಂಭವಾಯಿತು ಎಂಬ ಪ್ರಶ್ನೆಗೆ ಉತ್ತರಿಸಲು ಕಷ್ಟಪಡ ಬೇಕಾಗುತ್ತದೆ. ವಿಜ್ಞಾನಿಗಳಲ್ಲೂ ಈ ಬಗ್ಗೆ ಒಮ್ಮತವಿಲ್ಲ. ಹೆಚ್ಚಿನವರು, ಬಿಗ್‌ಬ್ಯಾಂಗ್ ಅಥವಾ ಮಹಾಸ್ಫೋಟ ಯಾವಾಗ ಆಯಿತೋ ಆಗಿನಿಂದಲೇ ಕಾಲದ ಆರಂಭವೂ ಆಯಿತು ಎನ್ನುತ್ತಾರೆ. ಆದರೆ ಮಹಾಸ್ಫೋಟದ ಮೊದಲು ಏನಿತ್ತು? ಒಂದು ಬೃಹತ್ತಾದ ದ್ರವ್ಯರಾಶಿ ಇದ್ದಿರಬೇಕು.

ಅದು ಸಿಡಿದಾಗ, ಆ ಮಹಾ ದ್ರವ್ಯರಾಶಿ ಘನೀಕೃತಗೊಳ್ಳುವ ಪ್ರಕ್ರಿಯೆಯಲ್ಲಿಯೂ ಕಾಲ ಇದ್ದಿರ ಬೇಕಲ್ಲವೇ? ಇಲ್ಲೂ ಮೂರು ಬಗೆಯ ಚಿಂತನೆಯ ಧಾರೆಗಳಿವೆ. ಒಂದು, ಸ್ಫೋಟದ ಮುನ್ನ ದ್ರವ್ಯ ರಾಶಿ ಹಾಗೂ ಕಾಲವೆಲ್ಲವೂ ಏಕೀಭವಿಸಿದ್ದ ಒಂದು ಮೂಲ ಸ್ಥಿತಿ ಇದ್ದಿರಬೇಕು. ಅದನ್ನೆ ಸಿಂಗ್ಯುಲಾ ರಿಟಿ ಎನ್ನಲಾಗುತ್ತದೆ. ಇಂದಿನ ಈ ವಿಶ್ವವೆಲ್ಲವನ್ನೂ ಕಾಲದಲ್ಲಿ ಹಿನ್ನೂ ಕುತ್ತ ಹೋಗಿ ಒಂದು ಬಿಂದುವಿನಲ್ಲಿ ಅಡಕಿದರೆ ಹೇಗಿರುತ್ತದೋ ಅದು. ಆದರೆ ಇಂಥ ಪರಿಸ್ಥಿತಿಯಲ್ಲಿ ಇರಬಹುದಾದ ಕಾಲ-ದ್ರವ್ಯದ ಗೋಜಲು ಊಹಾತೀತ.

ಎರಡನೆಯದು, ಮಹಾಸ್ಫೋಟದ ನಂತರ ಈಗಿನ ಜಗತ್ತು ವಿಸ್ತಾರಗೊಳ್ಳುತ್ತಾ ಇದೆ. ಆದರೆ ಮಹಾ ಸ್ಫೋಟದ ಕುದಿಬಿಂದುವಿನತ್ತ ಅದರ ಹಿಂದಿನ ವಿಶ್ವ ಸಾಗಿಬಂದಿರಬಹುದು. ಅಂದರೆ ಮಹಾದ್ರವ್ಯ ರಾಶಿಯಾಗಿ ಕುಗ್ಗುವುದು ಮತ್ತು ಅದು ಸ್ಫೋಟಗೊಂಡು ಹಿಗ್ಗುವುದು- ಇವು ನಿರಂತರವಾಗಿ ಈ ವಿಶ್ವದಲ್ಲಿ ನಡೆಯುತ್ತಿರಬೇಕು. ಅಂದರೆ ಕಾಲವು ಒಂದು ಬಿಂದುವಿನಿಂದ ಆರಂಭವಾಗುವುದಿಲ್ಲ.

ಅದೂ ಚಕ್ರಗತಿಯದ್ದು. ಇದು ನಮ್ಮ ವೇದಾಂತದ ದರ್ಶನವನ್ನು ಹೋಲುತ್ತದೆ. ಮೂರನೆಯದು, ಈ ವಿಶ್ವವೆಂಬುದಕ್ಕೆ ಆದಿಯಿಲ್ಲ, ಅಂತ್ಯವೂ ಇಲ್ಲ. ಮಹಾಸೋಟವೂ ಇರಲಿಲ್ಲ. ಇದು ನಿರಂತರ ವಾಗಿ ಇರುವ, ವಿಸ್ತರಿಸುತ್ತಲೇ ಇರುವ ಒಂದು ಮಹಾ ಅಸ್ತಿತ್ವ. ಅಂದರೆ ಕಾಲ ಎಲ್ಲಿ ಆರಂಭವಾಗಿದೆ, ಎಲ್ಲಿ ಅಂತ್ಯವಾಗಲಿದೆ ಎಂಬ ಜ್ಞಾನ ನಮಗೆ ಎಂದೂ ಸಿಗದು.

ಮಹಾವಿಜ್ಞಾನಿಗಳಲ್ಲಿ ಒಬ್ಬನಾದ ಆಲ್ಬರ್ಟ್ ಐನ್‌ಸ್ಟೈನ್ ಹೇಳುವಂತೆ, ಕಾಲ ಎಂಬುದು ಕೂಡ ಸಾಪೇಕ್ಷ. ಶಕ್ತಿಯ ಸ್ವರೂಪ ಬದಲಾಗುವಂತೆ, ಕಾಲವನ್ನು ಯಾರು ನೋಡುತ್ತಿದ್ದಾರೆ ಎಂಬುದರ ಮೇಲೆ ಅದು ದೀರ್ಘವೋ ಕ್ಲುಪ್ತವೋ ನಿರ್ಧಾರವಾಗುತ್ತದೆ. ಬೆಳಕಿನ ವೇಗದಲ್ಲಿ ಯಾರಾದರೂ ಚಲಿಸುತ್ತಾ ಇದ್ದರೆ, ಅವನ ದೇಹಕ್ಕೆ ಯಾವ ಬದಲಾವಣೆಯೂ ಆಗದು. ಅಂದರೆ ಕಾಲ ಅವನ ಪಾಲಿಗೆ ಸ್ತಬ್ಧ.

ಆದರೆ ಅದನ್ನು ನೋಡುತ್ತಾ ಇರುವವನ ದೇಹದ ಮೇಲೆ ಕಾಲದ ಪ್ರಭಾವ ಆಗಿರುತ್ತದೆ. ನಿಜಕ್ಕೂ ಕಾಲ ಮತ್ತು ಅವಕಾಶ (ಸ್ಪೇಸ್)ಗಳು ಒಂದಕ್ಕೊಂದು ಬಿಡಿಸಲಾಗದಂತೆ ಹೆಣೆದುಕೊಂಡಿವೆ. ಅತ್ಯಂತ ವೇಗದಲ್ಲಿ ಬಂದ ಟ್ರಕ್ಕು ನಮ್ಮಿಂದ ಒಂದಡಿ ದೂರದಲ್ಲಿ ಥಟ್ಟನೆ ಬ್ರೆಕ್ ಹಾಕಿ ನಿಂತರೆ, ಸಾವಿಗೂ ನಮಗೂ ಇರುವ ಅಂತರ ಒಂದಡಿ ಅಥವಾ ಒಂದು ಸೆಕೆಂಡ್.

ಅವಕಾಶದಲ್ಲಿ ಮೂರು ಆಯಾಮಗಳು ಇರುವುದು ನಮಗೆ ಗೊತ್ತು- ಉದ್ದ, ಅಗಲ ಹಾಗೂ ಎತ್ತರ. ಇದನ್ನು ಹೊಂದಿಕೊಂಡು ಮೇಧಾವಿ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಇನ್ನೊಂದು ವಿಚಿತ್ರ ಥಿಯರಿ ಯನ್ನು ಮಂಡಿಸುತ್ತಾನೆ. ನಮಗೆ ಎರಡು ಕಾಲಗಳು ಗೊತ್ತು- ಭೂತಕಾಲ ಮತ್ತು ಭವಿಷ್ಯ ಕಾಲ.

ವರ್ತಮಾನ ಎಂಬುದು ನಮ್ಮ ಈ ಕ್ಷಣದ ಒಂದು ಬಿಂದು ಅಷ್ಟೆ. ಆ ಬಿಂದುವಿನಿಂದ ಸರಳ ರೇಖೆಯಲ್ಲಿ ಹಿಂದಕ್ಕಿರುವುದು ಭೂತಕಾಲ, ಮುಂದಕ್ಕಿರುವುದು ಭವಿಷ್ಯಕಾಲ. ಹಾಗೆಯೇ ಒಂದು ನೇರ ಕಾಲ (ವರ್ಟಿಕಲ್ ಟೈಮ್) ಯಾಕೆ ಇರಲಾರದು? ಇದನ್ನು ಆತ ಕಾಲ್ಪನಿಕ ಕಾಲ’ ಎಂದು ಕರೆಯುತ್ತಾನೆ.

ಇದನ್ನು ಒಂದು ಕಾಗದದ ಮೇಲೆ ಚಿತ್ರಿಸಿದರೆ ಹೆಚ್ಚು ಸ್ಪಷ್ಟವಾಗುತ್ತದೆ- ‌ಎರಡೂ ದಿಕ್ಕಿಗೆ ಹರಿದ ರೇಖೆಗಳು ಭೂತ, ಭವಿಷ್ಯವಾದರೆ, ಮೇಲಕ್ಕೆಳೆದ ಗೆರೆ ಕಾಲ್ಪನಿಕ ಕಾಲ. ಆದರೆ ಕಾಲ್ಪನಿಕ ಕಾಲವಿದೆ ಎಂದು ಗುರ್ತಿಸುವುದು, ಅದರ ಕಾರ್ಯವೈಖರಿ ನಿರ್ಧರಿಸುವುದು ಹೇಗೆ? ನಾವೂ ಈ ಕಾಲ್ಪನಿಕ ಕಾಲದಲ್ಲಿ ಚಲಿಸಬಹುದೇ? ಕ್ವಾಂಟಂ ಫಿಸಿಕ್ಸ್ ಈ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿದೆ. ಉತ್ತರ ಸಿಕ್ಕಿಲ್ಲ.

ಇಂಥ ಪ್ರಶ್ನೆಗಳಿಗೆ ಉತ್ತರ ಸಿಗುವುದಿಲ್ಲ. ಇವೆಲ್ಲ ಅಮೂರ್ತ ಹರಟೆಗಳೆಂದು ಹೇಳುವವರಿದ್ದಾರೆ. ಆದರೆ ನ್ಯಾಯ, ಡೆಮಾಕ್ರಸಿ- ಎಲ್ಲವೂ ಮೊದಲಿಗೆ ಅಮೂರ್ತ ಕಲ್ಪನೆಗಳೇ ಆಗಿದ್ದವು. ಕಾಲವೂ ಹಾಗೇ. ವಿಜ್ಞಾನ ಮುಂದುವರಿದಂತೆ ಅದು ಹೆಚ್ಚು ಮೂರ್ತವಾಗಬಹುದು. ಅಥವಾ ಇನ್ನೂ ಜಟಿಲ ವಾಗಬಹುದು.

ತತ್ವಜ್ಞಾನಿಗಳೂ ಕಾಲದ ಬಗ್ಗೆ ಚಿಂತಿಸಿದ್ದಾರೆ. ಅವು ಇನ್ನಷ್ಟು ಅಸ್ಪಷ್ಟವಾಗಿವೆ. ಕೆಲವರು ಇರುವುದು ವರ್ತಮಾನವೊಂದೇ, ಭವಿಷ್ಯ- ಭೂತವಿಲ್ಲ ಎನ್ನುತ್ತಾರೆ. ಕೆಲವರು ಇವು ಮೂರೂ ಅವಕಾಶದಲ್ಲಿ ಸಮಾನವಾಗಿ ಇದೆಯೆನ್ನುತ್ತಾರೆ. ಕೆಲವರ ಪಾಲಿಗೆ ವರ್ತಮಾನ ಮತ್ತು ಭೂತ ಮಾತ್ರ ಸತ್ಯ, ಭವಿಷ್ಯ ಕಲ್ಪನೆ ಮಾತ್ರ. ವಾಸ್ತವವಾದಿಗಳಿಗೆ ಸಮಯ ಎಂದರೆ ಎರಡು ಘಟನೆಗಳ ನಡುವಿನ ಅವಧಿ. ಆ ಘಟನೆಗಳ- ಬದಲಾವಣೆಗಳ ಹಿನ್ನೆಲೆಯಲ್ಲಿ ಮಾತ್ರ ವಿವರಿಸಬಹು ದಾದಂಥದು.

ಇನ್ನು ಕೆಲವರೆನ್ನುವಂತೆ ಸಮಯ ವಸ್ತುನಿಷ್ಠ ಸತ್ಯವಲ್ಲ, ಅದು ಅನುಭವಗಳ ವ್ಯತ್ಯಾಸದ ಹಿನ್ನೆಲೆ ಯಲ್ಲಿ ನಾವು ಕಟ್ಟಿಕೊಳ್ಳುವ ಒಂದು ಪರಿಕಲ್ಪನೆ. ಸದ್ಯ ಕೇವಲ ಮರ್ತ್ಯರಾದ ನಾವು ಕಣ್ಣಿಗೆ ಕಾಣುವ ನಮ್ಮ ದೇಹದ ಬದಲಾವಣೆಗಳನ್ನು ನೋಡಿಕೊಂಡು, ಎಷ್ಟೊಂದು ಕಾಲ ಸರಿಯಿತು ಎಂದು ಹೇಳುವುದೆ ನಮಗಷ್ಟೆ ಮುಖ್ಯ; ಈ ವಿಶ್ವಕ್ಕಲ್ಲ.

ಆದರೂ ಕ್ಯಾಲೆಂಡರ್ ತಿರುವಿ ಹಾಕುವ ಈ ಗಳಿಗೆಯಲ್ಲಿ ಇಂಥ ಬ್ರಹ್ಮಾಂಡ ಚಿಂತನೆಗೆ ನಮ್ಮನ್ನು ಪ್ರೇರೇಪಿಸುವ ಕವಿಗಳನ್ನೂ ವಿಜ್ಞಾನಿಗಳನ್ನೂ ತತ್ವಜ್ಞಾನಿಗಳನ್ನೂ ಮುಖ್ಯವೆಂದೇ ಭಾವಿಸದೆ ನಿರ್ವಾಹವಿಲ್ಲ.