ಪದಸಾಗರ
ಬೆಳ್ಳ ತಲೆಗೂದಲಿನ ತೆಳ್ಳನೆಯ ವ್ಯಕ್ತಿಯ ಫೋಟೋವೊಂದನ್ನು ಇತ್ತೀಚೆಗೆ ಕ್ರೀಡಾಪುಟದಲ್ಲಿ ನೋಡಿ ಒಂದು ಬಾರಿ ಕಣ್ಣುಜ್ಜಿಕೊಳ್ಳುವ ಹಾಗಾಯ್ತು. ಅದು ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಅರ್ಜುನ ರಣತುಂಗ ಎಂದು ನಂಬಲು ನನಗೆ ಬಹಳ ಹೊತ್ತೇ ಬೇಕಾಯ್ತು. ಅರ್ಜುನ ರಣತುಂಗ ಅಂದರೆ ನೆನಪಿಗೆ ಬರ್ತಾ ಇದ್ದದ್ದು ದಢೂತಿ ದೇಹದ ಗುಂಡು ಗುಂಡು ಮೈಕಟ್ಟಿನ ನೀಳಕೇಶದ ಡೋಂಟ್ ಕೇರ್ ವ್ಯಕ್ತಿತ್ವದ ಚಿತ್ರ.
ನಾನು ಅರ್ಜುನ ರಣತುಂಗನನ್ನು ಮೊಟ್ಟಮೊದಲು ನೋಡಿದ್ದು ಶಾರ್ಜಾದಲ್ಲಿ ನಡೆದ ಪಂದ್ಯ ವೊಂದರಲ್ಲಿ. ಪಾಕ್ ವಿರುದ್ಧ ಆಡಿದ ಪಂದ್ಯದಲ್ಲಿ ಸೀದಾ ಸ್ಟೇಡಿಯಮ್ಮಿನ ಆಚೆಗೆ ಹೋಗುವಂತೆ ಸಿಕ್ಸರ್ ಬಾರಿಸಿದ್ದ. ಬಾಲ್ ಕಳೆದು ಹೋಗಿತ್ತು. ಪರ್ಯಾಯ ಚೆಂಡು ತಂದು ಆಡಿಸಲು ಹೊರಟಾಗ, ‘ನನಗೆ ಅದೇ ಬಾಲ್ ಹುಡುಕಿ ತರಿಸಿ’ ಅಂತ ಅಂಪೈರ್ ಜತೆಗೆ ಮಾತಿಗಿಳಿದಿದ್ದ. ಅವತ್ತಿಗೆ ಬಹಳ ಥ್ರಿಲ್ ಆಗಿತ್ತು.
ಅಂದಿನಿಂದ ಅರ್ಜುನ ರಣತುಂಗ ಅನ್ನೋ ಹೆಸರು, ಆತನ ಆಟ, ವ್ಯಕ್ತಿತ್ವ, ನಾಯಕತ್ವ ಗುಣ ಎಲ್ಲವೂ ಬಹಳ ಆಸಕ್ತಿದಾಯಕ ಅನಿಸುತ್ತಲೇ ಹೋಯ್ತು. ಆತ ಧರಿಸುತ್ತಿದ್ದ ನಾಮ್-ಕೆ-ವಾಸ್ತೆ ಹೆಲ್ಮೆಟ್, ಆತ ಅಂಗಣದ ಮಧ್ಯ ಓಡುವ ಬದಲು ನಡೆದೇ ಗಿಟ್ಟಿಸಿಕೊಳ್ಳುತ್ತಿದ್ದ ರನ್, ಲೀಲಾಜಾಲ ಸಿಕ್ಸರ್, ಹೊಟ್ಟೆ ಹೊತ್ತುಕೊಂಡು ಓಡಿ ಬಂದು ಬೌಲ್ ಮಾಡುತ್ತಿದ್ದ ಶೈಲಿ ಎಲ್ಲವೂ ಇಷ್ಟವಾಗುತ್ತಿತ್ತು. ಆಗಿನ ಕಾಲದಲ್ಲಿ ಡೇವಿಡ್ ಬೂನ್ ಮತ್ತು ಈ ರಣತುಂಗ ಇಬ್ಬರೇ ಬಹುಶಃ ಈ ರೀತಿ ಡುಮ್ಮಗಿದ್ದ ಆಟಗಾರರು. ಆದರೆ ಅದು ಅವರ ಆಟದ ಮೇಲೆ ಯಾವ ಪರಿಣಾಮವನ್ನೂ ಬೀರಿರಲಿಲ್ಲ.
ಇದನ್ನೂ ಓದಿ: Naveen Sagar Column: ಭಾವನಾತ್ಮಕ ವಿಚಾರದಲ್ಲಿ ವೀರ್ಯಾವೇಶ ಯಾಕೆ ಸ್ವಾಮಿ ?
ರಣತುಂಗನ ಮಿಕ್ಕೆಲ್ಲ ಗುಣಗಳ ತೂಕ ಒಂದಾದರೆ, ನಾಯಕತ್ವದ ತೂಕವೇ ಇನ್ನೊಂದು. ಅದು ಭರ್ಜರಿಯಾಗಿಯೇ ತೂಗುತ್ತಿತ್ತು. ನನ್ನ ಪ್ರಕಾರ ರಣತುಂಗ ಅಂತಾರಾಷ್ಟೀಯ ಕ್ರಿಕೆಟ್ ರಂಗದ ಗ್ರೇಟೆಸ್ಟ್ ಕ್ಯಾಪ್ಟನ್. ಕ್ಲೈವ್ ಲಾಯ್ಡ್ ಎರಡು ವಿಶ್ವಕಪ್ ಗೆದ್ದಿರಬಹುದು, ಪಾಂಟಿಂಗ್, ಸ್ಟೀವ್ ವಾ, ಬಾರ್ಡರ್ ಕೂಡ ಆಸ್ಟ್ರೇಲಿಯಾದ ದಿಗ್ಗಜ ನಾಯಕರಿರಬಹುದು, ಧೋನಿ ಮತ್ತು ಗಂಗೂಲಿಯನ್ನೂ ನಾವು ಕೊಂಡಾಡಬಹುದು. ಆದರೆ ಅರ್ಜುನ ರಣತುಂಗ ಎಂಬ ನಾಯಕ ನಿಜಕ್ಕೂ ಅಸಾಮಾನ್ಯ. ಭಾರತದ ಎದುರು ಶ್ರೀಲಂಕಾ ಎಂಬುದು ಲೆಕ್ಕಕ್ಕೇ ಇಲ್ಲದಷ್ಟು ಚಿಕ್ಕ ದ್ವೀಪ. ವಿಶ್ವದ ಇತರ ದೇಶಗಳೆದುರು ಶ್ರೀಲಂಕಾ ಒಂದು ದೇಶವಾಗಿಯೇ ನಗಣ್ಯ. ಕ್ರಿಕೆಟ್‌ನಲ್ಲಂತೂ ಅದು ಸೋಲಲೆಂದೇ ಇರುವ ತಂಡದಂತಿತ್ತು. 1987ರ ವಿಶ್ವಕಪ್‌ನಲ್ಲಿ ಶ್ರೀಲಂಕಾ ಮತ್ತು ಜಿಂಬಾಬ್ವೆ ಒಂದೇ ಒಂದು ಪಂದ್ಯವನ್ನೂ ಗೆಲ್ಲಲಾರದೇ ತಮ್ಮ ವ್ಯವಹಾರ ಮುಗಿಸಿ ಹೊರಬಿದ್ದಿದ್ದವು. ಆ ಸೋಲುಗಳಲ್ಲೂ ಮಿಂಚಿದ್ದು ರಣತುಂಗ ಎಂಬ ರಣಧೀರನೇ.
ಅಂಥ ಒಂದು ದುರ್ಬಲವೆನಿಸುವ ತಂಡವನ್ನು ಕೇವಲ ನಾಲ್ಕೇ ವರ್ಷಗಳಲ್ಲಿ ಚಾಂಪಿಯನ್ ಆಗುವ ಲೆವೆಲ್ಲಿಗೆ ರೆಡಿ ಮಾಡಿದ್ದು ರಣತುಂಗ. 1992ರ ನಂತರದ ಶ್ರೀಲಂಕಾ ತಂಡ ಪವಾಡ ನಡೆಯಿತೆಂಬಂತೆ ಭಯಂಕರ ತಂಡವಾಗಿ ಬಿಟ್ಟಿತ್ತು. ಅಲ್ಲಿದ್ದದ್ದು ರಣತುಂಗನ ಆಕ್ರಮಣಕಾರಿ ಪ್ರಯೋಗಶೀಲತೆ ಮತ್ತು ತಂಡವನ್ನು ಮುನ್ನಡೆಸುವ ನಾಯಕತ್ವ ಗುಣ.
ಎಡಗೈ ಸ್ಪಿನ್ ಮಾಡಿಕೊಂಡು ಕೆಳಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಿದ್ದ ಜಯಸೂರ್ಯನನ್ನು ಕರೆದು ಇನ್ನಿಂಗ್ಸ್ ಆರಂಭಿಸುವ ಜವಾಬ್ದಾರಿ ಕೊಡುತ್ತಾನೆ. ಅವನ ಜತೆಗೆ ರೊಮೇಶ್ ಕಳುವಿತರಣ ಎಂಬ ಕೀಪರ್‌ಗೂ ಬಡ್ತಿ ನೀಡುತ್ತಾನೆ. ‘ಹದಿನೈದು ಓವರ್ ಗಳಲ್ಲಿ ನೂರು ರನ್ ಚಚ್ಚಿ ಬನ್ನಿ. ಒಂಬತ್ತು ಫೀಲ್ಡರ್‌ಗಳು ಮೂವತ್ತಡಿ ಸರ್ಕಲ್ ಒಳಗಿರುತ್ತಾರೆ. ಅವರ ತಲೆ ಮೇಲೆ ಹೋಗುವಂತೆ ಹೊಡೆಯಿರಿ. ಔಟಾದ್ರೂ ಓಕೆ ನಾನಿದ್ದೇನೆ’ ಅಂದುಬಿಡ್ತಾನೆ.
ಏಕದಿನ ಕ್ರಿಕೆಟ್‌ನ ಭಾಷ್ಯವನ್ನೇ ಬದಲಿಸಿಬಿಡುತ್ತಾರೆ ಈ ಓಪನರ್‌ಗಳು. ಆಸ್ಟ್ರೇಲಿಯಾ ತಂಡವನ್ನೂ ಗಡಗಡ ನಡುಗಿಸಿ ಬಿಡುತ್ತೆ ರಣತುಂಗಾ ಪಡೆ. ಅಲ್ಲಿಂದ ಮುಂದೆ 1996ರ ವಿಶ್ವಕಪ್! ಶ್ರೀಲಂಕನ್ನರ ಆಟ ನೋಡಲೆಂದೇ ಕ್ರಿಕೆಟ್ ಪ್ರೇಮಿಗಳು ಟಿವಿ ಮುಂದೆ ಕೂರುವಂತಾಯ್ತು. ಸಿಂಹಳಿ ಪಡೆ ನಿರಾಸೆಗೊಳಿಸಲಿಲ್ಲ. ಒಂದಕ್ಕಿಂತ ಒಂದು ಅದ್ಭುತ ಇನ್ನಿಂಗ್ಸ್ ಬಂದವು.
ಭಾರತೀಯ ಕ್ರಿಕೆಟ್ ಪ್ರೇಮಿಗಳೂ ಶ್ರೀಲಂಕಾದ ಅಬ್ಬರವನ್ನು ಸಂಭ್ರಮಿಸಿ ಬೆಂಬಲಿಸಿದರು. ಆದರೆ ಸೆಮಿಫೈನಲ್‌ನಲ್ಲಿ ಶ್ರೀಲಂಕಾ ಭಾರತವನ್ನೂ ಬಿಡಲಿಲ್ಲ, ಹೀನಾಯವಾಗಿ ಬಗ್ಗುಬಡಿಯಿತು. ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಕರಾಳ ದಿನವಾಯ್ತು ಅದು. ಕೋಲ್ಕತಾದಲ್ಲಿ ಶ್ರೀಲಂಕಾ ಎದುರು ಕುಸಿದ ಭಾರತ ಪೂರ್ತಿ ಆಟವನ್ನೂ ಮುಗಿಸದೇ ಪ್ರೇಕ್ಷಕರ ಆಕ್ರೋಶಕ್ಕೆ ಮಣಿದು ಪೆವಿಲಿಯನ್ ಸೇರಬೇಕಾಯ್ತು.
ಕಾಂಬ್ಳಿ ನಾಟೌಟ್ ಬ್ಯಾಟರ್ ಆಗಿ ಕಣ್ಣೀರು ಸುರಿಸುತ್ತಾ ನಡೆದದ್ದು ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ಶ್ರೀಲಂಕಾ ಆ ಪಂದ್ಯವನ್ನು ಗೆದ್ದ ನಂತರ ಫೈನಲ್‌ನಲ್ಲಿಯೂ ಅದ್ಭುತ ಆಟ ಪ್ರದರ್ಶಿಸಿ ಕಪ್ ಎತ್ತಿ ಹಿಡಿಯಿತು. ರಣತುಂಗಾ ಶ್ರೀಲಂಕಾದ ಕ್ರಿಕೆಟನ್ನು ಏರಿಸಿದ ಎತ್ತರ ಇದು. ಇಡೀ ಕ್ರಿಕೆಟ್ ಜಗತ್ತು ಶ್ರೀಲಂಕಾವನ್ನು ಗಂಭೀರವಾಗಿ ನೋಡಲು ಶುರು ಮಾಡಿದ್ದು ರಣತುಂಗಾ ನಾಯಕತ್ವ ವಹಿಸಿದ ನಂತರವೇ. ಆ ತಂಡದಲ್ಲಿ ಒಬ್ಬರಿಗಿಂತ ಒಬ್ಬ ಅದ್ಭುತ ಆಟಗಾರ ಬಂದದ್ದು, ಅವರ ಟ್ಯಾಲೆಂಟ್ ಬಳಕೆಯಾದದ್ದು ರಣತುಂಗಾ ಶಕೆಯಿಂದಲೇ.
ರಣತುಂಗಾ ನನ್ನ ನೆನಪಲ್ಲಿ ಉಳಿದಿರುವುದು ಆ ಒಂದು ಘಟನೆಯಿಂದ. ಒಬ್ಬ ನಾಯಕನ ಕೆಲಸ ಕೇವಲ ಬೆಸ್ಟ್ ರಿಸಲ್ಟ್ ಕೊಡುವುದಷ್ಟೇ ಅಲ್ಲ. ತನ್ನ ತಂಡದವರನ್ನು ಹೇಗೆ ಕಾಯ್ದುಕೊಳ್ಳುತ್ತಾನೆ ಎಂಬುದೂ ಆತನ ನಾಯಕತ್ವ ಗುಣವನ್ನು ಪರೀಕ್ಷಿಸುತ್ತದೆ. ಇದರರ್ಥ ತಂಡದವನು ತಪ್ಪು ಮಾಡಿದರೂ ರಕ್ಷಿಸಬೇಕು ಅಂತಲ್ಲ, ಸತತ ವೈಫಲ್ಯ ಅನುಭವಿಸಿದರೂ ಅವನ ಪರ ನಿಲ್ಲಬೇಕು ಎಂದಲ್ಲ.
ತಪ್ಪಿಲ್ಲದೆಯೂ, ತನ್ನ ಆಟಗಾರ ಷಡ್ಯಂತ್ರಕ್ಕೆ, ಅನ್ಯಾಯಕ್ಕೆ, ದಬ್ಬಾಳಿಕೆಗೆ ಬಲಿಯಾಗ್ತಿದ್ದಾನೆ ಎಂದಾಗ ಪ್ರಾಣ-ಸ್ಥಾನಮಾನ ಎಲ್ಲವನ್ನೂ ಪಣಕ್ಕಿಟ್ಟಾದರೂ ಸರಿ ಕಾಪಾಡಿಕೊಳ್ತೀನಿ ಅಂತ ನಿಲ್ತಾನಲ್ಲ, ಅವನು ನಿಜವಾದ ನಾಯಕ.
ಮುತ್ತಯ್ಯ ಮುರಳೀಧರನ್ ಜಗತ್ತು ಕಂಡ ಸರ್ವಶ್ರೇಷ್ಠ ಆಫ್ ಸ್ಪಿನ್ನರ್. 800 ಟೆಸ್ಟ್ ವಿಕೆಟ್ ಪಡೆದು ಯಾರಿಂದಲೂ ಮುರಿಯಲಾಗದ ದಾಖಲೆ ಬರೆದು ನಿವೃತ್ತನಾಗಿರುವ ದಂತಕಥೆ. ಭಾರತ ತಂಡವನ್ನೂ ಸೇರಿಸಿ, ಜಗತ್ತಿನ ಎಲ್ಲ ಬ್ಯಾಟರ್ ಗಳಿಗೂ ನಡುಕ ಹುಟ್ಟಿಸಿದ ಅಪ್ರತಿಮ ಸ್ಪಿನ್ನರ್ ಮುರಳಿ. ಮುರಳೀಧರನ್ ಎಂಬ ಅಸವನ್ನು ಶ್ರೀಲಂಕಾದ ಬತ್ತಳಿಕೆಗೆ ತಂದು ಸೇರಿಸಿದ್ದು ಅರ್ಜುನ ರಣತುಂಗ. ಮುರಳೀಧರನ್ ಎಸೆಯುತ್ತಿದ್ದ ಆಫ್ ಸ್ಪಿನ್ನರ್ ಮತ್ತು ಗೂಗ್ಲಿ, ದೂಸ್ರಾಗಳು ವಿಶ್ವಕ್ರಿಕೆಟ್ ಕಂಗೆಡಿಸಿದ್ದವು.
ಆಸ್ಟ್ರೇಲಿಯಾ ತಂಡ ಶುರುವಿನ ಮುರಳೀಧರನ್‌ನ ಪ್ರಚಂಡ ಪ್ರತಿಭೆಯನ್ನು ಅಳೆದು ಬಿಟ್ಟಿತು. ಈತನನ್ನು ಆಡಲು ಬಿಟ್ಟರೆ ವಿಶ್ವಶ್ರೇಷ್ಠ ಆಗುತ್ತಾನೆ, ನಮ್ಮವನೇ ಆದ ಶೇನ್ ವಾರ್ನ್‌ನನ್ನೂ ಮೀರಿ ಬೆಳೆಯುತ್ತಾನೆ ಎಂಬುದನ್ನು ಮೊದಲ ಕೆಲವು ಪಂದ್ಯಗಳ ಗುರುತಿಸಿ ಬಿಟ್ಟಿತು. ಈತನನ್ನು ಮುಗಿಸಬೇಕು ಎಂದು ತೀರ್ಮಾನಿಸಿತು.
ಆಸ್ಟ್ರೇಲಿಯಾದಂಥ ದುರಹಂಕಾರಿ, ಕ್ರೀಡಾಸ್ಪೂರ್ತಿರಹಿತ, ಮೋಸಗಾರ ತಂಡ ಇನ್ನೊಂದು ಇರಲು ಸಾಧ್ಯವೇ ಇಲ್ಲ. ತಾವು ಸರ್ವಶ್ರೇಷ್ಠರು, ಕ್ರಿಕೆಟ್‌ನ ಕಿಂಗುಗಳು ಎಂಬ ದರ್ಪದ ಪಿತ್ತ ಇಂದಿಗೂ ಇದೆ. ಆಸ್ಟ್ರೇಲಿಯಾ ನಿಜಕ್ಕೂ ಚಾಂಪಿಯನ್ ತಂಡವೇ. ಆದರೆ ಅವರ ವರ್ತನೆಯನ್ನು ಕ್ರೀಡಾಪ್ರೇಮಿಗಳು ಎಂದಿಗೂ ಸಹಿಸಲು ಸಾಧ್ಯವೇ ಇಲ್ಲ.
ಇಂಥ ಆಸ್ಟ್ರೇಲಿಯಾ, ಇಪ್ಪತ್ತು ವರ್ಷ ವಯಸ್ಸಿನ ಮುರಳಿಯ ಕೆರಿಯರ್ ಮುಗಿಸಲು ಮಹಾನ್ ವ್ಯೂಹವನ್ನೇ ಸಿದ್ಧಪಡಿಸುತ್ತದೆ. ಆಸ್ಟ್ರೇಲಿಯಾ ವಿರುದ್ಧದ 1995ರ ಸರಣಿಯಲ್ಲಿ, ಮುರಳಿ ಬೌಲ್ ಮಾಡುತ್ತಿಲ್ಲ, ಚಕ್ ಮಾಡುತ್ತಿದ್ದಾನೆ ಅಂದರೆ ಎಸೆಯುತ್ತಿದ್ದಾನೆ ಎಂದು ಅಂಪೈರ್ ಮೂಲಕವೇ ಆರೋಪ ಹೊರಿಸಲಾಗುತ್ತದೆ. ಮುರಳೀಧರನ್ ಅವರನ್ನು ಮೈದಾನದಿಂದ ಹೊರಕಳಿಸಲಾಗುತ್ತೆ. ಆತನ ಬೌಲಿಂಗನ್ನು ವಿಧವಿಧ ಪರೀಕ್ಷೆಗೆ ಒಳಪಡಿಸಲಾಗುತ್ತೆ.
ಶೈಲಿಯ ಬಗ್ಗೆ ತನಿಖೆ ನಡೆಯುತ್ತೆ. ಕೊನೆಗೆ ಐಸಿಸಿ ಮುರಳಿಯ ಬೌಲಿಂಗ್ ಕ್ರಮಬದ್ಧವಾಗಿದೆ ಎಂದು ತೀರ್ಪು ಕೊಟ್ಟು ಮುರಳಿಗೆ ಗೆಲುವು ಸಿಗುತ್ತದೆ. ಇಷ್ಟೇ ಆಗಿದ್ದಿದ್ರೆ ಇದೊಂದು ಮಹಾನ್ ಸ್ಟೋರಿ ಆಗುತ್ತಿರಲಿಲ್ಲ. ರಣತುಂಗ ಪಾತ್ರಕ್ಕೆ ಮಹತ್ವವೂ ಸಿಗುತ್ತಿರಲಿಲ್ಲ.
ಇಷ್ಟಕ್ಕೂ ಮುರಳಿ ಬೌಲಿಂಗನ್ನು ಥ್ರೋ ಅಂದಿದ್ದು ಯಾಕೆ? ಬೌಲಿಂಗ್ ವೇಳೆ ಮುರಳಿ ಕೈ ತಿರುಗಿಸುವಾಗ ಬಾಗುವ ತೋಳು ಕೊನೆಯಲ್ಲಿ ಎಸೆಯುವ ಹೊತ್ತಿಗೆ ನೇರವಾಗುತ್ತಿದೆ. ಇದು ಐಸಿಸಿ ನಿಯಮದ ಪ್ರಕಾರ ಅಕ್ರಮ ಅಂತ ಆಸ್ಟ್ರೇಲಿಯನ್ ಅಂಪೈರ್‌ಗಳು ನೋಬಾಲ್ ಕೊಡುತ್ತಾರೆ. ಹೀಗೆ ನೋಬಾಲ್ ಕೊಡೋದಕ್ಕೆ, ಥ್ರೋ ಎಂದು ಘೋಷಿಸೋದಕ್ಕೆ ಆಸ್ಟ್ರೇಲಿಯನ್ ಕ್ರಿಕೆಟ್ ಮಂಡಳಿ ಯಿಂದ ಅಂಪೈರ್‌ಗೆ ಸಂದೇಶ ರವಾನೆ ಆಗಿರುತ್ತದೆ.
ಡ್ಯಾರೆಲ್ ಹೇರ್ ಎಂಬ ಆಸೀಸ್ ಅಂಪೈರ್ 1995ರ ಟೆಸ್ಟ್ ಪಂದ್ಯದಲ್ಲಿ ಮುರಳಿಯ ಪ್ರತಿ ಚೆಂಡನ್ನೂ ನೋಬಾಲ್ ಎಂದು ಘೋಷಿಸಿ ಕೈ ಅಡ್ಡಹಿಡಿಯಲಾರಂಭಿಸುತ್ತಾನೆ. ಮೊದಲು ಮುರಳಿಗೆ ಇದ್ಯಾಕೆ ನೋಬಾಲ್ ಕೊಡ್ತಿದಾರೆಂದೂ ಅರ್ಥವಾಗುವುದಿಲ್ಲ. ಕೊನೆಗೆ ಇದು ಡ್ಯಾರೆಲ್ ಹೇರ್‌ನ ಕಳ್ಳಾಟ ಎಂದು ಅರ್ಥ ಆದಕೂಡಲೇ ರಣತುಂಗ ಅವನನ್ನು ಅವಾಯ್ಡ್ ಮಾಡಲು ಮುರಳಿಗೆ ಇನ್ನೊಂದು ತುದಿಯಿಂದ ಬೌಲಿಂಗ್ ಹಾಕಿಸುತ್ತಾನೆ. ಆದರೆ ಆಗಲೂ ಡ್ಯಾರೆಲ್ ಹೇರ್ ಸುಮ್ಮನಿರುವುದಿಲ್ಲ. ಲೆಗ್ ಅಂಪೈರ್ ಜಾಗದಿಂದಲೇ ನೋಬಾಲ್ ಕೂಗುತ್ತಾನೆ. ರಣತುಂಗ ತಾಳ್ಮೆಯಿಂದ ಡ್ಯಾರೆಲ್ ಹೇರ್ ಜತೆ ಚರ್ಚಿಸಿ ಪರಿಸ್ಥಿತಿ ನಿಭಾಯಿಸಲು ಪ್ರಯತ್ನಿಸಿ ಸೋಲುತ್ತಾನೆ. ಐಸಿಸಿ ರೆಫ್ರೀ ಎದುರು ದೂರು ಹೋಗುತ್ತದೆ.
‘ಇದನ್ನು ಅಂಪೈರ್ ಜತೆ ಚರ್ಚಿಸಿ ಸರಿಪಡಿಸಿಕೊಳ್ಳಿ’ ಎನ್ನುತ್ತಾರೆ ರೆಫ್ರೀ. ಆದರೆ ಆಸ್ಟ್ರೇಲಿಯಾ ರೆಫ್ರೀ ಮಾತನ್ನೂ ಧಿಕ್ಕರಿಸಿ ತನ್ನ ಅಂಪೈರ್ ಡ್ಯಾರೆಲ್ ಹೇರ್‌ನನ್ನು ಎತ್ತಿ ಕಟ್ಟುತ್ತದೆ. ಆ ಪಂದ್ಯವನ್ನು ಶ್ರೀಲಂಕಾ ಸೋಲುತ್ತದೆ. ಎರಡನೇ ಪಂದ್ಯದಲ್ಲಿ ರಾಸ್ ಎಮರ್ಸನ್ ಎಂಬ ಇನ್ನೊಬ್ಬ ಅಸ್ಟ್ರೇಲಿಯನ್ ಅಂಪೈರ್. ಆತನೂ ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್‌ನ ಆದೇಶಕ್ಕೆ ಬದ್ಧನಾಗಿ ಬಂದೇ ನಿಂತಿರುತ್ತಾನೆ.
ಮುರಳಿ ಎಸೆಯುವ ಎಲ್ಲ ಎಸೆತಕ್ಕೂ ನೋಬಾಲ್ ಎಂದು ಕೂಗುತ್ತಾನೆ. ಮುರಳಿಯ ಶೈಲಿಯ ಬಗ್ಗೆ ಅನುಮಾನ ಇದ್ದದ್ದು ಆತ ಆಫ್ ಸ್ಪಿನ್ ಎಸೆಯುವಾಗ ಮಾತ್ರ. ಲೆಗ್ ಸ್ಪಿನ್ ಎಸೆಯುವಾಗಿನ ಶೈಲಿಯಲ್ಲಿ ಚಿಕ್ಕ ಕೊರೆಯೂ ಇರುವುದಿಲ್ಲ. ಬಲಗೈಯಿಂದ ಲೆಗ್ ಸ್ಪಿನ್ ಎಸೆಯುವಾಗ ಚಕಿಂಗ್ ಸಾಧ್ಯವೇ ಇರುವುದಿಲ್ಲ. ಆದರೂ ನೋ ಬಾಲ್ ಕೊಟ್ಟಾಗ ಮುರಳಿಗೆ ಆಘಾತ. ರಣತುಂಗನಿಗೆ ಅಚ್ಚರಿ. ಕ್ರಿಕೆಟ್ ಪ್ರೇಮಿಗಳಿಗೆ, ಕಮೆಂಟೇಟರ್‌ಗಳಿಗೆ, ವಿಶ್ಲೇಷಕರಿಗೆ ಎಲ್ಲರಿಗೂ ಗೊತ್ತಾಗುತ್ತಿದೆ ಇದು ಕಾಂಗರೂ ಷಡ್ಯಂತ್ರ ಎಂದು.
ಇಡೀ ಕ್ರೀಡಾ ಜಗತ್ತು ಆಸ್ಟ್ರೇಲಿಯಾ ಅಂಪೈರ್‌ಗಳನ್ನು ಟೀಕಿಸುತ್ತದೆ. ಇದರ ನಂತರ ಮುರಳಿಗೆ ಐಸಿಸಿಯಲ್ಲಿ ಇನ್ನಿಲ್ಲದ ಪರೀಕ್ಷೆ ನಡೆಯುತ್ತದೆ. ಮುರಳಿಯ ಬೌಲಿಂಗ್ ಕ್ರಮಬದ್ಧ ಎಂದು ಸಾಬೀತಾಗುತ್ತದೆ. ಐಸಿಸಿ ಕ್ಲಿಯರ್ ಮಾಡಿದರೂ ಆಸ್ಟ್ರೇಲಿಯಾ ಐಸಿಸಿಯನ್ನೂ ಧಿಕ್ಕರಿಸಿ ‘ನಾವು ಆಡುವ ಸೀರೀಸಲ್ಲಿ ಇದು ಮೈದಾನದ ನಿರ್ಧಾರ ಆಗಬೇಕಿರೋ ವಿಷಯ’ ಎನ್ನುತ್ತದೆ.
1999ರಲ್ಲಿ ಇಂಗ್ಲೆಂಡ್ ವಿರುದ್ಧ ಶ್ರೀಲಂಕಾ ಆಡುತ್ತಿರುತ್ತದೆ. ಮುರಳಿ ಬೌಲಿಂಗ್. ರಾಸ್ ಎಮರ್ಸನ್ ಅಂಪೈರ್. ಅದಾಗಲೇ ಶ್ರೀಲಂಕಾದ ಆತ್ಮಸ್ಥೈರ್ಯಕ್ಕೆ ಹೊಡೆಯಲು ಆಸ್ಟ್ರೇಲಿಯಾ ಎಲ್ಲೆಡೆ ತನ್ನ ಪತ್ರಿಕೆಗಳಲ್ಲಿ ಇತರ ಮೀಡಿಯಾಗಳಲ್ಲಿ ಮುರಳಿಯನ್ನು ಚಕ್ಕರ್ ಎಂದು ಹೀಯಾಳಿಸಿರುತ್ತದೆ.
ಮುರಳಿಯನ್ನು ವಹಿಸಿಕೊಂಡು ಬಂದಿರುವ ರಣತುಂಗ ಒಬ್ಬ ಅನಾಗರಿಕ ಎಂದು ಒಂದು ಪತ್ರಿಕೆ ಬರೆಯುತ್ತದೆ. ರಾಸ್ ಎಮರ್ಸನ್‌ಗೆ ಆಸ್ಟ್ರೇಲಿಯನ್ ಕ್ರಿಕೆಟ್ ಬೋರ್ಡ್ ನಿಂದ ಬಂದಿರೋ ಸಂದೇಶ ಇಷ್ಟೇ- ‘ಮುರಳಿ ಬೌಲಿಂಗ್‌ಗೆ ಬಂದರೆ ನೋ ಬಾಲ್ ಕೊಡು’ ಅಂತ. ಆತ ಅದನ್ನು ಚಾಚೂ ತಪ್ಪದೆ ಪಾಲಿಸುತ್ತಾನೆ. ತಾನು ಅಂಪೈರ್ ಇದ್ದರೂ ಲೆಗ್ ಅಂಪೈರ್ ಇದ್ದರೂ ನೋ ಬಾಲ್ ಕೂಗುವುದನ್ನು ಮಾತ್ರ ನಿಲ್ಲಿಸೋದಿಲ್ಲ. ಆಗ ರಣತುಂಗನ ಕೋಪದ ಕಟ್ಟೆ ಒಡೆಯುತ್ತದೆ.
ಸೀದಾ ಬಂದು ಎಮರ್ಸನ್ ಜತೆ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿ ವಾಗ್ಯುದ್ಧ ನಡೆಸುತ್ತಾನೆ. ‘ಐಸಿಸಿಯೇ ಕ್ಲೀನ್ ಚಿಟ್ ಕೊಟ್ಟಿದೆ. ನೋಬಾಲ್ ಕೊಡೋಕೆ ನೀನ್ಯಾರು?’ ಎಂದು ಕೇಳುತ್ತಾನೆ. ಆದರೂ ಎಮರ್ಸನ್‌ನ ದುರುಳತನ ಬದಲಾಗುವುದಿಲ್ಲ. ಆತ ತನ್ನ ಬೋರ್ಡ್‌ಗೆ ನಿಷ್ಠ, ಆಟಕ್ಕಲ್ಲ. ಇಂಥ ಹೊತ್ತಿನಲ್ಲಿ ರಣತುಂಗ ದಿಟ್ಟ ನಿರ್ಧಾರ ಕೈಗೊಳ್ಳುತ್ತಾನೆ.
ತಂಡವನ್ನು ಕರೆದುಕೊಂಡು ಮೈದಾನದಿಂದ ಹೊರನಡೆದು ಬಿಡುತ್ತಾನೆ. ಬ್ಯಾಟ್ ಮಾಡುತ್ತಿದ್ದ ಇಂಗ್ಲೆಂಡ್‌ಗೂ ಎಮರ್ಸನ್‌ನ ಈ ಕಚಡಾ ಬುದ್ಧಿಗೂ ಯಾವ ಸಂಬಂಧವೂ ಇರುವುದಿಲ್ಲ. ಆದರೆ ರಣತುಂಗ ಈ ಪಂದ್ಯವನ್ನು ಬಾಯ್ಕಾಟ್ ಮಾಡಿ ಹೊರಡುತ್ತಾನೆ. ಬೌಂಡರಿ ಅಂಗಣದಲ್ಲಿ ಫೋನ್ ಕಾಲ್ ಮೂಲಕ ಐಸಿಸಿ-ಶ್ರೀಲಂಕನ್ ಬೋರ್ಡ್- ಆಸ್ಟ್ರೇಲಿಯನ್ ಬೋರ್ಡ್ ಮಧ್ಯ ಮಾತುಕತೆ ನಡೆಯುತ್ತದೆ.
ಹಾಗೂ ಹೀಗೂ ರಾಜಿಯಾಗುತ್ತದೆ. ರಣತುಂಗ ಒಂದೇ ಕಂಡಿಷನ್ ಹಾಕ್ತಾನೆ- ಎಮರ್ಸನ್ ಅಂಪೈರಿಂಗ್ ಮಾಡುವ ಹಾಗಿಲ್ಲ ಅಂತ. ಅದಕ್ಕೆ ಪ್ರತಿಯಾಗಿ ಮುರಳೀಧರನ್ ಕೇವಲ ಲೆಗ್ ಬ್ರೇಕ್ ಬೌಲಿಂಗ್ ಮಾತ್ರ ಮಾಡಬೇಕು ಎಂಬ ಕಂಡೀಷನ್ ಬೀಳುತ್ತೆ. ಅದಕ್ಕೆ ಒಪ್ಪಿ ಆಟ ಪುನಾರಾರಂಭ ವಾಗುತ್ತದೆ.
ರಣತುಂಗ ಮುರಳಿಯ ಕಿವಿಯ ಬಳಿ ಬಂದು ಹೇಳ್ತಾನೆ- ‘ನೀನು ಯೋಚನೆ ಮಾಡ್ಬೇಡ. ನಿನ್ನ ಬಳಿ ಇರೋ ಎಲ್ಲ ಬೌಲಿಂಗ್ ಅಸಗಳನ್ನೂ ಉಪಯೋಗಿಸು. ಆಫ್ ಸ್ಪಿನ್, ಲೆಗ್ ಸ್ಪಿನ್ ಎಲ್ಲವನ್ನೂ ಮಾಡು’ ಅಂತಾನೆ. ಎಮರ್ಸನ್ ಮೂಕಪ್ರೇಕ್ಷಕನಂತೆ ನೋಡುತ್ತಾ ನಿಲ್ಲುತ್ತಾನೆ. ಎಮರ್ಸನ್‌ಗೆ ಉರಿಸೋಕೆ ಅಂತಾನೇ ರಣತುಂಗ ಆತ ಅಂಪೈರಿಂಗ್ ನಿಂತಾಗ ಬೇಕೆಂದೇ ಮುರಳಿಗೆ ಬೌಲಿಂಗ್ ಕೊಡ್ತಾನೆ.
ಎಮರ್ಸನ್ ನೋಬಾಲ್ ಕೊಡಲಾಗದೇ ಚಡಪಡಿಸುತ್ತಾನೆ. ಈತ ಬಹಳ ಹತ್ತಿರದಿಂದ ಬೌಲಿಂಗ್ ಮಾಡ್ತಿದಾನೆ ಅಂತ ಹೊಸ ಕ್ಯಾತೆ ತೆಗೀತಾನೆ ಎಮರ್ಸನ್. ಆಗ ರಣತುಂಗ ಹೇಳ್ತಾನೆ- ‘ನೀನು ಅಂಪೈರ್, ನಾನು ಕ್ಯಾಪ್ಟನ್. ಅವ್ನು ಎಲ್ಲಿಂದ ಬೌಲ್ ಮಾಡಬೇಕು ಅನ್ನೋದು ನನಗೆ ಸಂಬಂಧಿಸಿರೋ ವಿಷಯ.
ಸುಮ್ನೆ ಅಂಪೈರಿಂಗ್ ಮಾಡು’ ಅಂತ. ಮುರಳಿಯನ್ನು ಮತ್ತು ತನ್ನ ತಂಡವನ್ನು ರಕ್ಷಣೆ ಮಾಡಿ ಕೊಂಡಿದ್ದಕ್ಕೆ ರಣತುಂಗನಿಗೆ ಸಿಕ್ಕ ಶಿಕ್ಷೆ ಏನು ಗೊತ್ತಾ? ಆರು ಪಂದ್ಯಗಳಿಂದ ಸಸ್ಪೆಂಡ್ ಮತ್ತು ಪ್ರತಿ ಪಂದ್ಯದ 75 ಪರ್ಸೆಂಟ್ ಸಂಬಳ ಕಡಿತ! ‘ನನ್ನ ಕ್ರಿಕೆಟ್ ಕೆರಿಯರ್ ಮುಕ್ತಾಯವಾದರೂ ಸರಿ, ನಾನು ಮುರಳಿಯನ್ನು ಬಿಟ್ಟುಕೊಡುವುದಿಲ್ಲ.
ಇಡೀ ಜಗತ್ತು ಮತ್ತು ಐಸಿಸಿ ಮುರಳಿಯ ಬೌಲಿಂಗ್ ಒಪ್ಪಿದೆ. ಆಸ್ಟ್ರೇಲಿಯಾದ ಈ ಕುತಂತ್ರಿ ಅಂಪೈರ್ ಗಳಿಗೆ ಯಾಕೆ ತಲೆಬಾಗಬೇಕು?’ ಎಂದು ರಣತುಂಗ ಗಟ್ಟಿಯಾಗಿ ನಿಂತುಬಿಟ್ಟಿದ್ದ. ದಂಡಕ್ಕೂ ಹೆದರಲಿಲ್ಲ ದಾಳಿಗೂ ಹೆದರಲಿಲ್ಲ! ಇಂದು ಮುರಳಿ ಜಗದ್ವಿಖ್ಯಾತ ಬೌಲರ್ ಮತ್ತು ಕ್ರಿಕೆಟ್ ದಂತಕತೆಯಾಗಿ ಉಳಿದಿದ್ದಾನೆ ಎಂದರೆ ಅದರ ಶ್ರೇಯ ಕೇವಲ ರಣತುಂಗನಿಗೆ ಸಲ್ಲಬೇಕು. ಈ ಮಾತನ್ನು ಮುರಳಿ ಕೂಡ ಹೇಳಿದ್ದಾನೆ.