ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Naveen Sagar Column: ಭಾವನಾತ್ಮಕ ವಿಚಾರದಲ್ಲಿ ವೀರ್ಯಾವೇಶ ಯಾಕೆ ಸ್ವಾಮಿ ?

ಇನ್ನೊಂದಷ್ಟು ತಿಂಗಳು ನೆಮ್ಮದಿಯಾಗಿ ಯಾರಿಗೂ ಸಿಕ್ಕದಂತಿದ್ದು, ಮಕ್ಕಳನ್ನು ಹಡೆದು ಬಾಣಂತನ ಮುಗಿಸಿಯೇ ಸಿಗಬಹುದಿತ್ತು. ಸಂತೋಷ ಹಂಚಿಕೊಳ್ಳೋಣವೆಂದು ಅವರೇ ಮಾಧ್ಯಮಗಳನ್ನು ಮೈ ಮೇಲೆಳೆದುಕೊಂಡರೋ ಅಥವಾ ಯಾರಾದ್ರೂ ಮಾಧ್ಯಮಕ್ಕೆ ಸುದ್ದಿ ಹಾಕ್ಕೊಟ್ರೋ.. ಅಥವಾ ಇದೂ ತನಿಖಾ ಪತ್ರಿಕೋದ್ಯಮದ ಒಂದು ಭಾಗವೋ ಆ ‘ಸ್ಪರ್ಮಾತ್ಮನೇ’ ಬಲ್ಲ.

ಭಾವನಾತ್ಮಕ ವಿಚಾರದಲ್ಲಿ ವೀರ್ಯಾವೇಶ ಯಾಕೆ ಸ್ವಾಮಿ ?

ಪದಸಾಗರ

ಭಾವನಾ ಐವಿಎಫ್ ಮೂಲಕ ಅವಳಿ ಮಕ್ಕಳಿಗೆ ಜನ್ಮ ನೀಡುತ್ತಿರುವುದು ಅಷ್ಟು ದೊಡ್ಡ ಸುದ್ದಿಯಾಗಬೇಕಾ ಅಥವಾ ರಾಜ್ಯಾದ್ಯಂತ ಚರ್ಚೆಯಾಗಬೇಕಾ? ಯಾವ ಕಾಲದಲ್ಲಿದ್ದೇವೆ ನಾವು? ಅದು ಆಕೆಗಷ್ಟೇ ಸಂಬಂಧಿಸಿದ ಖಾಸಗಿ ವಿಚಾರವಲ್ಲವೇ? ಮಗು ಅಂತ ಬಂದಾಗ ಅದು ಅಪ್ಪ ಅಮ್ಮನಿ ಗಷ್ಟೇ ಸಂಬಂಧಿಸಿದ ವಿಚಾರವಾಗಿರ್ತಿತ್ತು. ಆದರೆ ಈ ಕೇಸಿನಲ್ಲಿ ಕೇವಲ ಅಮ್ಮನಿಗಷ್ಟೇ ಸಂಬಂಧಿಸಿರುವ ವಿಚಾರ.

ಕಳೆದ ಒಂದು ವಾರ ಕರ್ನಾಟಕದ ತುಂಬ ಭಾವನಾತ್ಮಕ ವಾತಾವರಣ. ಮಾಧ್ಯಮಗಳು ಹಾಗೂ ಸೋಷಿಯಲ್ ಮೀಡಿಯಾಗಳಲ್ಲಿ ‘ವೀರ‍್ಯಾವೇಶ’ ಉಕ್ಕಿ ಹರಿಯುತ್ತಿದೆ! ಎಷ್ಟು ಅಂದರೆ ಮತ್ತೊಂದು ಜನಸಂಖ್ಯಾಸ್ಫೋಟವಾಗುವಷ್ಟು. ‘ಬೇಗಾನಿ ಶಾದಿ ಮೇ ಅಬ್ದು ದೀವಾನಾ’ ಅನ್ನೋ ಹಾಗೆ, ಭಾವನಾ ಅವಳಿ ಮಕ್ಕಳಿಗೆ ಜನ್ಮ ನೀಡುತ್ತಾ ಇರೋದು ಅದರಲ್ಲೂ ಕೃತಕ ಗರ್ಭಧಾರಣೆ ಮೂಲಕ ತಾಯಿ ಯಾಗುತ್ತಿರುವುದು ತಮ್ಮದೇ ಸಂಭ್ರಮ ಅಥವಾ ತಮ್ಮದೇ ಸೂತಕ ಎಂಬಂತಾಡುತ್ತಾ ಇದ್ದಾರೆ ಜನ.

IVF ಅಂದ್ರೇನು ಅಂತನೇ ಗೊತ್ತಿಲ್ಲದ ಹತ್ತತ್ತು ಹೆತ್ತ ಅಂದಿನ ಕಾಲದ ತಾಯಂದಿರು ಅವರದೇ ಧಾಟಿಯಲ್ಲಿ WTF ಅಂತ ಕೇಳ್ತಿದ್ದಾರೆ. ಭಾವನಾ ಐವಿಎಫ್ ಮೂಲಕ ಅವಳಿ ಮಕ್ಕಳಿಗೆ ಜನ್ಮ ನೀಡುತ್ತಿರುವುದು ಅಷ್ಟು ದೊಡ್ಡ ಸುದ್ದಿಯಾಗಬೇಕಾ ಅಥವಾ ರಾಜ್ಯಾದ್ಯಂತ ಚರ್ಚೆಯಾಗಬೇಕಾ? ಯಾವ ಕಾಲದಲ್ಲಿದ್ದೇವೆ ನಾವು? ಅದು ಆಕೆಗಷ್ಟೇ ಸಂಬಂಧಿಸಿದ ಖಾಸಗಿ ವಿಚಾರವಲ್ಲವೇ? ಮಗು ಅಂತ ಬಂದಾಗ ಅದು ಅಪ್ಪ ಅಮ್ಮನಿಗಷ್ಟೇ ಸಂಬಂಧಿಸಿದ ವಿಚಾರವಾಗಿರ್ತಿತ್ತು.

ಆದರೆ ಈ ಕೇಸಿನಲ್ಲಿ ಕೇವಲ ಅಮ್ಮನಿಗಷ್ಟೇ ಸಂಬಂಧಿಸಿರುವ ವಿಚಾರ. ಅದ್ಯಾಕೆ ಮಾಧ್ಯಮಗಳು ಈ ಪರಿ ಹಿಂದೆ ಬಿದ್ದಿವೆ? ಕೇಳಬಾರದ ಪ್ರಶ್ನೆಗಳನ್ನೆಲ್ಲ ಕೇಳಿ ಅಸಹ್ಯಕ್ಕಿಳಿಯುತ್ತಿವೆ? ಅಫ್‌ ಕೋರ್ಸ್ ನಟಿ ಭಾವನಾ, ಪ್ರತಿ ಸಂದರ್ಶನದಲ್ಲೂ ತಮ್ಮ ಪ್ರಬುದ್ಧತೆ ಮೆರೆದಿದ್ದಾರೆ.

Bhavana R

ಎಲ್ಲಿಯೂ ಲೂಸ್‌ಟಾಕ್ ಮಾತನಾಡಿಲ್ಲ. ವಿವಾದಕ್ಕೆ ಎಡೆಮಾಡಿಕೊಟ್ಟಿಲ್ಲ. ಪ್ರಶ್ನೆ ಕೇಳಿದ ಸಂದರ್ಶಕರ ಮೇಲೆ ಎಗರಾಡಿಲ್ಲ. ಬಸುರು ಹೊತ್ತಿರುವ ಅಕೆಯ ತಾಳ್ಮೆ, ಸಹನೆ ನಿಜಕ್ಕೂ ಮೆಚ್ಚ ಬೇಕಾದ್ದು. ಇಷ್ಟು ದಿನ ಮಾಧ್ಯಮಗಳಿಂದ ದೂರವಿದ್ದ ಭಾವನಾ ಅದು ಹೇಗೆ ಈ ಹೊತ್ತಲ್ಲಿ ಮಾಧ್ಯಮಗಳ ಕೈಗೆ ಸಿಕ್ಕರೋ, ಯಾಕೆ ಸಿಕ್ಕರೋ!

ಇನ್ನೊಂದಷ್ಟು ತಿಂಗಳು ನೆಮ್ಮದಿಯಾಗಿ ಯಾರಿಗೂ ಸಿಕ್ಕದಂತಿದ್ದು, ಮಕ್ಕಳನ್ನು ಹಡೆದು ಬಾಣಂತನ ಮುಗಿಸಿಯೇ ಸಿಗಬಹುದಿತ್ತು. ಸಂತೋಷ ಹಂಚಿಕೊಳ್ಳೋಣವೆಂದು ಅವರೇ ಮಾಧ್ಯಮ ಗಳನ್ನು ಮೈಮೇಲೆಳೆದುಕೊಂಡರೋ ಅಥವಾ ಯಾರಾದ್ರೂ ಮಾಧ್ಯಮಕ್ಕೆ ಸುದ್ದಿ ಹಾಕ್ಕೊಟ್ರೋ.. ಅಥವಾ ಇದೂ ತನಿಖಾ ಪತ್ರಿಕೋದ್ಯಮದ ಒಂದು ಭಾಗವೋ ಆ ‘ಸ್ಪರ್ಮಾತ್ಮನೇ’ ಬಲ್ಲ.

ಭಾವನಾ ಮದುವೆ ಆಗದೆ ಐವಿಎಫ್ ಮೂಲಕ ತಾಯಿ ಆಗ್ತಾ ಇರೋದು ವಿರೋಧಿಸಬೇಕಿರೋ ವಿಷಯವೂ ಅಲ್ಲ.. ಮೆಚ್ಚಿ ಆಕೆಗೆ ‘ಭಾರತರತ್ನ’ ಕೊಡಬೇಕಿರೋ ಸಾಧನೆಯೂ ಅಲ್ಲ. ಅಥವಾ ಅದು ಆಕೆಯ ಮೇಲೆ ‘ಕರುಣಾರಸ’ ಹರಿಸಬೇಕಿರೋ ವಿಚಾರವೂ ಅಲ್ಲ ಅದೊಂದು ಸಂಪೂರ್ಣ ಖಾಸಗಿ ವಿಷಯ. ಈ ಜಗತ್ತಿನಲ್ಲಿ ತಾಯಿಯಾಗಲು, ತಂದೆಯಾಗಲು ಸಾಧ್ಯವಾಗದೇ ಇರುವ ಹಲವಾರು ಮಂದಿಗೆ ವರವಾಗಿ ಬಂದಿರೋ ಒಂದು ಆವಿಷ್ಕಾರ ಈ ಐವಿಎಫ್. ‌

ಇದನ್ನೂ ಓದಿ: Naveen Sagar Column: ಟೂರಿಸ್ಟ್‌ ಫ್ಯಾಮಿಲಿ ಅಲ್ಲ, ಇದು ಟೂಲ್‌ಕಿಟ್‌ ಫ್ಯಾಮಿಲಿ

ಕೋಟ್ಯಂತರ ಮಂದಿ ಈಗಾಗಲೇ ಅದರ ಲಾಭ ಪಡೆದು ತಾಯಿ-ತಂದೆಯರಾಗಿದ್ದಾರೆ. ಅದು ಕೀಳರಿಮೆಯ ವಿಷಯ ಅಲ್ಲದಿದ್ದರೂ ಕೆಲವರು ಅದನ್ನು ಕೀಳರಿಮೆಯಿಂದ ಮುಚ್ಚಿಟ್ಟು ಕೊಳ್ಳುತ್ತಾರೆ. ಕೆಲವರು ಹೇಳಿಕೊಳ್ಳುತ್ತಾರೆ. ಕೆಲವರು ಇದು ಘೋಷಣೆ ಮಾಡಿಕೊಳ್ಳಬೇಕಾದ ವಿಚಾರವೇನಲ್ಲ ಎಂದು ಸುಮ್ಮನಿದ್ದುಬಿಡುತ್ತಾರೆ. ಎಲ್ಲವೂ ಅವರವರ ನಿರ್ಧಾರ.

ಇಲ್ಲಿ ಭಾವನಾ ಐವಿಎಫ್ ಮೂಲಕ ತಾಯಿಯಾಗುತ್ತಿರುವುದು, ಅವಳಿ ಮಕ್ಕಳನ್ನು ಹೊತ್ತಿರುವುದು ಯಾವುದೂ ಮಾಧ್ಯಮಗಳಿಗೆ ಮತ್ತು ಜನಸಾಮಾನ್ಯರಿಗೆ ಸುದ್ದಿಯೇ ಅಲ್ಲ. ಗಂಡನೇ ಇಲ್ಲದೆ, ಮದುವೆಯೇ ಆಗದೆ ಮಕ್ಕಳನ್ನು ಹೆರಲು ಹೊರಟಿದ್ದಾಳಲ್ಲ ಎಂಬುದೇ ಮುಖ್ಯವಾಗಿಹೋಗಿದೆ. ‌

ಐವಿಎಫ್ ಅಲ್ಲದೇ ನ್ಯಾಚುರಗಿ ಗಂಡೊಬ್ಬನಿಂದ ಗರ್ಭಿಣಿ ಆಗಿದ್ದರೆ ಇದು ಇನ್ನೂ ವಿಚಿತ್ರ ತಿರುವು ಪಡೆದು ಅಸಹ್ಯದ ಪರಮಾವಽಗೆ ತಲುಪಿರುತ್ತಿತ್ತು, ಬಿಡಿ. ಒಬ್ಬ ಸಂದರ್ಶಕನಂತೂ, “ನಿಮಗೆ ಗಂಡಿನ ಸಾಂಗತ್ಯ ಬೇಕು ಅನಿಸೋದಿಲ್ವಾ? ಗಂಡನಿಂದಲೇ ಮಗು ಪಡೆಯಬೇಕು ಅನಿಸಿಲ್ವಾ? ನೀವು ಅಧ್ಯಾತ್ಮದತ್ತ ವಾಲಿದ್ದೀರಾ? ಸನ್ಯಾಸಿ ಮನಸ್ಥಿತಿಯಿಲ್ಲಿದ್ದೀರಾ? ದೇಹಕ್ಕೆ ಸೆಕ್ಸ್ ಅಗತ್ಯ ಅನಿಸೋದಿಲ್ವಾ?" ಹೀಗೆ ಏನೇನೋ ನಾನ್‌ಸೆನ್ಸ್ ಪ್ರಶ್ನೆಗಳನ್ನು ಕೇಳುತ್ತಿದ್ದ. ‌

ಒಂದು ಜನರಲ್ ಚರ್ಚೆಯಲ್ಲಿ ಗಂಡು ಹೆಣ್ಣಿನ ದೈಹಿಕ ಅಗತ್ಯಗಳು ಮತ್ತು ಮನಸ್ಥಿತಿಗಳ ಬಗ್ಗೆ ಮಾತನಾಡುವಾಗ ಇಂಥ ಪ್ರಶ್ನೆಗಳು ಬಂದರೆ ನಿಜಕ್ಕೂ ಓಕೆ. ಆದರೆ ಆಕೆ ಈ ಸ್ಥಿತಿಯಲ್ಲಿರುವಾಗ ಇಂಥ ಪ್ರಶ್ನೆಗಳು ಅಸಂಬದ್ಧ ಮಾತ್ರವಲ್ಲ ಘಾತಕ ಎನಿಸುತ್ತವೆ. ನನಗನಿಸಿದ್ದು, ಈ ಆಧುನಿಕ ಕುಂತಿಗೆ ಕುಂತಲ್ಲಿ ಕುಂತಿರೋಕೆ ಬಿಡದಂತೆ ಒದ್ದಾಡಿಸುತ್ತಿವೆ ಮಾಧ್ಯಮಗಳು ಅಂತ. ಅದು ಐವಿಫ್ ಅಲ್ಲದಿರಬಹುದು, ಆದರೆ ಇಂಥದ್ದೊಂದು ನಮೂನೆ ನಾವು ಮೊತ್ತಮೊದಲು ನೋಡಿದ್ದು ಮಹಾಭಾರತದ ಅಲ್ವಾ? ಕುಂತಿಗೆ ಗಂಡಿನ ದೈಹಿಕ ಮಿಲನವೇ ಇಲ್ಲದೆ, ಮದುವೆಗೂ ಮುನ್ನವೇ, ಮಂತ್ರಕ್ಕೆ ಮಗುವಾಗಿದ್ದು, ಐವಿಎಫ್‌ ತಂತ್ರಜ್ಞಾನಕ್ಕೆ ಮೂಲವಲ್ಲವೇ? ಅಂದು ವರವಾಗಿದ್ದನ್ನು ಇಂದು ಶಾಪದಂತೇಕೆ ನೋಡುತ್ತಿದ್ದೇವೆ? ಭಾವನಾ ಒಬ್ಬ ಸೆಲೆಬ್ರಿಟಿಯಾಗಿರೋದ್ರಿಂದ ಅವಳಿಂದ ಪ್ರೇರಿತರಾಗಿ ಊರಲ್ಲಿರೋ ಹೆಣ್ಮಕ್ಕಳೆಲ್ಲ ಈಗ ಮದುವೆಯೇ ಆಗದೇ ಐವಿಎಫ್ ಮೂಲಕ ಮಕ್ಕಳನ್ನು ಹೆರಲು ಕ್ಯೂ ನಿಲ್ಲುತ್ತಾರೆ ಎಂಬಂತೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ ಕೆಲವರು. ‌

ಸ್ವಾಮೀ.. ಮದುವೆ ಮಕ್ಕಳು ಯಾವುದೂ ಬೇಡ ಎಂಬ ಹೆಣ್ಮಕ್ಕಳ್ಳಿದ್ದಾರೆ. ಮದುವೆಯಾಗೋಕೆ ರೆಡಿ, ಮಕ್ಕಳು ಬೇಡ ಅನ್ನೋವ್ರೂ ಇದ್ದಾರೆ. ಆದರೆ ಭಾವನಾ ಅಲ್ಲ ಯಾರೇ ಬಂದು ಹೇಳಿದರೂ ಮದುವೆ ಆಗದೇ ಮಕ್ಕಳನ್ನು ಹೆರ್ತೀನಿ ಅನ್ನೋ ಹುಡುಗಿಯರು ಇಲ್ಲಿ ಲಕ್ಷಕ್ಕೊಬ್ಬರು ಕೂಡ ಸಿಗುವುದಿಲ್ಲ. ಯಾಕಂದ್ರೆ ತಾಯ್ತನದ ಪ್ರೋಸಸ್ ಅಷ್ಟು ಸುಲಭದ್ದಲ್ಲ.

ಇಂಥದ್ದೊಂದು ಕಷ್ಟದ ಆಯ್ಕೆ ಮಾಡಿಕೊಂಡಿದ್ದಕ್ಕೆ ಭಾವನಾ ಅವರನ್ನು ಮೆಚ್ಚಬೇಕು. ಗಂಡ ಬಿಟ್ಟು ಹೋಗಿ ಅನಿವಾರ್ಯವಾಗಿ ಮಗುವನ್ನು ಸಾಕುವಂತಾಗೋದು, ಅತ್ಯಾಚಾರಕ್ಕೊಳಗಾಗಿ ಮಗುವಿನ ತಾಯಿಯಾಗಿ ಸಿಂಗಲ್ ಪೇರೆಂಟ್ ಥರ ಬದುಕೋದು, ದುಡಿಯದ ದಂಡಪಿಂಡ ಗಂಡನ ಜತೆ ಇದ್ದು, ಮಗುವನ್ನು ಹೊತ್ತು ಹೆತ್ತು ಸಾಕೋದು.. ಇಂಥದ್ದನ್ನೆಲ್ಲ ನೋಡಿಯೇ ಮಕ್ಕಳು ಬೇಡವೇ ಬೇಡಪ್ಪಾ ಎಂಬುವವರ ಮಧ್ಯ ಭಾವನಾ ಭಿನ್ನ ಅನಿಸುತ್ತಿರುವುದು ಹೌದು.

ದಿಟ್ಟೆ ಎಂಬಂತೆ ಕಾಣುತ್ತಿರುವುದು ಹೌದು. ಆದರೆ ಆಕೆ ಸಂಸ್ಕೃತಿಗೆ ಅಪಚಾರ ಮಾಡುತ್ತಿದ್ದಾರೆ, ಪ್ರಕೃತಿಗೆ ವಿರುದ್ಧ ನಡೆಯುತ್ತಿದ್ದಾರೆ ಇವೆಲ್ಲ ಬುಲ್‌ಶಿಟ್ ಅಷ್ಟೆ. ಅಸಲಿಗೆ ಇವೆಲ್ಲ ಸೆನ್ಸೇಷನಲ್ ಆಗಬೇಕಿರೋ ವಿಚಾರಗಳೇ ಅಲ್ಲ. ಹಿರಿಯ ಪತ್ರಕರ್ತರೊಬ್ಬರು ತೊಂಬತ್ತರ ದಶಕದಿಂದ ಬರೋ ಬ್ಬರಿ ಇಪ್ಪತ್ತೈದು ವರ್ಷ ತನಗೆ ತಂದೆ ಯಾರೆಂದೇ ಗೊತ್ತಿಲ್ಲ ಎಂಬುದನ್ನೇ ಬರವಣಿಗೆಯ ಮತ್ತು ಬದುಕಿನ ಸರಕನ್ನಾಗಿ ಮಾಡಿಕೊಂಡರು.

ಅಂದು ಅದಕ್ಕೆ ಮರುಗಿದ ಜನ ಇಂದು ಇದಕ್ಕೂ ಅತಿರೇಕದಿಂದ ಪ್ರತಿಕ್ರಿಯಿಸುತ್ತಿದ್ದಾರೆ. ಮನುಷ್ಯ ತನ್ನ ದೈಹಿಕ ಅಗತ್ಯಗಳ ಮೇಲೆ ತೆಗೆದುಕೊಳ್ಳುವ ನಿರ್ಧಾರಗಳು ಇನ್ನೊಬ್ಬರಿಗೆ ತೊಂದರೆಯಾಗು ತ್ತಿಲ್ಲವೆಂದ ಮೇಲೆ ಯಾಕೆ ಅದನ್ನು ಕ್ರೈಂ ಎಂಬಂತೆ ನೋಡಬೇಕು? ಹಸ್ತಮೈಥುನವನ್ನು ಅಪರಾಧ ವೆಂದು ನೋಡುತ್ತೇವೆಯೇ? ಭೂಮಿ ಮೇಲೆ ಇಷ್ಟೊಂದು ಸ್ತ್ರೀಯರಿದ್ದರೂ ಈ ಪುರುಷ ಹಸ್ತ ಮೈಥುನ ಮಾಡಿಕೊಳ್ಳುತ್ತಾನೆ,

ಈತ ಪ್ರಕೃತಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾನೆ ಅನ್ನುತ್ತೇವೆಯೇ? ಒಬ್ಬ ವ್ಯಕ್ತಿ ಮದುವೆ‌ ಯಾಗದಿರುವುದು, ಹಸ್ತಮೈಥುನದಿಂದ ದೈಹಿಕ ಮತ್ತು ಲೈಂಗಿಕ ತೃಷೆ ತಣಿಸಿಕೊಳ್ಳುವುದು, ಐವಿಎಫ್‌ ನಿಂದ ಮಗುವನ್ನು ಪಡೆಯುವುದು ಎಲ್ಲವೂ ಸಹಜ ಮತ್ತು ವೈಯಕ್ತಿಕ ವಿಚಾರಗಳಷ್ಟೆ.

ಭಾವನಾ ಐವಿಎ‌ಫ್ ನಿಂದ ಮಗುವನ್ನು ಪಡೆಯುತ್ತಿದ್ದಾರೆ ಎಂದ ಮಾತ್ರಕ್ಕೆ ಅವರು ಪುರುಷದ್ವೇಷಿ ಆಗಿರಬೇಕಿಲ್ಲ. ಸೆಕ್ಸ್ ಬಗ್ಗೆ ನಿರಾಸಕ್ತಿ ಹೊಂದಿರುವವರು ಎಂದು ನಿರ್ಧರಿಸಬೇಕಿಲ್ಲ. ಮದುವೆ‌ ಯಾಗದಿರುವುದು, ಗಂಡಿನ ಜತೆ ಲೈಂಗಿಕ ಕ್ರಿಯೆ ನಡೆಸಿ ಮಕ್ಕಳನ್ನು ಪಡೆಯುವುದಿಲ್ಲ, ಐವಿಎಫ್ ಮೂಲಕ ಪಡೆಯುತ್ತೇನೆ ಎಂಬುದು ಆಕೆಯ ನಿರ್ಧಾರವಷ್ಟೆ. ‌

ಅದರಾಚೆಗೆ ಆಕೆಗೊಂದು ಗಂಡಿನೊಂದಿಗೆ ಪ್ರೀತಿಯೂ ಇರಬಹುದು, ಆಕೆಯ ಜೀವನದಲ್ಲಿ ರೊಮ್ಯಾ, ಸೆಕ್ಸ್‌ ಗೂ ಜಾಗ ಇರಬಹುದು. ಮುಂದೊಂದಿನ ಆಕೆ ಮದುವೆಯೂ ಆಗಬಹುದು. ಈ ಮಕ್ಕಳಿಗೆ ಅಪ್ಪನಾಗಿ ಬರಲು ಯಾರಾದರೂ ಒಪ್ಪಲೂಬಹುದು. ಅದಕ್ಕೆ ಭಾವನಾ ಸಮ್ಮತಿಸಲೂ ಬಹುದು. ಏನೂ ಆಗಬಹುದು. ಅವೆಲ್ಲವೂ ಆಕೆಯ ವೈಯಕ್ತಿಕ ಬದುಕು. ಭಾವನಾ ತಾನು ಸಿಂಗಲ್ ಪೇರೆಂಟ್ ಆಗಲು ಹೊರಟಿದ್ದೇನೆ ಸಹಾಯ ಮಾಡಿ ಎಂದು ಫ್ರೆಂಡ್ ರೈಸಿಂಗ್ ಶುರು ಮಾಡಿಲ್ಲ.

ಸಿಂಪಥಿ ಮತ್ತು ಹೊಗಳಿಕೆಗಾಗಿ ಗೋಗರೆಯುತ್ತಿಲ್ಲ. ಅವಾರ್ಡ್ ಕೇಳುತ್ತಿಲ್ಲ. ಊರ ಹೆಣ್ಣುಮಕ್ಕಳ ನ್ನೆಲ್ಲ ಬದಲಿಸಲು ಹೊರಟಿಲ್ಲ. ಆದರೂ ಯಾಕೆ ಭಾವನಾ ವಿಚಾರದಲ್ಲಿ ಇಷ್ಟು ಚರ್ಚೆ? ಕೊನೆಗೆ .. ಆಕೆಗೆ ವೀರ್ಯದಾನ ಮಾಡಿದ ಗಂಡಸು ಯಾರು ಅನ್ನೋ ಚರ್ಚೆಯೂ ಶುರುವಾಗಿ ಹೋಯ್ತು. ಇಂಥ ಪ್ರಶ್ನೆಗಳನ್ನು ಎತ್ತಿದಾಗ, ಅಂಬರೀಶ್ ಭಾಷೆಯಲ್ಲಿ ಉತ್ತರ ಕೊಡಬೇಕು ಅನಿಸುತ್ತದೆ. ಇಷ್ಟಕ್ಕೂ ಆ ವೀರ‍್ಯದಾನಿ ಯಾರೆಂದು ಗೊತ್ತಾದರೆ ಏನು ಮಾಡುತ್ತಾರೆ? ಭಾವನಾಗೆ ಮದುವೆ ಮಾಡಿಸುತ್ತಾರಾ? ಅಥವಾ ಹುಟ್ಟೋ ಮಕ್ಕಳಿಗೆ ಬರ್ತ್ ಸರ್ಟಿಫಿಕೇಟಲ್ಲಿ ಅಪ್ಪನ ಹೆಸರು ಹಾಕಿಸಿ ಸ್ಕೂಲಿಗೆ ಸೇರಿಸಿಬರ್ತಾರಾ? ಅವನನ್ನು ಕರೆದು ಸಂದರ್ಶನ ಮಾಡಿ ಹೊಸ ಕಥೆಗಳನ್ನು ಹರಿಬಿಡುತ್ತಾರಷ್ಟೆ. ಸೀರಿಯಸ್ಲೀ ಇದೆಲ್ಲ ಬೇಕಾ ಮಾಧ್ಯಮಗಳಿಗೆ? ನೀನಾ ಗುಪ್ತಾ ಎಂಬ ನಟಿ, ಕ್ರಿಕೆಟರ್ ವಿವಿಯನ್ ರಿಚರ್ಡ್ಸ್‌ ನಿಂದ ಮಗು ಪಡೆದು ಸಿಂಗಲ್ ಪೇರೆಂಟ್ ಆಗಿಯೇ ಜೀವನ ನಡೆಸಿದಳು.

ಅವತ್ತಿಗೆ ಅದು ಸುದ್ದಿ. ಫೈನ್. ಇತ್ತೀಚೆಗೆ ಪ್ರತಿಭಾ ಪ್ರಹ್ಲಾದ್‌ರವರು ತಮ್ಮ ಮಕ್ಕಳ ತಂದೆ ರಾಮಕೃಷ್ಣ ಹೆಗಡೆ ಎಂದು ತಾವಾಗಿ ಬಹಿರಂಗಗೊಳಿಸಿದರು. ಇಂಥ ನೂರಾರು ಸಾವಿರಾರು ಘಟನೆಗಳು ಜಗತ್ತಿನಲ್ಲಿ ಮತ್ತು ನಮ್ಮ ಸುತ್ತಮುತ್ತಲೇ ಆಗಿಹೋಗಿವೆ. ಗಂಡು ಹೆಣ್ಣಿನ ಸಂಬಂಧ ಗಳು, ವಿವಾಹ, ಡಿವೋರ್ಸ್, ಎರಡನೇ ವಿವಾಹ, ಪ್ರೇಮಗಳು, ತಾಯ್ತನ, ಬಂಜೆತನ ಎಲ್ಲವೂ ವೈಯಕ್ತಿಕ ವಿಷಯಗಳು.

ಹೆಚ್ಚೆಂದರೆ ಇನ್ವಾಲ್ವ್ ಆಗಿರುವ ಆ ಇಬ್ಬರು ವ್ಯಕ್ತಿಗಳಿಗಷ್ಟೇ ಸಂಬಂಧಪಟ್ಟಿದ್ದು. ಅದನ್ನು ಸಾಮಾಜಿಕ ಸಮಸ್ಯೆ ರೇಂಜಿಗೆ, ಕಾಂಟ್ರೊವರ್ಸಿ ಲೆವೆಲ್ಲಿಗೆ ಕೊಂಡೊಯ್ದು, ಖಾಸಗಿತನ ಕೊಲ್ಲುವ ಅಗತ್ಯವಾದರೂ ಏನು? ಮಾಧ್ಯಮಗಳಿಗೆ ಹೇಳುವುದಿಷ್ಟೆ. ಭಾವನಾ ವಿಶೇಷವಾದದ್ದೇನೂ ಮಾಡ್ತಾ ಇಲ್ಲ. ತಾಯಿಯಾಗುತ್ತಿದ್ದಾಳೆ. ಆಗಲು ಬಿಡಿ. ಆಕೆಯನ್ನು ಲೇಬರ್ ರೂಮ್ ತನಕ ಹಿಂಬಾಲಿಸಬೇಡಿ.

ಹುಟ್ಟುವ ಮಕ್ಕಳ ಮುಖ ನೋಡಿ, ತಂದೆಯನ್ನು ಹುಡುಕಲು ಹೊರಡಬೇಡಿ. ಭಾವನಾಗೆ ನೆಮ್ಮದಿ ಯಾಗಿ ಬಾಣಂತನ ಮಾಡಿಕೊಳ್ಳಲು ಬಿಡಿ. ಇದು ಗಂಡಿನ ಇಗೋಗೆ ಪೆಟ್ಟುಕೊಡುವ ವಿಚಾರವೂ ಆಗಬೇಕಿಲ್ಲ. ಯಾರೋ ಪುರುಷ ವೀರ‍್ಯ ಕೊಟ್ಟಿದ್ದಾನೆ. ಆತನಿಗೆ ತಾನು ಯಾರಿಗೆ ಕೊಟ್ಟಿದ್ದೇನೆ ಎಂಬುದೂ ಗೊತ್ತಿರಬೇಕಿಲ್ಲ.

ಗೊತ್ತಿರಲಿಕ್ಕಿಲ್ಲ. ರಕ್ತ ಕೊಟ್ಟಂತೆಯೇ ಇದೂ ಒಂದು ಕ್ರಿಯೆ ಅಷ್ಟೆ. ಒಂದು ಸೃಷ್ಟಿಗೆ ಕಾರಣವಾಗುವ ಕ್ರಿಯೆ. ಅದನ್ನು ಕೂಡ ವಿಶೇಷವಾಗಿ ನೋಡುವ ಅಗತ್ಯವಿಲ್ಲ. ಎಲ್ಲವನ್ನೂ ಸೆನ್ಸೇಷನಲೈಸ್ ಮಾಡುವುದನ್ನು ನಿಲ್ಲಿಸಿ, ಖಾಸಗಿತನವನ್ನು ಗೌರವಿಸುವುದನ್ನು ಮಾಧ್ಯಮಗಳು ಮತ್ತು ಜನಸಾ ಮಾನ್ಯರು ಕಲಿಯಬೇಕಿದೆ. ಅಂತೆಯೇ ಸೆಲೆಬ್ರಿಟಿಗಳೂ ಎಲ್ಲವನ್ನೂ ಮಾಧ್ಯಮಗಳೆದುರು (ಸೋಷಿಯಲ್ ಮೀಡಿಯಾದಲ್ಲಿ ಕೂಡ) ತಂದಿಡುವುದನ್ನು ನಿಲ್ಲಿಸಬೇಕಿದೆ.

ಖಾಸಗಿ ವಿಚಾರಗಳ ಪ್ರಚಾರಕ್ಕೆ ಮಾಧ್ಯಮ ಬೇಕು, ಆದರೆ ನೆಗೆಟಿವ್ ಪ್ರಚಾರ ಆಗಬಾರದು ಅಂದರೆ ಅದು ಇಂದಿನ ಕಾಲಘಟ್ಟದಲ್ಲಿ ಸಾಧ್ಯವಿಲ್ಲ. ಹೀಗಾಗಿ ಖಾಸಗಿ ವಿಚಾರಗಳನ್ನು ಖಾಸಗಿಯಾಗಿಯೇ ಇಡುವ ಕಲೆಯನ್ನು ಸೆಲೆಬ್ರಿಟಿಗಳೂ ಕಲಿತುಕೊಳ್ಳಬೇಕು.