ತಿಳಿರು ತೋರಣ
srivathsajoshi@yahoo.com
ಅಸ್ತವ್ಯಸ್ತ ಪರಿವರ್ತಕಗಳು ಎಂದರೇನಂತ ನಿಮಗೆ ಗೊತ್ತೇ? ಬೇಡ, ಅಂಥ ಸಂಸ್ಕೃತಭೂಯಿಷ್ಠ ದೊಡ್ಡದೊಡ್ಡ ಶಬ್ದಗಳನ್ನು ಬಳಸಿ ಕೇಳಿದರೆ -ಕ್ಕನೆ ಅರ್ಥವಾಗಲಿಕ್ಕಿಲ್ಲ. ಅದಕ್ಕಿಂತ, ಇಂಗ್ಲಿಷ್‌ನಲ್ಲಿ Misplaced modifiers ಎಂದರೆ ಸುಲಭದಲ್ಲಿ ಗೊತ್ತಾಗುತ್ತದೆ. ಒಂದು ವಾಕ್ಯದಲ್ಲಿ ಯಾವ ಪದ ಅಥವಾ ಪದಪುಂಜಗಳು ಎಲ್ಲಿರಬೇಕೋ ಅಲ್ಲಿರದೆ ಎಲ್ಲೆಲ್ಲೋ ಇದ್ದರೆ ವಾಕ್ಯದ ಅರ್ಥ ಅನರ್ಥ ವಾಗುವುದು.
ಅದರಿಂದಾಗಿ ಓದುಗರಿಗೆ/ಕೇಳುಗರಿಗೆ ಗೊಂದಲ ಉಂಟಾಗುವುದು. ‘ಸರಕಾರಿ ಗಂಡುಮಕ್ಕಳ ಶಾಲೆ’ ಯಲ್ಲಿ ಶಾಲೆ ಸರಕಾರಿಯೋ ಗಂಡುಮಕ್ಕಳು ಸರಕಾರಿಯೋ ಎಂಬಂತೆ. ಅಥವಾ, ‘ಶುದ್ಧ ಹಸುವಿನ ತುಪ್ಪ’ದಲ್ಲಿ ಹಸು ಶುದ್ಧವೋ ತುಪ್ಪ ಶುದ್ಧವೋ ಎಂಬಂತೆ. ಇಂಗ್ಲಿಷ್‌ನಲ್ಲಿ ಇದರ ದಾಂಧಲೆ ವಿಪರೀತ. ಮೊದಲಿಗೆ ಇಂಗ್ಲಿಷ್‌ನದೇ ಕೆಲವು ತಮಾಷೆ ಉದಾಹರಣೆಗಳನ್ನು ನೋಡೋಣ.
ಪಾದರಕ್ಷೆಗಳ ದೊಡ್ಡ ಅಂಗಡಿಯಲ್ಲಿ ಒಂದು ಕಡೆ Purple women’s shoes ಎಂಬ ಫಲಕ ಇರುತ್ತದೆಂದುಕೊಳ್ಳಿ. ಮಹಿಳೆಯರು ಧರಿಸುವ ಪಾದರಕ್ಷೆಗಳು, ನೇರಳೆ ಬಣ್ಣದವು ಅಲ್ಲಿರುವವು. ಆದರೆ ಆ ವಾಕ್ಯವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಪಾದರಕ್ಷೆಗಳು ನೇರಳೆ ಬಣ್ಣದವೋ ಅಥವಾ ಧರಿಸುವ ಮಹಿಳೆಯರು ನೇರಳೆ ಬಣ್ಣದವರೋ ಎಂಬ ಪ್ರಶ್ನೆ ಮೂಡಬಹುದು!
ಕಾರಣ Purple ಎಂಬ ಪದ ಆ ವಾಕ್ಯದಲ್ಲಿ ಪರಿವರ್ತಕ ( modifier ) ಮತ್ತು ಅದು ಕರಾರು ವಾಕ್ಕಾದ ಸ್ಥಾನದಲ್ಲಿ ಇಲ್ಲ, misplace ಆಗಿದೆ, ಅಂದರೆ ಅಸ್ತವ್ಯಸ್ತವಾಗಿದೆ. ಆದ್ದರಿಂದಲೇ ಗೊಂದಲಕ್ಕೆ ಅವಕಾಶ. ಗೊಂದಲಕ್ಕಿಂತ ಹೆಚ್ಚಾಗಿ ಇಂಥ ಅಸ್ತವ್ಯಸ್ತ ಪರಿವರ್ತಕಗಳು ತಮಾಷೆ ಯನ್ನೂ ಉಂಟುಮಾಡುತ್ತವೆ.
ಇದನ್ನೂ ಓದಿ: Srivathsa Joshi Column: ರಾಮಾಯಣ ಕಾಲದಿಂದಲೂ ಕಾಗೆಗೆ ಒಂದೇ ಕಣ್ಣು !
ಉದಾಹರಣೆಗೆ- One morning I shot an elephant in my pajamas ಎಂಬ ವಾಕ್ಯ ವನ್ನು ಗಮನಿಸಿ. ಇಲ್ಲಿ ಹೇಳಹೊರಟಿದ್ದು, ಒಂದುದಿನ ಬೆಳಗ್ಗೆ ನಾನಿನ್ನೂ ನೈಟ್‌ಡ್ರೆಸ್ ಪಜಾಮಾ ಧರಿಸಿದ್ದಾಗಲೇ ಆನೆಯೊಂದು ಎದುರಾಯಿತು, ಹತ್ತಿರದಲ್ಲೇ ಇದ್ದ ಕೋವಿಯನ್ನೆತ್ತಿಕೊಂಡು ಆನೆಗೆ ‘ಡಿಷುಂ’ ಮಾಡಿದೆ ಎಂದು. ಆದರೆ, ವಾಕ್ಯವನ್ನು ಕೂಲಂಕಷ ಗಮನಿಸಿದರೆ- ನನ್ನ ಪಜಾಮಾ ದೊಳಗೇ ಆನೆ ಬಂದಿತ್ತೇನೋ, ಅಥವಾ ಆನೆ ನನ್ನ ಪಜಾಮಾ ಧರಿಸಿಕೊಂಡು ಬಂದಿತ್ತೇನೋ ಎಂಬ ಅರ್ಥವೂ ಸುರಿಸುತ್ತದೆ.
ಊಹಿಸಿದರೆ ಬೇಡವೆಂದರೂ ನಗು ಬರುತ್ತದೆ. ಅಮೆರಿಕದ ಖ್ಯಾತ ಕಾಮೆಡಿಯನ್ ಗ್ರೌಚೊ ಮಾರ್ಕ್ಸ್ ಇದನ್ನೇ ಇನ್ನಷ್ಟು ವಿಸ್ತರಿಸಿ One morning I shot an elephant in my pajamas. How he got in my pajamas, I don’t know! ಎಂದದ್ದು ವರ್ಲ್ಡ್ ಫೇಮಸ್ ಆಗಿದೆ. ಪರಿವರ್ತಕಗಳ ಅಸ್ತವ್ಯಸ್ತತೆ ಯನ್ನು ಇಂಗ್ಲಿಷ್ ವ್ಯಾಕರಣತಜ್ಞರು ನಾಲ್ಕು ವಿಧಗಳಾಗಿ ವಿಂಗಡಿಸು ತ್ತಾರೆ. ಮೊದಲನೆಯದು- ಮೇಲೆ ವಿವರಿಸಿದಂತೆ I Misplaced modifiers. ಪದಪುಂಜವು ಯಾವ ವಸ್ತು ವಿಷಯವನ್ನು ಬಣ್ಣಿಸ ಬೇಕಿತ್ತೋ ಅದಕ್ಕೆ ತಾಗಿಕೊಂಡಿರದೆ ದೂರದಲ್ಲಿರುವುದು.
ಉದಾಹರಣೆಗೆ We found the contact lens during dinner on the carpet. ಹೇಳಹೊರಟಿದ್ದು ಕಳೆದುಹೋಗಿದ್ದ ಕಾಂಟಾಕ್ಟ್ ಲೆನ್ಸ್ ಸಂಜೆ ಡಿನ್ನರ್ ಟೈಮಲ್ಲಿ ಕಾರ್ಪೆಟ್ ಮೇಲೆ ಸಿಕ್ಕಿತು ಅಂತ. ಆದರೆ ಡಿನ್ನರ್ ಏರ್ಪಡಿಸಿದ್ದೇ ಕಾರ್ಪೆಟ್ ಮೇಲೆಯೋ ಎಂಬ ಸಂದೇಹ ಬರುವಂತಿದೆ ವಾಕ್ಯರಚನೆ. ಹಾಗಾಗಬಾರದು ಅಂತಿದ್ದರೆ During dinner we found the contact lens on the carpet ಎಂದು ಬರೆಯಬೇಕು.
ಇನ್ನೊಂದು ಉದಾಹರಣೆ: I saw an accident walking down the street. ಅಪಘಾತವೇ ಬೀದಿ ಯಲ್ಲಿ ನಡೆದುಕೊಂಡು ಹೋಗುತ್ತಿತ್ತೇ ಅಥವಾ ನಾನು ಬೀದಿಯಲ್ಲಿ ನಡೆದುಕೊಂಡು ಹೋಗು ವಾಗ ಒಂದು ಅಪಘಾತವನ್ನು ನೋಡಿದ್ದೇ? ಗೊಂದಲದ ಪರಿಸ್ಥಿತಿ. Walking down the street I saw an accident ಎಂದು ಬರೆದರೆ ಗೊಂದಲವಿಲ್ಲ. ಅಸ್ತವ್ಯಸ್ತತೆಯ ಎರಡನೆಯ ವಿಧ Squinting modifiers.
ಇದು ಓರೆಗಣ್ಣಿನ ಥರ, ಲಂಡನ್ ನತ್ತ ನೋಡುತ್ತ ಟೋಕಿಯೋದವರೊಡನೆ ಮಾತನಾಡಿದಂತೆ. ಉದಾಹರಣೆಗೆ: Hiking up hills quickly strengthens your muscles. ಇದರಲ್ಲಿ quickly ಎಂಬ ಕ್ರಿಯಾವಿಶೇಷಣವನ್ನು ಹೈಕಿಂಗ್‌ಗೆ ಅನ್ವಯಿಸಬೇಕೇ ಅಥವಾ ಸ್ನಾಯುಗಳ ಬಲವರ್ಧನೆಗೆ ಅನ್ವಯಿಸಬೇಕೇ? ಹಾಗೆಯೇ, The politician discussed the high cost of living with several women ಇದರಲ್ಲಿ of living ಎಂಬ ಪದಪುಂಜವನ್ನು ಹೆಚ್ಚು ತುಟ್ಟಿ ಎಂಬುದಕ್ಕೆ ಲಗತ್ತಿಸಬೇಕೇ ಅಥವಾ ಅನೇಕ ಮಹಿಳೆಯರೊಡನೆ ವಾಸಿಸುವುದಕ್ಕೆಂದು ತಿಳಿಯಬೇಕೇ? ಮೂರನೆಯ ವಿಧ Limiting modifiers. ವಾಕ್ಯದಲ್ಲಿ only, just, even, exactly ರೀತಿಯ ಪದಗಳ ಸ್ಥಾನಪಲ್ಲಟ ದಿಂದಾಗುವ ಆಭಾಸ.
ಉದಾಹರಣೆಗೆ- Only I want him to marry me ಎಂದ ಹುಡುಗಿಯು only ಪದವನ್ನು ವಾಕ್ಯದಲ್ಲಿ ಬೇರೆ ಬೇರೆ ಕಡೆ ಬರೆದಿದ್ದೇ ಆದರೆ ಬೇರೆಬೇರೆ ಅರ್ಥಗಳು! ನಾಲ್ಕನೆಯ ವಿಧ Dangling modifiers. ಉದಾಹರಣೆಗೆ- Running to catch the bus, my hat flew off. ಬಸ್ ಹಿಡಿಯಲು ಓಡಿದ್ದು ಯಾರು? ನಾನೋ ನನ್ನ ಟೊಪ್ಪಿಯೋ? Completely engulfed in flames, I was unable to identify the building. ಬೆಂಕಿ ಹೊತ್ತಿಕೊಂಡಿದ್ದರಿಂದಾಗಿ ಕಟ್ಟಡವನ್ನು ಗುರುತಿಸುವುದು ನನ್ನಿಂದಾಗಲಿಲ್ಲ.
ಬೆಂಕಿಯಿಂದ ಆವೃತವಾದದ್ದು ಕಟ್ಟಡವೋ ನಾನೋ? ಇದಿಷ್ಟು ಇಂಗ್ಲಿಷ್ ಹಿನ್ನೆಲೆಯೊಂದಿಗೆ ಈಗ ನಮ್ಮ ಕಸ್ತೂರಿ ಕನ್ನಡದತ್ತ ದೃಷ್ಟಿ ಹಾಯಿಸೋಣ. ಅಸ್ತವ್ಯಸ್ತ ಪರಿವರ್ತಕಗಳು ಕನ್ನಡದಲ್ಲೂ ದಾಂಧಲೆ ಎಬ್ಬಿಸುತ್ತವೆ. ಈಗೀಗಂತೂ ಪತ್ರಿಕೆಗಳ ತಲೆಬರಹಗಳಲ್ಲಿ, ಸುದ್ದಿವಿವರದ ವಾಕ್ಯಗಳಲ್ಲಿ ಇವುಗಳ ಹಾವಳಿ ವಿಪರೀತವಾಗಿದೆ. ಈ ವಿಷಯವನ್ನು ಸ್ನೇಹಿತರೊಡನೆ ಚರ್ಚಿಸುವಾಗಲೆಲ್ಲ ನಾನು ನೆನಪಿಸಿಕೊಳ್ಳುವ ತಲೆಬರಹ ‘ಅಡಿಕೆಮರದಿಂದ ಬಿದ್ದು ಡಿಪ್ಲೊಮಾ ಓದುತ್ತಿದ್ದ ಯುವಕನ ಸಾವು’! ಕನ್ನಡದಲ್ಲಿ ಅಸ್ತವ್ಯಸ್ತ ಪರಿವರ್ತಕಕ್ಕೆ ಇದಕ್ಕಿಂತ ಒಳ್ಳೆಯ ಉದಾಹರಣೆ ಬೇರೆ ಸಿಗಲಿಕ್ಕಿಲ್ಲ.
ಏಕೆಂದರೆ, ಯುವಕನ ಸಾವಿಗೆ ಕಾರಣವೇನೆಂದು ಇದರಲ್ಲಿ ಗೊತ್ತಾಗುತ್ತಿಲ್ಲ. ‘ಅಡಿಕೆಮರದಿಂದ ಬಿದ್ದು ಡಿಪ್ಲೊಮಾ ಓದುತ್ತಿದ್ದ’ ಎಂಬ ಅಂಶ ಮಾತ್ರ ಸ್ಪಷ್ಟವಾಗಿ ಗೋಚರಿಸುತ್ತಿದೆ! ಅಷ್ಟಕ್ಕೂ ಆ ಯುವಕ ಅಡಿಕೆಮರದಿಂದ ಬಿದ್ದ ಕೂಡಲೇ ಡಿಪ್ಲೊಮಾ ಓದಿದ್ದೇಕಿರಬಹುದು? ಡಿಪ್ಲೊಮಾ ಓದತೊಡಗುವವರೆಗೆ ಅಂದರೆ ಎಸ್ಸೆಸ್ಸೆಲ್ಸಿವರೆಗೆ ಆತ ಅಡಿಕೆಮರದ ಮೇಲೆಯೇ ವಾಸಿಸುತ್ತಿದ್ದನೇ? ಹೌದಾದರೆ ಕಾರಣವೇನಿರಬಹುದು? ಅಡಿಕೆ ತೋಟಗಳಿರುವ ಹಳ್ಳಿಯಲ್ಲಿ ಹುಟ್ಟಿ ಬೆಳೆದ ನನಗಿದು ಭಯಂಕರ ವಿಚಿತ್ರವಾಗಿ ಕಾಣುತ್ತದೆ.
ಅಂದಹಾಗೆ ಈ ತಲೆಬರಹ ‘ಅಡಿಕೆ ಮರದಿಂದ ಬಿದ್ದು ಯುವಕನ ಸಾವು’ ಎಂದಷ್ಟೇ ಇರುತ್ತಿದ್ದರೆ ಸಾಕಿತ್ತು. ಸತ್ತ ಯುವಕ ಡಿಪ್ಲೊಮಾ ಓದುತ್ತಿದ್ದನು ಎಂಬ ಅಂಶವನ್ನು ತಲೆಬರಹದಲ್ಲೇ ಹೇಳಬೇಕಂತೇನಿಲ್ಲ. ಸುದ್ದಿಯ ವಿವರದಲ್ಲಿ ಸೇರಿಸಿದರಾಯ್ತು. ಅಲ್ಲೂ ಅಸ್ತವ್ಯಸ್ತ ಪರಿವರ್ತಕಗಳು ಕಾಟ ಕೊಡುವುದಿಲ್ಲವೆಂಬ ಗ್ಯಾರಂಟಿಯಿಲ್ಲವೆನ್ನಿ. ಆದರೂ ತಲೆಬರಹದಲ್ಲೇ ಕಣ್ಣಿಗೆ ರಾಚುವು ದಕ್ಕಿಂತ ವಾಸಿ. ಉದಾಹರಣೆಗೆ ‘ಕುಮಾರಧಾರಾ ನದಿ ತೀರದಲ್ಲಿ ನದಿಗೆ ಅಳವಡಿಸಲಾದ ಪಂಪ್ ನ ವಿದ್ಯುತ್ ತಂತಿ ಸ್ಪರ್ಶಿಸಿ ದ್ವಿತೀಯ ಪಿಯುಸಿ ಉತ್ತೀರ್ಣನಾಗಿದ್ದ ಯುವಕ ಮೃತಪಟ್ಟಿ ದ್ದಾನೆ’ ಅಂತೊಂದು ಸುದ್ದಿವಿವರ ಒಮ್ಮೆ ಪ್ರಕಟವಾಗಿತ್ತು.
ಯುವಕ ವಿದ್ಯುತ್ ತಂತಿ ಸ್ಪರ್ಶಿಸುತ್ತ ಇದ್ದುಕೊಂಡೇ ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿದ್ದನೇ? ತಂತಿ ಸ್ಪರ್ಶಿಸುವುದಲ್ಲದಿದ್ದರೆ ಆತ ಪಿಯುಸಿಯಲ್ಲಿ ಉತ್ತೀರ್ಣನಾಗುತ್ತಿರಲಿಲ್ಲವೇ? ‘ಸಿಡಿಲು ಬಡಿದು ಮನೆಯಲ್ಲಿ ಕುಳಿತಿದ್ದ ಯುವಕ ಸಾವು’ ಎಂದು ಇನ್ನೊಂದು ತಲೆಬರಹ.
ಕರೋನಾ ಲಾಕ್‌ಡೌನ್ ಸಮಯದಲ್ಲಿ ಬಂದದ್ದು. ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ- ಯುವಕ ಮನೆಯಲ್ಲಿ ಕುಳಿತಿದ್ದು ಲಾಕ್‌ಡೌನ್ ಘೋಷಣೆಯಿಂದ ಅಲ್ಲ. ಸಿಡಿಲು ಬಡಿದಿದ್ದರಿಂದ ಮನೆಯಲ್ಲಿ ಕುಳಿತಿದ್ದ. ಇಲ್ಲವಾದರೆ ಊರೆಲ್ಲ ಸುತ್ತುತ್ತಿದ್ದ ಎಂಬ ಅರ್ಥ ಬರುತ್ತದೆ! ಅದಕ್ಕಿಂತ, ‘ಮನೆಯಲ್ಲಿ ಕುಳಿತಿದ್ದ ಯುವಕನಿಗೆ ಸಿಡಿಲು ಬಡಿದು ಸಾವು’ ಎಂದಿದ್ದರೆ ಒಂದೇ ನಿರ್ದಿಷ್ಟ ಅರ್ಥದ ವಾಕ್ಯ ಆಗುತ್ತಿತ್ತು.
‘ಪ್ಯಾಂಟ್ ಕದ್ದು ಟೀ ಮಾರುತ್ತಿದ್ದವನ ಅಂಗಡಿ ಒಳಗೆ ಎಸೆದು ಹೋದ ಕೋತಿ’ ಕಥೆಯೂ ಅಂಥದ್ದೇ. ಟೀ ಮಾರುತ್ತಿದ್ದವನೇ ಪ್ಯಾಂಟ್ ಕದ್ದವನೇನೋ ಎಂಬ ಅನುಮಾನ ಕಾಡುತ್ತದೆ. ನಿಜವಾಗಿ ನಡೆದಿದ್ದೇನೆಂದರೆ ಕೋತಿಯೊಂದು ಹತ್ತಿರದ ಬಟ್ಟೆಯಂಗಡಿಯಿಂದ ಪ್ಯಾಂಟ್ ಕದ್ದುಕೊಂಡು ಬಂದು, ಟೀ ಅಂಗಡಿಯ ಒಳಗೆ ಎಸೆದಿದೆ. ತನಗೆ ಪ್ರತಿದಿನವೂ ಬನ್ ತಿನ್ನಲು ಕೊಡುತ್ತಿದ್ದ ಟೀ ಅಂಗಡಿಯವನ ಮೇಲೆ ಕೃತಜ್ಞತೆಯಿಂದ ಇರಬಹುದು. ಆದರೆ ಈ ರಸವಾರ್ತೆ ಯನ್ನು ನಿರೂಪಿಸಿದವರು ಮಾತ್ರ ಟೀ ಮಾರುವವನು ಈ ಮೊದಲು ಪ್ಯಾಂಟ್ ಕದಿಯುವವ ನಾಗಿದ್ದನೇನೋ ಎಂಬ ಸಂದೇಹ ಬರುವಂತೆ ವಾಕ್ಯ ರಚಿಸಿದ್ದಾರೆ.
ಇಂಥವು ಪತ್ರಿಕೆಗಳಲ್ಲಿ ಆಗಾಗ ಕಾಣಿಸುತ್ತಿರುತ್ತವೆ. ‘ಹಾವು ಕಚ್ಚಿ ಮಠದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಇಮ್ಮಡಿ ಗುರುಮಲ್ಲ ಸ್ವಾಮೀಜಿ ಸಾವು’ ಅಂತೆ. ಅಂದರೆ ಸ್ವಾಮೀಜಿಯವರು ಸತ್ತದ್ದು ಹಾವು ಕಚ್ಚಿದ್ದರಿಂದ ಅಲ್ಲ, ಮಠದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದದ್ದೇ ಹಾವು ಕಚ್ಚಿದ್ದರಿಂದ ಅಂತಾಯ್ತು! ‘ಯಂತ್ರ ಕುತ್ತಿಗೆಗೆ ತಾಗಿ ಮರ ಕಡಿಯುವಾಗ ದುರ್ಮರಣ’- ಯಂತ್ರ ಕುತ್ತಿಗೆಗೆ ತಾಗಿದ್ದರಿಂದಲೇ ಮರ ಕಡಿಯುವುದು ಸಾಧ್ಯವಾಯ್ತು!
‘ಕಾರು ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ೨ ವರ್ಷದ ಹುಲಿ ಸಾವು’- ರಸ್ತೆ ದಾಟುವುದು ಹುಲಿಗೆ ಸಾಧ್ಯ ವಾದದ್ದು ಕಾರು ಡಿಕ್ಕಿ ಹೊಡೆದಿದ್ದರಿಂದಲೇ! ಇಲ್ಲವಾದರೆ ಅದು ನಿಂತಲ್ಲೇ ನಿಂತಿರುತ್ತಿತ್ತು. ‘ರಸ್ತೆಗೆ ಬಿದ್ದ ಲಕ್ಷಾಂತರ ಜನರು ಊಟ ಮಾಡುವ ಚಿಕನ್ ಬಿರ್ಯಾನಿ!’ ಲಕ್ಷಾಂತರ ಜನರು ರಸ್ತೆಗೆ ಬಿದ್ದದ್ದೇಕೆ? ಅವರಿಗೇನಾದರೂ ನಿಂತಲ್ಲೇ ಲಕ್ವ ಹೊಡೆಯಿತೇ? ಇನ್ನೊಂದು ಆಲ್‌ಟೈಮ್ ಗ್ರೇಟ್ ಆಣಿಮುತ್ತು- ‘ಮುಖ್ಯಮಂತ್ರಿಯಿಂದ ಅತ್ಯಾಚಾರಕ್ಕೊಳಗಾದ ಮಹಿಳೆಗೆ ಸಾಂತ್ವನ’ ಇದಕ್ಕೆ ಹೆಚ್ಚಿನ ವ್ಯಾಖ್ಯಾನವೇನೂ ಬೇಕಾಗಿಲ್ಲ.
ಹೀಗೆಯೇ ಇನ್ನೂ ಕೆಲವು ಚಿರಸ್ಮರಣೀಯ ಆಣಿಮುತ್ತುಗಳು ಇಲ್ಲಿವೆ ನೋಡಿ: ‘ಮುಖಕ್ಕೆ ಬಟ್ಟೆ ಕಟ್ಟಿಕೊಂಡು ರಸ್ತೆ ಬದಿ ಮಲಗಿದ್ದ ದನ ಕಳವು: ಇಬ್ಬರ ಬಂಧನ’. ದನ ಏಕೆ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ರಸ್ತೆ ಬದಿ ಮಲಗಿದ್ದು? ವಿದ್ಯುದ್ದೀಪಗಳ ಬೆಳಕಿನ ಪ್ರಖರತೆಯಿಂದ ತಪ್ಪಿಸಿಕೊಳ್ಳಲಿಕ್ಕೆ ಇರಬಹುದೇ? ‘ಕಾಡಿಗೆ ಓಡಿಸುವಾಗ ದಾಳಿ ನಡೆಸಿ ರೈತನ ಕೊಂದ ಆನೆ’ ಇದರಲ್ಲಿ ಕಾಡಿಗೆ ಓಡಿಸಿದ್ದು ಯಾರು ಯಾರನ್ನು? ‘ಹಳ್ಳಕ್ಕೆ ಬಿದ್ದ ಬೆಳಗಾವಿಯಿಂದ ಮಂಗಳೂರಿಗೆ ಬರುತ್ತಿದ್ದ ಬಸ್’- ಬೆಳಗಾವಿ ಯಾವಾಗ ಹಳ್ಳಕ್ಕೆ ಬಿದ್ದದ್ದು? ಬೆಳಗಾವಿಯಿಂದ ಮಂಗಳೂರಿಗೆ ಬರುತ್ತಿದ್ದ ಬಸ್ಸು ಹಳ್ಳಕ್ಕೆ ಬಿತ್ತೆಂದು ಹೇಳುವುದಕ್ಕೆ ಬೆಳಗಾವಿಯನ್ನೇ ಹಳ್ಳಕ್ಕೆ ಬೀಳಿಸುವುದು ನ್ಯಾಯವೇ? ‘ಗೂಗಲ್ ಪೇ ಮಾಡಿ ಸಿಕ್ಕಿಬಿದ್ದ ನಟ ಸೈಫ್ ಗೆ ಇರಿದಿದ್ದ ಆರೋಪಿ’- ಗೂಗಲ್ ಪೇ ಮಾಡಿ ಸಿಕ್ಕಿಬಿದ್ದವನು ನಟ ಸೈಫ್ ಅಲ್ಲ ಮಾರಾಯ್ರೆ! ‘ಸೀರೆ ಉಟ್ಟ ಆಮೀರ್ ಖಾನ್ ಮಗಳು ಇರಾಗೆ ಬಾಯ್ ಫ್ರೆಂಡ್‌ನಿಂದ ಮುತ್ತಿನ ಮಳೆ’- ಆಮೀರ್‌ಖಾನ್ ಸೀರೆ ಉಟ್ಟಿಲ್ಲ, ಹೆಡ್‌ಲೈನ್ ಓದತೊಡಗುತ್ತಿದ್ದಂತೆ ಹಾಗನಿಸುತ್ತದೆ ಅಷ್ಟೇ! ‘ವಿಜ್ಞಾನದ ಸಹಾಯ ದಿಂದ ಬಂಜೆಯಾಗಿದ್ದ ಬಾಲಿವುಡ್ ನಟಿ ಕಾಜೋಲ್ ತಂಗಿ ಮಗು ಮಾಡಿ ಕೊಂಡದ್ದು ಹೇಗೆ?’- ಬಂಜೆಯಾಗಿದ್ದದ್ದು ಬಾಲಿವುಡ್ ನಟಿ ಕಾಜೋಲ್ ಅಲ್ಲ, ಆಕೆಯ ತಂಗಿ.
ಅಲ್ಲದೇ ವಿಜ್ಞಾನದ ಸಹಾಯದಿಂದ ಬಂಜೆಯಾಗುವುದು ಎಂದರೇನು? ‘ಯುಪಿಎಸ್‌ಸಿ ಪರೀಕ್ಷೆ ಯಲ್ಲಿ 177ನೇ ರ‍್ಯಾಂಕ್ ಪಡೆದ ಏಳು ವರ್ಷದ ಬಾಲಕಿ ತಾಯಿ!’ ಗಾಬರಿಯಾಗಬೇಡಿ, 177ನೇ ರ‍್ಯಾಂಕ್ ಪಡೆದದ್ದು ಏಳು ವರ್ಷದ ಬಾಲಕಿ ಅಲ್ಲ, ಆ ಏಳು ವರ್ಷದ ಬಾಲಕಿ ಆಗಲೇ ತಾಯಿ ಆಗಿರುವುದೂ ಅಲ್ಲ, ಏಳು ವರ್ಷದ ಹೆಣ್ಣುಮಗಳಿರುವ ತಾಯಿಯೊಬ್ಬಳು ಯುಪಿಎಸ್‌ಸಿ ಪರೀಕ್ಷೆ ಯಲ್ಲಿ 177ನೇ ರ‍್ಯಾಂಕ್ ಪಡೆದಳೆಂಬ ಸುದ್ದಿಯ ತಲೆಬರಹ ಇದು. ‘ಶವವಾದ ಗದ್ದೆಯತ್ತ ಹೋಗಿದ್ದ ತಾಯಿ, ಮಗಳು’- ಶವವಾದ ಗದ್ದೆ ಎಂದರೇನು? ಗದ್ದೆ ಶವವಾಗುವುದು ಹೇಗೆ? ಆದದ್ದೇನೆಂದರೆ ಗದ್ದೆಗೆ ಹೋಗಿಬರುತ್ತೇವೆಂದ ತಾಯಿ-ಮಗಳು ಅಲ್ಲೇ ಪಕ್ಕದ ಕೆರೆಯೊಂದರಲ್ಲಿ ಶವಗಳಾಗಿ ಸಿಕ್ಕಿದರಂತೆ.
ಅವರಿಬ್ಬರು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಮೊದಲಿಗೆ ನಂಬಲಾಗಿತ್ತಾದರೂ ಆಮೇಲೆ ಅದೊಂದು ಕೊಲೆ ಎಂದು ಗೊತ್ತಾಗಿದೆಯಂತೆ. ‘ಅನುಮಾನಾಸ್ಪದ ರೀತಿಯಲ್ಲಿ ತಾಯಿ-ಮಗಳ ಸಾವು’ ಎಂದು ಬರೆದಿದ್ದರೂ ಸಾಕಿತ್ತು, ಗದ್ದೆಯನ್ನು ಶವವಾಗಿಸುವ ಅಗತ್ಯವಿರಲಿಲ್ಲ.
‘ಕೈಯಲ್ಲಿ ಮದುವೆಯಾದ ಮರುದಿನವೇ ಬಂದೂಕು’- ಕೈ ಹಿಡಿದು ಮದುವೆಯಾಗುವುದು ಗೊತ್ತು, ಪಾಣಿಗ್ರಹಣ ಎನ್ನುವುದು ಅದನ್ನೇ. ಆದರೆ ‘ಕೈಯಲ್ಲಿ ಮದುವೆಯಾಗುವುದು’ ಅಂದರೆ ಏನರ್ಥ? ‘ಮದುವೆಯಾದ ಮರುದಿನವೇ ಕೈಯಲ್ಲಿ ಬಂದೂಕು’ ಎಂದಿರಬೇಕಾಗಿದ್ದ ತಲೆಬರಹ ಅಸ್ತವ್ಯಸ್ತ ಪರಿವರ್ತಕದಿಂದ ಹೀಗಾಗಿದೆ.
‘ಪದ್ಮನಾಭನಗರದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನಿವಾಸಕ್ಕೆ ಪೇಜಾವರ ಮಠದ ಸ್ವಾಮೀಜಿ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದರು’. ಹಾಗಾದರೆ ಪದ್ಮನಾಭನಗರದ ಈಗಿನ ಪ್ರಧಾನಿ ಯಾರಿರಬಹುದು!? ‘ಹವಾನಿಯಂತ್ರಿತ ಕಾಂಚಿ ಸೀರೆಗಳ ಶೋ ರೂಮ್’ಗೆ ಭೇಟಿ ಕೊಡಿ. ಅಲ್ಲಿರುವ ಕಾಂಚಿ ಸೀರೆಗಳೇ ಹವಾನಿಯಂತ್ರಿತವೇ ಅಥವಾ ಶೋ ರೂಮ್ ಹವಾನಿಯಂತ್ರಿತವೇ ಎಂದು ಮಾತ್ರ ಕೇಳಬೇಡಿ!
ಇನ್ನೊಂದು ನಮೂನೆಯ ಅಸ್ತವ್ಯಸ್ತತೆ ರಾಧೆಯಿಂದ, ಅಲ್ಲ ‘ರಾದ’ ಪ್ರತ್ಯಯದಿಂದ, ಆಗುತ್ತದೆ. ಉದಾಹರಣೆಗೆ ‘ಮಿದುಳಿನ ನಿಷ್ಕ್ರಿಯತೆಯಿಂದ ನಟರಾದ ಸಂಚಾರಿ ವಿಜಯ್ ನಿಧನ’. ಅವರು ನಟರಾದದ್ದು ಮಿದುಳಿನ ನಿಷ್ಕ್ರಿಯತೆಯಿಂದಲೇ? ‘ಶಾಲೆಯಲ್ಲಿ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು’. ಅವರು ಶಿಕ್ಷಣ ಸಚಿವರಾದದ್ದು ಶಾಲೆ ಯಲ್ಲೇ? ವಿಧಾನಸೌಧದೆದುರು ಪ್ರತಿಜ್ಞಾವಿಧಿ ಸಮಾರಂಭದಲ್ಲಿ ಅಲ್ಲವೇ? ‘ಪುಸ್ತಕ ಬಿಡುಗಡೆ ಸಮಾರಂಭದ ವೇದಿಕೆಯಲ್ಲಿ ವಿಶ್ವವಾಣಿ ಸಂಪಾದಕರಾದ ವಿಶ್ವೇಶ್ವರ ಭಟ್ಟರು ಈಗಿನ ಸಾಹಿತ್ಯ ಲೋಕದ ಸಂಕುಚಿತತೆಯ ಬಗ್ಗೆ ಮಾತನಾಡಿದರು’.
ಭಟ್ಟರು ವಿಶ್ವವಾಣಿ ಸಂಪಾದಕರಾದದ್ದು ಪುಸ್ತಕ ಬಿಡುಗಡೆ ಸಮಾರಂಭದ ವೇದಿಕೆಯಲ್ಲೇ? ‘ಇಂದು ರಷ್ಯಾದ ಅಧ್ಯಕ್ಷರಾದ ವ್ಲಾದಿಮಿರ್ ಪುಟಿನ್ ಜತೆಗೆ ಅಮೆರಿಕ ಅಧ್ಯಕ್ಷರಾದ ಟ್ರಂಪ್ ಮಾತು ಕತೆ’. ವ್ಲಾದಿಮಿರ್ ಪುಟಿನ್ ಇಂದು ರಷ್ಯಾದ ಅಧ್ಯಕ್ಷರಾದದ್ದೇ? ಟ್ರಂಪ್ ಅಮೆರಿಕದ ಅಧ್ಯಕ್ಷ ರಾದದ್ದು ವ್ಲಾದಿಮಿರ್ ಪುಟಿನ್ ಜತೆಗೇ? ‘ಬೆಳಿಗ್ಗೆಬೆಳಿಗ್ಗೆ ತುಮಕೂರಿನಲ್ಲಿ ಪ್ರಿಯ ಮಿತ್ರರಾದ ರಾಮು ಮತ್ತು ಸೋಮು ಜೊತೆಗೆ ಉಪಾಹಾರ ಚರ್ಚೆ ಹರಟೆ’ ಎಂದು ಫೇಸ್‌ಬುಕ್‌ನಲ್ಲಿ ಪತ್ರಕರ್ತ ರೊಬ್ಬರು ಫೋಟೊ ಹಾಕಿಕೊಂಡಿದ್ದರು.
ಬೆಳಿಗ್ಗೆ ಬೆಳಿಗ್ಗೆ ತುಮಕೂರಿನಲ್ಲಿ ಪ್ರಿಯ ಮಿತ್ರ ಆಗುವುದೆಂದರೇನು? ಬೆಳಿಗ್ಗೆಬೆಳಿಗ್ಗೆ ಆದದ್ದು ಅವರ ಭೇಟಿ ಮಾತ್ರ. ಈ ಎಲ್ಲ ವಾಕ್ಯಗಳಲ್ಲಿ ‘ರಾದ’ ತೆಗೆದರೆ ಗೊಂದಲ ನಿವಾರಣೆಯಾಗುತ್ತದೆ. ವ್ಯಕ್ತಿಗಳ ಹೆಸರಿನೆದುರಿಗೆ ‘ಶ್ರೀಯುತರಾದ’ ಎಂದು ಸೇರಿಸುವ ವಾಕ್ಯಗಳಲ್ಲೂ ಅಷ್ಟೇ. ರಾದ ಬೇಕಿಲ್ಲ.
ತಲೆಬರಹಗಳಲ್ಲಿ ಶೀಘ್ರ ಎಂಬ ಪದ soon, shortly ಎಂಬರ್ಥದಲ್ಲಿ ಬಳಕೆಯಾಗುತ್ತದೆ. ಹೆಚ್ಚಾಗಿ ಅದು ‘ಶೀಘ್ರದಲ್ಲೇ’ ಎಂಬುದರ ಹ್ರಸ್ವ ರೂಪವಾಗಿರುತ್ತದೆ. ಆದರೆ ಕೆಲವೊಮ್ಮೆ ಅದು ಯಾವ ಪದಕ್ಕೆ ವಿಶೇಷಣವಾಗಿ ಇರಬೇಕಿತ್ತೋ ಅಲ್ಲಿರದೆ, ಬೇರೆಯೇ ಒಂದು ಪದದ ಪಕ್ಕದಲ್ಲಿ ವಿರಾಜಿಸಿ ಆಭಾಸಕ್ಕೆ ಎಡೆಮಾಡುತ್ತದೆ.
‘ಕಡತಗಳ ಶೀಘ್ರ ವಿಲೇವಾರಿ’ಗೂ ‘ಶೀಘ್ರ ಕಡತಗಳ ವಿಲೇವಾರಿ’ಗೂ ವ್ಯತ್ಯಾಸ ಇದೆಯಲ್ಲವೇ? ಇನ್ನೊಂದು ಉದಾಹರಣೆ: ‘ಶೀಘ್ರ ಅಕಾಡೆಮಿ ಅಧ್ಯಕ್ಷರ ನೇಮಕ’. ಅಕಾಡೆಮಿಗಳಲ್ಲಿ ಶೀಘ್ರ ಅಕಾಡೆಮಿ ಮತ್ತು ಮಂದ ಅಕಾಡೆಮಿ ಎಂಬ ಎರಡು ವಿಧಗಳಿವೆಯೇ? ಈಗ ಅಧ್ಯಕ್ಷರ ನೇಮಕ ಆಗುತ್ತಿರುವ ಅಕಾಡೆಮಿಯು ಶೀಘ್ರ ವಿಧದ್ದೇ? ಹಾಗೆ ಅನುಮಾನಕ್ಕೆ ಆಸ್ಪದವಿಲ್ಲದಂತೆ, ‘ಶೀಘ್ರದಲ್ಲೇ ಅಕಾಡೆಮಿ ಅಧ್ಯಕ್ಷರ ನೇಮಕ’ ಎಂದು ಬರೆಯುವುದೊಳ್ಳೆಯದು.
‘ಶೀಘ್ರ ಮಕ್ಕಳಿಗೂ ಕೋವಿಡ್ ಲಸಿಕೆ’ ಎಂಬ ತಲೆಬರಹ. ‘ಶೀಘ್ರ ಮಕ್ಕಳು’ ಅಂದರೆ ತಾಯಿಯ ಗರ್ಭದಲ್ಲಿ ಒಂಬತ್ತು ತಿಂಗಳ ವಾಸ ಮುಗಿಯುವ ಮೊದಲೇ ಹುಟ್ಟಿದವರು? ಈ ತಲೆಬರಹವನ್ನು ‘ಮಕ್ಕಳಿಗೂ ಶೀಘ್ರ ಕೋವಿಡ್ ಲಸಿಕೆ’ ಎಂದು ಬರೆದರೂ ಸಮಂಜಸವೆನಿಸದು. ‘ಶೀಘ್ರದಲ್ಲೇ ಮಕ್ಕಳಿಗೂ ಕೋವಿಡ್ ಲಸಿಕೆ’ ಎಂದು ಬರೆಯುವುದೇ ಒಳ್ಳೆಯದು.
ಹಿಂದೊಮ್ಮೆ ‘ಲಾರಾ ಮಡಿಲಿಗೂ ಶೀಘ್ರ ಮಗು ಎಂಟ್ರಿ’ ಎಂಬ ತಲೆಬರಹ ಬಂದಿತ್ತು. ಶೀಘ್ರ ಮಗು ಅಂದರೆ ಪ್ರಿಮೆಚ್ಯೂರ್ ಬೇಬಿ? ಅಥವಾ, ದೊಡ್ಡವನಾಗಿ ಉಸ್ಸೇನ್ ಬೋಲ್ಟ್‌ನಂತಾಗುವ ಬೇಬಿ? ‘ಶೀಘ್ರ ತೋಟಗಾರಿಕಾ ಸಚಿವರ ಜತೆ ಸಭೆ’- ಶೀಘ್ರ ತೋಟಗಾರಿಕೆ ಎಂದರೇನು? ‘ಹಿರಿಯ ನಟಿ ಲೀಲಾವತಿ ಸ್ಥಿತಿ ಗಂಭೀರ! ದಿಢೀರ್ ವೈದ್ಯರಿಂದ ಶಾಕಿಂಗ್ ನ್ಯೂಸ್!’- ಎಂಬಿಬಿಎಸ್ ಓದಿ ಸ್ನಾತ ಕೋತ್ತರ ಶಿಕ್ಷಣವನ್ನೂ ಪಡೆದು ವೈದ್ಯರಾದವರು ದಿಢೀರ್ ವೈದ್ಯರಲ್ಲ. ಶಾಕಿಂಗ್ ನ್ಯೂಸ್ ಕೊಟ್ಟದ್ದು ಮಾತ್ರ ದಿಢೀರ್ ಆಗಿ.
ಇವೆಲ್ಲ ಘೋರಪ್ರಮಾದಗಳೇನಲ್ಲ. ಕೆಲವೊಮ್ಮೆ ಭಾಷೆಯ ಪರಿಮಿತಿ, ಕೆಲವೊಮ್ಮೆ ಅಸಡ್ಡೆಯ ರೀತಿ. ಬರೆದಿದ್ದನ್ನು ಒಂದೆರಡು ಸಲ ಓದಿನೋಡಿದರೆ ಸರಿಪಡಿಸುವುದಕ್ಕಾಗುತ್ತದೆ. ಹಾಗೇ ಬಿಟ್ಟರೆ ಹಾಸ್ಯಾಸ್ಪದ ಆಗುತ್ತದೆ ಅಷ್ಟೇ. ಕೊನೆಯಲ್ಲಿ ನಿಮಗೊಂದು ಪ್ರಶ್ನೆ: ‘ಮಹಿಳೆಯರ ಭಾರ ಎತ್ತುವ ಸ್ಪರ್ಧೆ’ಯನ್ನು ನೀವು ಹೇಗೆ ಅರ್ಥೈಸುತ್ತೀರಿ?