ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Roopa Gururaj Column: ಅದ್ಯಧಾರಾ ಸದಾಧಾರಾ: ಭೋಜಪ್ರಬಂಧದ ಅಮರ ಕಾವ್ಯ

ಆಸ್ಥಾನದಲ್ಲಿ ಕವಿಯೊಬ್ಬ ಪ್ರಾಸಬದ್ಧವಾದ, ಚಮತ್ಕಾರಭರಿತ ಪದ್ಯವೊಂದನ್ನು ವಾಚಿಸಿದಾಗ, ಭೋಜರಾಜ ಭಾವುಕನಾಗಿ ಎದ್ದು ನಿಂತು, ಅಕ್ಷರ ಲಕ್ಷ! ಎಂದು ಘೋಷಿಸಿದ. ಅಂದರೆ, ಆ ಪದ್ಯದ ಒಂದೊಂದು ಅಕ್ಷರಕ್ಕೂ ಒಂದೊಂದು ಲಕ್ಷದಂತೆ ಧನಸಹಾಯ! ಕಲೆಗೆ ಮತ್ತು ಸರಸ್ವತಿಯ ಪುತ್ರರಿಗೆ ರಾಜ ನೀಡುತ್ತಿದ್ದ ಗೌರವ ಅಂತಹದ್ದಾಗಿತ್ತು.

ಒಂದೊಳ್ಳೆ ಮಾತು

ಧಾರಾನಗರಿಯ ಅರಮನೆ ಅಂದು ಎಂದಿನಂತೆ ಕಾವ್ಯದ ಗಂಧದಿಂದ ಕಂಗೊಳಿಸುತ್ತಿತ್ತು. ಮಾಳವದೇಶದ ಅರಸ ಭೋಜರಾಜ ಸಿಂಹಾಸನದ ಮೇಲೆ ಕುಳಿತಿದ್ದರೂ, ಅವನ ದೃಷ್ಟಿ ಮಾತ್ರ ಅರಮನೆಯ ದ್ವಾರದ ಕಡೆಯೇ ಇತ್ತು. ರಾಜನಿಗೆ ರಾಜ್ಯದ ವೈಭವಕ್ಕಿಂತ, ಸಂಪತ್ತಿ ಗಿಂತ ತನ್ನ ಆಸ್ಥಾನದ ಕವಿಗಳು ಉಲಿಸುವ ಕಾವ್ಯದ ಸಾಲುಗಳೇ ಪರಮ ಆನಂದವನ್ನು ನೀಡುತ್ತಿದ್ದವು.

ಆಸ್ಥಾನದಲ್ಲಿ ಕವಿಯೊಬ್ಬ ಪ್ರಾಸಬದ್ಧವಾದ, ಚಮತ್ಕಾರಭರಿತ ಪದ್ಯವೊಂದನ್ನು ವಾಚಿಸಿ ದಾಗ, ಭೋಜರಾಜ ಭಾವುಕನಾಗಿ ಎದ್ದು ನಿಂತು, ಅಕ್ಷರ ಲಕ್ಷ! ಎಂದು ಘೋಷಿಸಿದ. ಅಂದರೆ, ಆ ಪದ್ಯದ ಒಂದೊಂದು ಅಕ್ಷರಕ್ಕೂ ಒಂದೊಂದು ಲಕ್ಷದಂತೆ ಧನಸಹಾಯ! ಕಲೆಗೆ ಮತ್ತು ಸರಸ್ವತಿಯ ಪುತ್ರರಿಗೆ ರಾಜ ನೀಡುತ್ತಿದ್ದ ಗೌರವ ಅಂತಹದ್ದಾಗಿತ್ತು.

ಇಡೀ ಆಸ್ಥಾನದಲ್ಲಿ ಎಷ್ಟು ಜನ ಪಂಡಿತರಿದ್ದರೂ ಭೋಜರಾಜನ ಮನಸ್ಸು ಸದಾ ಹಂಬಲಿಸುತ್ತಿದ್ದುದು ಆ ಒಬ್ಬನಿಗಾಗಿ... ಅವನೇ ‘ಕವಿರತ್ನ ಕಾಳಿದಾಸ.’ ಕಾಳಿದಾಸ ಮತ್ತು ಭೋಜರಾಜನ ಸ್ನೇಹವು ಕೇವಲ ಒಬ್ಬ ರಾಜ ಮತ್ತು ಆಸ್ಥಾನದ ಕವಿಯ ನಡುವಿನದ್ದಾಗಿರ ಲಿಲ್ಲ; ಅದು ಎರಡು ಶರೀರಗಳ ನಡುವಿನ ಒಂದೇ ಆತ್ಮದ ಬಂಧ. ಇತಿಹಾಸಕಾರರು ಕಾಳಿದಾಸನನ್ನು ಚಂದ್ರಗುಪ್ತ ವಿಕ್ರಮಾದಿತ್ಯನ ಕಾಲದವನೆಂದು ಕರೆದರೂ, ಸಾಹಿತ್ಯದ ಲೋಕ ಮಾತ್ರ ಇವರಿಬ್ಬರನ್ನೂ ಬೇರ್ಪಡಿಸಲಾಗದ ಜೋಡಿಯನ್ನಾಗಿ ನೋಡಿತ್ತು.

ಇದನ್ನೂ ಓದಿ: Roopa Gururaj Column: ಅಮೆಜಾನ್‌ ಕಾಡಿನ ಪುಟ್ಟ ಜೇನಿನ ದೊಡ್ಡ ಕಥೆ

ಒಮ್ಮೆ ಸಣ್ಣ ಮುನಿಸಿನಿಂದ ಕಾಳಿದಾಸ ಅರಮನೆ ತೊರೆದು ಹೋದಾಗ ಭೋಜರಾಜನಿಗೆ ಜಗತ್ತೇ ಶೂನ್ಯವೆನಿಸಿತು. ಕವಿ ಇಲ್ಲದ ಧಾರಾನಗರಿ ಅನಾಥವಾಯಿತು. ರಾಜನು ತನ್ನ ಗೆಳೆಯನನ್ನು ಮರಳಿ ಪಡೆಯಲು ಒಂದು ಕಠಿಣವಾದ ಒಗಟಿನ ಪದ್ಯವನ್ನು ಸಾರಿದನು. ವೇಷ ಮರೆಸಿಕೊಂಡು ದೇಶ ಸಂಚಾರ ಮಾಡುತ್ತಿದ್ದ ಕಾಳಿದಾಸ, ಆ ಒಗಟನ್ನು ಕೇಳಿ ಅದನ್ನು ಪೂರ್ಣಗೊಳಿಸಿ ಅರಮನೆಗೆ ಕಳುಹಿಸಿದನು. ಆ ಸಾಲುಗಳನ್ನು ನೋಡಿದ ತಕ್ಷಣ ಭೋಜರಾಜನ ಕಣ್ಣುಗಳು ಆನಂದಭಾಷ್ಪದಿಂದ ತುಂಬಿ ಬಂದವು. ಇದು ನನ್ನ ಕಾಳಿದಾಸನದೇ ಬರಹ! ಎಂದು ಓಡಿ ಹೋಗಿ ಗೆಳೆಯನನ್ನು ಆಲಿಂಗಿಸಿಕೊಂಡಾಗ ಇಡೀ ಆಸ್ಥಾನವೇ ಭಾವುಕವಾಯಿತು.

ಒಮ್ಮೆ ಭೋಜರಾಜನಿಗೆ ತೀವ್ರವಾದ ಶಿರೋ ವೇದನೆ ಕಾಣಿಸಿಕೊಂಡಿತು. ಅರಮನೆಯ ವೈದ್ಯರೆಲ್ಲ ಕೈಚೆಲ್ಲಿದಾಗ, ದೇವಲೋಕದ ವೈದ್ಯರಾದ ಅಶ್ವಿನೀ ದೇವತೆಗಳೇ ಭೂಮಿಗೆ ಬಂದರು. ರಾಜನಿಗೆ ಶಸ್ತ್ರಚಿಕಿತ್ಸೆ ಮಾಡುವುದು ಅನಿವಾರ್ಯವಾಗಿತ್ತು. ಆ ಭೀಕರ ನೋವನ್ನು ರಾಜ ತಡೆದುಕೊಳ್ಳಲೆಂದು ಅಶ್ವಿನೀ ದೇವತೆಗಳು ಒಂದು ಚಮತ್ಕಾರಿಕ ಚೂರ್ಣವನ್ನು ತಂದರು, ಅದೇ ‘ಮೋಹಚೂರ್ಣ’.

ಇಂದಿನ ಆಧುನಿಕ ವೈದ್ಯಕೀಯ ಜಗತ್ತಿನ ಅರಿವಳಿಕೆಯಂತೆ ಕಾರ್ಯನಿರ್ವಹಿಸುವ ಆ ಚೂರ್ಣವನ್ನು ರಾಜನ ಮೂಗಿಗೆ ಹಿಡಿಯಲಾಯಿತು. ರಾಜ ಗಾಢವಾದ ನಿದ್ರೆಗೆ ಜಾರಿದನು. ದೇವವೈದ್ಯರು ರಾಜನ ತಲೆಬುರುಡೆಯನ್ನು ತೆರೆದು, ರೋಗವನ್ನು ನಿವಾರಿಸಿ, ಪುನಃ ಗಾಯ ವನ್ನು ಮಾಯಿಸಿ ಎಚ್ಚರಿಸಿದರು. ರಾಜ ಕಣ್ಣು ಬಿಟ್ಟಾಗ ಅವನಿಗೆ ಎದುರಿಗೆ ಮೊದಲು ಕಂಡದ್ದೇ ಕಾಳಿದಾಸನ ಮುಖ.

ಕಾಲ ಉರುಳಿತು. ಒಮ್ಮೆ ಕಾಳಿದಾಸನಿಗೆ ತನ್ನ ಮೇಲಿರುವ ಸ್ನೇಹದ ಆಳ ಎಷ್ಟು ಎಂಬು ದನ್ನು ಪರೀಕ್ಷಿಸಲು ಭೋಜರಾಜನಿಗೆ ಒಂದು ಚೇಷ್ಟೆಯ ಆಲೋಚನೆ ಬಂದಿತು. ತಾನು ನಿಧನನಾಗಿದ್ದೇನೆ ಎಂಬ ಸುಳ್ಳು ಸುದ್ದಿಯನ್ನು ಭೋಜರಾಜನೇ ಹರಡಿಸಿದನು. ಈ ಆಘಾತ ಕಾರಿ ಸುದ್ದಿಯನ್ನು ಕೇಳಿದ ತಕ್ಷಣ, ಮಹಾಕವಿ ಕಾಳಿದಾಸನ ಹೃದಯವೇ ಒಡೆದು ಹೋದಂತಾಯಿತು.

ಆ ತೀವ್ರ ಆಘಾತದಲ್ಲಿ ಕಾಳಿದಾಸನ ಬಾಯಿಂದ ಭೋಜರಾಜನನ್ನು ಕುರಿತು ಆ ಪ್ರಸಿದ್ಧ ಚರಮಶ್ಲೋಕ ಹೊರಟಿತು: ‘ಅದ್ಯ ಧಾರಾ ನಿರಾಧಾರಾ ನಿರಾಲಂಬಾ ಸರಸ್ವತೀ...’ (ಇಂದಿಗೆ ಧಾರೆಗೆ ಇದ್ದ ಆಧಾರ ಕಳಚಿಹೋಯಿತು, ಭೋಜರಾಜನಿಲ್ಲದ ಈ ಜಗತ್ತಿನಲ್ಲಿ ಸರಸ್ವತಿ ಯೂ ನಿರಾಶ್ರಿತಳಾದಳು!) ತನ್ನ ಗೆಳೆಯ ತನಗಾಗಿ ಕಣ್ಣೀರು ಹಾಕುತ್ತಾ ಹಾಡಿದ ಆ ಶ್ಲೋಕ ವನ್ನು ಕೇಳಿ, ಭೋಜರಾಜನು ತಕ್ಷಣವೇ ವೇಷ ಮರೆಸಿಕೊಂಡಿದ್ದ ಜಾಗದಿಂದ ಹೊರಬಂದು ಕಾಳಿದಾಸನನ್ನು ಗಟ್ಟಿಯಾಗಿ ಅಪ್ಪಿಕೊಂಡನು.

ತನ್ನ ಗೆಳೆಯ ಬದುಕಿ ಬಂದದ್ದನ್ನು ಕಂಡು ಆನಂದತುಂದಿಲನಾದ ಕಾಳಿದಾಸ, ತಕ್ಷಣವೇ ಆ ಶ್ಲೋಕದ ಸಾಲನ್ನು ಬದಲಾಯಿಸಿ ಹೀಗೆ ಪೂರ್ಣಗೊಳಿಸಿದನು: ‘ಅದ್ಯಧಾರಾ ಸದಾಧಾರಾ ಸದಲಂಬಾ ಸರಸ್ವತೀ...’ (ಅಂದರೆ, ಭೋಜರಾಜ ಮರಳಿ ಬಂದಿದ್ದಾನೆ!

ಇನ್ನು ಧಾರೆಗೆ ಸದಾ ಆಧಾರವಿದೆ, ಸರಸ್ವತಿಯೂ ಸನಾಥಳಾದಳು!) ಬಲ್ಲಾಳಸೇನನ ‘ಭೋಜಪ್ರಬಂಧ’ದಲ್ಲಿ ಕಾವ್ಯ, ವಿಜ್ಞಾನ, ಚಮತ್ಕಾರ ಹಾಗೂ ಎಲ್ಲಕ್ಕಿಂತ ಮಿಗಿಲಾಗಿ ಸಾಹಿತ್ಯ ಮತ್ತು ನಿಷ್ಕಲ್ಮಶವಾದ ಸ್ನೇಹದ ಮೇಲಿನ ಪ್ರೀತಿಯನ್ನು ಸಾರುವ ಒಂದು ಅಮರ ಕಾವ್ಯವಾಗಿ ಈ ವಿಷಯಗಳು ಇಂದಿಗೂ ಸಾಹಿತ್ಯಾಸಕ್ತರ ಮನಸ್ಸಿನಲ್ಲಿ ಉಳಿದಿದೆ. ಇಂತಹ ಅಪರೂಪದ ಸ್ನೇಹ, ಸಜ್ಜನರ ಸಹವಾಸ ನಿಜ ಜೀವನದಲ್ಲೂ ನಮ್ಮೆಲ್ಲರಿಗೂ ಸಿಗುವಂತಾ ಗಲಿ.

ರೂಪಾ ಗುರುರಾಜ್

View all posts by this author