ವಿಶ್ವರಂಗ
ಬದುಕಿನಲ್ಲಿ ಆಶಾಭಾವ ಬೇಕು, ಆದರೆ ಅದರ ಜತೆಗೆ ಜಗತ್ತಿನಲ್ಲಿ ಆಗುತ್ತಿರುವ ಬದಲಾವಣೆ ಗಳಿಗೂ ನಮ್ಮನ್ನು ನಾವು ಒಡ್ಡಿಕೊಳ್ಳಬೇಕು. ‘ಆಲ್ ಈಸ್ ವೆಲ್’ ಎನ್ನುವ ಟೊಳ್ಳು ಆಶಾಭಾವ ಚಲನಚಿತ್ರದಲ್ಲಷ್ಟೇ ಕೆಲಸ ಮಾಡಬಹುದೇ ವಿನಾ, ನಿಜಜೀವನದಲ್ಲಲ್ಲ.
ಸಮಯದ ಜತೆಗೆ ಹೆಜ್ಜೆ ಹಾಕುವುದನ್ನು ನಾವೆಲ್ಲರೂ ಕಲಿಯಬೇಕು, ಈ ಅವಶ್ಯಕತೆ ಹಿಂದಿ ಗಿಂತ ಇಂದು ಹೆಚ್ಚಾಗಿದೆ. ಇದರರ್ಥ ಹಿಂದೆ ಇರಲಿಲ್ಲ ಎಂದಲ್ಲ. ಸಮಯದ ಜತೆಜತೆಗೆ ಹೆಜ್ಜೆ ಹಾಕುವವರು ಮಾತ್ರ ಸಮಾಜದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯ. ಸಮಯಕ್ಕೆ ತಕ್ಕಂತೆ ಬದಲಾವಣೆಗಳು ಅವಶ್ಯಕ. ಸಮಯದ ಒಂದು ಹಂತದಲ್ಲಿ ಗೆದ್ದಿದ್ದ ವಿಚಾರಗಳು ಸೋಲುವುದು, ಸಮಯಕ್ಕೆ ತಕ್ಕಂತೆ ಬದಲಾಗಲಿಲ್ಲ, ಹೆಜ್ಜೆ ಹಾಕಲಿಲ್ಲ ಎನ್ನುವ ಕಾರಣಕ್ಕೆ ಎನ್ನುವುದಕ್ಕೆ ನೂರಾರು ಉದಾಹರಣೆಗಳು ನಮ್ಮ ಕಣ್ಣ ಮುಂದೆ ಸಿಗುತ್ತವೆ.
ಕೆಲವೊಂದು ಉದಾಹರಣೆಗಳ ವ್ಯಾಪ್ತಿ ಸೀಮಿತವಾಗಿದ್ದರೆ, ಕೆಲವೊಂದು ಉದಾಹರಣೆಗಳು ಜಗವ್ಯಾಪಿ. ನಮ್ಮೂರಲ್ಲಿ ಶೆಟ್ಟರ ದಿನಸಿ ಅಂಗಡಿ ಬಹಳ ಪ್ರಸಿದ್ಧವಾಗಿತ್ತು. ಅವರ ಅಂಗಡಿ ಯಲ್ಲಿ ಸಿಗದೆ ಇರುವ ವಸ್ತುವೇ ಇಲ್ಲ ಎಂದು ಊರಿನ ಜನ ಮಾತಾಡಿಕೊಳ್ಳುತ್ತಿದ್ದರು.
ಅವತ್ತಿಗೆ ಊರಿನ ಜನರ ಅವಶ್ಯಕತೆಯ ಎಲ್ಲಾ ವಸ್ತುಗಳನ್ನು ಶೆಟ್ಟರು ತಮ್ಮ ಅಂಗಡಿ ಯಲ್ಲಿ ಮಾರಲು ಇಟ್ಟಿದ್ದರು. ಬೇರೆ ಅಂಗಡಿಗಳಲ್ಲಿ ಒಂದಿದ್ದರೆ ಇನ್ನೊಂದಿಲ್ಲ ಎನ್ನುವಂಥ ಪರಿಸ್ಥಿತಿ. ಹೀಗಾಗಿ ಊರಿನ ಜನರೆ ಶೆಟ್ಟರ ಅಂಗಡಿಯಲ್ಲಿ ದಿನಬಳಕೆಯ ಎಲ್ಲಾ ವಸ್ತು ಗಳನ್ನೂ ಕೊಳ್ಳುತ್ತಿದ್ದರು. ಕೇವಲ ಎರಡರಿಂದ ಮೂರು ದಶಕದಲ್ಲಿ ಇಂಥ ಅಂಗಡಿಗಳು ಇಲ್ಲ ಎನ್ನುವಷ್ಟು ಕಡಿಮೆಯಾಗಿವೆ.
ಸಣ್ಣ ಪುಟ್ಟ ಊರುಗಳಲ್ಲಿ ಕೂಡ ಪುಟಾಣಿ ಸೂಪರ್ ಮಾರ್ಕೆಟ್‌ಗಳು ತಲೆಯೆತ್ತಿ ನಿಂತಿವೆ. ಒಂದು ಸಮಯದಲ್ಲಿ ಇತರರಿಗಿಂತ ಮುಂದಿದ್ದ, ಯಶಸ್ವಿಯಾಗಿದ್ದ ಶೆಟ್ಟರ ಅಂಗಡಿಗಳು, ಕಾಲಕ್ಕೆ ತಕ್ಕಂತೆ ಅಪ್‌ಗ್ರೇಡ್ ಆಗದ ಕಾರಣ ಇವತ್ತಿಗೆ ಇಲ್ಲವಾಗಿವೆ. ನಮ್ಮೂರ ಶೆಟ್ಟರ ಅಂಗಡಿ ಕಥೆ ನಿಮ್ಮೂರಲ್ಲಿ ಕೂಡ ಇನ್ನೊಂದು ಹೆಸರಿನಲ್ಲಿ ಇದ್ದೇ ಇರುತ್ತೆ.
ಇದನ್ನೂ ಓದಿ: Rangaswamy Mookanahalli Column: ಎವೆರಿಥಿಂಗ್ ಇಸ್ ಎ ಪ್ರಾಡಕ್ಟ್ ಆಫ್ ಟೈಮ್ !
ಹೀಗಾಗಿ ಇಂಥ ಉದಾಹರಣೆಗಳ ವ್ಯಾಪ್ತಿ ಸೀಮಿತ. ಜಗತ್ ಪ್ರಸಿದ್ಧವಾಗಿದ್ದ ನೋಕಿಯಾ ಎನ್ನುವ ಸಂಸ್ಥೆ ಮೊಬೈಲ್ ಮಾರುಕಟ್ಟೆಯ 40 ರಿಂದ 50 ಪ್ರತಿಶತ ಆಕ್ರಮಿಸಿಕೊಂಡಿತ್ತು. ಹೌದು, ನೋಕಿಯಾ ಜಾಗತಿಕವಾಗಿ 50 ಪ್ರತಿಶತ ಮಾರುಕಟ್ಟೆಯ ಮೇಲೆ ಅಧಿಪತ್ಯ ಸಾಧಿಸಿತ್ತು.
2007ರವರೆಗೂ ಇದು ತನ್ನ ಹಿಡಿತವನ್ನು ಕಾಪಾಡಿಕೊಂಡಿತ್ತು. ಆ ನಂತರದ ದಿನಗಳಲ್ಲಿ ಸ್ಮಾರ್ಟ್ʼಫೋನ್‌ಗಳಲ್ಲಿ ಆದ ಶೀಘ್ರ ಬದಲಾವಣೆಯನ್ನು ಅದು ಗುರುತಿಸಲು ಮತ್ತು ಅದಕ್ಕೆ ತಕ್ಕಂತೆ ಹೊಂದಿಕೊಳ್ಳಲು ಆಗದ ಕಾರಣ 2013ರ ವೇಳೆಗೆ ಮಾರುಕಟ್ಟೆಯಲ್ಲಿ ನೇಪಥ್ಯವನ್ನು ಸೇರುವಂತಾಯಿತು.
ಇದರ ಲೆಕ್ಕಾಚಾರದಲ್ಲಿ ಬರುವ ಇನ್ನೊಂದು ಜಗತ್ ಪ್ರಸಿದ್ಧ ಸಂಸ್ಥೆ ಕೊಡಾಕ್. 1974ರ ಸಮಯದಲ್ಲಿ ಅಮೆರಿಕದ ಕ್ಯಾಮರಾ ಮಾರುಕಟ್ಟೆಯ 90 ಪ್ರತಿಶತ ಅಧಿಪತ್ಯವನ್ನು ಇದು ಹೊಂದಿತ್ತು. 30 ವರ್ಷಗಳ ಕಾಲ ಜಗತ್ತಿನ ಈ ವಲಯದ ಅನಭಿಷಿಕ್ತ ರಾಜನಂತೆ ಈ ಸಂಸ್ಥೆ ರೂಲ್ ಮಾಡಿತು.
ಜಗತ್ತು ಸದ್ದಿಲ್ಲದೇ ಡಿಜಿಟಲ್ ಕಡೆಗೆ ಮುಖ ಮಾಡಿತು. ಸ್ಮಾರ್ಟ್ ಫೊನ್‌ಗಳಲ್ಲಿ ‘ಇನ್-ಬಿಲ್ಟ್’ ಕ್ಯಾಮರಾ ಬರುವುದು ಶುರುವಾಯ್ತು. ಅದು ಜಗತ್ತು ಫೊಟೋ ತೆಗೆಯುವ ರೀತಿಯನ್ನೇ ಬದಲಿಸಿಬಿಟ್ಟಿತು. ಈ ರೀತಿಯ ಬದಲಾವಣೆಗೆ ಹೊಂದಿಕೊಳ್ಳಲಾಗದ ಕೊಡಾಕ್ 2012ರಲ್ಲಿ ದಿವಾಳಿ ಘೋಷಿಸಿಕೊಳ್ಳುವಂತಾಯ್ತು.
2013ರಲ್ಲಿ ಮರುಜೀವ ಪಡೆದುಕೊಂಡರೂ ಮರಳಿ ತನ್ನ ಹಿಂದಿನ ಗತ್ತು ಪಡೆದುಕೊಳ್ಳಲು ಅದು ವಿಫಲವಾದದ್ದು ಇಂದು ಎಲ್ಲರಿಗೂ ಗೊತ್ತಿರುವ ವಿಷಯ. ಜಗವ್ಯಾಪಿ. ಇದಕ್ಕೆ ಪೂರಕವಾದಂತೆ ಇನ್ನೊಂದು ಉದಾಹರಣೆ ಹೇಳಿ, ಪೀಠಿಕೆಯನ್ನು ಕೊನೆ ಮಾಡುವೆ. ಇವತ್ತಿನ ಮುಖ್ಯ ವಿಷಯಕ್ಕೆ ಆ ನಂತರ ಬರುವೆ. ಒಂದೂರಲ್ಲಿ ಮೂರು ಹೆಗ್ಗಣಗಳು ಇದ್ದವಂತೆ. ಊರ ಹೊರಗೆ, ಊರವರು ಹಾಕುವ ಉಳಿದ ಊಟ, ತ್ಯಾಜ್ಯ ವಸ್ತುಗಳನ್ನು ತಿಂದುಂಡು ಚೆನ್ನಾಗಿ ಕೊಬ್ಬಿ ಜೀವನ ಸಾಗಿಸುತ್ತಿದ್ದವು.
ಊರಿಗೆ ಕ್ಷಾಮ ಬಂದ ಕಾರಣ ಊರಿನಿಂದ ಬಹುತೇಕರು ಗುಳೆ ಹೋಗುತ್ತಾರೆ. ಸಹಜವಾಗೇ, ಹೆಗ್ಗಣಗಳಿಗೆ ಸಿಗುತ್ತಿದ್ದ ಆಹಾರದಲ್ಲಿ ಭಾರಿ ಪ್ರಮಾಣದಲ್ಲಿ ಕಡಿತವಾಗುತ್ತದೆ. ಇದನ್ನು ಕಂಡ ಹೆಗ್ಗಣವೊಂದು ಬೇರೆ ಕಡೆಗೆ ಹೋಗೋಣ ಎಂದು ಹೇಳುತ್ತದೆ. ಉಳಿದೆರಡು ಹೆಗ್ಗಣ ಗಳು, “ಬೇರೆಡೆಗೆ ಹೋಗುವ ಅವಶ್ಯಕತೆಯಿಲ್ಲ. ಇಲ್ಲೇ ಎಲ್ಲವೂ ಸರಿಹೋಗುತ್ತದೆ" ಎಂದವಂತೆ.
‘ಸರಿ ನಿಮ್ಮಿಷ್ಟ’ ಎಂದ ಆ ಹೆಗ್ಗಣ ಬೇರೆ ಕಡೆಗೆ ಆಹಾರ ಅರಸಿ ಹೊರಟುಹೋಗುತ್ತದೆ. ವಾರ ಕಳೆದ ನಂತರ ಉಳಿದ ಎರಡು ಹೆಗ್ಗಣದಲ್ಲಿ ಒಂದು, “ನಾವು ಬೇರೆ ಕಡೆಗೆ ಹೋಗೋಣ" ಎನ್ನುತ್ತದೆ. “ಎಲ್ಲಿಗೂ ಹೋಗುವುದು ಬೇಕಿಲ್ಲ, ಇಲ್ಲೇ ಎಲ್ಲವೂ ಸರಿ ಹೋಗುತ್ತದೆ" ಎನ್ನುತ್ತದೆ ಇನ್ನೊಂದು ಹೆಗ್ಗಣ.
“ಸರಿ ನಿನ್ನಿಷ್ಟ, ನಾನು ಬೇರೆಡೆಗೆ ಹೋಗುವೆ" ಎಂದು ಆ ಹೆಗ್ಗಣವೂ ಆಹಾರ ಅರಸಿ ಕೊಂಡು ಹೋಗುತ್ತದೆ. ಉಳಿದ ಒಂದು ಹೆಗ್ಗಣ, ಇಂದು-ನಾಳೆ ಎಂದು ಕಾಯುತ್ತಾ ದಿನೇ ದಿನೆ ಕೃಶವಾಗುತ್ತಾ ಹೋಗುತ್ತದೆ. ಬೇರೆ ಕಡೆ ಹೋಗೋಣ ಎಂದು ಅದು ಮನಸ್ಸು ಮಾಡಿ ಕೊಳ್ಳುತ್ತದೆ. ಆದರೆ ದೇಹದಲ್ಲಿ ಶಕ್ತಿಯಿಲ್ಲದ ಕಾರಣ ಅದು ಹೋಗಲಾಗದೆ ಮರಣಿಸುತ್ತದೆ. ಮೇಲಿನ ಎಲ್ಲಾ ಉದಾಹರಣೆಗಳ ಸಾರಾಂಶ ಮಾತ್ರ ಸೇಮ್!
ಸಮಯ ಮೀರುವುದಕ್ಕೆ ಮುಂಚೆ ನಾವು ಬದಲಾಗಬೇಕು. ಸಮಯಕ್ಕೆ ತಕ್ಕಂತೆ ಹೊಂದಿ ಕೊಳ್ಳಬೇಕು. ಸಮಯದ ಜತೆಗೆ ಹೆಜ್ಜೆ ಹಾಕಬೇಕು. ಇಲ್ಲವಾದಲ್ಲಿ ನಾವೆಷ್ಟೇ ದೊಡ್ಡವರು ಎಂದುಕೊಂಡರೂ ಅವನತಿಯನ್ನು ತಪ್ಪಿಸಲು ಸಾಧ್ಯವಿಲ್ಲ. ಈಗ ಮುಖ್ಯ ವಿಚಾರಕ್ಕೆ ಬರೋಣ. ದೆಹಲಿಯಲ್ಲಿ ಜಾಗತಿಕ ಮಟ್ಟದ ‘ಎಐ ಇಂಪ್ಯಾಕ್ಟ್ ಸಮ್ಮಿಟ್’ ನಡೆಯಿತು.
‘ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಎಐ) ನಮ್ಮೆಲ್ಲರ ಕೆಲಸ ಕದಿಯುತ್ತದೆ, ಜಗತ್ತು ಪೂರ್ಣ ವಾಗಿ ಬದಲಾಗುತ್ತದೆ’ ಎನ್ನುವ ಮಾತುಗಳು ಎಲ್ಲಾ ವರ್ಗದಲ್ಲೂ ಚರ್ಚೆಗೆ ಗುರಿಯಾಗಿವೆ. ಇಂಥ ಸಮಯದಲ್ಲಿ ಕೂಡ ಕೆಲವು ಸಾಫ್ಟ್ʼವೇರ್ ಉದ್ಯೋಗಿಗಳು, ಎಂಜಿನಿಯರ್‌ಗಳು ‘ಆರ್ಟಿಫಿಷಿಯಲ್ ಇಂಟೆಲಿಜೆನ್ಸ್‌ನಿಂದ ಕೆಲಸ ಹೋಗುವುದಿಲ್ಲ’ ಎನ್ನುವ ವಿಚಾರ ಬರೆಯು ತ್ತಿದ್ದಾರೆ.
ಎಲ್ಲವೂ ಸರಿಹೋಗುತ್ತೆ ಎಂದು ಕಾಯುತ್ತ ಕುಳಿತ ಮೂರನೇ ಹೆಗ್ಗಣದ ಕಥೆ ಇವರದು. ಬದುಕಿನಲ್ಲಿ ಆಶಾಭಾವ ಬೇಕು, ಆದರೆ ಅದರ ಜತೆಗೆ ಜಗತ್ತಿನಲ್ಲಿ ಆಗುತ್ತಿರುವ ಬದಲಾವಣೆ ಗಳಿಗೂ ನಮ್ಮನ್ನು ನಾವು ಒಡ್ಡಿಕೊಳ್ಳಬೇಕು. ‘ಎಲ್ಲವೂ ಸರಿ ಹೋಗುತ್ತೆ’, ‘ಆಲ್ ಇಸ್ ವೆಲ್’ ಎನ್ನುವ ಟೊಳ್ಳು ಆಶಾಭಾವ ಚಲನಚಿತ್ರದಲ್ಲಿ ಮಾತ್ರ ಕೆಲಸ ಮಾಡಬಹುದು.
ನಿಜಜೀವನದಲ್ಲಿ ಅದು ಸಾಧ್ಯವಿಲ್ಲ. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಇವತ್ತಿನ ಬಹುತೇಕ ಕೆಲಸಗಳನ್ನು ಇಲ್ಲವಾಗಿಸುವುದು ಸತ್ಯ. ಅದರಲ್ಲೂ ಕ್ಲರಿಕಲ್ ಮತ್ತು ಪುನರಾವರ್ತನೆ ಆಗುವ ಕೆಲಸಗಳನ್ನು, ಹೆಚ್ಚು ಸಮಯ ತಿನ್ನುವ ಕೆಲಸಗಳನ್ನು ಕ್ಷಣದಲ್ಲಿ ಮಾಡಿ ಮುಗಿಸು ತ್ತದೆ.
ಹೀಗಾಗಿ ಅಂಥ ಕೆಲಸಗಳನ್ನು ಮಾಡುತ್ತಿದ್ದವರಿಗೆ ಮೊದಲು ಪೆಟ್ಟು ಬೀಳುತ್ತದೆ. ಅದೇ ಸಮಯದಲ್ಲಿ ಇದೇ ‘ಎಐ’ ಹೊಸ ಕೆಲಸಗಳನ್ನು ಕೂಡ ಸೃಷ್ಟಿಸುತ್ತದೆ. ನಾವು ಅದಕ್ಕೆ ಸಿದ್ಧರಿರಬೇಕು. ನಾವು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅನ್ನು ಒಪ್ಪಿಕೊಳ್ಳಲಿ ಅಥವಾ ಬಿಡಲಿ, ಅದು ನಮ್ಮ ಬದುಕಿನಲ್ಲಿ ಈಗಾಗಲೇ ಬಂದಿದೆ. ಅದು ನಮ್ಮ ಬದುಕಿನಲ್ಲಿ ಇನ್ನಷ್ಟು ಸೇರಿಕೊಳ್ಳಲಿದೆ.
ನಾವು ದುಡಿಯುವ, ಬದುಕುವ ರೀತಿಯನ್ನು ಅದು ಬದಲಾಯಿಸಲಿದೆ. ಇದನ್ನು ಒಪ್ಪಿ ಕೊಂಡು ಅಗತ್ಯವಿರುವ ಸೂಕ್ತ ಹೊಂದಾಣಿಕೆ ಮಾಡಿಕೊಂಡವರಿಗೆ ಯಶಸ್ಸು ಸಿಗುತ್ತದೆ. ‘ಇದೇನೂ ಮಾಡುವುದಿಲ್ಲ, ಕೆಲಸಗಳು ಹೋಗುವುದಿಲ್ಲ’ ಎನ್ನುವ ಮಾತುಗಳನ್ನು ಆಡುತ್ತಾ, ಬರೆಯುತ್ತಾ, ಯಾವುದೇ ಕೌಶಲ ವೃದ್ಧಿಮಾಡಿಕೊಳ್ಳದೆ ಹೋದರೆ ನಷ್ಟವಾಗು ವುದು ‘ಎಐ’ಗಲ್ಲ, ನಮಗೆ ಎನ್ನುವ ಪರಿಜ್ಞಾನ ಬೆಳೆಸಿಕೊಳ್ಳುವುದು ಇಂದಿನ ತುರ್ತು ಅಗತ್ಯ.
ಇಲ್ಲಿ ನಿಮಗೊಂದು ವಿಚಾರವನ್ನು ಹೇಳುತ್ತೇನೆ. ‘ಯುಪಿಐ’ನಲ್ಲಿ ಬಳಸುವ ತಂತ್ರಜ್ಞಾನ ವನ್ನು ಪ್ರಥಮವಾಗಿ ಕಂಡುಹಿಡಿದದ್ದು ಭಾರತೀಯರೇನೂ ಅಲ್ಲ. ಅಮೆರಿಕ ಮತ್ತು ಚೀನಾ ಮ್ಯಾಗ್ನೆಟಿಕ್ ಸ್ಟ್ರಿ ಮತ್ತು ಕ್ಯೂಆರ್ ಕೋಡ್‌ಗಳನ್ನು ಆಗಲೇ ಬಳಸುತ್ತಿದ್ದವು. ಯುಪಿಐನಲ್ಲಿ ನಾವು ಅದನ್ನು ಸಶಕ್ತವಾಗಿ ಬಳಸಿಕೊಂಡೆವು.
ಇವತ್ತಿಗೆ ಡಿಜಿಟಲ್ ಪೇಮೆಂಟ್ ಸಿಸ್ಟಮ್ ಅನ್ನು ಭಾರತದಷ್ಟು ಉತ್ತಮವಾಗಿ ಅಪ್ಪಿ ಕೊಂಡಿರುವ ದೇಶ ಜಗತ್ತಿನಲ್ಲಿ ಯಾವುದೂ ಇಲ್ಲ ಎನ್ನುವ ಮಟ್ಟಕ್ಕೆ ನಾವು ಅದನ್ನು ಬಳಸಿಕೊಂಡಿದ್ದೇವೆ. ಈಗಾಗಲೇ ಲಭ್ಯವಿದ್ದ ತಂತ್ರಜ್ಞಾನವನ್ನು ಸರಳಗೊಳಿಸಿ, ಸಾಮಾನ್ಯ ರಲ್ಲಿ ಸಾಮಾನ್ಯರು ಕೂಡ ಬಳಸುವ ಮಟ್ಟಕ್ಕೆ ಅದನ್ನು ತಂದದ್ದು ಮಾತ್ರ ಭಾರತೀಯರು.
‘ಎಐ’ನಲ್ಲಿ ಕೂಡ ಇದೆ ಕಥೆ ರಿಪೀಟ್ ಆಗುವ ಎಲ್ಲಾ ಸಾಧ್ಯತೆಗಳನ್ನೂ ನಾವು ಈಗಾಗಲೇ ನೋಡುತ್ತಿದ್ದೇವೆ. ನಾವು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್‌ನ ಜನಕರೇನೂ ಅಲ್ಲ. ಅಮೆರಿಕ, ಚೀನಾ ಸೇರಿದಂತೆ ಬಹಳಷ್ಟು ದೇಶಗಳು ಈ ರೇಸಿನಲ್ಲಿ ನಮಗಿಂತ ಮುಂದಿವೆ ಎನ್ನುವುದು ಕೂಡ ನಿರ್ವಿವಾದ. ಆದರೆ ಇವತ್ತಿನ ಸಮಯದಲ್ಲಿ ಕೇವಲ ತಂತ್ರಜ್ಞಾನವಿದ್ದರೆ ಸಾಲದು, ರೇಸಿನಲ್ಲಿ ಮುಂದಿದ್ದರೂ ಸಾಲದು.
ಅವುಗಳನ್ನು ಸರಿಯಾಗಿ ಬಳಸಿಕೊಳ್ಳುವ, ಅದರಲ್ಲೂ ಜನರ ಅವಶ್ಯಕತೆಗೆ ತಕ್ಕಂತೆ ಬಳಸಿ ಕೊಳ್ಳುವ ಕ್ಷಮತೆ ಇರಬೇಕು. ಅಂಥ ಒಂದು ಅವಕಾಶ, ಕ್ಷಮತೆ ಎರಡೂ ಇರುವುದು ಭಾರತ ದಲ್ಲಿ ಎನ್ನುವುದು ಇವತ್ತಿಗೆ ಜಗತ್ತಿನ ಎಲ್ಲಾ ದೇಶಗಳಿಗೂ ತಿಳಿದುಹೋಗಿದೆ. ಈ ಕಾರಣಕ್ಕೆ, ದೆಹಲಿಯಲ್ಲಿ ನಡೆದ ‘ಎಐ’ ಶೃಂಗಸಭೆಗೆ ವಿಶ್ವದ ಎಲ್ಲಾ ಪ್ರಮುಖ ದೇಶಗಳೂ ಬಂದಿವೆ.
ಭಾರತವನ್ನು ಉದಾಸೀನ ಮಾಡಿ ಇವತ್ತಿನ ಸಮಯದಲ್ಲಿ ಜಗತ್ತು ನಡೆಯಲು ಸಾಧ್ಯವಿಲ್ಲ. - ದೇಶದ ಅಧ್ಯಕ್ಷರು ಭಾರತದ ಬಗ್ಗೆ ಅದೆಷ್ಟು ವಿಶ್ವಾಸ ಹೊಂದಿದ್ದಾರೆ ಎನ್ನುವುದನ್ನು ಅವರ ಮಾತುಗಳಲ್ಲಿ ಕೇಳುವುದೇ ಖುಷಿ. ವಿತ್ತ ಜಗತ್ತಿನ ಪ್ರಮುಖ ಹೆಸರು ಬ್ಲಾಕ್ ರಾಕ್ ಸಂಸ್ಥೆಯು ‘ಮುಂದಿನ ಇಪ್ಪತೈದು ವರ್ಷ ಭಾರತಕ್ಕೆ ಸೇರಿದ್ದು’ ಎನ್ನುವ ಮಾತುಗಳನ್ನು ಯಾವುದೇ ಸಂಕೋಚವಿಲ್ಲದೆ ಹೇಳುತ್ತದೆ.
ಟ್ರಂಪ್ ಭಾರತವನ್ನು ‘ಡೆಡ್ ಇಕಾನಮಿ’ ಎಂದ ಆಸುಪಾಸಿನ ದಿನಗಳಲ್ಲಿ ಗೂಗಲ್ ಸಂಸ್ಥೆ ಯು ಭಾರತದಲ್ಲಿ ಮುಂದಿನ ಐದು ವರ್ಷದಲ್ಲಿ 15 ಬಿಲಿಯನ್ ಅಮೆರಿಕನ್ ಡಾಲರ್ ಹಣವನ್ನು ಹೂಡಿಕೆ ಮಾಡುವುದಾಗಿ ಹೇಳಿಕೆ ನೀಡುತ್ತದೆ.
ಜಗತ್ತಿನ ಎಲ್ಲಾ ಪ್ರಮುಖ ಆರ್ಥಿಕತೆಗಳು ಕೂಡ ಭಾರತದೊಂದಿಗೆ ವಾಣಿಜ್ಯ ಒಪ್ಪಂದ ವನ್ನು ಮಾಡಿಕೊಂಡಿವೆ. 2030ರ ವೇಳೆಗೆ ಜಗತ್ತು ಆರ್ಥಿಕವಾಗಿ, ರಾಜಕೀಯವಾಗಿ, ತಂತ್ರಜ್ಞಾನದಲ್ಲಿ, ಎಲ್ಲಾ ಮಜಲುಗಳಲ್ಲೂ ಹೊಸ ನಾಯಕತ್ವವನ್ನು ಹುಡುಕಿ ಕೊಂಡಿ ರುತ್ತದೆ. ಜಗತ್ತು ಹಿಂದಿನಂತೆ ಅಮೆರಿಕ-ಕೇಂದ್ರಿತವಾಗಿ ಉಳಿದುಕೊಳ್ಳುವುದಿಲ್ಲ.
ಬದಲಿಗೆ ಐದಾರು ದೇಶಗಳು ಜಗತ್ತಿನ ಹೊಸ ಶಕ್ತಿಕೇಂದ್ರಗಳಾಗಿ ಹೊರಹೊಮ್ಮಿರುತ್ತವೆ. ಭಾರತವು ನಿಸ್ಸಂದೇಹವಾಗಿ ಅವುಗಳಲ್ಲಿ ಒಂದಾಗಿರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕ್ಷೇತ್ರವನ್ನು ಆಳುವ ನಿಜವಾದ ರಾಜನಾಗಿ ಹೊರ ಹೊಮ್ಮುತ್ತದೆ.
ಇವತ್ತಿಗೆ ಭಾರತ ಎಂದರೆ ಸ್ವಚ್ಛತೆಯಿಲ್ಲದ ನಗರಗಳು ಎನ್ನುವಂತಾಗಿದೆ. ಹೊಸ ‘ಎಐ’ ತಂತ್ರಜ್ಞಾನದ ಮೂಲಕ ಆ ಕಳಂಕವನ್ನು ನಾವು ತೊಡೆದುಕೊಳ್ಳಲಿದ್ದೇವೆ. ದೆಹಲಿಯ ‘ಎಐ ಸಮ್ಮಿಟ್’ನಲ್ಲಿ ಈ ಬಗ್ಗೆ ಆಶಾಭಾವನೆ ಉಂಟುಮಾಡುವ ಪ್ರೋಟೋಟೈಪ್ ಅನಾ ವರಣವಾಗಿದೆ. ಅದಕ್ಕೆ ಸರಕಾರದ ಅನುಮೋದನೆ ಸಿಕ್ಕರೆ ಭಾರತವು ಸ್ವಚ್ಛ ಭಾರತ ಮಾತ್ರವಲ್ಲ, ಸ್ವಚ್ಛತೆಯಲ್ಲಿ ಜಪಾನ್ ದೇಶವನ್ನು ಕೂಡ ಹಿಂದಿಕ್ಕಬಲ್ಲದು.
ಇಂಥ ಹಲವಾರು ಸಾಧ್ಯತೆಗಳನ್ನು ಜಾಗತಿಕ ‘ಎಐ’ ಸಮ್ಮಿಟ್ ತೆರೆದಿಟ್ಟಿದೆ. ನಾಳಿನ ಬದುಕು ಹೇಗಿರಬಹುದು? ಏನೆಲ್ಲಾ ಬದಲಾವಣೆಯಾಗಬಹುದು? ಎನ್ನುವುದನ್ನು ಪುಟಾಣಿ ಕಿಂಡಿಯ ಮೂಲಕ ತೋರಿಸುವ ಪ್ರಯತ್ನವನ್ನು ಮಾಡಲಾಗಿದೆ.
ಒಂದಷ್ಟು ಜನ ಮಾತ್ರ ತಮ್ಮ ಹಳೆಯ ಚಾಳಿಯನ್ನು ಮುಂದುವರಿಸಿದ್ದಾರೆ. ಎಐ ಸಮ್ಮಿಟ್ ಅನ್ನು ವಿಫಲಗೊಳಿಸಲು ಹೋಗಿ, ಸಾರ್ವಜನಿಕರಿಂದ ಛೀಮಾರಿ ಹಾಕಿಸಿಕೊಂಡು ಹೊರ ಹೋಗಿದ್ದಾರೆ. ಇನ್ನೊಂದಷ್ಟು ಜನರು ಬದಲಾಗುತ್ತಿರುವ ಭಾರತ, ಬದಲಾಗುತ್ತಿರುವ ಸಮಯದ ಅರಿವಿಲ್ಲದೆ, ‘ಭಾರತ ಕೇವಲ ಎಐ ಕನ್ಸೂಮ್ ಮಾಡುವ ದೇಶವಾಗಿ ಉಳಿದು ಕೊಳ್ಳುತ್ತದೆ’ ಎನ್ನುವ ಬಡಬಡಿಕೆಯಲ್ಲಿ ಸಮಯವನ್ನು ಕಳೆಯುತ್ತಿದ್ದಾರೆ.
ತಂತ್ರಜ್ಞಾನದ ವಿಚಾರಗಳಲ್ಲಿ ಪರಿಣತರು ಎನ್ನಿಸಿಕೊಂಡವರು ‘ಆಲ್ ಇಸ್ ವೆಲ್’ ಮಂತ್ರ ಪಠನೆಯಲ್ಲಿ ಕುಳಿತಿzರೆ. ಆದರೆ ವಾಸ್ತವ ಬೇರೆಯೇ ಇದೆ. ಭಾರತ ‘ಎಐ’ ಕ್ಷೇತ್ರವನ್ನು ಮುಂದೆ ನಿಂತು ನಡೆಸಲಿದೆ. ಸಮಯದ ಜತೆಗೆ ಹೊಸ ಸವಾಲು, ಅವಕಾಶ ಎರಡನ್ನೂ ಹೊತ್ತು ತರಲಿದೆ. ‘ಸಮಸ್ಯೆ, ಸವಾಲು’ ಎಂದುಕೊಂಡವರಿಗೆ ಅದು ಎದುರಾಗುತ್ತದೆ. ಅವಕಾಶ ಎಂದುಕೊಂಡವರಿಗೆ ಹೊಸ ಅವಕಾಶಗಳ ಜಗತ್ತು ತೆರೆದುಕೊಳ್ಳಲಿದೆ. ಆಯ್ಕೆ ನಮಗೆ ಬಿಟ್ಟದ್ದು.