ಸಂಪಾದಕರ ಸದ್ಯಶೋಧನೆ
ವಾಯುಯಾನ ಪ್ರಪಂಚದಲ್ಲಿ ಸುರಕ್ಷತೆ ಎಂಬುದು ಕೇವಲ ಒಂದು ಪದವಲ್ಲ, ಅದು ಪ್ರತಿಯೊಂದು ವಿಮಾನದ ವಿನ್ಯಾಸದ ಮೂಲಮಂತ್ರ. ಆಧುನಿಕ ಜಗತ್ತಿನ ಅತ್ಯಂತ ಮುಂದುವರಿದ ವಿಮಾನಗಳಲ್ಲಿ ಒಂದಾದ ಏರ್‌ಬಸ್ ಎ-350, ಪ್ರಯಾಣಿಕರನ್ನು ಹೊತ್ತು ಆಗಸಕ್ಕೆ ನೆಗೆಯುವ ಮೊದಲು ಭೂಮಿಯ ಮೇಲಿನ ಅತ್ಯಂತ ಕಠಿಣ ಹವಾಮಾನವನ್ನು ಎದುರಿಸಬೇಕಾಗುತ್ತದೆ.
ಅಂಥ ಒಂದು ಪರೀಕ್ಷಾ ಹಂತವೇ ‘ಎಕ್ಸ್ ಟ್ರೀಮ್ ಕೋಲ್ಡ್ ಟೆಸ್ಟಿಂಗ್’. ಕೆನಡಾದ ಇಕ್ವಾಲು ಯಿಟ್ ಎಂಬ ಹಿಮಾವೃತ ಪ್ರದೇಶದಲ್ಲಿ, ಮೈನಸ್ 40 ಡಿಗ್ರಿ ಸೆಂಟಿಗ್ರೇಡ್ ತಾಪಮಾನದಲ್ಲಿ ನಡೆವ ಈ ಪರೀಕ್ಷೆಯು ಎಂಜಿನಿಯರಿಂಗ್ ಕೌಶಲ ಮತ್ತು ತಂತ್ರಜ್ಞಾನದ ನಿಖರತೆಗೆ ಹಿಡಿದ ಕನ್ನಡಿಯಾಗಿದೆ.
ಕೆನಡಾದ ನುನಾವುಟ್ ಪ್ರಾಂತ್ಯದಲ್ಲಿರುವ ಇಕ್ವಾಲುಯಿಟ್, ಆರ್ಕ್ಟಿಕ್ ವೃತ್ತಕ್ಕೆ ತೀರಾ ಹತ್ತಿರವಿರುವ ಪ್ರದೇಶ. ಇಲ್ಲಿನ ಚಳಿ ಎಷ್ಟರಮಟ್ಟಿಗೆ ಇರುತ್ತದೆ ಎಂದರೆ, ಬಿಸಿನೀರನ್ನು ಗಾಳಿಯಲ್ಲಿ ಸೋಕಿದರೆ ಅದು ನೆಲಕ್ಕೆ ಬೀಳುವ ಮುನ್ನವೇ ಮಂಜುಗಡ್ಡೆಯಾಗಿರುತ್ತದೆ.
ಇದನ್ನೂ ಓದಿ: Vishweshwar Bhat Column: ವಾಯುಪ್ರದೇಶದ ವರ್ಗೀಕರಣ
ಇಂಥ ಕೊರೆಯುವ ಚಳಿ ಇರುವ ಪ್ರದೇಶವನ್ನೇ ಏರ್‌ಬಸ್ ತನ್ನ ಪರೀಕ್ಷೆಗೆ ಆಯ್ಕೆ ಮಾಡಿ ಕೊಳ್ಳಲು ಬಲವಾದ ಕಾರಣವಿದೆ. ಕೃತಕವಾಗಿ ಪ್ರಯೋಗಾಲಯಗಳಲ್ಲಿ ಚಳಿಯನ್ನು ಸೃಷ್ಟಿಸುವುದಕ್ಕಿಂತ, ನೈಸರ್ಗಿಕವಾದ ಮತ್ತು ಅನಿರೀಕ್ಷಿತವಾದ ಕಠಿಣ ವಾತಾವರಣದಲ್ಲಿ ವಿಮಾನದ ವರ್ತನೆಯನ್ನು ತಿಳಿಯುವುದು ಅತ್ಯಗತ್ಯ. ಈ ಪರೀಕ್ಷೆಯ ದೃಶ್ಯವೇ ರೋಮಾಂಚನಕಾರಿಯಾದದ್ದು.
ನೂರಾರು ಮಿಲಿಯನ್ ಡಾಲರ್ ಬೆಲೆಬಾಳುವ ಅತ್ಯಾಧುನಿಕ ಎ-350 ವಿಮಾನವು ದಟ್ಟವಾದ ಮಂಜುಗಡ್ಡೆಯ ಪದರಗಳಿಂದ ಆವೃತವಾಗಿದ್ದು, ನಿರ್ಜನ ಪ್ರದೇಶದಲ್ಲಿ ನಿಂತಿರುತ್ತದೆ. ಮೇಲ್ನೋಟಕ್ಕೆ ಇದು ನಿಶ್ಶಬ್ದವಾಗಿ, ಹೆಪ್ಪುಗಟ್ಟಿದಂತೆ ಕಂಡರೂ, ಇದರ ಒಳಗೆ ಮತ್ತು ಹೊರಗೆ ತಂತ್ರಜ್ಞಾನದ ಪರೀಕ್ಷೆ ಭರದಿಂದ ಸಾಗುತ್ತಿರುತ್ತದೆ.
ಹಾಗಾದರೆ ಪರೀಕ್ಷೆಯ ಉದ್ದೇಶವೇನು? ವಿಮಾನವೊಂದು ಕೇವಲ ಆರಾಮದಾಯಕ ಹವಾಮಾನದಲ್ಲಿ ಹಾರಾಟ ನಡೆಸಿದರೆ ಸಾಲದು. ಅದು ದುಬೈನ ಸುಡುವ ಬಿಸಿಲಿನಿಂದ ಹಿಡಿದು, ಸೈಬೀರಿಯಾದ ಕೊರೆಯುವ ಚಳಿಯವರೆಗೂ ಎಲ್ಲಿ ಬೇಕಾದರೂ ಕಾರ್ಯಾಚರಣೆ ನಡೆಸುವಂತಿರಬೇಕು. ಈ ಹಿನ್ನೆಲೆಯಲ್ಲಿ ‘ಕೋಲ್ಡ್ ಸೋಕ್’ ( Cold Soak) ಪರೀಕ್ಷೆ ಬಹಳ ಮುಖ್ಯವಾಗುತ್ತದೆ.
ವಿಮಾನವನ್ನು ರಾತ್ರಿಯಿಡೀ ಅಥವಾ ಸುಮಾರು 12 ರಿಂದ 24 ಗಂಟೆಗಳ ಕಾಲ ಹೊರಗಿನ ಮೈನಸ್ 40 ಡಿಗ್ರಿ ಸೆಂಟಿಗ್ರೇಡ್ ತಾಪಮಾನದಲ್ಲಿ ನಿಲ್ಲಿಸಲಾಗುತ್ತದೆ. ಈ ಸಮಯದಲ್ಲಿ ವಿಮಾನದ ಎಂಜಿನ್, ಹೈಡ್ರಾಲಿಕ್ ದ್ರವಗಳು, ಇಂಧನ, ಇಲೆಕ್ಟ್ರಾನಿಕ್ ಉಪಕರಣಗಳು ಮತ್ತು ಪ್ರಯಾಣಿಕರ ಕ್ಯಾಬಿನ್ ವ್ಯವಸ್ಥೆಗಳು ಸಂಪೂರ್ಣವಾಗಿ ತಣ್ಣಗಾಗುತ್ತವೆ.
ಹೀಗೆ ಸಂಪೂರ್ಣವಾಗಿ ಮಂಜುಗಟ್ಟಿದ ವಿಮಾನವನ್ನು ಮತ್ತೆ ಚಾಲೂ ಮಾಡುವುದು ಮತ್ತು ಅದನ್ನು ಸುರಕ್ಷಿತವಾಗಿ ಹಾರಿಸುವುದು ಈ ಪರೀಕ್ಷೆಯ ಮುಖ್ಯ ಗುರಿ. ಈ ಪರೀಕ್ಷೆ ಯಲ್ಲಿ ಎಂಜಿನಿಯರ್‌ಗಳು ಎದುರಿಸುವ ಪ್ರಮುಖ ಸವಾಲುಗಳೆಂದರೆ, ಎಂಜಿನ್ ಸ್ಟಾರ್ಟ್ ಆಗುವ ರೀತಿ. ವಿಮಾನದ ಎಂಜಿನ್‌ಗಳಲ್ಲಿ ಬಳಸುವ ತೈಲಗಳು ಅತಿ ಶೀತಕ್ಕೆ ದಪ್ಪ ವಾಗುತ್ತವೆ.
ಇಂಥ ಸ್ಥಿತಿಯಲ್ಲಿ ರೋಲ್ಸ್ ರಾಯ್ಸ್ ಎಂಜಿನ್‌ಗಳು ಸುಗಮವಾಗಿ ಚಾಲನೆಗೊಳ್ಳುತ್ತವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ವಿಮಾನದ ರೆಕ್ಕೆಗಳು ( Flaps), ಲ್ಯಾಂಡಿಂಗ್ ಗಿಯರ್ ಮತ್ತು ಬ್ರೇಕ್ ವ್ಯವಸ್ಥೆಗಳು ಹೈಡ್ರಾಲಿಕ್ ದ್ರವದ ಮೂಲಕ ಕಾರ್ಯ ನಿರ್ವಹಿಸು ತ್ತವೆ.
ಅತಿಯಾದ ಚಳಿಯಲ್ಲಿ ಸೀಲ್ ಗಳು ಕುಗ್ಗುವ ಸಾಧ್ಯತೆ ಇರುತ್ತದೆ. ಇದರಿಂದ ಸೋರಿಕೆ ಯಾಗುವ ಅಪಾಯವಿರುತ್ತದೆ. ಇವೆಲ್ಲವನ್ನೂ ತಡೆದುಕೊಂಡು ವ್ಯವಸ್ಥೆ ಸರಿಯಾಗಿ ಕೆಲಸ ಮಾಡುತ್ತದೆಯೇ ಎಂದು ಪರೀಕ್ಷಿಸಲಾಗುತ್ತದೆ. ಕಾಕ್‌ಪಿಟ್‌ನಲ್ಲಿರುವ ಸ್ಕ್ರೀನ್‌ಗಳು ಮತ್ತು ವಿಮಾನದ ಹೊರಭಾಗದಲ್ಲಿರುವ ಸೆನ್ಸರ್‌ಗಳು ಮಂಜುಗಡ್ಡೆಯಿಂದ ಆವೃತವಾಗಿದ್ದರೂ ಸರಿಯಾದ ಮಾಹಿತಿಯನ್ನು ನೀಡಬೇಕು.
ಪರೀಕ್ಷೆಯ ಅತ್ಯಂತ ಕಠಿಣ ಭಾಗವೆಂದರೆ, ವಿಮಾನವು ಮಂಜುಗಡ್ಡೆಯಿಂದ ಆವೃತ ವಾಗಿರುವಾಗಲೇ ಅದನ್ನು ರನ್‌ವೇ ಮೇಲೆ ಓಡಿಸುವುದು. ಟಯರ್‌ಗಳನ್ನು ರಬ್ಬರ್‌ನಿಂದ ಮಾಡಿರುವುದರಿಂದ, ಅತಿಯಾದ ಚಳಿಯಲ್ಲಿ ಅವು ತಮ್ಮ ಸ್ಥಿತಿಸ್ಥಾಪಕತ್ವವನ್ನು ಕಳೆದು ಕೊಂಡು ಗಟ್ಟಿಯಾಗಬಹುದು. ಆದರೂ, ಎ-350 ವಿಮಾನವು ಹಿಮ ತುಂಬಿದ ರನ್ ವೇಯಲ್ಲಿ ಜಾರದೇ, ಸರಿಯಾದ ಬ್ರೇಕಿಂಗ್ ಸಾಮರ್ಥ್ಯದೊಂದಿಗೆ ನಿಲ್ಲಬಲ್ಲದೇ ಎಂದು ಪರೀಕ್ಷಿಸಲಾಗುತ್ತದೆ.