ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Thimmanna Bhagwat Column: ಜೀವನಾಂಶವೆಂದರೆ ಸಂಬಂಧ-ಭಾವನೆಗಳ ಕಿಮ್ಮತ್ತಲ್ಲ...

1954ರ ವಿಶೇಷ ವಿವಾಹ ಕಾಯಿದೆ ಹಿಂದೂ ಧರ್ಮದ ಪದ್ಧತಿಗಳ ಪ್ರಕಾರ ನಡೆಯುವ ವಿವಾಹ ಗಳಿಗೆ ಅನ್ವಯವಾಗುವುದಿಲ್ಲವಾದರೂ, ಹಿಂದೂಗಳು ಸೇರಿದಂತೆ ಎಲ್ಲಾ ಧರ್ಮದವರು ಈ ಜಾತ್ಯ ತೀತ ಕಾನೂನಿನಡಿಯಲ್ಲಿ ವಿವಾಹವಾಗಬಹುದು. ಈ ಕಾಯಿದೆಯಡಿ ಹಿಂದೂಗಳು ವಿವಾಹ ವಾದರೆ ಅವರಿಗೆ ಈ ಕಾಯಿದೆಯ ೩೬ ಮತ್ತು ೩೭ನೇ ಕಲಮುಗಳ ಜೀವನಾಂಶದ ನಿಯಮಗಳೇ ಅನ್ವಯ ವಾಗುತ್ತವೆ.

ಕಾನೂನ್‌ ಸೆನ್ಸ್‌

ತಿಮ್ಮಣ್ಣ ಭಾಗ್ವತ್

ಜೀವನಾಂಶ ಕೇಳುವ ಹಕ್ಕು ಮಕ್ಕಳು, ವಿಧವೆ ಸೊಸೆ ಮತ್ತು ವೃದ್ಧ ತಂದೆ-ತಾಯಿಯರಿಗೂ ಇದೆಯಾದರೂ ಈ ಕುರಿತಾದ ಬಹುತೇಕ ಪ್ರಕರಣಗಳು ಹೆಂಡತಿಯು ಗಂಡನ ವಿರುದ್ಧ ದಾಖಲಿಸಿದಂಥವೇ ಆಗಿವೆ. ವಿಚ್ಛೇದನ ಮತ್ತು ಜೀವನಾಂಶಗಳ ಪ್ರಕರಣಗಳ ಸ್ಪೆಷಲಿಸ್ಟ್ ಎನ್ನಿಸಿಕೊಂಡ ವಕೀಲರು ಕೆಲವು ಪಟ್ಟಣಗಳಲ್ಲಿದ್ದಾರೆ.

ವದ್ಧೌಚ ಮಾತಾಪಿತರೌ ಸಾಧಿ ಭಾರ್ಯಾ ಶಿಶುಃ ಸುತಃ| ಅಪ್ಯಕಾರ‍್ಯಶತಂ ಕೃತ್ವಾ ಭರ್ತವ್ಯಾ ಮನುರಭೃವೀತ್||, ಅಂದರೆ, ‘ನೂರು ಅಕಾರ್ಯಗಳನ್ನು ಮಾಡಿಯಾದರೂ ವೃದ್ಧ ತಂದೆ-ತಾಯಿಯರು, ಪತಿವ್ರತೆಯಾದ ಪತ್ನಿ ಮತ್ತು ಅಪ್ರಾಪ್ತ ಮಕ್ಕಳನ್ನು (ಪುರುಷನು) ಪಾಲನೆ ಮಾಡಬೇಕು’ ಎಂದು ಮನುಸ್ಮೃತಿಯಲ್ಲಿ ಹೇಳಲಾಗಿದೆ. ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಹೆಂಡತಿಗೆ ಊಟ, ಬಟ್ಟೆಗಳ ಖರ್ಚಿಗೆ ಸಾಕಾಗುವುದಕ್ಕಿಂತಲೂ ಅಧಿಕ ಮೊತ್ತವಲ್ಲದೆ ಕನ್ಯಾಶುಲ್ಕ, ಆಸ್ತಿಯ ಪಾಲು ಹಾಗೂ ಪರಿಹಾರವನ್ನು ಕೂಡಾ ನೀಡಬೇಕು ಎಂದು ಹೇಳಲಾಗಿದೆ.

ಹೀಗೆ ಹಿಂದೂ ಸಂಪ್ರದಾಯದಲ್ಲಿ ಮಾತಾ-ಪಿತೃಗಳನ್ನು, ಮಕ್ಕಳನ್ನು ಹಾಗೂ ಹೆಂಡತಿಯನ್ನು ಪಾಲನೆ ಮಾಡುವುದು ಹಾಗೂ ಅವರಿಗೆ ಅಗತ್ಯ ಜೀವನಾಂಶ ನೀಡುವುದು ಕಡ್ಡಾಯವಾಗಿದೆ. ಭಾರತದ ಸಂವಿಧಾನದ 15ನೇ ವಿಧಿಯು ಮಹಿಳೆಯರು ಮತ್ತು ಮಕ್ಕಳ ಕ್ಷೇಮಾಭಿವೃದ್ಧಿಗಾಗಿ ವಿಶೇಷ ಕಾನೂನುಗಳನ್ನು ಜಾರಿ ಮಾಡುವ ಕುರಿತಾಗಿದೆ. ನಿರ್ವಹಣೆ ( Maintenance ) ಅಥವಾ ಜೀವನಾಂಶದ ( alimony ) ಕುರಿತಾಗಿ ಭಾರತದಲ್ಲಿ ಅನೇಕ ಕಾಯಿದೆಗಳು ಅನ್ವಯವಾಗುತ್ತವೆ.

1954ರ ವಿಶೇಷ ವಿವಾಹ ಕಾಯಿದೆ ಹಿಂದೂ ಧರ್ಮದ ಪದ್ಧತಿಗಳ ಪ್ರಕಾರ ನಡೆಯುವ ವಿವಾಹ ಗಳಿಗೆ ಅನ್ವಯವಾಗುವುದಿಲ್ಲವಾದರೂ, ಹಿಂದೂಗಳು ಸೇರಿದಂತೆ ಎಲ್ಲಾ ಧರ್ಮದವರು ಈ ಜಾತ್ಯ ತೀತ ಕಾನೂನಿನಡಿಯಲ್ಲಿ ವಿವಾಹವಾಗಬಹುದು. ಈ ಕಾಯಿದೆಯಡಿ ಹಿಂದೂಗಳು ವಿವಾಹ ವಾದರೆ ಅವರಿಗೆ ಈ ಕಾಯಿದೆಯ ೩೬ ಮತ್ತು ೩೭ನೇ ಕಲಮುಗಳ ಜೀವನಾಂಶದ ನಿಯಮಗಳೇ ಅನ್ವಯವಾಗುತ್ತವೆ.

ಇದನ್ನೂ ಓದಿ: Thimmanna Bhagwat Column: ಅಗ್ನಿಸಾಕ್ಷಿಯ ಭಾಷೆಯಿಂದ ಭಗವದ್ಗೀತೆಯ ಮೇಲೆ ಪ್ರಮಾಣ ಮಾಡುವವರೆಗೆ

1955ರ ಹಿಂದೂ ವಿವಾಹ ಕಾಯಿದೆಯು ( HMA ) ಹಿಂದೂಗಳ ವಿವಾಹದ ಕುರಿತು ಇರುವ ಪೂರ್ಣ ಪ್ರಮಾಣದ ಸಂಹಿತೆ. ೨೪ನೇ ಕಲಮು ವಿಚ್ಛೇದನದ ಪ್ರಕರಣ ನಡೆಯುವ ಸಂದರ್ಭದಲ್ಲಿ ಅವರ ಜೀವನ ನಿರ್ವಹಣೆ ಮತ್ತು ಪ್ರಕರಣದ ಖರ್ಚು ವೆಚ್ಚಗಳ ಕುರಿತು ಸಂಬಂಧಿಸಿದೆ. ೨೫ನೇ ಕಲಮು ಕಾಯಂ ಜೀವನಾಂಶದ ಕುರಿತಾಗಿದೆ. ಈ ಕಾಯಿದೆಯ ವಿಶೇಷತೆಯೆಂದರೆ ಜೀವನಾಂಶವನ್ನು ಕೇಳುವ ಹಕ್ಕು ಕೇವಲ ಹೆಂಡತಿಗಷ್ಟೇ ಸೀಮಿತವಲ್ಲ.

ಸಾಕಷ್ಟು ಆದಾಯವಿಲ್ಲದ ಗಂಡನೂ ಆದಾಯವಿರುವ ಹೆಂಡತಿಯಿಂದ ಜೀವನಾಂಶ ಕೇಳಬಹುದು. “ಮಮತಾ ಜೈಸ್ವಾಲ್ ವರ್ಸಸ್ ರಾಜೇಶ್ ಜೈಸ್ವಾಲ್" ಪ್ರಕರಣದಲ್ಲಿ ಹೆಂಡತಿಗೆ ನೌಕರಿ ಸಿಗುವಷ್ಟು ವಿದ್ಯಾರ್ಹತೆ ಇದ್ದರೆ ಅವಳನ್ನು ಖಾಲಿ ಕೂರಿಸಿ ಗಂಡನಿಂದ ಜೀವನಾಂಶ ಕೊಡಿಸುವುದು ಕಾಯಿದೆಯ ಉದ್ದೇಶವಲ್ಲ ಎಂದು ಸುಪ್ರೀಂ ಕೋರ್ಟು ಹೇಳಿದೆ.

T Bhawgat 22

HMA 1956ರ ಹಿಂದೂ ದತ್ತಕ ಮತ್ತು ನಿರ್ವಹಣಾ ಕಾಯಿದೆಯಡಿಯಲ್ಲಿ ಹಿಂದೂ ಪುರುಷನಿಗೆ ತನ್ನ ಹೆಂಡತಿ, ಅಪ್ರಾಪ್ತ ಮಕ್ಕಳು ಮತ್ತು ವೃದ್ಧ ತಂದೆ-ತಾಯಿಯರನ್ನು ಪಾಲಿಸುವ ಅಥವಾ ಅವರಿಗೆ ಜೀವನಾಂಶ ನೀಡುವ ಬಾಧ್ಯತೆ ಇರುತ್ತದೆ. ಹಿಂದೂ ವಿವಾಹ ಕಾಯಿದೆ ಮತ್ತು ಈ ಕಾಯಿದೆ ಯ ನಡುವಿನ ವ್ಯತ್ಯಾಸವೆಂದರೆ ಈ ಕಾಯಿದೆಯಡಿ ಹೆಂಡತಿಗೆ ವಿಚ್ಛೇದನದ ಮೊದಲು ಮಾತ್ರ ಜೀವನಾಂಶ ಸಿಗುತ್ತದೆ.

ಆದರೆ ಹಿಂದೂ ವಿವಾಹ ಕಾಯಿದೆಯಲ್ಲಿ ವಿಚ್ಛೇದನ ಪ್ರಕರಣಗಳು ನಡೆಯುವಾಗ ಮತ್ತು ವಿಚ್ಛೇದನದ ನಂತರ ಜೀವನಾಂಶ ಪಡೆಯುವ ಹಕ್ಕು ಇದೆ. ವಿಧವೆ ಸೊಸೆಗೆ ಬೇರೆ ಆದಾಯವಿಲ್ಲ ದಿರುವಾಗ ತನ್ನ ಮಾವನಿಂದ ಜೀವನಾಂಶ ಪಡೆಯುವ ಹಕ್ಕು HMAದ ೧೯ನೇ ಕಲಮಿನ ಅಡಿಯಲ್ಲಿ ಇದೆ.

ಭಾರತೀಯ ನ್ಯಾಯ ಸುರಕ್ಷಾ ಸಂಹಿತೆ- BNSS 2023ರ ೧೪೪ನೇ ( Section 125 - Cr.P.C ೧೯೭೩) ಕಲಮಿನ ಪ್ರಕಾರ ಯಾವುದೇ ಪುರುಷನು ತನ್ನ ಹೆಂಡತಿ, ಅಪ್ರಾಪ್ತ ಮಕ್ಕಳು, ತಂದೆ-ತಾಯಿಯರು, ಪ್ರಾಯಸ್ಥರಾಗಿದ್ದರೂ ದೈಹಿಕ/ಮಾನಸಿಕ ವೈಕಲ್ಯ ಇರುವ ಮಗ ಅಥವಾ ಅಂಥ ಅವಿವಾಹಿತ ಮಗಳು ಇವರನ್ನು ಪಾಲನೆ ಮಾಡಲು ತಪ್ಪಿದಲ್ಲಿ ಮಾಸಿಕವಾಗಿ ಅವರಿಗೆ ಜೀವನಾಂಶ ನೀಡುವಂತೆ ಮ್ಯಾಜಿಸ್ಟ್ರೇಟರು ಆದೇಶಿಸಬಹುದು.

ಇದು ಎಲ್ಲಾ ಧರ್ಮದವರಿಗೂ ಅನ್ವಯವಾಗುತ್ತದೆ. “ಮೊಹಮ್ಮದ್ ಅಬ್ದುಲ್ ಸದಮ್ ವರ್ಸಸ್ ತೆಲಂಗಾಣ ಸರಕಾರ" ಪ್ರಕರಣದಲ್ಲಿ ಸುಪ್ರೀಂ ಕೋರ್ಟಿನ ಆದೇಶದ ಪ್ರಕಾರ ಈ ಕಲಮು ‘ಶಾಬಾನೋ’ ಪ್ರಕರಣದ ನಂತರ ಜಾರಿಗೆ ಬಂದ 1986ರ ಮುಸ್ಲಿಮ್ ವಿವಾಹಿತ ಮಹಿಳೆಯರ ರಕ್ಷಣೆ ಕಾಯಿದೆಯಿಂದ ಬಾಧಿತವಾಗುವುದಿಲ್ಲ.

ಆದ್ದರಿಂದ ಮುಸಲ್ಮಾನ ಗಂಡನು ತನ್ನ ಹೆಂಡತಿಗೆ ಇದ್ದತ್ ಅವಧಿಯ ನಂತರವೂ ಜೀವನಾಂಶ ನೀಡುವಂತೆ ಕೋರ್ಟು ಆದೇಶಿಸಬಹುದು. ಸುಪ್ರೀಂ ಕೋರ್ಟಿನ ಆದೇಶದ ಪ್ರಕಾರ ಲಿವ್-ಇನ್ ರಿಲೇಶನ್ ಕೂಡಾ 125ನೇ ಕಲಮಿನ ವ್ಯಾಪ್ತಿಯಲ್ಲಿ ಬರುತ್ತದೆ.

ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣೆ ಕಾಯಿದೆ 2005: ದೌರ್ಜನ್ಯಕ್ಕೊಳಗಾದ ಮಹಿಳೆಗೆ ರಕ್ಷಣೆ, ವಾಸಿಸುವ ಹಕ್ಕಿನ ಜತೆಗೆ ಜೀವನಾಂಶ ಹಾಗೂ ಆರ್ಥಿಕ ಪರಿಹಾರದ ಹಕ್ಕು ಈ ಕಾಯಿದೆಯ ೨೦ನೇ ಕಲಮಿನನ್ವಯ ದೊರಕುತ್ತದೆ. ಅಂಥ ದೌರ್ಜನ್ಯದಿಂದ ಉಂಟಾದ ಗಳಿಕೆಯ ಹಾನಿ, ವೈದ್ಯಕೀಯ ವೆಚ್ಚ, ಮಾನಸಿಕ/ದೈಹಿಕ ಆಘಾತ, ಆಸ್ತಿಗಳಿಗೆ ಉಂಟಾದ ಹಾನಿಗಳನ್ನು ಪರಿಗಣಿಸಿ ನ್ಯಾಯಯುತವಾದ ಮತ್ತು ದೌರ್ಜನ್ಯಕ್ಕೊಳಗಾದ ವ್ಯಕ್ತಿಯ ಜೀವನಶೈಲಿಗೆ ಅನುಗುಣ ವಾದ ಮೊತ್ತವನ್ನು ಕೋರ್ಟು ಆದೇಶಿಸಬೇಕು.

ವಿಚ್ಛೇದನ ಮತ್ತು ಜೀವನಾಂಶದ ದಂಧೆ: ಜೀವನಾಂಶ ಕೇಳುವ ಹಕ್ಕು ಮಕ್ಕಳು, ವಿಧವೆ ಸೊಸೆ ಮತ್ತು ವೃದ್ಧ ತಂದೆ-ತಾಯಿಯರಿಗೂ ಇದೆಯಾದರೂ ಈ ಕುರಿತಾದ ಬಹುತೇಕ ಪ್ರಕರಣಗಳು ಹೆಂಡತಿಯು ಗಂಡನ ವಿರುದ್ಧ ದಾಖಲಿಸಿದಂಥವೇ ಆಗಿವೆ. ವಿಚ್ಛೇದನ ಮತ್ತು ಜೀವನಾಂಶಗಳ ಪ್ರಕರಣಗಳ ಸ್ಪೆಷಲಿಸ್ಟ್ ಎನ್ನಿಸಿಕೊಂಡ ವಕೀಲರು ಕೆಲವು ಪಟ್ಟಣಗಳಲ್ಲಿದ್ದಾರೆ. ಕೌಟುಂಬಿಕ ದೌರ್ಜನ್ಯ ಕಾಯಿದೆ ಮತ್ತು 498-ಎ ಕಲಮುಗಳನ್ನು ಬಳಸಿಕೊಂಡು ವಿಚ್ಛೇದನ ಕೊಡಿಸುವ ಮತ್ತು ಗಂಡಂದಿರಿಂದ ಹೆಚ್ಚು ಜೀವನಾಂಶ ಕೊಡಿಸುವ ಗುತ್ತಿಗೆ ಪಡೆಯುವವರಿದ್ದಾರೆ.

ಹೆಚ್ಚಿನ ಜೀವನಾಂಶ ಮತ್ತು ಪರಿಹಾರದ ಗಂಟನ್ನು ಪಡೆಯುವ ಉದ್ದೇಶದಿಂದಲೇ ಶ್ರೀಮಂತ ಗಂಡಸರನ್ನು ಮದುವೆಯಾಗಿ ಹಣ ಪೀಕುವ ಮಹಿಳೆಯರು ಹಾಗೂ ಅದಕ್ಕೆ ಕೈಜೋಡಿಸುವ ಪಾಲಕರು ಇರುವುದು ಕಂಡುಬಂದಿದೆ. ಇತ್ತೀಚೆಗೆ ನಡೆದ “ರಿಂಕು ಬಹೇತಿ ವರ್ಸಸ್ ಸಂದೇಶ ಶಾರ್ದಾ" ಪ್ರಕರಣದಲ್ಲಿ ಕೇವಲ ೩ ತಿಂಗಳು ಗಂಡನೊಟ್ಟಿಗೆ ಸಂಸಾರ ನಡೆಸಿದ ಹೆಂಡತಿ 500 ಕೋಟಿ ರುಪಾಯಿ ಪರಿಹಾರ ಕೇಳಿದ್ದಳು. ಅದನ್ನು ಪೂರೈಸಿಕೊಳ್ಳುವ ನಿಟ್ಟಿನಲ್ಲಿ ಆಕೆ ಮತ್ತು ಅವಳ ಪಾಲಕರು ಸೇರಿ ಗಂಡನ ಜತೆಗೆ ಆತನ ೮೬ ವರ್ಷದ ತಂದೆಯ ಮೇಲೆ ಕೂಡಾ ಪ್ರಕರಣ ದಾಖಲಿಸಿ ದ್ದರು.

ಸುಪ್ರೀಂ ಕೋರ್ಟು 142ನೇ ವಿಧಿಯಡಿ ತನಗಿರುವ ವಿಶೇಷ ಅಧಿಕಾರ ಚಲಾಯಿಸಿ ವಿಚ್ಛೇದನದ ಆದೇಶ ನೀಡಿತು ಮತ್ತು ರು.೧೨ ಕೋಟಿ ಪರಿಹಾರ ನೀಡಬೇಕೆಂದು ಆದೇಶಿಸಿತು.

ಪುರುಷರಿಗೆ ಮಾತ್ರ ಹೊಣೆಗಾರಿಕೆ: ಹಿಂದೂ ವಿವಾಹ ಕಾಯಿದೆಯಲ್ಲಿ ಹೆಂಡತಿಯಿಂದ ಜೀವನಾಂಶ ಕೇಳುವ ಹಕ್ಕನ್ನು ಬಿಟ್ಟರೆ ಇತರ ಎಲ್ಲಾ ಕಾಯಿದೆಗಳಲ್ಲಿ ಕುಟುಂಬದ ನಿರ್ವಹಣೆ ಮತ್ತು ಜೀವನಾಂಶ ನೀಡುವ ಹೊಣೆ ಕೇವಲ ಪುರುಷರಿಗಷ್ಟೇ ಇದೆ.

೨೦೦೫ರಲ್ಲಿ ಹಿಂದು ಉತ್ತರಾಧಿಕಾರ ಕಾಯಿದೆಗೆ ಆದ ತಿದ್ದುಪಡಿಯ ಪ್ರಕಾರ ಹೆಣ್ಣುಮಕ್ಕಳಿಗೂ ಸಮಾನ ಆಸ್ತಿಹಕ್ಕು ಸಿಗುವುದರಿಂದ ಅವರಿಗೂ ತಂದೆ-ತಾಯಿಯರ ಸಂರಕ್ಷಣೆಯ ಹೊಣೆ ಇರಬೇಕು ಎಂಬ ವಾದ ಒಪ್ಪತಕ್ಕದ್ದೇ ಇದೆ. ಈ ನಿಟ್ಟಿನಲ್ಲಿ ಕಾಯಿದೆಗಳಿಗೆ ತಿದ್ದುಪಡಿ ಆಗಬೇಕಿದೆ.

ಅನೇಕ ಕಾಯಿದೆಗಳ ಸಮಾನ ಅಂಶಗಳು ಮತ್ತು ಗೊಂದಲಗಳು: ಜೀವನಾಂಶದ ವಿಷಯದಲ್ಲಿ ಈ ಮೊದಲು ಹೇಳಿದ ಎಲ್ಲಾ ಕಾಯಿದೆಗಳು ಅನ್ವಯವಾಗುತ್ತವೆ. ಹಾಗೆ ಒಂದಕ್ಕಿಂತ ಹೆಚ್ಚು ಕಾಯಿದೆಗಳಡಿಯಲ್ಲಿ ಪ್ರಕರಣಗಳು ದಾಖಲಿಸಲ್ಪಟ್ಟಾಗ ಕೋರ್ಟಿನ ಅಧಿಕಾರ ವ್ಯಾಪ್ತಿ ಮತ್ತು ಒಂದಕ್ಕಿಂತ ಹೆಚ್ಚು ಆದೇಶಗಳನ್ನು ಪಾಲಿಸುವ ಕುರಿತು ಗೊಂದಲಗಳು ಉಂಟಾಗುತ್ತವೆ.

ಇಂಥ ಗೊಂದಲಗಳ ನಿವಾರಣೆಗಾಗಿ ಮತ್ತು ಜೀವನಾಂಶ ನಿರ್ಧರಿಸುವ ಕುರಿತು ‘ರಜನೀಶ್ ವರ್ಸಸ್ ನೇಹಾ’ ಪ್ರಕರಣದಲ್ಲಿ ಸುಪ್ರೀಂ ಕೋರ್ಟು ನೀಡಿದ ವಿವರವಾದ ಮಾರ್ಗಸೂಚಿ ಹಾಗೂ ಕೋರ್ಟು ಗಳು ಪರಿಗಣಿಸುವ ಕೆಲವು ಸಾಮಾನ್ಯ ಅಂಶಗಳು ಈ ಮುಂದಿನಂತಿವೆ: ಜೀವನಾಂಶ ಪ್ರಕರಣಗಳಲ್ಲಿ ಎರಡೂ ಪಕ್ಷಗಾರರು ತಮ್ಮ ಆದಾಯ, ಆಸ್ತಿ, ಸಾಲ, ಹೊಣೆಗಾರಿಕೆ ಮತ್ತು ಜೀವನಾಂಶದ ಕುರಿತು ಹಿಂದೆ ಮಾಡಲಾದ ಕೋರ್ಟಿನ ಆದೇಶಗಳ ಪೂರ್ತಿ ವಿವರ ಸಲ್ಲಿಸಬೇಕು.

ಯಾವುದೇ ಸುಳ್ಳು ವಿವರ ಸಲ್ಲಿಸಿದರೆ BNSS ಕಾಯಿದೆಯಡಿ ಕ್ರಮ ಕೈಗೊಳ್ಳಲಾಗುತ್ತದೆ. ಮಧ್ಯಂತರ ಆದೇಶ ನೀಡುವಾಗ ಎರಡೂ ಪಕ್ಷಗಾರರ ಆಸ್ತಿ, ಆದಾಯ, ಸಂಪನ್ಮೂಲ, ಅಂತಸ್ತು, ಸಾಲಗಳು, ಇತರ ಹೊಣೆಗಾರಿಕೆಗಳು, ಈಗಾಗಲೆ ಪಡೆದ/ಪಡೆಯುತ್ತಿರುವ ಹಣ, ಅವರ ಮತ್ತು ಅವರ ಪಾಲನೆಯಲ್ಲಿರುವ ಮಕ್ಕಳ ಖರ್ಚು, ವೆಚ್ಚ ಮುಂತಾದ ವಿಷಯಗಳಲ್ಲದೆ, ಪ್ರಕರಣದ ವೆಚ್ಚವನ್ನು ಕೂಡಾ ಕೋರ್ಟು ಪರಿಗಣಿಸುತ್ತದೆ.

ಕಾಯಂ ಜೀವನಾಂಶ ನೀಡುವಾಗ ಮಕ್ಕಳ ವಿದ್ಯಾಭ್ಯಾಸದ/ ವಿವಾಹದ ಖರ್ಚು, ವೈದ್ಯಕೀಯ ವೆಚ್ಚಗಳು ಮುಂತಾದವನ್ನು ಕೂಡಾ ಗಣನೆಗೆ ತೆಗೆದುಕೊಳ್ಳಬೇಕು. ಎಷ್ಟು ಕಾಲ ವೈವಾಹಿಕ ಜೀವನ ನಡೆಸಿದ್ದರು ಎಂಬುದು ಕೂಡಾ ಮಹತ್ವದ್ದಾಗುತ್ತದೆ. ಹೆಂಡತಿ ವಿದ್ಯಾವತಿಯಾಗಿದ್ದು ಈ ಮೊದಲು ಉದ್ಯೋಗದಲ್ಲಿದ್ದರೂ, ಕೌಟುಂಬಿಕ ಸಮಸ್ಯೆಗಳಿಗಾಗಿ ಉದ್ಯೋಗ ಬಿಟ್ಟು ಬಹಳ ಕಾಲವಾಗಿದ್ದರೆ ಹೊಸತಾಗಿ ಉದ್ಯೋಗ ಅರಸುವಲ್ಲಿ ಆಕೆಗಿರುವ ಸಮಸ್ಯೆಗಳನ್ನು ಪರಿಗಣಿಸಬೇಕಾಗುತ್ತದೆ.

ಉದ್ಯೋಗದಲ್ಲಿದ್ದರೂ ಆಕೆಯ ಸಂಬಳ ಆಕೆಯ ಗಂಡನ ಆದಾಯಕ್ಕಿಂತ ಬಹಳ ಕಡಿಮೆಯಿದ್ದರೆ ಆ ವ್ಯತ್ಯಾಸವನ್ನು ಸರಿಪಡಿಸಿ ಆಕೆಗೆ ಮತ್ತು ಆಕೆಯ ಅವಲಂಬಿತ ಮಕ್ಕಳಿಗೆ ವೈವಾಹಿಕ ಜೀವನ ದಲ್ಲಿದ್ದ ಜೀವನಮಟ್ಟಕ್ಕೆ ಬಹುತೇಕ ಸರಿಹೊಂದುವಂತೆ ಜೀವನಾಂಶಕ್ಕೆ ಅವಳು ಅರ್ಹಳಾಗುತ್ತಾಳೆ. ಹೆಂಡತಿಯ ತಾಯಿ-ತಂದೆಯರ ಆದಾಯ ಮತ್ತು ಸಂಪನ್ಮೂಲಗಳನ್ನು ಆಧಾರವಾಗಿ ತೆಗೆದುಕೊಳ್ಳ ಲಾಗುವುದಿಲ್ಲ ಎಂದು ಮನೀಶ್ ಜೈನ್ ವರ್ಸಸ್ ಆಕಾಂಕ್ಷ ಜೈನ್ ಪ್ರಕರಣದಲ್ಲಿ ಕೋರ್ಟು ಹೇಳಿದೆ.

ಜೀವನಾಂಶ ಪಡೆದ ಹೆಂಡತಿ ಅಥವಾ ಗಂಡ ಪುನರ್ವಿವಾಹವಾದರೆ ಅಥವಾ ಅನೈತಿಕ ಸಂಬಂಧ ಹೊಂದಿದರೆ ಜೀವನಾಂಶ ರದ್ದು ಪಡಿಸಬಹುದು. ( HMA Section 25 & BNSS ೧೪೬). ದಾಂಪತ್ಯ ದ ಸಮಯದಲ್ಲಿ ಹೆಂಡತಿಗೆ ಪರಪುರುಷನ ಸಂಬಂಧದಿಂದ ಹುಟ್ಟಿದ ಮಗು ತನ್ನದಲ್ಲವೆಂದು ತಿಳಿದಿದ್ದರೂ/ಸ್ವತಃ ಹೆಂಡತಿಯೇ ಅದನ್ನು ಒಪ್ಪಿದರೂ,

ಭಾರತೀಯ ಸಾಕ್ಷ್ಯ ಅಧಿನಿಯಮದ 112ನೇ ಕಲಮಿನ ಪ್ರಕಾರ ಅಂಥ ಮಗುವಿನ ತಂದೆ ಅವಳ ಗಂಡನೇ ಎಂದು ಪರಿಗಣಿತವಾಗುವುದರಿಂದ ಅಂಥ ಮಗುವಿನ ನಿರ್ವಹಣಾ ವೆಚ್ಚವನ್ನು ಕೂಡಾ ಗಂಡನಾದವನು ನೀಡಬೇಕಾಗುತ್ತದೆ. ತನ್ನ ತಪ್ಪಿಲ್ಲದ ಮಗುವಿಗೆ ಅಕ್ರಮದ ಮಗುವೆಂಬ ಕಳಂಕ ವನ್ನು ಅರೋಪಿಸಲಾಗುವುದಿಲ್ಲ.

ಹಿಂದೂ ದತ್ತಕ ಮತ್ತು ನಿರ್ವಹಣಾ ಕಾಯಿದೆಯಡಿ ಜೀವನಾಂಶ ನೀಡುವಾಗ ಹೆಂಡತಿ, ಮಕ್ಕಳು ಮತ್ತು ವೃದ್ಧ ತಂದೆ-ತಾಯಿಯರ ಜೀವನಾವಶ್ಯಕತೆ, ಅವರ ಅಂತಸ್ತು, ಜೀವನಮಟ್ಟ ಮುಂತಾ ದವುಗಳ ಜತೆಗೆ ಪರಿಹಾರ ನೀಡಬೇಕಾದವನ ಆದಾಯ ಮತ್ತು ಸಂಪನ್ಮೂಲಗಳನ್ನು ಕೂಡಾ ಪರಿಗಣಿಸಿ ನ್ಯಾಯಯುತವಾಗಿ ಸಾಕಷ್ಟು ಮೊತ್ತವನ್ನು ಆದೇಶಿಸಬೇಕು (ಭರತ್ ಹೆಗಡೆ ವರ್ಸಸ್ ಸರೋಜಾ ಹೆಗಡೆ, ದೆಹಲಿ ಹೈಕೋರ್ಟ್). ಹೆಂಡತಿಗೆ ಸಾಕಷ್ಟು ಆದಾಯವಿದ್ದರೆ ಗಂಡ ಜೀವನಾಂಶ ನೀಡಬೇಕಾಗಿಲ್ಲ (ಮದ್ರಾಸ್ ಹೈಕೋರ್ಟ್). ಜೀವನಾಂಶದ ಪ್ರತಿ ಪ್ರಕರಣವೂ ವಿಭಿನ್ನವಾಗಿದ್ದು ಯಾವುದೇ ಸಾಮಾನ್ಯ ಸೂತ್ರವನ್ನು ವಿಧಿಸುವುದು ಸಾಧ್ಯವಿಲ್ಲ.

ಕೋರ್ಟುಗಳು ತಮಗೆ ಕಾಯಿದೆಗಳಡಿ ನೀಡಲಾಗಿರುವ ವಿವೇಚನಾಧಿಕಾರವನ್ನು ಎಚ್ಚರಿಕೆಯಿಂದ, ನಿಷ್ಪಕ್ಷಪಾತವಾಗಿ ಹಾಗೂ ನ್ಯಾಯಯುತವಾಗಿ ಬಳಸಬೇಕಾಗುತ್ತದೆ. ವಿಚ್ಛೇದನವೇ ಒಂದು ಅನಗತ್ಯ ಮತ್ತು ಅಹಿತಕರ ಭಾವನಾತ್ಮಕ ಸಂಗತಿಯಾದರೆ, ಅದರೊಟ್ಟಿಗೆ ತಗುಲಿಕೊಳ್ಳುವ ಜೀವನಾಂಶದ ವ್ಯಾಜ್ಯ, ಮುರಿದು ಬಿದ್ದ ಸಂಬಂಧವನ್ನು ಇನ್ನಷ್ಟು ಕಹಿಗೊಳಿಸುತ್ತದೆ.

(ಲೇಖಕರು ಕಾನೂನು ತಜ್ಞರು ಮತ್ತು ಕೆವಿಜಿ ಬ್ಯಾಂಕ್‌ನ ನಿವೃತ್ತ ಎಜಿಎಂ)