ಲೋಕಮತ
ಜಪಾನ್ ಪ್ರವಾಸಕ್ಕೆ ತೆರಳಿದ್ದ ಕನ್ನಡಿಗರೊಬ್ಬರು ಇತ್ತೀಚೆಗೆ ಅಲ್ಲಿನ ಸಾರ್ವಜನಿಕ ಶೌಚಾಲಯದ ಚಿತ್ರವೊಂದನ್ನು ಹಂಚಿಕೊಂಡು ಆ ದೇಶದಲ್ಲಿ ನೋಡಲೇಬೇಕಾದ ಪ್ರೇಕ್ಷಣೀಯ ಸ್ಥಳಗಳಲ್ಲಿ ಅಲ್ಲಿನ ಶೌಚಾಲಯಗಳೂ ಸೇರಿವೆ ಎಂದು ಹೇಳಿಕೊಂಡಿದ್ದರು. ಇದನ್ನು ಕೇಳಿ ನಾವು ‘ಛೀ, ಥೂ’ ಅಂದುಕೊಳ್ಳಬಹುದು. ಶೌಚಾಲಯ, ಮೂತ್ರಾಲಯಗಳ ಸಾರ್ವಜನಿಕ ಪ್ರದರ್ಶನ ಬಿಡಿ, ಇವು ಗಳನ್ನು ಸಾರ್ವಜನಿಕವಾಗಿ ಚರ್ಚಿಸಲೂ ಹೇಸಿಗೆ ಪಟ್ಟುಕೊಳ್ಳುವವರು ನಾವು. ಆದರೆ ಅಗತ್ಯ ಬಿದ್ದಾಗ ಪುರುಷ ಪುಂಗವರೆಲ್ಲರೂ ಸಾರ್ವಜನಿಕವಾಗಿ ದೇಹಬಾಧೆ ತೀರಿಸಿಕೊಳ್ಳಲು ಹಿಂದೇಟು ಹಾಕುವುದಿಲ್ಲ.
ಪಾಶ್ಚಾತ್ಯ ದೇಶಗಳಲ್ಲಿ ರಸ್ತೆ ನಿಯಮ, ಸುರಕ್ಷತೆ, ಸ್ವಚ್ಛತೆಗಳಿಗೆ ಎಷ್ಟು ಆದ್ಯತೆ ನೀಡುತ್ತಾರೋ ಸಾರ್ವಜನಿಕ ಶೌಚಾಲಯಗಳ ನಿರ್ವಹಣೆಗೂ ಅಷ್ಟೇ ಪ್ರಮಾಣದ ಆದ್ಯತೆ ನೀಡುತ್ತಾರೆ. ಪಾದಚಾರಿ ರಸ್ತೆಗಳ ತೆರವು ಮೂಲಕ ಜನ ಮೆಚ್ಚುಗೆ ಗಳಿಸಿದ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡರು ಇದೀಗ, ಸಿಲಿಕಾನ್ ಸಿಟಿಯ ಸಾರ್ವಜನಿಕ ಶೌಚಾಲಯಗಳಿಗೂ ಹೊಸ ರೂಪ ಕೊಡುವುದಾಗಿ ತಿಳಿಸಿದ್ದಾರೆ. ಸಚಿವರು ಹೊಸ ರೂಪ ಕೊಡುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ಸಾರ್ವಜನಿಕ ಶೌಚಾಲಯಗಳ ನಿರ್ಮಾಣವು ಬೆಂಗಳೂರು ಮಾತ್ರವಲ್ಲ ಇಡೀ ದೇಶದ ತುರ್ತು ಅಗತ್ಯ.
ಪಾದಚಾರಿ ಮಾರ್ಗ ಜನರ ಹಕ್ಕು ಎಂದು ಹೇಳಿರುವ ಸುಪ್ರೀಂಕೋರ್ಟ್, ಸಾರ್ವಜನಿಕ ಶೌಚಾ ಲಯಗಳು ಕೂಡ ನಮ್ಮ ಮೂಲಭೂತ ಹಕ್ಕಿನ ಭಾಗ ಎಂದು ಈ ಹಿಂದೆಯೇ ತೀರ್ಪು ನೀಡಿದೆ.
ಹೈಕೋರ್ಟ್‌ಗಳು ಕೂಡ ಈ ವಿಚಾರದಲ್ಲಿ ಹಲವು ತೀರ್ಪುಗಳನ್ನು ನೀಡಿವೆ. ಆದರೆ ಉಳಿದ ಅನೇಕ ತೀರ್ಪುಗಳಂತೆ ಇದಾವುದೂ ಕೂಡ ಜಾರಿಗೆ ಬಂದಿಲ್ಲ. ಪಾದಚಾರಿ ಮಾರ್ಗ ತೆರವಿಗೆ ಸುಪ್ರೀಂ ಕೋರ್ಟ್ ತೀರ್ಪನ್ನು ಅಸ್ತ್ರವಾಗಿ ಬಳಸಿಕೊಂಡ ಕೃಷ್ಣಭೈರೇಗೌಡರು ಸಾರ್ವಜನಿಕ ಶೌಚಾಲಯಗಳ ನಿರ್ಮಾಣಕ್ಕೂ ಸುಪ್ರೀಂಕೋರ್ಟ್ ಮತ್ತು ರಾಜ್ಯ ಹೈಕೋರ್ಟ್ ನೀಡಿರುವ ತೀರ್ಪುಗಳನ್ನೇ ಬಳಸಿಕೊಳ್ಳಬಹುದು.
ಇದನ್ನೂ ಓದಿ: Lokesh Kayarga Column: ಕೆಪಿಎಸ್ʼಸಿಗೂ ಜಿರಳೆ ನುಗ್ಗಬೇಕಿತ್ತು...!
2025ರ ಜನವರಿ 15ರಂದು ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಲ್ಲಿ ಎಲ್ಲರಿಗೂ ಸುಲಭವಾಗಿ ಸ್ವಚ್ಛ ಶೌಚಾಲಯಗಳು ಸಿಗುವುದು ಭಾರತೀಯ ಸಂವಿಧಾನದ 21ನೇ ವಿಧಿಯಡಿ (ಜೀವಿಸುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯ) ಬರುವ ‘ಮೂಲಭೂತ ಹಕ್ಕು’ ಎಂದು ಸ್ಪಷ್ಟಪಡಿಸಿದೆ.
ನ್ಯಾಯಾಲಯಗಳು, ಹೆದ್ದಾರಿಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಪುರುಷರು, ಮಹಿಳೆಯರು, ವಿಕಲಚೇತನರು ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಹಾಗೂ ಬಳಕೆಗೆ ಯೋಗ್ಯವಾದ ಶೌಚಾಲಯಗಳನ್ನು ನಿರ್ಮಿಸುವುದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಜವಾಬ್ದಾರಿ ಯಾಗಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ಜಪಾನ್‌ನಂತೆ ಬೆಂಗಳೂರಿನ ಶೌಚಾಲಯಗಳು ಪ್ರೇಕ್ಷಣೀಯ ಸ್ಥಳಗಳಾಗುವ ಅಗತ್ಯವಿಲ್ಲ. ಸಾರ್ವಜನಿಕರು ಶ್ವಾಸೋಚ್ವಾಸಗಳನ್ನು ಹಿಡಿದಿಟ್ಟುಕೊಳ್ಳದೆ ಒಳ ಹೋಗಿ, ನಿರಾಳರಾಗಿ ಬರಲು ಸಾಧ್ಯವಾದರೆ ಅಷ್ಟೇ ಸಾಕು. ನಾವೆಲ್ಲರೂ ಒಂದಲ್ಲ ಒಂದು ಸಂದರ್ಭದಲ್ಲಿ ಸಾರ್ವಜನಿಕ ಶೌಚಾಲಯಗಳ ಅಗತ್ಯವನ್ನು ಮನಗಂಡಿರುತ್ತೇವೆ. ಆದರೆ ಇದರ ಅಗತ್ಯವನ್ನು ಎಂದಿಗೂ ಬಾಯಿ ಬಿಟ್ಟು ಹೇಳಲು ಹಿಂಜರಿಯುತ್ತೇವೆ. ಸಾರ್ವಜನಿಕ ಶೌಚಾಲಯಕ್ಕೆ ಹೊಸ ರೂಪ ನೀಡುವ ಜತೆಗೆ ಅವುಗಳ ಸಂಖ್ಯೆಯನ್ನು ಹೆಚ್ಚಿಸಲು ಇದೀಗ ರಾಜ್ಯವ್ಯಾಪಿ ಕ್ರಮ ಕೈಗೊಳ್ಳಬೇಕಿದೆ. ನಗರದ ಮುಖ್ಯ ರಸ್ತೆಗಳಲ್ಲಿ ಕನಿಷ್ಠ ಎರಡು ಕಿಲೋ ಮೀಟರ್‌ಗೊಂದರಂತೆ ಸಾರ್ವಜನಿಕ ಶೌಚಾಲಯ ನಿರ್ಮಾಣ ಕಡ್ಡಾಯಗೊಳಿಬೇಕಿದೆ.
ಬೆಂಗಳೂರು, ಮೈಸೂರಿನಂತಹ ನಗರಗಳಲ್ಲಿ ‘ಇಲ್ಲಿ ಮೂತ್ರಿಸಬಾರದು’ ಎಂದು ಗೋಡೆಗಳಲ್ಲಿ ದಪ್ಪಕ್ಷರಗಳಲ್ಲಿ ಬರೆದಿರುವುದನ್ನು ಕಾಣಬಹುದು. ಜನ ಈ ಬೋರ್ಡ್ ನೋಡಿಕೊಂಡೇ ಅಲ್ಲಿಯೇ ತಮ್ಮ ಪ್ರಕೃತಿ ಭಾದೆಯನ್ನು ತೀರಿಸಿಕೊಳ್ಳುವುದು ಸಾಮಾನ್ಯ. ಸಾಂಸ್ಕೃತಿಕ ನಗರಿ ಮೈಸೂರಿನ ಬಸ್ ನಿಲ್ದಾಣದ ಸಮೀಪ ಕೆಲ ತಿಂಗಳ ಹಿಂದೆ ಇಂತಹ ಸ್ಥಳವೊಂದರಲ್ಲಿ ಕನ್ನಡಿಯನ್ನೇ ತಡೆಗೋಡೆ ಯಾಗಿ ಮಾಡಿ ‘ಮೂತ್ರದಾನಿ’ಗಳನ್ನು ದೂರವಿಡುವ ಪ್ರಯತ್ನ ಮಾಡಲಾಗಿತ್ತು. ಆದರೆ ನಂತರ ಅದೇ ಸ್ಥಳದಲ್ಲಿ ಕನ್ನಡಿ ನೋಡಿಕೊಂಡೇ ಮೂತ್ರಿಸುವವರ ಚಿತ್ರಗಳು ಪ್ರಕಟವಾಗಿದ್ದವು.
ನಿಸರ್ಗದ ತುರ್ತು ಕರೆ ಬಂದಾಗ ಮನುಷ್ಯನೂ ಪ್ರಾಣಿಯಾಗುತ್ತಾನೆ. ಸ್ಥಳ, ಸಂದರ್ಭ, ಸನ್ನಿವೇಶ ಎಲ್ಲವನ್ನೂ ಮರೆತು ಎಲ್ಲೋ ಮೂಲೆ ಜಾಗವನ್ನು ಹುಡುಕಿ ತನ್ನ ದೇಹಬಾಧೆಯನ್ನು ತೀರಿಸಿ ಕೊಳ್ಳುತ್ತಾನೆ. ಇದು ತಪ್ಪೆನ್ನುವುದು ಆತನಿಗೂ ಗೊತ್ತು. ಆದರೆ ಸಾರ್ವಜನಿಕವಾಗಿ ಮೂತ್ರಿಸುವುದು ತಪ್ಪೆನ್ನುವವರು ಅಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಶೌಚಾಲಯ/ ಮೂತ್ರಾಲಯ ಗಳನ್ನು ನಿರ್ಮಾಣ ಮಾಡಬೇಕೆಂದು ಹೇಳುವುದಿಲ್ಲ. ಇದು ನಮ್ಮ ವೈರುಧ್ಯ.
ಹಾಗೆಂದು ಸಾರ್ವಜನಿಕರ ದುಡ್ಡಿನಲ್ಲಿ ನಿರ್ಮಾಣವಾದ ಶೌಚಾಲಯಗಳಿಗೆ ಕೊರತೆ ಇಲ್ಲ. ಆದರೆ ಒಂದು ವರ್ಷ ಕಳೆಯುವುದರೊಳಗೆ ಅವು ಪಾಲು ಬೀಳುವುದೂ ಸಹಜ ಪ್ರಕ್ರಿಯೆಯಾಗಿದೆ. ಸ್ಥಳೀಯಾಡಳಿತ ಸಂಸ್ಥೆಗಳು ಶೌಚಾಲಯಗಳನ್ನು ನಿರ್ಮಿಸಿದರೆ ತಮ್ಮ ಹೊಣೆಗಾರಿಕೆ ಮುಗಿದಂತೆ ಎಂದು ಭಾವಿಸುತ್ತವೆ. ಬಹುತೇಕ ಶೌಚಾಲಯಗಳಿಗೆ ನೀರಿನ ಸಂಪರ್ಕವನ್ನೇ ಕಲ್ಪಿಸಿರುವುದಿಲ್ಲ. ಒಂದು ವೇಳೆ ಕಲ್ಪಿಸಿದರೂ ಕೆಲವೇ ದಿನಗಳಲ್ಲಿ ಅಲ್ಲಿರುವ ನಲ್ಲಿಗಳನ್ನು ಕದ್ದೊಯ್ಯುವವರಿದ್ದಾರೆ. ಸಾರ್ವಜನಿಕ ವಸ್ತುಗಳನ್ನು ಹಾಳು ಮಾಡುವುದೆಂದರೆ ಕೆಲವರಿಗೆ ವಿಕೃತ ಸಂತೋಷ.
ಪರಿಸ್ಥಿತಿ ಹೀಗಿರುವಾಗ ಪ್ರತಿಯೊಂದು ಶೌಚಾಲಯದ ಉಸ್ತುವಾರಿ ಮತ್ತು ನಿರ್ವಹಣೆಗೆ ಪ್ರತ್ಯೇಕ ವ್ಯವಸ್ಥೆ ಆಗಲೇಬೇಕು. ಶೌಚಾಲಯಗಳ ನಿರ್ವಹಣೆಯೇ ನಮ್ಮ ಪೌರಾಡಳಿತ ಸಂಸ್ಥೆಗಳ ಅತಿ ದೊಡ್ಡ ತೊಡಕು. ಸರಕಾರ ಮನಸ್ಸು ಮಾಡಿದರೆ ಇವುಗಳಿಗೆ ಸುಲಭದಲ್ಲಿಯೇ ಪರಿಹಾರ ಕಂಡು ಕೊಳ್ಳಬಹುದು. ಮೊಟ್ಟ ಮೊದಲು ಸಾರ್ವಜನಿಕ ಶೌಚಾಲಯಗಳು ಉಚಿತವಾಗಿರಬೇಕೆಂಬ ನಮ್ಮ ಧೋರಣೆಯನ್ನು ಬದಲಾಯಿಸಿಕೊಳ್ಳಬೇಕು. ಹೊಟೇಲ್‌ಗಳಲ್ಲಿ ವೆಯ್ಟರ್‌ಗಳಿಗೆ, ಪಾರ್ಕಿಂಗ್ ಸ್ಥಳಗಳಲ್ಲಿ ವಾಚ್‌ಮನ್‌ಗಳಿಗೆ ಟಿಪ್ಸ್ ನೀಡಲು ಧಾರಾಳತನ ತೋರಿಸುವ ನಾವು ಅದೇಕೋ ಸಾರ್ವಜನಿಕ ಶೌಚಾಲಯದಲ್ಲಿ ದುಡಿಯುವ ಕಾರ್ಮಿಕನ ವಿಚಾರದಲ್ಲಿ ಈ ಔದಾರ್ಯ ತೋರಿಸುವುದಿಲ್ಲ. ಆತ ಚಿಲ್ಲರೆ ಹಣ ಕೇಳಿದಾಗಲೂ ನಾವು ಒಂದು ‘ಫ್ರೀ ಅಲ್ವಾ’ ಗದರಿಸುತ್ತೇವೆ.
ನಮ್ಮ ಮಲಮೂತ್ರಗಳ ಬಗ್ಗೆ ನಾವೇ ಅಸಹ್ಯಪಡುವಾಗ ಅನ್ಯರ ಮಲಮೂತ್ರಗಳ ವಾಸನೆ ಸಹಿಸುತ್ತಲೇ ಸಾರ್ವಜನಿಕ ಶೌಚಾಲಯಗಳನ್ನು ಸ್ವಚ್ಛಗೊಳಿಸುವ ಕಾರ್ಮಿಕ ಈ ದೇಶದ ಮೊದಲ ಸ್ವಚ್ಛ ರಾಯಭಾರಿ ಎನ್ನುವ ಗೌರವಕ್ಕೆ ಅರ್ಹ. ನಮ್ಮ ಮನಸ್ಸಿನ ಮಲಿನವನ್ನು ತೆಗೆದು ಹಾಕಿ ಆತನನ್ನು ಗೌರವಿಸುವ ಕಾರ‌್ಯ ಮೊದಲು ಆರಂಭವಾಗಬೇಕು. ಸಾರ್ವಜನಿಕ ಶೌಚಾಲಯಗಳು ಶುಲ್ಕ ರಹಿತವಾಗಿ ಮುಂದುವರಿದರೂ ಇಲ್ಲಿ ‘ಟಿಪ್ಸ್ ’ ಸಂಸ್ಕೃತಿಯನ್ನು ಪ್ರೋತ್ಸಾಹಿಸಬೇಕು. ಟಿಪ್ಸ್ ಜತೆ ಅತಿ ಹೆಚ್ಚಿನ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಶೌಚಾಲಯಗಳಿಗೆ ಮಾಸಿಕ ರೇಟಿಂಗ್ ನೀಡುವ ವ್ಯವಸ್ಥೆ ಆರಂಭಿಸಬೇಕು. ಶೌಚಾಲಯದ ಹೊರಗೆ ರೇಟಿಂಗ್ ಹೆಚ್ಚಿದಷ್ಟೂ ಅದನ್ನು ಬಳಸುವವರ ಸಂಖ್ಯೆ ಹೆಚ್ಚುವುದು ಸಹಜ.
ಈ ಸ್ಪರ್ಧಾತ್ಮಕತೆ ಮೂಲಕ ಕ್ರಮೇಣ ಶೌಚಾಲಯಗಳ ನಿರ್ವಹಣೆಯನ್ನು ಕಾರ್ಪೋರೇಟ್ ಸಂಸ್ಥೆಗಳ ಹೌಸ್ ಕೀಪಿಂಗ್ ಮಟ್ಟಕ್ಕೇರಿಸಬಹುದು. ವಾರ್ಡ್ ಮಟ್ಟದಲ್ಲಿ ಸಾರ್ವಜನಿಕ ರೆಸ್ಟ್ ರೂಮ್‌ಗಳನ್ನು ಚೆನ್ನಾಗಿ ನಿರ್ವಹಣೆ ಮಾಡಿದವರಿಗೆ ಪ್ರೋತ್ಸಾಹಧನ ನೀಡುವ ಜತೆಗೆ ಅಲ್ಲಿನ ಕಾರ್ಪೋರೇಟರ್‌ಗಳನ್ನು, ಅಧಿಕಾರಿಗಳನ್ನು ವರ್ಷಕ್ಕೊಮ್ಮೆ ಗುರುತಿಸಿ ಗೌರವಿಸುವ ಕೆಲಸ ನಡೆದರೆ ಸ್ಪರ್ಧೆಯ ಮಟ್ಟವನ್ನು ಇನ್ನಷ್ಟೂ ಏರಿಸಬಹುದು.
ಇಂತಹ ಸ್ಥಳಗಳಲ್ಲಿ ಗೌರವ ಭಾವದಿಂದ ಟಿಪ್ಸ್ ನೀಡುವುದನ್ನು ಒಂದು ಆಂದೋಲನವಾಗಿ ಪ್ರಚಾರ ಮಾಡಬೇಕು. ಅಕ್ಷಯಕುಮಾರ್ ನಟನೆಯ ‘ಪ್ಯಾಡ್‌ಮ್ಯಾನ್’ ಚಿತ್ರ ಬಂದ ಬಳಿಕ ಹೆಣ್ಣು ಮಕ್ಕಳು ತಮ್ಮ ಮಾಸಿಕ ಋತುಸ್ರಾವದಲ್ಲಾಗುವ ದೈಹಿಕ ಏರುಪೇರುಗಳ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವ ವಾತಾವರಣ ಸೃಷ್ಟಿಯಾಗಿರುವುದು ನಮಗೆ ತಿಳಿದ ವಿಚಾರ. ಇಂಥದ್ದೇ ಅಭಿಯಾನ ನಮ್ಮ ಸಾರ್ವಜನಿಕ ಶೌಚಾಲಯಗಳಿಗೂ ಬೇಕಿದೆ. ಮುಖ್ಯವಾಗಿ ಇವುಗಳ ಬಳಕೆ ಬಗ್ಗೆ ಸಾರ್ವಜನಿಕ ತಿಳಿವಳಿಕೆಯನ್ನು ಮೂಡಿಸಬೇಕಾಗಿದೆ. ಕೆಲವರಿಗೆ ಶೌಚಾಲಯ ಪ್ರವೇಶಿಸಬೇಕಾದರೆ ಸಿಗರೇಟ್ ಬೇಕೇ ಬೇಕು. ಉಗುಳುಭಟರಿಗೆ ಗುಟಕಾ ಉಗಿಯಲು ಅದೇ ಸ್ಥಳ ಬೇಕು. ಕೆಲವರಿಗೆ ದೇಹದ ಕೊಳಕನ್ನು ವಿಸರ್ಜಿಸಿದ ಬಳಿಕ ನೀರು ಹಾಕಿ ಫ್ಲಸ್ ಮಾಡುವ ವ್ಯವಧಾನವೂ ಇರುವುದಿಲ್ಲ. ಇಂಥವರನ್ನು ಸಾರ್ವಜನಿಕವಾಗಿ ಖಂಡಿಸುವಂತಾಗಬೇಕು.
ಇವೆಲ್ಲಕ್ಕೂ ಮೊದಲು ಸಾರ್ವಜನಿಕ ಶೌಚಾಲಯ ಎಂದರೆ ನಮ್ಮಲ್ಲಿ ಮೂಡುವ ಚಿತ್ರಣ ಬದಲಾಗ ಬೇಕಿದೆ. ನಾಲ್ಕು ಗೋಡೆಗಳ ಮಧ್ಯೆ ಒಂದಷ್ಟು ಕಮೋಡ್‌ಗಳನ್ನು ಹಾಕಿದರೆ ಶೌಚಾಲಯ ಸಿದ್ಧ ಎಂಬ ಹಳೆಯ ಸೂತ್ರವನ್ನು ಬಿಟ್ಟು ಕೃಷ್ಣಬೈರೇಗೌಡರು ಪ್ರಸ್ತಾಪಿಸಿದಂತೆ ಇವುಗಳಿಗೆ ಹೊಸ ರೂಪ ಕೊಡಬೇಕಾಗಿದೆ. ಸಾರ್ವಜನಿಕ ಶೌಚಾಲಯಗಳೂ ಕೂಡ ಮಾಲ್‌ಗಳಲ್ಲಿ, ಹೈಟೆಕ್ ಚಿತ್ರಮಂದಿರ ಗಳಲ್ಲಿ ಕಾಣುವ ರೆಸ್ಟ್ ರೂಮ್‌ಗಳ ಮಾದರಿಯಲ್ಲಿ ಇರಬೇಕು. ಇವುಗಳ ಒಳಹೊಕ್ಕಾಗ ಮೂಡುವ ಅನುಭೂತಿಯೇ ನಮ್ಮನ್ನು ಸ್ವಚ್ಛತೆಗೆ ಪ್ರೇರೇಪಿಸುವಂತಿರಬೇಕು. ನಮ್ಮ ಮನೆಯ ಸ್ನಾನಗೃಹ ಗಳಿಗೂ ಇವುಗಳಿಗೂ ಇರುವ ವ್ಯತ್ಯಾಸದ ಗೆರೆ ಅಳಿದು ಹೋದರೆ ಸ್ವಚ್ಛತೆಯ ಹೊಸ ಸಂಸ್ಕೃತಿ ಯೊಂದು ಹುಟ್ಟಿಕೊಳ್ಳಲು ಸಾಧ್ಯವಿದೆ.
ಸರಕಾರದ ಅನುದಾನವಿಲ್ಲದೆ ಶೌಚಾಲಯಗಳ ನಿರ್ವಹಣೆ ಮತ್ತು ಸಿಬ್ಬಂದಿಗಳ ವೇತನ ನೀಡಲು ಸಾಕಷ್ಟು ಮಾರ್ಗಗಳಿವೆ. ನಗರಗಳಲ್ಲಿ ಶೌಚಾಲಯಗಳು ಸಾರ್ವಜನಿಕರಿಗೆ ಮಾತ್ರವಲ್ಲ, ಸುತ್ತ ಮುತ್ತಲ ವ್ಯಾಪಾರಸ್ಥರಿಗೆ ಅಗತ್ಯವಿದೆ. ಸ್ಥಳೀಯ ವ್ಯಾಪಾರಿಗಳಿಗೆ ಆಯಾ ಪ್ರದೇಶದ ಶೌಚಾಲಯ ವನ್ನು ದತ್ತು ತೆಗೆದುಕೊಳ್ಳುವಂತೆ ಪ್ರೋತ್ಸಾಹಿಸಬಹುದು. ಶೌಚಾಲಯಗಳ ನಿರ್ವಹಣೆಗೆ ಮುಂದೆ ಬರುವ ಕಂಪನಿಗಳಿಗೆ ತೆರಿಗೆ ವಿನಾಯಿತಿಯಂತಹ ಪ್ರೋತ್ಸಾಹ ನೀಡಬಹುದು. ಆಯಾ ಕಂಪನಿಗಳ ಜಾಹೀರಾತನ್ನು ಇಲ್ಲಿ ಪ್ರದರ್ಶಿಸಬಹುದು. ಅವುಗಳ ಸಿಎಸ್‌ಆರ್ ಫಂಡ್‌ನಿಂದ ಹಣ ಪಡೆಯ ಬಹುದು.
ಸಾರ್ವಜನಿಕ ಶೌಚಾಲಯಗಳ ನಿರ್ವಹಣೆಗೆ ನೀರನ್ನು ಒದಗಿಸುವುದು ಸವಾಲಿನ ಕೆಲಸ. ಆದರೆ ಬೆಂಗಳೂರಿನ ಸಾವಿರಾರು ಸ್ವಚ್ಛ ನೀರಿನ ಘಟಕಗಳಲ್ಲಿ ಸಂಸ್ಕರಣೆ ರೂಪದಲ್ಲಿ ಲಕ್ಷಗಟ್ಟಲೆ ಲೀಟರ್ ನೀರು ಪ್ರತಿದಿನ ವ್ಯರ್ಥವಾಗಿ ಚರಂಡಿ ಸೇರುತ್ತದೆ. ಈ ನೀರನ್ನು ಸಾರ್ವಜನಿಕ ಶೌಚಾಲಯಗಳಲ್ಲಿ ಬಳಸಿಕೊಳ್ಳುವ ವ್ಯವಸ್ಥೆ ಮಾಡಬಹುದು. ಒಳಚರಂಡಿ ವ್ಯವಸ್ಥೆ ಇಲ್ಲದ ಪ್ರದೇಶಗಳಿಗಾಗಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ವಿಶೇಷ ತಂತ್ರಜ್ಞಾನ ರೂಪಿಸಿದೆ.
‘ಅನರೋಬಿಕ್ ಬ್ಯಾಕ್ಟೀರಿಯಾ’ಗಳ ಮೂಲಕ ಮಾನವ ತ್ಯಾಜ್ಯವನ್ನು ನೀರು ಮತ್ತು ಅನಿಲವಾಗಿ ವಿಲೇವಾರಿ ಮಾಡುವ ಈ ತಂತ್ರಜ್ಞಾನದಿಂದ ದುರ್ವಾಸನೆಯೂ ದೂರವಾಗುತ್ತದೆ. ಈಗಾಗಲೇ ರೈಲ್ವೆ ಕೋಚ್‌ಗಳಲ್ಲಿ ಇದನ್ನು ಯಶಸ್ವಿಯಾಗಿ ಬಳಸಲಾಗುತ್ತಿದೆ.
ಕೆಲ ವರ್ಷಗಳ ಹಿಂದೆ ಬೆಂಗಳೂರು ಮತ್ತು ಮೈಸೂರಿನಲ್ಲಿ ಇ-ಶೌಚಾಲಯಗಳನ್ನು ಪ್ರಾಯೋಗಿಕ ವಾಗಿ ಜಾರಿಗೆ ತರಲಾಗಿತ್ತು. ನಾಣ್ಯ ಹಾಕಿ ಒಳ ಪ್ರವೇಶಿಸುವ ಮತ್ತು ಬಳಕೆ ಮುಗಿದ ನಂತರ ತಾನಾಗಿಯೇ ಫ್ಲಶ್ ಆಗುವ ವ್ಯವಸ್ಥೆ ಇದರಲ್ಲಿತ್ತು. ಬಳಕೆಯ ನಂತರ ನೆಲವನ್ನು ತಾನಾಗಿಯೇ ಶುಚಿಗೊಳಿಸುವ ಸೆನ್ಸಾರ್‌ಗಳು ಈ ಯಂತ್ರದಲ್ಲಿದ್ದವು. ಆದರೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಎರಡೂ ನಗರಗಳಲ್ಲಿ ಈ ವ್ಯವಸ್ಥೆ ವಿಫಲವಾಯಿತು.
ಮೈಸೂರಿನಲ್ಲಿ ಬಸ್ ತಂಗುದಾಣಗಳಿಗೆ ಹೊಂದಿಕೊಂಡು ಇವುಗಳನ್ನು ಇಡಲಾಗಿತ್ತು. ಸ್ವಲ್ಪವೂ ಖಾಸಗಿತನವಿಲ್ಲದೆ ಸಾರ್ವಜನಿಕವಾಗಿ ಶೌಚಪೆಟ್ಟಿಗೆಯೊಳಗೆ ಪ್ರವೇಶಿಸಲು ಸಾರ್ವಜನಿಕರು ವಿಶೇಷವಾಗಿ ಮಹಿಳೆಯರು ಹಿಂದೇಟು ಹಾಕುತ್ತಿದ್ದರು. ಆರಂಭದ ಒಂದೆರಡು ತಿಂಗಳು ಇ- ಶೌಚಾಲಯಕ್ಕೆ ನೀರಿನ ಪೂರೈಕೆ ವ್ಯವಸ್ಥೆ ಮಾಡಿದ ಪಾಲಿಕೆ ಬಳಿಕ ನಿರ್ವಹಣೆ ಮಾಡಲೇ ಇಲ್ಲ. ವರ್ಷ ಕಳೆಯುವುದರೊಳಗೆ ಶೌಚಾಲಯಗಳ ಮೇಲಿದ್ದ ಟ್ಯಾಂಕ್‌ಗಳು ಕಾಣೆಯಾದವು. ಕ್ರಮೇಣ ಈ ಶೌಚಾಲಯಗಳೂ ನಾಪತ್ತೆಯಾದವು. ಈ ನೆಪದಲ್ಲಿ ಸಾರ್ವಜನಿಕರ ಹತ್ತಾರು ಕೋಟಿ ರು. ತೆರಿಗೆ ಹಣ ಖರ್ಚಾಗಿದ್ದೇ ಬಂತು.
ತಂತ್ರಜ್ಞಾನ ಸ್ನೇಹಿಯಾದ ಯಾವುದೇ ಹೊಸ ವ್ಯವಸ್ಥೆ ಜಾರಿ ಮಾಡಿದರೂ ಅದನ್ನು ಗುಜರಿಗೆ ತಳ್ಳುವಲ್ಲಿ ನಮ್ಮ ಅಧಿಕಾರಿಗಳು ನಿಸ್ಸೀಮರು. ಪಬ್ಲಿಕ್ ರೆಸ್ಟ್ ರೂಮ್ ಕಲ್ಪನೆ ಯಶಸ್ವಿಯಾಗ ಬೇಕಾದರೆ ಅದರ ನಿರ್ವಹಣೆಯಲ್ಲಿ ಸರಕಾರದ ಪಾತ್ರ ಅತ್ಯಂತ ಕಡಿಮೆ ಇರಬೇಕು. ಜನಸಹಭಾಗಿ ತ್ವದಿಂದಷ್ಟೇ ಈ ಮಾದರಿ ಯಶಸ್ವಿಯಾಗಬಹುದು. ಕೃಷ್ಣಬೈರೇಗೌಡರು ತಮ್ಮ ಕಲ್ಪನೆಯ ಮಾದರಿ ಶೌಚಾಲಯಗಳ ನಿರ್ಮಾಣಕ್ಕೆ ಮುಂದಾಗುವ ಮುನ್ನ ಅವುಗಳ ಮುಂದಿನ ನಿರ್ವಹಣೆ ಬಗ್ಗೆ ಹೆಚ್ಚು ಒತ್ತು ನೀಡಬೇಕಾಗುತ್ತದೆ.