ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Srivathsa Joshi Column: ಅನಿವಾರ್ಯಕ್ಕೂ ಅನುಕೂಲಕ್ಕೂ ಒದಗುವ ಬದಲಿ ಬಳಕೆ

ದೇವರು ಅಲ್ಪತೃಪ್ತ, ಹೇಗೂ ಅಡ್ಜಸ್ಟ್ ಮಾಡ್ಕೊಳ್ತಾನೆ ಎಂಬ ಪೂರ್ಣ ವಿಶ್ವಾಸವೂ ಅಲ್ಲಿರುತ್ತದೆ. ಆದ್ದರಿಂದಲೇ ಅಕ್ಷತೆಕಾಳಿನ ಪ್ರಯೋಗ (ಉಪಯೋಗ) ಮಾಡುತ್ತೇವೆ. ಒಮ್ಮೆ ಯೋಚಿಸಿ ನೋಡಿ. ಯಾವುದೋ ಒಂದು ಪೂಜಾದ್ರವ್ಯಕ್ಕೆ ಬದಲಿಯಾಗಿ ಅಕ್ಷತೆಕಾಳನ್ನು ಬಳಸುವ ಈ ‘ಅಡ್ಜಸ್ಟ್‌ಮೆಂಟ್ ತಂತ್ರಗಾರಿಕೆ’ ನಾವಂದುಕೊಂಡಿದ್ದಕ್ಕಿಂತ ಬಹಳ ಆಳ ಎತ್ತರ ವಿಸ್ತಾರಗಳುಳ್ಳದ್ದು!

ತಿಳಿರುತೋರಣ

ಅಕ್ಷತೆಕಾಳು ಒಂದು ಪೂಜಾದ್ರವ್ಯ. ದೇವರ ಪೂಜೆಯಲ್ಲಿ “ಗಂಧಂ ಸಮರ್ಪಯಾಮಿ ಹರಿದ್ರಾ ಕುಂಕುಮಂ ಸಮರ್ಪಯಾಮಿ ನಾನಾವಿಧ ಪರಿಮಳ ಪುಷ್ಪಾಣಿ ಸಮರ್ಪಯಾಮಿ..." ಎನ್ನುತ್ತ ಗಂಧ, ಅರಿಸಿನ ಕುಂಕುಮ ಮತ್ತು ಬಗೆಬಗೆಯ ಹೂವುಗಳನ್ನು ದೇವರಿಗೆ ಮುಡಿಸಿದಂತೆ “ಅಕ್ಷತಾನ್ ಸಮರ್ಪಯಾಮಿ" ಎಂದು ಹೇಳಿ ಅಕ್ಷತೆಕಾಳುಗಳನ್ನು ಸಮರ್ಪಿಸುತ್ತೇವೆ. ಅದರಲ್ಲೇನೂ ವಿಶೇಷವಿಲ್ಲ. ಆದರೆ ಮಿಕ್ಕೆಲ್ಲ ಪೂಜಾದ್ರವ್ಯಗಳಿಗಿಲ್ಲದ ಒಂದು ಅನನ್ಯತೆ, ಒಂದು ವಿಶೇಷ ಮೌಲ್ಯ ಅಥವಾ ಸಾಮರ್ಥ್ಯ ಅಕ್ಷತೆಕಾಳು ಗಳಿಗಿವೆ.

ಅದೇನು ಗೊತ್ತೇ? ಯಾವುದೋ ಒಂದು ಪೂಜಾದ್ರವ್ಯವು ಆಬ್ಸೆಂಟ್ ಆಗಿದ್ದರೆ ಅದಕ್ಕೆ ಸಬ್‌ಸ್ಟಿಟ್ಯೂ ಟ್ ಆಗಿ ಅಕ್ಷತೆಕಾಳನ್ನು ಸಮರ್ಪಣೆ ಮಾಡಲಿಕ್ಕಾಗುತ್ತದೆ! ಮತ್ತು ಇದು ದೇವರಿಗೂ ಒಪ್ಪಿಗೆ ಯಾಗುತ್ತದೆ (ಎಂದು ನಾವೇ ಅಂದುಕೊಳ್ಳುತ್ತೇವೆ)! ಹಾಗಾಗಿಯೇ “ಸರ್ವೋಪಚಾರ ಪೂಜಾರ್ಥೇ ಅಕ್ಷತಾನ್ ಸಮರ್ಪಯಾಮಿ" ಎಂಬ ಮಂತ್ರಭಾಗವೂ ಪೂಜೆಯಲ್ಲಿ ಬರುತ್ತದೆ. “ಈ ಪೂಜೆಯನ್ನು ನಾನು ಇನ್ನಷ್ಟು ವೈಭವಯುತವಾಗಿ, ಇನ್ನೂ ಹೆಚ್ಚಿನ ಉಪಚಾರಗಳೊಂದಿಗೆ ಮಾಡಬಹುದಿತ್ತು/ ಮಾಡಬೇಕಿತ್ತು, ಆದರೆ ನನ್ನ ಬಳಿ ಕೆಲವು ದ್ರವ್ಯಗಳು ಪರಿಕರಗಳು ಇಲ್ಲ ಅವುಗಳ ಬದಲಿಗೆ ಅಕ್ಷತೆಕಾಳನ್ನು ಅರ್ಪಿಸುತ್ತಿದ್ದೇನೆ" ಎನ್ನುವ ವಿನೀತಭಾವನೆ ಅಲ್ಲಿ ವ್ಯಕ್ತವಾಗಿರುತ್ತದೆ.

ದೇವರು ಅಲ್ಪತೃಪ್ತ, ಹೇಗೂ ಅಡ್ಜಸ್ಟ್ ಮಾಡ್ಕೊಳ್ತಾನೆ ಎಂಬ ಪೂರ್ಣ ವಿಶ್ವಾಸವೂ ಅಲ್ಲಿರುತ್ತದೆ. ಆದ್ದರಿಂದಲೇ ಅಕ್ಷತೆಕಾಳಿನ ಪ್ರಯೋಗ (ಉಪಯೋಗ) ಮಾಡುತ್ತೇವೆ. ಒಮ್ಮೆ ಯೋಚಿಸಿ ನೋಡಿ. ಯಾವುದೋ ಒಂದು ಪೂಜಾದ್ರವ್ಯಕ್ಕೆ ಬದಲಿಯಾಗಿ ಅಕ್ಷತೆಕಾಳನ್ನು ಬಳಸುವ ಈ ‘ಅಡ್ಜಸ್ಟ್‌ಮೆಂಟ್ ತಂತ್ರಗಾರಿಕೆ’ ನಾವಂದುಕೊಂಡಿದ್ದಕ್ಕಿಂತ ಬಹಳ ಆಳ ಎತ್ತರ ವಿಸ್ತಾರಗಳುಳ್ಳದ್ದು!

ಇದನ್ನೂ ಓದಿ: Srivathsa Joshi Column: ದಾಳಿಂಬೆ ಬಗೆಗಿನ ಮತ್ತಷ್ಟು ರಂಜನೀಯ ಕಥಾನಕಗಳು

ನಮಗೇ ಅರಿವಿಲ್ಲದಂತೆ ನಮ್ಮ ಜೀವನದಲ್ಲಿದು ಹಾಸುಹೊಕ್ಕಿದೆ. ಹಬ್ಬಹರಿದಿನಗಳ ಆಚರಣೆ ಯಲ್ಲಿ, ಅಡುಗೆಮನೆಯ ಪಾಕಪ್ರಯೋಗಗಳಲ್ಲಿ, ಕೊನೆಗೆ ನಮ್ಮ ದಿನವಹಿ ವ್ಯವಹಾರಗಳಲ್ಲೂ. ಕೆಲವೊಮ್ಮೆ ಅನಿವಾರ್ಯವಾಗಿ, ಮತ್ತೆ ಕೆಲವೊಮ್ಮೆ ಅನುಕೂಲಶಾಸ್ತ್ರಕ್ಕೆಂದು. ಇದನ್ನು ನಾನು ‘ಸಬ್‌ಸ್ಟಿಟ್ಯೂಟ್ ಸಂಸ್ಕೃತಿ’ ಎಂದು ಗುರುತಿಸುತ್ತೇನೆ.

ಸಬ್‌ಸ್ಟಿಟ್ಯೂಟ್ ಆಗುವ ಸನ್ನಿವೇಶವನ್ನು ಕ್ರಿಕೆಟ್‌ನಲ್ಲಿ ಹನ್ನೆರಡನೇ ಆಟಗಾರನಿಗೆ ಹೋಲಿಸುತ್ತೇನೆ. ಹಾಗೆ ನೋಡಿದರೆ ಸಾಂಪ್ರದಾಯಿಕ ಕ್ರಿಕೆಟ್‌ನಲ್ಲಿ ಹನ್ನೆರಡನೇ ಆಟಗಾರನ ಶಕ್ತಿಸಾಮರ್ಥ್ಯ ಸೀಮಿತ. ಆತ/ಆಕೆ ಫೀಲ್ಡಿಂಗ್ ಮಾತ್ರ ಮಾಡಬಹುದು. ಬ್ಯಾಟಿಂಗ್, ಬೌಲಿಂಗ್, ವಿಕೆಟ್‌ಕೀಪಿಂಗ್ ಯಾವು ದನ್ನೂ ಮಾಡುವಂತಿಲ್ಲ. ಆದರೆ ನಮ್ಮ ಜೀವನದಲ್ಲಿ ಹಾಸುಹೊಕ್ಕಿರುವ ಸಬ್‌ಸ್ಟಿಟ್ಯೂಟ್ ಸನ್ನಿವೇಶಗಳು ಸೀಮಿತ ಸಾಮರ್ಥ್ಯದವಲ್ಲ.

ಹಾಗಾಗಿ ಸಾಂಪ್ರದಾಯಿಕ ಕ್ರಿಕೆಟ್‌ನ ಹನ್ನೆರಡನೇ ಆಟಗಾರನ ಹೋಲಿಕೆಗಿಂತ ಈಗಿನ ಟಿ೨೦ ಐಪಿಎಲ್ ಫಾರ್ಮ್ಯಾಟ್ʼನಲ್ಲಿ ಹೊಸ ನಿಯಮಗಳಂತೆ ಇಂಪ್ಯಾಕ್ಟ್ ಪ್ಲೇಯರ್ ರಿಪ್ಲೇಸ್‌ಮೆಂಟ್ ಗೆ ಹೋಲಿಸುವುದು ಒಳ್ಳೆಯದೇನೋ. ಇರಲಿ. ಈಗ ಕೆಲವು ಉದಾಹರಣೆಗಳ ಮೂಲಕ ನನ್ನ ಈ ಕಾನ್ಸೆಪ್ಟನ್ನು ವಿಶದಪಡಿಸುತ್ತೇನೆ. ನಾನು ಒಂದರಿಂದ ಐದನೆಯ ತರಗತಿವರೆಗೆ ಶಿಕ್ಷಣ ಪಡೆದದ್ದು ನಮ್ಮ ಹಳ್ಳಿಯ ಏಕೋಪಾಧ್ಯಾಯ ಏಕಕೊಠಡಿ ಸ.ಕಿ.ಪ್ರಾ ಶಾಲೆಯಲ್ಲಿ (ಈಗ ಅದು ಮುಚ್ಚಿ ಹೋಗಿದೆ, ಕಟ್ಟಡ ಪಾಳುಬಿದ್ದಿದೆ, ಬೇಸರದ ಆ ಸಂಗತಿ ಇಲ್ಲಿ ಅಪ್ರಸ್ತುತ).

62 ok

ಏಕೋಪಾಧ್ಯಾಯ ಶಾಲೆ ಆದ್ದರಿಂದ ಉಪಾಧ್ಯಾಯರು ಯಾವಾಗಾದರೂ ರಜೆ ಹಾಕಬೇಕಾಗಿ ಬಂದಾಗ ಶಾಲೆಗೇ ರಜೆ ಘೋಷಿಸುವುದಕ್ಕಿಂತ ನಮ್ಮೂರ ಪಕ್ಕದ ಬೇರೆ ಶಾಲೆಯಿಂದ ಯಾರಾದರೂ ಅಧ್ಯಾಪಕರು ಆ ದಿನಗಳ ಮಟ್ಟಿಗೆ ಸಬ್‌ಸ್ಟಿಟ್ಯೂಟ್ ಟೀಚರ್ ಆಗಿ ಬರುತ್ತಿದ್ದರು. ಒಂದೆರಡು ದಿನ ಮಾತ್ರ ಅಂತಾದರೆ ಅವರೇನೂ ರೆಗ್ಯುಲರ್ ಪಾಠ-ಪದ್ಯ ಬೋಧನೆ ಮಾಡುತ್ತಿರಲಿಲ್ಲ,

ಉಕ್ತಲೇಖನವೋ ಕಾಪಿ ಬರೆಸುವುದೋ ಹಾಡು ಹೇಳಿಸುವುದೋ ಏನೋ ಒಂದನ್ನು ಮಕ್ಕಳಿಂದ ಮಾಡಿಸಿ ಕಾಲಕ್ಷೇಪ ಮಾಡುತ್ತಿದ್ದರು. ಆ ಮಟ್ಟಿಗೆ ಅವರನ್ನು ಕ್ರಿಕೆಟ್‌ನ ಹನ್ನೆರಡನೇ ಆಟಗಾರನಿಗೇ ಹೋಲಿಸಬಹುದಿತ್ತು. ಆದರೆ ಈಗ್ಗೆ ನಾಲ್ಕೈದು ವರ್ಷಗಳಿಂದ ನಾನೂ ತೊಡಗಿಸಿಕೊಂಡಿರುವ ಗೀತಾಪರಿವಾರದ ಆನ್‌ಲೈನ್ ಭಗವದ್ಗೀತೆ ಕಲಿಕೆ ತರಗತಿಗಳಲ್ಲಿ ಹಾಗಲ್ಲ. ಯಾರಾದರೂ ಕೋರ್‌ಟ್ರೈನರ್ ರಜೆ ಹಾಕಬೇಕಾಗಿ ಬಂದರೆ ಅವರ ಬದಲಿಗೆ ಸಬ್‌ಸ್ಟಿಟ್ಯೂಟ್ ಟ್ರೈನರ್ ಯಥಾವತ್ತಾಗಿ, ಪ್ರಶಿಕ್ಷಾರ್ಥಿಗಳಿಗೆ ಒಂಚೂರೂ ವ್ಯತ್ಯಾಸ ಅನುಭವಕ್ಕೆ ಬಾರದಂತೆ, ತರಗತಿ ನಡೆಸಬೇಕು. ಶ್ಲೋಕಗಳ ಪಠನವನ್ನು ಪರಿಣಾಮಕಾರಿಯಾಗಿ ಕಲಿಸಬೇಕು. ಥೇಟ್ ಐಪಿಎಲ್‌ನ ಇಂಪ್ಯಾಕ್ಟ್ ಪ್ಲೇಯರ್ ರಿಪ್ಲೇಸ್‌ಮೆಂಟ್‌ನಂತೆಯೇ. ಇನ್ನೂ ಒಳ್ಳೆಯ ಉದಾಹರಣೆಗಳು ಬೇಕಿದ್ದರೆ ಅನಿವಾಸಿ ಭಾರತೀಯರ, ಅದೂ ಈಗಿನದಲ್ಲ ಒಂದೆರಡು ದಶಕಗಳ ಹಿಂದಿನ ಕಾಲದ, ಹಬ್ಬದಾಚರಣೆ ವಿಧಾನಗಳನ್ನು ಗಮನಿಸಬಹುದು.

ತಾಯ್ನಾಡಿಂದ ಬಹುದೂರ ಸಾಗಿ ಪ್ರಪಂಚದ ಯಾವ್ಯಾವುದೋ ಮೂಲೆಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಿಗೆ ಮುಖ್ಯವಾಗಿ ಹಬ್ಬಹರಿದಿನಗಳ ಆಚರಣೆಯ ವೇಳೆ ಸಬ್‌ಸ್ಟಿಟ್ಯೂಟ್ ಸಂಸ್ಕೃತಿ ಅನಿವಾರ್ಯವಾಗಿತ್ತು. ಆಗಿತ್ತು ಎಂದು ಭೂತಕಾಲದಲ್ಲಿ ಹೇಳಿದ್ದೇಕೆಂದರೆ- ಈಗ ಎಲ್ಲ ಕಡೆ ಎಲ್ಲವೂ ಸಿಗುತ್ತದೆ, ಅಮೆಝಾನ್ ಬಂದ ಮೇಲೆ ಅಕ್ಷರಶಃ ಎ ಟು ಝಡ್ ಎಲ್ಲವೂ ಸಿಗುತ್ತದೆ ಎಂದಾಗಿರುವುದರಿಂದ ಇದು ಸುಮಾರು ಇಪ್ಪತ್ತು ವರ್ಷಗಳ ಹಿಂದಿನ ದಿನಗಳ ವಿಚಾರ.

ಸಂಕ್ರಾಂತಿ ಬಂತೆಂದರೆ ಕಬ್ಬಿನಜಲ್ಲೆ, ಯುಗಾದಿಯಂದು ಮುಂಬಾಗಿಲಿಗೆ ತೋರಣ ಕಟ್ಟಲಿಕ್ಕೆ ಮಾವಿನೆಲೆ, ಬೇವುಬೆಲ್ಲ ತಯಾರಿಸಲಿಕ್ಕೆ ಬೇವಿನ ಸೊಪ್ಪು, ಗೌರಿಹಬ್ಬ-ವರಮಹಾಲಕ್ಷ್ಮೀ ಪೂಜೆಗೆ ಬಾಳೆದಿಂಡು, ಮಲ್ಲಿಗೆ ಸೇವಂತಿಗೆ ಹೂವಿನ ರಾಶಿ... ಭಾರತದಲ್ಲಿದ್ದರೆ ಹಬ್ಬದ ತಯಾರಿಯ ಸಂಭ್ರಮವೇ ಬೇರೆ. ಇಡೀ ವಾತಾವರಣಕ್ಕೆ ವಿಶೇಷ ಕಳೆ. ಆದರೆ ಅಮೆರಿಕ, ಆಸ್ಟ್ರೇಲಿಯಾ, ಇಂಗ್ಲೆಂಡ್, ಈಜಿಪ್ಟ್, ಉರುಗ್ವೇ... ಪರದೇಶಗಳಲ್ಲಿ ಎಲ್ಲಿ ಸಿಗಬೇಕು ಆ ಸಂಭ್ರಮ? ಹಬ್ಬದಾಚರಣೆಗೆ ಬೇಕಾದ ಸಾಂಪ್ರದಾಯಿಕ ವಸ್ತುಗಳು ಅಲ್ಲಿ ದೊರಕುವುದಿಲ್ಲ.

ಹಾಗಂತ ಹಬ್ಬವನ್ನೇ ಆಚರಿಸದಿರಲಿಕ್ಕಾಗ್ತದಾ? ಅಂಥ ಸಂದರ್ಭಗಳಲ್ಲಿ ನೆರವಿಗೆ ಬರುವುದೇ ಈ ಸಬ್‌ಸ್ಟಿಟ್ಯೂಟ್ ಸಂಸ್ಕೃತಿ. ಅನುಕೂಲಶಾಸ್ತ್ರ ಅಥವಾ ಅಡ್ಜಸ್ಟ್‌ಮೆಂಟ್ ಶಾಸ್ತ್ರ. ಇಪ್ಪತ್ತು ವರ್ಷಗಳ ಹಿಂದೆ ವಿಜಯಕರ್ನಾಟಕ ಪತ್ರಿಕೆಯಲ್ಲಿ ಪರಾಗಸ್ಪರ್ಶ ಅಂಕಣ ಬರೆಯುತ್ತಿದ್ದಾಗ ನಾನೊಮ್ಮೆ ಈ ವಿಷಯದಲ್ಲೊಂದಿಷ್ಟು ಕ್ಷೇತ್ರಕಾರ್ಯ ಮಾಡಿ, ಒಂದು ಸಮೀಕ್ಷೆ ನಡೆಸಿ, ಲೇಖನ ಬರೆದಿದ್ದೆ.

ನಾನು ಮಾಡಿದ್ದ ಸಮೀಕ್ಷೆಯೆಂದರೆ ಅಂಕಣದ ಓದುಗರಾಗಿ ಪರಿಚಿತರಾಗಿದ್ದ ಕೆಲವು ಅನಿವಾಸಿ ಕನ್ನಡಿಗ ಕುಟುಂಬಗಳಿಗೆ ಇಮೇಲ್ ಬರೆದು “ನೀವು ಹಬ್ಬದಾಚರಣೆಯಲ್ಲಿ ಅಥವಾ ದೈನಂದಿನ ಚಟುವಟಿಕೆಗಳಲ್ಲಿ ಸಬ್‌ಸ್ಟಿಟ್ಯೂಟ್ ಸಂಸ್ಕೃತಿ ಅಳವಡಿಸಿಕೊಳ್ಳುತ್ತೀರಾ? ‘ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳುವ’ ಪರಿಪಾಠ ನಿಮ್ಮಲ್ಲಿ ಇದೆಯಾ? ಸ್ವಾರಸ್ಯಕರವಿದ್ದರೆ ತಿಳಿಸುತ್ತೀರಾ?" ಎಂದು ಕೇಳಿದ್ದು. ಉತ್ತರವಾಗಿ ಬಂದಿದ್ದ ಒಂದಕ್ಕಿಂತ ಒಂದು ಕ್ರಿಯೇಟಿವ್ ಐಡಿಯಾಗಳು ನನ್ನನ್ನು ದಂಗುಬಡಿಸಿದ್ದವು. ಆ ಲೇಖನದ ಕೆಲವು ಪ್ಯಾರಗ್ರಾಫ್‌ʼಗಳನ್ನು ಇಲ್ಲಿ ಯಥಾವತ್ತಾಗಿ ಸೇರಿಸಿಕೊಂಡಿದ್ದೇನೆ.

“ಯುಗಾದಿಯಂದು ಬೇವುಬೆಲ್ಲ ಮಾಡಲಿಕ್ಕೆ ಬೇವಿನಸೊಪ್ಪು ಸಿಗೋದಿಲ್ಲಾಂತ ಬೆಲ್ಲದೊಟ್ಟಿಗೆ ಮೆಂತ್ಯದ ಕಾಳುಗಳನ್ನು ಕುಟ್ಟಿ ಹದವಾದ ಸಿಹಿ-ಕಹಿ ಮಿಶ್ರಣ ಮಾಡ್ತಾರಂತೆ ಶಿಕಾಗೊದಲ್ಲಿರುವ ಅನುಪಮಾ ಮಂಗಳವೇಢೆ. ಅವರ ಲಾಜಿಕ್ ಏನೆಂದರೆ ‘ಬೇವಾದರೇನು ಮೆಂತ್ಯವಾದರೇನು ರುಚಿಯಲ್ಲೆರಡೂ ಕಹಿಯಲ್ಲವೇನು?’ ಎಂದು.

ಕ್ಯಾಲಿಫೋರ್ನಿಯಾದ ಮಧುಕಾಂತ್ ಕೃಷ್ಣಮೂರ್ತಿ ಬರೆಯುತ್ತಾರೆ- ‘ನಮ್ಮಮ್ಮ ಇಲ್ಲಿಗೆ ಬಂದಿದ್ದಾಗ ಯುಗಾದಿಯಂದು ಬೆಲ್ಲದ ಜತೆ ಹಾಗಲಕಾಯಿ ರುಬ್ಬಿ ಮಿಶ್ರಣ ತಯಾರಿಸಿದ್ದರು. ಪಕ್ಕಾ ಬೇವುಬೆಲ್ಲ ಥರನೇ ಇತ್ತು. ಬಹುಶಃ ಬೇವಿನಕಾಯಿಗೆ ಹಾಗಲಕಾಯಿ ಸಾಕ್ಷಿ ಅನ್ನೋ ಗಾದೆ ಹುಟ್ಟಿದ್ದೇ ಹಾಗೆ ಇರಬಹುದು. ಬೇವಿಗೆ ಸಬ್‌ಸ್ಟಿಟ್ಯೂಟ್ ಆಗಿ ಮೆಂತ್ಯ ಅಥವಾ ಹಾಗಲಕಾಯಿ ಬಳಸಬಹುದಂತ ಯಾರಿಗೇ ಆದ್ರೂ ಸುಲಭದಲ್ಲೇ ಹೊಳೆಯಬಹುದು. ಅಥವಾ ನ್ಯೂಜೆರ್ಸಿಯ ವಸಂತಾ ಶಶಿ ಅವರಂತೆ ಕರಿಬೇವಿನ ಎಲೆನಾದ್ರೂ ಉಪಯೋಗಿಸಬಹುದು. ಆದರೆ ಸ್ವಿಡ್ಜರ್ಲೆಂಡ್‌ ನಲ್ಲಿರುವ ಅಶ್ವಿನಿ ಆಶ್ರಿತ್ ಅವರ ಬೇವುಬೆಲ್ಲ ರೆಸಿಪಿ ಕೇಳಿ: ‘ಸ್ಕಿನ್ ಟ್ರೀಟ್‌ಮೆಂಟ್‌ಗಂತ ಭಾರತದಿಂದ ತಂದಿದ್ದ ಆಯುರ್ವೇದಿಕ್ ನೀಮ್ ಟ್ಯಾಬ್ಲೆಟ್‌ಗಳನ್ನು ಬೆಲ್ಲದೊಟ್ಟಿಗೆ ಕುಟ್ಟಿ ಪುಡಿಮಾಡಿ ಬೇವುಬೆಲ್ಲ ತಯಾರಿಸಿದ್ದೇನೆ’ ಎನ್ನುತ್ತಾರವರು!

ಕುವೆಂಪು ಇದನ್ನೆಲ್ಲ ಕೇಳಿಸಿಕೊಂಡಿದ್ದಿದ್ರೆ ‘ಎಲ್ಲಾದರೂ ಇರು ಎಂತಾದರೂ ಇರು ಹೇಗಾದ್ರೂ ಸರಿ ಬೇವುಬೆಲ್ಲ ಮಾಡಿ ತಿನ್ನುತ್ತಿರು’ ಅಂತಿದ್ರೋ ಏನೋ!" “ಮೇರಿಲ್ಯಾಂಡ್‌ನ ಶೈಲಜಾ ಗುಂಡೂರಾವ್‌ಗೆ ಬೇವಿನಸೊಪ್ಪಿನ ಅಲಭ್ಯತೆಯ ಸಮಸ್ಯೆ ಇಲ್ಲ. ಅವರ ಸ್ನೇಹಿತೆಯೊಬ್ಬರು ಫ್ಲೋರಿಡಾದಲ್ಲಿದ್ದಾರಂತೆ, ಅವರು ಬೇವು ಮಾವು ತುಳಸಿ ಇತ್ಯಾದಿಗಳನ್ನು ತಮ್ಮ ಮನೆಹಿತ್ತಲಲ್ಲೇ ಬೆಳೆಸಿದ್ದು ಯುಗಾದಿಗೆ ಮೊದಲೇ ಖಾಸಾ ಗೆಳತಿಯರಿಗೆಲ್ಲ ಕೊರಿಯರ್‌ನಲ್ಲಿ ಬಟವಾಡೆ ಮಾಡ್ತಾರಂತೆ.

ಮಿಕ್ಕಂತೆ ಶೈಲಜಾ ಅವರ ಸಬ್‌ಸ್ಟಿಟ್ಯೂಟ್ ಲಿಸ್ಟ್ ಚೆನ್ನಾಗಿದೆ. ಎಳ್ಳುಬೆಲ್ಲದ ಬದಲು ಎಳ್ಳಿನ ಚಿಕ್ಕಿ, ಸಕ್ಕರೆಅಚ್ಚಿನ ಬದಲು ಚಾಕಲೇಟ್, ಕಬ್ಬಿನ ಬದಲು ಬಾಳೆಹಣ್ಣು, ಬಾಗಿನದಲ್ಲಿ ಅರಸಿನಕುಂಕುಮ ಪ್ಯಾಕೆಟ್ ಬದಲು ಬಿಂದಿಸ್ಟಿಕ್ಕರ್ಸ್, ಕನ್ನಡಿ-ಬಾಚಣಿಗೆ ಬದಲು ನೈಲ್‌ಪಾಲಿಶ್!

ನಾರ್ತ್ ಕೆರೊಲಿನಾದಲ್ಲಿರುವ ಸವಿತಾ ರವಿಶಂಕರ್ ಲಿಸ್ಟ್‌ನಲ್ಲಿ- ತೋರಣಕ್ಕೆ ಮಾವಿನೆಲೆ ಬದಲಿಗೆ ಮಾಗ್ನೊಲಿಯಾ ಲೀವ್ಸ್, ಕಲಶಕ್ಕೆ ವೀಳ್ಯದೆಲೆ ಬದಲಿಗೆ ಮನಿಪ್ಲಾಂಟ್ ಲೀವ್ಸ್, ಪ್ಲಾಸ್ಟಿಕ್‌ನ ಬಾಳೆದಿಂಡು, ಪ್ಲಾಸ್ಟಿಕ್ ಮಲ್ಲಿಗೆಮಾಲೆಗೆ ಜಾಸ್ಮಿನ್ ಸೆಂಟ್ ಸಿಂಪಡಣೆ, ಸೀರೆ-ಖಣದ ಬದಲು ಬಟ್ಟೆಯ ಶಾಪಿಂಗ್‌ಬ್ಯಾಗ್. ಅಷ್ಟೇಅಲ್ಲ ಪುರೋಹಿತರ ಬದಲಿಗೆ ಲ್ಯಾಪ್‌ಟಾಪ್. ಪುರೋಹಿತರಾದರೆ ಅವಸರ ಮಾಡ್ತಾರೆ, ಅದಕ್ಕಿಂತ ಲ್ಯಾಪ್‌ಟಾಪ್ ಅಥವಾ ಸಿ.ಡಿ ಪ್ಲೇಯರ್ ಆದರೆ ಬೇಕೆಂದಾಗ ನಿಲ್ಲಿಸಿ, ನೈವೇದ್ಯ ಎಲ್ಲ ಅಣಿಯಾದ ಮೇಲೆ ಮತ್ತೆ ಮುಂದುವರಿಸಬಹುದು. ಇದೆಲ್ಲ ಎಷ್ಟು ರೂಢಿ ಆಗಿದೆಯೆಂದರೆ ಶಾಸದಲ್ಲಿರೋದೇ ಹೀಗೆ ಎಂದುಕೊಳ್ಳಬೇಕು!

ಫ್ಲೋರಿಡಾದಲ್ಲಿರುವ ರೇಖಾ ಹೆಗಡೆ ಚೌತಿ-ನವರಾತ್ರಿಗಳಲ್ಲಿ ಕರ್ಜಿಕಾಯಿ ಮಾಡಲು ಅಕ್ಕಿಯ ಅರಳು ಸಿಗದಿದ್ದಾಗ ಜೋಳ ತಂದು ಪಾಪ್‌ಕಾರ್ನ್ ಮಾಡಿ ಅದರ ಹುಡಿಯಿಂದ ಮಾಡ್ತಾರಂತೆ. ರಂಗೋಲಿಹುಡಿ ಸಿಗದಿದ್ದರೆ ಫ್ಲೋರಿಡಾದ ಬೀಚುಗಳಲ್ಲಿ ಧಾರಾಳವಾಗಿ ಸಿಗುವ ನುಣುಪಾದ ಬಿಳಿ ಮರಳನ್ನು ತಂದು ರಂಗೋಲಿ ಹಾಕ್ತಾರಂತೆ!

ಮೇರಿಲ್ಯಾಂಡ್‌ನ ಮಧುಶಾಲಿನಿ ಭಾಸ್ಕರ್ ಗೌರಿಹಬ್ಬದ ಬಾಗಿನಕ್ಕೆ ಬಿದಿರಿನ ಮೊರ ಸಿಗುವುದಿಲ್ಲಾಂತ ನಾಲ್ಕೈದು ತಿಂಗಳ ಮೊದಲು ಈಸ್ಟರ್ ಹಬ್ಬದ ವೇಳೆ ಇಲ್ಲಿನ ಅಂಗಡಿಗಳಲ್ಲಿ ಸಿಗುವ ಬಣ್ಣಬಣ್ಣದ ಬೆತ್ತದಬುಟ್ಟಿಗಳನ್ನು ತಂದಿಟ್ಟು ಅದರಲ್ಲಿ ಬಾಗಿನ ಕೊಡ್ತಾರಂತೆ. ಸಂಕ್ರಾಂತಿಗೆ ಎಳ್ಳಿನ ಜತೆಗೆ ಕುಸುರಿಕಾಳು ಇರಬೇಕೆಂದು ಬೇಕಿಂಗ್‌ನಲ್ಲಿ ಬಳಸುವ ಸಣ್ಣಸಣ್ಣ ಬಿಳಿಬಣ್ಣದ ಹರ್ಷೀಸ್ ಕಿಸ್ಸಸ್ ಚಾಕಲೇಟ್ ಬಳಸ್ತಾರಂತೆ. ದೀಪಾವಳಿಯಂದು ನೀರುತುಂಬುವ ಹಬ್ಬದ ಸಂಭ್ರಮ ಹೆಚ್ಚಿಸ ಲಿಕ್ಕೆಂದು ಬೇಸ್‌ಮೆಂಟ್‌ನಲ್ಲಿ ವಾಟರ್‌ಬಾಯ್ಲರ್‌ಗೇ ಅರಸಿನ-ಕುಂಕುಮ ಹಚ್ಚಿ ಪೂಜೆ ಮಾಡ್ತಾರಂತೆ!" “ಕಲಶಕ್ಕೆ ಇಡಲು ಜುಟ್ಟಿರುವ ತೆಂಗಿನಕಾಯಿ ಬೇಕಲ್ಲ? ಅಮೆರಿಕದ ಗ್ರೋಸರಿ ಸ್ಟೋರ್‌ಗಳಲ್ಲಿ ತೆಂಗಿನಕಾಯಿಯೇನೋ ಸಿಗುತ್ತೆ, ಆದರೆ ಜುಟ್ಟಿಲ್ಲ.

ಅದಕ್ಕೊಂದು ಭಲೇ ಉಪಾಯ ಮಾಡಿಕೊಂಡಿದ್ದಾರೆ ಕೊಲಂಬಸ್‌ನಲ್ಲಿರುವ ಉಷಾ ಅಶ್ವತ್ಥ. ಅವರು ಭಾರತದಿಂದ ಒಂದಿಷ್ಟು ಸ್ಪೇರ್ ತೆಂಗಿನಕಾಯಿ ಜುಟ್ಟುಗಳನ್ನಷ್ಟೇ ತಂದಿಟ್ಟುಕೊಂಡಿದ್ದಾರೆ. ಇಲ್ಲಿ ಕೊಳ್ಳುವ ತೆಂಗಿನಕಾಯಿಗೆ ಜುಟ್ಟನ್ನು ಜೋಡಿಸಿ ಸೆಲ್ಲೊಟೇಪ್ ಹಚ್ಚಿಬಿಟ್ಟರೆ ಕಲಶವಾಗಿ ಇಡಲಿಕ್ಕೆ ಜುಟ್ಟಿರುವ ತೆಂಗಿನಕಾಯಿ ರೆಡಿ!

ಮೇರಿಲ್ಯಾಂಡ್‌ನ ಡಾ.ಮೈ.ಶ್ರೀ.ನಟರಾಜ್ ಬರೆದಿರುವಂತೆ- ಉನ್ನತ ವಿದ್ಯಾಭ್ಯಾಸಕ್ಕೆಂದು ಅಮೆರಿಕಕ್ಕೆ ಬಂದ ಹೊಸತರಲ್ಲಿ ತೆಂಗಿನಕಾಯಿಯೂ ಸಿಗ್ತಿರಲಿಲ್ಲ, ಸಹಪಾಠಿಯೊಬ್ಬ ಜೇಡಿಮಣ್ಣಿನ ತೆಂಗಿನಕಾಯಿ (ಆಕಾರ) ಮಾಡಿದ್ದ, ನಾನದಕ್ಕೆ ಮರದ ಜುಟ್ಟು ಜೋಡಿಸಿದ್ದೆ. ಕೆನಡಿಯನ್ ಮೇಪಲ್ ಮರದ ಎಲೆಗಳೇ ಮಾವಿನೆಲೆಗಳಾಗಿದ್ದವು. ಅಂತೂ ಗಣೇಶಹಬ್ಬ ಗಡದ್ದಾಗಿ ಆಚರಿಸಿದ್ದೆವು. ಮಿನ್ನೆಸೊಟಾದ ಶ್ರೀಲಕ್ಷ್ಮೀ ಹೊನ್ನವಳ್ಳಿ ಅದೆಲ್ಲ ಸಮಸ್ಯೆಯೇ ಬೇಡವೆಂದು ಭಾರತದಿಂದ ಬೆಳ್ಳಿಯ ಹೂಗಳು, ಬೆಳ್ಳಿಯ ವೀಳ್ಯದೆಲೆ ತಂದಿಟ್ಟುಕೊಂಡಿದ್ದಾರಂತೆ. ಒಂದೆಡೆ ಭಕ್ತಿಯೂ ಆಯ್ತು, ಮತ್ತೊಂದೆಡೆ ರೀಯೂಸ್/ರೀಸೈಕ್ಲಿಂಗ್ ಮಂತ್ರದ ಪರಿಪಾಲನೆಯೂ ಆದಂತಾಯ್ತು!

ಟೆಕ್ಸಾಸ್‌ನಲ್ಲಿ ಮೀನಾ ಭಾರದ್ವಾಜ್ ಅವರಂತೂ ತೆಂಗಿನಕಾಯಿ ಬಳಸೋದೇ ಇಲ್ಲ. ಸತ್ಯನಾರಾ ಯಣ ವ್ರತಕಥೆಯ ಒಂದೊಂದು ಅಧ್ಯಾಯದ ನಂತರ ಒಂದೊಂದು ತೆಂಗಿನಕಾಯಿ ಒಡೆದು ಕೊಲೆಸ್ಟ್ರಾಲ್ ಹೆಚ್ಚಿಸಿಕೊಳ್ಳುವುದೇಕೆ ಅಂತ ತೆಂಗಿನಕಾಯಿ ಬದಲಿಗೆ ಕಿತ್ತಳೆ, ಸೇಬು ಹಣ್ಣಿನ ನೈವೇದ್ಯ ಮಾಡ್ತಾರಂತೆ. ಇವೆಲ್ಲಕ್ಕಿಂತಲೂ ಹೃದಯಸ್ಪರ್ಶಿ ಅನುಭವ ಬರೆದಿದ್ದಾರೆ ಗುರುಭೀಮ ಜೋಯಿಸ್: ನಾಲ್ಕು ವರ್ಷಗಳ ಹಿಂದೆ ನನ್ನ ತಾಯಿ ತೀರಿಕೊಂಡರು.

ಉತ್ತರಕ್ರಿಯೆ ವಿಧಿಗಳನ್ನೆಲ್ಲ ಪೂರೈಸಿ ನಾನು ಟಾಂಜಾನಿಯಾಕ್ಕೆ ಹಿಂದಿರುಗುವಾಗ ನಮ್ಮಪ್ಪ ಹೇಳಿದ್ದರು- ‘ಪ್ರತಿ ತಿಂಗಳು ಮಾಸಿಕ ಮಾಡುವುದು ಹೇಗೆ ಅಂತ ಚಿಂತಿಸಬೇಡ. ಅಲ್ಲೇ ಆಕಳಿಗೆ ಸ್ವಲ್ಪ ಬೆಲ್ಲ ಮತ್ತು ಅಕ್ಕಿ ತಿನ್ನಲು ಮುಂದಿಟ್ಟು ನೀನು ಪ್ರದಕ್ಷಿಣೆ ಮಾಡು. ಅಷ್ಟು ಸಾಕು’ ಎಂದಿದ್ದರು. ನನಗೂ ಸ್ವಲ್ಪ ನೆಮ್ಮದಿ ಅನಿಸ್ತು. ಆದರೆ ಅದು ಎಷ್ಟು ಕಷ್ಟಕರ ಎಂದು ಇಲ್ಲಿಗೆ ಬಂದಮೇಲೆ ತಿಳಿಯಿತು. ಆಕಳನ್ನು ಹುಡುಕುವುದೇ ಒಂದು ಯಜ್ಞ. ‘ಒಂದು ಹುಲ್ಲುಗಾವಲಿದೆ, ಅಲ್ಲಿ ದನಗಳು ಮೇಯುವುದನ್ನು ನೋಡಿದ್ದೇವೆ, ಆದರೆ ನೀನು ಅಕ್ಕಿಬೆಲ್ಲ ಇಟ್ಟು ಪ್ರದಕ್ಷಿಣೆ ಮಾಡೋದನ್ನು ಸ್ಥಳೀಯರು ನೋಡಿದರೆ ನೀನು ಪೋಲಿಸ್ ಸ್ಟೇಷನ್ ಪ್ರದಕ್ಷಿಣೆ ಮಾಡಬೇಕಾಗಿ ಬರುತ್ತೆ ಎಚ್ಚರ! ಅಂತ ಹೆದರಿಸಿದರು ನನ್ನ ಕೆಲ ಸ್ನೇಹಿತರು, ಸಹೋದ್ಯೋಗಿಗಳು.

ಬೇರೇನೂ ಮಾಡಲಾಗದೆ ಇಲ್ಲಿನ ಕೃಷ್ಣನಗುಡಿ ಹುಂಡಿಯಲ್ಲಿ ಕಾಣಿಕೆ ಸಲ್ಲಿಸಿ ಸುಮ್ಮನಾದೆ." ಆಗಲೇ ಹೇಳಿದಂತೆ ಇದು ಎರಡು ಮೂರು ದಶಕಗಳ ಹಿಂದಿನ ವಿಚಾರ. ಈಗ ಅಮೆರಿಕದ ದೊಡ್ಡದೊಡ್ಡ ನಗರಪ್ರದೇಶಗಳಲ್ಲಂತೂ ಭಾರತೀಯ ಸರಕು ಸರಂಜಾಮು ಸಿಗದಿರುವುದು ಏನೂ ಇಲ್ಲ. ಬಾಳೆಎಲೆಯಲ್ಲಿ ಪಂಕ್ತಿಊಟ ಕೂಡ ಎಷ್ಟು ಕಾಮನ್ ಆಗಿಬಿಟ್ಟಿದೆಯೆಂದರೆ ಕನ್ನಡ ಕೂಟಗಳ ಯುಗಾದಿ, ಗಣೇಶೋತ್ಸವ, ದೀಪಾವಳಿ ಆಚರಣೆ ಸಮಾರಂಭಗಳಲ್ಲಿ ಬಾಳೆಎಲೆಯಲ್ಲಿ ಭರ್ಜರಿ ಭೋಜನ ಏರ್ಪಾಡಾಗಿರುತ್ತದೆ.

ಹಾಂ! ಬಾಳೆಎಲೆ ಎಂದಾಗ ಇನ್ನೂ ಒಂದು ಸಬ್‌ಸ್ಟಿಟ್ಯೂಟ್ ಸಂಸ್ಕೃತಿ ನೆನಪಾಯ್ತು. ತಿಂಡಿ ತಿನ್ನಲಿಕ್ಕೆ, ಊಟ ಮಾಡಲಿಕ್ಕೆ ಬಾಳೆಎಲೆ ಆಕಾರದ/ಬಣ್ಣದ ತಟ್ಟೆಗಳು! ಇದು ಸಬ್‌ಸ್ಟಿಟ್ಯೂಟ್ ಸಂಸ್ಕೃತಿ ಟು ದ ಪವರ್ ಮೈನಸ್ ವನ್. ಇಂಥವನ್ನು ರೀಲುಗಳಲ್ಲಿ ಮತ್ತು ಬೆಂಗಳೂರಲ್ಲಿ ಪ್ರತ್ಯಕ್ಷವೂ ನೋಡಿದ್ದೇನೆ. ಅಮೆರಿಕಕ್ಕಿನ್ನೂ ಇವು ಬಂದಂತಿಲ್ಲ.

ಸಬ್‌ಸ್ಟಿಟ್ಯೂಟ್ ಸಂಸ್ಕೃತಿಯ ಪುಷ್ಟೀಕರಣಕ್ಕೆ ನಾವು ಪುರಾಣಕಥೆಗಳನ್ನೂ ಆಧರಿಸಬಹುದಾಗಿದೆ. ಹೇಗಂತೀರಾ? ರಾವಣವಧೆಯ ತರುವಾಯ ಲಂಕೆಯಿಂದ ಮರಳಿದ ಶ್ರೀರಾಮಚಂದ್ರ ಬ್ರಹ್ಮಹತ್ಯಾ ದೋಷದಿಂದ ಪಾರಾಗಲು ಶಿವಪೂಜೆ ಮಾಡಬೇಕಾಯ್ತು. ಪುಷ್ಪಕವಿಮಾನ ಭೂಸ್ಪರ್ಶ ಮಾಡಿದ ಆ ಸಮುದ್ರತೀರದಲ್ಲಿ ಪೂಜೆಗೆ ಶಿವಲಿಂಗ ಎಲ್ಲಿಂದ? ಆಗ ಸೀತೆ ಮರಳಿನಿಂದಲೇ ಸಬ್‌ಸ್ಟಿಟ್ಯೂಟ್ ಶಿವಲಿಂಗವೊಂದನ್ನು ನಿರ್ಮಿಸಿದಳು. ರಾಮ ಅದನ್ನೇ ಪೂಜಿಸಿದ. ಆಮೇಲೆ ಆ ಸ್ಥಳ ರಾಮೇಶ್ವರಮ್ ಕ್ಷೇತ್ರವಾಗಿ ಹೆಸರಾಯಿತು.

ಏಕಲವ್ಯನಿಗೆ ಖುದ್ದಾಗಿ ದ್ರೋಣಾಚಾರ್ಯರಿಂದ ಬಿಲ್ವಿದ್ಯೆ ಕಲಿಯುವ ಭಾಗ್ಯವಿಲ್ಲವಾದಾಗ ಆತ ದ್ರೋಣರ ವಿಗ್ರಹ ರಚಿಸಿ ಅದನ್ನೇ ತನ್ನ ಸಬ್‌ಸ್ಟಿಟ್ಯೂಟ್ ಗುರುವೆಂದು ತಿಳಿದುಕೊಂಡು ಸ್ವಪ್ರಯತ್ನದಿಂದ ವಿದ್ಯಾರ್ಜನೆಗೈದ; ತನ್ನ ಹೆಬ್ಬೆರಳನ್ನೇ ಸಬ್‌ಸ್ಟಿಟ್ಯೂಟ್ ಗುರುದಕ್ಷಿಣೆಯಾಗಿ ಕೊಟ್ಟ. ಭರತ ತನ್ನಣ್ಣನ ಪಾದುಕೆಗಳನ್ನು ಹೊತ್ತುತಂದು ಸಬ್‌ಸ್ಟಿಟ್ಯೂಟ್ ಶ್ರೀರಾಮಚಂದ್ರನೆಂದು ಅವುಗಳನ್ನೇ ಸಿಂಹಾಸನ ದಲ್ಲಿಟ್ಟು ಹದಿನಾಲ್ಕು ವರ್ಷ ರಾಜ್ಯಭಾರ ನಡೆಸಿ ಭ್ರಾತೃಪ್ರೇಮದ ಪರಾಕಾಷ್ಠೆ ತೋರಿದ. ಸಿರಿವಂತ ಸ್ನೇಹಿತನಿಗೆ ದುಬಾರಿ ಉಡುಗೊರೆ ಕೊಡಲು ತನ್ನಲ್ಲೇನೂ ಇಲ್ಲದಾದಾಗ ಹರಕುಜೋಳಿಗೆಯಲ್ಲಿ ಒಂದು ಹಿಡಿ ಅವಲಕ್ಕಿಯನ್ನೇ ಸಬ್‌ಸ್ಟಿಟ್ಯೂಟ್ ಮಾಡಿಕೊಂಡ ಬಡ ಸುದಾಮ.

ಪಾರಿವಾಳದ ಪ್ರಾಣರಕ್ಷಣೆಗಾಗಿ ತನ್ನ ತೊಡೆಯ ಮಾಂಸವನ್ನೇ ಸಬ್‌ಸ್ಟಿಟ್ಯೂಟ್ ಆಗಿ ಅರ್ಪಿಸಿದ ಶಿಬಿ ಚಕ್ರವರ್ತಿ... ಭಾರತೀಯ ಪುರಾಣಗಳಲ್ಲಿ ಸಬ್‌ಸ್ಟಿಟ್ಯೂಟ್ ಸಂಸ್ಕೃತಿಯ ಉದಾಹರಣೆಗಳು ಬೇಕಾದಷ್ಟಿವೆ. ಆದ್ದರಿಂದ ದೇವರ ಪೂಜೆಯಲ್ಲಿ ಅಕ್ಷತೆಕಾಳನ್ನು ಬಳಸಬೇಕಾಗುತ್ತದೆಂಬ ಹಿಂಜರಿಕೆ ಬೇಡ. ವಸ್ತುವಲ್ಲ ಭಕ್ತಿಭಾವ ಮುಖ್ಯ. “ಮುತ್ತುಗದ ಹೂವು ಮಲ್ಲಿಗೆಯೇ, ಅತ್ತಿಯ ಹಣ್ಣು ಅಂಜೂರವೇ; ಬೆಟ್ಟದ ಕಾಳ್ಗಿಚ್ಚು ದೀಪವೇ ಬಿರುಗಾಳಿ ಕೆಂದೂಳಿ ಧೂಪವೇ; ಮೋಹದಾ ವೇಷ ಭಕ್ತಿಯೇ ಸವಿಯಾದುದೆಲ್ಲ ನೈವೇದ್ಯವೇ!" ನೀವು ಯಾವುದಕ್ಕೆಲ್ಲ ಏನೆಲ್ಲ ಸಬ್‌ಸ್ಟಿಟ್ಯೂಟ್ ಬಳಸುತ್ತೀರೆಂದು ಒಮ್ಮೆ ನೆನಪಿಸಿಕೊಳ್ಳಿ. ಸ್ವಾರಸ್ಯಕರ ಅನಿಸುವಂಥದಿದ್ದರೆ ಬರೆದು ಹಂಚಿಕೊಳ್ಳಿ.

ಶ್ರೀವತ್ಸ ಜೋಶಿ

View all posts by this author