ಗಂಟಾಘೋಷ
ಇತ್ತೀಚೆಗೆ ನಡೆದ ಒಂದು ಘಟನೆ ನನ್ನನ್ನು ತೀವ್ರವಾಗಿ ಕಾಡುತ್ತಿದೆ. ಕೆಲವು ದಿನಗಳ ಹಿಂದೆ, ನನಗೆ ಪೊಲೀಸ್ ಅಧಿಕಾರಿಗಳಿಂದ ಒಂದು ತುರ್ತು ಕರೆ ಬಂತು. ನಮ್ಮದೇ ಕ್ಷೇತ್ರದ ಎರಡು ಗುಂಪುಗಳ ನಡುವೆ ಕೇವಲ ಒಂದು ವಾಟ್ಸ್ಯಾಪ್ ಫಾರ್ವರ್ಡ್ ವಿಚಾರವಾಗಿ ತೀವ್ರ ಆಕ್ರೋಶ ಭುಗಿಲೆದ್ದಿದೆ ಹಾಗೂ ಪರಿಸ್ಥಿತಿ ಕೈಮೀರಿ ಘರ್ಷಣೆಯ ಹಂತಕ್ಕೆ ತಲುಪಿದೆ ಎಂದು ಅವರು ಆತಂಕದಿಂದ ತಿಳಿಸಿದರು.
ಆ ಪ್ರಚೋದನಕಾರಿ ವೀಡಿಯೊದಲ್ಲಿನ ಘಟನೆ ನಮ್ಮೂರಿನ ನಡೆದಿದೆ ಎಂದು ಎರಡೂ ಗುಂಪಿ ನವರು ಬಲವಾಗಿ. ನಾನು ಕೂಡಲೇ ಮಧ್ಯ ಪ್ರವೇಶಿಸಿ, ಪೊಲೀಸ್ ಇಲಾಖೆಯೊಂದಿಗೆ ಸೇರಿ ಆ ವೀಡಿಯೊದ ಮೂಲವನ್ನು ಸ್ವಲ್ಪ ಆಳವಾಗಿ ತನಿಖೆ ಮಾಡಿದಾಗ ಒಂದು ಬೆಚ್ಚಿಬೀಳಿಸುವ ಸತ್ಯ ಹೊರಬಂತು. ಅದು ವಾಸ್ತವವಾಗಿ ಹಲವು ವರ್ಷಗಳ ಹಿಂದೆ, ದೇಶದ ಬೇರೊಂದು ಮೂಲೆಯಲ್ಲಿ ನಡೆದಿದ್ದ ಘಟನೆಯಾಗಿತ್ತು! ಅದನ್ನು ಬೇಕೆಂತಲೇ ತಿರುಚಿ, ಪ್ರಸ್ತುತ ನಮ್ಮೂರಿನ ಹೆಸರಿನಲ್ಲಿ ಕಿಡಿಗೇಡಿಗಳು ಹರಿಬಿಟ್ಟಿದ್ದರು.
ಕೇವಲ ಒಂದು ಸುಳ್ಳು ಫಾರ್ವರ್ಡ್, ಒಟ್ಟಿಗೆ ಬಾಳುತ್ತಿದ್ದ ನಮ್ಮೂರಿನ ಜನರನ್ನೇ ಎರಡು ಗುಂಪು ಗಳಾಗಿ ವಿಭಜಿಸಿ ಎಷ್ಟು ಸುಲಭವಾಗಿ ರಕ್ತಪಾತದ ಹಂತಕ್ಕೆ ಉದ್ರೇಕಗೊಳಿಸಬಹುದು ಎಂಬುದನ್ನು ಕಣ್ಣಾರೆ ಕಂಡು ನನಗೆ ನಿಜಕ್ಕೂ ಆಘಾತವಾಯಿತು. ಮಾಹಿತಿ ತಂತ್ರಜ್ಞಾನದ ಈ ಅತ್ಯದ್ಭುತ ಯುಗದಲ್ಲಿ, ಜಗತ್ತಿನ ಯಾವುದೇ ಮೂಲೆಯ ಸುದ್ದಿಯಾದರೂ ಕ್ಷಣಮಾತ್ರದಲ್ಲಿ ನಮ್ಮ ಅಂಗೈ ಯಲ್ಲಿರುವ ಮೊಬೈಲ್ ಪರದೆಯ ಮೇಲೆ ಬಂದು ನಿಲ್ಲುತ್ತದೆ.
ಇದನ್ನೂ ಓದಿ: Gururaj Gantihole Column: ಖಾಸಗಿ ಡೀಮ್ಡ್ ವಿವಿಗಳ ರೀತಿ ರಾಜ್ಯ ವಿವಿಗಳೇಕೆ ಮಿಂಚುತ್ತಿಲ್ಲ ?
ಹಿಂದಿನ ಕಾಲದಲ್ಲಿ ಸುದ್ದಿ ಹರಡುವುದಕ್ಕೂ ಚಹಾ ಅಂಗಡಿ, ಮಾರುಕಟ್ಟೆ, ಪತ್ರಿಕೆ ಹಾಗೂ ರೇಡಿಯೋಗಳನ್ನೊಳಗೊಂಡ ಒಂದು ಅನೌಪಚಾರಿಕ ‘ಸಾಮಾಜಿಕ ಆಲ್ಗಾರಿದಮ್’ ಇತ್ತು. ಆ ವ್ಯವಸ್ಥೆಯಲ್ಲಿ ಸಂಪಾದಕರು ಅಥವಾ ಪತ್ರಕರ್ತರಂತಹ ‘ಗೇಟ್‌ಕೀಪರ್’ಗಳು ಮಾಹಿತಿಯನ್ನು ಶೋಧಿಸುತ್ತಿದ್ದರು.
ಸುದ್ದಿಯ ವೇಗ ನಿಧಾನವಾಗಿದ್ದರೂ, ಇದು ನಿಜವೇ? ಎಂದು ಜನರಿಗೆ ಯೋಚಿಸಲು, ಚರ್ಚಿಸಲು ಮತ್ತು ಪರಿಶೀಲಿಸಲು ಸಾಕಷ್ಟು ಸಮಯ ಸಿಗುತ್ತಿತ್ತು. ಆದರೆ ಇಂದು ಮಾಹಿತಿಯೇ ನಮ್ಮನ್ನು ಹುಡುಕಿಕೊಂಡು ಬೆನ್ನಟ್ಟಿ ಬರುತ್ತಿದ್ದು, ತಂತ್ರಜ್ಞಾನದ ಈ ಅತಿಯಾದ ವೇಗದ ಮುಂದೆ ಮಾನವನ ಆಲೋಚನಾ ಕ್ರಮ ಮತ್ತು ವಿಮರ್ಶಾತ್ಮಕ ಚಿಂತನೆ ದಿನೇ ದಿನೆ ಕ್ಷೀಣಿಸುತ್ತಿರುವುದು ಇಂದಿನ ಬಹುದೊಡ್ಡ ಸವಾಲಾಗಿದೆ.
ಇಂದು ಸುದ್ದಿ ಹರಡುವ ವ್ಯವಸ್ಥೆ ಸಂಪೂರ್ಣವಾಗಿ ಬದಲಾಗಿದೆ. ಪ್ರತಿಯೊಬ್ಬರೂ ಪತ್ರಕರ್ತ ನಾಗಿರದಿದ್ದರೂ, ಕ್ಷಣಾರ್ಧದಲ್ಲಿ ಸಾವಿರಾರು ಜನರಿಗೆ ಮಾಹಿತಿ ತಲುಪಿಸುವ ಪ್ರಕಾಶಕರಾಗಿದ್ದಾರೆ. ನಾವೆಲ್ಲರೂ ಫೇಸ್ಬುಕ್, ಟ್ವಿಟರ್, ಯೂಟ್ಯೂಬ್‌ನಂತಹ ಜಾಲತಾಣಗಳಿಗೆ ಮಾರು ಹೋಗಿದ್ದು, ಇಲ್ಲಿ ಸಂಪಾದಕನ ಸ್ಥಾನವನ್ನು ಕೃತಕ ಬುದ್ಧಿಮತ್ತೆಯ ‘ಅಲ್ಗಾರಿದಮ್’ ಬಹುತೇಕ ಆಕ್ರಮಿಸಿ ಕೊಂಡಿದೆ.
ಒಂದು ಘಟನೆ ನಡೆದ ಕೆಲವೇ ಸೆಕೆಂಡುಗಳಲ್ಲಿ, ಅದಕ್ಕೆ ಸಿಗುವ ಲೈಕ್ಸ್, ಶೇರ್ ಮತ್ತು ಕಮೆಂಟ್‌ಗಳ ಆಧಾರದ ಮೇಲೆ ಅಲ್ಗಾರಿದಮ್ ಆ ಸುದ್ದಿಯನ್ನು ಲಕ್ಷಾಂತರ ಜನರಿಗೆ ತಲುಪಿಸುತ್ತದೆ. ಹಿಂದೆ ಕೇವಲ ಜನರ ಮೂಲಕ ಹರಡುತ್ತಿದ್ದ ಸುದ್ದಿ, ಇಂದು ಜನರ ಜೊತೆಗೆ ಈ ಯಾಂತ್ರಿಕ ಅಲ್ಗಾರಿದಮ್ ಮೂಲಕವೂ ಹರಡುತ್ತಿರುವುದು ಬಹುದೊಡ್ಡ ಪಲ್ಲಟವಾಗಿದೆ. ಈ ಅಲ್ಗಾರಿದಂಗಳ ಅತಿದೊಡ್ಡ ಅಪಾಯವೆಂದರೆ, ಕೇವಲ ಒಂದೇ ಕಡೆಯ ನರೆಟಿವ್ ಅಥವಾ ಒಂದೇ ಆಯಾಮದ ಸುದ್ದಿಗಳು ಮಾತ್ರ ನಿಮಗೆ ಪದೇ ಪದೆ ಕಾಣಸಿಗುವುದು.
ನೀವು ಯಾವ ರೀತಿಯ ವಿಷಯಗಳನ್ನು ಹೆಚ್ಚು ನೋಡುತ್ತೀರೋ, ಅದನ್ನೇ ಮತ್ತೆ ಮತ್ತೆ ನಿಮ್ಮ ಮುಂದಿಡುವ ಮೂಲಕ ಇದು ನಿಮ್ಮನ್ನು ‘ಪ್ರತಿಧ್ವನಿ ಕೊಠಡಿ’ ಒಳಗೆ ಬಂಧಿಸುತ್ತದೆ. ನೀವು ಈಗಾಗಲೇ ನಂಬಿದ್ದ ವಿಚಾರಕ್ಕೆ ಹೊಂದಿಕೆಯಾಗುವ ಸುದ್ದಿಗಳನ್ನೇ ಈ ವ್ಯವಸ್ಥೆ ಪದೇ ಪದೆ ತೋರಿಸುವುದರಿಂದ, ನೀವು ನಂಬಿರುವುದೇ ಅಂತಿಮ ಸತ್ಯ ಮತ್ತು ಇಡೀ ಜಗತ್ತು ನಿಮ್ಮಂತೆಯೇ ಯೋಚಿಸುತ್ತಿದೆ ಎಂಬ ಭ್ರಮೆ ಸೃಷ್ಟಿಯಾಗುತ್ತದೆ.
ಹಿಂದೆ ಒಂದು ಸುಳ್ಳು ವದಂತಿ ಕೇವಲ ಒಂದು ಊರಿಗೆ ಸೀಮಿತವಾಗಿರುತ್ತಿದ್ದರೆ, ಇಂದು ಅದೇ ವದಂತಿ ಡಿಜಿಟಲ್ ಜಾಲದ ಮೂಲಕ ಕ್ಷಣ ಮಾತ್ರದಲ್ಲಿ ಬೃಹತ್ ಜನಸ್ತೋಮವನ್ನು ತಲುಪುತ್ತದೆ. ಯಾವುದೇ ಘಟನೆಯ ನೈಜ ಸತ್ಯಾಸತ್ಯತೆಯನ್ನು ಪರಿಶೀಲಿಸುವ ವೇಗಕ್ಕಿಂತ, ಇಂತಹ ಕೃತಕ ನರೆಟಿವ್‌ಗಳು ಅತಿ ವೇಗವಾಗಿ ಓಡುತ್ತವೆ.
ಸುಳ್ಳು ಸುದ್ದಿ ಅಥವಾ ತಿರುಚಿದ ಮಾಹಿತಿಯು ಕೇವಲ ವ್ಯಕ್ತಿಯೊಬ್ಬನನ್ನು ದಿಕ್ಕು ತಪ್ಪಿಸುವುದಿಲ್ಲ, ಬದಲಾಗಿ ಅದು ಇಡೀ ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡವುತ್ತದೆ. ಈ ಗೊಂದಲಮಯ ಪರಿಸ್ಥಿತಿ ಯಲ್ಲಿ, ಯಾವುದು ಸತ್ಯ ಮತ್ತು ಯಾವುದು ಸುಳ್ಳು ಎಂದು ಬೇರ್ಪಡಿಸಲು ನಾವು ಕೇವಲ ಮಾಹಿತಿ ಯನ್ನು ಕುರುಡಾಗಿ ಸ್ವೀಕರಿಸುವ ಯಂತ್ರಗಳಾಗಬಾರದು. ಬದಲಾಗಿ ಪ್ರತಿಯೊಂದನ್ನೂ ವಿಭಿನ್ನ ಕೋನಗಳಿಂದ ವಿಮರ್ಶಿಸುವ, ಒರೆಗೆ ಹಚ್ಚುವ ಮತ್ತು ಸಂಪೂರ್ಣ ವಾಸ್ತವ ಅರಿಯುವ ಜವಾಬ್ದಾರಿಯುತ ನಾಗರಿಕರಾಗಬೇಕಿದೆ.
ಕೃತಕ ಅಭಿಪ್ರಾಯಗಳು: ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳು ಹಾಗೂ ತನಿಖಾ ವರದಿಗಳು ಬಹಿರಂಗಪಡಿಸುತ್ತಿರುವ ಒಂದು ಆತಂಕಕಾರಿ ವಿಚಾರವೆಂದರೆ, ನಿರ್ದಿಷ್ಟ ನರೆಟಿವ್ ಅನ್ನು ಮುನ್ನೆಲೆಗೆ ತರಲು ಹಾಗೂ ಇನ್ನೊಂದು ಬದಿಯ ವಾಸ್ತವವನ್ನು ಉದ್ದೇಶಪೂರ್ವಕವಾಗಿ ಮುಚ್ಚಿ ಹಾಕಲು ಭಾರಿ ಪ್ರಮಾಣದ ಹಣವನ್ನು ಸುರಿಯಲಾಗುತ್ತಿದೆ. ಜಾಲತಾಣಗಳಲ್ಲಿ ಟ್ರೆಂಡ್ ಆಗುವ ಅನೇಕ ವಿಷಯಗಳು ಸಹಜವಾಗಿ ಸಾರ್ವಜನಿಕರಿಂದ ಹುಟ್ಟಿಕೊಂಡಿರುವುದಿಲ್ಲ. ಬದಲಾಗಿ, ಸಾರ್ವಜನಿಕ ಅಭಿಪ್ರಾಯವನ್ನು ಒಂದು ನಿರ್ದಿಷ್ಟ ದಿಕ್ಕಿನಲ್ಲಿ ತಿರುಗಿಸಲು ಬೃಹತ್ ಸಂಪರ್ಕ ಸಂಸ್ಥೆಗಳಿಗೆ ಮತ್ತು ಡಿಜಿಟಲ್ ಏಜೆನ್ಸಿಗಳಿಗೆ ಕೋಟ್ಯಂತರ ರೂಪಾಯಿಗಳನ್ನು ರಹಸ್ಯವಾಗಿ ಪಾವತಿಸಲಾಗುತ್ತಿದೆ.
ಒಂದು ಘಟನೆ ನಡೆದ ತಕ್ಷಣ, ಅದಕ್ಕೆ ಸಂಬಂಧಿಸಿದಂತೆ ಕೇವಲ ಒಂದು ಕಡೆಯ ವಾದವನ್ನು ಮಾತ್ರ ಪ್ರಬಲವಾಗಿ ಬಿಂಬಿಸಲು ವ್ಯವಸ್ಥಿತ ಜಾಲವೊಂದು ಹಗಲಿರುಳು ಕಾರ್ಯನಿರ್ವಹಿಸುತ್ತದೆ. ಸುಳ್ಳು ಅಂಕಿ-ಅಂಶಗಳು, ತಿರುಚಿದ ಫೋಟೋಗಳು, ಅರೆಬೆಂದ ಸತ್ಯಗಳು ಮತ್ತು ಕೃತಕ ಖಾತೆಗಳ ಮೂಲಕ ಸಂದೇಶ ಗಳನ್ನು ಕ್ಷಣಮಾತ್ರದಲ್ಲಿ ಲಕ್ಷಾಂತರ ಜನರಿಗೆ ತಲುಪಿಸಲಾಗುತ್ತದೆ.
ಇದರ ಜೊತೆಗೆ, ಕಂಪ್ಯೂಟರ್ ಪ್ರೋಗ್ರಾಮ್‌ಗಳ ಮೂಲಕ ಕಾರ್ಯನಿರ್ವಹಿಸುವ ‘ಬಾಟ್’ ತಂತ್ರಾಂಶಗಳ ಕೃತಕ ಬೆಂಬಲವು ಈ ಜಾಲದ ಅತಿದೊಡ್ಡ ಅಸ್ತ್ರವಾಗಿದೆ. ಮಾನವರೇ ಇಲ್ಲದ ಲಕ್ಷಾಂತರ ಸ್ವಯಂಚಾಲಿತ ಯಾಂತ್ರಿಕ ಖಾತೆಗಳ ಮೂಲಕ ಏಕಾಏಕಿ ಲೈಕ್, ಶೇರ್ ಮತ್ತು ಕಮೆಂಟ್‌ಗಳ ಮಹಾಪೂರವನ್ನು ಹರಿಸಿ, ಒಂದು ಸುಳ್ಳು ಸುದ್ದಿಗೂ ಸಹಜ ಜನಪ್ರಿಯತೆಯ ಭ್ರಮೆಯನ್ನು ಸೃಷ್ಟಿಸಲಾಗುತ್ತದೆ.
ಸಾಮಾನ್ಯ ನಾಗರಿಕರು ಇವುಗಳ ಹಿಂದಿರುವ ಆರ್ಥಿಕ ಹಿತಾಸಕ್ತಿಗಳನ್ನು ಮತ್ತು ಈ ಯಾಂತ್ರಿಕ ತಂತ್ರಗಾರಿಕೆಯನ್ನು ಅರಿಯದೆ, ಲಕ್ಷಾಂತರ ಜನ ಇದನ್ನು ಬೆಂಬಲಿಸುತ್ತಿದ್ದಾರೆ ಎಂದರೆ ಅದೇ ಸತ್ಯವೆಂದು ನಂಬಿ ತಮ್ಮವರೊಂದಿಗೇ ಜಗಳಕ್ಕಿಳಿಯುತ್ತಾರೆ. ಯಾವುದೇ ಸುದ್ದಿ ಅಥವಾ ವಿವಾದ ಏಕಾಏಕಿ ಎಡೆ ವೈರಲ್ ಆಗುತ್ತಿದೆ ಎಂದರೆ, ಅದರ ಹಿಂದೆ ಯಾವುದೋ ಒಂದು ಕಾಣದ ಕೈ ಹಣದ ಬಲದಿಂದ ಹಾಗೂ ಇಂತಹ ಸಾವಿರಾರು ‘ಬಾಟ್’ಗಳ ಮೂಲಕ ಕೆಲಸ ಮಾಡುತ್ತಿರಬಹುದು ಎಂಬ ಅನುಮಾನವನ್ನು ನಾವು ಕಡ್ಡಾಯವಾಗಿ ಬೆಳೆಸಿಕೊಳ್ಳಬೇಕಿದೆ. ಹಣ ಕೊಟ್ಟು ಸತ್ಯವನ್ನು ಹತ್ತಿಕ್ಕುವ ಈ ಕಾಲದಲ್ಲಿ, ನಾವೇ ಕಣ್ಣು ತೆರೆದು ಸತ್ಯವನ್ನು ಹುಡುಕ ಬೇಕಾದ ಅನಿವಾರ್ಯತೆ ಹಿಂದೆಂದಿ ಗಿಂತಲೂ ಹೆಚ್ಚಾಗಿದೆ.
ಬೇಕಿದೆ ವಿಮರ್ಶಾತ್ಮಕ ಚಿಂತನೆ: ಇಂತಹ ಕೃತಕ ಹಾಗೂ ಪಾವತಿಸಿದ ಮಾಹಿತಿಗಳ ಸುಳಿಯಿಂದ ಪಾರಾಗಲು ನಮ್ಮ ಮುಂದಿರುವ ಏಕೈಕ ಮತ್ತು ಅತ್ಯಂತ ಪ್ರಬಲ ಅಸ್ತ್ರವೆಂದರೆ ವಿಮರ್ಶಾತ್ಮಕ ಚಿಂತನೆ. ವಿಮರ್ಶಾತ್ಮಕ ಚಿಂತನೆ ಎಂದರೆ ಪ್ರತಿಯೊಂದನ್ನೂ ನಕಾರಾತ್ಮಕವಾಗಿ ನೋಡುವುದಲ್ಲ ಬದಲಾಗಿ, ಯಾವುದೇ ಒಂದು ವಿಷಯವನ್ನು ಕುರುಡಾಗಿ ನಂಬುವ ಮುನ್ನ ಅದನ್ನು ವಿಭಿನ್ನ ಕೋನಗಳಿಂದ ವಿಶ್ಲೇಷಿಸುವುದು.
ಒಂದು ಸಮಸ್ಯೆ ಅಥವಾ ಘಟನೆಯನ್ನು ನೋಡಿದಾಗ, ಅದರ ಹಿಂದಿನ ಮೂಲ ಕಾರಣಗಳೇನು? ಇದರಿಂದ ಅಂತಿಮವಾಗಿ ಯಾರಿಗೆ ಲಾಭ? ಇದರ ಇನ್ನೊಂದು ಮುಖವೇನಿರಬಹುದು? ಎಂಬ ಪ್ರಶ್ನೆಗಳನ್ನು ನಮ್ಮಷ್ಟಕ್ಕೆ ನಾವೇ ಕೇಳಿಕೊಳ್ಳುವುದೇ ವಿಮರ್ಶಾತ್ಮಕ ಚಿಂತನೆಯ ಮೊದಲ ಹೆಜ್ಜೆ. ಇಂದಿನ ಡಿಜಿಟಲ್ ಯುಗದಲ್ಲಿ ‘ಇನ್-ಯೆನ್ಸರ್’ಗಳ ಹಾವಳಿ ಮಿತಿಮೀರಿದೆ.
ಯುವಜನತೆ ಇವರನ್ನು ತಮ್ಮ ರೋಲ್ ಮಾಡೆಲ್ ಗಳಂತೆ ನೋಡುತ್ತಾರೆ ಮತ್ತು ಅವರು ಹೇಳಿದ್ದೆಲ್ಲವೂ ವೇದವಾಕ್ಯ ಎಂದು ನಂಬುತ್ತಾರೆ. ಆದರೆ, ಈ ಇನ್ʼಫ್ಲ್ಯೂಯೆನ್ಸರ್‌ಗಳು ಸಮಾಜಕ್ಕೆ ನೀಡುತ್ತಿರುವ ಸಂದೇಶಗಳು ಎಷ್ಟು ನೈಜವಾಗಿವೆ ಎಂಬುದನ್ನು ನಾವು ನಿರ್ದಾಕ್ಷಿಣ್ಯವಾಗಿ ವಿಮರ್ಶಿಸಲೇಬೇಕಿದೆ. ಅನೇಕ ಇನ್ʼಫ್ಲ್ಯೂಯೆನ್ಸರ್‌ಗಳು ಹಣ, ಪ್ರಸಿದ್ಧಿ, ಲೈಕ್ಸ್ ಅಥವಾ ನಿರ್ದಿಷ್ಟ ಗುಂಪುಗಳ ಹಿತಾಸಕ್ತಿಗಾಗಿ ಕರಾರುಬದ್ಧವಾಗಿ ಕೆಲಸ ಮಾಡುತ್ತಿರುತ್ತಾರೆ. ಅವರು ತಮ್ಮ ವೀಡಿಯೊ ಗಳಲ್ಲಿ ಅಥವಾ ಬರಹಗಳಲ್ಲಿ ಹೇಳಿzಲ್ಲವೂ ಸತ್ಯವಾಗಿರುವುದಿಲ್ಲ.
ಇಲ್ಲಿ ನಾವು ಪ್ರಮುಖವಾಗಿ ಗಮನಿಸಬೇಕಾದದ್ದು ಅವರ ‘ಆಯ್ದ ಆಕ್ರೋಶ’ವನ್ನು. ಸಮಾಜದಲ್ಲಿ ಒಂದು ಘಟನೆ ನಡೆದಾಗ ಆಕಾಶವೇ ಕಳಚಿಬಿದ್ದಂತೆ ಬೊಬ್ಬೆ ಹೊಡೆಯುವ, ಕಣ್ಣೀರು ಹಾಕುವ ಈ ಇನ್ʼಫ್ಲ್ಯೂಯೆನ್ಸರ್‌ಗಳು, ಅದೇ ರೀತಿಯ ಅಥವಾ ಅದಕ್ಕಿಂತ ಭೀಕರವಾದ ಮತ್ತೊಂದು ಘಟನೆ ನಡೆದಾಗ ಮಾತ್ರ ಜಾಣಕಿವುಡು ಪ್ರದರ್ಶಿಸುತ್ತಾರೆ. ಇಂತಹ ಆಯ್ದ ಆಕ್ರೋಶವು ಅವರ ನಿಲುವುಗಳು ನೈಜವಾದವುಗಳಲ್ಲ, ಬದಲಾಗಿ ಪ್ರಾಯೋಜಿತವಾದವು ಎಂಬುದನ್ನು ಸಾಬೀತುಪಡಿಸುತ್ತವೆ.
ಯಾವುದೇ ಇನ್ʼಫ್ಲ್ಯೂಯೆನ್ಸರ್ ವ್ಯಕ್ತಿಯು ಕೇವಲ ಒಂದು ನಿರ್ದಿಷ್ಟ ವಿಚಾರಕ್ಕೆ ಮಾತ್ರ ಪ್ರತಿಕ್ರಿಯಿಸುತ್ತಿದ್ದು, ಉಳಿದ ಅನ್ಯಾಯಗಳ ಬಗ್ಗೆ ಉದ್ದೇಶಪೂರ್ವಕವಾಗಿ ಮೌನವಹಿಸುತ್ತಿದ್ದರೆ, ನಾವು ಅವರನ್ನು ಪ್ರಶ್ನಿಸುವ ಧೈರ್ಯ ಮಾಡಬೇಕು. ಅವರ ಹಿಂಬಾಲಕರ ಸಂಖ್ಯೆ ಲಕ್ಷಾಂತರ ಇರಬಹುದು, ಆದರೆ ಅವರು ಹರಡುವ ವಿಚಾರಗಳು ತಾರ್ಕಿಕವಾಗಿ ಸರಿಯಿಲ್ಲದಿದ್ದರೆ ಅಥವಾ ಪಕ್ಷಪಾತಿಯಾಗಿದ್ದರೆ, ಅವುಗಳನ್ನು ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸುವ ಪ್ರಬುದ್ಧತೆಯನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು.
ಅಪಾಯ ತಂದಿಡುವ ಇತಿಹಾಸದ ಅಜ್ಞಾನ: ವಿಮರ್ಶಾತ್ಮಕ ಚಿಂತನೆಯ ಕೊರತೆಗೆ ಮತ್ತೊಂದು ಪ್ರಮುಖ ಕಾರಣವೆಂದರೆ, ಇಂದಿನ ಹೊಸ ತಲೆಮಾರಿಗೆ ಇತಿಹಾಸದ ಬಗ್ಗೆ ಇರುವ ಆಳವಾದ ಅಜ್ಞಾನ. ಇತಿಹಾಸವು ಕೇವಲ ಗತಕಾಲದ ರಾಜ ಮಹಾರಾಜರ ಕಥೆಗಳಲ್ಲ, ಅದು ಭವಿಷ್ಯದ ತಪ್ಪುಗಳನ್ನು ತಡೆಯುವ ಕೈಪಿಡಿ. ಇತಿಹಾಸವನ್ನು ಸೂಕ್ಷ ವಾಗಿ ಗಮನಿಸಿದರೆ, ಅಲ್ಲಿ ಒಂದು ನಿರ್ದಿಷ್ಟ ಮಾದರಿ ಗೋಚರಿಸುತ್ತದೆ. ಹಿಂದೆ ಸಮಾಜಗಳು ಹೇಗೆ ಒಡೆದುಹೋದವು, ಕೇವಲ ವದಂತಿ ಮತ್ತು ಸುಳ್ಳು ಮಾಹಿತಿಗಳು ಬೃಹತ್ ಸಾಮ್ರಾಜ್ಯಗಳನ್ನು ಹೇಗೆ ಪತನಗೊಳಿಸಿದವು ಮತ್ತು ಅಧಿಕಾರದಾಸೆಯುಳ್ಳವರು ಜನರನ್ನು ಹೇಗೆ ಮರಳು ಮಾಡಿದರು ಎಂಬುದು ಇತಿಹಾಸದ ಪುಟಗಳಲ್ಲಿ ಅತ್ಯಂತ ಸ್ಪಷ್ಟವಾಗಿ ದಾಖಲಾಗಿದೆ.
ಇತಿಹಾಸವನ್ನು ಮರೆತವರು, ಇತಿಹಾಸವನ್ನು ಪುನರಾವರ್ತಿಸುತ್ತಾರೆ ಎಂಬ ಮಾತಿದೆ. ಆದರೆ, ದುರದೃಷ್ಟವಶಾತ್ ಇಂದಿನ ಯುವಜನತೆ ಕೇವಲ ವಾಟ್ಸ್ಯಾಪ್ ಫಾರ್ವಡ್‌ಗಳ ಮೂಲಕ ಮತ್ತು ಸಾಮಾಜಿಕ ಜಾಲತಾಣಗಳ ಕಿರು ವೀಡಿಯೊಗಳ ಮೂಲಕ ಇತಿಹಾಸವನ್ನು ಕಲಿಯುತ್ತಿದ್ದಾರೆ. ಅಧಿಕೃತ ಮೂಲ ಪುಸ್ತಕಗಳನ್ನು ಓದುವ, ಅಂದಿನ ಕಾಲಘಟ್ಟದ ಸಾಮಾಜಿಕ ಹಾಗೂ ಆರ್ಥಿಕ ಪರಿಸ್ಥಿತಿಗಳನ್ನು ವಿಶ್ಲೇಷಿಸುವ ತಾಳ್ಮೆ ಮತ್ತು ಆಸಕ್ತಿ ಬಹುತೇಕರಲ್ಲಿಲ್ಲ.
ಇತಿಹಾಸದ ನೈಜ ಅರಿವಿಲ್ಲದ ಕಾರಣ, ಹಿಂದಿನ ತಲೆಮಾರುಗಳು ಮಾಡಿದ ಅದೇ ಐತಿಹಾಸಿಕ ತಪ್ಪುಗಳನ್ನು ಇಂದಿನ ಯುವಜನತೆಯೂ ಮಾಡುವ ಅಪಾಯವಿದೆ. ಸಮಾಜವನ್ನು ವಿಭಜಿಸುವ, ಭ್ರಮೆಯ ಜಗತ್ತನ್ನು ಸೃಷ್ಟಿಸುವ ಮತ್ತು ಜನರ ಪ್ರಶ್ನಿಸುವ ಹಕ್ಕನ್ನು ಕಸಿದುಕೊಳ್ಳುವ ಅದೇ ಹಳೆಯ ಮಾದರಿಯ ದೋಷಪೂರಿತ ವ್ಯವಸ್ಥೆ ಅಥವಾ ದುರಾಡಳಿತವು ಬೇರೊಂದು ರೂಪದಲ್ಲಿ ಮತ್ತೆ ಮುನ್ನೆಲೆಗೆ ಬರುವ, ಸಮಾಜದ ಮೇಲೆ ಹಿಡಿತ ಸಾಧಿಸುವ ಭಾರಿ ಅಪಾಯ ನಮ್ಮ ಮುಂದಿದೆ.
ಐತಿಹಾಸಿಕ ಪ್ರಜ್ಞೆ ಇದ್ದರೆ ಮಾತ್ರ ಇಂತಹ ಅಪಾಯಗಳನ್ನು ನಾವು ಮುಂಚಿತವಾಗಿಯೇ ಗುರುತಿಸಲು ಸಾಧ್ಯ. ಸುಳ್ಳು ಮಾಹಿತಿಯ ಈ ಕರಾಳ ಯುಗದಲ್ಲಿ ವಿಮರ್ಶಾತ್ಮಕ ಚಿಂತನೆಯು ನಮ್ಮ ಬದುಕಿನ ಅಂಗವಾಗಲೇಬೇಕು. ಕಣ್ಣಿಗೆ ಕಂಡಿದ್ದೆಲ್ಲವೂ ಸತ್ಯವಲ್ಲ ಮತ್ತು ಕಿವಿಗೆ ಬಿದ್ದಿದ್ದೆಲ್ಲವೂ ವಾಸ್ತವವಲ್ಲ ಎಂಬ ಸತ್ಯವನ್ನು ನಾವು ಒಪ್ಪಿಕೊಳ್ಳಬೇಕು.
ಪ್ರತಿಯೊಂದನ್ನೂ ಪ್ರಶ್ನಿಸುವ, ವಾಸ್ತವವನ್ನು ಕೆದಕಿ ನೋಡುವ ಮತ್ತು ಆಳವಾಗಿ ಅಧ್ಯಯನ ಮಾಡುವ ಪ್ರವೃತ್ತಿ ರೂಢಿಸಿಕೊಳ್ಳಬೇಕು. ಯಾಂತ್ರಿಕ ಅಲ್ಗಾರಿದಂಗಳ ಗುಲಾಮರಾಗದೆ, ಹಣಬಲದ ನರೆಟಿವ್‌ಗಳಿಗೆ ಬಲಿಯಾಗದೆ, ಆಯ್ದ ಆಕ್ರೋಶದ ಹಿಂದಿನ ಮುಖವಾಡಗಳನ್ನು ಕಳಚುವ ಬೌದ್ಧಿಕ ಶಕ್ತಿ ನಮ್ಮಲ್ಲಿ ಜಾಗೃತವಾಗಬೇಕಿದೆ. ಇದಕ್ಕಾಗಿ ನಿರಂತರ ಓದು, ಭಿನ್ನ ವಿಚಾರಧಾರೆಗಳ ಮುಕ್ತ ವಿಶ್ಲೇಷಣೆ ಮತ್ತು ತಾರ್ಕಿಕ ಆಲೋಚನೆ ಅತ್ಯಗತ್ಯ. ಸತ್ಯವನ್ನು ಹುಡುಕುವ ಈ ನಿರಂತರ ಪ್ರಕ್ರಿಯೆ ಮತ್ತು ಜಾಗೃತಿಯು ಮಾತ್ರ ಭವಿಷ್ಯದ ಸಮಾಜವನ್ನು ಅಂಧಕಾರದಿಂದ ಮತ್ತು ದಾರಿ ತಪ್ಪಿಸುವ ದುರಾಡಳಿತದಿಂದ ಪಾರುಮಾಡಬಲ್ಲದು.