ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Dr Vijay Darda Column: ಅಮಿತ್‌ ಶಾ ಹೆಣೆದ ರಣವ್ಯೂಹ, ಮಂಡಿಯೂರಿದ ದೀದಿ !

ಒಂದೆಡೆ ಚುನಾವಣಾ ಆಯೋಗ ಪಶ್ಚಿಮ ಬಂಗಾಳದಲ್ಲಿ ನಿರ್ಭೀತ ಮತ್ತು ನ್ಯಾಯಯುತ ಚುನಾವಣೆ ನಡೆಸಲು ಟೊಂಕ ಕಟ್ಟಿತ್ತು. ಇನ್ನೊಂದೆಡೆ ಅಮಿತ್ ಶಾ ಅವರು ಬಿಜೆಪಿ ಕಾರ್ಯಕರ್ತರಲ್ಲಿ ಧೈರ್ಯ ಮತ್ತು ಆತ್ಮವಿಶ್ವಾಸ ತುಂಬಿ, ಯಾವುದೇ ರಾಜಕೀಯ ಪಕ್ಷದಿಂದ ಬೆದರಿಕೆ ಬಂದರೂ ಕೆಚ್ಚೆದೆಯಿಂದ ಎದುರಿಸಿ ಎಂದು ಹುರಿದುಂಬಿಸಿದ್ದರು.

ಸಂಗತ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮತ್ತೊಮ್ಮೆ ತಾನು ಆಧುನಿಕ ಭಾರತದ ಚಾಣಕ್ಯ ಎಂಬುದನ್ನು ಸಾಬೀತುಪಡಿಸಿದ್ದಾರೆ. ಬಂಗಾಳದಲ್ಲಿ ಮಮತಾ ಸರಕಾರ ವನ್ನು ಕಿತ್ತೊಗೆದು ಬಿಜೆಪಿಯನ್ನು ಅಧಿಕಾರಕ್ಕೆ ತರುವುದಾಗಿ ಅವರು 2014ರಲ್ಲೇ ಶಪಥ ಮಾಡಿದ್ದರು. ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಜೋಡಿ ನಿಜಕ್ಕೂ ಅಸಾಮಾನ್ಯವಾಗಿದೆ. ಗೆಲುವಿನ ಮೇಲೆ ಗೆಲವು ಸಿಗುತ್ತಿದ್ದರೂ ಅವರು ವಿಶ್ರಾಂತಿ ತೆಗೆದುಕೊಳ್ಳುತ್ತಿಲ್ಲ. ಅದರ ಬದಲಿಗೆ, ಒಂದು ರಾಜ್ಯವನ್ನು ಗೆದ್ದ ತಕ್ಷಣ ಇನ್ನೊಂದು ರಾಜ್ಯದ ಗೆಲವಿಗೆ ಯೋಜನೆ ಆರಂಭಿಸುತ್ತಿದ್ದಾರೆ.

ಕಳೆದ ಮೂರ್ನಾಲ್ಕು ತಿಂಗಳಲ್ಲಿ ನಾನು ಭೇಟಿಯಾದ ಪ್ರತಿಯೊಬ್ಬ ಬಿಜೆಪಿಯೇತರ ನಾಯಕರೂ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅಲಿಯಾಸ್ ದೀದಿಯನ್ನು ಸೋಲಿಸುವುದು ಬಹಳ ಅಂದರೆ ಬಹಳ ಕಷ್ಟ ಎಂದೇ ಹೇಳುತ್ತಿದ್ದರು. ಬಂಗಾಳದಲ್ಲಿ ವೋಟುಗಳಿಸಲು ಬೇಕಾದ ಪ್ರತಿಯೊಂದು ರಾಜಕೀಯ ತಂತ್ರಗಾರಿಕೆಯೂ ಮಮತಾಗೆ ಕರಗತವಾಗಿದೆ, ಮನವೊಲಿಕೆಯಿಂದ ಹಿಡಿದು ದಬಾವಣೆಯ ತನಕ ಎಲ್ಲ ರೀತಿಯ ರಣತಂತ್ರಗಳನ್ನೂ ಆಕೆ ಬಳಸುತ್ತಾರೆ, ಬಂಗಾಳದ ನಾಡಿಮಿಡಿತವೇ ಅವರ ನಿಯಂತ್ರಣ ದಲ್ಲಿದೆ ಎಂದು ಹೇಳುತ್ತಿದ್ದರು.

ಕೆಲ ಬಿಜೆಪಿ ನಾಯಕರು ಕೂಡ ಗುಟ್ಟಾಗಿ ಈ ಬಾರಿ ದೀದಿಯೇ ಗೆಲ್ಲುವ ಸಾಧ್ಯತೆಯಿದೆ ಎಂದು ಹೇಳಿದ್ದರು. ಆದರೂ ನನ್ನ ಲೆಕ್ಕಾಚಾರ ಭಿನ್ನವಾಗಿತ್ತು. ಈ ಬಾರಿ ಅಮಿತ್ ಶಾ ಹೆಣೆದ ಸಂಕೀರ್ಣವಾದ ರಾಜಕೀಯ ತಂತ್ರಗಾರಿಕೆಯನ್ನು ಭೇದಿಸುವುದು ಮಮತಾಗೆ ಸುಲಭವಿಲ್ಲ ಎಂದೇ ನಾನು ನಂಬಿದ್ದೆ.

ಪಶ್ಚಿಮ ಬಂಗಾಳದಲ್ಲಿ ರೋಡ್‌ಶೋ ನಡೆಸಿ ವಾಪಸಾದ ಬಳಿಕ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕೂಡ, ‘ಈ ಬಾರಿ ಬಂಗಾಳದಲ್ಲಿ ಬಿಜೆಪಿ 200ಕ್ಕೂ ಹೆಚ್ಚು ಸ್ಥಾನ ಪಡೆದರೆ ಆಶ್ಚರ್ಯ ಪಡಬೇಕಿಲ್ಲ’ ಎಂದು ಹೇಳಿದ್ದರು.

ಕೊಲ್ಕತ್ತಾ ಹಾಗೂ ಪಶ್ಚಿಮ ಬಂಗಾಳದಾದ್ಯಂತ ಇರುವ ಕೆಲ ನನ್ನ ಸ್ನೇಹಿತರ ಜತೆಗೆ ಚುನಾವಣೆಯುದ್ದಕ್ಕೂ ಸಂಪರ್ಕದಲ್ಲಿದ್ದೆ. ಅವರೆಲ್ಲರೂ ಈ ಬಾರಿ ಹೆಚ್ಚುಕಮ್ಮಿ ಇದೇ ಮಾತು ಹೇಳುತ್ತಿದ್ದರು, ತೃಣಮೂಲ ಕಾಂಗ್ರೆಸ್‌ನ ತೋಳ್ಬಲ ಹಾಗೂ ದಾದಾಗಿರಿಯನ್ನು ಮಟ್ಟ ಹಾಕಿದರೆ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಕೊನೆಗೆ ಆಗಿದ್ದು ಕೂಡ ಅದೇ.

ಇದನ್ನೂ ಓದಿ: Dr Vijay Darda Column: ರಕ್ತಪಾತದ ಮಧ್ಯೆ ಕೊಹಿನೂರ್‌ ವಜ್ರ ನೆನಪಾಗಿದ್ದೇಕೆ ?

ಅಮಿತ್ ಶಾ ಎಷ್ಟು ಬಿಗಿಯಾಗಿ ಪಶ್ಚಿಮ ಬಂಗಾಳದ ರಾಜಕೀಯ ಹಿಂಸಾಚಾರಕ್ಕೆ ಕಡಿವಾಣ ಹಾಕಿದರು ಅಂದರೆ, ಚುನಾವಣೆ ಮುಗಿಯುವವರೆಗೂ ತೃಣಮೂಲ ಕಾಂಗ್ರೆಸ್‌ನ ಕುಸ್ತಿಪಟುಗಳು ತಮ್ಮ ಬಿಲದಿಂದ ಹೊರಬರುವುದಕ್ಕೇ ಆಗದೆ ಒದ್ದಾಡಿದರು.

ಇಡೀ ರಾಜ್ಯದಲ್ಲಿ ಯಾವೊಬ್ಬ ಮತದಾರನನ್ನೂ ಮತದಾನ ಮಾಡದಂತೆ ಯಾರೊಬ್ಬರೂ ತಡೆಯಬಾರದು ಎಂದು 250000 ಕೇಂದ್ರೀಯ ಭದ್ರತಾ ಪಡೆಗಳ ಯೋಧರನ್ನು ನಿಯೋಜಿ ಸಿದ್ದರು. ಈ ಬಾರಿ ಚುನಾವಣಾ ಆಯೋಗ ಕೂಡ ದೇಶಾದ್ಯಂತ ಚುನಾವಣಾ ವೀಕ್ಷಕರಾಗಿ ಕೆಚ್ಚೆದೆಯ ಅಧಿಕಾರಿಗಳನ್ನೇ ನಿಯೋಜಿಸಿತ್ತು.

ನೀವು ಉತ್ತರ ಪ್ರದೇಶದ ಡಿಐಜಿ ಅಜಯ್ ಪಾಲ್ ಶರ್ಮಾ ಅವರ ವಿಡಿಯೊ ನೋಡಿರು ತ್ತೀರಿ. ಅವರನ್ನು ಪಶ್ಚಿಮ ಬಂಗಾಳಕ್ಕೆ ಚುನಾವಣಾ ವೀಕ್ಷಕರನ್ನಾಗಿ ಕಳುಹಿಸಲಾಗಿತ್ತು. ಅವರು ಜಹಾಂಗೀರ್ ಎಂಬ ಅಭ್ಯರ್ಥಿಯ ಕ್ಷೇತ್ರದಲ್ಲಿ ಸ್ವತಃ ತಾವೇ ಕಾಲ್ನಡಿಗೆಯಲ್ಲಿ ಹೋಗಿ, ‘ಮತದಾರರಿಗೆ ಯಾರಾದರೂ ತೊಂದರೆ ನೀಡಿದರೆ ಪರಿಣಾಮ ನೆಟ್ಟಗಿರುವುದಿಲ್ಲ’ ಎಂದು ಎಚ್ಚರಿಕೆ ನೀಡಿದ್ದರು.

ಬಿಜೆಪಿಗೆ ವೋಟು ಹಾಕಿದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಇದೇ ಜಹಾಂಗೀರ್ ಮತದಾರರಿಗೆ ಧಮಕಿ ಹಾಕುತ್ತಿದ್ದ. ಫಾಲ್ಟಾ ವಿಧಾನಸಭಾ ಕ್ಷೇತ್ರದಲ್ಲಿ ಜಹಾಂಗೀರ್‌ಗೆ ಬಹಳ ಪ್ರಭಾವವಿತ್ತು. ಆತ ಮಮತಾ ಬ್ಯಾನರ್ಜಿಯ ಸೋದರ ಸಂಬಂಧಿ ಅಭಿಷೇಕ್ ಬ್ಯಾನರ್ಜಿಯ ಖಾಸಾ ವ್ಯಕ್ತಿಯಾಗಿದ್ದ. ಆದರೆ, ಅಜಯ್ ಪಾಲ್ ಶರ್ಮಾ ಅಂತಿಂತಹ ಅಧಿಕಾರಿಯಲ್ಲ. ಅವರ ಹೆಸರು ಕೇಳಿದರೇ ಕ್ರಿಮಿನಲ್‌ಗಳು ನಡುಗುತ್ತಿದ್ದರು. ಅವರಿಗೆ ಎನ್‌ಕೌಂಟರ್ ಸ್ಪೆಷಲಿಸ್ಟ್ ಎಂಬ ಖ್ಯಾತಿ ಬೇರೆ ಇತ್ತು.

Screenshot_6

ಒಂದೆಡೆ ಚುನಾವಣಾ ಆಯೋಗ ಪಶ್ಚಿಮ ಬಂಗಾಳದಲ್ಲಿ ನಿರ್ಭೀತ ಮತ್ತು ನ್ಯಾಯಯುತ ಚುನಾವಣೆ ನಡೆಸಲು ಟೊಂಕ ಕಟ್ಟಿತ್ತು. ಇನ್ನೊಂದೆಡೆ ಅಮಿತ್ ಶಾ ಅವರು ಬಿಜೆಪಿ ಕಾರ್ಯಕರ್ತರಲ್ಲಿ ಧೈರ್ಯ ಮತ್ತು ಆತ್ಮವಿಶ್ವಾಸ ತುಂಬಿ, ಯಾವುದೇ ರಾಜಕೀಯ ಪಕ್ಷದಿಂದ ಬೆದರಿಕೆ ಬಂದರೂ ಕೆಚ್ಚೆದೆಯಿಂದ ಎದುರಿಸಿ ಎಂದು ಹುರಿದುಂಬಿಸಿದ್ದರು.

15 ದಿನಗಳನ್ನು ಅಮಿತ್ ಶಾ ಪಶ್ಚಿಮ ಬಂಗಾಳದಲ್ಲಿ ಕಳೆದಿದ್ದರು. ಬೇರೆ ಬೇರೆ ವಲಯ ಗಳಲ್ಲಿ ರಾತ್ರಿ ವಾಸ್ತವ್ಯ ಮಾಡಿ, ತಡರಾತ್ರಿಯವರೆಗೂ ಸಭೆಗಳನ್ನು ನಡೆಸಿದ್ದರು. ಅವರ ಸೂಚನೆ ಸ್ಫಟಿಕದಷ್ಟೇ ಸ್ಪಷ್ಟವಾಗಿತ್ತು, ಬಿಜೆಪಿಯ ಪ್ರತಿಯೊಂದು ಮತವೂ ಮತದಾನದ ದಿನ ಬೆಳಗ್ಗೆ 11 ಗಂಟೆಯೊಳಗೆ ಚಲಾವಣೆಯಾಗಬೇಕು.

ಮತದಾರರ ಪಟ್ಟಿಯಿಂದ 91 ಲಕ್ಷದಷ್ಟು ನಕಲಿ ಮತದಾರರ ಹೆಸರುಗಳನ್ನು ತೆಗೆದಿದ್ದ ರಿಂದ ಚುನಾವಣೆಗೂ ಮೊದಲೇ ಮಮತಾ ಬ್ಯಾನರ್ಜಿಯ ಶಕ್ತಿ ಗಣನೀಯವಾಗಿ ಕುಸಿದಿತ್ತು. ಶಾ ಹೆಣೆದ ತಂತ್ರಗಾರಿಕೆ ಚುನಾವಣೆಯ ಪ್ರಚಾರದ ವೇಳೆ ಮಮತಾ ಬ್ಯಾನರ್ಜಿ ಮಂಡಿ ಯೂರುವಂತೆ ಮಾಡಿತ್ತು. ಹಾಗೆ ನೋಡಿದರೆ ಮಮತಾ ಬ್ಯಾನರ್ಜಿಯೇನೂ ಕಡಿಮೆ ಹೋರಾಟಗಾರ್ತಿಯಲ್ಲ. ಆದರೆ, ಈ ಬಾರಿ ಆಕೆಯ ಶತ್ರು ಇನ್ನೂ ಶಕ್ತಿಶಾಲಿ ಹೋರಾಟಗಾರ ನಾಗಿದ್ದ.

ಬಿಡುವಿಲ್ಲದ ಕೆಲಸಗಳ ನಡುವೆಯೂ ಅಮಿತ್ ಶಾ ಪಶ್ಚಿಮ ಬಂಗಾಳದಲ್ಲಿ ೫೦ಕ್ಕೂ ಹೆಚ್ಚು ರ‍್ಯಾಲಿ ಮತ್ತು ರೋಡ್‌ಶೋಗಳಲ್ಲಿ ಪಾಲ್ಗೊಂಡಿದ್ದರು. ಅವರ ಕೆಲವು ಘೋಷಣೆಗಳು ಮತದಾರರನ್ನು ನೇರವಾಗಿ ತಟ್ಟಿದ್ದವು. ಗೂಂಡಾಗಳು ಮನೆಯೊಳಗೆ ಬಾಗಿಲು ಮುಚ್ಚಿ ಕೊಂಡು ಕುಳಿತುಕೊಳ್ಳಬೇಕು, ಹೊರಗೇನಾದರೂ ಬಂದರೆ ಅವರ ಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದರು.

ಬಂಗಾಳದ ಮಣ್ಣಿನಲ್ಲಿ ಇನ್ನೊಂದು ಬಾಬ್ರಿ ಮಸೀದಿ ತಲೆಯೆತ್ತಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದೂ ಅವರು ಗುಡುಗಿದ್ದರು. ಬಿಜೆಪಿ ಸರಕಾರ ರಚನೆ ಮಾಡಿದ ನಂತರ ಭಾರತ-ಬಾಂಗ್ಲಾದೇಶದ ಗಡಿಯುದ್ದಕ್ಕೂ 45 ದಿನಗಳ ಒಳಗೆ ಬೇಲಿ ನಿರ್ಮಿಸಲಾಗುವುದು. ಮಮತಾ ಸರಕಾರ ಬೇಕಂತಲೇ ಗಡಿಯಲ್ಲಿ ಬೇಲಿ ನಿರ್ಮಿಸಲು ಜಾಗ ನೀಡದೆ ನುಸುಳು ಕೋರರಿಗೆ ನೆರವಾಗಿತ್ತು ಎಂದು ಅಮಿತ್ ಶಾ ಚುನಾವಣಾ ಪ್ರಚಾರದ ವೇಳೆ ಆರೋಪಿಸಿ ದ್ದರು.

ಗಡಿಯಲ್ಲಿ ಬೇಲಿ ಇಲ್ಲದಿರುವ ಕಾರಣದಿಂದಲೇ ಬಂಗಾಳಕ್ಕೆ ಬಾಂಗ್ಲಾದೇಶದ ನುಸುಳು ಕೋರರು ಸಲೀಸಾಗಿ ಪ್ರವೇಶಿಸುತ್ತಿದ್ದಾರೆ, ರಾಜ್ಯ ಸರಕಾರದ ನೆರವಿನಿಂದ ಅವರು ಭಾರತೀಯ ಪ್ರಜೆಗಳಾಗಿ ಪರಿವರ್ತನೆ ಹೊಂದಿ, ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಲು ಮತದಾರರ ಪಟ್ಟಿಯಲ್ಲೂ ಜಾಗ ಪಡೆಯುತ್ತಿದ್ದಾರೆ ಎಂದು ಹೇಳಿದ್ದರು.

ಇದೇ ವೇಳೆ ಅಮಿತ್ ಶಾ ಅವರು ಪ್ರಧಾನಿ ನರೇಂದ್ರ ಮೋದಿಯವರ ಪ್ರಚಾರ ರ‍್ಯಾಲಿ ಗಳನ್ನು ಕೂಡ ಅಷ್ಟೇ ನಿಖರವಾಗಿ ಮತ್ತು ಚಾಣಾಕ್ಷತನದಿಂದ ಪ್ಲಾನ್ ಮಾಡಿದ್ದರು. ಬಂಗಾಳದ ಎಲ್ಲ ಪ್ರದೇಶಗಳ ಜನರಿಗೂ ಮೋದಿಯವರ ಭಾಷಣ ಕೇಳುವ ಅವಕಾಶ ಸಿಗುವಂತೆ ಅವರು ಬಹಿರಂಗ ಸಭೆಗಳನ್ನು ಆಯೋಜಿಸಿದ್ದರು.

250ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡ 19 ಜಿಲ್ಲೆಗಳ, 24 ಸ್ಥಳಗಳಲ್ಲಿ ಪ್ರಧಾನಿ ಭಾಷಣ ಮಾಡಿ, ರೋಡ್ ಶೋ ನಡೆಸಿದ್ದರು. ಚುನಾವಣೆಯ ಫಲಿತಾಂಶ ಬಂದ ಬಳಿಕ ನರೇಂದ್ರ ಮೋದಿಯವರು ಬಂಗಾಳದಲ್ಲಿ ಬಿಜೆಪಿ ಜಯದ ನಿಜವಾದ ರೂವಾರಿ ಅಮಿತ್ ಶಾ ಎಂದು ಬಹಿರಂಗವಾಗಿ ಹೇಳಿದರು.

2014ರಲ್ಲೇ ಅಮಿತ್ ಶಾ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯವರ ಸರಕಾರ ವನ್ನು ಕಿತ್ತೊಗೆಯುವುದಾಗಿ ಶಪಥ ಮಾಡಿದ್ದರು ಎಂಬುದು ಬಹಳ ಜನರಿಗೆ ನೆನಪಿರ ಲಿಕ್ಕಿಲ್ಲ. ಅವರ ಪ್ರತಿಜ್ಞೆ ಈಡೇರಲು 12 ವರ್ಷಗಳೇ ಹಿಡಿದಿರಬಹುದು, ಆದರೆ ಕೊನೆಗೂ ಅವರು ಮಾತು ಉಳಿಸಿಕೊಂಡಿದ್ದಾರೆ. 2016ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಕೇವಲ ಮೂರು ಸೀಟುಗಳನ್ನು ಗೆದ್ದಿತ್ತು.

ಅದು 2021ರಲ್ಲಿ 77ಕ್ಕೆ ಏರಿಕೆಯಾಗಿ, 2026ರಲ್ಲಿ ಬರೋಬ್ಬರಿ 207ನ್ನು ತಲುಪಿದೆ. ಶ್ಯಾಮ ಪ್ರಸಾದ ಮುಖರ್ಜಿಯವರ ಕನಸನ್ನು ಅಮಿತ್ ಶಾ ನನಸು ಮಾಡಿದ್ದಾರೆ. ಸೋಲಿನ ಬಳಿಕ ಮಮತಾ ಬ್ಯಾನರ್ಜಿ ಬಿಜೆಪಿ 101 ಸ್ಥಾನಗಳನ್ನು ಲೂಟಿ ಮಾಡಿದೆ ಎಂದು ಆರೋಪಿಸಿ ದ್ದಾರೆ.

ರಾಹುಲ್ ಗಾಂಧಿ, ಇದು ಮತಚೋರಿಯ ಫಲಿತಾಂಶ ಎಂದು ಕರೆದಿದ್ದಾರೆ. ಹೆಚ್ಚು ಕಮ್ಮಿ ಐದು ದಶಕಗಳ ಕಾಲ ರಾಜಕಾರಣವನ್ನು ಹತ್ತಿರದಿಂದ ನೋಡಿದ ಅನುಭವದಲ್ಲಿ ಹೇಳುವುದಾದರೆ, ಈ ಹಿಂದೆಯೂ ಸೋತ ನಾಯಕರು ತಮ್ಮ ಘನತೆ ಕಾಪಾಡಿಕೊಳ್ಳಲು ಏನಾದರೊಂದು ನೆಪ ಹುಡುಕುತ್ತಿದ್ದರು. ಆದರೆ ಅದೇ ವೇಳೆ ಅವರು ಸೋಲಿಗೆ ಕಾರಣ ಗಳನ್ನೂ ವಿಶ್ಲೇಷಣೆ ಮಾಡುತ್ತಿದ್ದರು. ಆದರೆ ಇಂದು ಆತ್ಮಾವಲೋಕನ ಎಂಬುದೇ ಇಲ್ಲವಾಗಿದೆ. ಕೇವಲ ಆರೋಪಗಳು ಉಳಿದಿವೆ. ಆದರೆ, ಬರೀ ದೂಷಣೆ ಮಾಡುವುದರಿಂದ ಎದುರಾಳಿ ಕುಸ್ತಿಪಟುವಿನ ಶಕ್ತಿ ಕಡಿಮೆಯಾಗುವುದಿಲ್ಲ ಎಂಬುದು ನಮಗೆ ಗೊತ್ತಿರಬೇಕು.

ಕುಸ್ತಿಪಟುವನ್ನು ಸೋಲಿಸಬೇಕು ಅಂದರೆ ಇನ್ನೊಬ್ಬ ಕುಸ್ತಿಪಟು ತನ್ನನ್ನು ತಾನು ಗಟ್ಟಿಯಾಗಿಸಿಕೊಂಡು, ಅಗತ್ಯವಿರುವ ತಂತ್ರಗಳು ಮತ್ತು ಪಟ್ಟುಗಳನ್ನು ಕರಗತ ಮಾಡಿ ಕೊಳ್ಳಬೇಕು. ಅದೇ ವೇಳೆ, ಯಾವುದೇ ರಾಜಕಾರಣಿಯು ರಾಷ್ಟ್ರೀಯ ಹಿತಾಸಕ್ತಿಯ ಜತೆಗೆ ರಾಜಿ ಮಾಡಿಕೊಳ್ಳಬಾರದು.

ಹಾಗೇನಾದರೂ ರಾಜಿ ಮಾಡಿಕೊಂಡರೆ ಪಶ್ಚಿಮ ಬಂಗಾಳದಲ್ಲಿ ಯಾವ ಫಲಿತಾಂಶ ಬಂದಿದೆಯೋ ಅದೇ ಬರುತ್ತದೆ. ಚುನಾವಣೆ ಮುಗಿದ ಬಳಿಕ ಅನೇಕರು ‘ಅಮಿತ್ ಶಾ ಬಂಗಾಳವನ್ನು ಕಾಪಾಡಿದರು’ ಎಂದು ಹೇಳುವುದನ್ನು ಕೇಳಿದ್ದೇನೆ.

ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಜೋಡಿ ನಿಜಕ್ಕೂ ಅಸಾಮಾನ್ಯವಾಗಿದೆ. ಗೆಲವಿನ ಮೇಲೆ ಗೆಲವು ಸಿಗುತ್ತಿದ್ದರೂ ಅವರು ವಿಶ್ರಾಂತಿ ತೆಗೆದುಕೊಳ್ಳುತ್ತಿಲ್ಲ. ಅದರ ಬದಲಿಗೆ, ಒಂದು ರಾಜ್ಯವನ್ನು ಗೆದ್ದ ತಕ್ಷಣ ಇನ್ನೊಂದು ರಾಜ್ಯದ ಗೆಲವಿಗೆ ಯೋಜನೆ ಆರಂಭಿಸುತ್ತಿದ್ದಾರೆ. ಎಲ್ಲಾದರೂ ಸೋಲು ಅನುಭವಿಸಿದರೆ ಮುಂದಿನ ಸಮರಕ್ಕಾಗಿ ಹೊಸ ಸ್ಫೂರ್ತಿ ಮತ್ತು ದೃಢ ನಿರ್ಧಾರದೊಂದಿಗೆ ಕೆಲಸ ಶುರು ಮಾಡುತ್ತಾರೆ.

ಇಬ್ಬರೂ ದಿನದ 24 ಗಂಟೆ, ವಾರದ ಏಳು ದಿನ ದಣಿವರಿಯದೆ ಕೆಲಸ ಮಾಡುವ ನಾಯಕರು. ಇಂತಹ ಜೋಡೆತ್ತು ವಿಪಕ್ಷಗಳಲ್ಲಿ ಇವೆಯಾ? ಹೇಳಿದ್ದನ್ನೇ ಹೇಳುವುದು ಮತ್ತು ವಿರೋಧಿಗಳ ವಿರುದ್ಧ ಆರೋಪಗಳನ್ನು ಮಾಡುವುದರಿಂದಲೇ ಚುನಾವಣೆಗಳನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ವಿಪಕ್ಷಗಳಿಗೆ ಯಾರಾದರೂ ಹೇಳಬೇಕು.

ಗೆಲ್ಲಬೇಕು ಅಂದರೆ ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯಬೇಕು, ವಿಶ್ರಾಂತಿಯಿಲ್ಲದೆ ಕಷ್ಟ ಪಟ್ಟು ಕೆಲಸ ಮಾಡಬೇಕು. ಆಗ ಮಾತ್ರ ಏನಾದರೂ ಸಾಧನೆ ಮಾಡಲು ಸಾಧ್ಯ. ತಮಿಳು ನಾಡಿನಲ್ಲಿ ವಿಜಯ್ ಗೆಲವು ಏಕೆ ಆ ಪರಿಯ ಆಶಾಭಾವನೆ ಮೂಡಿಸಿದೆ? ಏಕೆಂದರೆ ಅವರು ಸಾಂಪ್ರದಾಯಿಕ ದ್ರಾವಿಡ ರಾಜಕಾರಣದಿಂದ ಅಂತರ ಕಾಯ್ದುಕೊಂಡು, ಚುನಾವಣೆ ಯಲ್ಲಿ ತಮ್ಮದೇ ಆದ ಜಾತ್ಯತೀತ ರಾಜಕಾರಣದ ಹೊಸ ಮಾದರಿಯನ್ನು ಜನರ ಮುಂದಿಟ್ಟು ಗೆದ್ದಿದ್ದಾರೆ.

ಪ್ರತಿಯೊಬ್ಬ ಜನಸಾಮಾನ್ಯನ ಆಶೋತ್ತರಗಳನ್ನು ಈಡೇರಿಸುವ ಶಪಥ ಮಾಡಿದ್ದಾರೆ. ಅಸ್ಸಾಂನಲ್ಲಿ ಏಕೆ ಬಿಜೆಪಿ ಸತತ ಮೂರನೇ ಬಾರಿ ಅಧಿಕಾರಕ್ಕೆ ಬಂದಿದೆ? ಏಕೆಂದರೆ ಅದು ಈ ಹಿಂದೆ ತಾನು ಕೊಟ್ಟಿದ್ದ ಭರವಸೆಗಳನ್ನು ಈಡೇರಿಸಿದೆ.

ಇನ್ನು, ಕಟ್ಟಕಡೆಯ ರಾಜ್ಯವಾದ ಕೇರಳದಲ್ಲೂ ಎಡಪಕ್ಷಗಳ ಯುಗ ಅಂತ್ಯವಾಗಿದ್ದು ಏಕೆ? ಏಕೆಂದರೆ, ಭಾರತದ ಕಮ್ಯುನಿಸ್ಟರು ಇಲ್ಲಿನ ವಾಸ್ತವಗಳನ್ನು ಅರ್ಥ ಮಾಡಿಕೊಳ್ಳಲು ಹೋಗದೆ ಬಹಳ ವರ್ಷಗಳಿಂದ ಚೀನಾ ಅಥವಾ ರಷ್ಯಾದಲ್ಲಿ ಮಳೆಯಾದರೆ ಇಲ್ಲಿ ಕೊಡೆ ಬಿಚ್ಚುವ ಕೆಲಸ ಮಾಡುತ್ತಿದ್ದಾರೆ.

ಇವೆಲ್ಲದರ ಸಾರ ಇಷ್ಟೆ, ಜನರ ಹೃದಯದಲ್ಲಿ ಸ್ಥಾನ ಗಳಿಸಲು ನೀವು ಬಯಸಿದರೆ ಅದಕ್ಕೂ ಮೊದಲು ಜನರ ನಾಡಿಮಿಡಿತವನ್ನು ತಿಳಿದುಕೊಳ್ಳಬೇಕು. ಮೋದಿ ಮತ್ತು ಅಮಿತ್ ಶಾಗೆ ಜನರ ನಾಡಿಮಿಡಿತ ಗೊತ್ತಿದೆ. ಅದೇ ರೀತಿ, ಅವರಿಗೆ ನಮ್ಮ ದೇಶದ ಹೃದಯದ ಬಡಿತವೂ ತಿಳಿದಿದೆ. ಆದ್ದರಿಂದಲೇ ಒಂದಾದ ಮೇಲೊಂದು ಚುನಾವಣೆಗಳನ್ನು ಗೆಲ್ಲುತ್ತಿದ್ದಾರೆ.

ಡಾ.ವಿಜಯ್‌ ದರಡಾ

View all posts by this author