Dr Vijay Darda Column: ರಕ್ತಪಾತದ ಮಧ್ಯೆ ಕೊಹಿನೂರ್ ವಜ್ರ ನೆನಪಾಗಿದ್ದೇಕೆ ?
ಬ್ರಿಟನ್ನಿನ ವಸಾಹತುಶಾಹಿ ಆಳ್ವಿಕೆಯ ಇತಿಹಾಸದಲ್ಲಿ ಭಾರತಕ್ಕಾದ ಗಾಯವನ್ನು ಅವರು ಕೊಹಿನೂರ್ ವಜ್ರದ ಮೂಲಕ ಮಾಧ್ಯಮಗಳಿಗೆ ಮತ್ತೊಮ್ಮೆ ನೆನಪಿಸಿದ್ದಾರೆ. ಕೊಹಿನೂರ್ ವಜ್ರವನ್ನು ನಮಗೆ ಮರಳಿಸಿ ಎಂದು ಭಾರತ ಈಗಾಗಲೇ ಸಾಕಷ್ಟು ಬಾರಿ ಬ್ರಿಟನ್ನಿನ ಬಳಿ ಕೇಳಿದೆ. ಅದರಿಂದ ಪ್ರಯೋಜನವೇನೂ ಆಗಿಲ್ಲ.
-
ಸಂಗತ
ಕಾಲ ಯಾವತ್ತೂ ತಾನಾಗಿಯೇ ಕೊಲೆಗಡುಕನಾಗುವುದಿಲ್ಲ. ಆದರೆ, ಕಾಲದ ಮಡಿಲಿನಲ್ಲಿ ಬೆಳೆಯುವ ವ್ಯಕ್ತಿ ಕೊಲೆಗಡುಕನಾಗಬಹುದು. ನಾವು ಈಗ ಬದುಕುತ್ತಿರುವ ಕಾಲ ಕೂಡ ಇದಕ್ಕೆ ಭಿನ್ನವಾಗಿಲ್ಲ. ಇಲ್ಲೊಂದು ಸಂಗತಿ ಗಮನಿಸಿ; ಈ ದುರಿತ ಕಾಲದಲ್ಲೂ ಜಗತ್ತಿನ ಅತ್ಯಂತ ಪ್ರತಿಷ್ಠಿತ ನಗರವಾಗಿರುವ ನ್ಯೂಯಾರ್ಕ್‌ನ ಮೇಯರ್ ಜೊಹ್ರಾನ್ ಮಮ್ದಾನಿ ಇದ್ದಕ್ಕಿದ್ದಂತೆ ಜಗತ್ತಿನ ಅತ್ಯಂತ ದುಬಾರಿ ವಜ್ರವಾಗಿರುವ ಕೊಹಿನೂರ್ ವಜ್ರವನ್ನು ನೆನಪಿಸಿಕೊಂಡಿದ್ದಾರೆ.
ಅಷ್ಟೇ ಅಲ್ಲ, ಅದು ಭಾರತಕ್ಕೆ ಮರಳಿ ಸೇರುವುದನ್ನು ನೋಡುವ ಬಯಕೆಯನ್ನೂ ವ್ಯಕ್ತ ಪಡಿಸಿದ್ದಾರೆ. ಇದು ಆಶ್ಚರ್ಯವಲ್ಲವೇ? ಮೊದಲಿಗೆ ನನಗೂ ಆಶ್ಚರ್ಯವೇ ಆಗಿತ್ತು. ಆದರೆ, ರಾಜಕಾರಣದಲ್ಲಿ ಯಾವ ಮಾತೂ ಸುಮ್ಮನೆ ಬರುವುದಿಲ್ಲ. ಅಲ್ಲಿ ಹೇಳಲ್ಪಡುವ ಪ್ರತಿ ಪದದ ಹಿಂದೆಯೂ ಏನಾದರೂ ಉದ್ದೇಶವಿರುತ್ತದೆ. ಹಾಗಿದ್ದರೆ ಮಮ್ದಾನಿ ಮತ್ತು ಕೊಹಿನೂರ್ ಪ್ರಕರಣದ ಹಿಂದಿರುವುದು ಏನು? ಏಪ್ರಿಲ್ ತಿಂಗಳ ಕೊನೆಯ ವಾರದಲ್ಲಿ ಬ್ರಿಟನ್‌ನ ಕಿಂಗ್ ಚಾರ್ಲ್ಸ್ ನಾಲ್ಕು ದಿನಗಳ ಪ್ರವಾಸಕ್ಕಾಗಿ ಅಮೆರಿಕಕ್ಕೆ ಭೇಟಿ ನೀಡಿದ್ದರು.
ಅವರು ಅಲ್ಲಿಗೆ ತೆರಳುವು ದಕ್ಕೂ ಸ್ವಲ್ಪ ಮೊದಲು ಪತ್ರಿಕಾಗೋಷ್ಠಿಯಲ್ಲಿ ಮಮ್ದಾನಿ ಮಾತನಾಡಿದ್ದರು. ಆಗ ಪತ್ರಕರ್ತರೊಬ್ಬರು, ‘ನಿಮಗೆ ಕಿಂಗ್ ಚಾರ್ಲ್ಸ್ ಬಳಿ ಮಾತನಾಡಲು ಅವಕಾಶ ಸಿಕ್ಕರೆ ಏನು ಹೇಳುತ್ತೀರಿ?’ ಎಂದು ಕೇಳಿದ್ದರು. ಅದಕ್ಕೆ ಮಮ್ದಾನಿ ನೀಡಿದ ಪ್ರತಿಕ್ರಿಯೆ ಕ್ಷಣಮಾತ್ರದಲ್ಲಿ ಜಗತ್ತಿನಾದ್ಯಂತ ವೈರಲ್ ಆಗಿತ್ತು.
ಮಮ್ದಾನಿ ಹೇಳಿದ್ದು: ‘ರಾಜನ ಬಳಿ ಮಾತನಾಡಲು ನನಗೆ ಅವಕಾಶ ಸಿಕ್ಕರೆ ಬಹುಶಃ ಕೊಹಿನೂರ್ ವಜ್ರವನ್ನು ಭಾರತಕ್ಕೆ ಮರಳಿಸುವಂತೆ ಕೇಳುತ್ತೇನೆ.’ ಏಪ್ರಿಲ್ 29ರಂದು ಕಿಂಗ್ ಚಾರ್ಲ್ಸ್ ಮತ್ತು ಕ್ವೀನ್ ಕ್ಯಾಮಿಲ್ಲಾ 9/11 ಸ್ಮಾರಕ ಮತ್ತು ಮ್ಯೂಸಿಯಂಗೆ ಭೇಟಿ ನೀಡಿ 2001ರ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಕೋರಿದರು.
ಇದನ್ನೂ ಓದಿ: Dr Vijay Darda Column: ವಲಸಿಗರೆಲ್ಲಾ ಅಮೆರಿಕ ತೊರೆದರೆ ಏನಾಗುತ್ತದೆ ?
ಆ ವೇಳೆ ಅವರು ಸಂತ್ರಸ್ತರ ಕುಟುಂಬದವರನ್ನೂ ಭೇಟಿಯಾಗಿದ್ದರು. ಆಗ ಮಮ್ದಾನಿಗೆ ಕಿಂಗ್ ಚಾರ್ಲ್ಸ್‌ರನ್ನು ಸ್ವಲ್ಪ ಕಾಲ ಭೇಟಿಯಾಗುವ ಅವಕಾಶ ಸಿಕ್ಕಿತ್ತು. ಇಬ್ಬರೂ ಶೇಕ್ ಹ್ಯಾಂಡ್ ಮಾಡಿ, ಒಂದೆರಡು ಮಾತುಗಳನ್ನು ವಿನಿಮಯ ಮಾಡಿಕೊಂಡಿದ್ದರು.
ಆಗೇನಾದರೂ ಮಮ್ದಾನಿಯವರು ಚಾರ್ಲ್ಸ್‌ಬಳಿ ಕೊಹಿನೂರ್ ವಿಷಯ ಪ್ರಸ್ತಾಪ ಮಾಡಿದರೋ ಇಲ್ಲವೋ ಇನ್ನೂ ಗೊತ್ತಾಗಿಲ್ಲ. ಚಾರ್ಲ್ಸ್ ಬಳಿ ಮಮ್ದಾನಿ ಈ ವಿಷಯ ವನ್ನು ಪ್ರಸ್ತಾಪ ಮಾಡಿಲ್ಲದಿದ್ದರೂ ಪರವಾಗಿಲ್ಲ, ಆದರೆ ಅವರು ಭಾರತಕ್ಕೆ ಐತಿಹಾಸಿಕ ವಾಗಿ ಆದ ಅನ್ಯಾಯದ ಬಗ್ಗೆ ಸೂಚ್ಯವಾಗಿ ಮಾತನಾಡಿ ಇಡೀ ಜಗತ್ತಿನ ಗಮನ ಸೆಳೆದಿರುವು ದಂತೂ ನಿಜ.
ಬ್ರಿಟನ್ನಿನ ವಸಾಹತುಶಾಹಿ ಆಳ್ವಿಕೆಯ ಇತಿಹಾಸದಲ್ಲಿ ಭಾರತಕ್ಕಾದ ಗಾಯವನ್ನು ಅವರು ಕೊಹಿನೂರ್ ವಜ್ರದ ಮೂಲಕ ಮಾಧ್ಯಮಗಳಿಗೆ ಮತ್ತೊಮ್ಮೆ ನೆನಪಿಸಿದ್ದಾರೆ. ಕೊಹಿನೂರ್ ವಜ್ರವನ್ನು ನಮಗೆ ಮರಳಿಸಿ ಎಂದು ಭಾರತ ಈಗಾಗಲೇ ಸಾಕಷ್ಟು ಬಾರಿ ಬ್ರಿಟನ್ನಿನ ಬಳಿ ಕೇಳಿದೆ. ಅದರಿಂದ ಪ್ರಯೋಜನವೇನೂ ಆಗಿಲ್ಲ.
ಹಾಗಂತ ನ್ಯೂಯಾರ್ಕ್ ಮೇಯರ್ ಈ ವಿಷಯದಲ್ಲಿ ಮೂಗು ತೂರಿಸುವ ಅಗತ್ಯವೇನು ಎಂದು ಕೇಳುವ ಅಗತ್ಯವಿಲ್ಲ. ಏಕೆಂದರೆ ಮಮ್ದಾನಿ ಕೂಡ ಭಾರತೀಯ ಮೂಲದವರು. ಹೀಗಾಗಿ ಕೊಹಿನೂರ್ ಬಗ್ಗೆ ಮಾತನಾಡುವ ಎಲ್ಲ ಹಕ್ಕು ಅವರಿಗಿದೆ. ಆದರೆ, ಈ ಐತಿಹಾಸಿಕ ಸಂಪತ್ತಿನ ಬಗ್ಗೆ ಅವರು ಧ್ವನಿಯೆತ್ತಿದ ಪ್ರಕರಣ ಅಷ್ಟಕ್ಕೇ ಸೀಮಿತವಾಗಿಲ್ಲ.
ರಾಜನನ್ನೇ ಪ್ರಶ್ನೆ ಮಾಡುವ ಬಗ್ಗೆ ಮಾತನಾಡುವ ಮೂಲಕ ಅವರು ತಮ್ಮ ರಾಜಕೀಯ ಘನತೆಯನ್ನು ಪರಿಣಾಮಕಾರಿಯಾಗಿ ಹೆಚ್ಚಿಸಿಕೊಂಡಿದ್ದಾರೆ. ಸ್ವತಃ ಮಮ್ದಾನಿ ಕೆಲವೊಮ್ಮೆ ಡೊನಾಲ್ಡ್ ಟ್ರಂಪ್ ಮತ್ತು ಭಾರತವನ್ನು ಕಟುವಾಗಿ ಟೀಕಿಸುವುದು ನಿಜ. ತನ್ನ ಮೂಲವಿ ರುವುದು ಭಾರತದಲ್ಲಿ ಎಂದು ಆತ ಹೆಮ್ಮೆಯಿಂದ ಯಾವತ್ತೂ ಹೇಳಿಕೊಂಡಿಲ್ಲ. ಆದರೆ, ಈಗ ಕೊಹಿನೂರ್ ಬಗ್ಗೆ ಪ್ರಸ್ತಾಪಿಸುವ ಮೂಲಕ ತನ್ನ ಮತ್ತು ಭಾರತದ ನಡುೆ ಇರುವ, ತನ್ನ ಮತ್ತು ಭಾರತೀಯ ಮೂಲದ ಅಮೆರಿಕನ್ನರ ನಡುವೆ ಇರುವ ಅಂತರವನ್ನು ಕಡಿಮೆ ಮಾಡಿಕೊಳ್ಳಲು ಜಾಣ ನಡೆ ಇರಿಸಿದಂತೆ ಕಾಣುತ್ತಿದೆ.
ಬ್ರಿಟನ್ನಿನ ರಾಜ ಮತ್ತು ರಾಣಿಯ ಭೇಟಿ ವೇಳೆ ಕೊಹಿನೂರ್ ಬಗ್ಗೆ ಮಾತನಾಡುವುದು ಸಣ್ಣ ಸಂಗತಿಯಲ್ಲ. ಅದಕ್ಕೆ ನಿಜವಾಗಿಯೂ ಧೈರ್ಯ ಬೇಕು. ಮಮ್ದಾನಿಯ ಮಾತು ಕೇಳಿದಾಗ ನನಗೆ ಕೆಲ ವರ್ಷಗಳ ಹಿಂದೆ ಬ್ರಿಟನ್ನಿನ ಆಕ್ಸ್ʼಫರ್ಡ್ ಯೂನಿವರ್ಸಿಟಿಯಲ್ಲಿ ಶಶಿ ತರೂರ್ ಮಾಡಿದ್ದ ಹರಿತ ಭಾಷಣ ನೆನಪಾಗಿತ್ತು.
ಬ್ರಿಟನ್ ಹೇಗೆ ತನ್ನ ವಸಾಹತು ದೇಶಗಳನ್ನು ಶೋಷಿಸಿ ಶ್ರೀಮಂತ ದೇಶವಾಯಿತು ಎಂಬು ದನ್ನು ತರೂರ್ ಎಳೆಎಳೆಯಾಗಿ ಬಿಚ್ಚಿಟ್ಟಿದ್ದರು. ಅದಕ್ಕೆ ಸಾಕಷ್ಟು ಸಾಕ್ಷ್ಯಗಳನ್ನೂ ಅವರು ನೀಡಿದ್ದರು. ಬ್ರಿಟಿಷರು ಭಾರತಕ್ಕೆ ಬಂದಾಗ ಜಾಗತಿಕ ಜಿಡಿಪಿಯಲ್ಲಿ ಭಾರತದ ಪಾಲು ಶೇ.23ರಿಂದ ಶೇ.27ರಷ್ಟಿತ್ತು. ಅವರು ಭಾರತವನ್ನು ಬಿಟ್ಟು ಹೋದಾಗ ಅದು ಶೇ.3ಕ್ಕಿಂತ ಕೆಳಗೆ ಕುಸಿದಿತ್ತು.
ಬ್ರಿಟನ್ನಿನ ಔದ್ಯೋಗಿಕ ಕ್ರಾಂತಿಯು ವಾಸ್ತವವಾಗಿ ಭಾರತದ ಸಂಪನ್ಮೂಲಗಳನ್ನು ದೋಚಿ, ಅವುಗಳನ್ನು ಬಳಸಿಕೊಂಡು ಮಾಡಿದ ಸಾಧನೆಯಾಗಿತ್ತು. ಬ್ರಿಟನ್ ತನ್ನ ಜವಳಿ ಉದ್ಯಮ ವನ್ನು ಕಟ್ಟಿಕೊಳ್ಳಲು ಭಾರತದ ಜವಳಿ ಉದ್ಯಮವನ್ನು ವ್ಯವಸ್ಥಿತವಾಗಿ ನಿರ್ನಾಮ ಮಾಡಿತ್ತು. ಅದೇ ರೀತಿ ಬ್ರಿಟನ್ನಿನ ವಸ್ತುಗಳನ್ನು ಭಾರತದಲ್ಲಿ ಮಾರಾಟ ಮಾಡಲು ಭಾರತೀಯ ಗುಡಿ ಕೈಗಾರಿಕೆಗಳನ್ನು ಹೊಸಕಿ ಹಾಕಿತ್ತು. ಇದನ್ನೆಲ್ಲ ವಿವರಿಸಿ ಹೇಳಿದ ಬಳಿಕ ತರೂರ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಭಾರತದ ಮೇಲೆ ನಡೆಸಿದ ಐತಿಹಾಸಿಕ ದೌರ್ಜನ್ಯಕ್ಕೆ ಬ್ರಿಟನ್ ಕ್ಷಮೆ ಯಾಚಿಸಬೇಕು, ಭಾರತದಿಂದ ಮತ್ತು ಭಾರತೀಯರಿಂದ ದೋಚಿದ ಸಂಪತ್ತಿನ ಮೌಲ್ಯವನ್ನು ಪರಿಹಾರದ ರೂಪದಲ್ಲಿ ಈಗಲಾದರೂ ಮರಳಿಸ ಬೇಕು ಎಂದು ಕೇಳಿದ್ದರು.
ಭಾರತದಿಂದ ಕೊಹಿನೂರ್ ವಜ್ರ ಕಣ್ಮರೆಯಾಗಿದ್ದು ಕೂಡ ಬ್ರಿಟನ್ನಿನ ಇದೇ ವ್ಯವಸ್ಥಿತ ಲೂಟಿಯ ನೇರ ಪರಿಣಾಮಗಳಲ್ಲಿ ಒಂದು. ಕೊಹಿನೂರ್‌ನ ಇಂದಿನ ಮಾರುಕಟ್ಟೆ ಮೌಲ್ಯ ಒಂದು ಬಿಲಿಯನ್ ಡಾಲರ್‌ಗೂ ಹೆಚ್ಚು ಎಂದು ತಜ್ಞರು ಅಂದಾಜಿಸುತ್ತಾರೆ. ಆದರೆ ಅದಕ್ಕಿರುವ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮೌಲ್ಯ ಇನ್ನೂ ಹೆಚ್ಚು. ಅದು ಹಣವನ್ನು ಮೀರಿದ್ದಾಗಿದೆ. ಕೊಹಿನೂರ್ ಎಂಬುದು ಭಾರತದ ಹೆಮ್ಮೆಯ ಪ್ರತೀಕ. ಕೊಹಿನೂರ್ ಪದದ ಅರ್ಥ ‘ಬೆಳಕಿನ ಬೆಟ್ಟ.’ ಆದರೆ ಅದು ಭಾರತದಿಂದ ಬ್ರಿಟನ್ನಿಗೆ ಪ್ರಯಾಣಿಸಿದ ರೀತಿಯಿದೆ ಯಲ್ಲ, ಅದು ಕತ್ತಲು ಮತ್ತು ರಕ್ತಪಾತದ ಇತಿಹಾಸವನ್ನೇ ಹೊಂದಿದೆ!
ಗೊಲ್ಕೊಂಡಾದ ಕೊಲ್ಲೂರ್ ಗಣಿಯಲ್ಲಿ 13 ಅಥವಾ 14ನೇ ಶತಮಾನದಲ್ಲಿ ಅದು ಸಿಕ್ಕಿತು ಎಂದು ಇತಿಹಾಸಕಾರರು ಹೇಳುತ್ತಾರೆ. ಕೊಲ್ಲೂರ್ ಗಣಿಯು ವಜ್ರಗಳಿಗೆ ಜಾಗತಿಕ ಪ್ರಸಿದ್ಧಿ ಪಡೆದಿತ್ತು. ಕೊಹಿನೂರ್ ವಜ್ರ ಸಿಕ್ಕಾಗ ಅದು 793 ಕ್ಯಾರೆಟ್ ತೂಕವಿತ್ತು. ಶತಮಾನಗಳ ಕಾಲ ಅದನ್ನು ಕತ್ತರಿಸಿ, ಪಾಲಿಶ್ ಮಾಡಿದ ಪರಿಣಾಮ ಈಗ ಅದರ ತೂಕ 105.6 ಕ್ಯಾರೆಟ್ ಇದೆ ಎಂದು ಹೇಳಲಾಗುತ್ತದೆ.
ಕೊಹಿನೂರ್ ವಜ್ರ ಮೊದಲಿಗೆ ಕಾಕತೀಯ ರಾಜರ ಸಂಪತ್ತಾಗಿತ್ತು. ಅವರ ಬಳಿ ಅಂತಹ ದ್ದೊಂದು ವಜ್ರವಿದೆ ಎಂಬ ಸುದ್ದಿ ಎಲ್ಲೆಡೆ ಹರಡಿತ್ತು. 14ನೇ ಶತಮಾನದಲ್ಲಿ ದಕ್ಷಿಣ ಭಾರತದ ಮೇಲೆ ದಾಳಿ ನಡೆಸಿದ ಅಲಾವುದ್ದೀನ್ ಖಿಲ್ಜಿಯ ಸೇನಾ ದಂಡನಾಯಕ ಮಲಿಕ್ ಕಾಫರ್ ಆ ವಜ್ರವನ್ನು ವಶಪಡಿಸಿಕೊಂಡು ದೆಹಲಿಗೆ ಕೊಂಡೊಯ್ದಿದ್ದ.
1526ರಲ್ಲಿ ನಡೆದ ಮೊದಲ ಪಾಣಿಪತ್ ಯುದ್ಧದಲ್ಲಿ ಅದನ್ನು ಬಾಬರ್ ವಶಪಡಿಸಿಕೊಂಡ. ನಂತರ ಬಾಬರನ ಮರಿ ಮೊಮ್ಮಗ ಶಹಜಹಾನ್ ಆ ವಜ್ರವನ್ನು ತನ್ನ ಜಗತ್ಪ್ರಸಿದ್ಧ ಮಯೂರ ಸಿಂಹಾಸನಕ್ಕೆ (ತಕ್ತ್-ಎ-ತೌಸ್) ಅಳವಡಿಸಿಕೊಂಡಿದ್ದ. ನಂತರ ಬಹಳ ಕಾಲ ಅದು ಮೊಘಲರ ವಶದಲ್ಲಿತ್ತು.
1739ರಲ್ಲಿ ನಾದಿರ್ ಶಾ ದೆಹಲಿಯನ್ನು ಲೂಟಿ ಮಾಡಿ ಕೊಹಿನೂರ್ ವಜ್ರವನ್ನು ಪರ್ಷಿ ಯಾಕ್ಕೆ (ಈಗಿನ ಇರಾನ್) ತೆಗೆದುಕೊಂಡು ಹೋದ. ವಾಸ್ತವವಾಗಿ ಆ ವಜ್ರಕ್ಕೆ ಕೊಹಿನೂರ್ ಎಂದು ಹೆಸರಿಟ್ಟಿದ್ದೇ ನಾದಿರ್ ಶಾ. ಅವನ ಸಾವಿನ ನಂತರ ಅದು ಅಹ್ಮದ್ ಶಾ ಅಬ್ದಾಲಿಯ ಕೈಗೆ ಹೋಯಿತು. ಬಳಿಕ ಅವನ ವಂಶಸ್ಥರಿಗೆ ವರ್ಗಾವಣೆಯಾಯಿತು. ಹೀಗೆ ಶತಮಾನದ ಕಾಲ ಅದು ವಿದೇಶದಲ್ಲಿತ್ತು.
ಬಳಿಕ 1813ರಲ್ಲಿ ಮಹಾರಾಜ ರಣಜಿತ್ ಸಿಂಗ್ ಆ ವಜ್ರವನ್ನು ಭಾರತಕ್ಕೆ ಮರಳಿ ತರುವಲ್ಲಿ ಯಶಸ್ವಿಯಾಗಿದ್ದ. ಆದರೆ, ಬ್ರಿಟಿಷ್ ಸಾಮ್ರಾಜ್ಯದ ಕಣ್ಣು ಅದಾಗಲೇ ಆ ವಜ್ರದ ಮೇಲೆ ಬಿದ್ದಿತ್ತು. ಮಹಾರಾಜನ ಸಾವಿನ ನಂತರ ಅವನ ಮಗ ದುಲೀಪ್ ಸಿಂಗ್ ಸಿಂಹಾಸನ ವನ್ನೇರಿದ. ಆಗ ಅವನಿಗೆ ಕೇವಲ ಐದು ವರ್ಷ. 1849ರಲ್ಲಿ ಬ್ರಿಟಿಷರು ಪಂಜಾಬ್ ಅನ್ನು ವಶಪಡಿಸಿಕೊಂಡಾಗ ರಾಜಮನೆತನದ ಜತೆಗೆ ಲಿಖಿತ ಒಪ್ಪಂದ ಮಾಡಿಕೊಂಡು ಕೊಹಿ ನೂರ್ ವಜ್ರವನ್ನು ತಮ್ಮ ಸುಪರ್ದಿಗೆ ಪಡೆದುಕೊಂಡರು.
ಹಾಗೆ ಅದು ಲಂಡನ್‌ಗೆ ಪ್ರಯಾಣಿಸಿತು. ಇಂದಿಗೂ ಬ್ರಿಟನ್ ತಾನು ಕಾನೂನುಬದ್ಧ ಒಪ್ಪಂದ ಮಾಡಿಕೊಂಡೇ ವಜ್ರವನ್ನು ತೆಗೆದುಕೊಂಡಿರುವುದಾಗಿ ವಾದಿಸುತ್ತದೆ. ಆದರೆ, 10 ವರ್ಷದ ರಾಜನನ್ನು ಹೆದರಿಸಿ ಬೆದರಿಸಿ ಮಾಡಿಕೊಂಡ ಒಪ್ಪಂದ ಕಾನೂನುಬದ್ಧವೇ ಎಂಬುದು ಪ್ರಶ್ನೆ. ಅದು ಮೋಸವಲ್ಲವೇ? ಇದು ಕೇವಲ ಭಾರತದ ವಾದವಷ್ಟೇ ಅಲ್ಲ, ಜಗತ್ತು ಕೂಡ ಇಂತಹ ಕುಟಿಲ ನೀತಿಯನ್ನು ಮೋಸವೆಂದೇ ಭಾವಿಸುತ್ತದೆ.
ಟವರ್ ಆಫ್ ಲಂಡನ್‌ನಲ್ಲಿ ನಾನು ಕೊಹಿನೂರ್ ವಜ್ರವನ್ನು ನೋಡಿದ್ದೇನೆ. ಅದನ್ನು ನೋಡಿದರೆ ಮಹದಾನಂದವಾಗುತ್ತದೆ. ಭಾರತೀಯರು ಅದರ ಮೇಲೆ ಕಣ್ಣು ನೆಟ್ಟಾಗ ಅಯ್ಯೋ ಇದು ನಮ್ಮ ಸಂಪತ್ತಲ್ಲವೇ ಎಂದು ಮರುಕವಾಗುತ್ತದೆ. ಖಂಡಿತ ಅದು ನಮ್ಮ ಐತಿಹಾಸಿಕ ಸಂಪತ್ತು ಎಂದು ಮನಸ್ಸು ಹೇಳುತ್ತದೆ. ನಮ್ಮ ಮಣ್ಣಿನಲ್ಲಿ ಸಿಕ್ಕ, ನಮ್ಮವರ ಬಳಿಯಲ್ಲೇ ಇದ್ದ, ನಮ್ಮವರಿಂದಲೇ ಬ್ರಿಟಿಷರು ಕೊಂಡೊಯ್ದ ಸಂಪತ್ತು ನಮ್ಮದಲ್ಲದೆ ಇನ್ನಾರದು? ಆದರೆ, ಬಹುಕಾಲದಿಂದ ಒಂದು ಪ್ರಶ್ನೆ ಹಾಗೇ ಉಳಿದಿದೆ.
ಮುಂದೆ ಯಾವತ್ತಾದರೂ ಕೊಹಿನೂರ್ ವಜ್ರ ಭಾರತಕ್ಕೆ ಮರಳುತ್ತದೆಯೇ? ಇತಿಹಾಸ ವನ್ನು ಗಮನಿಸಿದರೆ ಒಂದು ಅಂಶವಂತೂ ಸ್ಪಷ್ಟವಾಗುತ್ತದೆ. ಕೊಹಿನೂರ್ ವಜ್ರ ಆಗಾಗ ತನ್ನ ಜಾಗವನ್ನು ಬದಲಿಸುತ್ತಲೇ ಬಂದಿದೆ! ಅದರ ಭವಿಷ್ಯ ಎಲ್ಲಿದೆ ಎಂಬುದು ಯಾರಿಗೆ ಗೊತ್ತು? ಕಾಲವನ್ನು ಯಾರೂ ಊಹಿಸಲು ಸಾಧ್ಯವಿಲ್ಲ. ಬಹುಶಃ ಒಂದು ದಿನ ಕೊಹಿನೂರ್ ತನ್ನ ತಾಯ್ನೆಲಕ್ಕೆ ಮರಳಬಹುದು. ನಂತ ಶಾಶ್ವತವಾಗಿ ಭಾರತಾಂಬೆಯ ಕಿರೀಟದಲ್ಲಿ ಹೊಳೆಯುವ ಅನರ್ಘ್ಯ ರತ್ನವಾಗಿ ರಾರಾಜಿಸುತ್ತಾ ಇರಬಹುದು.