ಸಂಪಾದಕರ ಸದ್ಯಶೋಧನೆ
ಬೋರ್ನಿಯೋ ದ್ವೀಪವು ಆಗ್ನೇಯ ಏಷ್ಯಾದ ಹೃದಯಭಾಗದಲ್ಲಿದ್ದು, ಜಗತ್ತಿನ ಮೂರನೇ ಅತಿ ದೊಡ್ಡ ದ್ವೀಪ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸರಿಸುಮಾರು 7.50 ಲಕ್ಷ ಚದರ ಕಿಮೀಗಳಷ್ಟು ವಿಸ್ತಾರವಾದ ಪ್ರದೇಶದಲ್ಲಿ ಹರಡಿರುವ ಈ ದ್ವೀಪವು ನಿಸರ್ಗದ ಅದ್ಭುತಗಳ ಆಗರವಾಗಿದೆ. ಜಗತ್ತಿನ ಹೆಚ್ಚಿನ ದ್ವೀಪಗಳು ಯಾವುದಾದರೂ ಒಂದು ದೇಶಕ್ಕೆ ಮಾತ್ರ ಸೇರಿರುವುದು ಸಾಮಾನ್ಯ. ಆದರೆ ಬೋರ್ನಿಯೋ ದ್ವೀಪವು ಇದಕ್ಕೆ ವಿಭಿನ್ನವಾಗಿದ್ದು, ಒಂದೇ ಭೂಪ್ರದೇಶವನ್ನು ಮೂರು ಸ್ವತಂತ್ರ ಮತ್ತು ಸಾರ್ವಭೌಮ ರಾಷ್ಟ್ರಗಳು ಹಂಚಿಕೊಂಡಿವೆ. ಆ ಮೂರು ದೇಶಗಳೆಂದರೆ ಇಂಡೋನೇಷ್ಯಾ, ಮಲೇಷ್ಯಾ ಮತ್ತು ಬ್ರೂನೈ.
ಪ್ರತಿಯೊಂದು ದೇಶವೂ ದ್ವೀಪದ ಭೂಭಾಗದಲ್ಲಿ ತನ್ನದೇ ಆದ ಸಾಂಸ್ಕೃತಿಕ, ಆರ್ಥಿಕ ಮತ್ತು ರಾಜಕೀಯ ಅಸ್ತಿತ್ವವನ್ನು ಹೊಂದಿದೆ. ಈ ಸುಂದರ ದ್ವೀಪದ ಸಿಂಹಪಾಲು ಇಂಡೋನೇಷ್ಯಾಗೆ ಸೇರಿದೆಯಾದರೆ, ಉಳಿದ ಭಾಗವನ್ನು ಮಲೇಷ್ಯಾ ಮತ್ತು ಬ್ರೂನೈ ದೇಶಗಳು ಹೊಂದಿವೆ. ಬೋರ್ನಿಯೋ ದ್ವೀಪದ ಸುಮಾರು ಶೇ.7.50 ರಷ್ಟು ಭಾಗವು ಇಂಡೋನೇಷ್ಯಾದ ನಿಯಂತ್ರಣ ದಲ್ಲಿದೆ. ಈ ದಕ್ಷಿಣ ಭಾಗದ ಪ್ರದೇಶವನ್ನು 'ಕಾಲಿಮಂತಾನ್' ಎಂದು ಕರೆಯಲಾಗುತ್ತದೆ.
ಕಾಲಿಮಂತಾನ್ ಪ್ರದೇಶವನ್ನು ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಮತ್ತು ಮಧ್ಯ ಕಾಲಿಮಂತಾನ್ ಎಂದು ಐದು ವಿಭಾಗಗಳಾಗಿ ಆಡಳಿತಾತ್ಮಕವಾಗಿ ವಿಂಗಡಿಸಲಾಗಿದೆ. ಸಬಾ ಮತ್ತು ಸರವಾಕ್ ದ್ವೀಪದ ಉತ್ತರ ಭಾಗದ ಬಹುಪಾಲು ಪ್ರದೇಶವು ಮಲೇಷ್ಯಾಗೆ ಸೇರಿದೆ. ಇದನ್ನು 'ಪೂರ್ವ ಮಲೇಷ್ಯಾ' ಎಂದೂ ಕರೆಯುತ್ತಾರೆ. ಇಲ್ಲಿ ಮಲೇಷ್ಯಾದ ಎರಡು ಪ್ರಮುಖ ರಾಜ್ಯಗಳಿವೆ - ಈಶಾನ್ಯ ದಲ್ಲಿರುವ 'ಸಬಾ' ಮತ್ತು ವಾಯುವ್ಯದಲ್ಲಿರುವ 'ಸರವಾಕ್'. ಇದರ ಜತೆಗೆ 'ಲಬುಆನ್' ಎಂಬ ಕೇಂದ್ರಾಡಳಿತ ಪ್ರದೇಶವೂ ಇಲ್ಲಿದೆ.
ಇದನ್ನೂ ಓದಿ: Vishweshwar Bhat Column: ಮೇರಿ ರೋಚ್ ಕುರಿತು
ದ್ವೀಪದ ಅತ್ಯಂತ ಸಣ್ಣ ಆದರೆ ಅಪಾರ ಸಂಪತ್ತು ಹೊಂದಿರುವ ದೇಶ ಎಂದರೆ ಬ್ರೂನೈ. ಈ ಸುಲ್ತಾನರ ಆಡಳಿತವಿರುವ ದೇಶವು ಬೋರ್ನಿಯೋದ ಉತ್ತರ ಕರಾವಳಿಯಲ್ಲಿದ್ದು, ಭೂಪ್ರದೇಶದ ಮೂರೂ ಕಡೆಗಳಿಂದ ಮಲೇಷ್ಯಾದ ಸರವಾಕ್ ರಾಜ್ಯದಿಂದ ಸುತ್ತುವರಿಯಲ್ಪಟ್ಟಿದೆ. ದ್ವೀಪದ ಕೇವಲ ಶೇ.ಒಂದರಷ್ಟು ಭಾಗ ಮಾತ್ರ ಬ್ರೂನೈಗೆ ಸೇರಿದೆ. ಮೂರು ದೇಶಗಳು ಒಂದೇ ದ್ವೀಪವನ್ನು ಹಂಚಿಕೊಂಡಿದ್ದರೂ, ಈ ಮೂರೂ ದೇಶಗಳ ಅಭಿವೃದ್ಧಿ, ಆರ್ಥಿಕತೆ ಮತ್ತು ಸಂಪನ್ಮೂಲಗಳ ಬಳಕೆಯ ಶೈಲಿ ಸಂಪೂರ್ಣವಾಗಿ ವಿಭಿನ್ನವಾಗಿದೆ.
ಬೋರ್ನಿಯೋ ದ್ವೀಪವು ಜಗತ್ತಿನ ಅತ್ಯಂತ ಹಳೆಯ ಮಳೆಕಾಡುಗಳಲ್ಲಿ ಒಂದಾಗಿದೆ. ಇಲ್ಲಿ ಸಾವಿರಾರು ಜಾತಿಯ ಅಪರೂಪದ ಸಸ್ಯಗಳು, ಮರಗಳು ಮತ್ತು ವನ್ಯಜೀವಿಗಳಿವೆ. ಉದಾಹರಣೆಗೆ, ಬೋರ್ನಿಯನ್ ಒರಾಂಗುಟಾನ್, ಕುಬ್ಜ ಆನೆಗಳು ಮತ್ತು ಪ್ರೊಬೊಸಿಸ್ ಕೋತಿಗಳು ಇಲ್ಲಿ ಮಾತ್ರ ಕಂಡುಬರುತ್ತವೆ. ಆದರೂ, ಮಾನವನ ಅತಿಯಾದ ಹಸ್ತಕ್ಷೇಪದಿಂದಾಗಿ ಈ ದ್ವೀಪವು ತೀವ್ರ ಪರಿಸರ ಹಾನಿಯನ್ನು ಎದುರಿಸುತ್ತಿದೆ.
ಇತ್ತೀಚಿನ ದಶಕಗಳಲ್ಲಿ ಇಷ್ಟಬಂದಂತೆ ಮರಗಳನ್ನು ಕಡಿಯುವುದು ಮತ್ತು ತಾಳೆ ಎಣ್ಣೆ ತೋಟ ಗಳನ್ನು ನಿರ್ಮಿಸುವುದರಿಂದ ಕಾಲಿಮಂತಾನ್, ಸಬಾ ಮತ್ತು ಸರವಾಕ್ ಪ್ರದೇಶಗಳಲ್ಲಿ ವ್ಯಾಪಕ ವಾಗಿ ಅರಣ್ಯ ನಾಶವಾಗಿದೆ. ಇಂಡೋನೇಷ್ಯಾ ತನ್ನ ಹಳೆಯ ರಾಜಧಾನಿ ಜಕಾರ್ತಾದಿಂದ ಬೋರ್ನಿಯೋದ ಕಾಲಿಮಂತಾನ್ ಪ್ರದೇಶಕ್ಕೆ ರಾಜಧಾನಿಯನ್ನು 'ನುಸಾಂಪಾರ' ಹೆಸರಿನಲ್ಲಿ ಸ್ಥಳಾಂತರಿಸುತ್ತಿದೆ. ಇದು ಆರ್ಥಿಕತೆಗೆ ಹೊಸ ಜೀವ ನೀಡಿದರೂ, ಸ್ಥಳೀಯ ಮಳೆಕಾಡುಗಳ ಮೇಲೆ ಮತ್ತಷ್ಟು ಒತ್ತಡ ಹೇರಬಹುದು ಎಂಬ ಆತಂಕ ಪರಿಸರವಾದಿಗಳಲ್ಲಿದೆ.
ಬ್ರೂನೈ ದೇಶವು ತನ್ನ ಆರ್ಥಿಕ ಅಗತ್ಯಗಳಿಗೆ ತೈಲ ಸಂಪನ್ಮೂಲವನ್ನು ನೆಚ್ಚಿಕೊಂಡಿರುವುದರಿಂದ, ತನ್ನ ಭೂಭಾಗದಲ್ಲಿರುವ ದಟ್ಟ ಕಾಡುಗಳನ್ನು ಹೆಚ್ಚು ಹಾನಿಗೊಳಿಸದೇ ಸಂರಕ್ಷಿಸಿಕೊಂಡು ಬಂದಿದೆ. ರಾಜಕೀಯವಾಗಿ ಮೂರು ದೇಶಗಳಾಗಿ ವಿಂಗಡನೆಯಾಗಿದ್ದರೂ, ದ್ವೀಪದ ಮೂಲ ನಿವಾಸಿಗಳಾದ 'ದಯಾಕ್' ಬುಡಕಟ್ಟು ಜನಾಂಗದವರು ಮೂರೂ ದೇಶಗಳ ಗಡಿಗಳನ್ನು ಮೀರಿ ತಮ್ಮ ಸಾಂಪ್ರದಾಯಿಕ ಜೀವನಶೈಲಿಯನ್ನು ಉಳಿಸಿಕೊಂಡಿದ್ದಾರೆ.
ಅವರ ಕಲೆ, ಸಂಸ್ಕೃತಿ, ಜೀವವೈವಿಧ್ಯದೊಂದಿಗಿನ ಒಡನಾಟ ಮತ್ತು ಸಾಂಪ್ರದಾಯಿಕ 'ಲಾಂಗ್ ಹೌಸ್' ಮನೆಗಳು ಇಡೀ ದ್ವೀಪಕ್ಕೆ ಒಂದು ವಿಶಿಷ್ಟ ಸಾಂಸ್ಕೃತಿಕ ಚೌಕಟ್ಟನ್ನು ಒದಗಿಸಿವೆ.
ಬೋರ್ನಿಯೋ ದ್ವೀಪವು ಭೌಗೋಳಿಕ ಗಡಿಗಳನ್ನು ಮೀರಿ ಪ್ರಕೃತಿ, ಮಾನವ ಸಂಸ್ಕೃತಿ ಮತ್ತು ವಿಭಿನ್ನ ರಾಜಕೀಯ ವ್ಯವಸ್ಥೆಗಳು ಹೇಗೆ ಒಂದೇ ನೆಲದಲ್ಲಿ ಸಹಬಾಳ್ವೆ ನಡೆಸಬಲ್ಲವು ಎಂಬುದಕ್ಕೆ ಅತ್ಯುತ್ತಮ ನಿದರ್ಶನವಾಗಿದೆ. ಪ್ರಕೃತಿಯನ್ನು ರಕ್ಷಿಸುತ್ತಾ ಆರ್ಥಿಕ ಅಭಿವೃದ್ಧಿ ಸಾಧಿಸುವುದು ಈ ಮೂರೂ ದೇಶಗಳ ಮುಂದೆ ಇರುವ ಪ್ರಮುಖ ಸವಾಲಾಗಿದೆ.