ತಾಳ-ಮೇಳ
ಗ.ನಾ.ಭಟ್ಟ
ಇನ್ನೊಂದು ಮುಖ್ಯ ಮಾತು. ಸಭಾಂಗಣದ ಒಳಗೆ ಪ್ರವೇಶಿಸುತ್ತಿದ್ದಂತೆಯೇ ಎಲ್ಲರೂ ಮೊಬೈಲ್ ಗಳನ್ನು ಬಂದ್ ಮಾಡಬೇಕು. ಪ್ರದರ್ಶನ ಶುರುವಾದ ಮೇಲೆ ಇಡೀ ಸಭಾಗೃಹ ಹೌಸ್ ಫುಲ್ ಆಗಿದ್ದರೂ ಒಬ್ಬರ ಉಸಿರು ಇನ್ನೊಬ್ಬರಿಗೆ ಕೇಳುವಷ್ಟು ಗಾಢಮೌನ ಆವರಿಸಿರುತ್ತದೆ. ಸಾಂದರ್ಭಿಕ ನಗುವೊಂದನ್ನು ಬಿಟ್ಟರೆ ಮಹಾನ್ ನೀರವತೆ.
ಹಾಗಾಗಿ ಕಡೆಯ ಬೆಂಚಿನ ಪ್ರೇಕ್ಷಕ ಕೂಡಾ ವೇದಿಕೆಯ ಮೇಲಿನ ಅತಿಚಿಕ್ಕ ಉದ್ಗಾರವನ್ನೂ
ಗ್ರಹಿಸಲು ಅನುಕೂಲವಾಗುತ್ತದೆ. ಯಾವುದಾದರೂ ಕಾರಣದಿಂದ ಪ್ರದರ್ಶನ ಶುರುವಾದ ಮೇಲೆ ತಡವಾಗಿ ಬರುವ ಪ್ರೇಕ್ಷಕ ಒಳಗೆ ನುಗ್ಗುವಂತಿಲ್ಲ.
ಸೆಕ್ಯುರಿಟಿಯವರು ಸೂಚಿಸುವವರೆಗೆ ಹೊರಗೆ ಬಾರ್‌ನಲ್ಲಿ ಕೂತು ಎದುರಿನ ಟಿವಿಯಲ್ಲಿ ಪ್ರದರ್ಶನ ನೋಡುತ್ತಿರಬೇಕು. ದೃಶ್ಯಗಳ ನಡುವಿನ ಬಿಡುವಿನಲ್ಲಿ ಅವನನ್ನು ಕರೆದೊಯ್ದು ಆಸನ ತೋರಿಸುತ್ತಾರೆ. ತನ್ನಿಂದ ಇನ್ನೊಬ್ಬ ಪ್ರೇಕ್ಷಕನ ರಸಗ್ರಹಣಕ್ಕೆ ಧಕ್ಕೆಯಾಗಬಾರದು ಎಂದು ಎಲ್ಲರೂ ಯೋಚಿಸುತ್ತಾರೆ.
ಯಾವ ಸಭಾಂಗಣದಲ್ಲೂ ಪ್ರದರ್ಶನ ನಡೆಯುವಾಗ ಕೆಟ್ಟ ಗಂಟಲಿನಲ್ಲಿ ಲೌಡ್ ಆಗಿ ಮೊಬೈಲ್‌ನಲ್ಲಿ ಮಾತನಾಡುವುದು, ಕೆಮ್ಮುವುದು, ಕ್ಯಾಕರಿಸುವುದು, ಶಿಳ್ಳೆ-ಕೇಕೆ ಹಾಕು ವುದು, ಪಾತ್ರಗಳ ಸಂಭಾಷಣೆಗೆ ಉತ್ತರಿಸುವುದು, ವಲ್ಗರ್ ಆದ ಜೋಕ್‌ಗಳನ್ನು ಶೋ ನಡುವೆಯೇ ಉದುರಿಸುವುದು- ಇಂಥ ಯಾವುದೇ ಬೇಜವಾಬ್ದಾರಿಯುತ ನಡವಳಿಕೆಯೂ ಅಲ್ಲಿ ಕಾಣಿಸುವುದಿಲ್ಲ ಮತ್ತು ಕೇಳಿಸುವುದಿಲ್ಲ".
ಇದನ್ನು ಬರೆದವರು ಖ್ಯಾತ ಸಾಹಿತಿ, ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ ಅವರು. ಇದು ಬರುವುದು ಅವರ ‘ದಕ್ಷಿಣ ಧ್ರುವ’ ಎಂಬ ಪ್ರವಾಸ ಕಥನದಲ್ಲಿ. (ಪುಟ-54). ಸಿಡ್ನಿಯ ಅಪೇರಾ ಹೌಸ್ ಕುರಿತಾಗಿ ಹೇಳಿದ ಮಾತಿದು. ಇಂಥ ಒಂದು ತಾತ್ತ್ವಿಕ ಹಿನ್ನೆಲೆಯ ರಂಗಮಂದಿರವನ್ನು ನಾವು ತಾಳಮದ್ದಳೆ ಕಲಾಪ್ರಕಾರಕ್ಕೆ ಅನ್ವಯಿಸಿ ನೋಡಲು ಸಾಧ್ಯವೆ? ಖಂಡಿತ ಸಾಧ್ಯವಿಲ್ಲ.
ತಾಳಮದ್ದಳೆ ನಡೆಯುವುದೇ ಯಾವುದೋ ಒಂದು ದೇವಸ್ಥಾನದ ಪ್ರಾಕಾರದಲ್ಲಿ ಅಥವಾ ಅದರೊಟ್ಟಿಗೇ ಇರುವ ಯಾವುದೋ ಕಲ್ಯಾಣ ಮಂಟಪದಲ್ಲಿ. ಇಲ್ಲವೇ, ಯಾರದೋ ಮನೆಯ ಜಗಲಿಯಲ್ಲಿ ಅಥವಾ ಮನೆಯ ಮೆತ್ತಿನ ಮೇಲೆ. ಇಲ್ಲವೇ ಸಾರ್ವಜನಿಕ ಗಣಪತಿ ಪೆಂಡಾಲಲ್ಲಿ ಅಥವಾ ಮದುವೆ, ಮುಂಜಿ, ಹುಟ್ಟುಹಬ್ಬದಂಥ ಕಾರ್ಯಕ್ರಮ ನಡೆಸುವು ದಕ್ಕೆ ಕಟ್ಟಿಸಿದ ಛತ್ರದಲ್ಲಿ.
ನಮ್ಮ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ, ಮುಖ್ಯವಾಗಿ ಸಹಕಾರಿ ಸಂಘಗಳ ಆಶ್ರಯದಲ್ಲಿ ರಂಗಮಂದಿರದಂಥ ಕೆಲವು ಸಭಾಭವನ ಇರುವುದೇನೋ ಸತ್ಯ. ಆದರೆ ಅವು ತಾಳಮದ್ದಳೆ ಯಂಥ ವಾಗ್ವೈಭವದ ಕಲಾಪ್ರಕಾರಕ್ಕೇ ಅಂತ ಕಟ್ಟಿಸಿದ ಭವನಗಳಲ್ಲ. ಅವು ಬೇರೆ ಬೇರೆ ಉದ್ದೇಶಗಳಿಗೆ ಕಟ್ಟಿಸಿದವು.
ಇನ್ನು ಕೆಲವು ಕಡೆಯಲ್ಲಂತೂ ದೇವಸ್ಥಾನದ ಆವರಣದಲ್ಲೋ, ಅದರ ಮುಂಭಾಗದ ದೊಡ್ಡ ಬಯಲಲ್ಲೋ ತಾಳಮದ್ದಳೆ ಪ್ರದರ್ಶನಗೊಳ್ಳುವುದಿದೆ. ಇಂಥ ಸ್ಥಳಗಳಲ್ಲಿ ನಡೆಯುವ ತಾಳಮದ್ದಳೆಯ ಗುಣಮಟ್ಟವನ್ನು ಕಾದುಕೊಳ್ಳುವುದು ಹೇಗೆ ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯುತ್ತದೆ.
ಎರಡನೆಯ ಅಪಸವ್ಯವೆಂದರೆ- ತಾಳಮದ್ದಳೆ ಪ್ರದರ್ಶನಗೊಳ್ಳುವಾಗ ಪ್ರದರ್ಶನದ ಮಧ್ಯದಲ್ಲಿ ಚಹಾ, ಅವಲಕ್ಕಿ ಕೊಡುವುದು ಅದರಿಂದ ಪ್ರೇಕ್ಷಕ ಇದ್ದಕ್ಕಿದ್ದಂತೆಯೇ ವಿಚಲಿತ ನಾಗುವುದು, ಚಹಾ ಕುಡಿಯುವಾಗ ಏಳುವುದು, ಕೂಡ್ರುವುದು, ಮಾತನಾಡುವುದು, ಎಲೆ ಅಡಕೆ ಉಗಿಯುವುದಕ್ಕೆ, ಕೈ ತೊಳೆಯುವುದಕ್ಕೆ ಅಂತ ಹೊರಗೆ ಹೋಗುವುದು- ಹೀಗೆ ತುಂಬಾ ಅಡಚಣೆಗಳು ಉಂಟಾಗುತ್ತವೆ.
ಇದರಿಂದ ಪ್ರೇಕ್ಷಕನಿಗೆ ರಸಗ್ರಹಣ ಆಗುವುದು ಹೇಗೆ? ಆತ ಏಕಾಗ್ರತೆಯಿಂದ ತಾಳಮದ್ದಳೆ ಯನ್ನು ನೋಡುವುದಾದರೂ ಹೇಗೆ? ಇಂಥ ಅವಾಂತರ ಕಾರಣಗಳಿಂದ ತಾಳಮದ್ದಳೆಯ ಗುಣಮಟ್ಟವನ್ನು ಕಾದುಕೊಳ್ಳುವುದಕ್ಕೆ ಸರ್ವಥಾ ಸಾಧ್ಯವಾಗುವುದಿಲ್ಲ.
ಇದರ ಜತೆಗೆ ಇನ್ನೂ ಒಂದಿಷ್ಟು ಕಾರಣಗಳಿವೆ. ತಾಳಮದ್ದಳೆ ನಿಗಿದಿತ ಸಮಯಕ್ಕೆ ಆರಂಭ ಗೊಳ್ಳದಿರುವುದು ಮತ್ತು 6-7 ತಾಸು ಪ್ರದರ್ಶನಗೊಳ್ಳುವುದು- ಇವೂ ತಾಳಮದ್ದಳೆಯ ಗುಣಮಟ್ಟ ಕುಸಿಯುವುದಕ್ಕೆ ಕಾರಣಗಳೆಂದು ಹೇಳಬಹುದು. ಅತ್ಯಂತ ಬೇಸರದಿಂದ, ವಿಷಾದದಿಂದ, ಅನಿವಾರ್ಯವಾಗಿ ಹೇಳಲೇಬೇಕಾದ ಮತ್ತೊಂದು ಸಂಗತಿಯೆಂದರೆ- ಬರುವ ಪ್ರೇಕ್ಷಕನಾದರೂ ಎಂಥವನು ಎಂಬುದು!
ಮಹಾಪೂರ್ವಗ್ರಹದಿಂದ ಪೀಡಿತನಾಗಿ, ಅಷ್ಟೇ ಅಲ್ಲ, ಸ್ವಲ್ಪಮಟ್ಟಿನ ದ್ವೇಷದಿಂದಲೂ ಆತ ಬರುತ್ತಾನೆ ಅಂದರೂ ತಪ್ಪಾಗಲಾರದು. ಎಂಥ ವೈಚಿತ್ರ್ಯ ಇದು! ತಾನು ಅಭಿಮಾನ ದಿಂದ ಕಾಣುವ ಕಲಾವಿದ ಅಥವಾ ಅರ್ಥಧಾರಿಯನ್ನು ಆರಾಧಿಸುವ ಆವೇಶದಲ್ಲಿ ಇತರ ಕಲಾವಿದರನ್ನು ಆತ ಏಕೆ ಹೀಗೆ ನಖಶಿಖಾಂತ ದ್ವೇಷಿಸುತ್ತಾನೆ ಎನ್ನುವುದು ಯಾರಿಗೂ ಅರ್ಥವಾಗದ ವಿಚಾರ.
ಒಬ್ಬೊಬ್ಬ ಪ್ರೇಕ್ಷಕ ಒಂದೊಂದು ದೃಷ್ಟಿಯಿಂದ ಬರುತ್ತಾನೆ ಅನ್ನುವುದು ಇನ್ನೊಂದು ಚೋದ್ಯದ ಸಂಗತಿಯಾಗಿದೆ. ಒಬ್ಬನು ತನ್ನ ಆರಾಧ್ಯ ಕಲಾವಿದನನ್ನು ಮಾತ್ರ ನೋಡುವು ದಕ್ಕೆ ಬರುತ್ತಾನೆ. ಇನ್ನೊಬ್ಬ ತನಗೆ ಆಗದೇ ಇದ್ದ ಕಲಾವಿದನ ತೇಜೋವಧೆ ನೋಡುವುದಕ್ಕೆ ಬರುತ್ತಾನೆ (“ತಾಳಮದ್ದಳೆಗೂ ತೇಜೋವಧೆಗೂ ಎಲ್ಲಿಲ್ಲದ ನಂಟು.
ವಿನೋದ, ವಿದ್ವೇಷ, ಅಸೂಯೆ, ಆಕಸ್ಮಿಕ ಹೀಗೆ ಯಾವುದೇ ಒಂದು ಕಾರಣದಿಂದ ಈ ಘನಕಾರ್ಯ ಸಾಮಾನ್ಯವಾಗಿ ನಡೆದೇ ನಡೆಯುತ್ತದೆ"- ‘ಅಕ್ಷರ ಯಕ್ಷಗಾನ’. ಪುಟ- 60. ಕೊರ್ಗಿ ವೇಂಕಟೇಶ ಉಪಾಧ್ಯಾಯ). ಮತ್ತೊಬ್ಬ ತಾಳಮದ್ದಳೆಯಲ್ಲಿ ಬೀದಿಮಟ್ಟದ ಜಗಳವನ್ನು ನಿರೀಕ್ಷಿಸಿ ಬರುತ್ತಾನೆ.
ಮತ್ತೊಬ್ಬ ಶಬ್ದಗಳ ವ್ಯುತ್ಪತ್ತಿಯನ್ನೂ, ಕಸರತ್ತನ್ನೂ ಕೇಳಲು ಬರುತ್ತಾನೆ. ಇನ್ನೊಬ್ಬ ತಾಳಮದ್ದಳೆಯಲ್ಲಿ ಸಮಕಾಲೀನ ಸಂಗತಿಗಳನ್ನೂ, ದೈನಂದಿನ ವಿಚಾರಗಳನ್ನೂ ಕೇಳಿ ಆನಂದಿಸಲು ಬರುತ್ತಾನೆ. ಇನ್ನೊಬ್ಬ ತಾಳಮದ್ದಳೆಯಲ್ಲಿ ಕಥೆಯನ್ನು ಕೇಳಲು ಬರುತ್ತಾನೆ. ಹೀಗೆ ಒಬ್ಬೊಬ್ಬನು ಒಂದೊಂದು ಧೋರಣೆಯಿಂದ, ಸ್ಥಾಪಿತ ಸಿದ್ಧಾಂತದಿಂದ ಬರುತ್ತಾನೆ.
ಹೀಗೆ ಪ್ರೇಕ್ಷಕನ ಮನೋಧರ್ಮಕ್ಕೆ ತಕ್ಕಂತೆ ಅರ್ಥ ಹೇಳಬೇಕು ಎಂದು ಅರ್ಥಧಾರಿಯೂ ತೀರ್ಮಾನಿಸಿರುವುದರಿಂದ ಮತ್ತು ತಾಳಮದ್ದಳೆ ಒಂದು ಸುಂದರ ಕಲಾಕೃತಿ, ಅದು ವಾಚಿಕದ ಸರ್ವತೋಮುಖ ವಿಲಾಸವನ್ನು, ವಿಕಾಸವನ್ನು ಅನಾವರಣಗೊಳಿಸುವ ಅಪೂರ್ವ ಮಾಧ್ಯಮ, ರಾಮಾಯಣ, ಭಾರತದಂಥ ಮಹಾಕಾವ್ಯಗಳ ಕಥೆಯನ್ನು ಜೀವ ಸ್ಪರ್ಶಿಯಾದ ರಸನಾಳಿಕೆಯಲ್ಲಿ ಹರಿಯಿಸುವ ಹಾಗೂ ರಸವೇ ಪ್ರಧಾನವಾಗಿರುವ ಕಲೆ ಎಂಬುದನ್ನು ಅರ್ಥಧಾರಿಗಳೂ ಮರೆತಿರುವುದರಿಂದ ಈ ಎಲ್ಲ ಅಪಸವ್ಯಗಳು ಇಲ್ಲಿ ನೆಲೆಮಾಡಿವೆ.
ಇಷ್ಟನ್ನೂ ಹೇಳುವುದಕ್ಕೆ ಬಲವಾದ ಕಾರಣವಿದೆ. ಪ್ರೇಕ್ಷಕ ಎಂದರೆ ತನ್ನ ತಲೆಯಲ್ಲಿದ್ದು ದನ್ನೇ ನೋಡುವುದಲ್ಲ; ರಂಗಮಂಚದಲ್ಲಿರುವುದನ್ನು ಆತ ನೋಡಬೇಕಾಗುತ್ತದೆ ಅಥವಾ ಗ್ರಹಿಸಬೇಕಾಗುತ್ತದೆ. ಅವನೊಬ್ಬ ಪೂರ್ವಗ್ರಹದ ಬಂದಿಯಲ್ಲ; ದ್ವೇಷದ ಗೋಡೆ ಕಟ್ಟಿ ಕೊಂಡವನಲ್ಲ; ತಾನೇ ನಿರ್ಮಿಸಿಕೊಂಡ ಎತ್ತರದ ಗೋಡೆಯೊಳಗೆ ಅಥವಾ ಬೇಲಿಯೊಳಗೆ ಗಟ್ಟಿಯಾಗಿ ಕೂತವನಲ್ಲ.
ಹೊಸ ಅರಿವನ್ನು ತನ್ನ ತಲೆಯೊಳಗೆ ತುಂಬಿಕೊಳ್ಳಲಾಗದ ದುರ್ಬಲನಲ್ಲ. ಅವನಿಗೂ ಬಹುದೊಡ್ಡ ಹೊಣೆಗಾರಿಕೆಯಿದೆ. ಅವನೆಂದರೆ ಸಹೃದಯ. ಕವಿ-ಸಹೃದಯರಿಬ್ಬರೂ (ಕಲಾವಿದ-ಪ್ರೇಕ್ಷಕ) ಒಂದೇ ಸಾರಸ್ವತ ತತ್ತ್ವದ ಅಂಗಗಳೆಂದೂ, ಇಬ್ಬರೂ ಒಂದು ಗೂಡಿಯೇ ಕಾವ್ಯವಾಗುವುದೆಂದೂ (ಕಲೆಯಾಗುವುದೆಂದೂ) ಅರ್ಥ ಬರುವಂತೆ ಅಭಿವನ ಗುಪ್ತ- ‘ಸರಸ್ವತ್ಯಾಸ್ತತ್ತ್ವಂ ಕಸಹೃದಯಾಖ್ಯಂ ಜಯತೇ’ ಎಂದು ಪ್ರಶಂಸಿಸಿದ.
ಕವಿಹೃದಯವೂ ಮತ್ತು ರಸಿಕನ ಹೃದಯವೂ ಸಮಶ್ರುತಿಯುಳ್ಳ ಎರಡು ವೀಣೆಗಳಂತೆ. ಒಂದನ್ನು ನುಡಿಸಿದಾಗ ಇನ್ನೊಂದು ಅದಕ್ಕೆ ಸಮತಾನವಾಗಿ ಝೇಂಕರಿಸುತ್ತದೆ. ಇಂಥ ಸಹೃದಯತೆಯನ್ನು ಲಾಕ್ಷಣಿಕರು ಪ್ರಶಂಸಿಸುತ್ತಾರೆ; ಕವಿಗಳು (ಕಲಾದರು) ಅಪೇಕ್ಷಿಸುತ್ತಾರೆ.
ವಿಜ್ಜಿಕೆಯೆಂಬ ಕವಯಿತ್ರಿ ಸಹೃದಯನನ್ನು ಕುರಿತು (ಸುಸಂಸ್ಕೃತ, ಸುಶಿಕ್ಷಿತ ಪ್ರೇಕ್ಷಕನನ್ನು ಕುರಿತು) ಒಂದು ಮಾತನ್ನು ಹೇಳುತ್ತಾಳೆ- ‘ಕವೇರಭಿಪ್ರಾಯಮಶಬ್ದಗೋಚರಂ ಸುರಂತ ಮಾರ್ದ್ರೇಷು ಪದೇಷು ಕೇವಲಮ್ | ವದದ್ಭಿರಂಗೈಃ ಕೃತರೋಮವಿಕ್ರಯೈಃ ಜನಸ್ಯ ತೂಷ್ಣೀಂ ಭವತೋಯಮಂಜಲಿಃ ||’ “ನುಡಿಗೆ ನಿಲುಕದ ಕವಿಯ ಬಗೆಯ ಭಾವಗಳು ಆರ್ದ್ರಪದಗಳಲ್ಲಿ ಮಿನುಗುತ್ತಿರುತ್ತವೆ.
ಎಲ್ಲೋ ಒಬ್ಬಿಬ್ಬರು ಅಪ್ರಯತ್ನವಾಗಿ ಮೈಯಲ್ಲಿ ಹುರಿಗೊಂಡ ಪುಳಕದಿಂದ, ಅರಳಿದ ಕಣ್ಣುಗಳಿಂದ ಅದನ್ನು ಮೌನವಾಗಿ ವ್ಯಕ್ತಪಡಿಸುತ್ತಾರೆ. ಕಾವ್ಯದ ತಿರುಳನ್ನು ಸರಿಯಾಗಿ ಸವಿಯುವುದಕ್ಕೆ ವಾಚಕನಿಗೂ ಶಕ್ತಿಯಿರಬೇಕು. ಇದನ್ನೇ ಕಲೆಗೂ ಅನ್ವಯಿಸಬೇಕು; ಅವನಿಗೆ ಸಿದ್ಧತೆ ಬೇಕು.
ಮಾತಿನ ಹೊದಿಕೆಯನ್ನು ಭೇದಿಸಿ ಅದರೊಳಗೆ ಮಿಡಿಯುತ್ತಿರುವ ಕವಿಯ (ಕಲಾದನ) ಸೂಕ್ಷ್ಮಭಾವವನ್ನು ತನ್ನದಾಗಿ ಮಾಡಿಕೊಳ್ಳಬೇಕಾದರೆ ಸಹೃದಯನೂ ತನ್ನ ದೃಷ್ಟಿಯನ್ನು ಚುರುಕುಮಾಡಿಕೊಳ್ಳಬೇಕು; ಅಂತಃಕರಣವನ್ನು ಪಳಗಿಸಿಕೊಳ್ಳಬೇಕು. ತನ್ನ ಪ್ರತಿಭೆಯ ಬಲದಿಂದ ಕವಿ ಅಥವಾ ಕಲಾವಿದ ಒಂದು ಹೊಸ ಪ್ರಪಂಚವನ್ನು ಮಾತುಗಳಲ್ಲಿ ಕಟ್ಟಿ ಕೊಡುತ್ತಾನೆ.
ಕಾವ್ಯದ ಓದುಗನಿಗೆ ಅಥವಾ ಕಲೆಯ ನೋಟಕನಿಗೆ ದೊರೆಯುವುದು ಅದು ಮಾತ್ರ. ಅದನ್ನು ಅವನು ತನ್ನ ಒಳಗಣ್ಣಿನಿಂದ ನೋಡಿ ಜೀವಗೊಂಡ ವ್ಯಕ್ತಿಗಳನ್ನಾಗಿ ಅವರ ಚರ್ಯೆಗಳನ್ನಾಗಿ ಮಾರ್ಪಡಿಸಿಕೊಳ್ಳದಿದ್ದರೆ ಅದು ವ್ಯರ್ಥ".
ಸಂಸ್ಕೃತ ನಾಟಕಗಳಲ್ಲಂತೂ ಸೂತ್ರಧಾರ ‘ಆರ್ಯಮಿಶ್ರಾನ್ ವಿಜ್ಞಾಪಯಾಮಿ’ ಎಂದು ಪ್ರೇಕ್ಷಕರಿಗೆ ಕೈಮುಗಿದೇ ನಾಟಕವನ್ನು ಆರಂಭಿಸುತ್ತಾನೆ. ಅನೇಕರಿಗೆ ‘ಆರ್ಯಮಿಶ್ರ’ ಎಂಬ ಪರಿಕಲ್ಪನೆಯ ಅರ್ಥ ಗೊತ್ತಿಲ್ಲ. ಆರ್ಯರೆಂದರೆ ಪೂಜ್ಯರೆಂದೂ, ಮಿಶ್ರರೆಂದರೆ ಜ್ಞಾನಿ ಗಳೆಂದೂ ಅರ್ಥ.
‘ಈಕ್ಷ್-ದರ್ಶನೇ’ ಎಂಬ ಧಾತುವಿನಿಂದ ಪ್ರಕೃಷ್ಟಾರ್ಥದ ‘ಪ್ರ’ ಉಪಸರ್ಗದೊಡನೆ ಮೂಡಿ ಬಂದ ‘ಪ್ರೇಕ್ಷಕ’ ಶಬ್ದವು ‘ಚೆನ್ನಾಗಿ ನೋಡಬೇಕು’ ಎಂಬುದನ್ನು ಸೂಚಿಸುತ್ತದೆ. ಕೇವಲ ಹೊಗಳುವ ಇಲ್ಲವೇ ತೆಗಳುವ ಮಂದಿ ಪ್ರೇಕ್ಷಕರಾಗಲಾರರು. ತಾಳಮದ್ದಳೆಗೆ ಇಂಥ ಪ್ರೇಕ್ಷಕರೇ ಅಮರಿಕೊಂಡಿರುವುದು ತಾಳಮದ್ದಳೆಯ ಬಹುದೊಡ್ಡ ದೌರ್ಭಾಗ್ಯವಾಗಿದೆ.
ಒಂದು ಸಮುದಾಯದ ವ್ಯಕ್ತಿತ್ವವನ್ನು ಪಡೆದುಕೊಂಡ ಪ್ರೇಕ್ಷಕ ತನ್ನ ವೈಯಕ್ತಿಕ ಅಭಿರುಚಿ ಯನ್ನು ಮೀರಬಹುದು, ಇಲ್ಲವೇ ಮರೆಯಬಹುದು ಅಥವಾ ಅವನಿಗೆ ಪ್ರೇಕ್ಷಕ ಸ್ಥಾನದ ಮಹತ್ವವೇ ಗೊತ್ತಿರಲಾರದು. ಈ ಕ್ಷೇತ್ರದಲ್ಲಿ ಇಂಥವರ ಸಂಖ್ಯೆಯೇ ಹೆಚ್ಚಿದೆ ಎಂದು ಅತ್ಯಂತ ವಿಷಾದದಿಂದ ಹೇಳಬೇಕಾಗಿದೆ.
ಪ್ರೇಕ್ಷಕವರ್ಗವು ಯಾವುದೇ ಒಂದು ರಂಗಭೂಮಿಯ ಆಸ್ತಿ. ಅವರ ಮಹತ್ವ ವರ್ಣಿಸಲ ಸದಳ. ಅವನನ್ನು ಪ್ರಾಶ್ನಿಕ, ಸಾಮಾಜಿಕ, ಪರಿಷತ್, ಆರ್ಯಮಿಶ್ರ, ಸಹೃದಯ ಮುಂತಾದ ಪರ್ಯಾಯ ಪದಗಳಿಂದ ಕರೆಯುತ್ತಾರೆ. ಇಂಥ ಪ್ರೇಕ್ಷಕ ಹೇಗಿರಬೇಕು ಅಂತ ಭರತಮುನಿ ಒಂದೆಡೆ ಹೇಳುತ್ತಾನೆ: ಅವನ ಇಂದ್ರಿಯ ಜಾಗೃತವಾಗಿರಬೇಕು, ತೀಕ್ಷ್ಣ ಗ್ರಹಣಶಕ್ತಿ ಇರಬೇಕು, ಊಹೆ-ಅಪೋಹೆಗಳಲ್ಲಿ (ಅಪೋಹ ಅಂದರೆ ನ್ಯೂನತೆ) ನೈಪುಣ್ಯರಬೇಕು, ಕಲೆಯ ಮೇಲೆ ಆಸಕ್ತಿ ಇರಬೇಕು, ದೋಷರಹಿತನಾಗಿರಬೇಕು; ಸುಖ-ದುಃಖ-ದೈನ್ಯಗಳಿಗೆ ಸ್ಪಂದಿಸುವ ಗುಣರಬೇಕು. “ನವೈವೇತೇಗುಣಾಃ ಸರ್ವೇ ಏಕಸ್ಮಿನ್ ಪ್ರೇಕ್ಷಕೇ ಸ್ಮತಾಃ- ಈ ಒಂಬತ್ತು ಗುಣ ಗಳು ಒಬ್ಬನಲ್ಲೇ ಇರಬೇಕೆಂದು ಭರತಮುನಿ ಹೇಳುತ್ತಾನೆ. ಪ್ರೇಕ್ಷಕನಲ್ಲಿ ಇವು ಇಲ್ಲದಿದ್ದರೆ ಇವನ್ನು ಅವನು ಸಂಪಾದಿಸಬೇಕಾಗುತ್ತದೆ.
ಇವೆಲ್ಲವೂ ಸಹೃದಯಿ ಪ್ರೇಕ್ಷಕರ, ಶ್ರೋತೃಗಳ ಹೊಣೆಗಾರಿಕೆಯನ್ನು ಸಾರುತ್ತವೆ. ಇವು ಯಾವುವೂ ಇಲ್ಲದೆ ಅಲ್ಲಿ ಬಂದು ಕೂತುಕೊಳ್ಳುವುದೆಂದರೆ ಕಲಾಪ್ರಪಂಚಕ್ಕೇ ಅವಮಾನ ಮಾಡಿದಂತೆ. ನಿಗದಿತ ಸಮಯಕ್ಕೆ ಬರುವುದು, ಮುಗಿದ ಮೇಲೆ ಹೊರಡುವುದು ಸಭ್ಯನ ಶಿಷ್ಟ ನಡವಳಿಕೆಯೆನಿಸುತ್ತದೆ.
ಒಂದು ನಾಟಕಕ್ಕೋ, ಸಿನಿಮಾಕ್ಕೋ ಹೋದರೆ ಪ್ರೇಕ್ಷಕರು ಬಂದೊಡನೆ ನಿಗದಿತ ಸಮಯ ಕ್ಕೆ ಆ ರಂಗಮಂದಿರದ ಬಾಗಿಲನ್ನು ಕ್ಲೋಸ್ ಮಾಡುತ್ತಾರೆ. ಯಾಕೆ? “ಏಕಾಗ್ರತೆಯುಂಟಾಗ ಬೇಕು; ಅವನಿಗೆ ರಸಗ್ರಹಣ ಸುಲಭವಾಗಬೇಕು; ಸೌಂದರ್ಯಾ ಸ್ವಾದನೆ ಅವನನ್ನು ಒಂದು ಎತ್ತರಕ್ಕೆ ಒಯ್ಯಬೇಕು" ಎಂಬೆಲ್ಲ ತತ್ತ್ವಗಳಿರುತ್ತವೆ ಅವಕ್ಕೆ. ತಾಳಮದ್ದಳೆಗೂ ಅಂಥ ಸುಯೋಗ ಪ್ರಾಪ್ತವಾಗಲಿ ಎಂದು ಹಾರೈಸುತ್ತೇನೆ.
(ಲೇಖಕರು ಹಿರಿಯ ಸಾಹಿತಿ)