ತುಂಟರಗಾಳಿ
ಸಿನಿಗನ್ನಡ
ಸ್ಯಾಂಡಲ್‌ವುಡ್‌ನಲ್ಲಿ ಆಗಾಗ ಕಳೆದು ಹೋದ ದಿನಗಳನ್ನು ಮೆಲುಕು ಹಾಕೋ ಕೆಲಸ ಆಗುತ್ತಾ ಇರುತ್ತದೆ. ಅಂದ್ರೆ ಸ್ಟಾರ್‌ಗಳ ಹಳೆಯ ಚಿತ್ರಗಳನ್ನು ಮರು ಬಿಡುಗಡೆ ಮಾಡೋ ಕೆಲಸ ಆಗ್ತಾ ಇರುತ್ತದೆ. ಇದರಲ್ಲಿ ಶಿವರಾಜ್ ಕುಮಾರ್ ಅಭಿನಯದ ಓಂ ಚಿತ್ರಕ್ಕೆ ಅಗ್ರಸ್ಥಾನ. ಅದು ಆಗಾಗ ಮರುಬಿಡುಗಡೆ ಆಗೋದು ಕಾಮನ್ ಅನ್ನೋ ಥರ ಆಗಿದೆ. ಇನ್ನು ಅಪ್ಪು ಸಿನಿಮಾಗಳು ಕೂಡಾ ಅವರ ನೆನಪಿನಲ್ಲಿ ಮತ್ತೆ ಮತ್ತೆ ಬಿಡುಗಡೆ ಆಗುತ್ತವೆ. ಆದರೆ, ಅವನ್ನು ನೋಡಿ ಕೊಂಡು ಇನ್ನೂ ಕೆಲವು ಸ್ಟಾರ್‌ಗಳು ತಮ್ಮ ಚಿತ್ರಗಳನ್ನೂ ಮರು ಬಿಡುಗಡೆ ಮಾಡಿದ್ದು ಉಂಟು.
ಆದರೆ, ಹೇಳಿಕೊಳ್ಳುವಂಥ ಸದ್ದು ಮಾಡಿದ ಚಿತ್ರಗಳು ಕಮ್ಮಿಯೇ. ಕೆಲವು ಚಿತ್ರಗಳಂತೂ ಮತ್ತೆ ಬಿಡುಗಡೆ ಆಗಿದ್ದು ಯಾರಿಗೂ ಗೊತ್ತೇ ಆಗದೆ ಟೆಂಟು ಕಿತ್ತ ಉದಾಹರಣೆಗಳೂ ಇವೆ. ಈ ಮರು ಬಿಡುಗಡೆಯ ಟ್ರೆಂಡ್‌ಗೆ ದರ್ಶನ್ ಸಿನಿಮಾಗಲೂ ಹೊರ ತಲ್ಲ. ಈಗ ದರ್ಶನ್ ಜೈಲಿನಲ್ಲಿ ಇದ್ದಾರೆ. ಅವರಂತೂ ಬಿಡುಗಡೆ ಆಗ್ತಾ ಇಲ್ಲ.
ಹಾಗಾಗಿ ಅವರ ಚಿತ್ರವನ್ನಾದರೂ ಮರುಬಿಡುಗಡೆ ಮಾಡೋಣ ಅಂತ ಅಭಿಮಾನಿಗಳು ಅವರ ಕಲಾಸಿಪಾಳ್ಯ ಚಿತ್ರವನ್ನು ಬಿಡುಗಡೆ ಮಾಡಿದ್ದರು. ದರ್ಶನ್ ಪರಪ್ಪನ ಅಗ್ರಹಾರದಲ್ಲಿ ಇರುವಾಗ ಇಲ್ಲಿ ದರ್ಶನ್ ಅಭಿಮಾನಿಗಳು ಕಲಾಸಿಪಾಳ್ಯದಲ್ಲಿ ಬ್ಯುಸಿ ಆಗಿದ್ದರು. ಮೊನ್ನೆ ಶುಕ್ರವಾರ ಈ ಸಿನಿಮಾ ಬಿಡುಗಡೆ ಆಗಿ ಮೊದಲ ಆಟದಲ್ಲಿ ದರ್ಶನ್ ಅಭಿಮಾನಿಗಳು ಎಂದಿನಂತೆ ತಮ್ಮ ಪೊರ್ಕಿ ಶೈಲಿಯಲ್ಲಿ ಡೈಲಾಗ್ ಹೊಡೆದುಕೊಂಡು ಸಿನಿಮಾವನ್ನು ಆನಂದಿಸಿದ್ದಾರೆ. ಆದರೆ, ದರ್ಶನ್ ಜೈಲಿನಲ್ಲಿದ್ದಾಗ ಬಿಡುಗಡೆ ಆದ ಅವರ ಹೊಸ ಚಿತ್ರ ಡೆವಿ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಲಿಲ್ಲ. ಇನ್ನು ಹಳೆಯ ಕಲಾಸಿಪಾಳ್ಯ ಒಂದು ದಿನದ ನಾಲ್ಕು ಆಟಗಳಿಗೆ ಸೀಮಿತವಾದರೆ ಅಚ್ಚರಿ ಏನಿಲ್ಲ.
ಇದನ್ನೂ ಓದಿ: Hari Paraak Column: ಪ್ರೆಗ್ನೆನ್ಸಿ ತಡೆಯಲು ತಿನ್ನೋದು: ಜ್ಞಾಪಾನ ಮಾತ್ರೆ
ಲೂಸ್ ಟಾಕ್ -ಕಾಮನ್ ಮ್ಯಾನ್
ಮಿಸ್ಟರ್ ಕಾಮನ್ ಮ್ಯಾನ್, ನಿಮ್ದೊಂದು ಸಂದರ್ಶನ ಬೇಕಿತ್ತಲ್ಲಾ?
- ಕಾಮಾನ್ ಮ್ಯಾನ್, ನನ್ ಸಂದರ್ಶನನಾ? ಯಾಕೆ ಏನ್ಸಮಾಚಾರ?
ಏನಿಲ್ಲ ಸಾರ್, ಈ ವಾರ ಯಾರನ್ನ ಸಂದರ್ಶನ ಮಾಡ್ಬೇಕು ಅಂತ ಗೊತ್ತಾಗಿಲ್ಲ. ಅದಕ್ಕೇ...
- ನಾನ್ ನಿಮ್ಜೊತೆ ಮಾತಾಡಲ್ಲರೀ, ನಿಮ್ಮ ಇಂಟರ್‌ವ್ಯೂ ಎಲ್ಲ ಸುದೀಪ್ ಸ್ಟೈಲು ನಿಮ್ಮದೇ ಪ್ರಶ್ನೆ, ನಿಮ್ಮದೇ ಉತ್ರ. ಆದ್ದರಿ, ನಿಮ್ ಇಂಟರ್‌ವ್ಯೂ ನೀವೇ ಮಾಡ್ಕೋಬೋದಲ್ಲ?
ಅಯ್ಯೋ ಸುಮ್ನಿರಿ, ನನ್ ಜತೆ ನಾನೇ ಮಾತಾಡ್ಕೊಂಡ್ರೆ ಒಬ್ಬೊಬ್ನೇ ಮಾತಾಡ್ಕೊತಿದಾನೆ ಅಂತ ಜನ ಹುಚ್ಚ ಅಂಡ್ಕೊಂಡ್ಬಿಡ್ತಾರೆ.
- ಹುಚ್ಚ ಅಂದ್ರಾ? ಅದನ್ನೇ ನಾನೂ ಹೇಳಿದ್ದು ಸುದೀಪ್ ಸ್ಟೈಲು ಅಂತ.
ರೀ, ಏನ್ ಸುದೀಪ್ ಒಬ್ರೇ ಹುಚ್ರಾ? ಹಿಂಗೆಲ್ಲಾ ಅಂದ್ರೆ ರೋಡಲ್ ಹೋಗೋ ಹುಚ್ರೆಲ್ಲಾ ಕಲ್ ತಗೊಂಡ್ ಹೊಡೀತಾರೆ ಅಷ್ಟೇ..
- ಅದೂ ಸರಿ, ಹೋಗ್ಲಿ,, ಏನ್ ಇತ್ತೀಚೆಗೆ ನಿಮ್ಮ ಮಿನಿ ಕಟೌಟ್ ನಿಲ್ಲಿಸಿಕೊಲ್ಳೋದನ್ನ ನಿಲ್ಲಿಸಿ ಸಣ್ಣದಾಗಿ ಮುಖ ಕಾಣೋ ಹಾಗೆ ಹಾಕ್ಕೊಂಡಿದ್ದೀರಲ್ಲ? ಅದ್ರಲ್ಲೂ ಸುದೀಪ್‌ನ ಕಾಪಿ ಮಾಡ್ತಾ ಇದ್ರಿ?
ಏನಿಲ್ಲ ಜನ ಕಟೌಟ್ ಲೆಂತ್‌ನ ಮೊಳದಲ್ಲಿ ಲೆಕ್ಕ ಹಾಕಿದ್ದು ಸಾಕು, ಇನ್ಮೇಲಾದ್ರೂ ನನ್ನ ಮುಖ ನೋಡಿ ಮೊಳ ಹಾಕ್ಲಿ ಅಂತ . ಅದಿರ್ಲಿ ಸ್ವಾಮಿ, ಅವಾಗಿಂದ ನೋಡ್ತಾ ಇದೀನಿ, ನಾನ್ ನಿಮ್ಮನ್ನ ಇಂಟರ್‌ವ್ಯೂ ಮಾಡ್ತಾ ಇದೀನಾ? ಅಥವಾ ನೀವ್ ನನ್ನ ಇಂಟರ್ ವ್ಯೂ ಮಾಡ್ತಾ ಇದೀರಾ ಅಂತ ಡೌಟು ಬರ್ತಿದೆ
- ಏನ್ ಮಾಡೋದು, ನಿಮ್‌ಗೇ ಗೊತ್ತಲ್ಲ, ನಮ್ಮಂಥ ಕಾಮನ್ ಮ್ಯಾನ್‌ಗಳ ಹತ್ರ ಬರೀ ಪ್ರಶ್ನೆಗಳಿರುತ್ತೆ, ಉತ್ತರಗಳು ಕಡಿಮೆ. ಹಂಗಾಗಿ ಸ್ವಲ್ಪ ‘ಲಕ್ಷ್ಮಣ’ ರೇಖೆ ದಾಟಿಬಿಟ್ಟೆ ಅನ್ನಿಸಿದ್ರೆ ಸಾರಿ..
(ಕಾಲ್ಪನಿಕ ಸಂದರ್ಶನ)
ನೆಟ್ ಪಿಕ್ಸ್
ಖೇಮು ವಿದೇಶದಲ್ಲಿ ಕೆಲಸ ಹುಡುಕಿಕೊಂಡು ಹೋದ. ಅಲ್ಲಿ ಅವನಿಗೆ ಒಂದು ಹೋಟೆಲ್‌ನಲ್ಲಿ ಕೆಲಸ ಮಾಡುವ ಅವಕಾಶ ಸಿಕ್ತು. ಸರಿ, ಪಾಲಿಗೆ ಬಂದಿದ್ದು ಪಂಚಾಮೃತ ಅಂತಲೋ ಮಾಡಿದ್ದು ಣ್ಣೋ ಮಾರಾಯ ಅಂತಲೋ ಅಂದು ಕೊಂಡು ಕೆಲಸಕ್ಕೆ ಜಾಯಿನ್ ಆದ. ಮೊದಲ ದಿನ ಆ ದೊಡ್ಡ ಹೋಟೆಲ್‌ನಲ್ಲಿ ಕೆಲಸ ಮಾಡುವ ಎಲ್ಲರ ಪರಿಚಯ ಮಾಡಿಕೊಂಡು ಬಂದ. ನಂತರ ಅಲ್ಲಿ ಕೆಲಸ ಮಾಡಲು ಇರುವ ವ್ಯವಸ್ಥೆ ಮತ್ತು ಉಪಕರಣಗಳನ್ನು ಚೆಕ್ ಮಾಡಿದ. ಅಲ್ಲಿನ ವಿಷಯ ಗಳನ್ನು ಗೆಳೆಯ ಸೋಮುಗೆ ಖೇಮು ಪ್ರತಿದಿನ ಹೇಳುತ್ತಿದ್ದ. ಒಂದು ದಿನ ಸೋಮು ಬಳಿ ಖೇಮು ಹೇಳಿದ. ನಾನು ಇತ್ತೀಚೆಗೆ ಏನೋ ವಿಚಿತ್ರವಾಗಿ ಆಡುತ್ತಿದ್ದೇನೆ. ನಮ್ಮ ಹೋಟೆಲ್ʼನಲ್ಲಿರುವ ವೆಜಿಟೆಬಲ್ ಕಟ್ಟರ್ ಅನ್ನು ನೋಡಿದಾಗಲೆಲ್ಲ ಮುತ್ತು ಕೊಟ್ಟು ತುಟಿ ಗಾಯ ಮಾಡಿಕೊಳ್ಳಬೇಕು ಎಂಬ ವಿಚಿತ್ರ ಆಸೆ ಆಗುತ್ತದೆ. ಯಾರಾದರೂ ವೆಜಿಟೆಬಲ್ ಕಟ್ಟರ್ ಸಹವಾಸಕ್ಕೆ ಹೋಗಿ ತುಟಿ ಗಾಯ ಮಾಡಿಕೊಳ್ಳುತ್ತಾರಾ? ಇವನಿಗೇನು ತಲೆಕೆಟ್ಟಿದೆಯಾ, ಎಂದುಕೊಂಡ ಸೋಮು, ನಿನ್ನನ್ನು ನೀನು ಕಂಟ್ರೋಲ್ ಮಾಡಿಕೋ, ಇಲ್ಲದಿದ್ದರೆ, ಯಾರಾದರೂ ಡಾಕ್ಟರ್ ಬಳಿ ತೋರಿಸಿಕೋ ಎಂದ. ಇದು ಕೆಲವು ದಿನ ಹೀಗೆಯೇ ಮುಂದುವರಿಯಿತು. ಆದರೆ, ಖೇಮುವಿನ ವಿಚಿತ್ರ ಆಸೆ ಮಾತ್ರ ಕಡಿಮೆ ಆಗಲಿಲ್ಲ. ಬದಲಾಗಿ ಅದು ದಿನದಿನಕ್ಕೂ ಹೆಚ್ಚುತ್ತಲೇ ಹೋಯಿತು. ಒಂದು ದಿನ ಖೇಮು ತನ್ನ ವಿಚಿತ್ರ ಬಯಕೆಯನ್ನು ಕಂಟ್ರೋಲ್ ಮಾಡಿಕೊಳ್ಳಲಾಗದೆ ತಾನು ಏನಂದುಕೊಂಡಿದ್ದನೋ ಅದನ್ನು ಮಾಡಿಯೇ ಬಿಟ್ಟ, ಖೇಮುವಿನ ತುಟಿಯೆಲ್ಲ ಗಾಯ ಆಗಿತ್ತು. ವೆಜಿಟೆಬಲ್ ಕಟ್ಟರ್ ಮೇಲೂ ರಕ್ತದ ಕಲೆ ಇತ್ತು. ಅದನ್ನು ಅಲ್ಲಿನ ಸೀನಿಯರ್ ಮ್ಯಾನೇಜರ್ ಒಬ್ಬ ನೋಡಿಬಿಟ್ಟ ಮರುದಿನ ಖೇಮು ಸೋಮು ಬಳಿ ಬಂದು ಆಗಿದ್ದೆಲ್ಲವನ್ನೂ ಹೇಳಿದ. ನಾನು ಇವತ್ತು ಅಂದು ಕೊಂಡಿದ್ದನ್ನು ಮಾಡಿಯೇಬಿಟ್ಟೆ, ಆದರೆ ನಾನು ಮಾಡಿದ ಕೆಲಸವನ್ನು ನಮ್ಮ ಸೀನಿಯರ್ ಮ್ಯಾನೇಜರ್ ನೋಡಿಬಿಟ್ಟ ಎಂದ ಖೇಮು. ಮುಂದೇನಾಯ್ತು? ಅಂತ ಕೇಳಿದ ಸೋಮು. ಅದಕ್ಕೆ ಖೇಮು ಹೇಳಿದ ಇನ್ನೇನಾಗುತ್ತೆ? ನನ್ನನ್ನ ಕೆಲಸದಿಂದ ತೆಗೆದ್ರು. ಮತ್ತೆ, ಆ ವೆಜಿಟೆಬಲ್ ಕಟ್ಟರ್ ಇದ್ಳಲ್ಲ, ಅವಳನ್ನೂ ಕೆಲಸದಿಂದ ತೆಗೆದ್ರು.
ಲೈನ್ ಮ್ಯಾನ್
ಬಾಲಿವುಡ್‌ನ ಹಳೆಯ ನಟ ಗೋವಿಂದ ಅವರನ್ನು ಅಭಿಮಾನಿಗಳು ಮುತ್ತಿಕೊಂಡರೆ
- ಗುಂಪಲ್ಲಿ ಗೋವಿಂದ
ಮನಮೋಹನ್ ಸಿಂಗ್ ಬಗ್ಗೆ ಸಿನಿಮಾ ಮಾಡಿದ್ರೆ ಮೂಕಿ ಸಿನಿಮಾ
- ಹರಭಜನ್ ಸಿಂಗ್ ಬಗ್ಗೆ ಸಿನಿಮಾ ಮಾಡಿದ್ರೆ ‘ಮಾಕಿ’ ಸಿನಿಮಾನಾ?
ಲಂಚ ತಿನ್ನುವ ಪೊಲೀಸ್ ಆಫೀಸರ್ ಬಗ್ಗೆ ಸಿನಿಮಾ ಮಾಡಿದರೆ
- ಖಾಕಿ ಸಿನಿಮಾ
ಅವಾರ್ಡ್‌ಗೋಸ್ಕರ ಸಿನಿಮಾ ಮಾಡಿ ರೂಲ್ ಇದೆ ಅನ್ನೋ ಕಾರಣಕ್ಕಾಗಿ ಥಿಯೇಟರ್‌ನಲ್ಲಿ ಬರೀ ಒಂದ್ ಶೋ ಹಾಕೋರ ಸಿನಿಮಾ?
- ‘ಶೋಕಿ’ ಸಿನಿಮಾ
ಧ್ಯಾನ್ ಚಂದ್ ಬಗ್ಗೆ ಸಿನಿಮಾ ಮಾಡಿದ್ರೆ?
- ಇನ್ನೇನಿರುತ್ತೆ? ಹಾಕಿ ಸಿನಿಮಾ, ಅಷ್ಟೇ, ಎಷ್ಟೂಂತ ಪನ್ ಮಾಡೋದು?!
ಸೃಜನ್ ಲೋಕೇಶ್ರ ಮಜಾ ಟಾಕೀಸ್ ಥರ ಜಗ್ಗೇಶ್ ಅವರು ಒಂದು ಕಾಮಿಡಿ ಶೋ ಮಾಡಿದ್ರೆ ಅದಕ್ಕೆ ಹೆಸರು?
- ಮಂಜಾ ಟಾಕೀಸ್ ಅಥವಾ ಮಾಂಜಾ ಟಾಕೀಸ್
ಅರ್ಜುನ ಎಂಬ ನಾಮಪದದ ವಿರುದ್ಧಾರ್ಥಕ ಪದ
- ಅ‘ಪಾರ್ಥ’
ಸಿನಿಮಾಗಳ ‘ಹೆಸರು’ಗಳನ್ನೇ ಇಟ್ಟುಕೊಂಡು ಮಾಡುವ ಹಾಡನ್ನು ಏನಂತ ಕರೆಯಬಹುದು?
- ‘ನಾಮ’‘ಪದ’
ಧರ್ಮ, ಜಾತಿಯ ಕಾರಣಕ್ಕೆ ಭಿನ್ನಮತ ಉಂಟಾದರೆ ಅದು
- ಭಿನ್ನ ‘ಮತೀಯ’ ಚಟುವಟಿಕೆ