ಇದೇ ಅಂತರಂಗ ಸುದ್ದಿ
ದೇಶದ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ಆಗಾಗ ಕೇಳಿ ಬರುವ ಒಂದು ಸ್ವಾರಸ್ಯಕರ ಚರ್ಚೆ ಏನೆಂದರೆ, ಪ್ರಧಾನಿ ನರೇಂದ್ರ ಮೋದಿಯವರು ಸಾರ್ವಜನಿಕವಾಗಿ ಆಕಳಿಸುವುದನ್ನು ಯಾರೂ ನೋಡಿಲ್ಲ ಎಂಬುದು. ದಶಕಗಳ ಕಾಲ ಸಾರ್ವಜನಿಕ ಜೀವನದಲ್ಲಿದ್ದರೂ, ಕೆಮರಾಗಳ ನಿರಂತರ ಕಣ್ಣಿನಡಿಯಲ್ಲಿದ್ದರೂ ಅವರು ಸಭೆ-ಸಮಾರಂಭಗಳಲ್ಲಿ ಆಕಳಿಸಿದ ಒಂದೇ ಒಂದು ಚಿತ್ರ ಅಥವಾ ವಿಡಿಯೋ ತುಣುಕು ಹೊರಬಿದ್ದಿಲ್ಲ ಎಂಬುದು ನಿಜಕ್ಕೂ ಕುತೂಹಲಕಾರಿ ಸಂಗತಿ.
ಇಂದಿನ ಡಿಜಿಟಲ್ ಯುಗದಲ್ಲಿ ದೇಶದ ಪ್ರಧಾನಮಂತ್ರಿಯ ಪ್ರತಿಯೊಂದು ಹೆಜ್ಜೆಯೂ, ಚಲನ ವಲನವೂ ನೂರಾರು ಕೆಮರಾಗಳಲ್ಲಿ ಸೆರೆಯಾಗುತ್ತದೆ. ಪಾರ್ಲಿಮೆಂಟ್ ಅಧಿವೇಶನಗಳು, ದೀರ್ಘ ಕಾಲದ ದ್ವಿಪಕ್ಷೀಯ ಮಾತುಕತೆಗಳು, ರ್ಯಾಲಿಗಳು ಹಾಗೂ ಸುದೀರ್ಘ ಸಭೆಗಳಲ್ಲಿ ಅನೇಕ ನಾಯಕರು ಆಕಳಿಸುವುದು, ಕಣ್ಣು ಮುಚ್ಚುವುದು ಅಥವಾ ಆಯಾಸದಿಂದ ತೂಕಡಿಸುವುದನ್ನು ನೋಡಿದ್ದೇವೆ. ಆದರೆ, ಮೋದಿಯವರ ವಿಷಯದಲ್ಲಿ ಇದುವರೆಗೂ ಅಂಥ ಯಾವುದೇ ದೃಶ್ಯ ಕಂಡುಬಂದಿಲ್ಲ. ಇದು ಅವರ ಕಟ್ಟುನಿಟ್ಟಾದ ಸ್ವ-ನಿಯಂತ್ರಣ (Self-Control) ಮತ್ತು ಸಾರ್ವಜನಿಕ ಶಿಸ್ತಿಗೆ ಅತ್ಯುತ್ತಮ ಉದಾಹರಣೆ ಇಂದು ಹೇಳಬಹುದು.
ಮೋದಿಯವರು ದಶಕಗಳಿಂದ ಕಟ್ಟುನಿಟ್ಟಾಗಿ ಯೋಗ ಮತ್ತು ಪ್ರಾಣಾಯಾಮ ಅಭ್ಯಾಸ ಮಾಡು ತ್ತಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ವಿಜ್ಞಾನದ ಪ್ರಕಾರ, ಮಿದುಳಿಗೆ ಆಮ್ಲಜನಕದ ಪೂರೈಕೆ ಕಡಿಮೆಯಾದಾಗ ಅಥವಾ ಮಿದುಳು ದಣಿದಾಗ ಆಕಳಿಕೆ ಬರುತ್ತದೆ. ಆದರೆ, ಪ್ರತಿದಿನ ಪ್ರಾಣಾಯಾಮ ಮತ್ತು ಆಳವಾದ ಶ್ವಾಸಕ್ರಿಯೆ ಅಭ್ಯಾಸ ಮಾಡುವವರ ಶ್ವಾಸಕೋಶದ ಸಾಮರ್ಥ್ಯ ಹೆಚ್ಚಿರುತ್ತದೆ ಮತ್ತು ದೇಹದಲ್ಲಿ ಆಮ್ಲಜನಕದ ಸಮತೋಲನ ಚೆನ್ನಾಗಿರುತ್ತದೆ.
ಇದನ್ನೂ ಓದಿ: Vishweshwar Bhat Column: ಹತ್ತು ದೇಶಗಳಲ್ಲಿ ಹರಿವ ಡ್ಯಾನ್ಯೂಬ್
ಯೋಗಾಭ್ಯಾಸವು ನರಮಂಡಲವನ್ನು ಜಾಗೃತವಾಗಿರಿಸುತ್ತದೆ. ಇದರಿಂದಾಗಿ ಸಾರ್ವಜನಿಕವಾಗಿ ಆಯಾಸದ ಲಕ್ಷಣಗಳು ಹೊರಹೊಮ್ಮುವುದು ತೀರಾ ಕಡಿಮೆ. ಮೋದಿಯವರು ದಿನಕ್ಕೆ ಕೇವಲ ನಾಲ್ಕರಿಂದ ಐದು ಗಂಟೆಗಳ ಕಾಲ ಮಾತ್ರ ನಿದ್ರೆ ಮಾಡುತ್ತಾರೆ ಎಂದು ಹಲವು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ.
ಕನಿಷ್ಠ ನಿದ್ರೆ ಮಾಡಿದರೂ ದಿನಪೂರ್ತಿ ಉತ್ಸಾಹದಿಂದಿರಲು ಅವರ ಆಹಾರ ಪದ್ಧತಿ ಮತ್ತು ಜೀವನ ಶೈಲಿಯೇ ಕಾರಣ. ಅವರು ಸಂಪೂರ್ಣ ಸಸ್ಯಾಹಾರವನ್ನು ಸೇವಿಸುತ್ತಾರೆ, ಮಿತ ಆಹಾರ ಪದ್ಧತಿ ಯನ್ನು ಅನುಸರಿಸುತ್ತಾರೆ ಮತ್ತು ಮಧ್ಯಾಹ್ನದ ನಿದ್ರೆಯ ಅಭ್ಯಾಸವನ್ನು ಹೊಂದಿಲ್ಲ. ಈ ಶಿಸ್ತು ಅವರ ಶರೀರದಲ್ಲಿ ಆಯಾಸ ಮತ್ತು ನೀರಸತನ ಮೂಡದಂತೆ ತಡೆಯುತ್ತದೆ. ಸಾರ್ವಜನಿಕ ಜೀವನದಲ್ಲಿ ಶರೀರದ ಭಾಷೆ ಅತ್ಯಂತ ಮುಖ್ಯ. ಸಭೆಗಳಲ್ಲಿ ಕುಳಿತಾಗ ಮೋದಿಯವರು ಅತ್ಯಂತ ನೇರವಾಗಿ, ಜಾಗರೂಕರಾಗಿ ಮತ್ತು ಸಕ್ರಿಯವಾಗಿ ಭಾಗವಹಿಸುವುದನ್ನು ಕಾಣಬಹುದು.
ಒಬ್ಬ ವ್ಯಕ್ತಿ ಮಾನಸಿಕವಾಗಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಾಗ, ಮಿದುಳಿಗೆ ನಿದ್ರೆ ಅಥವಾ ಆಕಳಿಕೆಯ ಪ್ರೇರಣೆ ಸಿಗುವುದಿಲ್ಲ. ಅವರ ಈ ಮಾನಸಿಕ ಏಕಾಗ್ರತೆ ಸಾರ್ವಜನಿಕವಾಗಿ ಆಕಳಿಸುವುದನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ರಾಜಕೀಯ ವಲಯ ದಲ್ಲಿ ಮೋದಿಯವರ ಈ ಶಕ್ತಿ ಮತ್ತು ಶಿಸ್ತು ಹಲವು ಬಾರಿ ಚರ್ಚೆಗೆ ವಸ್ತುವಾಗಿದೆ.
ಬೆಳಗ್ಗೆಯಿಂದ ರಾತ್ರಿಯವರೆಗೆ ಸತತ ಕಾರ್ಯಕ್ರಮಗಳು, ವಿದೇಶಿ ಪ್ರವಾಸಗಳು ಮತ್ತು ಚುನಾವಣಾ ಪ್ರಚಾರಗಳಿದ್ದರೂ ಅವರು ಆಕಳಿಸದೇ, ದಣಿಯದೇ ಕೆಲಸ ಮಾಡುವುದನ್ನು ಅವರ ಬೆಂಬಲಿಗರು ಅವರ ‘ಅಪಾರ ಶಕ್ತಿ ಮತ್ತು ಕಾರ್ಯಕ್ಷಮತೆ’ಗೆ ಸಾಕ್ಷಿ ಎಂದು ಬಣ್ಣಿಸುತ್ತಾರೆ. ಮಾನವ ಶರೀರಕ್ಕೆ ಆಕಳಿಕೆ ಬರುವುದು ಸ್ವಾಭಾವಿಕ ಪ್ರಕ್ರಿಯೆ. ಮೋದಿಯವರಿಗೂ ಏಕಾಂತದಲ್ಲಿ ಅಥವಾ ವಿಶ್ರಾಂತಿ ಯ ಸಮಯದಲ್ಲಿ ಆಕಳಿಕೆ ಬರಬಹುದು. ಆದರೆ, ಸಾರ್ವಜನಿಕ ವೇದಿಕೆಯಲ್ಲಿ ತಮ್ಮ ದೇಹದ ಮೇಲಿರುವ ಅದ್ಭುತ ನಿಯಂತ್ರಣ, ಯೋಗ ಸಾಧನೆ ಮತ್ತು ಕಟ್ಟುನಿಟ್ಟಿನ ಶಿಸ್ತು - ಇವುಗಳಿಂದಾಗಿ ಅವರು ಕೆಮರಾಗಳ ಮುಂದೆ ಎಂದೂ ಆಕಳಿಸದೇ ಇರುವುದು ಪ್ರತಿಯೊಬ್ಬರಲ್ಲೂ ಕುತೂಹಲ ಮೂಡಿಸುವ ವಿಶೇಷ ಸಂಗತಿಯೇ. ಮೋದಿಯವರು ಆಕಳಿಸುವ ಫೋಟೋವನ್ನು ಸೆರೆ ಹಿಡಿದರೆ ಅದು ಒಂದು ಸುದ್ದಿ ಆಗಬಹುದು. ಭಾರತದ ಮೊದಲ ಪ್ರಧಾನಿ ಪಂಡಿತ್ ಜವಹರಲಾಲ್ ನೆಹರು ಅವರು ಯೋಜನಾ ಆಯೋಗದ ದೀರ್ಘ ಸಭೆಗಳಲ್ಲಿ ಭಾಗವಹಿಸುತ್ತಿದ್ದಾಗ, ಅಧಿಕಾರಿಗಳು ಸುದೀರ್ಘ ಅಂಕಿಅಂಶಗಳನ್ನು ಓದುತ್ತಿದ್ದರೆ ಕೆಲವೊಮ್ಮೆ ಬೇಸರಗೊಂಡು ಆಕಳಿಸುತ್ತಿದ್ದರಂತೆ.
ಒಮ್ಮೆ ಹಿರಿಯ ಅಧಿಕಾರಿಯೊಬ್ಬರು ಸಾಲು ಸಾಲು ಅಂಕಿ-ಅಂಶಗಳನ್ನು ಓದುತ್ತಿದ್ದಾಗ ನೆಹರು ಜೋರಾಗಿ ಆಕಳಿಸಿದರು. ಇದನ್ನು ಕಂಡು ಮುಜುಗರಗೊಂಡ ಅಧಿಕಾರಿ, ‘ಪ್ರಧಾನಿಯವರೇ, ನಾನು ವಿವರಣೆಯನ್ನು ಸಂಕ್ಷಿಪ್ತಗೊಳಿಸಲೇ?’ ಎಂದು ಕೇಳಿದರಂತೆ. ಅದಕ್ಕೆ ನೆಹರು ನಗುತ್ತಾ, ‘ಇಲ್ಲ ಇಲ್ಲ, ಮುಂದುವರಿಸಿ... ಆದರೆ ನೆನಪಿಡಿ, ಅಂಕಿ-ಅಂಶಗಳು ದೇಶದ ಪ್ರಗತಿಯನ್ನು ತೋರಿಸಬೇಕು, ಸಭೆಯಲ್ಲಿರುವವರನ್ನು ನಿದ್ರೆಯತ್ತ ತಳ್ಳಬಾರದು’ ಎಂದು ತಮಾಷೆಯಾಗಿ ಹೇಳಿ ಇಡೀ ಸಭೆಯ ವಾತಾವರಣವನ್ನು ತಿಳಿಗೊಳಿಸಿದ್ದರಂತೆ.
ಆಹಾ, ಆಕಳಿಕೆ!
ಒಬ್ಬರು ಆಕಳಿಸಿದರೆ ಸಾಕು, ಅದನ್ನು ನೋಡಿದ ಅಥವಾ ಕೇಳಿದ ನಮಗೂ ತಕ್ಷಣ ಆಕಳಿಸಬೇಕು ಎನಿಸುತ್ತದೆ. ಕೆಲವೊಮ್ಮೆ ‘ಆಕಳಿಕೆ’ ಎಂಬ ಪದವನ್ನು ಓದಿದರೂ ಸಾಕು, ನಮಗೆ ಆಕಳಿಕೆ ಬಂದು ಬಿಡುತ್ತದೆ! ಇದು ಕೇವಲ ನಿಮ್ಮ ಒಬ್ಬರ ಕಥೆಯಲ್ಲ. ಜಗತ್ತಿನಾದ್ಯಂತ ಶೇ.60ರಿಂದ 70ರಷ್ಟು ಜನರ ಅನುಭವವೂ ಇದೇ. ಆದರೆ, ಈ ಆಕಳಿಕೆ ಏಕೆ ಹೀಗೆ ಸಾಂಕ್ರಾಮಿಕ (Contagious) ಎಂಬುದು ಗೊತ್ತೇ? ಈ ಕುತೂಹಲಕಾರಿ ವಿದ್ಯಮಾನದ ಹಿಂದೆ ಅಡಗಿರುವ ವಿಜ್ಞಾನ, ಮಾನಸಿಕ ತತ್ವ ಮತ್ತು ಸ್ವಾರಸ್ಯಕರ ಕಾರಣಗಳಿವೆ.
ನಮ್ಮ ಮಿದುಳಿನಲ್ಲಿ ‘ಮಿರರ್ ನ್ಯೂರಾನ್’ಗಳು ಎಂಬ ವಿಶೇಷ ಕೋಶಗಳಿವೆ. ಇವು ನಾವು ಇನ್ನೊಬ್ಬರ ಕ್ರಿಯೆಯನ್ನು ನೋಡಿದಾಗ, ನಾವೇ ಆ ಕ್ರಿಯೆಯನ್ನು ಮಾಡುತ್ತಿದ್ದೇವೆ ಎಂಬಂತೆ ಸ್ಪಂದಿಸುತ್ತವೆ. ಉದಾಹರಣೆಗೆ, ಒಬ್ಬರು ನಕ್ಕಾಗ ನಮಗೂ ನಗು ಬರುವುದು, ಯಾರಾದರೂ ಪೆಟ್ಟು ತಿಂದಾಗ ನಮಗೆ ಅಯ್ಯೋ ಎನಿಸುವುದು - ಇವೆಲ್ಲವೂ ಮಿರರ್ ನ್ಯೂರಾನ್‌ಗಳ ಕೆಲಸ. ಇನ್ನೊಬ್ಬರು ಆಕಳಿಸುವುದನ್ನು ನೋಡಿದಾಗ, ಈ ನ್ಯೂರಾನ್ ಗಳು ಜಾಗೃತಗೊಂಡು, ನಮಗೆ ತಿಳಿಯದಂತೆ ಆಕಳಿಸುವಂತೆ ಪ್ರೇರೇಪಿಸುತ್ತವೆ.
ವಿಜ್ಞಾನಿಗಳ ಪ್ರಕಾರ, ಸಾಂಕ್ರಾಮಿಕ ಆಕಳಿಕೆಗೂ ಸಹಾನುಭೂತಿಗೂ ಹತ್ತಿರದ ಸಂಬಂಧವಿದೆ. ಅಂದರೆ, ನೀವು ಇನ್ನೊಬ್ಬರ ಭಾವನೆಗಳನ್ನು ಎಷ್ಟು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತೀರೋ, ಅಷ್ಟು ಬೇಗ ಅವರ ಆಕಳಿಕೆ ನಿಮಗೂ ತಗುಲುತ್ತದೆ! ಅಪರಿಚಿತರಿಗಿಂತ, ನಮ್ಮ ಕುಟುಂಬದವರು, ಸ್ನೇಹಿತ ರು ಅಥವಾ ಪ್ರೀತಿಯ ಪಾತ್ರರು ಆಕಳಿಸಿದಾಗ ನಾವು ಆಕಳಿಸುವ ಸಾಧ್ಯತೆ ಹೆಚ್ಚು. ಸುಮಾರು ನಾಲ್ಕು ಅಥವಾ ಐದು ವರ್ಷದ ಮಕ್ಕಳಲ್ಲಿ ಸಹಾನುಭೂತಿಯ ಭಾವನೆ ಬೆಳೆಯಲು ಪ್ರಾರಂಭ ವಾದ ಮೇಲೆಯೇ ಅವರಿಗೆ ಈ ಸಾಂಕ್ರಾಮಿಕ ಆಕಳಿಕೆ ಅನುಭವಕ್ಕೆ ಬರುತ್ತದೆ. ನಾಯಿಗಳು, ಚಿಂಪಾಂಜಿಗಳು ಮತ್ತು ಆನೆಗಳಲ್ಲೂ ಸಹ ಇಂಥ ಸಾಂಕ್ರಾಮಿಕ ಆಕಳಿಕೆ ಕಂಡುಬರುತ್ತದೆ.
ವಿಶೇಷವಾಗಿ ನಾಯಿಗಳು ತಮ್ಮ ಯಜಮಾನರು ಆಕಳಿಸಿದಾಗ ತಾವೂ ಆಕಳಿಸುತ್ತವೆ. ವಿಜ್ಞಾನಿಗಳ ಪ್ರಕಾರ, ಆಕಳಿಸುವುದು ಮಿದುಳಿಗೆ ‘ಏರ್ ಕಂಡಿಷನರ್’ ಇದ್ದಂತೆ. ನಾವು ಆಕಳಿಸಿದಾಗ, ದೊಡ್ಡ ದಾಗಿ ಉಸಿರು ತೆಗೆದುಕೊಳ್ಳುವುದರಿಂದ ತಂಪಾದ ಗಾಳಿ ದೇಹವನ್ನು ತಲುಪುತ್ತದೆ. ಮುಖದ ಸ್ನಾಯುಗಳು ಎಳೆಯಲ್ಪಟ್ಟು, ರಕ್ತಸಂಚಾರ ಹೆಚ್ಚಾಗುತ್ತದೆ. ಇದರಿಂದ ಮಿದುಳಿನ ತಾಪಮಾನ ಕಡಿಮೆಯಾಗಿ, ಮಿದುಳು ಚುರುಕಾಗುತ್ತದೆ. ಒಬ್ಬರು ಆಕಳಿಸಿದಾಗ, ಅವರ ಮಿದುಳು ತಂಪಾಗುತ್ತಿದೆ, ನನಗೂ ಅದರ ಅಗತ್ಯವಿದೆ ಎಂಬಂತೆ ಪರಿಸರದಲ್ಲಿರುವ ಇತರರ ಮಿದುಳೂ ಪ್ರೇರೇಪಿತ ಗೊಳ್ಳುತ್ತದೆ.
ನಾವು ದಣಿದಾಗ ಅಥವಾ ಬೇಸರಗೊಂಡಾಗ ನಮ್ಮ ದೇಹದ ನರಮಂಡಲವು ವಿಶ್ರಾಂತ ಸ್ಥಿತಿಗೆ ಜಾರಲು ಬಯಸುತ್ತದೆ. ನಮಗೆ ಆಕಳಿಕೆ ಬಂದಾಗ, ನಮ್ಮ ದೇಹದಲ್ಲಿರುವ ‘ಆಕ್ಸಿಟೋಸಿನ್’ ಎಂಬ ಹಾರ್ಮೋನ್ ಮಟ್ಟ ಹೆಚ್ಚಾಗುತ್ತದೆ. ಇದು ಸಾಮಾಜಿಕ ಬಂಧವನ್ನು ಗಟ್ಟಿಮಾಡಲು ಮತ್ತು ನರಗಳನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ. ಇದನ್ನು ಓದುತ್ತಿರುವಾಗ ಅಥವಾ ಆಕಳಿಕೆಯ ಬಗ್ಗೆ ಯೋಚಿಸುತ್ತಿರುವಾಗ ನಿಮಗೂ ಈಗಾಗಲೇ ಒಮ್ಮೆಯಾದರೂ ಆಕಳಿಕೆ ಬಂದಿದ್ದರೆ, ನಿಮ್ಮ ಮೆದುಳಿನ ಮಿರರ್ ನ್ಯೂರಾನ್‌ಗಳು ಮತ್ತು ನಿಮ್ಮ ಸಹಾನುಭೂತಿ ಅದ್ಭುತವಾಗಿ ಕೆಲಸ ಮಾಡುತ್ತಿವೆ ಎಂದರ್ಥ!
ಆಕಳಿಕೆ ಎಂಬುದು ಕೇವಲ ಆಯಾಸ ಅಥವಾ ನಿದ್ರೆಯ ಸಂಕೇತವಲ್ಲ. ಅದು ಮನುಷ್ಯರ ನಡುವಿನ ಸಾಮಾಜಿಕ ಸಂಪರ್ಕ, ಬಾಂಧವ್ಯ ಮತ್ತು ಮಿದುಳಿನ ಅದ್ಭುತ ವ್ಯವಸ್ಥೆಯ ಸಂಕೇತ. ಮುಂದಿನ ಬಾರಿ ನಿಮ್ಮ ಮುಂದೆ ಯಾರಾದರೂ ಆಕಳಿಸಿದರೆ, ಅದನ್ನು ಅವರ ಮೇಲಿನ ನಿಮ್ಮ ‘ಸಹಾನುಭೂತಿ ಮತ್ತು ಪ್ರೀತಿಯ ಸಣ್ಣ ಸಂಕೇತ’ ಎಂದು ಭಾವಿಸಿ ನಗುತ್ತಾ ಆಕಳಿಸಬಹುದು.
ನಿಂತು ಆಕಳಿಸುತ್ತಿದ್ದ ಮುಗಾಬೆ
ಜಿಂಬಾಬ್ವೆಯ ಮಾಜಿ ಸರ್ವಾಧಿಕಾರಿ ರಾಬರ್ಟ್ ಮುಗಾಬೆ ತಮ್ಮ ಆಡಳಿತದ ಕೊನೆಯ ದಿನಗಳಲ್ಲಿ (ತಮ್ಮ 90ರ ಆಸುಪಾಸಿನಲ್ಲಿ) ಭಾಗವಹಿಸುತ್ತಿದ್ದ ಪ್ರತಿಯೊಂದು ಅಂತಾರಾಷ್ಟ್ರೀಯ ಶೃಂಗಸಭೆ ಗಳಲ್ಲೂ- ಆಫ್ರಿಕನ್ ಯೂನಿಯನ್ ಸಭೆಗಳು, ವಿಶ್ವಸಂಸ್ಥೆಯ ಅಧಿವೇಶನಗಳು ಹಾಗೂ ಪತ್ರಿಕಾ ಗೋಷ್ಠಿಗಳಲ್ಲಿ - ಸಾರ್ವಜನಿಕವಾಗಿ ಜೋರಾಗಿ ಆಕಳಿಸುತ್ತಾ, ಕಣ್ಣುಮುಚ್ಚಿ ನಿದ್ರಿಸುತ್ತಾ ಕೆಮರಾ ಗಳಿಗೆ ಸಿಕ್ಕಿ ಬೀಳುತ್ತಿದ್ದುದು ಸಾಮಾನ್ಯವಾಗಿತ್ತು. ಈ ವಿಷಯ ಜಾಗತಿಕ ಮಟ್ಟದಲ್ಲಿ ಭಾರೀ ಹಾಸ್ಯ ಮತ್ತು ಚರ್ಚೆಗೆ ಕಾರಣವಾಗುತ್ತಿತ್ತು.
2017ರಲ್ಲಿ ಮುಗಾಬೆ ಅವರು ದಕ್ಷಿಣ ಆಫ್ರಿಕಾದಲ್ಲಿ ನಡೆದ ಪ್ರಮುಖ ಶೃಂಗಸಭೆಯೊಂದರಲ್ಲಿ ಆಕಳಿಸುತ್ತಾ, ನಿದ್ರೆಗೆ ಜಾರಿದ ದೃಶ್ಯ, ಜಗತ್ತಿನಾದ್ಯಂತ ವೈರಲ್ ಆಯಿತು. ಪತ್ರಕರ್ತರು ಇದನ್ನು ಪ್ರಶ್ನಿಸಿದಾಗ, ಮುಗಾಬೆ ಯವರ ಅಧಿಕೃತ ವಕ್ತಾರ ಜಾರ್ಜ್ ಚರಂಬಾ ನೀಡಿದ ವಿವರಣೆ ಜಗತ್ತನ್ನೇ ಬೆರಗುಗೊಳಿಸಿತ್ತು. ಅವರು ಮಾಧ್ಯಮಗಳ ಮುಂದೆ ಬಂದು ಅತ್ಯಂತ ಗಂಭೀರವಾಗಿ ಹೀಗೆಂದರು - ‘ಅಧ್ಯಕ್ಷರು ಸಭೆಗಳಲ್ಲಿ ನಿದ್ರಿಸುತ್ತಿದ್ದಾರೆ ಅಥವಾ ಆಕಳಿಸುತ್ತಿದ್ದಾರೆ ಎಂದು ಮಾಧ್ಯಮಗಳು ತಪ್ಪಾಗಿ ಬಿಂಬಿಸುತ್ತಿವೆ.
ವಾಸ್ತವವಾಗಿ ಅವರಿಗೆ ವಯಸ್ಸಾಗಿರುವುದರಿಂದ ಬಲವಾದ ಬೆಳಕನ್ನು (*ಆಜಿಜeಠಿ ಔಜಿಜeಠಿo) ನೋಡುವುದು ಕಷ್ಟ. ಹಾಗಾಗಿ ಅವರು ಕಣ್ಣುಗಳನ್ನು ಮುಚ್ಚಿಕೊಂಡು, ಬೆಳಕಿನಿಂದ ಕಣ್ಣನ್ನು ರಕ್ಷಿಸಿಕೊಳ್ಳುತ್ತಾ, ಸಭೆಯಲ್ಲಿ ನಡೆಯುವ ಮಾತುಗಳನ್ನು ಅತ್ಯಂತ ಏಕಾಗ್ರತೆಯಿಂದ ಕೇಳಿಸಿ ಕೊಳ್ಳುತ್ತಾರೆ’.
ಈ ವಿವರಣೆಯನ್ನು ಕೇಳಿ ಇಡೀ ಜಗತ್ತು ನಕ್ಕಿತ್ತು. ‘ಕಣ್ಣು ಮುಚ್ಚಿ ಆಕಳಿಸುವುದು ಏಕಾಗ್ರತೆಯ ಸಂಕೇತವೇ?’ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ಅವರನ್ನು ಕಾಲೆಳೆದಿದ್ದವು. ಮತ್ತೊಮ್ಮೆ ಈ ಬಗ್ಗೆ ಸ್ಪಷ್ಟನೆ ನೀಡಿದ ಮುಗಾಬೆ, ‘ನನ್ನ ಶರೀರ ಆಕಳಿಸಿದಾಗ ಅಥವಾ ಕಣ್ಣು ಮುಚ್ಚಿದಾಗ ಜನರು ನಾನು ನಿದ್ರಿಸುತ್ತಿದ್ದೇನೆ ಅಂದುಕೊಳ್ಳುತ್ತಾರೆ. ಆದರೆ ಆ ಸಮಯದಲ್ಲಿ ನನ್ನ ಮಿದುಳು ಜಾಗತಿಕ ಸಮಸ್ಯೆಗಳ ಬಗ್ಗೆ ಅತ್ಯಂತ ಆಳವಾಗಿ ಆಲೋಚಿಸುತ್ತಿರುತ್ತದೆ’ ಎಂದು ತಮ್ಮ ನಿದ್ರೆ ಹಾಗೂ ಆಕಳಿಕೆಯನ್ನು ‘ಆಳವಾದ ಚಿಂತನೆ’ ಎಂದು ಸಮರ್ಥಿಸಿಕೊಂಡಿದ್ದರು!
ಜಿಂಬಾಬ್ವೆಯ ವಿರೋಧ ಪಕ್ಷದ ನಾಯಕರು ಮುಗಾಬೆಯವರ ಈ ಸಾರ್ವಜನಿಕ ಆಕಳಿಕೆ ಮತ್ತು ನಿದ್ರೆಯನ್ನು ದೇಶದ ಸ್ಥಿತಿಗೆ ಹೋಲಿಸಿ ಟೀಕಿಸುತ್ತಿದ್ದರು. ಪ್ರತಿಪಕ್ಷದ ನಾಯಕರೊಬ್ಬರು ಪಾರ್ಲಿಮೆಂಟ್‌ನಲ್ಲಿ, ‘ನಮ್ಮ ದೇಶದ ಆರ್ಥಿಕತೆ ಕುಸಿಯುತ್ತಿದೆ, ಜನ ಹಸಿವಿನಿಂದ ಬಳಲುತ್ತಿದ್ದಾರೆ. ಆದರೆ ದೇಶವನ್ನು ಮುನ್ನಡೆಸಬೇಕಾದ ಅಧ್ಯಕ್ಷರು ಜಗತ್ತಿನ ಪ್ರತಿಯೊಂದು ವೇದಿಕೆಯಲ್ಲೂ ಆಕಳಿಸುತ್ತಾ ನಿದ್ರಿಸುತ್ತಿದ್ದಾರೆ.
ಮುಗಾಬೆಯವರ ಆಕಳಿಕೆ ಎಂದರೆ ಇಡೀ ಜಿಂಬಾಬ್ವೇ ದೇಶವೇ ನಿದ್ರೆಗೆ ಜಾರಿದೆ ಎಂದರ್ಥ’ ಎಂದು ಮಾರ್ಮಿಕವಾಗಿ ಕುಟುಕಿದ್ದರು. 2016ರಲ್ಲಿ ಮುಗಾಬೆ ಜಪಾನ್ ಪ್ರವಾಸ ಕೈಗೊಂಡಿದ್ದಾಗ, ಆಗಿನ ಜಪಾನ್ ಪ್ರಧಾನಿ ಶಿಂಜೊ ಅಬೆ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆದಿತ್ತು. ಶಿಂಜೊ ಅಬೆ ಜಾಗತಿಕ ರಾಜಕೀಯದ ಬಗ್ಗೆ ಗಂಭೀರವಾಗಿ ಮಾತನಾಡುತ್ತಿದ್ದಾಗ, ಅವರ ಪಕ್ಕದ ನಿಂತಿದ್ದ ಮುಗಾಬೆ ನಿಂತುಕೊಂಡೇ ಕಣ್ಣು ಮುಚ್ಚಿ ಆಕಳಿಸಲು ಶುರುಮಾಡಿದರು.
ಜಪಾನ್ ಮಾಧ್ಯಮಗಳು ಈ ದೃಶ್ಯವನ್ನು ಸ್ಪಷ್ಟವಾಗಿ ಸೆರೆ ಹಿಡಿದವು. ನಾಯಕನೊಬ್ಬ ನಿಂತು ಕೊಂಡೇ ಆಕಳಿಸುತ್ತಾ ನಿದ್ರಿಸುವುದನ್ನು ಕಂಡು ಜಪಾನ್ ಮಾಧ್ಯಮಗಳು ಅದನ್ನು ‘ನಿಂತೂ ಆಕಳಿಸಬಹುದು ಎಂದು ತೋರಿಸಿದ ಮುಗಾಬೆ’ ಎಂದು ಬರೆದಿದ್ದವು.
ಇದು ಅಹಿಂಸಾತ್ಮಕ ಅಸ್ತ್ರ
ಯಾರನ್ನಾದರೂ ಅವಮಾನಿಸಲು ಬೈಗುಳದ ಶಬ್ದಕೋಶವನ್ನೇ ಹೊರತೆಗೆಯಬೇಕಾಗಿಲ್ಲ. ದೊಡ್ಡ ದೊಡ್ಡ ಮಾತುಗಳು, ಕಟು ವಿಮರ್ಶೆಗಳು ಮಾಡುವ ಕೆಲಸವನ್ನು ಕೇವಲ ಒಂದೇ ಒಂದು ದೊಡ್ಡ ‘ಆಕಳಿಕೆ’ ಅತ್ಯಂತ ಸುಲಭವಾಗಿ ಮತ್ತು ನಯವಾಗಿ ಮಾಡಿ ಮುಗಿಸುತ್ತದೆ.
ಬೈದರೆ ಎದುರಾಳಿ ಕೋಪಗೊಂಡು ಜಗಳಕ್ಕೆ ಬರಬಹುದು. ಆದರೆ ಆಕಳಿಸಿದರೆ? ಏನೂ ಮಾಡಲು ಸಾಧ್ಯವಿಲ್ಲ. ಆಕಳಿಕೆ ಎಂಬುದು ಒಂದು ‘ಅಹಿಂಸಾತ್ಮಕ ಅವಮಾನ’ದ ಅಸ್ತ್ರ! ಸಾಮಾನ್ಯವಾಗಿ ಯಾರಾದರೂ ನಮ್ಮೆದುರು ಅತ್ಯಂತ ಗಂಭೀರವಾಗಿ, ಶ್ರದ್ಧೆಯಿಂದ ತಮ್ಮ ಸಾಹಸಗಾಥೆಯನ್ನೋ, ಕವಿತೆಯನ್ನೋ ಅಥವಾ ರಾಜಕೀಯ ಭಾಷಣವನ್ನೋ ಹೇಳುತ್ತಿರುತ್ತಾರೆ. ಅವರು ತಮ್ಮ ಮಾತಿನ ‘ಪೀಕ್’ ಹಂತದಲ್ಲಿದ್ದಾಗ, ನೀವು ಸದ್ದಿಲ್ಲದೇ ಬಾಯಿ ಅಗಲ ತೆರೆದು, ಕಣ್ಣಲ್ಲಿ ನೀರು ಬರುವಂತೆ ಜೋರಾಗಿ ಆಕಳಿಸಿ ನೋಡಿ! ಅಷ್ಟೇ! ಎದುರಿಗಿದ್ದವರ ಉತ್ಸಾಹಕ್ಕೆ ತಕ್ಷಣವೇ ಬ್ರೇಕ್! ನಿಮ್ಮ ಒಂದು ಆಕಳಿಕೆ ಅವರಿಗೆ ಮೂರು ಸ್ಪಷ್ಟ ಸಂದೇಶಗಳನ್ನು ರವಾನಿಸುತ್ತದೆ - ‘ನಿಮ್ಮ ಮಾತು ಅತ್ಯಂತ ನೀರಸವಾಗಿದೆ’, ನನ್ನ ಮಿದುಳು ನಿಮ್ಮ ಮಾತುಗಳನ್ನು ತಡೆದುಕೊಳ್ಳಲಾರದೆ ಪವರ್ -ಸೇವ್ ( Bright Lights) ಮೋಡ್‌ಗೆ ಹೋಗುತ್ತಿದೆ ಹಾಗೂ ‘ದಯವಿಟ್ಟು ನಿಮ್ಮ ಪುರಾಣವನ್ನು ಇಲ್ಲಿಗೇ ಮುಗಿಸಿ.’
ಅರ್ಧಗಂಟೆಯಿಂದ ತನ್ನ ಹೊಸ ಕಾರಿನ ಮೈಲೇಜ್ ಬಗ್ಗೆ ಸ್ನೇಹಿತ ಜಂಭ ಕೊಚ್ಚಿಕೊಳ್ಳುತ್ತಿದ್ದಾನೆ ಎನ್ನಿ, ಕೈ ಎತ್ತಿ ಜೋರಾಗಿ ಆಕಳಿಸುತ್ತಾ, ‘ಆಹಾ... ಎಷ್ಟು ಚೆನ್ನಾಗಿದೆ ನಿನ್ನ ಕಾರು! ಕೇಳುತ್ತಿದ್ದರೆ ನನಗೇ ತಿಳಿಯದೆ ಕಣ್ಣು ಮುಚ್ಚಿ ನಿದ್ರೆ ಬರುತ್ತಿದೆ’ ಎಂದರೆ, ಆತ ತನ್ನ ಕೊರೆತವನ್ನು ಅ ನಿಲ್ಲಿಸುತ್ತಾನೆ. ಅಲ್ಲಿ ಯಾವುದೇ ಬೈಗುಳ ಇಲ್ಲ, ಜಗಳ ಇಲ್ಲ, ಆದರೆ ಸಂದೇಶ ಮಾತ್ರ ರವಾನೆ ಆಗಿರುತ್ತದೆ. ಮಾತುಗಳು ಕಿವಿಗೆ ತಲುಪಿ ಕೇವಲ ಗಾಯ ಮಾಡುತ್ತವೆ. ಆದರೆ, ಸೂಕ್ತ ಸಮಯದಲ್ಲಿ ಮಾಡುವ ಆಕಳಿಕೆ ಎದುರಾಳಿಯ ಅಹಂಕಾರದ ಮೇಲೆಯೇ ನೇರ ದಾಳಿ ಮಾಡುತ್ತದೆ. ಹೀಗಾಗಿ, ಯಾರಾದರೂ ನಿಮ್ಮ ಬಳಿ ಅತಿಯಾಗಿ ಕೊರೆದರೆ, ಆಕಳಿಸಿ ನೋಡಿ.
ಆಕಳಿಕೆ: ಕೆಲವು ತಮಾಷೆ
ಆಕಳಿಕೆಗೆ ಸಂಬಂಧಿಸಿದಂತೆ, ನನಗೆ ನೆನಪಿರುವ ಕೆಲವು ಪ್ರಸಂಗಗಳನ್ನು ನೆನಪಿಸಿ ಕೊಳ್ಳುವುದಾದರೆ... ಅಮೆರಿಕದ ಪ್ರಸಿದ್ಧ ಲೇಖಕ ಹಾಗೂ ಹಾಸ್ಯಬರಹಗಾರ ಮಾರ್ಕ್ ಟ್ವೇನ್ ಬಳಿಗೆ ಒಮ್ಮೆ ಯುವ ಲೇಖಕನೊಬ್ಬ ತಾನು ಬರೆದ ಹೊಸ ಕಾದಂಬರಿಯನ್ನು ಹಿಡಿದುಕೊಂಡು ಬಂದ. ‘ಸರ್, ನನ್ನ ಈ ಹೊಸ ಕೃತಿಯನ್ನು ಒಮ್ಮೆ ಓದಿ ನಿಮ್ಮ ಅಭಿಪ್ರಾಯ ತಿಳಿಸಬೇಕು’ ಎಂದು ವಿನಂತಿಸಿದ.
ಮಾರ್ಕ್ ಟ್ವೇನ್ ಆ ಪುಸ್ತಕದ ಮೊದಲ ಕೆಲವು ಪುಟಗಳನ್ನು ಮೌನವಾಗಿ ಓದುತ್ತಾ, ನಡುವೆ ಒಂದೆರಡು ಬಾರಿ ಜೋರಾಗಿ ಆಕಳಿಸಿದರು. ಯುವ ಲೇಖಕ ಕೊಂಚ ಬೇಸರದಿಂದ, ‘ಏನ್ಸಾರ್, ನನ್ನ ಕೃತಿ ನಿಮಗೆ ಇಷ್ಟವಾಗಲಿಲ್ಲವೇ? ಆಕಳಿಸುತ್ತಿದ್ದೀರಲ್ಲ?’ ಎಂದ. ಅದಕ್ಕೆ ಮಾರ್ಕ್ ಟ್ವೇನ್, ‘ಸಹೋದರ, ಆಕಳಿಕೆ ಎಂಬುದು ಸಾಹಿತ್ಯದ ಅತ್ಯಂತ ಪ್ರಾಮಾಣಿಕ ವಿಮರ್ಶೆ ಎಂಬುದು ಗೊತ್ತಿರಲಿ. ನಿಮ್ಮ ಬರಹ ನನ್ನ ಮಿದುಳನ್ನು ನಿದ್ರೆಗೆ ಜಾರಿಸುವಷ್ಟು ಶಾಂತಗೊಳಿಸುತ್ತಿದೆ ಎಂದರೆ ನಿಮ್ಮ ಕೃತಿ ಎಷ್ಟು ‘ಅದ್ಭುತ’ವಾಗಿರಬೇಕು ಯೋಚಿಸಿ’ ಎಂದು ಮಾರ್ಮಿಕವಾಗಿ ಚಟಾಕಿ ಹಾರಿಸಿದರು.
ಬ್ರಿಟನ್‌ನ ಪ್ರಧಾನಿಯಾಗಿದ್ದ ವಿನ್‌ಸ್ಟನ್ ಚರ್ಚಿಲ್ ತಮ್ಮ ತೀಕ್ಷ್ಣ ಹಾಸ್ಯಪ್ರಜ್ಞೆಗೆ ಹೆಸರಾದವರು. ಒಮ್ಮೆ ಬ್ರಿಟಿಷ್ ಪಾರ್ಲಿಮೆಂಟ್‌ನಲ್ಲಿ ಪ್ರತಿಪಕ್ಷದ ನಾಯಕರೊಬ್ಬರು ಅತ್ಯಂತ ನೀರಸವಾಗಿ ಮತ್ತು ದೀರ್ಘವಾಗಿ ಭಾಷಣ ಮಾಡುತ್ತಿದ್ದರು. ಅವರ ಸುದೀರ್ಘ ಭಾಷಣವನ್ನು ಕೇಳುತ್ತಿದ್ದ ಚರ್ಚಿಲ್, ಸಭೆಯ ಜೋರಾಗಿ ಆಕಳಿಸಲು ಶುರುಮಾಡಿದರು. ಇದನ್ನು ಗಮನಿಸಿದ ಪ್ರತಿಪಕ್ಷದ ನಾಯಕ ಕೋಪಗೊಂಡು, ‘ಪ್ರಧಾನಿಯವರೇ, ನಾನು ಅತ್ಯಂತ ಪ್ರಮುಖವಾದ ವಿಷಯವನ್ನು ಮಾತನಾಡು ತ್ತಿದ್ದರೆ ನೀವು ಹೀಗೆ ಬಹಿರಂಗವಾಗಿ ಆಕಳಿಸಿ ನನ್ನನ್ನು ಮತ್ತು ಈ ಸಭೆಯನ್ನು ಅವಮಾನಿಸು ತ್ತಿದ್ದೀರಿ’ ಎಂದು ಗರಂ ಆದರು. ಅದಕ್ಕೆ ಚರ್ಚಿಲ್ ತಕ್ಷಣವೇ ಮುಗುಳ್ನಕ್ಕು, ‘ಅಯ್ಯೋ ಕ್ಷಮಿಸಿ, ನಾನು ನಿಮಗೆ ಅವಮಾನ ಮಾಡುತ್ತಿಲ್ಲ. ಅದು ನನ್ನ ದೇಹ ಸ್ವಯಂಪ್ರೇರಿತವಾಗಿ ವ್ಯಕ್ತಪಡಿಸುತ್ತಿರುವ ಅತ್ಯಂತ ನೇರ ಅಭಿಪ್ರಾಯ ಅಷ್ಟೇ’ ಎಂದರಂತೆ! ಇಡೀ ಸಭೆ ನಗೆಗಡಲಿನಲ್ಲಿ ತೇಲಿತು.