ಜ್ಞಾನ ಅನ್ವೇಷಣೆ
ಡಾ.ಡಿ.ಸಿ.ನಂಜುಂಡ
ಗೌರವ ಡಾಕ್ಟರೇಟ್ ಎಂಬುದು ಘನತೆವೆತ್ತ ವಿಶ್ವವಿದ್ಯಾಲಯಗಳು ಸಮಾಜದಲ್ಲಿ ಜೀವಮಾನ ಸಾಧನೆ ಮಾಡಿದ ವ್ಯಕ್ತಿಗಳಿಗೆ ನೀಡುವ ಅತ್ಯುನ್ನತ ಗೌರವಗಳಲ್ಲಿ ಒಂದಾಗಿದೆ. ಇದು ಶೈಕ್ಷಣಿಕ ಪರೀಕ್ಷೆ ಅಥವಾ ಸಂಶೋಧನೆಯ ಮೂಲಕ ಪಡೆಯುವ ಪದವಿ ಅಲ್ಲ, ಬದಲಾಗಿ ಶಿಕ್ಷಣ, ವಿಜ್ಞಾನ, ಕಲೆ, ಸಾಹಿತ್ಯ, ಸಾಮಾಜಿಕ ಸೇವೆ ಅಥವಾ ಸಾರ್ವಜನಿಕ ಜೀವನದಲ್ಲಿ ಅಪಾರ ಕೊಡುಗೆ ನೀಡಿದ ವ್ಯಕ್ತಿಗಳನ್ನು ಗುರುತಿಸಲು ನೀಡಲಾಗುವ ಗೌರವವಾಗಿದೆ.
ವಿಶ್ವದ ಶ್ರೇಷ್ಠ ವಿವಿಗಳು ಈ ಗೌರವವನ್ನು ಅತ್ಯಂತ ಕಠಿಣ ಮಾನದಂಡಗಳ ಆಧಾರದ ಮೇಲೆ ನೀಡುತ್ತವೆ ಮತ್ತು ಯಾವುದೇ ಹಣಕಾಸು ಅಥವಾ ರಾಜಕೀಯ ಪ್ರಭಾವಕ್ಕೆ ಅವಕಾಶ ನೀಡುವು ದಿಲ್ಲ. ಗೌರವ ಡಾಕ್ಟರೇಟ್ ಎಂಬುದು ಅತ್ಯಂತ ಗೌರವಪೂರ್ಣ ಪದವಿ ಆಗಿದ್ದು, ಅದು ಸಮಾಜಕ್ಕೆ ನೀಡಿದ ವಿಶಿಷ್ಟ ಕೊಡುಗೆಗಳಿಗೆ ನೀಡಲಾಗುವ ಗುರುತಾಗಿದೆ.
ಆದರೆ, ಇತ್ತೀಚೆಗೆ ಭಾರತದ ಹಲವಾರು ವಿಶ್ವವಿದ್ಯಾನಿಲಯಗಳಲ್ಲಿ ಈ ಗೌರವ ಪದವಿಯ ನೈಜ ಅರ್ಥ ಮತ್ತು ಮೌಲ್ಯವನ್ನು ಕುಗ್ಗಿಸುವಂತಹ ಘಟನೆಗಳು ಬೆಳೆಯುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಗೌರವ ಡಾಕ್ಟರೇಟ್‌ಗಳ ದುರುಪಯೋಗ, ಹಣಕ್ಕಾಗಿ ನೀಡುವ ಪದವಿಗಳು, ಸ್ವಜನ ಪಕ್ಷಪಾತ, ಜಾತಿ, ದಾಕ್ಷಿಣ್ಯ ಮತ್ತು ರಾಜಕೀಯ ಪ್ರಭಾವದ ಕುರಿತು ಗಂಭೀರ ಚರ್ಚೆಗಳು ನಡೆಯುತ್ತಿವೆ. ಇಂತಹ ಪದವಿ ಪಡೆದವರು ತಮ್ಮ ಹೆಸರಿನ ಮುಂದೆ ಡಾ. ಎಂದು ಬರೆದುಕೊಳ್ಳುವಂತಿಲ್ಲ ಎಂಬ ಕನಿಷ್ಠ ಜ್ಞಾನವು ಹೆಚ್ಚಿನವರಿಗೆ ಇರುವು ದಿಲ್ಲ ಎನ್ನುವ ಅಂಶ ಕಂಡುಬಂದಿದೆ!
ಭಾರತದಲ್ಲಿ ಹೆಚ್ಚಿನ ಸರಕಾರಿ ವಿವಿಗಳು ಅರ್ಹತೆ ಇಲ್ಲದ ವ್ಯಕ್ತಿಗಳಿಗೆ ಗೌರವ ಡಾಕ್ಟರೇಟ್ ನೀಡು ತ್ತವೆ ಮತ್ತು ನಿಜವಾದ ಸಾಧಕರನ್ನು ಕಡೆಗಣಿಸಲಾಗುತ್ತದೆ ಎನ್ನುವ ಆರೋಪ ಬಹಳಷ್ಟು ವರ್ಷ ಗಳಿಂದ ಕೇಳಿ ಬರುತ್ತಿದೆ. ಘಟಿಕೋತ್ಸವ ಬಂತೆಂದರೆ ಗೌರವ ಡಾಕ್ಟರೇಟ್ ಪದವಿಗಳಿಗೆ ಸುಗ್ಗಿ ಕಾಲ.
ನಮ್ಮ ಹೆಚ್ಚಿನ ವಿವಿಗಳಲ್ಲಿ ಸ್ವಜನ ಪಕ್ಷಪಾತ ಆಧಾರಿತ ಗೌರವ ಡಾಕ್ಟರೇಟ್‌ಗಳೇ ಸಾಮಾನ್ಯ. ಕೆಲವು ವಿಶ್ವವಿದ್ಯಾಲಯಗಳಲ್ಲಿ ಗೌರವ ಡಾಕ್ಟರೇಟ್‌ಗಳನ್ನು ನಿಜವಾದ ಸಾಧನೆ ಆಧಾರದ ಮೇಲೆ ಅಲ್ಲದೆ, ಉಪಕುಲಪತಿಗಳ ಮತ್ತು ಆಡಳಿತ ಮಂಡಳಿಗಳ ವೈಯಕ್ತಿಕ ಸಂಬಂಧಗಳು, ರಾಜಕೀಯ ಪ್ರಭಾವ ಅಥವಾ ಆರ್ಥಿಕ ಶಕ್ತಿಯ ಆಧಾರದ ಮೇಲೆ ನೀಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ ಮತ್ತು ಹೆಚ್ಚಿನವು ಸಾಬೀತಾಗಿವೆ ಕೂಡ.
ಇಂತಹ ಪದವಿ ವಿಜೇತರ ಸಾಧನೆ ದುರ್ಬಿನ್ ಹಾಕಿ ಹುಡುಕಿದರೂ ನಮಗೆ ಸಿಗುವುದಿಲ್ಲ! ಇಂತಹ ಘಟನೆಗಳು ಶಿಕ್ಷಣ ಸಂಸ್ಥೆಗಳ ನೈತಿಕತೆಯನ್ನು ಕುಗ್ಗಿಸುತ್ತದೆ ಮತ್ತು ಸಾರ್ವಜನಿಕ ನಂಬಿಕೆಯನ್ನು ಹಾನಿಗೊಳಿಸುತ್ತದೆ. ವಿವಿಗಳಿಗೆ ದಾನ ನೀಡಿದ ವ್ಯಕ್ತಿಗಳು, ಮಂತ್ರಿಗಳು ಅಥವಾ ರಾಜಕೀಯವಾಗಿ ಪ್ರಭಾವಶಾಲಿಗಳು ಗೌರವ ಡಾಕ್ಟರೇಟ್ ಪಡೆಯುತ್ತಿರುವುದು ವಿವಾದಕ್ಕೆ ಇನ್ನೊಂದು ಕಾರಣ ವಾಗಿದೆ.
ಇಂತಹ ಬೆಳವಣಿಗೆಗಳು ಶಿಕ್ಷಣದ ಸ್ವತಂತ್ರತೆಯನ್ನು ಪ್ರಶ್ನೆಗೆ ಒಳಪಡಿಸುತ್ತವೆ ಮತ್ತು ವಿಶ್ವವಿದ್ಯಾ ಲಯಗಳ ಮೇಲಿನ ಗೌರವವನ್ನು ಕಡಿಮೆ ಮಾಡುತ್ತವೆ. ಭಾರತದಲ್ಲಿ ಅನೇಕ ವಿಶ್ವವಿದ್ಯಾಲಯಗಳು ಸರಕಾರದ ಅನುದಾನ ಮತ್ತು ಆಡಳಿತಾತ್ಮಕ ಅನುಮೋದನೆಗಳ ಮೇಲೆ ಅವಲಂಬಿತವಾಗಿರುವು ದರಿಂದ, ಕೆಲವೊಮ್ಮೆ ರಾಜಕೀಯ ಒತ್ತಡ ಅಥವಾ ಸಂಬಂಧಗಳ ಕಾರಣದಿಂದ ವಿವಿಗಳು ಗೌರವ ಡಾಕ್ಟರೇಟ್‌ಗಳನ್ನು ನೀಡುತ್ತಿವೆ ಎಂಬ ಅಭಿಪ್ರಾಯ ಸಹ ವ್ಯಕ್ತವಾಗುತ್ತಿದೆ.
ರಾಜಕೀಯ ನಾಯಕರಿಗೆ ಅಥವಾ ಸಾರ್ವಜನಿಕ ವ್ಯಕ್ತಿಗಳಿಗೆ ಅವರ ಶೈಕ್ಷಣಿಕ ಸಾಧನೆಗಿಂತ ರಾಜಕೀಯ ಸ್ಥಾನಮಾನ ಅಥವಾ ಪ್ರಭಾವದ ಆಧಾರದ ಮೇಲೆ ಗೌರವ ನೀಡಲಾಗುತ್ತದೆ ಎಂಬ ಆರೋಪಗಳು ಸಾಮಾನ್ಯವಾಗಿವೆ. ಇದರಿಂದ ಶಿಕ್ಷಣ ಸಂಸ್ಥೆಗಳು ತಮ್ಮ ಮೂಲ ಉದ್ದೇಶದಿಂದ ದೂರ ಸರಿಯುವ ಸಾಧ್ಯತೆ ಹೆಚ್ಚುತ್ತದೆ ಮತ್ತು ಗೌರವ ಪದವಿಯ ನೈಜ ಅರ್ಥ ಹಾನಿಯಾಗುತ್ತದೆ.
ಇತ್ತೀಚಿನ ವರ್ಷಗಳಲ್ಲಿ ರಾಜ್ಯದ ವಿವಿಗಳ ಗೌರವ ಡಾಕ್ಟರೇಟ್ ನೀಡುವ ಪ್ರಕ್ರಿಯೆ ಕುರಿತು ಹಲವು ವಿವಾದಗಳು ಮತ್ತು ಚರ್ಚೆಗಳು ನಡೆದಿವೆ. ಕರಾವಳಿ ಭಾಗದ ಒಂದು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಆಯ್ಕೆ ಪ್ರಕ್ರಿಯೆಯ ಬಗ್ಗೆ ಇತ್ತೀಚೆಗೆ ವಿವಾದಗಳು ಉಂಟಾಗಿತ್ತು. ಗೌರವ ಡಾಕ್ಟರೇಟ್ ಆಯ್ಕೆ ಪ್ರಕ್ರಿಯೆಯಲ್ಲಿಯೇ ನಿಯಮ ಉಲ್ಲಂಘನೆ ಮತ್ತು ಪಾರದರ್ಶಕತೆಯ ಕೊರತೆ ಇದೆ ಎಂಬ ಆರೋಪಗಳು ಕೂಡ ಕೇಳಿಬಂದಿತ್ತು.
ಈ ವಿಶ್ವವಿದ್ಯಾಲಯವು ಉದ್ಯಮಿಗಳು ಮತ್ತು ಆರ್ಥಿಕವಾಗಿ ಶಕ್ತಿಶಾಲಿ ವ್ಯಕ್ತಿಗಳಿಗೆ ಗೌರವ ಡಾಕ್ಟರೇಟ್ ನೀಡಿದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಪ್ರಶ್ನೆಗಳು ಅಂದು ಎದ್ದಿತ್ತು. ಇತ್ತೀಚೆಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ನೀಡಿದ ಗೌರವ ಡಾಕ್ಟರೇಟ್ ವಿಚಾರದಲ್ಲಿ ಬೋರ್ಡ್ ಸದಸ್ಯರ ನಡುವೆ ಬಹಿರಂಗ ಅಸಮಾಧಾನ ಉಂಟಾಗಿತ್ತು.
ಸಮಿತಿಯ ಸದಸ್ಯರು ತಮ್ಮ ಪಾತ್ರವನ್ನು ಸರಿಯಾಗಿ ನಿರ್ವಹಿಸಲು ಅವಕಾಶ ನೀಡಲಾಗಲಿಲ್ಲ ಎಂಬ ದೂರುಗಳನ್ನು ನೀಡಿದ್ದು, ಪ್ರಕ್ರಿಯೆಯ ನ್ಯಾಯತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಇಂತಹ ಆಯ್ಕೆಗಳಲ್ಲಿ ಶೈಕ್ಷಣಿಕ ಸಾಧನೆಗಿಂತ ತಮಗೆ ಬೇಕಾದವರಿಗೆ ಪದವಿ ನೀಡಲಾಗಿದೆ ಎಂಬ ಆರೋಪವಿದೆ.
ಇಂತಹ ನಡೆಗಳು ಶಿಕ್ಷಣದ ಮೂಲ ಮೌಲ್ಯವನ್ನು ಹಾಳುಮಾಡುತ್ತವೆ ಎಂದು ವಿಮರ್ಶಕರು ಹೇಳುತ್ತಾರೆ. ಇನ್ನೊಂದು ಗಮನಾರ್ಹ ವಿಷಯವೆಂದರೆ ಕೆಲವು ಪ್ರಸಿದ್ಧ ವ್ಯಕ್ತಿಗಳು ತಮ್ಮಿಗೆ ಬಂದ ಗೌರವ ಡಾಕ್ಟರೇಟ್‌ಗಳನ್ನು ಸ್ವೀಕರಿಸಲು ನಿರಾಕರಿಸುತ್ತಿರುವುದು ಹೊಸ ಚರ್ಚೆಯನ್ನು ಹುಟ್ಟು ಹಾಕುತ್ತಿದೆ. ಇಂತಹ ಪದವಿಗಳು ಅವರಿಗೇ ಮುಜುಗರ ಉಂಟುಮಾಡುತ್ತಿವೆ!.
ಕರ್ನಾಟಕದಲ್ಲಿನ ವಿವಿಗಳ ಈ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಸರಕಾರವು ಇತ್ತೀಚೆಗೆ ವಿಶ್ವವಿದ್ಯಾಲಯಗಳಲ್ಲಿ ಗೌರವ ಡಾಕ್ಟರೇಟ್ ನೀಡುವ ಪ್ರಕ್ರಿಯೆಯನ್ನು ನಿಯಂತ್ರಿಸಲು ಹೊಸ ಮಾರ್ಗಸೂಚಿಗಳನ್ನು ರೂಪಿಸುವ ಬಗ್ಗೆ ಚರ್ಚೆ ಆರಂಭಿಸಿ ಕೆಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತ್ತು.
ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಒಂದೇ ರೀತಿಯ ಮಾನದಂಡ ಮತ್ತು ಪಾರದರ್ಶಕತೆ ಯನ್ನು ತರಲು ತಜ್ಞ ಸಮಿತಿ ರಚಿಸುವ ಪ್ರಸ್ತಾವನೆ ಕೂಡ ಮುಂದೆ ಇಡಲಾಗಿತ್ತು. ಒಂದು ವಿವಿ ಕೇವಲ ಇಬ್ಬರಿಗೆ ಮಾತ್ರ ಗೌರವ ಡಾಕ್ಟರೇಟ್ ಕೊಡುವ ಪದ್ಧತಿಯನ್ನು ಜಾರಿಗೆ ತರುವ ಕುರಿತು ಆಲೋಚಿಸಲಾಗಿತ್ತು. ಆದರೆ, ಇದ್ಯಾವುದೂ ಜಾರಿಗೆ ಬಂದಂತಿಲ್ಲ. ವಿವಿಗಳು ಕಳಿಸುವ ಪಟ್ಟಿಯನ್ನು ರಾಜ್ಯಪಾಲರು ಕಣ್ಣುಮುಚ್ಚಿ ಒಪ್ಪಿಕೊಳ್ಳುತ್ತಿದ್ದಾರೆ ಅಥವಾ ಪಟ್ಟಿಗೆ ತಮಗೆ ಬೇಕಾದದವರ ಹೆಸರನ್ನು ಸೇರಿಸಿ ಪಟ್ಟಿಯ ಗಾತ್ರವನ್ನು ಹಿಗ್ಗಿಸುತ್ತಿದ್ದಾರೆ ಎನ್ನುವ ಮಾತಿದೆ.
ಖಾಸಗಿ ಮತ್ತು ಡೀಮ್ಡ್ ವಿವಿಗಳಲ್ಲಂತು ಗೌರವ ಡಾಕ್ಟರೇಟ್‌ಗಳ ಬಗ್ಗೆ ಮಾತನಾಡದಿರುವುದೇ ಒಳ್ಳೆಯದು.ಈ ಸಮಸ್ಯೆಗಳ ಪರಿಣಾಮಗಳು ಬಹಳ ಗಂಭೀರವಾಗಿವೆ. ಮೊದಲನೆಯದಾಗಿ, ನಿಜವಾದ ಸಾಧಕರಿಗೆ ನೀಡುವ ಗೌರವದ ಮೌಲ್ಯ ಕುಗ್ಗುತ್ತಿದೆ.
ಎರಡನೆಯದಾಗಿ, ಸಾರ್ವಜನಿಕರು ವಿಶ್ವವಿದ್ಯಾಲಯಗಳ ಮೇಲೆ ಇಟ್ಟಿರುವ ನಂಬಿಕೆ ಕಡಿಮೆ ಯಾಗುತ್ತಿದೆ. ಮೂರನೆಯದಾಗಿ, ಶಿಕ್ಷಣ ಕ್ಷೇತ್ರದಲ್ಲಿ ವಂಚನೆ ಮತ್ತು ನಕಲಿ ಸಂಸ್ಥೆಗಳ ಬೆಳವಣಿಗೆಗೆ ಪ್ರೋತ್ಸಾಹ ಸಿಗುತ್ತಿದೆ. ನಾಲ್ಕನೆಯದಾಗಿ, ಪರಿಶ್ರಮದಿಂದ ಸಾಧನೆ ಮಾಡಿದ ವ್ಯಕ್ತಿಗಳ ಗೌರವ ಕಡಿಮೆಯಾಗುತ್ತಿದೆ ಮತ್ತು ಇದು ಸಾಮಾಜಿಕ ಅನ್ಯಾಯಕ್ಕೆ ಕಾರಣವಾಗುತ್ತಿದೆ.
ಇಂತಹ ಪರಿಸ್ಥಿತಿ ಮುಂದುವರಿದರೆ, ಶಿಕ್ಷಣದ ಮೂಲ ಉದ್ದೇಶವೇ ಹಾನಿಯಾಗುವ ಅಪಾಯ ಇದೆ. ಇದೆಲ್ಲದರ ಮಧ್ಯೆ ಗೌರವ ಡಾಕ್ಟರೇಟ್ ನೀಡುವ ನಕಲಿ ಸಂಸ್ಥೆಗಳ ಬಗ್ಗೆ ಇಲ್ಲಿ ಹೇಳಬೇಕು. ದೇಶದ ಕೆಲ ಭಾಗಗಳಲ್ಲಿ ‘ಹಣ ಪಾವತಿಸಿದರೆ ಡಾಕ್ಟರೇಟ್ ನೀಡಲಾಗುತ್ತದೆ’ ಎಂಬ ರೀತಿಯ ಮೋಸ ಪ್ರಕರಣಗಳು ದಾಖಲಾಗಿವೆ.
ಇಂತಹ ಸಂಸ್ಥೆಗಳು ಅಧಿಕೃತ ಮಾನ್ಯತೆ ಇಲ್ಲದೆ ಕಾರ್ಯನಿರ್ವಹಿಸುತ್ತಿದ್ದು, ಜನರನ್ನು ತಪ್ಪು ದಾರಿಯಲ್ಲಿ ನಡೆಸುತ್ತಿವೆ. ಭಾರತದಲ್ಲಿ ಕೆಲವು ಅನಧಿಕೃತ ಸಂಸ್ಥೆಗಳು ‘ಇನ್ಸ್ಟಂಟ್ ಗೌರವ ಡಾಕ್ಟ ರೇಟ್’, ‘ಡಾಕ್ಟರೇಟ್ ಖರೀದಿಸಿ’ ಎಂಬ ರೀತಿಯ ಜಾಹೀರಾತುಗಳನ್ನು ನೀಡಿ ಜನರನ್ನು ಮೋಸ ಗೊಳಿಸುತ್ತಿರುವ ಘಟನೆಗಳು ಕಂಡುಬಂದಿವೆ. ಇಂತಹ ಸಂಸ್ಥೆಗಳು ಯಾವುದೇ ಮಾನ್ಯತೆ ಹೊಂದಿಲ್ಲದ ವಿವಿಗಳ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತವೆ ಮತ್ತು ಹಣ ಪಾವತಿಸಿದರೆ ಗೌರವ ಡಾಕ್ಟರೇಟ್ ನೀಡುತ್ತವೆ.
ಇತ್ತೀಚೆಗೆ ಮಂಡ್ಯ ಜಿಲ್ಲೆ ಒಂದರಲ್ಲೇ ತಮಿಳುನಾಡಿನ ಖಾಸಗಿ ವಿವಿಯೊಂದು ಸುಮಾರು 350 ಜನರಿಗೆ ಗೌರವ ಡಾಕ್ಟರೇಟ್ ನೀಡಿ ಸುದ್ದಿಯಾಗಿತ್ತು. ಈ ರೀತಿಯ ಗೌರವ ಪದವಿಗಳು ಯಾವುದೇ ಶೈಕ್ಷಣಿಕ ಮೌಲ್ಯ ಹೊಂದಿರುವುದಿಲ್ಲ ಮತ್ತು ಮಾನ್ಯತೆ ಪಡೆಯುವುದಿಲ್ಲ. ಇಂತಹ ವಂಚನೆಗಳು ಜನರಲ್ಲಿ ಶಿಕ್ಷಣದ ಬಗ್ಗೆ ತಪ್ಪು ಕಲ್ಪನೆಗಳನ್ನು ಹುಟ್ಟಿಸುತ್ತವೆ ಮತ್ತು ನಿಜವಾದ ಸಾಧಕರ ಗೌರವ ವನ್ನು ಕುಗ್ಗಿಸುತ್ತವೆ.
ವಿಶೇಷವಾಗಿ ಸಾಮಾಜಿಕ ಮಾಧ್ಯಮಗಳ ಮೂಲಕ ಇಂತಹ ಮೋಸಗಳು ಹೆಚ್ಚುತ್ತಿರುವುದು ಗಮನಾರ್ಹವಾಗಿದೆ. ಕರ್ನಾಟಕದಲ್ಲಿಯೂ ಇತ್ತೀಚೆಗೆ ಇಂತಹ ಜಾಹೀರಾತುಗಳು ಕಂಡುಬಂದಿದ್ದು, ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಅತ್ಯಂತ ಅಗತ್ಯ. ಬಹಳಷ್ಟು ಜನರು ಇಂತಹ ನಕಲಿ ಪದವಿಗಳ ಬಗ್ಗೆ ತಿಳಿಯದೇ ಮೋಸಕ್ಕೆ ಒಳಗಾಗುತ್ತಾರೆ.
ಇದಕ್ಕೆ ಪರಿಹಾರ ಎಂದರೆ ಮೊದಲನೆಯದಾಗಿ, ಗೌರವ ಡಾಕ್ಟರೇಟ್ ನೀಡುವ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕವಾಗಿರಬೇಕು ಮತ್ತು ಆಯ್ಕೆ ಮಾನದಂಡಗಳನ್ನು ಮತ್ತು ಸಾಧಕರ ವಿವರವನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು.
ಎರಡನೆಯದಾಗಿ, ವಿವಿಗಳಿಗೆ ಸಾಧಕರ ಆಯ್ಕೆ ಮಾಡುವ ಅಧಿಕಾರ ನೀಡಬಾರದು. ಬದಲಾಗಿ ವಿವಿಗಳ ಪರವಾಗಿ ಸ್ವತಂತ್ರ ಮತ್ತು ನೈತಿಕ ಸಮಿತಿಗಳ ಮೂಲಕ ಮಾತ್ರ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು. ಕೇವಲ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಗೆ ಮಾತ್ರ ಈ ಪದವಿಯನ್ನು ನೀಡುವ ಅಧಿಕಾರ ಇರಬೇಕು.
ನಾಲ್ಕನೆಯದಾಗಿ, ಸರಕಾರ ನಕಲಿ ವಿಶ್ವವಿದ್ಯಾಲಯಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳ ಬೇಕು. ಇವುಗಳ ಮಧ್ಯೆ ಕೆಲ ವಿವಿಗಳು ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಿವೆ ಮತ್ತು ಗೌರವ ಡಾಕ್ಟರೇಟ್ ನೀಡುವಲ್ಲಿ ನಿರ್ದಿಷ್ಟ ಪ್ರಕ್ರಿಯೆಗಳನ್ನು ಪಾಲಿಸುತ್ತಿವೆ.
ಒಟ್ಟಿನಲ್ಲಿ, ವಿವಿಗಳ ಗೌರವ ಡಾಕ್ಟರೇಟ್ ವ್ಯವಸ್ಥೆಯಲ್ಲಿ ಕೆಲವೊಂದು ಕಡೆಗಳಲ್ಲಿ ಪಾರದರ್ಶಕತೆ ಕೊರತೆ, ಪ್ರಭಾವದ ಬಳಕೆ ಮತ್ತು ಮಾನದಂಡಗಳ ಅಸಮತೋಲನ ಇದೆ ಎನ್ನುವುದಂತು ಸತ್ಯ. ಆದರೆ ಮತ್ತೊಂದೆಡೆ ಕೆಲವು ವಿವಿಗಳು ಇನ್ನೂ ಶ್ರೇಷ್ಠ ಸಾಧಕರಿಗೆ ಮಾತ್ರ ಈ ಗೌರವವನ್ನು ನೀಡುತ್ತಿವೆ ಎಂಬುದನ್ನೂ ಗಮನಿಸಬೇಕು.
ಶಿಕ್ಷಣ ವ್ಯವಸ್ಥೆಯಲ್ಲಿ ಖಾಸಗಿ ವಿವಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಕೆಲವು ಸಂದರ್ಭ ಗಳಲ್ಲಿ ಪಾರದರ್ಶಕತೆ ಮತ್ತು ಮಾನದಂಡಗಳ ಕುರಿತು ಪ್ರಶ್ನೆಗಳು ಸಹ ಎದ್ದಿವೆ. ಇದು ಸಂಪೂರ್ಣ ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಯಾಗಿದ್ದು, ಎಲ್ಲ ಸಂಸ್ಥೆಗಳನ್ನು ಒಂದೇ ರೀತಿಯಲ್ಲಿ ನೋಡ ಲಾಗುವುದಿಲ್ಲ ಎನ್ನುವುದು ಸಹ ಸತ್ಯ.
ಗೌರವ ಡಾಕ್ಟರೇಟ್ ಎಂಬುದು ಅತ್ಯಂತ ಗೌರವಪೂರ್ಣ ಪದವಿ ಆಗಿದ್ದು, ಅದು ಸಮಾಜಕ್ಕೆ ನೀಡಿದ ವಿಶಿಷ್ಟ ಕೊಡುಗೆಗಳಿಗೆ ನೀಡಲಾಗುವ ಗುರುತಾಗಿದೆ. ಆದರೆ ಹಣ, ರಾಜಕೀಯ ಪ್ರಭಾವ ಮತ್ತು ಸ್ವಜನ ಪಕ್ಷಪಾತ ಕಾರಣದಿಂದ ಅದರ ನೈಜ ಮೌಲ್ಯಕ್ಕೆ ಹಾನಿಯಾಗುತ್ತಿದೆ. ಶಿಕ್ಷಣ ಕ್ಷೇತ್ರ ದಲ್ಲಿ ಪಾರದರ್ಶಕತೆ, ನೈತಿಕತೆ ಮತ್ತು ನ್ಯಾಯತೆಯು ಉಳಿದಾಗ ಮಾತ್ರ ವಿವಿಗಳ ಗೌರವ ಡಾಕ್ಟರೇಟ್ ತನ್ನ ನಿಜವಾದ ಅರ್ಥವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಮತ್ತು ಅದು ಸಮಾಜಕ್ಕೆ ಉತ್ತಮ ಸಂದೇಶ ನೀಡಿದಂತಾಗುತ್ತದೆ.