ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Shreekantha Chaukimath Column: ರಾಜಕೀಯದಾಟದಲ್ಲಿ ವೀರಶೈವ ಲಿಂಗಾಯತರು ಕಾರ್ಡ್‌ʼಗಳಾ ?

ಒಬ್ಬ ರಾಜಕೀಯ ನಾಯಕ ತನ್ನ ಹಳೆಯ ವ್ಯಸನವನ್ನು ನೆನಪಿಸಿಕೊಳ್ಳುವ ಕ್ಷಣದಲ್ಲಿ, ನಾವು ಇನ್ನೊಂದು ಪ್ರಶ್ನೆ ಕೇಳಲೇಬೇಕು- ನಿರ್ಧಾರಗಳನ್ನು ರೂಪಿಸುವ ಮನಸ್ಥಿತಿ ಯಾವುದು? ವ್ಯಕ್ತಿಯ ಮನೋವೈಶಿಷ್ಟ್ಯಗಳು ರಾಜಕೀಯ ಕ್ರಮಗಳಲ್ಲಿ ಪ್ರತಿಫಲಿಸು ತ್ತವೆಯೇ? ಈ ಪ್ರಶ್ನೆಯ ಹಾದಿಯನ್ನು ಹಿಡಿದಾಗ, ಇಸ್ಪೀಟ್ ಆಟದ ಮನೋವಿಜ್ಞಾನವನ್ನು ನೋಡದೇ ಇರಲು ಸಾಧ್ಯ ವಿಲ್ಲ.

ಧರ್ಮಕಾರಣ

ಶ್ರೀಕಂಠ ಚೌಕೀಮಠ

ಇತ್ತೀಚೆಗೆ ಬೆಂಗಳೂರಿನಲ್ಲಿ ದಿ. ಪಿ.ಲಂಕೇಶ್ ಅವರ ‘ಟೀಕೆ-ಟಿಪ್ಪಣಿ’ ಸಂಪುಟಗಳ ಬಿಡುಗಡೆ ಸಂದರ್ಭದಲ್ಲಿ ಒಂದು ಆಸಕ್ತಿದಾಯಕ, ಆದರೆ ಅಷ್ಟೇ ಅರ್ಥಗರ್ಭಿತ ಕ್ಷಣ ಮೂಡಿ ಬಂತು.

1984ರಲ್ಲಿ ಲಂಕೇಶ್ ಅವರು ಮಾಡಿದ ಟೀಕೆಗಳನ್ನು ನೆನಪಿಸಿಕೊಂಡ ಸಿದ್ಧರಾಮಯ್ಯ ಅವರು, ‘ಇಸ್ಪೀಟ್ ಗುಲಾಮ ಮಾಡಿದ ಮೋಸ’ ಎಂಬ ಆರೋಪವನ್ನೂ, ತಮ್ಮ ಇಸ್ಪೀಟ್ ಆಟದ ವ್ಯಸನವನ್ನೂ ಸ್ಮರಿಸಿದರು.

ಮೇಲ್ನೋಟಕ್ಕೆ ಇದು ಒಂದು ಸಾಮಾನ್ಯ ಸ್ಮರಣೆ ಎಂದು ಕಾಣಬಹುದು. ಆದರೆ ಸಮಾಜದ ಒಂದು ಭಾಗವಾಗಿ, ವಿಶೇಷವಾಗಿ ವೀರಶೈವ ಲಿಂಗಾಯತ ಸಮುದಾಯದ ಅನುಭವದ ಬೆಳಕಿನಲ್ಲಿ ನೋಡಿದಾಗ, ಈ ಸ್ಮರಣೆ ಕೇವಲ ನೆನಪಾಗಿ ಉಳಿಯುವುದಿಲ್ಲ- ಅದು ಒಂದು ಪ್ರಶ್ನೆಯಾಗಿ, ಒಂದು ಆತಂಕವಾಗಿ, ಒಂದು ಅಸಹಜ ಅನುಮಾನವಾಗಿ ನಮ್ಮ ಮುಂದೆ ನಿಂತುಕೊಳ್ಳುತ್ತದೆ.

ಒಬ್ಬ ರಾಜಕೀಯ ನಾಯಕ ತನ್ನ ಹಳೆಯ ವ್ಯಸನವನ್ನು ನೆನಪಿಸಿಕೊಳ್ಳುವ ಕ್ಷಣದಲ್ಲಿ, ನಾವು ಇನ್ನೊಂದು ಪ್ರಶ್ನೆ ಕೇಳಲೇಬೇಕು- ನಿರ್ಧಾರಗಳನ್ನು ರೂಪಿಸುವ ಮನಸ್ಥಿತಿ ಯಾವುದು? ವ್ಯಕ್ತಿಯ ಮನೋವೈಶಿಷ್ಟ್ಯಗಳು ರಾಜಕೀಯ ಕ್ರಮಗಳಲ್ಲಿ ಪ್ರತಿಫಲಿಸು ತ್ತವೆಯೇ? ಈ ಪ್ರಶ್ನೆಯ ಹಾದಿಯನ್ನು ಹಿಡಿದಾಗ, ಇಸ್ಪೀಟ್ ಆಟದ ಮನೋವಿಜ್ಞಾನವನ್ನು ನೋಡದೇ ಇರಲು ಸಾಧ್ಯವಿಲ್ಲ.

ಇಸ್ಪೀಟ್ ಆಟವು ಕೇವಲ ಮನರಂಜನೆ ಅಲ್ಲ. ಅದು ಒಂದು ಮನಸ್ಥಿತಿ. ಅದರಲ್ಲಿ ಅಪಾಯ ವನ್ನು ಸ್ವೀಕರಿಸುವ ಮನೋಭಾವ ಇದೆ; ಅನಿಶ್ಚಿತತೆಯ ಉತ್ಸಾಹ ಕಂಡುಕೊಳ್ಳುವ ಸ್ವಭಾವ ಇದೆ.

ಇದನ್ನೂ ಓದಿ: Dr Vijay Darda Column: ಯುದ್ಧವನ್ನು ಯಾರ ಗೆದ್ದರೂ ಗೋಳು ಜನಸಾಮಾನ್ಯರದ್ದೇ !

ಮನೋವಿಜ್ಞಾನದಲ್ಲಿ ಇದನ್ನು risk-seeking behaviour ಎಂದು ಕರೆಯುತ್ತಾರೆ. ತ್ವರಿತ ಜಯದ ಆಕರ್ಷಣೆ ಅದರಲ್ಲಿ ಅಡಕವಾಗಿದೆ- ಕ್ಷಣಾರ್ಧದಲ್ಲಿ ಗೆಲುವು ಸಿಗುವ ಸಾಧ್ಯತೆ ಆಟಗಾರನನ್ನು ಆಟದ ಕಡೆಗೆ ಮತ್ತೆ ಮತ್ತೆ ಎಳೆಯುತ್ತದೆ.

ಇದು ಶ್ರಮವಿಲ್ಲದೆ ಫಲ ಪಡೆಯುವ ಮನೋಭಾವವನ್ನೂ ಬೆಳೆಸಬಹುದು. ಇದು ಮಾತ್ರ ವಲ್ಲ. ಇಸ್ಪೀಟ್ ಆಟ ಸಾಮಾನ್ಯವಾಗಿ ಗುಂಪಿನಲ್ಲಿ ನಡೆಯುತ್ತದೆ. ಗುಂಪಿನ ಒತ್ತಡ- peer pressure - ವ್ಯಕ್ತಿಯ ನಿರ್ಧಾರಗಳನ್ನು ಬದಲಾಯಿಸುತ್ತದೆ. ಆರಂಭದಲ್ಲಿ ಕೇವಲ ಸಮಯ ಕಳೆಯಲು ಪ್ರವೇಶಿಸಿದ ಆಟಗಾರ, ನಿಧಾನವಾಗಿ ಅದೇ ಆಟದೊಳಗೆ ಸಿಲುಕಿ ಕೊಳ್ಳುತ್ತಾನೆ. ಆಟದಲ್ಲಿ ಅದೃಷ್ಟ ಪ್ರಮುಖವಾದರೂ, ಆಟಗಾರನು ತನ್ನ ಕೌಶಲದಿಂದ ಎಲ್ಲವನ್ನೂ ನಿಯಂತ್ರಿಸಬಹುದು ಎಂಬ ಭ್ರಮೆಗೆ ಒಳಗಾಗುತ್ತಾನೆ.

ಇದನ್ನೇ illusion of control ಎಂದು ಕರೆಯುತ್ತಾರೆ. ಈ ಭ್ರಮೆ ಬಲವಾದಂತೆ, ಆಟ ವ್ಯಸನ ವಾಗುತ್ತದೆ. ಆಗ ಆಟಗಾರನಿಗೆ ಆಟದ ಪರಿಣಾಮಗಳಿಗಿಂತ ಗೆಲುವಿನ ಉತ್ಸಾಹವೇ ಮುಖ್ಯ ವಾಗುತ್ತದೆ. ಈ ಮನೋವಿಜ್ಞಾನವನ್ನು ರಾಜಕೀಯದ ಮೇಲಿಟ್ಟು ನೋಡಿದಾಗ, ಒಂದು ಕಟುವಾದ ಸತ್ಯ ನಮ್ಮ ಮುಂದೆ ಮೂಡುತ್ತದೆ.

ಕೆಲವೊಮ್ಮೆ ರಾಜಕೀಯವು ಚದುರಂಗದಂತಲ್ಲದೇ ಇಸ್ಪೀಟ್ ಆಟದಂತೆಯೇ ಕಾಣುತ್ತದೆ. ಚದುರಂಗದಲ್ಲಿ ನಿಯಮಗಳಿವೆ, ತಂತ್ರದ ನಿರಂತರತೆ ಇದೆ. ಆದರೆ ಇಸ್ಪೀಟ್ ಆಟದಲ್ಲಿ ಅನಿಶ್ಚಿತತೆಯೇ ಮುಖ್ಯವಾಗಿರುತ್ತದೆ. ಕಾರ್ಡ್ ಕೈಗೆ ಬಂದಾಗ ಯಾರಿಗೆ ಏನು ಸಿಗುತ್ತದೆ ಎಂಬುದು ಗೊತ್ತಿಲ್ಲ. ಆದರೂ ಗೆಲುವಿಗಾಗಿ ಆಟ ಮುಂದುವರಿಯುತ್ತದೆ.

ಒಮ್ಮೆ ಗೆಲುವಿನ ರುಚಿ ಸಿಕ್ಕ ನಂತರ, ಆಟಗಾರನು ಇನ್ನಷ್ಟು ಧೈರ್ಯವಾಗಿ ಆಡುತ್ತಾನೆ. ಅವನಿಗೆ ಕಾರ್ಡ್‌ಗಳು ಕೇವಲ ಸಾಧನಗಳಾಗಿ ಬಿಡುತ್ತವೆ. ಇದೇ ಮನೋಭಾವವು ರಾಜಕೀಯದಲ್ಲೂ ಕಾಣಿಸಿಕೊಂಡರೆ, ಅಲ್ಲಿ ಸಮುದಾಯಗಳು ಕಾರ್ಡ್‌ಗಳಾಗುತ್ತವೆ. ಭಾವನೆಗಳು ಲೆಕ್ಕಾಚಾರವಾಗುತ್ತವೆ. ಏಕತೆ ಪಣವಾಗುತ್ತದೆ.

ಈ ಇಸ್ಪೀಟ್ ಆಟದಲ್ಲಿ ಕಾರ್ಡ್‌ಗಳು ಕಾಗದದ ತುಂಡುಗಳು ಮಾತ್ರ. ಆದರೆ ರಾಜಕೀಯದ ಮೇಜಿನ ಮೇಲೆ ಬಿದ್ದಿರುವ ಕಾರ್ಡ್‌ಗಳು ಜೀವಂತ ಸಮುದಾಯಗಳು, ನಂಬಿಕೆಗಳು ಮತ್ತು ಇತಿಹಾಸಗಳು. ಈ ವ್ಯತ್ಯಾಸವೇ ಅತ್ಯಂತ ಮಹತ್ವದ್ದಾಗಿದೆ. ಆದರೆ ಕೆಲವೊಮ್ಮೆ ಈ ವ್ಯತ್ಯಾಸವನ್ನು ಮರೆತು ಹೋಗುವ ಪ್ರವೃತ್ತಿ ರಾಜಕೀಯದಲ್ಲಿ ಕಾಣಿಸಿಕೊಳ್ಳುತ್ತದೆ.

ಈ ಹಿನ್ನೆಲೆಯ ಬಸವಣ್ಣನ ಹೆಸರಿನ ಬಳಕೆ ಮತ್ತಷ್ಟು ಅರ್ಥಗರ್ಭಿತವಾಗುತ್ತದೆ. ಬಸವಣ್ಣ ನವರ ತತ್ವಗಳು ಸಮಾನತೆ, ಶ್ರಮದ ಗೌರವ ಮತ್ತು ಮಾನವೀಯತೆಯ ಮೇಲೆ ನಿಂತಿವೆ. ಅವರು ಸಮಾಜವನ್ನು ಒಗ್ಗೂಡಿಸಲು ಬಂದವರೇ ವಿನಾ, ವಿಭಜಿಸಲು ಅಲ್ಲ. ಅವರ ಚಿಂತನೆ ಒಂದು ನೈತಿಕ ದಿಕ್ಕನ್ನು ತೋರಿಸುತ್ತದೆ.

ಮಹಾರಾಷ್ಟ್ರ ಸರಕಾರವು ಬಸವಣ್ಣನವರ ಭಾವಚಿತ್ರವನ್ನು ಸರಕಾರಿ ಕಚೇರಿಗಳಲ್ಲಿ ಕಡ್ಡಾಯಗೊಳಿಸಿದಾಗ, ಅದು ಒಂದು ಗೌರವದ ಸೂಚಕವಾಗಿ ಕಾಣಿಸಿತು. ನಂತರ ಕರ್ನಾಟಕದಲ್ಲೂ 2017ರಲ್ಲಿ ಇದೇ ಕ್ರಮ ಜಾರಿಗೆ ಬಂತು. ಹೊರಗೆ ನೋಡಲು ಇದು ಕೂಡ ಗೌರವದ ನಿರ್ಧಾರವೇ. ಆದರೆ ಇಲ್ಲಿ ಒಂದು ಸೂಕ್ಷ್ಮಭೇದ ಗೋಚರಿಸುತ್ತದೆ.

ಮಹಾರಾಷ್ಟ್ರದಲ್ಲಿ ಈ ಗೌರವ ರಾಜಕೀಯವಾಗಲಿಲ್ಲ. ಆದರೆ ಕರ್ನಾಟಕದಲ್ಲಿ ಗೌರವದ ಹೆಸರಿನ ಹಿಂದೆ ರಾಜಕೀಯದ ಲೆಕ್ಕಾಚಾರ ನಡೆಯಿತು ಎಂಬ ಅನುಮಾನ ಮೂಡುತ್ತದೆ. ಈ ಅನುಮಾನವೇ ಸಮಾಜದಲ್ಲಿ ಮುಂದೆ ಗೊಂದಲಕ್ಕೆ ಕಾರಣವಾಯಿತು ಎಂಬುದು ಸ್ಫಟಿಕ ಸ್ಪಷ್ಟ.

ವೀರಶೈವ-ಲಿಂಗಾಯತ ಪ್ರಶ್ನೆಯನ್ನು ಅಧ್ಯಯನ ಮಾಡಲು ಜಸ್ಟಿಸ್ ನಾಗಮೋಹನದಾಸ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಯಿತು. ಈ ಸಮಿತಿಯೇ ತನ್ನ ಅಧ್ಯಯನಕ್ಕೆ ಆರು ತಿಂಗಳ ಕಾಲಾವಕಾಶ ಕೇಳಿತ್ತು. ಇದು ಸಹಜ. ಶತಮಾನಗಳ ಇತಿಹಾಸ, ಧಾರ್ಮಿಕ ಪರಂಪರೆ ಮತ್ತು ಸಮಾಜದ ಅಂತರಂಗವನ್ನು ಅಧ್ಯಯನ ಮಾಡಬೇಕಾದ ವಿಷಯ ಅದು. ಆದರೆ ರಾಜಕೀಯದ ಗಡಿಯಾರ ಬೇರೆ ರೀತಿಯಲ್ಲಿ ಓಡುತ್ತದೆ.

ತೀವ್ರ ಒತ್ತಡ ಹೇರಿ ಕೇವಲ ಎರಡು ತಿಂಗಳ ವರದಿಯನ್ನು ಹೊರ ತರಲಾಯಿತು. ಇಸ್ಪೀಟ್ ಆಟಗಾರರು ಕೆಲವೊಮ್ಮೆ ಅನಿರೀಕ್ಷಿತ ಕಾರ್ಡುಗಳನ್ನು ಎಸೆದು ಇತರರ ಮೇಲೆ ಒತ್ತಡ ಹೇರುವಂತೆ ಒತ್ತಡ ಹೇರಲಾಯಿತು. ಅದೇ ಯಾದಿಯಲ್ಲಿ ಚುನಾವಣೆಯ ದಿನಾಂಕ ಘೋಷಣೆಯ ಒಂದು ವಾರದ ಮುನ್ನ ತರಾತುರಿಯಲ್ಲಿ ಈ ಕುರಿತು ಕ್ಯಾಬಿನೆಟ್ ನಿರ್ಧಾರ ವನ್ನು ಕೈಗೊಳ್ಳಲಾಯಿತು.

ಲಿಂಗಾಯತರನ್ನು ಅಲ್ಪಸಂಖ್ಯಾತರಾಗಿ ಪರಿಗಣಿಸುವ ಪ್ರಸ್ತಾವನೆ ಮತ್ತು ‘ಬಸವ ತತ್ವ ವನ್ನು ನಂಬುವ ವೀರಶೈವರು’ ಎಂಬ ವಿಭಜನೆಯೊಂದಿಗೆ ಅಧಿಸೂಚನೆಯನ್ನು ಕೇಂದ್ರಕ್ಕೆ ಕಳುಹಿಸಲಾಯಿತು. ಶತಮಾನಗಳ ಸಮುದಾಯವನ್ನು ಒಂದು ವಾರದ ರಾಜಕೀಯದಲ್ಲಿ ಎರಡು ಭಾಗಗಳಾಗಿ ಗುರುತಿಸುವ ಈ ತುರ್ತು ಕ್ರಮವನ್ನು ನೋಡಿದಾಗ, ಅದು ತಂತ್ರವೇ ಅಥವಾ ಆಟವೇ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ.

ಕೇಂದ್ರದಿಂದ ಅಧಿಸೂಚನೆ ತಿರಸ್ಕೃತಗೊಂಡಿತು. ಆದರೆ ಪ್ರಶ್ನೆ ಅಲ್ಲಿಗೇ ಮುಗಿಯಲಿಲ್ಲ. ಸಮಾಜದಲ್ಲಿ ಎಬ್ಬಿಸಿದ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಗದೆ ಉಳಿದಾಗ ಅನುಮಾನಗಳು ಹೆಚ್ಚಾಗುತ್ತವೆ. ಇದು ಕೇವಲ ಆಡಳಿತಾತ್ಮಕ ವಿಷಯವಲ್ಲ- ಇದು ಸಮಾಜದ ಮನಸ್ಸಿಗೆ ಸಂಬಂಧಿಸಿದ ವಿಷಯ. ಈ ಎಲ್ಲದರ ಮಧ್ಯೆ ಒಂದು ಮೂಲಭೂತ ಪ್ರಶ್ನೆ ನಮ್ಮ ಮುಂದೆ ನಿಂತಿದೆ. ಬಸವಣ್ಣನವರ ತತ್ವಗಳು ಸಮಾಜವನ್ನು ಒಗ್ಗೂಡಿಸಲು ಬಂದಂಥವು.

ಅವರು ಜಾತಿ, ಅಹಂಕಾರ ಮತ್ತು ವಿಭಜನೆಯ ವಿರುದ್ಧ ಮಾತನಾಡಿದರು. ಆದರೆ ಅವರ ಹೆಸರಿನ ಸಮಾಜದಲ್ಲಿ ಅನುಮಾನಗಳು ಮೂಡಿದರೆ ಅದು ಬಸವಣ್ಣನಿಗೆ ಗೌರವ ತೋರಿಸುವ ಮಾರ್ಗವೇ? ಬಸವಣ್ಣನ ತತ್ವಗಳಲ್ಲಿ ರಾಜಕೀಯ ಲೆಕ್ಕಾಚಾರ ಇರಲಿಲ್ಲ. ಅಲ್ಲಿ ಮಾನವೀಯತೆ ಮಾತ್ರ ಇತ್ತು.

ಇಂದು ಅವರ ಹೆಸರನ್ನು ರಾಜಕೀಯದ ಕಾರ್ಡ್ ಆಗಿ ಬಳಸಿದರೆ ಅದು ಬಸವಣ್ಣನ ಚಿಂತನೆಗೆ ನ್ಯಾಯ ಮಾಡುವುದೇ?ಇಸ್ಪೀಟ್ ಆಟಗಾರನು ಆಟ ಮುಗಿದ ಮೇಲೆ ಮೇಜಿನಿಂದ ಎದ್ದು ಹೋಗಬಹುದು. ಆದರೆ ಸಮಾಜಕ್ಕೆ ಆಟ ಎಂದಿಗೂ ಮುಗಿಯುವುದಿಲ್ಲ.

ರಾಜಕೀಯದ ನಿರ್ಧಾರಗಳು ಸಮಾಜದ ಮನಸ್ಸಿನಲ್ಲಿ ವರ್ಷಗಳವರೆಗೆ ಗಾಯದ ಗುರುತಾಗಿ ಬಿಡುತ್ತವೆ. ಆದ್ದರಿಂದ ಪ್ರಶ್ನೆ ರಾಜಕೀಯದ ಬಗ್ಗೆ ಮಾತ್ರವಲ್ಲ- ಅದು ಮನಸ್ಥಿತಿಯ ಬಗ್ಗೆ. ರಾಜಕೀಯವು ಸಮಾಜವನ್ನು ಒಗ್ಗೂಡಿಸುವ ಸಾಧನವಾಗಬೇಕೇ? ಅಥವಾ ಅದು ಕಾರ್ಡ್‌ ಗಳನ್ನು ಹಂಚುವ ಇಸ್ಪೀಟ್ ಆಟವಾಗಬೇಕೇ? ಸಮಾಜಗಳು ಕಾರ್ಡ್‌ʼಗಳಲ್ಲ. ಅವು ಜೀವಂತ ಇತಿಹಾಸ, ಬದುಕಿನ ಅನುಭವ ಮತ್ತು ಸಮೂಹದ ಆತ್ಮಗೌರವ.

ರಾಜಕೀಯವು ಚದುರಂಗವಾಗಬಹುದು, ತಂತ್ರದ ಆಟವಾಗಬಹುದು. ಆದರೆ ಅದು ಇಸ್ಪೀಟ್ ಆಟವಾಗಬಾರದು. ಏಕೆಂದರೆ, ಇಸ್ಪೀಟ್ ಆಟದಲ್ಲಿ ಸೋಲುವುದು ಕೇವಲ ಆಟಗಾರ; ಆದರೆ ರಾಜಕೀಯದ ಇಸ್ಪೀಟ್ ಆಟದಲ್ಲಿ ಸೋಲುವುದು ಸದಾ ಸಮಾಜವೇ. ಅದೆಂದೂ ಸಮಸಮಾಜವನ್ನು ಕಟ್ಟದು!

ಇಲ್ಲಿ ಸಿದ್ಧರಾಮಯ್ಯ ಅವರು ತಮ್ಮ ರಾಜಕೀಯ ಲೆಕ್ಕಾಚಾರದಲ್ಲಿ ಯಶಸ್ವಿಯಾಗಿರ ಬಹುದು. ಆದರೆ ಅಧಿಕಾರವೂ ಶಾಶ್ವತವಲ್ಲ, ಆಯುಷ್ಯವೂ ಶಾಶ್ವತವಲ್ಲ. ಆಡಿದ ಈ ಕಾರ್ಡ್ ಆಟ ಇತಿಹಾಸದಲ್ಲಿ ಉಳಿಯುವುದಾದರೆ, ಅದು ಜಯದ ಕಥೆಯಾಗಿ ಅಲ್ಲ- ಕರಾಳ ನೆನಪುಗಳಾಗಿ ಮಾತ್ರ. ಭೋಜರಾಜ ಕೇಳಿದ ಚರಮಗೀತೆಯಂತೆ, ಕಾಲವೇ ಅಂತಿಮ ತೀರ್ಪನ್ನು ನೀಡುತ್ತದೆ. ಇತಿಹಾಸ ಕ್ಷಮಿಸಬಹುದು- ಆದರೆ ಮರೆತು ಬಿಡುವುದಿಲ್ಲ.

(ಲೇಖಕರು ಅಧ್ಯಕ್ಷರು, ಅಖಿಲ ಭಾರತ

ವೀರಶೈವ ಮಹಾಸಭಾ ದೆಹಲಿ ರಾಜ್ಯ ಘಟಕ)