ತಾಳ-ಮೇಳ
ಜಿತೇಂದ್ರ ಕುಂದೇಶ್ವರ
ವಿಶ್ವವಾಣಿ ಪತ್ರಿಕೆಯಲ್ಲಿ, ತಮಾಷೆಗೆ ಮೀಸಲಾಗಿರುವ ‘ಭಟ್ಟರ್ ಸ್ಕಾಚ್’ ಪ್ರಶ್ನೋತ್ತರದ ಕಾಲಂನಲ್ಲಿ “ಮನುಷ್ಯನಿಗೆ ಬುದ್ಧಿವಂತಿಕೆ ಇದ್ದೂ ಭೂಷಣ ಎನಿಸಿಕೊಳ್ಳದಿದ್ದರೆ- ಪ್ರಭಾಕರ ಜೋಶಿ ಅಂತಾರೆ" ಎಂದು ಪ್ರಕಟವಾಗಿತ್ತು. ಇದಾಗಿ ಅನೇಕ ದಿನಗಳೇ ಕಳೆದಿವೆ. ಇದೀಗ ಉಡುಪಿಯಲ್ಲಿ ಕಲಾವಿದ ಪ್ರಭಾಕರ ಜೋಶಿ ನೇತೃತ್ವದ 14 ಜನರ ತಂಡವು ಪತ್ರಿಕಾಗೋಷ್ಠಿ ನಡೆಸಿ ವಿಶ್ವೇಶ್ವರ ಭಟ್ಟರು ಬಹಿರಂಗ ಕ್ಷಮೆ ಯಾಚಿಸಬೇಕು ಎಂದು ಗುಡುಗಿದೆ.
ಅಂದು ವಿಶ್ವೇಶ್ವರ ಭಟ್ಟರು ಯಾಕೆ ಹೀಗೆ ಬರೆದರು, ಅವರಾಗಿ ಕಾಲು ಕೆರೆದು ಜಗಳಕ್ಕೆ ನಿಲ್ಲುವವ ರಲ್ಲ, ಏನೋ ಆಗಿರಬೇಕಲ್ವಾ ಎಂದು ತಲೆ ಕೆರೆದುಕೊಂಡಿದ್ದೆ. ಬಳಿಕ ಗೊತ್ತಾದದ್ದು ಏನೆಂದರೆ.. ಸಾಮಾಜಿಕ ಜಾಲತಾಣದಲ್ಲಿ ಗೌರವಾನ್ವಿತ ಇಬ್ಬರು ಪತ್ರಕರ್ತರ ವಿರುದ್ಧದ ವ್ಯಂಗ್ಯ, ಟೀಕೆ, ಮಾತ್ಸರ್ಯವೇ ಮೂರ್ತಿವೆತ್ತ ಒಂದು ವಾಕ್ಯದ ಜೋಶಿಯವರ ವಿಮರ್ಶೆ!
ವಿಪರ್ಯಾಸ ಎಂದರೆ ಜೋಶಿಯವರು ತಾವು ತಪ್ಪು ಮಾಡಿದ್ದು ಮಾತ್ರವಲ್ಲದೆ ಸಮರ್ಥಿಸಲು ಎಲ್ಲರನ್ನೂ ಒತ್ತಾಯಪೂರ್ವಕವಾಗಿ ಎಳೆದು ತಂದು ಅವರಿಗೂ ಕೆಸರು ಮೆತ್ತಿಸಿದ್ದಾರೆ. ಸುದ್ದಿ ಗೋಷ್ಠಿ ನಡೆಸಿ ‘ಇದು ಯಕ್ಷಗಾನದ ಮೇಲೆ, ತಾಳಮದ್ದಳೆಯ ಮೇಲೆ ಸವಾರಿ’ ಎಂದು ಪ್ರಲಾಪಿಸುವು ದನ್ನು ನೋಡುವಾಗ ಭಟ್ಟರ್ ಸ್ಕಾಚ್‌ನಲ್ಲಿ ಜೋಶಿಯವರ ಬಗ್ಗೆ ಆರಂಭದಲ್ಲಿ ಬರೆದದ್ದು ಸರಿ ಎಂದು ಈಗ ಅನಿಸುತ್ತಿದೆ!
“ಯಕ್ಷಗಾನ ಕಲಾವಿದರು ಸಲಿಂಗಕಾಮಿಗಳು" ಎಂದು ಅಕಾಡೆಮಿ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆಯವರು ಬಹಿರಂಗವಾಗಿ ಹೇಳಿದಾಗ ಇವರಿಗೆ ಸುದ್ದಿಗೋಷ್ಠಿ ನಡೆಸುವ ‘ದಮ್’ ಇರಲಿಲ್ಲ. ಅದಕ್ಕಿಂತ ಹೆಚ್ಚಾಗಿ ‘ನನಗೆ ಹೇಳಿಲ್ಲವಲ್ಲ, ಕಲಾವಿದರಿಗೆ ಹೇಳಿದರೆ ನಮಗೇನು?’ ಎಂಬ ಭಾವ ಇವರಲ್ಲಿತ್ತು. ಆದರೆ ಇಡೀ ಯಕ್ಷಗಾನ ರಂಗದ ಕಲಾವಿದರಿಗೆ ಅವಮಾನ ಆದಾಗ, ಎಲ್ಲ ಕಲಾವಿದ ರಿಗೆ ಕರೆ ಮಾಡಿ ಪ್ರತಿಭಟಿಸುವ ಮನಸ್ಸು ಬರಲಿಲ್ಲ. ಆಗ ಏನೂ ಅನಿಸಲಿಲ್ಲ.
ಇದನ್ನೂ ಓದಿ: Sandeep Sharma Muteri Column: ತಾಳಮದ್ದಳೆ: ಕಲೆ ಮತ್ತು ಕಾಲಧರ್ಮದ ಸಂಘರ್ಷ
ಮೂಗಿನ ನೇರಕ್ಕೆ ಮಾತನಾಡುವುದು, ಬರೆಯುವುದೇ ಕಟುವಾದ ವಿಮರ್ಶೆ, ಜಾಲತಾಣದಲ್ಲಿ ವೈಯಕ್ತಿಕವಾಗಿ ಟೀಕಿಸುವುದೇ ಪಾಂಡಿತ್ಯ ಎಂದುಕೊಂಡು ಕೆಲವರು ಮೆರೆಯುವಾಗ, ಒಂದು ಸಣ್ಣ ಪ್ರಶ್ನೋತ್ತರಕ್ಕೆ ಯಕ್ಷಗಾನ ಲೋಕದ ಮೇಲಿನ ದಾಳಿ ಎಂದು ಬಿಂಬಿಸಿದಿರ ಇದೇನಾ ನಿಮ್ಮ ಹೆಚ್ಚು ಗಾರಿಕೆ.
“ನಾನು ಮಾಡಿದರೆ ರಾಮಲೀಲೆ, ಇನ್ನೊಬ್ಬರು ಮಾಡಿದರೆ ರಾಸಲೀಲೆ" ಎಂಬ ಅಹಂಭಾವವೇ ಇಷ್ಟಕ್ಕೆಲ್ಲ ಕಾರಣ. ವೈಯಕ್ತಿಕ ಕಾರಣಕ್ಕಾಗಿ ಆದ ಕ್ಷುಲ್ಲಕ ವಿಚಾರವನ್ನು ಇಡೀ ಯಕ್ಷಗಾನ ರಂಗಕ್ಕೆ ಎಳೆದು ತಂದು ಉಳಿದ ಕಲಾವಿದರನ್ನು ಅದರೊಳಗೆ ಸಿಲುಕಿಸುವ ನರೇಟಿವ್ ಸೃಷ್ಟಿ ಮಾಡಿದ್ದೀ ರಲ್ಲ. ಇದಕ್ಕೆ ಮೆಚ್ಚಲೇಬೇಕು.
ಪತ್ರಿಕಾಗೋಷ್ಠಿ ನಡೆಸಿದ ಅರ್ಥಧಾರಿಗಳು ತಾಳಮದ್ದಳೆ ಕ್ಷೇತ್ರದ ತಾರೆಗಳು ಎನ್ನುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ. ನಾನು ತುಂಬಾ ಮೆಚ್ಚುವ ಕಲಾವಿದರು ಅಲ್ಲಿದ್ದಾರೆ. ಆದರೆ ಇಷ್ಟು ಸರಳವಾಗಿದ್ದ ವಿಚಾರವನ್ನು ಇಷ್ಟು ಕ್ಲಿಷ್ಟ ಮಾಡಿಸಿದ ಹಿನ್ನೆಲೆ, ಕಾರಣ ಅರ್ಥಧಾರಿಗಳಿಗೆ ಅರ್ಥ ವಾಗಿಲ್ಲ ಎಂದರೆ.. ಸೆಲೆಬ್ರಿಟಿ ಅರ್ಥಧಾರಿಗಳು ಮಾತ್ರ ಯಕ್ಷರಂಗವೇ? 5-6 ದಶಕಗಳ ಹಿಂದೆ, ಕಾರ್ಕಳದ ಪುಟ್ಟಹಳ್ಳಿಯಲ್ಲಿ ದೇವಸ್ಥಾನದ ಅರ್ಚಕರಾಗಿರುವ ರಾಘವೇಂದ್ರ ಭಟ್ಟರು ತಾಳಮದ್ದಳೆ ಪ್ರಿಯರನ್ನೂ, ಊರಿನ ಯುವಕರನ್ನು ಕಟ್ಟಿಕೊಂಡು ಹಿರಿಯರ ಜತೆ ದೇವಸ್ಥಾನದಲ್ಲಿ ಯಕ್ಷಗಾನ, ತಾಳಮದ್ದಳೆ, ಶಾಲೆಯಲ್ಲಿ ನಾಟಕ ಮಾಡಿಸುತ್ತಿದ್ದರು.
ಅಕ್ಕಿ ಖಾಲಿಯಾಗಿ ಉಪವಾಸ ಕುಳಿತರೂ ಸಿಂಹಮಾಸದಲ್ಲಿ ಸೋಣಾರ್ತಿ ಸಂದರ್ಭ ತಾಳಮದ್ದಳೆ ಯನ್ನು ತಪ್ಪಿಸುತ್ತಿರಲಿಲ್ಲ. ಪ್ರಸಿದ್ಧ ಅರ್ಥಧಾರಿ ಅಲ್ಲದಿದ್ದರೂ ಸುತ್ತಮುತ್ತ ತಾಳಮದ್ದಳೆಗೆ ಹೋಗುತ್ತಿದ್ದರು. ಬಹುತೇಕ ಪ್ರತಿ ಊರಿನಲ್ಲಿಯೂ ಇಂಥವರು ಇದ್ದರು. ಇಂಥವರು ಯಕ್ಷಗಾನ ಲೋಕದಲ್ಲಿ ಪ್ರಚಾರ ಪಡೆಯುವುದೇ ಇಲ್ಲ. ಆದರೆ ಯಕ್ಷಗಾನ ರಂಗದ ಉಸಿರಾಟದಲ್ಲಿ ಇವರೆಲ್ಲರೂ ಇದ್ದಾರೆ!
ಹಿಂದೆ ಪ್ರತಿ ಊರಿನಲ್ಲಿಯೂ ಆಯಾ ಊರಿನ ಅಕ್ಕಪಕ್ಕದ ಊರಿನ ಕಲಾವಿದರು ಬಂದು ಅವರ ಒಬ್ಬ ಭೀಷ್ಮ, ಅರ್ಜುನ, ಕೃಷ್ಣ, ಶಿಖಂಡಿ ಪಾತ್ರಗಳನ್ನು ಮಾಡುತ್ತಿದ್ದರು. ಭಾಗವತರೂ ಅದೇ ಊರಿನವರು. ಆಪರೂಪಕ್ಕೆ ಅಪರೂಪ ಎಂಬಂತೆ ಸ್ಟಾರ್ ಕಲಾವಿದರಿಗೆ ತಾಳಮದ್ದಳೆಗೆ ಆಹ್ವಾನ ಇರುತ್ತಿತ್ತು. ಆದರೆ ಈಗ ಬಹುತೇಕ ತಾಳಮದ್ದಳೆಗಳಿಗೆ ಸ್ಟಾರ್ ಕಲಾವಿದರೇ ಆಕರ್ಷಣೆ. ಇದು ರೂಢಿಯಾಗುತ್ತಿದ್ದಂತೆ ಪ್ರತಿ ಊರಿನ ಯಕ್ಷಗಾನ ಸಂಘಗಳಲ್ಲಿ ಅರ್ಥಧಾರಿಗಳು ನಶಿಸತೊಡಗಿದರು.
ಈಗೇನಿದ್ದರೂ ತಾಳಮದ್ದಳೆ ಸಂಘಟಕರಿಗೆ ತಾಳಮದ್ದಳೆಯ ಮೇಲೆ ಅಭಿಮಾನ ಇದ್ದರೆ ಅವರಿಗೆ ಸರ್ಪಾಸ್ತ್ರದಂಥ ಪಾತ್ರಗಳೇ ಸೀಮಿತ. ಸರ್ಪಾಸ್ತ್ರ ಅಂದಾಗ ನೆನಪಾಯಿತು. ಮೂಡುಬಿದರೆ ಯಲ್ಲಿಯೂ ಒಬ್ಬ ಯಕ್ಷಗಾನ ಪ್ರೇಮಿ ಇದ್ದಾರೆ- ಮೇನಕಾ ಟೆಕ್ಸ್ʼಟೈಲ್ಸ್‌ನ ಸದಾಶಿವ ಅವರು. ಅವರು ತಾಳಮದ್ದಳೆ, ಯಕ್ಷಗಾನವನ್ನು ಅಲ್ಲಲ್ಲಿ ಸಂಘಟಿಸುತ್ತಾ ಸಣ್ಣ ಪುಟ್ಟ ಪಾತ್ರಗಳನ್ನು ಅಚ್ಚುಕಟ್ಟಾಗಿ ಮಾಡುತ್ತಾರೆ. ಕಲಾವಿದರನ್ನು ಮಳಿಗೆಗೆ ಕರೆಸಿ ಉಡುಗೊರೆ ಕೊಟ್ಟು ಖುಷಿಪಡಿಸುತ್ತಾರೆ.
ಇಂಥ ಅಭಿಮಾನಿ ಸಂಘಟಕರು ಅನೇಕ ಕಡೆಗಳಲ್ಲಿ ಕಾಣ ಸಿಗುತ್ತಾರೆ. ಉದ್ಯಮ ಬೇರೆ ಇದ್ದರೂ ಯಕ್ಷಗಾನವನ್ನೇ ಉಸಿರಾಟ ಮಾಡಿಕೊಂಡವರು ಯಕ್ಷರಂಗದ ಆಸ್ತಿ. ಆದರೆ ಯಕ್ಷಗಾನವನ್ನೇ ವ್ಯವಸಾಯ ಮಾಡಿಕೊಂಡವರು ಅದರಲ್ಲಿಯೂ ಸ್ಟಾರ್ ಕಲಾವಿದರಷ್ಟೇ ಪ್ರಚಾರ, ಪ್ರಸಿದ್ಧಿ, ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ತಾಳಮದ್ದಳೆ/ಯಕ್ಷಗಾನ ವಿಮರ್ಶೆ ಮಾಡಿದಾಕ್ಷಣ ಅಭಿಮಾನಿವರ್ಗ ರಣಧೀರ ಪಡೆಯಂತೆ ಮುನ್ನುಗ್ಗಿ ವಿಮರ್ಶಕರ ಚಾರಿತ್ರ್ಯವಧೆಗೂ ಹೇಸುವುದಿಲ್ಲ.
ಹಿಂದೆಲ್ಲ ಹೀಗಿರಲಿಲ್ಲ. 3 ದಶಕಗಳ ಹಿಂದೆ ಇರಬಹುದು. ಉಡುಪಿ ರಥಬೀದಿಯಲ್ಲಿ ತಾಳಮದ್ದಳೆ ಯಿತ್ತು. ಜಟೆ ಧರಿಸಿದ ಸಾಮಗರು (ರಾಮದಾಸ ಸಾಮಗರು) ವೇದಿಕೆಯಲ್ಲಿ ಕೂತು ಗರ್ಜಿಸುತ್ತಿದ್ದರು- “ಕೃಷ್ಣಪೂಜೆ ಮಾಡುವವರ ಕೈ ಕಡಿಯಬೇಕು" ಅಂತ. ಶಿಶುಪಾಲನೋ ಅಥವಾ ಇನ್ಯಾವುದೋ ಕೃಷ್ಣ ವಿರೋಧಿ ಪಾತ್ರ ಇರಬೇಕು. ಪ್ರಸಂಗದ ಒಳಗೇ ಬರುತ್ತದೆ. ಆಶ್ಚರ್ಯ ಎಂದರೆ ಉಡುಪಿಯಲ್ಲಿ ಶ್ರೀಕೃಷ್ಣ ಪೂಜೆ ಮಾಡುವವರು ಅಷ್ಟಮಠಗಳ ಸ್ವಾಮಿಗಳು. ಆ ಮಠಗಳ ನಡುವಿನ ವೇದಿಕೆಯಲ್ಲಿ ಕೂತು ಹೀಗೆ ಹೇಳಬೇಕಾದರೆ!!
ಆಗ ನನ್ನ ಮನಸ್ಸಲ್ಲಿ ಮೂಡಿದ್ದು ಹಿಂದೂ ಧರ್ಮ ಎಷ್ಟೊಂದು ವಿಶಾಲವಾಗಿದೆ, ತಾಳಮದ್ದಳೆ ಯೂ ಎಷ್ಟೊಂದು ವಿಶಾಲ ಕ್ಷೇತ್ರ, ಎಲ್ಲಕ್ಕಿಂತಲೂ ಮಿಗಿಲಾಗಿ ಸ್ವಾಮೀಜಿಗಳದ್ದು ಎಷ್ಟೊಂದು ವಿಶಾಲ ಹೃದಯ ಎಂಬ ಭಾವ. ಆಗ ಅರ್ಥಧಾರಿಗಳಿಗೆ ಅಷ್ಟೊಂದು ಸ್ವಾತಂತ್ರ್ಯ ಇತ್ತು. ಪ್ರೇಕ್ಷಕರೂ ಒಳ್ಳೆಯವರಿದ್ದರು.
ಸಂವಾದವೇ ಜೀವಾಳವಾಗಿರುವ ಯಕ್ಷಗಾನ ತಾಳಮದ್ದಳೆಯು ಇಂದು ಜ್ಞಾನದ ಗಣಿಯಾಗಿರು ವಂತೆಯೇ, ಅಹಂಕಾರದ ಅಖಾಡವಾಗಿಯೂ ಬದಲಾಗುತ್ತಿದೆಯೇ ಎಂಬ ಆತಂಕ ಕಲಾಭಿಮಾನಿ ಗಳಲ್ಲಿ ಮನೆಮಾಡಿದೆ.ಯಕ್ಷಗಾನ ತಾಳಮದ್ದಳೆ ಎನ್ನುವುದು ಕೇವಲ ಮಾತಿನ ಮಲ್ಲಯುದ್ಧವಲ್ಲ; ಅದು ಅರ್ಥಾನುಸಂಧಾನದ ಮೂಲಕ ಪರಮಾರ್ಥವನ್ನು ಶೋಧಿಸುವ ಪ್ರಕ್ರಿಯೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಕಲೆಗೆ ‘ಪಾಂಡಿತ್ಯದ ಪ್ರದರ್ಶನ’ ಎಂಬ ರೋಗ ತಗುಲಿದಂತಿದೆ.
ಅರ್ಥಧಾರಿಗಳು ಪ್ರಸಂಗದ ಆಶಯವನ್ನು ಮರೆತು, ಕಠಿಣ ಶಬ್ದಜಾಲ ಮತ್ತು ಪಾಂಡಿತ್ಯ ಪ್ರದರ್ಶನ ಕ್ಕೇ ಆದ್ಯತೆ ನೀಡುತ್ತಿರುವುದು ಕಲೆಯ ಮೂಲಸತ್ವಕ್ಕೆ ಧಕ್ಕೆ ತರುತ್ತಿದೆ. ಪಾಂಡಿತ್ಯ ಇದ್ದವರೆ ಅಹಂ ಕಾರಿಗಳು ಎನ್ನುವುದು ತಪ್ಪು. ನಾನು ಸಾರ್ವಕಾಲಿಕವಾಗಿ ಮೆಚ್ಚುವ ಅರ್ಥಧಾರಿ ಎಂದರೆ ಮಲ್ಪೆ ವಾಸುದೇವ ಸಾಮಗರು. ಕಿಂಚಿತ್ತೂ ಅಹಂಕಾರ ಇಲ್ಲ. ಕೊಟ್ಟದ್ದನ್ನು ತೆಗೆದುಕೊಂಡು ಹೋಗುವ ಒಳ್ಳೆಯತನ.
ಎಲ್ಲರಿಗೂ ಅವಕಾಶ ನೀಡುವ ಮತ್ತು ಎಲ್ಲರೂ ತಾಳಮದ್ದಳೆ ನಡೆಸಲು ಸಾಧ್ಯವಾಗುವಂತೆ, ಕೈ ಗೆಟಕುವಂಥ ಮತ್ತು ಸಂಯಮಭರಿತ ತಾಳಮದ್ದಳೆ ತಂಡವನ್ನು ರಚಿಸಿದವರು ಅವರು. ಇತ್ತೀಚೆಗೆ ಜಾಲತಾಣವೊಂದರಲ್ಲಿ ಸಾಮಗರ ಭೀಷ್ಮ ಮತ್ತು ಅಂಬೆಯ ಸಂವಾದದ ಹಳೆ ತುಣುಕು ನೋಡು ವಾಗ ಅಚ್ಚರಿ ಪಡುವಂಥ ರೀತಿಯಲ್ಲಿ, ಸಮಾಜಕ್ಕೆ ರವಾನೆಯಾಗಬಲ್ಲ ಅದ್ಭುತವಾದ ಸಂದೇಶ ಅದರಲ್ಲಿತ್ತು.
“ಅರ್ಥಗಾರಿಕೆಯು ತರ್ಕಬದ್ಧವಾಗಿರಬೇಕು ಮತ್ತು ಪ್ರಸಂಗದ ಮಿತಿಯಲ್ಲಿರಬೇಕು" ಎಂದು ಹಿರಿಯ ಅರ್ಥಧಾರಿಗಳು ಪ್ರತಿಪಾದಿಸುತ್ತಿದ್ದರು. ಆದರೆ ಇಂದು ವೇದಿಕೆಯ ಮೇಲೆ ಒಬ್ಬ ಅರ್ಥಧಾರಿ ಇನ್ನೊಬ್ಬರನ್ನು ಮಾತಿನಲ್ಲಿ ಸೋಲಿಸಲೇಬೇಕು ಎಂಬ ಹಠಕ್ಕೆ ಬೀಳುತ್ತಿದ್ದಾರೆ.
ಹಿಂದೆಯೂ ಪ್ರಸಂಗದ ಒಳಗೆ ಇಂಥ ಅಧಿಕ ಪ್ರಸಂಗಗಳು ನಡೆಯುತ್ತಿದ್ದವು. ಒಮ್ಮೆ ಭೀಷ್ಮನ ಪಾತ್ರಧಾರಿ ಹಿರಿಯ ಅರ್ಥಧಾರಿಯೊಬ್ಬರು ಸ್ವಯಂವರಕ್ಕೆ ಬಂದ ಸಭೆಯಲ್ಲಿರುವ ರಾಜಕುಮಾರ ರನ್ನು (ಲೆಕ್ಕಭರ್ತಿಗೆ ಹೆಸರುಗಳೇ ಇಲ್ಲದ ರಾಜರುಗಳು) ನಾಯಿಗಳಿಗೆ ಹೋಲಿಸಿ, “ನಿನ್ನ ಅಪ್ಪ ಯಾರೆಂದು ಗೊತ್ತಿದೆಯೋ?" ಎಂದು ಲೇವಡಿ ಮಾಡಿದ್ದರು.
ಆಗ ಯುವ ಕಲಾವಿದನೊಬ್ಬ “ನನ್ನ ಅಪ್ಪ ಯಾರೆಂದು ನನಗೆ ಗೊತ್ತಿದೆ, ಹಾಗೆ ಗೊತ್ತಿರದೆ ಇರಲು ನಾವೇನೂ ಹಸ್ತಿನಾವತಿಯವರಲ್ಲ!" ಎಂದು ತಿರುಗೇಟು ನೀಡಿದ್ದರು. ಇದನ್ನು ಶ್ರೀಧರ ಡಿ.ಎಸ್. ಅವರು ತಮ್ಮ ಪುಸ್ತಕದಲ್ಲಿ ದಾಖಲಿಸಿದ್ದರು. ಇಲ್ಲಿ ಹಿರಿಯರ ಅಹಂಕಾರಕ್ಕೆ ಕಿರಿಯನ ಬೌದ್ಧಿಕ ಚಾಟಿ ಏಟು ಇತ್ತು.
ಹಿರಿತನ ಎನ್ನುವುದು ಕಿರಿಯರ ಬಗೆಗಿನ ಕೀಳರಿಮೆಯಲ್ಲ, ಬದಲಾಗಿ ಮಾರ್ಗದರ್ಶನದ ದೀವಿಗೆ ಯಾಗಬೇಕು. ತಾಳಮದ್ದಳೆ ಅರ್ಥಧಾರಿಗಳ ವಾಗ್ವಾದ, ಜಟಾಪಟಿಗೆ ಹತ್ತಾರು ಉದಾಹರಣೆಗಳಿವೆ. ಯಕ್ಷಗಾನದಲ್ಲಿಯೂ ಅರ್ಥಧಾರಿಗಳ ಅಹಂ ವೈಭವದಿಂದಾಗಿ ಕೆಲವೊಮ್ಮೆ ಪುರಾಣದ ಪ್ರಸಂಗದ ಪಾತ್ರಗಳಿಗೇ ಸೋಲಾಗುತ್ತಿತ್ತು. ಯಕ್ಷಗಾನಗಳೇ ಅರ್ಧಕ್ಕೆ ನಿಂತ ಉದಾಹರಣೆಗಳೂ ಇವೆ.
ಅರ್ಥಧಾರಿಗಳ ಶಕ್ತಿ ಇರುವುದು ಪುರಾಣದ ಘಟನೆಗಳಿಗೆ ಹೊಸ ಆಯಾಮ ನೀಡುವಲ್ಲಿ. ಉದಾ ಹರಣೆಗೆ, ಏಕಲವ್ಯನ ಹೆಬ್ಬೆರಳು ಕೇಳಿದ ದ್ರೋಣನ ನಡೆಯನ್ನು ಸುಣ್ಣಂಬಳ ವಿಶ್ವೇಶ್ವರ ಭಟ್ಟರು ಸಮರ್ಥಿಸುವ ರೀತಿ ಅದ್ಭುತ. “ಕೇವಲ ನಾಯಿ ಬೊಗಳಿತು ಎಂಬ ಕಾರಣಕ್ಕೆ ಶಬ್ದವೇಧಿಯಂಥ ವಿದ್ಯೆ ಪ್ರಯೋಗಿಸುವವನಿಗೆ ವಿವೇಚನೆ ಇಲ್ಲ" ಎಂಬ ಅವರ ತರ್ಕವು ದ್ರೋಣನ ಪಾತ್ರಕ್ಕೆ ಹೊಸ ಗೌರವ ತಂದುಕೊಡುತ್ತದೆ.
ಇಂಥ ಸಾತ್ವಿಕ ಅರ್ಥಗಾರಿಕೆ ಜನಮಾನಸದಲ್ಲಿ ಬದಲಾವಣೆ ತರುತ್ತದೆ. ಆದರೆ ಇಂದು ಈ ವಿದ್ವತ್ತು, ಪಾಂಡಿತ್ಯ ಶಕ್ತಿಯು ಸೈದ್ಧಾಂತಿಕ ಗುಂಪುಗಾರಿಕೆ ಮತ್ತು ರಾಜಕೀಯ ನಾಯಕರ ಸಮರ್ಥನೆಗೆ ಬಳಕೆ ಯಾಗುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಕೇಸುಗಳು ಕೂಡಾ ದಾಖಲಾಗಿವೆ. ಇನ್ನು ಕೆಲವು ಕಲಾ ವಿದರ ವೈಯಕ್ತಿಕ ತೀಟೆಗಳು, ಹನಿಟ್ರ್ಯಾಪ್ ಪ್ರಕರಣಗಳ ವಿಷಯದಲ್ಲಿ ಪೊಲೀಸ್ ಕೇಸುಗಳಾದಾಗ ನಾನು ಬರೆದು ಅಲ್ಲಿಗೇ ನಿಲ್ಲಿಸಿದ್ದೇನೆ.
ವೇದಿಕೆಯಲ್ಲಿ ಶ್ರೀರಾಮಚಂದ್ರನ ಅದ್ಭುತ ಏಕಪತ್ನೀವ್ರತದ ಮಹತ್ವ ಹೇಳುವವರು ವೈಯಕ್ತಿಕ ಬದುಕಿನಲ್ಲಿ ಕೃಷ್ಣನ ಆದರ್ಶ ಪಾಲಿಸುತ್ತಿರುವುದು ಜಗಜ್ಜಾಹೀರಾಗಿದ್ದರೂ ಯಾವ ಪತ್ರಕರ್ತರೂ ಅದನ್ನು ವರದಿಗೆ ಯೋಗ್ಯ ಎಂದು ಬರೆಯಲು ಹೋಗಿಲ್ಲ, ‘ಇಬ್ಬರಿಗೂ ಖುಷಿ ಇದ್ದರೆ ಸಂಸಾರ ನಡೆಸಲಿ, ಅವರಿಷ್ಟ’ ಎಂದೇ ಒಳ್ಳೆಯ ಪತ್ರಿಕೋದ್ಯಮಕ್ಕೆ ಮಾದರಿಯಾಗಿದ್ದಾರೆ.
ಸಾಮಾಜಿಕ ಜಾಲತಾಣ ಮತ್ತು ‘ಫ್ಯಾನ್ ವಾರ್’ ಇನ್ನು ತಾಳಮದ್ದಳೆಯ ಗಂಭೀರತೆಯನ್ನು ಹಾಳು ಮಾಡುತ್ತಿರುವುದು ಸಾಮಾಜಿಕ ಜಾಲತಾಣಗಳ ‘ಫ್ಯಾನ್ ವಾರ್’ಗಳು. ಕಲಾವಿದರಿಗಿಂತ ಅವರ ಅಭಿಮಾನಿಗಳೇ ವೈಯಕ್ತಿಕ ನಿಂದನೆಗೆ ಇಳಿಯುತ್ತಿರುವುದು ಕಲೆಯ ಘನತೆಯನ್ನು ಕುಂದಿಸುತ್ತಿದೆ.
ವ್ಯಕ್ತಿಪೂಜೆ ಹೆಚ್ಚಾದಂತೆ ಕಲಾಪೂಜೆ ಗೌಣವಾಗುತ್ತಿದೆ. ಪ್ರಖ್ಯಾತ ಅರ್ಥಧಾರಿಗಳು ತಾಳಮದ್ದಳೆ ಯನ್ನು ಜನಪ್ರಿಯಗೊಳಿಸಿರಬಹುದು. ಆದರೆ, ಈ ಕಲೆ ಇಂದಿಗೂ ಜೀವಂತವಾಗಿರುವುದು ಕೇವಲ ಆ ಪ್ರಸಿದ್ಧ ವ್ಯಕ್ತಿಗಳಿಂದಲ್ಲ. ಬದಲಾಗಿ, ಹಳ್ಳಿಗಳ ದೇವಸ್ಥಾನಗಳ ಪ್ರಾಂಗಣದಲ್ಲಿ ಶ್ರದ್ಧೆಯಿಂದ ಕೂರುವ ಸಾಮಾನ್ಯ ಕಲಾವಿದರಿಂದ. ಕೈಯಲ್ಲಿ ಹಣವಿಲ್ಲದಿದ್ದರೂ, ಕಲಾಶ್ರೀಮಂತಿಕೆಯ ಹಸಿವಿ ನಿಂದ ಯುವಕ ಸಂಘಗಳನ್ನು ಕಟ್ಟಿಕೊಂಡವರಿಂದ. ಯಾವುದೇ ಪ್ರಚಾರದ ಹಪಾಹಪಿ ಯಿಲ್ಲದೆ ಪುರಾಣದ ಭಾವಕ್ಕೆ ಸ್ಪಂದಿಸುವ ಗ್ರಾಮೀಣ ಹಿರಿಯರಿಂದ.
ಈಗಿನ ಕಾಲದಲ್ಲಿ ಯಕ್ಷಗಾನ ಎಲ್ಲೇ ಆಗುತ್ತಿರಲಿ ಆ ವೀಡಿಯೋ ಕ್ಲಿಪ್ಪಿಂಗ್‌ಗಳನ್ನು ಜಾಲತಾಣದಲ್ಲಿ ಹಾಕುತ್ತಾರೆ, ವೆಂಕಟೇಶ ಬೊಳಿಯಾಲ, ಸನತ್ಕುಮಾರ್ ಇತ್ಯಾದಿ ನೂರಾರು ಮಂದಿ ಯಕ್ಷಗಾನದ ಉಸಿರಾಟದಲ್ಲಿ ಅಡಕವಾಗಿದ್ದಾರೆ.
ಯಕ್ಷಗಾನದಲ್ಲಿ ಪುರುಷರ ಬಳಗದವರಷ್ಟೇ ಅಲ್ಲ ಮಹಿಳಾ ಲೋಕದವರೂ ಅಭಿಮಾನಿ ವರ್ಗ ವನ್ನು ಸೃಷ್ಟಿಸಿದ್ದಾರೆ. ಕಾವ್ಯಶ್ರೀ ಅಜೇರು, ಭವ್ಯಶ್ರೀ ಕುಲ್ಕುಂದ, ಸಿಂಚನ ಹೆಗಡೆ ಮೊದಲಾದವರು ಇದಕ್ಕೆ ಉದಾಹರಣೆ. ಉನ್ನತ ಶಿಕ್ಷಣ ಪಡೆದ ಡಾಕ್ಟರ್ ಪ್ರಖ್ಯಾತ್, ಚಿನ್ಮಯ ಭಟ್ ಕಲ್ಲಡ್ಕ ಮೊದ ಲಾದ ಯುವ ಪ್ರತಿಭೆಗಳ ದಂಡೆ ಇದೆ. ಈಗ ಹಳ್ಳಿಯ ಯಕ್ಷಗಾನ ಸಂಘಗಳು ಕಡಿಮೆಯಾಗಿದ್ದರೂ ಅಲ್ಲಲ್ಲಿ ಮಕ್ಕಳಿಗೆ ಉಚಿತವಾಗಿ ಯಕ್ಷಗಾನ ಕಲಿಸುವ ಪ್ರಮೋದ ತಂತ್ರಿ ಅವರಂಥ ನೂರಾರು ಯಕ್ಷಗುರುಗಳಿದ್ದಾರೆ.
ಊರು ಬಿಟ್ಟು ರಾಜಧಾನಿ ಸೇರಿ ಅಲ್ಲಿ ಮಕ್ಕಳಿಗೆ ಯಕ್ಷಗಾನ ಶಾಲೆಗಳನ್ನು ತೆರೆದ ಸೃಷ್ಟಿ ಕಲಾ ವಿದ್ಯಾಲಯದ ಛಾಯಾಪತಿ ಕಂಚಿಬೈಲ್ ಅಂಥವರು ನೂರಾರು ಸಂಖ್ಯೆಯಲ್ಲಿದ್ದಾರೆ. ಕಲಾವಿದರಿಗೆ ನೆರವಾಗುವ ಜತೆ ಸಹಸ್ರಾರು ಮಂದಿ ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲಿಸುವ ಪಟ್ಲ ಸತೀಶ್ ಶೆಟ್ಟರ ನೇತೃತ್ವದ ಯಕ್ಷಧ್ರುವ ಪಟ್ಲ ಫೌಂಡೇಶನ್ ದೊಡ್ಡ ಮಟ್ಟದಲ್ಲಿ ಕಾರ್ಯಾಚರಿಸುತ್ತಿದೆ.
ಉಡುಪಿಯಲ್ಲಿ ಮುರಲಿ ಕಡೆಕಾರ್ ನೇತೃತ್ವದ ಯಕ್ಷಗಾನ ಕಲಾರಂಗವೂ ಯಕ್ಷರಂಗದಲ್ಲಿ ಹೃದಯ ದಂತೆ ಕಾರ್ಯ ನಿರ್ವಹಿಸುತ್ತಿದೆ. ಇಷ್ಟೆಲ್ಲ ವಿಶಾಲವಾದ ಯಕ್ಷಗಾನದಲ್ಲಿ ವೈಯಕ್ತಿಕ ವಿಚಾರಕ್ಕಾಗಿ ಇಡೀ ಯಕ್ಷಗಾನ ರಂಗಕ್ಕೆ ಅವಮಾನ ಎಂದು ಬಿಂಬಿಸುವುದೇ ಬಹುದೊಡ್ಡ ತಪ್ಪು. ಇದಕ್ಕೆ ನಾವೇನು ಕ್ಷಮೆ ಯಾಚಿಸಿ ಎಂದು ಹೇಳುವುದಿಲ್ಲ. ಬದಲು ಆತ್ಮಾವಲೋಕನ ಮಾಡಿಕೊಳ್ಳಲಿ.
ತಾಳಮದ್ದಳೆಯು ಕೇವಲ ಶಬ್ದದ ಕಸರತ್ತಾಗಬಾರದು, ಅಲ್ಲಿ ಗುಂಪುಗಾರಿಕೆ ಮಾಡಬಾರದು, ಅದು ಭಾವಸ್ಪರ್ಶದ ರಸದೌತಣವಾಗಬೇಕು. ಪಾಂಡಿತ್ಯವು ವಿನಯದೊಂದಿಗೆ ಮೇಳೈಸಿದಾಗ ಮಾತ್ರ ಕಲೆಯು ಪ್ರೇಕ್ಷಕನ ಅಂತರಾತ್ಮವನ್ನು ಮುಟ್ಟಲು ಸಾಧ್ಯ. ಬಣ್ಣದ ಬದುಕಿನ ಅಹಂಕಾರದ ನಡುವೆ, ಶ್ರದ್ಧೆಯ ನೈಜಕಲೆ ಎಂದಿಗೂ ಅಳಿಯಬಾರದು.
(ಲೇಖಕರು ಪತ್ರಕರ್ತರು)